ಕಥಾ ಸಂಗಾತಿ
ಬಿ.ಟಿ.ನಾಯಕ್
ರಾಜಕುಮಾರಿ ಸೌದಾಮಿನಿ
ರಾಜಕುಮಾರಿ ಸೌದಾಮಿನಿ ದೇವಿ ಧನುರ್ವಿದ್ಯೆಯಲ್ಲಿ ಪಾರಂಗತಳು ಮತ್ತು ಆಕೆಯು ನವರತ್ನ ಕೀರ್ತಿ ಭಟ್ ಗುರುಗಳ ಪರಮ ಶಿಷ್ಯೆಯಾಗಿ ಧನುರ್ವಿದ್ಯೆ ಅವರಿಂದಲೇ ಕಲಿತಿದ್ದಳು. ಬೋಧನೆ ಮತ್ತು ಬಿಲ್ಲುಗಾರಿಕೆಯ ಪ್ರಶಿಕ್ಷಣ ಮುಗಿದಾದ ಮೇಲೆ, ಆಕೆಯ ಬಿಲ್ಲುಗಾರಿಕೆಯನ್ನು ಪರೀಕ್ಷಿಸಲು ಗುರುಗಳು ದಟ್ಟವಾದ ಕಾಡಿಗೆ ಕರೆದೊಯ್ದುರು. ಅಲ್ಲಿ ಒಂದು ಕಡೆ ಆಕೆಯನ್ನು ನಿಲ್ಲಿಸಿ ಆಕೆಯ ಕಣ್ಣುಗಳಿಗೆ ಭದ್ರವಾಗಿ ವಸ್ತ್ರವನ್ನು ಸುತ್ತಿ ಬಾಣ ಬಿಡಲು ತಯಾರಿ ಇರುವಂತೆ ಹೇಳಿದರು. ಸಂಜ್ಞೆ ಕೊಟ್ಟಾಗ ಮಾತ್ರ ಬಾಣ ಬಿಡುವಂತೆ ತಿಳಿಸಿದರು. ಅಲ್ಲದೇ, ಬಾಣದ ಗುರಿ ಎಲ್ಲಿಗೆ ಎಂದು ಆಗಲೇ ತಿಳಿಸುತ್ತೇನೆ ಎಂದು ಕೂಡ ಹೇಳಿದ್ದರು. ಆ ಪ್ರಕಾರ ಆಕೆ ಪರೀಕ್ಷೆಗೆ ತಯಾರಾಗಿದ್ದಳು. ಆಮೇಲೆ ಗುರುಗಳು ಆಕೆಯ ಕಿವಿಯ ಸನಿಹಕ್ಕೆ ಹೋಗಿ ಮೆಲ್ಲಗೆ ಹೀಗೆ ಉಸುರಿದರು;
‘ಅದೋ ಒಂದು ನೂರು ಹೆಜ್ಜೆಗಳ ದೂರದಲ್ಲಿ ಒಂದು ತೇಗದ ಮರವಿದೆ. ಅದರಲ್ಲಿ ಒಂದು ಗಿಳಿ ಕುಳಿತು ಧ್ವನಿ ಮಾಡುತ್ತಿದೆ. ಆ ಧ್ವನಿಯ ಕಡೆಗೆ ಲಕ್ಷ್ಯ ಕೊಟ್ಟು, ಅದರ ಎರಡು ಕಾಲುಗಳ ಮಧ್ಯೆ ಗುರಿ ಇಟ್ಟು ಬಾಣವನ್ನು ಬಿಡಬೇಕು. ಆ ರೀತಿ ಬಿಟ್ಟ ಬಾಣ ಗಿಳಿಯ ಎರಡೂ ಕಾಲುಗಳ ಮಧ್ಯೆ ಇರುವ ಮರದ ಟೊಂಗೆಗೆ ತಾಕಬೇಕು. ಹಾಗೆ ತಾಕಿದಾಗ ಆ ಗಿಳಿಯ ರೆಕ್ಕೆಯ ಪುಕ್ಕದ ಕನಿಷ್ಠ ಒಂದು ಎಳೆಯಾದರೂ ಬಾಣಕ್ಕೆ ತಗುಲಿರಬೇಕು. ಯಾವುದೇ ಕಾರಣಕ್ಕೆ ಆ ಗಿಳಿ ಬಾಣದಿಂದ ಬಲಿ ಆಗಬಾರದು.’ ಎಂದು ಹೇಳಿ ಮುಗಿಸಿದರು.
ಆಗ ಸೌದಾಮಿನಿ ದೇವಿ ಬಿಲ್ಲು ಬಾಣಗಳೊಂದಿಗೆ ಸನ್ನದ್ಧಳಾಗಿ, ತನ್ನ ಲಕ್ಷ್ಯವನ್ನು ಆ ಗಿಳಿಯ ಧ್ವನಿಯನ್ನು ಆಲಿಸಿ, ಅದರ ಕಡೆಗೆ ಕೇಂದ್ರೀಕರಿಸಿದಳು. ಇನ್ನೇನು ಆಕೆ ಬಾಣ ಬಿಡುವಷ್ಟರಲ್ಲಿ ಗುರುಗಳು ಮತ್ತೇ ಹೀಗೆ ಎಚ್ಚರಿಸಿದರು;
‘ಶಿಷ್ಯೆ, ಆ ಗಿಳಿಯ ಪ್ರಾಣಕ್ಕೆ ಧಕ್ಕೆಯಾಗಬಾರದು. ಒಂದು ವೆಳ್ಯೇ ಅದು ಪ್ರಾಣ ಕಳೆದುಕೊಂಡರೆ, ಆ ಪಾಪ ನಿನಗಷ್ಟೇ ಅಲ್ಲ, ನನ್ನನ್ನೂ ಸುತ್ತಿಕೊಳ್ಳುತ್ತದೆ. ಹಾಗೆಯೇ ಆದರೆ, ನಾನು ಕಲಿಸಿದ ವಿದ್ಯೆಯನ್ನು ನನಗೆ ಮರಳಿಸಬೇಕಾಗುತ್ತದೆ ಎಚ್ಚರವಿರಲಿ’ ಎಂದು ಹೇಳಿ ಬಾಣ ಬಿಡಲು ಹೇಳಿದರು.
ಆಗ ಆಕೆ ತದೇಕ ಚಿತ್ತದಿಂದ ಬಾಣವನ್ನು ಬಿಟ್ಟಳು. ಆಗ ಗಿಳಿ ಪಟ ಪಟನೇ ತನ್ನ ರೆಕ್ಕೆಯಿಂದ ಶಬ್ದ ಮಾಡುತ್ತಾ ಸರ್ರನೇ ಅಲ್ಲಿಂದ ಹಾರಿ ಹೋಯಿತು. ಆಗ ಆ ಬಾಣ ಟೊಂಗೆಗೆ ನೆಟ್ಟಿರಬಹುದು ಎಂದನಿಸಿತು. ಏಕೆಂದರೆ, ಅಲ್ಲಿ ಗಿಳಿ ರೆಕ್ಕೆ ಬಡಿಯುತ್ತಾ ಹಾರಿದ ದೃಷ್ಟಿ ಗುರುಗಳಿಗೆ ಗೋಚರಿಸಿತು. ಆಮೇಲೆ, ಅವಳಿಗೆ ಕಟ್ಟಿದ್ದ ಕಣ್ಣಿನ ಪಟ್ಟಿ ತೆಗೆದು ಹೀಗೆ ಹೇಳಿದರು;
‘ಭಲೇ ಶಿಷ್ಯೆ..ನಿನ್ನ ಬಾಣದಿಂದ ಗಿಳಿಗೆ ಏನೂ ಅಪಾಯವಾಗಲಿಲ್ಲ. ಆದರೆ, ಅಲ್ಲಿಗೆ ಹೋಗಿ ಮರದ ಟೊಂಗೆಯನ್ನು ಪರೀಕ್ಷಿಸಿ ನೋಡೋಣ ಬಾ’ ಎಂದರು.
ಆಗ ಇಬ್ಬರೂ ಹೊರಟು ಬಾಣ ನೆಟ್ಟ ಮರದ ಹತ್ತಿರ ಹೋಗಿ, ಗುರುಗಳೇ ಖುದ್ದಾಗಿ ಮರವನ್ನೇರಿದರು. ಬಾಣವಿದ್ದ ಟೊಂಗೆಯ ಕಡೆಗೆ ಹೋಗಿ, ಅಲ್ಲಿ ಪರಿಕ್ಷಿಸಿದಾಗ ಅವರಿಗೆ ಕಂಡು ಬಂದದ್ದು ಏನೆಂದರೆ;
ನೆಟ್ಟ ಬಾಣದ ಎಡ ಬಲದಲ್ಲಿ ಗಿಳಿಯ ಕಾಲುಗಳಿಗೆ ತಗುಲಿದ್ದ ಹಣ್ಣಿನ ರಸ ಅಲ್ಲಿ ಲೇಪಗೊಂಡಿತ್ತು. ಅದನ್ನು ನೋಡಿ ಅವರು ಆನಂದಿತರಾಗಿ, ಸೌದಾಮಿನಿಗೆ ಕೂಗಿ ಹೇಳಿದರು;.
‘ಶಿಷ್ಯೆ ಸೌದಾಮಿನಿ ನೀನು ಪರೀಕ್ಷೆಯಲ್ಲಿ ತೇರ್ಗಡೆಯಾದೆ, ಅಭಿನಂದನೆಗಳು’ ಎಂದರು. ಆಮೇಲೆ ರೆಕ್ಕೆಯ ಪುಕ್ಕದ ಎಳೆ ಹತ್ತಿದ ಬಾಣ ಸಮೇತ ಮರದಿಂದ ಕೆಳಗೆ ಇಳಿದು ಬಂದಾಗ, ಸೌದಾಮಿನಿ ಅವರಿಗೆ ಪಾದ ಸ್ಪರ್ಶಿಸಿ ನಮಸ್ಕರಿಸಿದಳು. ಆಗ ಗುರುಗಳು ಪ್ರಸನ್ನರಾಗಿ ಆಕೆಯನ್ನು ಅರಮನೆಗೆ ಹೋಗಲು ಬಿಟ್ಟು ತಾವು ತಮ್ಮ ಆಶ್ರಮದ ಕಡೆಗೆ ಹೊರಟು ಹೋದರು.
ಗುರುಗಳ ಪ್ರಶಂಶೆ ಮತ್ತು ಆಶೀರ್ವಾದ ಪಡೆದ ಮೇಲೆ ಅರಮನೆಗೆ ಮರಳಿದ ಸೌದಾಮಿನಿ ಮುಂದಿನ ದಿನಗಳಲ್ಲಿ ತನ್ನ ಪರಾಕ್ರಮವನ್ನು ತೋರಿಸುತ್ತಲೇ ಹೋದಳು. ಹಾಗೊಮ್ಮೆ ದರೋಡೆ ಕೋರರು ಅವಳ ರಾಜ್ಯದ ಪರಿಧಿಯಲ್ಲಿ ಬಂದು ನಾಗರಿಕರಿಗೆ ಕಿರುಕಳ ಕೊಡುವುದನ್ನು ಅರಿತುಕೊಂಡಳು. ಆಮೇಲೆ, ಇಡೀ ರಾತ್ರಿ ನಿದ್ರೆ ಲೆಕ್ಕಿಸದೇ, ವೇಷ ಬದಲಿಸಿಕೊಂಡು ಅರಮನೆ ಮತ್ತು ನಾಗರಿಕರಿರುವ ಪ್ರದೇಶವನ್ನು ಸುತ್ತು ಹಾಕಿದಾಗ, ನಾಲ್ಕೈದು ಜನರ ಗುಂಪಿನಲ್ಲಿದ್ದ ಒಬ್ಬ ಓಡಿ ಹೋಗುತ್ತಿದ್ದವನನ್ನು ಹಿಡಿದಳು. ಆದರೆ, ಉಳಿದವರು ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋದರು. ಆಮೇಲೆ ಆಕೆ ಹಿಡಿದಿದ್ದ ದರೋಡೆಕೋರನನ್ನು ತಂದು ಅರಮನೆಯ ಕಾರಾಗೃಹದಲ್ಲಿ ಕೂಡಿ ಹಾಕಿದಳು. ಅವನಿಂದ ಉಳಿದವರ ಮುಖ ಚರ್ಯೆ ತಿಳಿದುಕೊಂಡು, ಮತ್ತೇ ಮಾರು ವೇಷ ಹಾಕಿ ಸಹಾಯಕರೊಂದಿಗೆ ಹೋಗಿ ಉಳಿದ ಮೂವರನ್ನೂ ಎಳೆದು ತಂದು ಕಾರಾಗೃಹದಲ್ಲಿ ಇಟ್ಟಳು. ಅದಾದ ನಂತರ, ಅವರು ದೋಚಿದ ಒಡವೆ, ನಗ ನಾಣ್ಯಗಳು ಎಲ್ಲಾ ತಮ್ಮಷ್ಟಕ್ಕೆ ತಾವೇ ಮರಳಿ ದೊರಕಿದವು. ಈ ಸುದ್ದಿ ಪಸರಿಸಿದಾಗ, ಅಲ್ಲಿಯ ನಾಗರಿಕರು ದಂಡು ದಂಡಾಗಿ ಅರಮನೆಗೆ ಬಂದು ಸೌದಾಮಿನಿ ದೇವಿಯನ್ನು ಕಂಡು ನಮಸ್ಕರಿಸಿ, ಅಭಿನಂದಿಸಿ ಕೊಂಡಾಡಿದರು.
ಇನ್ನೊಮ್ಮೆ ಚಿರತೆಯೊಂದು ಜನರಿರುವ ಪ್ರದೇಶಗಳಿಗೆ ಬಂದು ಸಾಕು ಪ್ರಾಣಿಗಳಾದ ಮೇಕೆ ಮತ್ತು ಮರಿಗಳನ್ನು ಎಳೆದು ಒಯ್ಯುತ್ತಿತ್ತು. ಒಂದು ಬಾರಿ ಮನೆಯ ಯಜಮಾನ ಮೇಕೆಯನ್ನು ಉಳಿಸಿಕೊಳ್ಳಲು ಅದರ ಬೆನ್ನತ್ತಿ ಓಡಿದ್ದ. ಆದರೇ, ಚಿರತೆ ತಿರುಗಿ ಬಿದ್ದು ಅವನ ಮೇಲೆ ಪ್ರಹಾರ ಮಾಡಿ ಸಿಕ್ಕಾ ಪಟ್ಟೆ ಗಾಯ ಮಾಡಿತು. ಆದರೇ, ಅವನ ಅದೃಷ್ಠ ಚೆನ್ನಾಗಿತ್ತು, ಆತ ಬದುಕುಳಿದ. ಈ ಸುದ್ದಿ ತಿಳಿದು, ಸೌದಾಮಿನಿ ತನ್ನ ಸೇನೆಯ ಬಂಟರನ್ನು ಸೇರಿಸಿ ಒಂದು ಬಲೆಯನ್ನೂ ಕೊಂಡೊಯ್ದಳು. ಎಷ್ಟೋ ಹೊತ್ತು ಹೊಂಚು ಹಾಕಿ ಕಾಯ್ದ ಮೇಲೆ, ಅದು ರಾಜಾ ರೋಷವಾಗಿ ನಡೆದು ಹೋಗುತ್ತಿರುವಾಗ, ಅವರೆಲ್ಲಾ ಸುತ್ತುವರೆದು ಬಲೆ ಬೀಸಿ ಅದನ್ನು ಹಿಡಿದರು. ಆಮೇಲೆ ಅದನ್ನು ಚಕ್ಕಡಿಯಲ್ಲಿ ಕೊಂಡೊಯ್ದು ಬಹು ದೂರದ ಕಾಡಿನಲ್ಲಿ ಬಿಟ್ಟು ಬಂದರು.
ಇವಲ್ಲದೇ ಆಕೆ ಸಾಮಾಜಿಕ ಕಾರ್ಯಗಳನ್ನು ಕೂಡಾ ಮಾಡುತ್ತಿದ್ದಳು. ಯಾರಾದರೂ ಅಳಲನ್ನು ತೋಡಿಕೊಂಡರೇ ಪರಿಹಾರ ಕೊಡಿಸುತ್ತಿದ್ದಳು. ಹಾಗೆಯೇ ಒಮ್ಮೆ ಒಬ್ಬ ತನ್ನ ಹೆಂಡತಿಯನ್ನು ವಿನಃ ಕಾರಣ ಅನುಮಾನಿಸಿ ಶಿಕ್ಷಿಸುತ್ತಿದ್ದ. ಆತನ ಕಿರುಕಳ ತಡೆಯಲಾರದೇ ಅವನ ಹೆಂಡತಿ, ಆತ್ಮಹತ್ಯೆಗೆ ಶರಣಾಗಲು ಹೊರಟಿದ್ದಳು. ಹೇಗೋ ವಿಷ್ಯ ತಿಳಿದು ಆಕೆಯ ಪಕ್ಕದ ಮನೆಯವರು ಆಕೆಗೆ ಆಸರೆಯಾಗಿ ಪ್ರಾಣ ಉಳಿಸಿದ್ದರು. ಆದರೇ, ಗಂಡನ ಕಿರುಕಳ ನಿಲ್ಲಲೇ ಇಲ್ಲ.
ಆಕೆ ಮತ್ತೊಮ್ಮೆ ಆತ್ಮ ಹತ್ಯೆಗೆ ಪ್ರಯತ್ನಿಸಿದಾಗಲೂ ಕೂಡ ನೆರೆಯವರು ಆಕೆಯ ಸಹಾಯಕ್ಕೆ ಬಂದಿದ್ದರು. ಆದರೇ, ಆಕೆ ಅವರಿಗೆ ಹೀಗೆ ಹೇಳಿದಳು;
‘ನನಗೆ ಬದುಕುವ ಆಸೆ ಇಲ್ಲ. ನಾನು ಬದುಕಿರುವಷ್ಟು ದಿನ ನನ್ನ ಪತಿ ಕಾಡುತ್ತಲೇ ಇರುತ್ತಾನೆ. ಹಾಗಾಗಿ, ನನ್ನನ್ನು ಸಾಯಲು ಬಿಡಿ’ ಎಂದು ಪರಿ ಪರಿಯಾಗಿ ಕೇಳಿಕೊಂಡಿದ್ದಳು. ಈ ದುಃಖದ ಸಂಗತಿ ಸೌದಾಮಿನಿ ದೇವಿಯ ತನಕ ಹೋಯಿತು. ಆಗ, ದೇವಿ ಆಕೆಯ ಪತಿಯನ್ನು ಕರೆ ತರಲು ತನ್ನ ಭಟರಿಗೆ ಹೇಳಿದಳು. ಕ್ಷಣಾರ್ಧದಲ್ಲಿ ಅವನನ್ನು ಕರೆ ತಂದು ಸೌದಾಮಿನಿಯ ಮುಂದೆ ನಿಲ್ಲಿಸಿದರು. ಆಗ ದೇವಿ ಹೀಗೆ ಪ್ರಶ್ನಿಸಿದಳು;
‘ಏನು ನಿನ್ನ ಹೆಸರು ?’
‘ .. …… ……… ‘ ಏನೂ ಮಾತೇ ಆಡಲಿಲ್ಲ. ಆಗ ಕೋಪದಿಂದ ಆಕೆ ಕೂಗಿದಾಗ;
‘ಜ್ಞಾನವಂತ ‘ ಎಂದ.
‘ನಿನ್ನ ಹೆಸರು ಬದಲಿಸಿಕೋ … ಅಯೋಗ್ಯ ನೀನು.. ಜ್ಞಾನವಂತ ಎಂಬುದರ ಅರ್ಥ ತಿಳಿದಿದೆಯಾ ?’ ಎಂದಳು.
‘ಮಹಾ ತಾಯೀ, ನಾನು ತಪ್ಪು ಮಾಡಿದ್ದೇನೆ.. ನನಗೆ ನೀವು ಏನು ಬೇಕಾದರೂ ಶಿಕ್ಷೆ ಕೊಡಿ ‘ ಎಂದ.
‘ಇವನನ್ನು ಕಾರಾಗೃಹಕ್ಕೆ ತಳ್ಳಿ, ಎರಡು ದಿನಗಳಾದ ಮೇಲೆ ಬಿಟ್ಟು ಬಿಡಿ. ಅವನಿಗೆ ಜೀವ ಉಳಿಸಿಕೊಳ್ಳುವ ಸಲುವಾಗಿ ಇಡೀ ದಿನಕ್ಕೆ ಒಂದು ಹಿಡಿ ಅನ್ನ ಮತ್ತು ಒಂದು ಬೊಗಸೆ ನೀರು ಮಾತ್ರ ಕೊಡಿ’ ಎಂದು ಸೂಚಿಸಿದಳು.
ಆಮೇಲೆ, ಎರಡು ದಿನಗಳಾದ ಮೇಲೆ ಆತನನ್ನು ಮನೆಗೆ ಕಳಿಸುವ ಮುನ್ನ ಮತ್ತೇ ಹೀಗೆ ಎಚ್ಚರಿಸಿದ್ದಳು;
‘ಆತನು ಇನ್ನೊಮ್ಮೆ ತಾನು ಮಾಡಿದ ತಪ್ಪನ್ನು ಮತ್ತೇ ಮಾಡಿದರೆ, ಆತನನ್ನು ಗಡಿ ಪಾರು ಮಾಡಿ ಬಿಡಿ’ ಎಂದಿದ್ದಳು. ಹಾಗಾದ ಬಳಿಕ ಜ್ಞಾನವಂತ ಮುಂದೆ ಯಾವುದೇ ತಪ್ಪು ಮಾಡದೇ ತನ್ನ ಕುಟುಂಬದವರೊಂದಿಗೆ ಆನಂದಿತನಾಗಿದ್ದ.
ಈಗ ಸೌದಾಮಿನಿ ದೇವಿ ತನ್ನ ಸೇನೆಯನ್ನು ಬಲಪಡಿಸಲು ಒಬ್ಬ ಯುವ ಸೇನಾಧಿಪತಿಯನ್ನು ನೇಮಕ ಮಾಡಿಕೊಳ್ಳಲು ಇಚ್ಚಿಸಿದಳು. ಹಾಗಾಗಿ, ಆಸ್ಥಾನಿಕರು ಸುತ್ತ ಮುತ್ತಲಿನ ಸ್ಥಳಗಳಿಗೆ ಮತ್ತು ದೂರದ ಪ್ರದೇಶಗಳಿಗೆ ಆ ಬಗ್ಗೆ ಪ್ರಚುತ ಪಡಿಸಿದರು. ಆಗ ನಿಗದಿತ ದಿನದಂದು ಒಟ್ಟು ಹತ್ತು ಜನ ಯುವಕರು ಸಂದರ್ಶನಕ್ಕಾಗಿ ಬಂದಿದ್ದರು. ಅವರ ಪರಾಕ್ರಮಗಳನ್ನು ಮತ್ತು ಬುದ್ಧಿಮಟ್ಟವನ್ನು ಖುದ್ದಾಗಿ ಸೌದಾಮಿನಿ ಪರೀಕ್ಷಿಸಿದಳು. ಅವರಲ್ಲಿಯ ಕ್ಷಾತ್ರ ತೇಜಸ್ಸು ಹೊಂದಿರುವ ಇಬ್ಬರು ಯುವಕರು ಆಯ್ಕೆಯಾದರು. ಅವರು ಎಲ್ಲಾ ಸ್ತರಗಳಲ್ಲಿ ಸಮಾನ ಪೌರುಷ ಪ್ರದರ್ಶಿಸಿದ್ದರು. ಅವರು ಕ್ರಮವಾಗಿ ದೂರದ ಲಕ್ಷ್ಮೀಪುರದ ಶ್ರೀಕರ ಶರ್ಮ ವೈದ್ಯ ಮತ್ತು ಆನಂದಪುರದ ರಕ್ಷಿತ್ ಧನ್ವಂತ್. ಅವರಲ್ಲಿ ಒಬ್ಬನನ್ನು ಆಯ್ಕೆ ಮಾಡಲು ಸೌದಾಮಿನಿಗೆ ಕಷ್ಟವಾಯಿತು. ಹಾಗಾಗಿ, ಆಕೆ ಇಬ್ಬರನ್ನೂ ಉಳಿಸಿಕೊಂಡು ಇನ್ನೂ ಪರೀಕ್ಷಿಸುವುದಾಗಿ ಎಂದು ಹೇಳಿ, ತಮ್ಮ ಆಸ್ಥಾನಕ್ಕಾಗಿ ಉಳಿಸಿಕೊಂಡಳು. ಅವರಿಬ್ಬರಿಗೂ ಬೇರೆ ಬೇರೆಯಾದ ವಾಸದ ವ್ಯವಸ್ಥೆ ಮಾಡಿದಳು.
ಅದೇ ಸಮಯದಲ್ಲಿ, ಆಕೆ ಗುಪ್ತಚರ ವರದಿಯನ್ನು ಗಮನಿಸಿದಳು. ಅವರ ಪಕ್ಕದ ಸಾಮಂತ ರಾಜರು, ಈಕೆಯ ಶೌರ್ಯ, ಬಲವನ್ನು ಅರಿಯದೇ, ಈಕೆ ಮಹಿಳೆ ಮತ್ತು ದುರ್ಬಲ ಎಂದುಕೊಂಡು, ಆಕ್ರಮಣ ಮಾಡಲು ಯೋಜಿಸಿದ್ದಾರೆ ಎಂದು ತಿಳಿದು ಬಂತು. ಅಲ್ಲದೇ ಸೌದಾಮಿನಿಯ ಪಿತ ಹಾಗು ಪ್ರಸ್ತುತ ರಾಜರಾದ ಮಹಾಬಲ ಶ್ರೇಷ್ಠರು ತೀರ್ಥ ಯಾತ್ರೆಗಾಗಿ ಉತ್ತರ ಭಾರತಕ್ಕೆ ಹೋಗಿದ್ದರು. ಆ ಸಂಧರ್ಭದಲ್ಲಿ ಆ ಇಬ್ಬರು ಯುವ ಸೇನಾನಿಗಳನ್ನು ಕರೆಯಿಸಿಕೊಂಡು ಈ ಪರಿಸ್ಥಿತಿಯನ್ನು ವಿವರಿಸಿ ತಿಳಿಸಿ ಹೇಳಿದಳು. ಅಲ್ಲದೇ, ಎದುರಾಳಿಯನ್ನು ಹೇಗೆ ಎದುರಿಸಬೇಕೆಂದು ಯೋಜನೆಯ ಬಗ್ಗೆ ಹೇಳತೊಡಗಿದಾಗ, ಶ್ರೀಕರ ಶರ್ಮ ಹೀಗೆ ಹೇಳಿದನು;
‘ರಾಜಕುಮಾರಿಯವರೇ, ತಾವು ತಪ್ಪು ತಿಳಿಯದಿದ್ದರೆ, ನಾನು ಒಂದು ವಿಷಯವನ್ನು ತಮ್ಮಲ್ಲಿ ಅರುಹ ಬಯಸುತ್ತೇನೆ. ಅದೂ ತಮ್ಮೊಬ್ಬರ ಸಮಕ್ಷಮದಲ್ಲಿ ಮಾತ್ರ’ ಎಂದ.
‘ಹಾಗೇಕೆ ? ರಕ್ಷಿತ್ ಕೂಡಾ ನಮ್ಮ ಸೇನಾನಿ ಅಲ್ವೇ ?’ ಎಂದಳು.
‘ಇದಕ್ಕಿಂತ ಹೆಚ್ಚಿಗೆ ನಾನು ಏನೂ ಹೇಳಲಾರೆ’ ಎಂದ.
‘ಸರಿ .. ‘ ಎಂದು ಹೇಳಿ, ರಕ್ಷಿತನನ್ನ ಕೊಂಚ ಕಾಯಲು ಹೇಳಿದಳು. ಅದರಂತೆ, ರಕ್ಷಿತ್ ಹೊರ ನಡೆದ.
ಆಗ ಶ್ರೀಕರ ಹೀಗೆ ಹೇಳಿದನು;
‘ನಾನು ವೈರಿಗಳ ಮೇಲೆ ಆಕ್ರಮಣ ಮಾಡುವ ಮೊದಲು, ಕೆಲವೊಂದು ವಿಷಯಗಳಲ್ಲಿ ನಾನು ಸ್ವಾತಂತ್ರ್ಯ ಬಯಸುತ್ತೇನೆ. ಹಾಗಾಗಿ, ಅದರ ಸಂಪೂರ್ಣ ಯೋಜನೆ ನನ್ನಿಂದಲೇ ಆಗಬೇಕು, ಹಾಗು ಗುಪ್ತ ಚರ ದಳದವರೊಡನೆ ಮಾತಾಡಲು ನನಗೆ ಅವಕಾಶ ನೀಡಬೇಕು. ಅಲ್ಲದೇ ನನ್ನ ಯೋಜನೆಯ ಗುಪ್ತತೆಯನ್ನು ನಾನು ಕೊನೆಯವರೆಗೆ ಯಾರಿಗೂ ತಿಳಿಯಗೊಡುವುದಿಲ್ಲ. ಇದು ಅಲ್ಲದೇ, ಕಾಲು ದಳವನ್ನು ನಾನೇ ಆಯ್ಕೆ ಮಾಡಿ ನನ್ನೊಡನೆ ಒಯ್ಯುತ್ತೇನೆ. ಇವೆಲ್ಲವಕ್ಕೂ ನೀವು ಒಪ್ಪಿದರೆ ಸರಿ, ಇಲ್ಲದಿದ್ದಲ್ಲಿ ನಾನು ಇಲ್ಲಿಂದ ಹೊರಟು ಹೋಗಿಬಿಡುತ್ತೇನೆ.’ ಎಂದ. ಆಗ ಸೌದಾಮಿನಿ ಹೀಗೆ ಹೇಳಿದಳು;
‘ಇಲ್ಲ ಇಲ್ಲ ಯೋಜನೆ ನಾನು ಹೇಳಿದಂತೆ ಆಗಬೇಕು, ನಾನು ಯುದ್ಧ ಕ್ರಮ ಬಲ್ಲವಳು, ಹಾಗಾಗಿ, ಯಾರ ಮೇಲೆಯೂ ನಾನು ಸಂಪೂರ್ಣ ಭರವಸೆ ಇಡಲು ಬಯಸುವುದಿಲ್ಲ. ನಿಮಗೆ ಬೇಕಾದರೆ ಗುಪ್ತ ಚರ ದಳದವರೊಡನೆ ಚರ್ಚಿಸಲು ಅವಕಾಶ ಕೊಡುತ್ತೇನೆ ‘ ಎಂದಳು.
‘ಗೌರವಾನ್ವಿತ ರಾಜಕುಮಾರಿಯವರೇ, ನನಗೆ ಇದು ಒಪ್ಪಿಗೆ ಇಲ್ಲ. ನನಗೆ ಆಯ್ಕೆಯ ಸ್ವಾತಂತ್ರ್ಯವಿಲ್ಲವೆಂದರೆ, ನಾನು ಇಲ್ಲಿ ಇರಬಯಸುವುದಿಲ್ಲ. ನನಗೆ ಅಪ್ಪಣೆ ಕೊಟ್ಟು ಕೊಡಿ, ನಾನು ನನ್ನ ಊರಿಗೆ ಹೊರಟು ಹೋಗುತ್ತೇನೆ’ ಎಂದ.
ಹಾಗೆ, ಆತ ಹೇಳಿದಾಗ ಆಕೆ ಆಶ್ಚರ್ಯಗೊಂಡಳಲ್ಲದೇ, ವಿಚಲಿತ ಕೂಡ ಆದಳು. ಆಗ ಆಕೆ ಆತನನ್ನು ತಡೆದು ಹೀಗೆ ಹೇಳಿದಳು;
‘ಇದರ ಬಗ್ಗೆ ಭಿನ್ನ ಅಭಿಪ್ರಾಯ ಸಲ್ಲದು. ನನಗೆ ಸುತ್ತಲಿನ ವೈರಿಗಳ ಚಲನವಲನದ ಪರಿಚಯವಿದೆ. ಬಹುಷಃ ಅದು ನಿಮಗೆ ಇಲ್ಲ ಅಂತ ಅನ್ನಿಸುತ್ತೆ. ಹಾಗಾಗಿ, ನಾನು ಈ ನಿರ್ಧಾರಕ್ಕೆ ಬಂದೆ. ಏನೇ ಇರಲಿ, ನೀವು ನಮ್ಮಲ್ಲಿಂದ ಹೊರ ಹೋಗುವದು ನನಗೆ ಇಷ್ಟವಿಲ್ಲ. ಹಾಗಾಗಿ, ನೀವು ನಿಮ್ಮ ನಿರ್ಧಾರದ ಬಗ್ಗೆ ಆತುರ ಬೇಡ. ಹೇಗೆಯೇ ಆಗಲಿ ನಾನು ನಿಮ್ಮನ್ನು ಬಿಟ್ಟು ಕೊಡುವುದಿಲ್ಲ. ಮುಂದೊಂದು ದಿನ ನನಗೆ ನಿಮ್ಮ ಸಹಾಯ ಬೇಕಾಗಬಹುದು. ಹಾಗಾಗಿ, ನೀವು ನಮ್ಮ ಬಿಡಾರದಲ್ಲಿಯೇ ಅತಿಥಿಯಾಗಿ ಸಧ್ಯಕ್ಕೆ ಉಳಿದುಕೊಳ್ಳಿ.’ ಎಂದು ಆತನನ್ನು ಕಳಿಸಿ ಕೊಟ್ಟಳು.
ಆಮೇಲೆ ರಕ್ಷಿತ್ ನನ್ನು ಕರೆಯಿಸಿಕೊಂಡು ಆತನಿಗೂ ಹೀಗೆಯೇ ಹೇಳಿದಳು;
‘ಇದರ ಯೋಜನೆ ನಾನು ಹೇಳಿದಂತೆ ಆಗಬೇಕು ಮತ್ತು ಗುಪ್ತಚರ ದಳದವರೊಂದಿಗೆ ಚರ್ಚಿಸಬಹುದು’ ಎಂದಳು.
‘ಆಗ ಬಹುದು ರಾಜಕುಮಾರಿ. ನೀವು ಹೇಗೆ ಹೇಳ್ತೀರೋ ನಾನು ಹಾಗೆಯೇ ಮುನ್ನಡೆದು ಜಯಶೀಲನಾಗಿ ಬರುತ್ತೇನೆ ‘ ಎಂದನು.
‘ಸರಿ.. ನೀವು ನಿಮ್ಮ ಬಿಡಾರಕ್ಕೆ ಹೋಗಬಹುದು, ಆಮೇಲೆ ನಿಮಗೆ ಆ ಬಗ್ಗೆ ಸೂಚನೆ ನೀಡುತ್ತೇನೆ’ ಎಂದು ಆತನನ್ನೂ ಕಳಿಸಿಕೊಟ್ಟಳು. ಈಗ ಸೌದಾಮಿನಿ ಚಿಂತಿತಳಾದಳು. ಆ ಇಬ್ಬರೂ ಯುವಕರು ಅಭಿಪ್ರಾಯದಲ್ಲಿ ಭಿನ್ನರಾಗಿದ್ದಾರೆ, ಅವರಲ್ಲಿ ಯಾರ ಕ್ಷಮತೆ ನಮಗೆ ಅನುಕೂಲವಾಗುವುದು ಎಂದು ಯೋಚಿಸುತ್ತಾ ಮಗ್ನಳಾದಳು.
ಕೆಲವು ದಿನಗಳ ನಂತರ ರಕ್ಷಿತನನ್ನು ಕರೆಯಿಸಿಕೊಂಡು ತನ್ನ ಯೋಜನೆಯನ್ನು ತಿಳಿಸಿ, ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ಸೇನಾ ದಳದೊಂದಿಗೆ ವೈರಿಯನ್ನು ಎದುರಿಸಲು ಪ್ರೋತ್ಸಾಹಿಸಿ ಕಳಿಸಿದಳು. ಅದರಂತೆ, ರಕ್ಷಿತ್ ಹುಮ್ಮಸ್ಸಿನಿಂದ ಹೊರಟ. ಆತನ ಸೇನಾ ದಳ ಕಾಲು ಕಾರಿಯಲ್ಲೇ ಹೋಗಬೇಕಾಯಿತು. ಆತನ ಜೊತೆಗೆ ಕುದುರೆ ದಳದವರು ಐದು ಜನ ಮಾತ್ರ ಇದ್ದರು. ಆದರೆ, ದುರಾದೃಷ್ಠವಾತ್ ದಾರಿಯಲ್ಲಿ ಒಂದು ಕಾಡನ್ನು ಅವರು ದಾಟಿ ಹೋಗಬೇಕಾಗಿತ್ತು. ಆ ಕಾಡಿನಲ್ಲಿ ಸುಮಾರು ಎರಡು ಮೂರು ಗಂಟೆಯ ಪ್ರಯಾಣವಾದ ಮೇಲೆ ಕಾಲು ದಳದ ಕೆಲವು ಯೋಧರು ಒಮ್ಮೆಲೇ ರೋಗಗ್ರಸ್ತರಾದರು. ಆದರೇ, ಅವರಿಗೆ ಚಿಕೆತ್ಸೆ ಕೊಡಿಸಲು ಯಾವ ವೈದ್ಯರನ್ನು ಕರೆದೊಯ್ದಿರಲಿಲ್ಲ. ಹಾಗಾಗಿ, ಕಾಲು ದಳದಲ್ಲಿಯ ಏಳೆಂಟು ಯೋಧರನ್ನು ಅನಿವಾರ್ಯವಾಗಿ ಮರಳಿ ಕಳಿಸಬೇಕಾಯಿತು. ಆಮೇಲೆ ತಿಳಿದು ಬಂದಿದ್ದೇನೆಂದರೆ, ಆ ಯೋಧರು ಬರುವಾಗಲೇ ರೋಗಗ್ರಸ್ತರಾಗಿದ್ದು, ಸೇನಾಧಿಪತಿ ರಕ್ಷಿತ್ ಅವರು ಸಶಕ್ತರಾಗಿದ್ದಾರೋ ಇಲ್ಲವೋ ಎಂಬುದನ್ನು ಗಮನಿಸಿರಲಿಲ್ಲ. ಅನಿವಾರ್ಯವಾಗಿ ರಕ್ಷಿತನ ಸೇನೆ ಕಾಡಿನಲ್ಲಿಯೇ ಠಿಕಾಣಿ ಹೂಡಿತು. ಆಗ ಗುಪ್ತ ಚರ ದಳದಿಂದ ಸುದ್ದಿಯೊಂದು ಬಂತು, ವೈರಿ ಪಡೆಗಳು ಇವರು ಬರುವದನ್ನು ಮತ್ತು ಕಾಡಿನಲ್ಲಿ ಠಿಕಾಣಿ ಹೂಡಿದ್ದನ್ನು ತಿಳಿದುಕೊಂಡು, ಆಕ್ರಮಣ ಮಾಡುವ ತಯಾರಿಯಲ್ಲಿ ಇದ್ದಾರೆಂದು ಕೂಡಾ ತಿಳಿದು ಬಂತು. ವೈರಿ ಪಡೆಯನ್ನು ಎದುರಿಸಲು ಈಗ ಕಷ್ಟ ಸಾಧ್ಯ ಎಂದು ಅರಿತ ಸೇನಾ ನಾಯಕ ರಕ್ಷಿತ್ ಬೇರೊಂದು ದಿನದಂದು ಆಕ್ರಮಣ ಮಾಡಿದರಾಯಿತು ಎಂದು ತನ್ನ ಸೇನೆಯೊಂದಿಗೆ ಅನಿವಾರ್ಯವಾಗಿ ಮರಳಿಬಿಟ್ಟ !
ರಕ್ಷಿತ್ ಸೇನೆಯೊಂದಿಗೆ ಮರಳಿ ಬಂದದ್ದು ಸೌದಾಮಿನಿಗೆ ಹಿಡಿಸಲಿಲ್ಲ. ಅಲ್ಲದೇ, ಅದು ಒಂದು ಹಿನ್ನಡೆ ಎಂದು ಅಂದು ಕೊಂಡಳು. ಹಾಗಾಗಿ ಆಕೆ ಚಿಂತಿತಳಾದಳು. ಅದನ್ನು ಅರಮನೆಯ ಸಿಬ್ಬಂದಿಯಿಂದ ಅರಿತ ಶ್ರೀಕರ ಶರ್ಮ ರಾಜಕುಮಾರಿ ಸೌದಾಮಿನಿಯವರ ನೆರವಿಗೆ ಬಂದು ಹೀಗೆ ಹೇಳಿದನು;
‘ರಾಜಕುಮಾರಿ ದೇವಿಯವರೇ, ತಾವು ಚಿಂತಿತರಾಗಲು ಅವಶ್ಯವಿಲ್ಲ . ನಾನು ನಿಮಗೆ ಮೊದಲೇ ತಿಳಿಸಿದಂತೆ ನೀವು ನನ್ನ ಯೋಜನೆಯ ಪ್ರಕಾರ ಅನುಮತಿ ನೀಡಿದರೆ, ನಮಗೆ ಜಯ ಕಟ್ಟಿಟ್ಟದ್ದು. ಈಗಲಾದರೂ ಧನಾತ್ಮಕವಾಗಿ ಯೋಚಿಸಿ ನನಗೆ ಅನುಮತಿ ಕೊಡಿ. ನಾನು ಹೋಗಿಬರುತ್ತೇನೆ’ ಎಂದಾಗ;
‘ಸರಿ.. ನನಗೆ ಒಪ್ಪಿಗೆ ಇದೆ. ನಿಮ್ಮ ತಯಾರಿ ಮತ್ತು ಯೋಜನೆ ಮಾಡಿಕೊಳ್ಳಿ’ ಎಂದು ಆಕೆ ಅನುಮತಿ ಕೊಟ್ಟಳು.
ಆಗ ಶ್ರೀಕರ್ ಹೀಗೆ ಹೇಳಿದ ‘ ನಾನು ಈಗ ಸ್ವತಂತ್ರನು ಮತ್ತು ನನ್ನ ಯೋಜನೆಯನ್ನು ನಾನೇ ಮಾಡಿಕೊಳ್ಳುತ್ತೇನೆ. ನಾನು ಜಯಶೀಲನಾಗಿ ಬಂದ ಮೇಲೆ ನನ್ನ ಯೋಜನೆ ಮತ್ತು ಸಫಲತೆಯ ಬಗ್ಗೆ ತಮಗೆ ವರದಿ ನೀಡುತ್ತೇನೆ.’ ಎಂದು ಹೇಳಿ, ಸೇನಾ ದಳವನ್ನು ಅರಿಯಲು ಆ ಸ್ಥಳಕ್ಕೆ ಹೊರಟು ಹೋದ ಮತ್ತು ಅಲ್ಲಿಯ ನಾಯಕನನ್ನು ತನ್ನ ವಿಶ್ವಾಸಕ್ಕೆ ಪಡೆದುಕೊಂಡು, ಪಡೆಯ ಎಲ್ಲಾ ಸದಸ್ಯರನ್ನು ಭೇಟಿಯಾಗಿ ಅವಶ್ಯಕತೆಗನುಸಾರವಾಗಿ ತಯಾರಿ ಮಾಡಿಕೊಳ್ಳುವದಲ್ಲದೇ, ಅವರೆಲ್ಲರ ಆರೋಗ್ಯ ಮತ್ತು ಕ್ಷಮತೆ ಅರಿತ. ಅವರಿಗೆ ತನ್ನ ಸೂಚನೆಯಂತೆ ಸೇನಾ ತಯಾರಿ ಇರಬೇಕೆಂದು ತಿಳಿಸಿದ.
ಆತನ ಯೋಜನೆಯಂತೆ ವಿಷಮ ಸಮಯವನ್ನೇ ಆಯ್ಕೆ ಮಾಡಿಕೊಂಡು ಮಾರನೇ ದಿನ ರಾತ್ರಿಯೇ ಸೂಕ್ತ ಸಮಯವೆಂದು ಎರಡು ದಿಕ್ಕಿನಲ್ಲಿ ವೈರಿಗಳು ಇರುವ ಸ್ಥಳದಲ್ಲಿ ಹೋಗಿ, ಆಮೇಲೆ ಕೂಡಿಕೊಂಡು ಸೂರ್ಯೋದಯವಾಗುವುದಕ್ಕಿಂತ ಮುಂಚೆಯೇ ವೈರಿ ಸೇನೆಯ ಮೇಲೆ ಆಕ್ರಮಣ ಮಾಡಿದ. ಆಗ ವೈರಿ ಪಡೆ ಹಠಾತ್ ಆಕ್ರಮಣದಿಂದ ತಲ್ಲಣಗೊಂಡಾಗ, ಅವರಿಗೆ ಚೇತರಿಸಿಕೊಳ್ಳಲಾಗಲಿಲ್ಲ. ಅಲ್ಲದೇ, ವೈರಿ ಪಡೆಗೆ ತುಂಬಾ ನಷ್ಟವಾಯಿತು. ಅಷ್ಟಕ್ಕೇ ಶ್ರೀಕರ ಬಿಡಲಿಲ್ಲ, ಅಲ್ಲಿಯ ಸೇನಾ ನಾಯಕನನ್ನು ಬಂಧಿಸಿ ಕರೆತಂದು ಸೌದಾಮಿನಿ ದೇವಿಯ ಮುಂದೆ ನಿಲ್ಲಿಸಿದ. ಆಗ ಶ್ರೀಕರನ ಬಗ್ಗೆ ಹೆಮ್ಮೆ ಮೂಡಿ ಆತನನ್ನು, ಸೇನಾ ಮುಖ್ಯಸ್ಥನನ್ನಾಗಿ ಮಾಡಿಕೊಂಡಳು. ಶ್ರೀಕರನ ಬಗ್ಗೆ ತುಂಬಾ ಹೆಮ್ಮೆ ಪಟ್ಟಳು.
ಕೆಲವು ದಿನಗಳಲ್ಲಿ ರಾಜಾ ಮಹಾಬಲ ಶ್ರೇಷ್ಠರು ತೀರ್ಥ ಯಾತ್ರೆಯಿಂದ ಮರಳಿ ಬಂದು, ತಮ್ಮ ಪುತ್ರಿ ಮತ್ತು ಶ್ರೀಕರ ಇವರಿಬ್ಬರ ಅಘಾಧ ಗಾಥೆಯನ್ನು ಕೇಳಿ ಆನಂದಿತರಾದರು.
ಮುಂದೊಂದು ದಿನ ರಾಜಾ ಮಹಾಬಲ ಶ್ರೇಷ್ಠರು ತನ್ನ ಪುತ್ರಿಗೆ ಒಂದು ಸಲಹೆ ಕೊಟ್ಟರು. ಅದು ಏನೆಂದರೆ, ಶ್ರೀಕರನು ಆಕೆಗೆ ಯೋಗ್ಯ ಜೋಡಿ ಎಂದು. ಆಗ ಆ ಬಗ್ಗೆ ಆಕೆ ಯೋಚಿಸುವುದಾಗಿ ಹೇಳಿದಳು.
ಆದರೇ, ಕಂಕಣ ಬಲದ ಅಯಸ್ಕಾoತ ಅವರಿಬ್ಬರನ್ನು ಒಗ್ಗೂಡಿಸಿಯಾದ ಮೇಲೆ ಒಂದು ಶುಭ ಮಹೂರ್ತದಲ್ಲಿ ಅವರ ಮದುವೆ ಕೂಡ ಆಯಿತು. ಆಮೇಲೆ ಅವರಿಬ್ಬರೂ ಬಲಶಾಲಿಗಳಾಗಿದ್ದರಿಂದ, ನೆರೆ ಹೊರೆಯ ಯಾವುದೇ ರಾಜ್ಯಗಳು ಅವರ ತಂಟೆಗೆ ಬರಲಿಲ್ಲ.
ಬಿ.ಟಿ.ನಾಯಕ್,
ಚೆನ್ನಾಗಿದೆ.
Nice story
Your acceptance brought me joy. Thanq.
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಸರ್.
ಕಥೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ರಾಜಕುಮಾರಿಯ ಶೌರ್ಯ, ಸಾಹಸ ಕಥನ ಉತ್ತಮವಾಗಿದೆ.
ಧನ್ಯವಾದಗಳು ಜೋಷಿ ಸರ್.,
ಕಥೆಯ ನಿರೂಪಣೆ ಇಷ್ಟವಾಯ್ತು. ರಾಜರ ಕಥೆ ಓದದೇ ತುಂಬಾ ದಿನವಾಗಿತ್ತು.
ತಮಗೆ ಧನ್ಯವಾದಗಳು.
Made a good reading.
Thanks for your support & encouragement. : BTN.
ಕಥೆ ಚೆನ್ನಾಗಿದೆ
ಧನ್ಯವಾದಗಳು.
ಸುಮಾರು ಐವತ್ತು ವರ್ಷಗಳ ಹಿಂದೆ ಈ ತರಹದ ಕತೆಗಳನ್ನು ” ಚಂದಮಾಮ” ಮಾಸಿಕ ಪತ್ರಿಕೆಯಲ್ಲಿ ಓದುತ್ತಿದ್ದೆ . ಬಹಳ ವರ್ಷಗಳ ನಂತರ ಒಳ್ಳೆಯ ರಾಜರ ಕತೆ ಓದಲು ಅವಕಾಶ ಮಾಡಿದ್ದೀರಿ.
ಅಭಿನಂದನೆಗಳು ಕಥಾಯಾನ ಮುಂದುವರಿಸಿ
– ಎಸ್ ಆರ್ ಸೊಂಡೂರು ಗಂಗಾವತಿ
ನಿಮ್ಮ ಅನಿಸಿಕೆ ಸ್ಪೂರ್ತಿದಾಯಕ. ಧನ್ಯವಾದಗಳು ಸೊಂಡೂರ್.
ನಮಸ್ತೇ ಸರ್! ವಿಶಿಷ್ಟವಾದ ರೋಚಕ ಕಥಾಹಂದರ ಚೆನ್ನಾಗಿ ಮೂಡಿಬಂದಿದೆ! ಅಭಿನಂದನೆಗಳು!
ನಿಮ್ಮ ಅನಿಸಿಕೆಯು ನನಗೆ ಸ್ಪೂರ್ತಿ ತಂದಿದೆ. ಧನ್ಯವಾದಗಳು.
ನಮಸ್ತೇ ಸರ್! ವಿಶಿಷ್ಟವಾದ ರೋಚಕ ಕಥಾಹಂದರ ಚೆನ್ನಾಗಿ ಮೂಡಿಬಂದಿದೆ! ಅಭಿನಂದನೆಗಳು!
ಕವಿತಾ ಬಿ ಅರವಿಂದ
ನಿಮಗೆ ಕಥೆ ಇಷ್ಟವಾದದ್ದನ್ನು ಕಂಡು ಸಂತೋಷವಾಯಿತು. ಧನ್ಯವಾದಗಳು.
ಕಥೆ ಚನ್ನಾಗಿದೆ. ವಿಷಯ ಸರಳವಾಗಿದ್ದರೂ ಹೇಳಿದ ದಾಟಿ ಸೊಗಸಾಗಿದೆ. ಅಭಿನಂದನೆಗಳು ನಾಯಕರೇ
ನಿಮ್ಮ ಅನಿಸಿಕೆ ನನಗೆ ಸ್ಪೂರ್ತಿ ತಂದಿದೆ. ಧನ್ಯವಾದಗಳು.
ಕಥೆ ಚೆನ್ನಾಗಿದೆ. ಅರ್ಥಪೂರ್ಣವಾಗಿದೆ. ಕೊನೆಯವರೆಗೂ ಆಸಕ್ತಿಯಿಂದ ಓದುವಂತೆ ಮಾಡುತ್ತದೆ. ಬಹಳ ಸೊಗಸಾಗಿದೆ.
ನನಗೆ ಸ್ಪೂರ್ತಿ ತಂದ ನಿಮಗೆ ಧನ್ಯವಾದಗಳು.
ಕಥೆ ತುಂಬಾ ಚೆನ್ನಾಗಿದೆ
ಶ್ರೀಯುತ ನರಸಿಂಹಮೂರ್ತಿಯವರಿಗೆ, ತಮ್ಮ ಅನಿಸಿಕೆಗಳ ಬಗ್ಗೆ ತುಂಬಾ ಸಂತೋಷವಾಯಿತು. ನಿಮಗೆ ಧನ್ಯವಾದಗಳು.
ಕತೆಯ ನಿರೂಪಣೆ ಚೆನ್ನಾಗಿದೆ. ರಾಜಕುಮಾರಿಯ ಶ್ರೌರ್ಯ, ಹಾಗೂ ಜಾಣ್ಮೆ ಮೆಚ್ಚುಗೆಯಾಯಿತು.
ಪ್ರಕಾಶ್ ರವರೇ ನಿಮ್ಮ ಅನಿಸಿಕೆಗೆ ನನಗೆ ತುಂಬಾ ಸಂತೋಷವಾಯಿತು. ಧನ್ಯವಾದಗಳು.