ಇಂದಿರಾ ಮೋಟೆಬೆನ್ನೂರ ಕವಿತೆ-ತಿಳಿಯಲೇ ಇಲ್ಲ

ಕಾವ್ಯ ಸಂಗಾತಿ

ತಿಳಿಯಲೇ ಇಲ್ಲ

ಇಂದಿರಾ ಮೋಟೆಬೆನ್ನೂರ.

ನೋವುಂಡವರು ಮಾತ್ರ ನೋವನ್ನು
ಅರ್ಥಮಾಡಿ ಕೊಳ್ಳಬಲ್ಲರು….
ಗಾಯಗೊಂಡ ಹೃದಯ ಮಾತ್ರವೇ
ಇನ್ನೊಂದು ಹೃದಯಕ್ಕಾದ ಗಾಯದ
ಆಳ ಅರಿಯಬಲ್ಲುದು..
ಪ್ರೀತಿಸುವ ಮನಸು ಮಾತ್ರವೇ
ಪ್ರೀತಿಯ ಭಾವ ತಿಳಿಯಬಲ್ಲುದು…
ಹಟದ.. ಚಟದ..ಮಾತಲ್ಲ
ದಿಟ ನುಡಿಯ ಪುಟ ಪುಟಗಳು
ನನ್ನ ಕವಿತೆಗಳು…ಉರಿವ ಹೃದಯ
ಮಿಡಿದ ತಟ ತಟ ಉದುರಿದ
ನೋವಿನ ಹನಿಗಳು…
ಪುಟಕಿಟ್ಟ ಎದೆಯ ದನಿಗಳು….
ಹಸನಾದ ಹೃದಯದಲಿ
ನೀನೇ ಬಿತ್ತಿ ಬೆಳೆದ ಭಾವ
ಹುಲುಸಾಗಿ ಬೆಳೆದು ಜೀವ ತಳೆದು
ಹೂವಾದದ್ದು ಯಾವಾಗ
ಎಂದು ಅರಿವಾಗಲೇ ಇಲ್ಲ…
ಅರಳಿಸಿದ ಭಾವಗಳೊಡೆಯ
ನಿರಾಕರಿಸಿ ನೂಕಿ ನಗುತ ನೋವ
ನೀಡಿ ನಡೆದರೆ ಏನು
ಮಾಡೀತು ಹೂವು….ಹೂವಿನಾತ್ಮ
ಹುಣ್ಣಾಗಿದ್ದು ಕಣ್ಣೀರಾಗಿದ್ದು..
ಯಾರಿಗೂ ತಿಳಿಯಲೇ ಇಲ್ಲ….
ಬಿಳಿ ಹಾಳೆಯಂತಿದ್ದ ಹೃದಯದಿ
ನೀನೊಲವಿನ ಓಲೆ ಬರೆದು
ಬಣ್ಣ ಬಣ್ಣದ ಕನಸರಳಿಸಿ…
ನಂಬಿಕೆಯ ಬೇರನ್ನೇ ಕಿತ್ತೊಗೆದು
ತೊರೆದು ಹೋಗಿದ್ದು ಗೊತ್ತಾಗಲೇ ಇಲ್ಲ….
ಮುಗ್ಧೆಯೋ.. ಮೂಢಳೋ…
ಮಬ್ಬೋ…ಮರುಳೋ…
ತಿಳಿಯಲೇ ಇಲ್ಲ….
ಎಲ್ಲರೂ ಚುಚ್ಚುವರೇ ಈಗ…
ಮಾತಿನಿಂದ..ಮೌನದಿಂದ..
ಕವಿತೆಯಿಂದ…ಭಾವದಿಂದ…
ಅರಿತವರಾರಿಲ್ಲ ಅಂತರಂಗದ ಅಳಲ….


— ಇಂದಿರಾ ಮೋಟೆಬೆನ್ನೂರ.

Leave a Reply

Back To Top