ವಚನ ಗುಮ್ಮಟವೆಂಬ ಮಹಾ ಚೇತನ- ಫ.ಗು ಹಳಕಟ್ಟಿ

ವಿಶೇಷ ಲೇಖನ

ಮೀನಾಕ್ಷಿ ಪಾಟೀಲ

ವಚನ ಗುಮ್ಮಟವೆಂಬ ಮಹಾ ಚೇತನ-

ಫ.ಗು ಹಳಕಟ್ಟಿ

1880 ಜುಲೈ 2 ರಂದು ಧಾರವಾಡದಲ್ಲಿ ಗುರುಬಸಪ್ಪ ಮತ್ತು ದಾನಮ್ಮನವರಿಗೆ ಪಕೀರಪ್ಪನ ಎಂಬ ಬೆಳಕು ಉದ್ಭವಿಸಿತು ತಾಯಿಯ ಗರ್ಭದಲ್ಲಿರುವಾಗಲೇ ಶಿವಕಾರುಣ್ಯವನ್ನು ಪಡೆದುಕೊಂಡ ಮಗು ಮುಂದೆ ಶಿವನಸೇವೆಗೆ ಸಮರ್ಪಿತವಾಯಿತು. ಮಾಧ್ಯಮಿಕ ಶಿಕ್ಷಣವನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ವೀರಶೈವ ಸಂಸ್ಕೃತಿ ಮತ್ತು ಅದರ ವಾಂಗ್ಮಯ ಇತಿಹಾಸದ ಪರಿಚಯವಿರಲಿಲ್ಲ. ಸೋಮೇಶ್ವರ ಶತಕ ಸರ್ಪಭೂಷಣ ,ಷಡಕ್ಷರಿ ,ನಿಜಲಿಂಗ ,ಮೊದಲಾದವರ ಪದ್ಯಗಳನ್ನು ಓದುತ್ತಿದ್ದರೇ ವಿನಹ .ಅವರುಗಳ ವಿವರಗಳನ್ನು ಶಿಕ್ಷಕರು ಹೇಳುತ್ತಿರಲಿಲ್ಲ .ಮೇಲಾಗಿ ಕೆಲವು ಶಿಕ್ಷಕರು ವೀರಶೈವ ಸಮಾಜದ ಮೇಲೆ ಹರಿಹಾಯದು ಹೀಯಾಳಿಸುತ್ತಿದ್ದರು .ಅಷ್ಟೇ ಅಲ್ಲ ಮತ್ತಿನ್ನೇನೋ ಇಂತಹ ಟೀಕೆಗಳನ್ನು ಮಾಡುತ್ತಿದ್ದರು. ಇದನ್ನರಿತ ಹಳಕಟ್ಟಿಯವರು ವೀರಶೈವ ಸಂಸ್ಕೃತಿಕ ನೆಲೆಗಟ್ಟನ್ನು ಗಟ್ಟಿಗೊಳಿಸಲು ಸಂಕಲ್ಪ ಮಾಡಿದರು. ತನ್ನ ವಿದ್ಯಾಭ್ಯಾಸದ ಜೊತೆಯಲ್ಲಿಯೇ ವೀರಶೈವ ಧರ್ಮಕ್ಕೆ ಸಂಬಂಧಿಸಿದಂತೆ ಯಾವುದೇ ಪುಸ್ತಕವಿದ್ದರೂ ಅದರ ಮೂಲ ಆಕರವನ್ನು ಹುಡುಕಿಕೊಂಡು ಅಧ್ಯಯನ ಮಾಡುವುದು ಅವರಿಗೆ ರೂಢಿಯಾಯಿತು. ಅದರಂತೆ ಬನಹಟ್ಟಿಯಲ್ಲಿದ್ದಾಗ ಗಲಗಲಿ ಶಿವಲಿಂಗಪ್ಪನವರ 32 ಮತ್ತು ಗುರುಬಸಪ್ಪ ಕಂತಿ ಇವರ ಮನೆಯಲ್ಲಿ 16 ಗ್ರಂಥಗಳು ಇದ್ದವು ಅವುಗಳನ್ನು ಪಡೆದುಕೊಂಡರು. ಬೆಳಗಾವಿಯ ಗುರುಸಿದ್ದಪ್ಪ ಗುಲಗಂಜಿ ಇವರ ಮನೆಯಲ್ಲಿ 15 ಗ್ರಂಥಗಳು ಭೋಜಪ್ಪನವರ ಮನೆಯಲ್ಲಿ 10 ಗ್ರಂಥಗಳನ್ನು ಪಡೆದುಕೊಂಡು ಅವುಗಳನ್ನು ವಿವರವಾಗಿ ಅಧ್ಯಯನ ಮಾಡಿದರು ಅಷ್ಟೇ ಅಲ್ಲ ವೀರಶೈವದಲ್ಲಿ ಯಾವುದೋ ಒಂದು ಮಹತ್ವದ ವಾಂಗ್ಮಯವಿದೆ ,ಅದಕ್ಕೆ ಒಂದು ಸಿದ್ಧಾಂತವಿದೆ ಮತ್ತು ಅದಕ್ಕೊಂದು ಧರ್ಮವಿದೆ ಎಂಬ ತಿಳುವಳಿಕೆಯಾಗ ತೊಡಗಿತು. ಅದರಲ್ಲಿ ಷಟಸ್ಥಲ ಗ್ರಂಥವು ಅತ್ಯಂತ ಮಹತ್ವಪೂರ್ಣವಾದದ್ದು . ಶಿವಾದಿಕ್ಯ ಪುರಾಣ ಭಕ್ತನಾದವನು ಹೊಲೆಯನಿದ್ದರೂ ವೀರಶೈವರು ಸಮರಸಾಚರಣೆಯಿಂದ ಇರಬೇಕೆಂಬುದನ್ನು ಆಧಾರ ಪೂರ್ವಕವಾಗಿ ನಿರೂಪಿಸಿದ್ದು ಆಶ್ಚರ್ಯವನ್ನು ಉಂಟು ಮಾಡಿತ್ತು. ವಚನ ಸಾಹಿತ್ಯದ ಕಡೆಗೆ ಹಳಕಟ್ಟಿ ಅವರ ಮನಸ್ಸು ಹರಿಯುವುದಕ್ಕೆ ಇದು ಪ್ರಮುಖ ಕಾರಣವಾಯಿತು . ಮುಂಬೈ ಸೈಂಟ ಕ್ಲೇವಿಯರ್ ಕಾಲೇಜಿನಲ್ಲಿ ಅಧ್ಯಯನ ಮಾಡುವಾಗ ಅವರ ಮನಸ್ಸಿನ ಮೇಲೆ ಮುಂಬೈ ಜನರ ಮರಾಠಿ ಮತ್ತು ಹಿಂದಿ ಪ್ರೇಮಾಭಿಮಾನಿಗಳು ತೀವ್ರತರವಾಗಿ ಪ್ರಭಾವ ಬೀರಿದರು. ಕನ್ನಡಿಗರಿಗೆ ಇಂತಹ ಅಭಿಮಾನ ಏಕಿಲ್ಲ ಎಂಬ ಪ್ರಶ್ನೆ ಇವರ ಮನಸ್ಸಿನಲ್ಲಿ ಕಾಡುತ್ತಿತ್ತು . ಇನ್ನೊಬ್ಬರಿಗೆ ಈ ವಿಷಯದಲ್ಲಿ ಹೇಳುವ ಮೊದಲು ಕನ್ನಡಕ್ಕಾಗಿ ಹಾಗೂ ಕನ್ನಡದ ನಿಧಿಯಾಗಿರುವ ವಚನ ಸಾಹಿತ್ಯಕ್ಕಾಗಿ ತನ್ನನ್ನು ತಾನು ಅರ್ಪಿಸಿಕೊಳ್ಳಬೇಕೆಂದು ತೀರ್ಮಾನಿಸಿದರು.


1904 ರಲ್ಲಿ ಎಲ್‌ಎಲ್‌ಬಿ ಪರೀಕ್ಷೆಯನ್ನ ಪಾಸ್ ಮಾಡಿ ವಿಜಯಪುರದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು. ಆದರೆ ಬರ ಬರುತ್ತ ವಕೀಲ ವೃತ್ತಿಯನ್ನು ಬಿಟ್ಟು ಸಮಾಜ ಸೇವೆ ಹಾಗೂ ವಚನ ಸಾಹಿತ್ಯದ ಬೆಳಕನ್ನು ಎಲ್ಲೆಡೆಗೆ ಹರಡಲು ಮುಂದಾದರು. ತಾಡೋಲಿಗಳಲ್ಲಿ ಇದ್ದ ವಚನಗಳನ್ನ ಕೂಲಂಕುಶವಾಗಿ ಅಧ್ಯಯನ ಗೈದು ಅವುಗಳನ್ನ ಪ್ರಕಟಿಸಲು ಹರಸಾಹಸ ಮಾಡಿದರು. ಒಟ್ಟು 1000 ಪುಸ್ತಕಗಳಿಗಾಗುವಷ್ಟು ಮಾಹಿತಿಯನ್ನು ಸಂಗ್ರಹಿಸಿ 250 ವಚನಕಾರರನ್ನು ಗುರುತಿಸಿದರು. ವಚನ ವಾಂಗಮಯದ ವಿರಾಟ್ ದರ್ಶನ ಮಾಡಿಸಿದ ಪ್ರಥಮ ಮಹನೀಯರು ಹಳಕಟ್ಟಿಯವರೇ ಎನ್ನಬೇಕು. ವಚನ ಸಾಹಿತ್ಯವನ್ನು ಸಂಗ್ರಹಿಸಿದ್ದಷ್ಟೇ ಅಲ್ಲದೆ ಅವರು ಹರಿಹರನ 46 ರಗಳೆಗಳು ಏಳು ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ. ವಚನ ಶಾಸ್ತ್ರಸಾರವನ್ನು 1923 , 1931 ,ಮತ್ತು 1939, ರಲ್ಲಿ ಮೂರು ಸಂಪುಟಗಳಲ್ಲಿ
ಪ್ರಕಟಿಸಿದ್ದಾರೆ ತಾವು ಅತ್ಯಂತ ಕಷ್ಟಪಟ್ಟು ಸಂಪಾದಿಸಿದ್ದ ಅದುವರೆಗೂ ಅಜ್ಞಾತವಾಗಿದ್ದ ವಚನ ಸಾಹಿತ್ಯ ಭಂಡಾರವನ್ನು ಹೇಗಾದರೂ ಮಾಡಿ ಕನ್ನಡಿಗರಿಗೆ ತಲುಪಿಸುವ ದೃಢ ನಿಶ್ಚಯವನ್ನು ಮಾಡಿದರು . ಅವುಗಳ ಪ್ರಕಟಣೆಗಾಗಿ ತಮ್ಮ ಸ್ವಂತ ಮನೆಯನ್ನು ಮಾರಿ 1925 ರಲ್ಲಿ “ಹಿತಚಿಂತಕ” ಎಂಬ ಹೆಸರಿನ ಮುದ್ರಣಾಲಯವನ್ನು ಆರಂಭಿಸಿದರು. ಇದುವರೆಗೂ ತಾವು ವ್ಯವಸ್ಥೆಗೊಳಿಸಿದ್ದ ಹಸ್ತ ಪ್ರತಿ ತಾಡೋಲೆಗಳ ಗ್ರಂಥಗಳನ್ನು ಪ್ರಕಟಣೆಗೊಳಿಸಿದರು.


ಹಳಕಟ್ಟಿಯವರು ವಚನ ಶಾಸ್ತ್ರ ಸಾರವನ್ನು ಪ್ರಕಟಿಸಿದ್ದು ಒಂದು ಅದ್ಭುತವಾದ ಕಾರ್ಯವಾಗಿದೆ .1920 ರಲ್ಲಿ ಇದರ ಪ್ರಕಟಣೆ ಗೆಂದು ತಮಗೆ ನೇರವಾಗಿ ಬಂದ 500 ರೂಪಾಯಿಗಳ ಧನ ಸಹಾಯದಿಂದ ಬ್ಯಾಸೆಲ್ ಮಿಷನ್ ಪ್ರೆಸ್ಸನ ಅಧಿಕಾರಿ ವರ್ಗದವರಿಗೆ ಮೊದಲ ಸಂಪುಟವನ್ನು ಕಳುಹಿಸಿಕೊಟ್ಟರು. ಆದರೆ ಮುದ್ರಣಾಲಯದ ಮೇಲ್ವಿಚಾರಕರು ಈ ವಚನಗಳನ್ನು ನಾವು ಪ್ರಕಟಿಸಲಾರೆವು ಎಂದು ಸೂಚಿಸಿ ಹಿಂದಿರುಗಿಸಿ ಬಿಟ್ಟರು. ಅದಕ್ಕೆ ಅವರು ಕೊಟ್ಟ ಕಾರಣವೆಂದರೆ ನಿಮ್ಮ ವಚನಗಳು ನಮ್ಮ ಧರ್ಮದ ಆದರ್ಶಗಳನ್ನೇ ಹೇಳುತ್ತಿವೆ ಎಂಬುದು. ಕಾರಣ ನೀವು ಕಳಿಸಿದ್ದ ಮುಂಗಡ ಹಣವನ್ನು ತಿರುಗಿಸಿದ್ದೇವೆ ಎಂದು ಮುಂಗಡ ಹಣವನ್ನು ಹಸ್ತಪ್ರತಿಯನ್ನು ಹಿಂದಿರುಗಿಸಿ ಬಿಟ್ಟರು. ಹಳಕಟ್ಟಿ ಅವರು ಇದರಿಂದ ಚಿಂತಿತರಾಗಲಿಲ್ಲ. ಅವರು ಪ್ರಕಟಿಸದಿದ್ದರೆ ಬೇಡ ಎಂದು ಮೊದಲ್ನೇ ಸಂಪುಟವನ್ನು 1925 ರಲ್ಲಿ ಚೌಗುಲೆಯವರ ಮಹಾವೀರ ಮುದ್ರಣಾಲಯದಲ್ಲಿ ಮುದ್ರಿಸಿ ಪ್ರಕಟಿಸಿದರು. 1924ರಲ್ಲಿ ಅವರ ಮುಂಬೈ ವಿಧಾನ ಪರಿಷತ್ ಸದಸ್ಯತ್ವ ಕೊನೆಗೊಂಡಿತು. ಆಗ ಒಂದು ಸಂಕ್ರಮಣ ಸ್ಥಿತಿ ಹಳಕಟ್ಟೆಯವರ ಬದುಕಿನಲ್ಲಿ ಎದುರಾಯಿತು. ಇದುವರೆಗೂ ತಾವು ಸಂಗ್ರಹಿಸಿದ್ದ ವೀರಶೈವ ಸಾಹಿತ್ಯದ ಪ್ರಕಟಣೆಯನ್ನು ಮೊದಲ ಆದ್ಯತೆಯಾಗಿ ಕೈಗೆತ್ತಿಕೊಂಡು ಅದನ್ನು ಪ್ರಕಟಿಸುವ ಸಂಕಲ್ಪ ಮಾಡಿದರು. ತಾವು ಅತ್ಯಂತ ಕಷ್ಟ ಪಟ್ಟು ಸಂಪಾದಿಸಿದ್ದ ಅವರಿಗೆ ಅಲಭ್ಯವಾಗಿದ್ದ ಸಾಹಿತ್ಯ ಭಂಡಾರವನ್ನು ಕನ್ನಡಿಗರಿಗೆ ನೀಡುವ ಸಂಕಲ್ಪ ಮಾಡಿದರು. ಹೀಗೆ ಈ ಹಸ್ತಪ್ರತಿಗಳನ್ನು ತಾವು ವ್ಯವಸ್ಥಿತವಾಗಿ ವಿಂಗಡಿಸಿ ವರ್ಗೀಕರಿಸಿದ್ದರು. ಅವುಗಳ ಪ್ರಕಟಣೆಗಾಗಿ ಅವರು1926 ರಲ್ಲಿ ಶಿವಾನುಭವ ಎನ್ನುವ ಮಾಸಿಕ ಪತ್ರಿಕೆಯನ್ನು ಆರಂಭಿಸಿದರು. ಮೊದಲು ತ್ರೈಮಾಸಿಕವಾಗಿ ಆರಂಭವಾದ ಈ ಸಂಚಿಕೆ ತನ್ನ ಕಾರ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವುದಕ್ಕಾಗಿ ಮಾಸಪತ್ರಿಕೆಯಾಗಿ ಪರಿವರ್ತಿತವಾಯಿತು. ಹಳಕಟ್ಟಿಯವರ ಹಸ್ತ ಪ್ರತಿಗಳನ್ನು ಸಂಗ್ರಹಿಸಿದುದು ಒಂದು ಅದ್ಭುತ ಕಾರ್ಯವಾಗಿತ್ತು. ಅವರು ಎಲ್ಲೆಲ್ಲಿ ವಚನದ ಕಟ್ಟುಗಳಿವೆ ಎಂಬುದರ ಮಾಹಿತಿಯನ್ನು ಪಡೆದುಕೊಂಡಿದ್ದರು. ಶ್ರೀಶೈಲ ಪ್ರಾಂತ್ಯ , ಮುದನೂರು , ಮಂಗಳವಾಡ , ಮುದಗಲ್ಲು ಪಟ್ಟಲಕೆರೆ, ಕೊಲ್ಲಿಪಾಕಿಯಂತ ಪ್ರದೇಶಗಳಲ್ಲಿ ವಿಶೇಷ ವಚನಗಳು ಪ್ರಾಪ್ತವಾಗುವ ಸಾಧ್ಯತೆಯನ್ನು ಅವರು ಕಂಡುಕೊಂಡಿದ್ದರು. ವಚನಗಳನ್ನು ಹಾಗೂ ರಗಳೆಗಳನ್ನು ಇವರು ಸಂಗ್ರಹಿಸಿದ ಗಾತ್ರವನ್ನು ಗಮನಿಸಿದರೆ ಆಶ್ಚರ್ಯವಾಗುತ್ತದೆ. ವಚನ ಸಾಹಿತ್ಯವನ್ನು ಸಂಕಲಿಸಿದ ಮೇಲೆ ಸುಮಾರು 1921ರ ಸುಮಾರಿಗೆ ವಿಷಮ ಶೀತ ಜ್ವರಕ್ಕೆ ತುತ್ತಾದರು. ಹಾಸಿಗೆಯಲ್ಲಿದ್ದಾಗಲೂ ವಚನ ಶಾಸ್ತ್ರಸಾರವನ್ನು ಸಂಗ್ರಹಿಸುವ ಕಾರ್ಯವನ್ನು ನಿಲ್ಲಿಸಲಿಲ್ಲವೆಂಬ ಅಂಶ ಅವರ ಸಂಕಲ್ಪ ಶಕ್ತಿಯನ್ನು ಸೂಚಿಸುತ್ತದೆ. ಇವರನ್ನು ನೋಡಿ ಹೋಗಲು ಬಂದ ಇವರ ಮಾವನವರಾದ ತಮ್ಮಣ್ಣಪ್ಪ ಅವರಂತೂ ಇವರು ಅಚ್ಚಿಗೆ ಸಿದ್ಧಪಡಿಸಿದ್ದ ವಚನ ಶಾಸ್ತ್ರ ಸಾರಭಾಗ 1 ಹಸ್ತ ಪ್ರತಿಯನ್ನು ನೋಡಿ ವಿಸ್ಮಿತರಾದರು. ಈ ವಿಷಯ ತಿಳಿದ ಊರವರು ಬಂದು ಆ ಕೃತಿಯಲ್ಲಿರುವ ವಚನಗಳ ಸೊಬಗಿಗೆ ಬೆರಗಾಗಿ ಹೋದರು. ಈ ವಿಸ್ಮಯದ ಸುದ್ದಿ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾದ ಹಾನಗಲ್ ಕುಮಾರ ಸ್ವಾಮಿಗಳಿಗೂ ಮುಟ್ಟಿತು. ಅವರು ಇದಕ್ಕಾಗಿಯೇ ಬಿಜಾಪುರಕ್ಕೆ ಬಂದು ಹಳಕಟ್ಟೆಯವರಿಂದಲೇ ವಚನಗಳನ್ನು ಓದಿಸಿ ಬೆರಗು ಪಟ್ಟರು. ಹೆಚ್ಚು ಕುಳಿತರೆ ಕರುಳಿನ ನೋವು ಉಂಟಾಗುತ್ತಿದ್ದರೂ ಹಿರಿಯರಿಗಾಗಿ ವಚನಗಳನ್ನು ಓದಿ ತೋರಿಸಿದರು. ಕುಮಾರಸ್ವಾಮಿಗಳಂತೂ ಹಳಕಟ್ಟಿ ಅವರು ಸಂಕಲಿಸಿದ್ದ ವಚನಗಳ ಬಗೆಗೆ ಬೆರಗಾಗಿ ಹೋದರು. ಇವು ಪ್ರಕಟವಾಗಲಿ ಎನ್ನುವ ಮಹದಾಸೆಯಿಂದ 500 ರೂಪಾಯಿಗಳ ದೇಣಿಗೆಯನ್ನ ಕೊಟ್ಟರು .ಇದನ್ನು ಬಳಸಿಕೊಂಡೇ ವಚನ ಶಾಸ್ತ್ರಸಾರ ಪ್ರಕಟಣೆಗೆ ಅವರು ಮುಂದಾದರು .
1926 ರಲ್ಲಿ ಶಿವಾನುಭವ ಪತ್ರಿಕೆಯನ್ನು ಆರಂಭಿಸಿದರು ಶಿವಾನುಭವ ಪತ್ರಿಕೆ ಎರಡು ಕಾರ್ಯಗಳನ್ನು ನೆರವೇರಿಸಿತು. ಒಂದು ಹಳಕಟ್ಟೆ ಅವರು ಸಂಗ್ರಹಿಸಿಕರಿಸಿದ ವಚನಗಳು ರಗಳೆಗಳು ಮತ್ತಿತರ ಗ್ರಂಥಗಳ ಕ್ರಮಬದ್ಧವಾದ ಪ್ರಕಟಣೆ ಮಾಡುವುದು .ಎರಡನೆಯದು ವಿದ್ವಜನರಿಂದ ಲೇಖನಗಳನ್ನು ಬರೆಯಿಸಿ ಪ್ರಕಟಿಸುವುದು ಜೊತೆಗೆ ತಾವು ಲೇಖನಗಳನ್ನು ಬರೆಯುವುದು. ವಿಚಾರ ಸಾಹಿತ್ಯವನ್ನು ಒಳಗೊಂಡಂತೆ ಶಾಸನ ,ಇತಿಹಾಸ ,ಧರ್ಮ ಮತ್ತು ಮೂಢನಂಬಿಕೆಗಳು, ಗ್ರಾಮ ಸೇವೆ ಮಹಿಳೆಯರ ಸ್ವಾತಂತ್ರ್ಯ ಇಂಥ ವಿಚಾರಗಳನ್ನು ಕುರಿತು 12000 ಪುಟಗಳಷ್ಟು ಹಳಕಟ್ಟಿ ಅವರು ಲೇಖನಗಳನ್ನು ಪ್ರಕಟಿಸಿದ್ದಾರೆ. ಅವರಲ್ಲಿ ತಾವು ಸಂಗ್ರಹಿಸಿದ್ದ ಹಸ್ತಪ್ರತಿಗಳು ಸಾವಿರ ಪುಸ್ತಕಗಳಿಗಾಗುವಷ್ಟು ಇದ್ದಿತು. ಇವರು ಪ್ರಕಟಿಸಿದ ವಚನ ಶಾಸ್ತ್ರ ಸಾರದ ಮೂರು ಸಂಪುಟಗಳು 1923, 1931 ,ಮತ್ತು 1939ರಲ್ಲಿ ಇವು ಪ್ರಕಟವಾದವು. ಶಿವಶರಣರ ಚರಿತ್ರೆಗಳು , ಇವೆಲ್ಲ ನಾಲ್ಕನೇ ಸಂಪುಟವಾಗಿ ಪ್ರಕಟವಾದವು. ಅಮರ ಗಣಾಧೀಶ್ವರರ ಚರಿತ್ರೆಯನ್ನು ಪ್ರಕಟಿಸಿದರು. ಶಿವಾನುಭವ ಶಬ್ದಕೋಶವನ್ನು ಪ್ರಕಟಿಸಿದರು .ವಾಸ್ತವವಾಗಿ ಮೂರು ಸಂಪುಟಗಳಲ್ಲಿ ಪ್ರಕಟವಾದ ವಚನ ಶಾಸ್ತ್ರ ಸಾರಕ್ಕೆ ಪೂರಕವಾದ ಗ್ರಂಥ ಸಮುದಾಯ ಈ ಚರಿತ್ರೆಗಳು ಮತ್ತು ಶಿವಾನುಭವ ಶಬ್ದಕೋಶಗಳು ಒಂದರ್ಥದಲ್ಲಿ ಈ ಎಲ್ಲ ಕೃತಿ ಸಮುದಾಯದ ಪ್ರಥಮ ಬಾರಿಗೆ ಕನ್ನಡಿಗರಿಗೆ ಕಳೆದು ಹೋಗಿದ್ದ 12ನೇ ಶತಮಾನದ ಸಂಸ್ಕೃತಿಯ ಪುನರ್ದರ್ಶನವನ್ನು ಮಾಡಿಕೊಡುವ ಗ್ರಂಥ ಸಮುದಾಯವಾಗಿತ್ತು. ಈ ಪ್ರಯತ್ನಕ್ಕೆ ಕಳಸ ವಿಟ್ಟಂತೆ 1930ರಲ್ಲಿ ಇವರು ಗೂಳೂರು ಸಿದ್ಧವೀರಣಾರ್ಯ ಶೂನ್ಯ ಸಂಪಾದನೆಯನ್ನು ಪ್ರಕಟಿಸಿದರು.
1927 ಅಕ್ಟೋಬರ್ 6 ನೇ ತಾರೀಕು ನವ ಕರ್ನಾಟಕ ಪತ್ರಿಕೆಯನ್ನು ಆರಂಭಿಸಿದರು. ಇದರಲ್ಲಿ ರಾಜಕೀಯ ಸಾಮಾಜಿಕ ಉದ್ಯೋಗಿಕ ಶೈಕ್ಷಣಿಕ ಮುಂತಾದ ವಿಷಯದಲ್ಲಿ ಕರ್ನಾಟಕದ ಜನತೆ ಹೇಗೆ ಮುಂದುವರಿಯಬೇಕು ಎಂಬುದರ ಬಗ್ಗೆ ವಿವೇಚನೆಗಳು ಪ್ರಯತ್ನಗಳು ಈ ಪತ್ರಿಕೆಯ ಮೂಲಕ ಮಾಡಲ್ಪಡುವುದು. ಇದು ಸಮಾಜ ಪಂಗಡ ಜಾತಿ ಈ ಬಗ್ಗೆ ಯಾವ ತರದ ಭೇದ ಭಾವಗಳನ್ನು ಎಣಿಸದೆ ಯಾವುದು ಸತ್ಯವಾದದ್ದು ನ್ಯಾಯವಾದದ್ದು ಅದನ್ನೇ ನಿಷ್ಪಕ್ಷಪಾತದಿಂದಲೂ ನಿರ್ಭಯದಿಂದಲೂ ಹೇಳಲು ಸಿದ್ಧವಾಗಿದೆ. ಸರ್ವ ವಿಷಯದಲ್ಲಿ ಕರ್ನಾಟಕ ಮುಂದುವರಿಯಬೇಕು ಎಂಬ ಉದ್ದೇಶದಿಂದ ನವ ಕರ್ನಾಟಕ ಪತ್ರಿಕೆಯನ್ನ ಪ್ರಾರಂಭಿಸಿರುವದಾಗಿ ಅವರೇ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ವಚನ ಸಾಹಿತ್ಯವನ್ನು ಕನ್ನಡಿಗರಿಗೆ ಪರಿಚಯಿಸುವದೇ ಅವರ ಜೀವನದ ಉದ್ದೇಶವಾಗಿತ್ತು ವಚನ ಸಾಹಿತ್ಯವೇ ತಮ್ಮ ಜೀವಾಳ ಎನ್ನುವಂತೆ ಅದಕ್ಕಾಗಿ ತಮ್ಮ ಜೀವ -ಜೀವನವನ್ನು ಸಮರ್ಪಿಸಿಕೊಂಡ ಮಹಾ ಚೇತನ ಫ .ಗು. ಹಳಕಟ್ಟಿ.


ಫ. ಗು. ಹಳಕಟ್ಟಿ ಅವರ ಜನ್ಮ ದಿನಾಚರಣೆಯನ್ನು “ವಚನ ಸಂರಕ್ಷಣಾ” ದಿನವನ್ನಾಗಿ ಆಚರಿಸುತ್ತಿರುವುದು ಕನ್ನಡಿಗರಿಗೆಲ್ಲರಿಗೂ ಸಂತಸದ ವಿಷಯ. ನಾವೆಲ್ಲರೂ ವಚನ ಸಾಹಿತ್ಯವನ್ನು ಉಳಿಸೋಣ ಸಾಹಿತ್ಯದ ಬಗ್ಗೆ ಅರಿವು ಮೂಡಿಸೋಣ ವಚನ ಸಾಹಿತ್ಯವನ್ನು ಬೆಳೆಸೋಣ ಅಂದಾಗ ಮಾತ್ರ ಅವರ ಜನ್ಮ ದಿನಾಚರಣೆಗೆ ಒಂದು ಅರ್ಥ ಬರುತ್ತದೆ.


ಮೀನಾಕ್ಷಿ ಪಾಟೀಲ್

Leave a Reply

Back To Top