ಇಂದಿರಾ ಮೋಟೆಬೆನ್ನೂರ-ಬರಬಾರದೇ ಒಮ್ಮೆ

ಕಾವ್ಯ ಸಂಗಾತಿ

ಬರಬಾರದೇ ಒಮ್ಮೆ

ಇಂದಿರಾ ಮೋಟೆಬೆನ್ನೂರ

ಬಿಕ್ಕುತಿವೆ ಭಾವಗಳು
ಬತ್ತಿದೆದೆ ಗೂಡಿನಲಿ…
ಬಾರದ ಭರವಸೆಯ
ಹಿಡಿಬೆಳಕ ಹಂಬಲದಲಿ….

ಮೌನದ ಮೊನಚದು
ಚುಚ್ಚುವುದು ನಿತ್ಯ
ನೋವಿನಲಿ ಮೀಯುವದು
ಇದು ಜೀವನದ ಸತ್ಯ…

ನಗುವ ಬಳುಕಿಲ್ಲದ
ಬೆಳಕಿನ ಪಯಣ…
ಒಲವ ಒನಪಿಲ್ಲದ
ಬದುಕಿನ ಚರಣ…

ಸೋಲನೊಪ್ಪುವ ಮುನ್ನ
ಬಂದಪ್ಪು ಭರವಸೆಯೇ..
ಹೆಪ್ಪುಗಟ್ಟುವ ಮುನ್ನ
ಎದೆತಬ್ಬು ನನ್ನೊಲವೇ…

ಸುಕ್ಕುಗಟ್ಟಿದ ಕನಸುಗಳು
ಮತ್ತರಳಿಸು ಬಳಿದು ಬಣ್ಣ
ಬಳಿ ಬಂದು ಬರಸೆಳೆದು
ಬೆಳಗು ಹೂಗೆನ್ನೆ ಹನಿಗಣ್ಣ …

ಅಳಿದು ಮಣ್ಣಾಗುವ ಮುನ್ನ
ಬರಬಾರದೇ ಸುಮ್ಮನೆ…
ಹಮ್ಮು ಬಿಮ್ಮೆಲ್ಲವನು
ತೊರೆದೊಮ್ಮೆ ಘಮ್ಮನೆ…

ನಾಳೆಯ ಬೆಳಗ ಕಂಡವರಾರು
ಕ್ಷಣಭಂಗುರ ಬಳಿಸಾರಿ ಬಾ ಝಲ್ಲನೇ…
ನೀರ ಮೇಲಿನ ಗುಳ್ಳೆ ಸೇರಿಲ್ಲಿ
ಅರಿತು ಬೆರೆತೊಮ್ಮೆ ಮೆಲ್ಲನೆ……

ಅನುಕಂಪದಲೆ ಎದೆ ಸುಡುವ ಮುನ್ನ
ನವಿರ ನೇವರಿಕೆ ನೇಹ ಸವರೊಮ್ಮೆ
ಭಾವಜೀವ ತೊರೆಯುವ ಮುನ್ನ…
ಸಂತೈಸು ಒಲ್ಮೆ ಸ್ನೇಹದಿಂದೊಮ್ಮೆ…


ಇಂದಿರಾ ಮೋಟೆಬೆನ್ನೂರ. ಬೆಳಗಾವಿ.

Leave a Reply

Back To Top