ಸಾಕ್ಷಾತ್ಕಾರ-ಡಾ.ಶ್ರೀಲಕ್ಷ್ಮಿ ಶ್ರೀನಿವಾಸನ್

ಕಾವ್ಯ ಸಂಗಾತಿ

ದಿ|| ಶ್ರೀ. ಕೆ.ವಿ.ತಿರುಮಲೇಶ ಸ್ಮರಣಾರ್ಥ ನಡೆದ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ
ಡಾ. ಶ್ರೀಮತಿ. ಶ್ರೀಲಕ್ಷ್ಮಿ ಶ್ರೀನಿವಾಸನ್, ನೇತ್ರ ತಜ್ಞೆ, ಬೆಂಗಳೂರು ಅವರ ಕವನದ ಭಾವವನ್ನು ವಿವರಿಸಲು ಪ್ರಯತ್ನಿಸಿದ್ದೇನೆ.

ರಾಧಿಕಾ ವಿ ಗುಜ್ಜರ್

ಸಾಕ್ಷಾತ್ಕಾರ

ಡಾ.ಶ್ರೀಲಕ್ಷ್ಮಿ ಶ್ರೀನಿವಾಸನ್

ಸುಧೀರ್ಘ ಸುಷುಪ್ತಿ.
ಒಳಗೊಳಗೆ ಅಸ್ಪಷ್ಟ ಸ್ವಪ್ನಗಳ ಗಿರಕಿ.
ಎವೆಯಿಕ್ಕಿದರೂ ತೆರೆದರೂ ಗಾಢಾಂಧಕಾರ.
ಎದ್ದರೂ ಹೊರಳಿದರೂ ಗಡಿಯದ್ದೇ ಪ್ರಹಾರ.
ಸ್ವರಕ್ಷೆಗೆಂದು ನಾನೇ ನೇದ ಗೂಡು.
ನನ್ನುಸಿರನ್ನೇ ಬಿಗಿಯುತ್ತಿದೆ ನೋಡು.

ಬೇರೇನೋ ಬೇಕೆನಗೆ ಗಡಿಯಾಚೆಗಿನದ್ದು.
ಬೆಚ್ಚಗಿನ ರಕ್ಷಣೆಗೂ ಮಿಗಿಲಾದದ್ದು.
ಹಿಂದೆಂದೂ ಕಂಡು ಕೇಳಿರದ
ಅನನ್ಯ ವಿಸ್ಮಯಗಳ ಅರಿಯುವ ತವಕ,
ಕೈಬಿಡಲಾರೆ, ವಿರಮಿಸಲಾರೆ
ನನ್ನದೇ ಗೋಡೆಗಳ ಮಧ್ಯೆ ಹಾದಿಯ ಹುಡುಕುವ ತನಕ.
ಗುರಿಯರಿಯದೆಯೂ, ಕೊನೆಯರಿಯದೆಯೂ
ನಿರಂತರ ಯತ್ನ, ನಿರಂತರ ಯತ್ನ.

ಇಗೋ ಇಲ್ಲೇನೋ ಕಂಡಿತು –
ಕಣ್ಣುಕುಕ್ಕುವ ಪ್ರಕಾಶ!
ಅರಿವಿಗೆಟುಕದ ವಾಗ್ದಾನದ ಪ್ರತೀಕ.
ಕಂಡೆ, ಕಂಡೆ ನೀಲಾಕಾಶವ!
ತಮೋಹಾರಿ ಜ್ಯೋತಿಯ ಮೂಲವ!
ಅಸಂಖ್ಯ ವರ್ಣ, ಗುಣ, ಸತ್ವಗಳ ತತ್ವವ!

ಅರೆರೆ, ಇದೇನು? ನಾನೇನಾದೆನು?
ಹೇಗಿದ್ದೆನು? ಹೀಗೆಂದಾದೆನು!?

ನನ್ನ ಮೂಲತತ್ವವೇನು?
ತಮಸ್ಸೇ? ಮುಕ್ತ ಚೈತನ್ಯವೇ??

ನಿರಂತರ ಯತ್ನ. ನಿರಂತರ ಯತ್ನ.

ಶ್ರೀಲಕ್ಷ್ಮಿ ಶ್ರೀನಿವಾಸನ್

*******

ಕವನದ ಭಾವವನ್ನು ವಿವರಿಸಲು ರಾಧಿಕಾ ವಿ ಗುಜ್ಜರ್ ಪ್ರಯತ್ನ.

ಸಾಕ್ಷಾತ್ಕಾರ ಇಲ್ಲಿ ಸತ್ಯದರ್ಶನ.
ಯಾವ ಸತ್ಯದ ದರ್ಶನ?

ಅದನ್ನು ಕವನ ಓದುತ್ತಾ ನಾವೇ ಮನಗಾಣಬೇಕಿದೆ. ಇದೇನು ಮೊದಲೇ ಶೀರ್ಷಿಕೆಯ ಅರ್ಥ ಹೇಳಿ ಬಿಟ್ಟೆನಲ್ಲ ಎಂದು ಮುಖದಲ್ಲಿ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿಕೊಳ್ಳುವುದು ಬೇಡ. ಕವನದಲ್ಲಿ ಸಾಲಿನಿಂದ ಸಾಲಿಗೆ ಹೊರಹೊಮ್ಮುವ ಅರ್ಥದತ್ತ, ಚಿಂತನೆಯತ್ತ, ವಿಷಯ ಮಂಡನೆಯತ್ತ ಹೊರಳುವೆನೀಗ.

ಸುಧೀರ್ಘ ಸುಷುಪ್ತಿ. ಸ್ವರಕ್ಷೆಗೆಂದು ತನ್ನ ಮೇಲೆ ತಾನೇ ಎಳೆದುಕೊಂಡ ಸುಷುಪ್ತಿ. ತನ್ನ ಸಾಮರ್ಥ್ಯದ ಕುಗ್ಗಿಸುವಿಕೆಯಿಂದಾಗಿ ಈಗ ಹೊರಳಲಾಗದ ಅಸಹಾಯಕತನ. ಉಸಿರು ಕಟ್ಟಿಸುವ ಗಡಿ. ಅಂಧಕಾರವೆಂದ ಮೇಲೆ ಸೀಮೆಯೆಲ್ಲಿ ಕಾಣುತ್ತದೆ. ನಮ್ಮ ನಂತರದ ನಮ್ಮ ದೃಷ್ಟಿ, ನಮ್ಮ ಚಲನೆ, ನಮ್ಮ ಗಮ್ಯ, ಎಲ್ಲವೂ ಮಿತಿಗೆ ಒಳಪಟ್ಟು ಬಿಡುತ್ತದೆ. ನಾನಿದ್ದೇನೆ ಎಂಬುದರ ಹೊರತು ಅಥವಾ ನನ್ನ ಹೊರತು ಏನೂ ಇಲ್ಲ. ಅಲ್ಲಿ ನಾನಿದ್ದೇನೆ ಎಂಬ ಭಾವವಿರುತ್ತದೆ ಅಷ್ಟೇ. ಎವೆಯಿಕ್ಕಿದರೂ ತನ್ನನ್ನು ತಾನು ಕಾಣಲಾಗದು. ಕತ್ತಲು… ಕಾಣಲಾಗದು…

ಮಾನವನಾಗಿ ಇದು ಯಾರಿಗಾದರೂ ಸ್ವಭಾವ ವಿರುದ್ಧ ಸ್ಥಿತಿ. ಕುತೂಹಲ, ಮಾನವ ಸಹಜ ಗುಣ. ಸ್ವರಕ್ಷೆ, ಬೆಚ್ಚನೆಯ ಭಾವ ಇವೆಲ್ಲ ಬಹಳ ಮುಖ್ಯ. ಆದರೆ ಅದು ಕುತೂಹಲವನ್ನು, ಅರಸುವಿಕೆಯನ್ನು, ಮಾನವನ ಮೂಲ ಗುಣವಾದ ನಿರಂತರತೆಯನ್ನು ಕುಗ್ಗಿಸಬಾರದು. ಕಟ್ಟಿ ಹಾಕಬಾರದು. ಉಸಿರುಗಟ್ಟಿಸಬಾರದು. ತೀರಾ ಕೂಪದಂತಹ ಗಡಿಯನ್ನು, ರಕ್ಷಣಾ ವಲಯವನ್ನು, ಕತ್ತಲನ್ನು ಮೀರಿ ಬೆದಕಲು ಇದು ಇಂಬು ನೀಡುತ್ತದೆ. ಬಿಗಿದ ಮುಷ್ಟಿಯ ಮರಳಿನಂತೆ ತವಕವು ಜಾರಿಕೊಳ್ಳಲು ಪ್ರಯತ್ನಿಸುತ್ತದೆ. ಆಗಲೇ, ಬೇಲಿಯಲ್ಲಿ ಬಂಧಿಯಾದ ಜೀವ ಬಾಗಿಲನ್ನು ಹುಡುಕುವುದು. ಬೆಳಕಿನ ಅಚ್ಚರಿಯನ್ನು ಅರಸಿ ಇಣುಕುವುದು. ಗಡಿಯಾಚೆ ಕಾಣುವ ಬೃಹತ್ ಪ್ರಪಂಚಕ್ಕೆ ವಿಸ್ತಾರವಿದೆ ಅದು ಸ್ಪಷ್ಟ. ಅದು ವಾಸ್ತವ ಲೋಕ.
ಅಲ್ಲಿಯ ವೈಶಾಲ್ಯಕ್ಕೆ ಅಡಿ ಇಟ್ಟರೆ?
ಆಗಲೇ ಶುರುವಾಗುವುದು ಯತ್ನ.
ಮನುಷ್ಯ ಸಹಜ ಪ್ರಯತ್ನ.
ನಿರಂತರ ಯತ್ನ.

ಆಗ ಕಾಣುತ್ತದೆ ಅಗಾಧ ಹರವು. ನಮ್ಮ ಬುದ್ಧಿಗೆ ದಕ್ಕದ, ಕಣ್ಣು ಕುಕ್ಕುವ ಪ್ರಕಾಶ. ಎಲ್ಲವೂ ಸಿಗುವ ಭರವಸೆ ಇದೆ, ವಾಗ್ದಾನವಿದೆ, ಆದರೆ ಇನ್ನೂ ಅರಿವಿಗೆ, ಜ್ಞಾನಕ್ಕೆ ಎಟುಕದು. ಪ್ರಕಾಶದಲ್ಲಿ ಗೋಚರಿಸುವ, ಬೆಳಕು ನಮಗೆ ದರ್ಶಿಸುವ ಎಲ್ಲವೂ ವಾಗ್ದಾನವೇ. ಅದು ಮತ್ತೆಂದೂ ನಮ್ಮನ್ನು ಕುಗ್ಗಿಸದು. ಕತ್ತಲಿಗೆ ಅಥವಾ ತಮಕ್ಕೆ ನೂಕದು. ನಮಗಿದ್ದದ್ದು ಜ್ಯೋತಿಯ ಗೈರಿನ ಸ್ಥಿತಿ. ಒಮ್ಮೆ ಜ್ಯೋತಿಯ ಮೂಲ ಕಂಡರೆ, ಅದರಲ್ಲಿ ಕಾಣುವ ಎಲ್ಲದರ ವರ್ಣ, ಗುಣ, ಸತ್ವ, ತತ್ವಗಳು ಗೋಚರ.

ನಾನು ಎಂಬ ಭಾವದ ಹೊರತು ಮತ್ತೇನು ಗೊತ್ತಿಲ್ಲದ ಭೌತಿಕ ಜ್ಞಾನಕ್ಕೆ, ಈಗ ತನ್ನ ಭೌತಿಕ ಇರುವಿಕೆಯ ಹೊರತಾಗಿಯೂ ಅನೇಕ ದರ್ಶನಗಳಿವೆ.

ಇಲ್ಲಿ ನಮ್ಮ ಅರಿವು ಜಿಜ್ಞಾಸೆಗೆ ಬೀಳುತ್ತದೆ.
ಕೇವಲ ನಾನೆಂಬ ಭೌತಿಕ ಇರುವಿಕೆ ಮಾತ್ರ ನಾನೇ?

ಅಥವಾ ಸುತ್ತಲಿನ ದರ್ಶನಗಳು ನನ್ನನ್ನು ಚಿಂತನೆಗೆ, ಪ್ರಯತ್ನಕ್ಕೆ, ಸಾಧನೆಗೆ, ಕಲಿಯುವಿಕೆಗೆ, ಪ್ರಯೋಗ ಶೀಲತೆಗೆ ಎಳಸುತ್ತಿವೆಯೇ?

ಮೂಲತತ್ವವೇನು?

ಭೌತಿಕವಾದ ಕೇವಲ ನಾನು ಸಾಕಾಗದು. ಅದು ಒಂದು ನಿರ್ದಿಷ್ಟ ಪರಿಧಿ. ಬೌದ್ಧಿಕವಾದ ನಾನು ಏನು?
ನನ್ನ ಶಕ್ತಿ ಎಷ್ಟು? ನಾನು ಮತ್ತು ನನ್ನ ಆಕರಗಳ ಹುಡುಕಾಟವೇ, ಮೂಲತತ್ವದ ಅರಸುವಿಕೆ. ಅದು ನಮ್ಮ ಗುರಿಯಾಗುತ್ತದೆ. ಕೊನೆಯರಿಯದ ಯತ್ನವಾಗುತ್ತದೆ. ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ, ವೈದ್ಯಕೀಯ, ಗಣಿತ, ಕೃಷಿ, ವಿಜ್ಞಾನ, ಸನ್ಯಾಸ…. ಮತ್ತೆ..ಎಲ್ಲವೂ. ಯಾವ ಆರಂಭವಾದರೂ ಸರಿಯೇ, ಯಾವ ದಾರಿಯಾದರೂ ಸರಿಯೇ, ಯಾವ ಕ್ಷೇತ್ರವಾದರೂ ಸರಿಯೇ, ಯಾವ ಗತಿಯ ಅಳವಡಿಸಿಕೊಂಡರು ಸರಿಯೇ ನಿರಂತರ ಯತ್ನವೇ ಸಾಕ್ಷಾತ್ಕಾರ.
ನಿಲ್ಲದ ಅಭಿಗಮನವೇ ಸಾಕ್ಷಾತ್ಕಾರ.

ಇಲ್ಲಿ ಬಹಳ ದೊಡ್ಡ ಸತ್ಯದ ಒಂದು ದರ್ಶನಕ್ಕಾಗಿ ಈ ವಿವರಗಳನ್ನು ಅಳವಡಿಸಿಕೊಳ್ಳಬೇಕಿಲ್ಲ.
ತವರಿನಿಂದ ಹೊರಟ ವಧು
ಹಡೆಯಲು ನೋವು ತಿನ್ನುತ್ತಿರುವ ತಾಯಿ
ಬೆಳೆಗಾಗಿ ತಪಸ್ಸಿನಲ್ಲಿರುವ ಕೃಷಿಕ
ಮೂರ್ಛೆಯಾಗಿರುವ ರೋಗಿ

ಹಾಗೂ
ಆತನ ಶಸ್ತ್ರಕ್ರಿಯೆಯಲ್ಲಿ ನಿರತ ವೈದ್ಯ
ಸಂಗಾತಿಯ ಮರಣ
ಕಳೆದ ಮಗುವಿಗಾಗಿ ಹುಡುಕಾಟ

ಎಲ್ಲವೂ ಆಗಬಹುದು. ಎಲ್ಲದರಲ್ಲೂ ಕಂಡುಕೊಳ್ಳಬಹುದು.

ಇಲ್ಲಿ ಸಾಕ್ಷಾತ್ಕಾರವೆಂಬದು ಏನೋ ಹಿರಿದಾಗಿರುವುದು, ಕ್ಲಿಷ್ಟತೆಯಿಂದ ಕೂಡಿದ್ದು, ದಕ್ಕಿಸಿಕೊಳ್ಳಲು ಸಾಹಸದ್ದು ಇರಬೇಕೆಂದಿಲ್ಲ. ಆ ಕ್ಷಣಗಳಿಗೆ, ಆ ಸಮಯಕ್ಕೆ, ಆ ಘಟನೆಗೆ ಚಡಪಡಿಸುವ ನಮ್ಮ ಭಾವ, ನಮ್ಮನ್ನು ಆವರಿಸುವ ಬೌದ್ಧಿಕ ತಮ ಮತ್ತು ನಂತರದ ನಡೆಯಿಂದ ಸಿಕ್ಕ ಪರಿಹಾರ, ಹೊರಬರುವುವಿಕೆಯೂ ಆಗುತ್ತದೆ.
ಬೆಳಕು ಕಾಣುವಿಕೆಯ ನಂತರ ಮುಕ್ತಿ ಪಡೆದಂತೆ, ಮುಕ್ತರಾದಂತೆ ಮತ್ತೆ ಮುಂದಿನ ತಿರುವಿಗೆ ನಡೆವುದೇ ಸಾಕ್ಷಾತ್ಕಾರ.


ರಾಧಿಕಾ ವಿ ಗುಜ್ಜರ್

6 thoughts on “ಸಾಕ್ಷಾತ್ಕಾರ-ಡಾ.ಶ್ರೀಲಕ್ಷ್ಮಿ ಶ್ರೀನಿವಾಸನ್

  1. ಕವನ ಮತ್ತು ಕವನದ ಭಾವಾರ್ಥ – ಎರಡೂ ಚೆನ್ನಾಗಿದೆ. ಹಾರ್ದಿಕ ಅಭಿನಂದನೆಗಳು.

Leave a Reply

Back To Top