ಪ್ರಮೀಳಾ ರಾಜ್ ಕವಿತೆ-ಒಲವಿನ ಹಣತೆ

ಕಾವ್ಯ ಸಂಗಾ಼ತಿ

ಪ್ರಮೀಳಾ ರಾಜ್

ಒಲವಿನ ಹಣತೆ

ನಾ ಹಚ್ಚಿಟ್ಟ ಸ್ನೇಹದ ಹಣತೆಯ ಬೆಳಕಿಗೆ
ನಿನ್ನ ಮೊಗದಲ್ಲಿ ಮಿನುಗುವ
ಖುಷಿಯ ಕಾಂತಿಯನ್ನು ನೋಡುತ್ತಾ
ಮೈ ಮರೆತು ಬಿಡುತ್ತೇನೆ…
ಹಣತೆಯ ಬೆಳಕಿಗಿಂತಲೂ
ನಿನ್ನ ಕಣ್ಣ ಹೊಂಬೆಳಕಿಗೆ
ಪದೇ ಪದೇ ಸೋತು ಹೋಗುತ್ತೇನೆ!!

ಅದೆಂತಹ ದಿವ್ಯ ಚೆಲುವು ನಿನ್ನದು!
ದುಂಡು ಮೊಗದ ನೀಳ ನಾಸಿಕದ
ಚೆಲುವಿನ ಮೊಗದಿ,
ಕಾಮನ ಬಿಲ್ಲಿನ ಹುಬ್ಬಿಗೆ ಲೇಪಿಸಿದ ಕಾಡಿಗೆ
ಅದೇನೋ ಮೋಡಿ ಮಾಡುತ್ತದೆ…
ಅರೆಗಳಿಗೆ ಕಣ್ ಮೀಟುಕಿಸದಂತೆ ಮಾಡುವ
ನಿನ್ನ ಚೆಲುವ ಸವಿಯುವುದರಲ್ಲೇ
ನಾ ಮೌನ ಧ್ಯಾನಿ!!

ಊರೆಲ್ಲ ಬೆಳಕು ಬೀರಿದೆ
ಹಣತೆ ಸಾಲು….
ನಿನ್ನ ಒಲವ ಬೆಳಕಿಗೆ
ನನ್ನೆದೆಯ ತುಂಬಾ
ಖುಷಿಯ ರಶ್ಮಿಗಳು ಪಸರಿಸಿ
ಬದುಕು ಬೆಳಗಿದಂತೆ ಅನುಭಾವ ನನಗೆ…!!

ಪ್ರೀತಿ ವಿಶ್ವಾಸದ ಕಿರಣಗಳು ಎಂದಿಗೂ
ಆರಿ ಹೋಗದಿರಲಿ ಎಂಬ
ಉತ್ಕಟ ಬಯಕೆಯಿಂದ
ಮತ್ತೆ ಮತ್ತೆ ಪ್ರೀತಿಯ ತೈಲವನು ಎರೆಯುತ್ತೇನೆ…
ನಿನ್ನ ಒಲವ ಸಾಂಗತ್ಯದಲ್ಲೇ
ತನ್ಮಯಳಾಗುತ್ತೇನೆ!!


ಪ್ರಮೀಳಾ ರಾಜ್

Leave a Reply

Back To Top