ಜ್ಯೋತಿಬಾ ಫುಲೆಯವರ ಜಯಂತಿ
“ಜ್ಯೋತಿ ಬೆಳಗೋಣ ಬನ್ನಿ”
ಏಪ್ರೀಲ ತಿಂಗಳು ನಿಜಕ್ಕೂ ಭಾರತ ದೇಶಕ್ಕೆ ಎರಡು ತಾರೆ ನೀಡಿತು. ಒಬ್ಬರು ಮಹಾಮಾನವ ಬಾಬಾಸಾಹೇಬ ಅಂಬೇಡ್ಕರರು ಮತ್ತು ಇನ್ನೊಬ್ಬರು ಕ್ರಾಂತಿಜ್ಯೋತಿ ಮಹಾತ್ಮಾ ಜ್ಯೋತಿಭಾ ಫುಲೆ. ಜ್ಯೋತಿರಾವರು ಹುಟ್ಟಿದ್ದು ೧೧ ಏಪ್ರೀಲ ಮತ್ತು ಅಂಬೇಡ್ಕರರು ಹುಟ್ಟಿದ್ದು ೧೪ ಏಪ್ರೀಲ. ದಮನಿತ ಮತ್ತು ಶೋಷಿತ ಸಮಾಜದ ಏಳಿಗೆಗೆ ಶ್ರಮಿಸಿ, ಅಂಧಕಾರವನ್ನು ಹೋಗಲಾಡಿಸಿ, ದೇಶದ ಆಂತರಿಕ ಸ್ವಾತಂತ್ರö್ಯ ಮತ್ತು ಸಾತ್ವಿಕ ಸ್ವಾತಂತ್ರಕ್ಕೆ ಹೋರಾಡಿದ ಇರ್ವರೂ ತಾರೆಗೆ ಸಮಾನರು. ಅಂಬೇಡ್ಕರರಿಗೆ ಆದರ್ಶರಾದ ಜ್ಯೋತಿರಾವರು ಭಾರತದ ಆಧುನಿಕತೆಗೆ ಹಾಕಿದ ಬದ್ರ ಬುನಾದಿ ಇಂದು ದೇಶವನ್ನು ಜಗತ್ತಿನಲ್ಲಿ ಮಿನುಗುವಂತೆ ಮಾಡಿದೆ.
ಫುಲೆಯವರು ೧೧ ಏಪ್ರೀಲ್ ೧೮೨೭ ರಂದು ಮಹಾರಾಷ್ಟದ ಸಾತಾರಾ ಜಿಲ್ಲೆಯ ‘ಕಟ್ಗುಣ’ ಹಳ್ಳಿಯಲ್ಲಿ ತರಕಾರಿ ಮಾರುವವನ ಮನೆಯಲ್ಲಿ ಜನಿಸಿದರು. ಸಮಾನತೆ ಬೋಧಿಸಿದ ಸಂತ ತುಕಾರಾಮ, ಸಮಾನತೆಯ ತತ್ವದಡಿಯಲ್ಲಿ ರಾಜ್ಯ ಸ್ಥಾಪಿಸಿದ ಶಿವಾಜಿ ಮಹಾರಾಜರು, ಅನ್ಯಾಯದ ವಿರುದ್ಧ ಹೋರಾಡಿದ ಮಾರ್ಟಿನ್-ಲೂಥರ್-ಕಿಂಗ್ ಮತ್ತು ಮಾನವ ಹಕ್ಕು ಹೋರಾಟಗಾರ ಲೇಖಕ ಥಾಮಸ್ ಪೇನ್‌ರ ಪ್ರಭಾವಕ್ಕೆ ಒಳಗಾಗಿ ಭಾರತ ದೇಶದಲ್ಲಿ ದಮನಿತ ಮತ್ತು ಶೋಷಿತ ವರ್ಗದ ದಂಡನಾಯಕನಾಗಿ ಒಂಟಿ ಸಲಗದಂತೆ ಕಾದಾಡಿದ ವೀರ. ಕುಟುಂಬದ ಮತ್ತು ಸಮಾಜದ ಎಷ್ಟೆ ಒತ್ತಡ ಇದ್ದರೂ ಅತ್ಯಂತ ಜಿದ್ದಿನಿಂದ ಶಿಕ್ಷಣ ಪಡೆದರು. ನೌಕರಿ ಮಾಡುತ್ತಾ ಆರಾಮಾಗಿ ಇರಬಹುದಿತ್ತು. ಆದರೆ ಹಾಗೆ ಮಾಡದೆ ಸಮಾಜ ಸೇವೆಗೆ ತಮ್ಮನ್ನು ತಾವು ಮುಡುಪಾಗಿಟ್ಟರು.
೧೮೪೮ರಲ್ಲಿ ಜ್ಯೋತಿರಾವರು ತಮ್ಮ ಮೇಲ್ವವರ್ಗದ ಆತ್ಮೀಯ ಸ್ನೇಹಿತನ ಮದುವೆಗೆ ಹೋದಾಗ ಸಂಭವಿಸಿದ ಅವಮಾನವು ಅವರ ಕಣ್ಣು ತೆರೆಸಿತು. ಈ ಅನಿಷ್ಠ ರೂಢಿ-ಪರಂಪರೆ ಮತ್ತು ಜಾತಿವ್ಯವಸ್ಥೆ ಮಣ್ಣುಗೂಡದೆ ಸಮಾಜದ ಮತ್ತು ದೇಶದ ಏಳಿಗೆ ಸಾಧ್ಯವಿಲ್ಲ. ಇದಕೆಲ್ಲಾ ಕಾರಣ ಅಜ್ಞಾನ. ಅಜ್ಞಾನ ತೊಲಗಬೇಕಾದರೆ ವಿದ್ಯೆಯೆ ಬಹುದೊಡ್ಡ ಅಸ್ತç ಎಂದು ತಿಳಿದು ಸಮಾಜದ ಪ್ರತಿಯೊಂದು ವರ್ಗಕ್ಕೆ ಶಿಕ್ಷಣ ಸಿಗುವಂತೆ ಪಣ ತೋಡುತ್ತಾರೆ.
“ವಿದ್ಯೆಯಿಲ್ಲದೆ ಮತಿ ಹೋಯಿತು
ಮತಿ ಇಲ್ಲದೆ ನೀತಿ ಹೋಯಿತು
ನೀತಿ ಇಲ್ಲದೆ ಗತಿ ಹೋಯಿತು
ಗತಿ ಇಲ್ಲದೆ ವಿತ್ತ ಹೋಯಿತು
ವಿತ್ತವಿಲ್ಲದೆ ಶೂದ್ರನು ಕುಸಿದ.
ಇಷ್ಟೆಲ್ಲಾ ಒಂದು ಅವಿದ್ಯೆ ಮಾಡಿತೆಂದು ಅವರು ಆ ವರ್ಷವೆ ಅಗಸ್ಟ ೧೮೪೮ ರಲ್ಲಿ ಪುಣೆಯಲ್ಲಿ ಶಾಲೆಯನ್ನು ತೆರೆಯುತ್ತಾರೆ. ಶಾಲೆಯಲ್ಲಿ ಪಾಠಕ್ಕೆ ಪತ್ನಿ ಸಾವಿತ್ರಿಬಾಯಿ ಫುಲೆಯವರಿಗೆ ಸ್ವತಃ ವಿದ್ಯೆ ಕಲಿಸಿ ದೇಶದ ಪ್ರಥಮ ಶಿಕ್ಷಕಿಯನ್ನಾಗಿ ಮಾಡುತ್ತಾರೆ. ಶಾಲೆಯ ಮುಖ ನೋಡದ ಸಾವಿತ್ರಿ ಪತಿಯ ವಿಚಾರಗಳಿಗಾಗಿ ತನ್ನ ಜೀವನವನ್ನೆ ಮುಡುಪಾಗಿಟ್ಟ ಧೀಮಂತ ಮಹಿಳೆ. ಶಾಲೆ ಕಲಿಸಲು ಹೋರಟಾಗ ಮೇಲ್ವರ್ಗದ ಕಿಡಗೇಡಿತನಕ್ಕೆ ಭಯಪಡದೆ ತಮ್ಮ ಕಾಯಕ ಚಾಲ್ತಿಯಿಟ್ಟರು. ಈ ಕಾರಣಕ್ಕೆ ಅವರಿಗೆ ಕುಟುಂಬದಿಂದ ಬಹಿಷ್ಕಾರಕ್ಕೆ ಒಳಗಾಗಬೇಕಾಯಿತು. ಅದಕ್ಕೂ ಅಂಜದ ಅವರು ಮುಂದೆ ೧೮೫೧ ರಲ್ಲಿ ಹೆಣ್ಣು ಮಕ್ಕಳಿಗಾಗಿ ಮತ್ತೊಂದು ಶಾಲೆಯನ್ನು ಪ್ರಾರಂಭ ಮಾಡಿದರು. ಮೊದಲಿಗೆ ಸಮಾಜದ ಭಯದಿಂದ ಕೇವಲ ೮ ಹೆಣ್ಣು ಮಕ್ಕಳು ಮಾತ್ರ ಶಾಲೆಗೆ ಬರುತಿದ್ದರು. ಆದರೆ ಇಂದು ದೇಶದಲ್ಲಿ ಕೋಟ್ಯಾವಧಿ ಹೆಣ್ಣು ಮಕ್ಕಳು ವಿದ್ಯೆ ಪಡೆದುಕೊಳ್ಳುತಿದ್ದಾರೆ, ಇದರ ಶ್ರೇಯ ನಿಜಕ್ಕೂ ಈ ದಂಪತಿಗಳಿಗೆ ಸಲ್ಲಬೇಕು.
ಜ್ಯೋತಿರಾವ ಇಷ್ಟಕ್ಕೆ ನಿಲ್ಲದೆ ೧೮೫೨ ರಲ್ಲಿ ಅಸ್ಪೃಶ್ಯ ಜಾತಿಗಳಾದ ಮಹಾರ ಮತ್ತು ಮಾಂಗ ಮಕ್ಕಳಿಗೆ ಶಾಲೆಯನ್ನು ತೆರೆದರು. ದಾರಿದ್ರ್ಯ, ಬಡತನ, ಮೇಲು-ಕೀಳು, ಮೂಡನಂಬಿಕೆ ನಿರ್ಮೂಲನೆ ಶಿಕ್ಷಣದಿಂದ ಮಾತ್ರ ಸಾಧ್ಯವೆಂದು ಕೃಷಿಕ ಮತ್ತು ಕಾರ್ಮಿಕ ವರ್ಗದವರಿಗೂ ಜ್ಞಾನದ ಬಾಗಿಲನ್ನು ತೆರೆದರು. ಏಕೆಂದರೆ ಬ್ರಿಟೀಷ ಸರಕಾರವು ಕೃಷಿಕ ಮತ್ತು ಕಾರ್ಮಿಕರ ಅಜ್ಞಾನದ ಲಾಭ ಪಡೆದುಕೊಂಡು ವಿಪರಿತ ಕಂದಾಯ ವಸೂಲಿ ಮಾಡುತ್ತಿತ್ತು. ಕಷ್ಟ ಮಾಡುವದು ಇವರು ಆದರೆ ವಸೂಲಿ ಮಾಡುವ ಅಧಿಕಾರಿಗಳು ಮಾತ್ರ ಮೇಲ್ವರ್ಗದವರು. ಅದಕ್ಕಾಗಿ ಫುಲೆಯವರು ಪ್ರಥಮ ಬಾರಿಗೆ ಬ್ರಿಟಿಷರ ವಿರುದ್ಧ ಈ ಬಗ್ಗೆ ಧ್ವನಿ ಎತ್ತಿದರು. ಜಮೀನ್ದಾರ ಪದ್ಧತಿ, ಸಾಮಂತಶಾಹಿ, ಸಾಹುಕಾರ ಪದ್ಧತಿ ಹೋಗಲಾಡಿಸಬೇಕು ಮತ್ತು ಕೃಷಿಕರಿಗೆ ಅತ್ಯಾಧುನಿಕ ಸಲಕರಣೆ ಕೊಡಬೇಕು ಎಂದು ನೇರ ಶಬ್ದಗಳಲ್ಲಿ ಕೇಳಿಕೊಂಡರು.
ಜ್ಞಾನ ಮುಚ್ಚಿಟ್ಟು ಉಳಿದ ಸಮಾಜದ ಕತ್ತು ಹಿಸುಕುವ ಮೇಲ್ವರ್ಗದ ಜೊತೆ ಬಹಿರಂಗ ಸಮರ ಸಾರಿದ್ದರು. ಪ್ರಥಮ ಬಾರಿಗೆ ಪುರೋಹಿತನಿಲ್ಲದ ಮದುವೆಯನ್ನು ಮಾಡಿಸಿ ತಮ್ಮ ಸಮಾಜದಿಂದ ಬಹಿಸ್ಕೃತಗೊಂಡರು. ಬಾಲ್ಯವಿವಾಹದ ನಿರ್ಭಂದನೆಗೆ ಹೋರಾಡಿದರು. ಬಾಲ್ಯವಿವಾಹ ಪರಿಣಾಮವೆಂದರೆ ಸಮಾಜದಲ್ಲಿ ವಿಧವೆಯರ ಸಂಖ್ಯೆ ಹೆಚ್ಚಾಗಿತ್ತು. ಅಂದಿನ ಸಮಾಜವು ಈ ವಿಧವೆಯರಿಗೆ ಅತ್ಯಂತ ಹೀನವಾಗಿ ನೋಡಿಕೊಳ್ಳುತಿತ್ತು. ಅವರನ್ನು ಕೇಶಮುಂಡನೆ ಮಾಡಿಸಿ ಕತ್ತಲೆ ಕೋಣೆಯಲ್ಲಿ ಇಡಲಾಗುತಿತ್ತು. ಯೌವನದಲ್ಲಿಯೆ ವಿಧವೆಯರಾಗಿ ಅನೈತಿಕ ಮಾರ್ಗದಿಂದ ಗರ್ಭೀಣಿಯಾದರೆ ನವಜಾತ ಮಕ್ಕಳನ್ನು ಬಿಸಾಕಬೇಕಾಗುತ್ತಿತ್ತು ಇಲ್ಲದಿದ್ದರೆ ಎಲ್ಲಾದರು ಬಿಡಬೇಕಾಗುತ್ತಿತ್ತು. ಫುಲೆಯವರು ಇವರಿಗಾಗಿ ಮುಂದೆ ಬಂದು ವಿಧವೆ ಮತ್ತು ಮಕ್ಕಳ ಸಲುವಾಗಿ ೧೮೬೩ರಲ್ಲಿ ಅನಾಥಾಲಯ ತೆರೆದರು. ೧೮೭೩ ರಲ್ಲಿ ಬ್ರಾಹ್ಮಣ ವಿಧವೆಗೆ ಅನೈತಿಕ ಮಾರ್ಗದಿಂದ ಜನಿಸಿದ ಮಗುವನ್ನು ದತ್ತು ತೆಗೆದುಕೊಂಡು ಸಮಮಾಜದಲ್ಲಿ ಹೊಸ ಆದರ್ಶ ನಿರ್ಮಾಣ ಮಾಡಿದರು.
ಸಮಾಜಕ್ಕೆ ಸತ್ಯದ ಅರಿವಾಗಬೇಕೆಂದು ೧೮೭೩ ರಲ್ಲಿ ‘ಸತ್ಯಶೋಧಕ ಸಮಾಜ’ ದ ಸ್ಥಾಪನೆ ಮಾಡುತ್ತಾರೆ. ಈ ಮೂಲಕ ಸಮಾಜದಲ್ಲಿಯ ಅನಿಷ್ಠ ಪದ್ಧತಿಗಳನ್ನು ಮೊಟಕುಗೊಳಿಸಿ ಸುಧಾರಣೆ ಮಾಡುವಂತೆ ಬ್ರಿಟೀಷ ಸರಕಾರಕ್ಕೆ ಶಿಪಾರಸು ಮಾಡಿದಾಗ ಸರಕಾರವು ‘ಎಗ್ರಿಮೆಂಟ್ ಆಕ್ಟ’ ಪಾಸು ಮಾಡುತ್ತದೆ. ೧೮೮೮ ರಲ್ಲಿ ಇಂಗ್ಲೇಂಡ್ ರಾಣಿಯ ಪುತ್ರ ಭಾರತ ಭೇಟಿಗೆ ಬಂದಿದ್ದರು. ಅವರ ಕಾರ್ಯಕ್ರಮದಲ್ಲಿ ಫುಲೆಯವರು ಒಕ್ಕಲಿಗರ ಪಾರಂಪರಿಕ ವೇಷ-ಭೂಷದಲ್ಲಿ ಹೋಗಿ ದೇಶದ ಪರಿಸ್ಥಿತಿಯ ಬಗ್ಗೆ ರಾಣಿಯವರಿಗೆ ಮನವರಿಕೆ ಮಾಡಿಕೊಟ್ಟರು.
‘ರಾಷ್ಟಿçಯ ಕಾಂಗ್ರೇಸ್’ ಪಕ್ಷವು ೧೮೮೯ರ ತನ್ನ ಸಮಾವೇಶ ಮುಂಬಯಿಯಲ್ಲಿ ಇಟ್ಟಿಕೊಂಡಿತು. ಅಲ್ಲಿ ಕೂಡ ಫುಲೆಯವರು ರೈತನ ಭೆತ್ತ ಮತ್ತು ಹುಲ್ಲಿನ ಗಂಟಿನ ಜೊತೆ ಹೋಗಿ ವಿರೋಧ ವ್ಯಕ್ತ ಪಡಿಸಿದ್ದರು. ರಾಷ್ಟಿçಯ ಕಾಂಗ್ರೇಸ ಪಕ್ಷವನ್ನು ವಿರೋಧ ಮಾಡಿದವರು ಮೊದಲಿಗರೆಂದು ಹೇಳಬಹುದು. ಏಕೆಂದರೆ ಇದರಲ್ಲಿ ಇರುವವರೆಲ್ಲಾ ಮೇಲ್ವರ್ಗದದವರು, ಸಮಾಜದ ಆಂತರಿಕ ಸ್ವಾತಂತ್ರದ ವಿಷಯ ಇರಲಿಲ್ಲ. ಅದಕ್ಕಾಗಿ ಇವರು ಈ ಪಕ್ಷದ ದೇಶಕ್ಕೆ ಯಾವ ಅವಶ್ಯಕತೆ ಇಲ್ಲವೆಂದು ಹೇಳಿದ್ದರು.
ಈಶ್ವರ ಒಬ್ಬನೆ ಇದ್ದಾನೆ ಅವನಿಗಾಗಿ ದಲ್ಲಾಲಿಗಳ ಅವಶ್ಯಕತೆ ಇಲ್ಲ. ಅದಕ್ಕಾಗಿ ಸಮಯ ಮತ್ತು ದುಡ್ಡು ವ್ಯರ್ಥ ಮಾಡದೆ, ವಿದ್ಯೆಯ ಉನ್ನತಿಗಾಗಿ ಶ್ರಮಿಸಿರಿ ಅದುವೆ ಶಾಂತಿ ನೆಲೆಸಲು ಸಹಕಾರಿ ಆಗುತ್ತದೆ ಎಂದು ಹೇಳಿದ್ದರು. ಸಮಾಜದ ಉನ್ನತಿಯ ಜೊತೆಗೆ ಇವರ ಸಾಹಿತ್ಯ-ಕೃಷಿಯು ಅತ್ಯಂತ ಮಹತ್ವದ್ದಾಗಿದೆ. ಅವರು ಬರೆದ ಶಿವಾಜಿ ಪುವಾಡ, ಬ್ರಾಹ್ಮಣರ ಕುಯುಕ್ತಿ, ದಾಸ್ಯ, ರೈತನ ಚಾಟ, ಸಾರ್ವಜನಿಕ ಸತ್ಯ-ಧರ್ಮ ಇಂತಹ ಹಲವಾರು ಮಹತ್ವದ ಕೃತಿಗಳು ಇಂದಿಗೂ ಅದೆಷ್ಟೋ ಸಲ ವಿಮರ್ಶೆಗೆ ಬರುತ್ತಿವೆ. ಬದುಕಿನ ಕೊನೆಗೆ ಇವರು ಪಾರ್ಶ್ವವಾಯಿವಿನ ಆಘಾತದಿಂದ ತಮ್ಮ ಬಲಗೈ ಶಕ್ತಿ ಹೀನವಾದಾಗ ಎಡಗೈಯಿಂದ ಸಮಾಜ ಪ್ರಬೋಧನೆ ಕುರಿತು ಬರೆದ ಮಹಾನುಭಾವರು. ಇಂತಹ ಮಹಾನ್ ಚೇತನ ೨೮ ನವ್ಹೆಂಬರ ೧೮೯೦ಕ್ಕೆ ನಮ್ಮನ್ನು ಅಗಲಿದರು.
ಇವರ ಆದರ್ಶ ಮುಂದೆ ಮಹಾರಾಷ್ಟç ಸಾಮಾಜಿಕ ಚಳುವಳಿಯ ಮುಖ್ಯ ಕೇಂದ್ರಬಿಂದು ಆಗುತ್ತದೆ. ಮಹಾತ್ಮಾ ಗಾಂಧೀಜಿ, ಶಾಹೂ ಮಹಾರಾಜ, ಇಂದಿನ ಛಗನ್ ಭುಜಬಳದ ವರೆಗೆ ಅನೇಕ ನಾಯಕರು ಇವರ ಕಾರ್ಯದ ಪ್ರೇರಣೆ ಪಡೆದಿದ್ದಾರೆ. ಕೆಲವರ ಅಭಿಪ್ರಾಯದಂತೆ ಮಹಾತ್ಮಾ ಗಾಂಧೀಜಿಯವರೆ ಇವರಿಗೆ ಪ್ರಥಮಬಾರಿಗೆ ‘ಮಹಾತ್ಮಾ’ ಎಂದು ಕರೆದರು. ಆದರೆ ೧೮೮೦ರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನೋಡಿ ಮುಂಬಯಿ ಸರಕಾರ ಮತ್ತು ಜನರು ಇವರಿಗೆ ‘ಮಹಾತ್ಮಾ’ ಎಂದು ಕರೆಯುತ್ತಾರೆ.
ಪ್ಲೇಟೋ ಹೇಳಿದಂತೆ ‘ಅಜ್ಞಾನವು ಎಲ್ಲ ಕೆಡಕುಗಳ ಮೂಲ ಮತ್ತು ಮಹಾಮಾರಿ.’ ಆ ಅಜ್ಞಾನವನ್ನೆ ಕಿತ್ತೊಗೆಯಲು ಪ್ರಯತ್ನಸಿದ ಫುಲೆಯವರ ವಿಚಾರಗಳು ಇಂದು ಎಷ್ಟರ ಮಟ್ಟಿಗೆ ಅನುಷ್ಠಾನಕ್ಕೆ ಬಂದಿವೆ ನಾವು ಭಾರತಿಯರು ಕೇಳಿಕೊಳ್ಳುವದು ಅವಶ್ಯಕವಾಗಿದೆ. ಸುಮಾರು ೧೭೫ ವರ್ಷಗಳ ಹಿಂದೆ ದೇಶಕ್ಕೆ ಬೆಳಕಿನ ಮಾರ್ಗ ತೋರಿಸಿದ ಜ್ಯೋತಿರಾವರ ಜ್ಯೋತಿಯನ್ನು ಇಂದಿಗೂ ಅದೆಷ್ಟೋ ಹುಳಗಳು ಆರಿಸುವ ಪ್ರಯತ್ನ ಮಾಡುತ್ತಿವೆ. ಅದಕ್ಕಾಗಿ ನಾವು ಭಾರತಿಯರು ಸತ್ಯವನ್ನು ಅರಿತುಕೊಂಡು ಅವರ ಜ್ಯೋತಿಯನ್ನು ಮತ್ತಷ್ಟು ಪ್ರಜ್ವಲಿಸುವಂತೆ ಮಾಡಬೇಕಿದೆ. ಅವರು ಒಂದು ಮಾತನ್ನು ಸದಾ ಹೇಳುತ್ತಿದ್ದರು, “ಒಂದು ವೇಳೆ ಜನರು ನೀವು ಮಾಡುವ ಸಂಘರ್ಷದಲ್ಲಿ ಬಂದರೆ, ದಯವಿಟ್ಟು ಅವರ ಜಾತಿ ಕೇಳಬೇಡಿ.” ಆದರೆ ಇಂದು ನಾವು ಮುಂಜಾನೆ ‘ವಾಕಿಂಗ್’ ಹೋಗುವಾಗ ಸಹ ಜಾತಿ ನೋಡುತ್ತೇವೆ. ದೇಶದ ರಾಜಕಾರಣವಂತು ಹೇಳಲಿಕ್ಕೆ ಬಾರದಷ್ಷು ಹದಗೆಡುತ್ತಿದೆ. ಪ್ರತಿಯೊಂದನ್ನು ನಾವು ಜಾತಿ-ಧರ್ಮದ ಆಧಾರದ ಮೇಲೆ ನೋಡುತ್ತೇವೆ.
ಅಂದಶೃದ್ಧೆ ಎಷ್ಟರ ಮಟ್ಟಿಗೆ ನಮ್ಮಲ್ಲಿ ಹೂತಿದೆ ಅಂದರೆ ಮುಂಜಾನೆ ಎರಡು ಗಂಟೆಗಳ ಕಾಲ ಎಲ್ಲ ವಾಹಿನಿಗಳ ಭವಿಷ್ಯ ನೋಡದೆ ಹೊರಗೆ ಬರುವದಿಲ್ಲ. ಇಂದು ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾದ ಯುವಕ ಬಂಧುಗಳು ಇಲ್ಲದ-ಸಲ್ಲದ ವಿಚಾರಗಳನ್ನು ಚರ್ಚೆ ಮಾಡುವದಕ್ಕಿಂತ, ನಾವು ನಿಜಕ್ಕೂ ದಾಸ್ಯದಿಂದ ಮುಕ್ತರಾ..? ನಮಗೆ ಸ್ವತಂತ್ರ ಇದೆಯಾ..? ಸ್ತಿçಯರು ಮುಕ್ತರಾಗಿದ್ದಾರಾ..? ಬಾಲ್ಯವಿವಾಹ ಪದ್ಧತಿ ಕೊನೆ ಆಯಿತಾ..? ದೇಶ ಬಡತನ ಮುಕ್ತ ಆಗಿದೆಯೆ..? ದಾರಿದ್ರ್ಯ ಅಂದರೇನು..? ದೇಶದಲ್ಲಿ ಸಮಾನತೆಯೆ ಇದೆಯಾ..? ಯಾರಾದರೂ ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರಾ? ನಿಜವಾದ ಧರ್ಮ ಮತ್ತು ದೇವರು ಯಾರು..? ಈ ಪ್ರಶ್ನೆಗಳನ್ನು ಕೇಳಿಕೊಂಡು ಅದಕ್ಕೆ ಉತ್ತರ ಕಂಡುಕೊಳ್ಳುವದು ಒಳ್ಳೆಯದೆಂದು ಅನಿಸುತ್ತದೆ. ಬಹುತೇಕ ಇಂದು ಕೊರೋನಾ ಮಹಾಮಾರಿ ಈ ಎಲ್ಲ ಪ್ರಶ್ನೆಗಳನ್ನು ಕೇಳುವಂತೆ ಮಾಡುತ್ತದೆ ಎಂಬುದು ನನ್ನ ಭಾವನೆ.
***************************************************
ಮಲಿಕಜಾನ ಶೇಖ
ಮಹಾತ್ಮಾ ಜ್ಯೋತಿಬಾ ಫುಲೆ ರವರ ಬಗ್ಗೆ ನಮಗೆಲ್ಲ ವಿವರವಾಗಿ ಅವರ ಜೀವನ ಚರಿತ್ರೆ ಯ ಉತ್ತಮ ಮಾಹಿತಿ ನೀಡಿ ದ ತಮ್ಮ ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು ಗುರುಗಳೇ ನಿಮ್ಮ ಸಾಹಿತ್ಯ ಸೇವೆ ಲೇಖನರೂಪದಲ್ಲಿ ಕೂಡಾ ಹೀಗೆ ಮುಂದುವರೆಯಲಿಎಂದು ಹಾರೈಸುತ್ತೇನೆ. ಧನ್ಯವಾದಗಳು
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಲೇಖನ. ನಿಜವಾಗಿಯೂ ಇಂದು ಶೈಕ್ಷಣಿಕ್ ಕ್ರಾಂತಿ ಪ್ರಜ್ವಲಿಸಬೇಕಾಗಿದೆ. ವಿಜ್ಞಾನ ಎಷ್ಟೇ ಮುಂದುವರೆದ್ದಿದ್ದರೂ ಅಂಧಶ್ರದ್ಧೆ, ದೇವರು ದಿಂಡರು ಅನ್ನುತ ಕಾಲ ಹರಣ, ಹಣ ವ್ಯಯ ಮಾಡುವುದು ಸಾರಾಸಗಟಾಗಿ ನಡೆದಿದೆ. ದುರ್ದೈವ.