ʼಸೋತು ಗೆದ್ದಾಗʼ ಸುಮತಿ ಪಿ.ಅವರ ಲೇಖನ



ಪ್ರಸ್ತುತ ಸಮಾಜದಲ್ಲಿ ಬದುಕೆಂಬುದು ಸ್ಪರ್ಧಾತ್ಮಕವಾಗಿದೆ. ಪ್ರತಿ ಒಂದಕ್ಕೂ ನಾವು ಸ್ಪರ್ಧೆಯನ್ನು ಎದುರಿಸುತ್ತಲೇ ಇರಬೇಕು ,ಇರುತ್ತೇವೆ.ನಾವು ಗೆದ್ದರೆ ತುಂಬಾ ಸಂತೋಷಪಡುತ್ತೇವೆ. ಜಗತ್ತನ್ನೇ ಗೆದ್ದೆವು ಎನ್ನುವ ಖುಷಿಯಲ್ಲಿ ಬೀಗುತ್ತೇವೆ. ನಮ್ಮೆಲ್ಲ ಸ್ನೇಹಿತರಿಗೆ, ಬಂಧು ಬಾಂದವರೊಂದಿಗೆ ಸಿಹಿ ಹಂಚುವುದರ ಮೂಲಕ ಖುಷಿಯನ್ನು ಹಂಚಿಕೊಂಡು ನಾವೂ ಸಂತೋಷಪಡುತ್ತೇವೆ. ಅದೇ ನಮಗೆ ಸೋಲು ಆದರೆ ನಮ್ಮವರ ಎದುರು ಅವಮಾನ ಆಯಿತಲ್ಲಾ ಎಂದು ಕೊರಗುತ್ತೇವೆ. ದುಃಖದಲ್ಲಿ ಮುಳುಗಿಬಿಡುತ್ತೇವೆ.ಕೆಲವರಂತೂ ಅವಮಾನವಾಯಿತೆಂದು ಬದುಕಿಗೆ ಅಂತ್ಯವನ್ನು ಹಾಡುತ್ತಾರೆ.ಎಲ್ಲದಕ್ಕೂ ಸಾವೇ ಪರಿಹಾರವಲ್ಲ.ಪ್ರತಿಯೊಂದು ಸೋಲಿನಲ್ಲೂ ಒಂದು ಗೆಲುವಿನ ಹೊಂಗಿರಣ ಅಡಗಿರುತ್ತದೆ.ಅದನ್ನು ಕಂಡುಕೊಳ್ಳುವ ಪ್ರಯತ್ನ ಮಾಡಬೇಕಷ್ಟೇ.ಇಲ್ಲಿ ನಾವು ತಿಳಿದುಕೊಳ್ಳಬೇಕಾದ ವಿಚಾರವೆಂದರೆ ಸೋಲು ಅನುಭವಿಸಿದಷ್ಟು,ನಾವು ಗಳಿಸಿಕೊಳ್ಳಬೇಕಾದ ಸಾಮರ್ಥ್ಯದ ಅರಿವು ನಮಗಾಗುತ್ತದೆ.ಆ ಸಾಮಾರ್ಥ್ಯ ಗಳಿಸಿಕೊಂಡಾಗ ನಮಗೆ ಅರಿವು ಇಲ್ಲದ ಹಾಗೇ ನಾವು ಗೆಲ್ಲುತ್ತಾ ಹೋಗುತ್ತೇವೆ.ಸೋಲನ್ನು ನಾವು ಕೊನೆ ಎಂದು ಪರಿಗಣಿಸದೆ ಅದೊಂದು ಕಲಿಕೆಯ ಮೆಟ್ಟಿಲು ಎಂದು  ತಿಳಿದುಕೊಳ್ಳಬೇಕು. ಸೋಲನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ  ಗಳಿಸಬೇಕು ಆಗ ಸೋಲೇ ಗೆಲುವಿನ ಮೆಟ್ಟಿಲಾಗುವುದು ಖಂಡಿತ. ಸೋಲಿಗೆ ಕಾರಣವಾದ ತಪ್ಪನ್ನು ತಿಳಿದುಕೊಂಡು,ಆ ತಪ್ಪನ್ನು ಸರಿಪಡಿಸಿಕೊಂಡು ಮುನ್ನಡೆಯುವುದಕ್ಕೆ ಪ್ರಯತ್ನವನ್ನು ಮಾಡಬೇಕು.

ಬದುಕು ಎಂದ ಮೇಲೆ ಸೋಲು ಗೆಲುವು ಸಹಜವಾಗಿ ಕಾಣುವಂತದ್ದು. ಜೀವನದಲ್ಲಿ ಸೋತಾಗ ನಿರಾಸೆಯಾದರೆ, ಗೆದ್ದಾಗ ಖುಷಿ ಪಡುತ್ತೇವೆ. ಆದರೆ ಸೋತು ಗೆದ್ದಾಗ ಆಗುವಂತಹ ಖುಷಿಯೇ ಬೇರೆ.”ಸೋಲೇ ಗೆಲುವಿನ ಸೋಪಾನ”ಎಂಬುವುದು ಅನುಭವಸ್ಥರ ಅಂತರಾಳದ ನುಡಿಯಾಗಿದೆ. ಸೋಲಿನಲ್ಲಿಯೇ ಅನೇಕರು ಗೆಲುವಿನ ಬೆಳಕನ್ನು ಕಂಡ ಕಥೆಗಳನ್ನು ನಾವು ಓದಿದ್ದೇವೆ, ತಿಳಿದುಕೊಂಡಿದ್ದೇವೆ. ಬದುಕಿನಲ್ಲಿ ಸೋಲು ಎಂಬುದು ಶಾಶ್ವತವಲ್ಲ. ಸೋತು ಹೋದಾಗ ನಿರಾಶರಾಗಬೇಕಿಲ್ಲ. ಮಗದೊಮ್ಮೆ ಪ್ರಯತ್ನ ಮಾಡುವ ದೃಢ ಮನಸ್ಸನ್ನು ಮಾಡಬೇಕು

ನಮ್ಮ ಸಮಾಜದಲ್ಲಿ ಎತ್ತರದ ಸ್ಥಾನಗಳನ್ನು, ಅಧಿಕಾರವನ್ನು ಅಲಂಕರಿಸಿದ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಓದಿದಾಗ ನಮಗರಿವಾಗುತ್ತದೆ ಹೆಚ್ಚಿನವರೆಲ್ಲರೂ ಸೋಲಿನಿಂದಲೇ, ಅಂದರೆ ಸೋಲು ಕಲಿಸಿದ ಪಾಠದಿಂದಲೇ, ಯಶಸ್ಸಿನ ಮೆಟ್ಟಿಲನ್ನು ಹತ್ತಿ, ಗೆಲುವಿನ ಏಣಿಯನ್ನು ಏರಿದವರು.
ಸಾಧನೆ ಮಾಡಿರುವ ಸಾಧಕರ ಸಾಧನೆಯ ಹಿಂದೆ ಅನೇಕ ರೀತಿಯ ಸೋಲಿನ ಕಥೆಗಳು ಅಡಗಿರುತ್ತವೆ.ಉನ್ನತ ಸ್ಥಾನಕ್ಕೆ ಏರಿದವರೆಲ್ಲ ಒಂದೇ ಪ್ರಯತ್ನದಲ್ಲಿ ಗೆಲುವು ಸಾಧಿಸಿ ಬಂದವರಲ್ಲ. ಅನೇಕ ಪ್ರಯತ್ನಗಳನ್ನು ಮಾಡಿ ಸೋಲನ್ನು ಅನುಭವಿಸಿ, ಮರಳಿ ಪ್ರಯತ್ನವ ಮಾಡಿ, ಗೆಲುವು ಸಾಧಿಸಿದವರು. ಯಾವುದೇ ವಿಷಯದಲ್ಲಿ ಸೋಲನ್ನು ಅನುಭವಿಸಿದಾಗ ಅದುವೇ ಅಂತಿಮ ಎಂದು ಭಾವಿಸದೆ “ಸೋಲೇ ಗೆಲುವಿಗೆ ಇಡುವಂತಹ ಮೊದಲ ಹೆಜ್ಜೆ “ಎಂದು ತಿಳಿದು ದೃಢತೆಯಿಂದ ಮುನ್ನಡೆದರೆ, ಮರಳಿ ಪ್ರಯತ್ನವ ಮಾಡಿದರೆ, ಗೆಲುವನ್ನು ಸಾಧಿಸಬಹುದು. ಯಾರೆಲ್ಲಾ ಸೋಲನ್ನು ಗೆಲುವಿನ ಮೆಟ್ಟಿಲಾಗಿಸಿ ಮತ್ತೆ ಮತ್ತೆ ಸಾಧನೆಯ ಪ್ರಯತ್ನವನ್ನು ಮಾಡುತ್ತಾರೋ, ಅವರು ಗೆಲುವನ್ನು ಸಾಧಿಸಿಯೇ ಬಿಡುತ್ತಾರೆ.ಯಾವುದೇ ಪ್ರಯತ್ನದಲ್ಲಿ ಸೋತು ಹೋದರೆ ಅದು ಗೆಲುವಿನ ಪಾಠವನ್ನು ಕಲಿಸುತ್ತದೆ. ಪ್ರತಿಯೊಂದು ಸೋಲಿನಲ್ಲೂ ಗೆಲುವಿನ ಭರವಸೆ ಮೂಡುತ್ತದೆ.

ಶೀಲಾ ಗೌರವದಿಂದ ಕೂಡಿದ ಶ್ರೀಮಂತ ಮನೆತನದ ಹುಡುಗಿ. ತಂದೆ ತಾಯಿ ಉನ್ನತ ಸ್ಥಾನದಲ್ಲಿದ್ದರು.ಅವಳ ಹಿರಿಯ ಸಹೋದರ ಚೆನ್ನಾಗಿ ಓದಿ ಕಂಪೆನಿಯಲ್ಲಿ  ಇಂಜಿನಿಯರ್ ಆಗಿ ದುಡಿಯುತ್ತಿದ್ದ, ಶೀಲಳಿಗೂ ಓದಿ ಉನ್ನತ ಸ್ಥಾನವನ್ನು ಪಡೆಯಬೇಕು ಎನ್ನುವ ಆಸೆ ಇತ್ತು.ಆದರೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವೇ ಆಗುತ್ತಿರಲಿಲ್ಲ .ಪದವಿ ಪರೀಕ್ಷೆಯಲ್ಲಿ  ಎರಡನೇ ಬಾರಿಯೂ ಅನುತ್ತೀರ್ಣಳಾಗಿ ಸೋಲನ್ನು ಅನುಭವಿಸಿದಾಗ  “ನಾನು ಜೀವನದಲ್ಲಿ ಸಂಪೂರ್ಣ ಸೋತು ಹೋದೆ” ಎನ್ನುವಂತೆ ಆಡತೊಡಗಿದಳು.ಬದುಕಿನಲ್ಲಿ ಭರವಸೆಯನ್ನು ಕಳೆದುಕೊಂಡಿದ್ದಳು.ಮನೆಯಲ್ಲಿಯೂ ಮನಬಿಚ್ಚಿ ಮಾತನಾಡಲು ಹಿಂಜರಿಯುತ್ತಿದ್ದಳು.ದಿನ ಕಳೆದಂತೆ ಮಂಕಾದಳು.ಆಗ ಅವಳ ನೆರವಿಗೆ ಬಂದವನು ಅವಳ ದೊಡ್ಡಪ್ಪನ ಮಗ ಶಂಕರ. ಅವನು ಶೀಲಳ ಜೀವನದಲ್ಲಿ ಭರವಸೆಯನ್ನು ತುಂಬಿದ.ಶೀಲಳಿಗೆ ಕಷ್ಟವಿದ್ದ ವಿಷಯಗಳಲ್ಲಿ ಟ್ಯೂಷನ್ ಪಡೆಯಲು ಸೂಚಿಸಿದ.ಶಂಕರನ ಸಾಂತ್ವನದ ಮಾತು ಶೀಲಳಲ್ಲಿ ಹೊಸ ಚೈತನ್ಯ ತುಂಬಿಸಿತು.ಶಂಕರನ ಸಲಹೆಯಂತೆ  ಶೀಲಾ “ಈ ಬಾರಿ ನಾನು ಪಾಸಾಗಿಯೇ ಆಗುತ್ತೇನೆ” ಎನ್ನುವ ದೃಢ ನಿರ್ಧಾರದಿಂದ ಕಷ್ಟಪಟ್ಟು ಓದತೊಡಗಿದಳು .ಅರ್ಥವಾಗದ ವಿಷಯಗಳಿಗೆ ಟ್ಯೂಷನ್ ಪಡೆದಳು.ಕಷ್ಟದ ವಿಷಯಗಳಲ್ಲಿ ಹೆಚ್ಚು ಶ್ರಮ ಹಾಕಿ,ಕಷ್ಟಪಟ್ಟು ಓದಿದಳು. ಪರೀಕ್ಷೆ ಕಟ್ಟಿ ವಿಶೇಷ ಶ್ರೇಣಿಯಲ್ಲಿ ಪಾಸಾದಳು. ಆಗ ಶೀಲಳಿಗೆ ಆದ ಸಂತೋಷ ಅಷ್ಟಿಷ್ಟಲ್ಲ.ಮುಂದೆ ಉನ್ನತ ಪರೀಕ್ಷೆ ಕಟ್ಟಿ, ಜಿಲ್ಲಾಧಿಕಾರಿಯಾದಳು. ಆಗ ಶೀಲಳಿಗೆ ಆದ ಸಂತೋಷ ಅಷ್ಟಿಷ್ಟಲ್ಲ.ಸೋತು ಗೆದ್ದಾಗ ಎಷ್ಟು ಖುಷಿಯಾಗುತ್ತದೆ ಎಂಬುದನ್ನು ಮಾತಿನಲ್ಲಿ ವ್ಯಕ್ತಪಡಿಸಲು ಕಷ್ಟ ಸಾಧ್ಯ. ಅದನ್ನು ಅನುಭವಿಸಿಯೇ ತಿಳಿಯಬೇಕು .
ಮುಂದೆ ಅವಳು ಮಾಡುತ್ತಿದ್ದ  ಭಾಷಣಗಳಲೆಲ್ಲ ತನ್ನ ಬದುಕಿನ ಸೋಲು ಗೆಲುವಿನ ಕಥೆಯನ್ನು,ಸೋತು ಗೆದ್ದಾಗ ಆದಂತಹ ಸಂತೋಷವನ್ನು ಹಂಚಿಕೊಳ್ಳುವಾಗ ಭಾವುಕಳಾಗುತ್ತಿದ್ದಳಲ್ಲದೇ,ಅನೇಕ ಯುವಕ,ಯುವತಿಯರಿಗೆ  ಸ್ಫೂರ್ತಿಯ ಸೆಲೆಯಾದಳು.
ಯಾರೇ ಆಗಲಿ ಬದುಕಿನಲ್ಲಿ ಸೋಲನ್ನು ಅನುಭವಿಸಿದಾಗ, ಅದುವೇ ತನ್ನ ಜೀವನದ ಕೊನೆ ಎಂದು ಭಾವಿಸಬಾರದು, ಸೋಲಿಗೆ ಕಾರಣವಾದ ತಪ್ಪುಗಳನ್ನು ತಿದ್ದಿಕೊಳ್ಳಬೇಕು,ಮರಳಿ ಮತ್ತೆ ಪ್ರಯತ್ನವನ್ನು ಮಾಡಬೇಕು. ಅದುವೇ ಗೆಲುವಿಗೆ ಸೋಪಾನವಾಗುತ್ತದೆ. ಯಶಸ್ಸಿನ ಒಂದು ಮೆಟ್ಟಿಲನ್ನು ಹತ್ತುವಾಗ ಭರವಸೆ ಮೂಡುತ್ತದೆ. ಹುಮ್ಮಸ್ಸು ಹೆಚ್ಚುತ್ತದೆ, ಹೆಚ್ಚಿನ ಪ್ರಯತ್ನಕ್ಕೆ ಸ್ಪೂರ್ತಿಯಾಗುತ್ತದೆ ಯಶಸ್ಸಿನ ಶಿಖರವನ್ನು ಏರಲು ಸಾಧ್ಯವಾಗುತ್ತದೆ


2 thoughts on “ʼಸೋತು ಗೆದ್ದಾಗʼ ಸುಮತಿ ಪಿ.ಅವರ ಲೇಖನ

Leave a Reply