ಭಾರತಿ ಅಶೋಕ್ ಲೇಖನ,,ಕೊರೋನಾ-ಆನ್ ಲೈನ್ ಕ್ಲಾಸಸ್, ಪೋಷಕರು

ವಿಶೇಷ ಲೇಖನ

ಭಾರತಿ ಅಶೋಕ್

ಕೊರೋನಾ-ಆನ್ ಲೈನ್

ಕ್ಲಾಸಸ್, ಪೋಷಕರು

ಹಿಂದೆಂದೂ ಕಂಡರಿಯದ Covid-19 Corona ಎಂಬ ವೈರಸ್ ಇಂದು ನಮಗೆಲ್ಲರಿಗೂ ಸಂಕಷ್ಟಗಳನ್ನು ತಂದೊಡ್ಡಿ ನೆಮ್ಮದಿಯ ಬದುಕಿನ ದಾರಿ ತಪ್ಪಿಸುತ್ತಿದೆ. ಇರುವುದರಲ್ಲೇ ಸಹಜವಾಗಿ ಸಾಗುತ್ತಿದ್ದ ನಮ್ಮ ಬದುಕು ಛಿದ್ರಗೊಳ್ಳತ್ತಿದೆ. ಬಹು ಪರಿಶ್ರಮದಿಂದ ಕಟ್ಟಿದ ಜೇನುಗೂಡಿಗೆ ಕಲ್ಲು ಎಸೆದು ಗೂಡನ್ನು ನಿರ್ನಾಮಗೊಳಿಸುವಂತೆ ನಮ್ಮ ನೆಮ್ಮದಿಯ ಬದುಕಿನ ಅಂಗಳಕ್ಕೆ ಕೊರೋನಾ ಎಂಬ ಭೂತ ಬಂದು ಕೂತಿದೆ. ನಮ್ಮ ಬದುಕಿನ ಪ್ರತಿ ಕ್ಷಣವೂ ಕೊರೋನಾದ ಆಣತಿಯಂತೆ ಸಾಗಬೇಕಾಗಿದೆ. ಪ್ರತಿ ಹೆಜ್ಜೆಯನ್ನು ಬಹು ಪ್ರಯಾಸದಿಂದ ಇಡುವಂತಹ ಸಂದರ್ಭ ನಮಗೆದುರಾಗಿದೆ. ಎಂದೂ ಬದಲಾಗದ ದಿನಚರಿ ಕೊರೋನಾದಿಂದ ಅಲ್ಲೋಲಕಲ್ಲೋಲವಾಗಿದೆ. ಇದೆಲ್ಲವೂ ಮಹಾ ಹೆಮ್ಮಾರಿ ಕೊರೋನಾ ಮಾಡುತ್ತಿರುವ ಕರಾಮತ್ತು.

        ಇದನ್ನೆಲ್ಲಾ ಹೆಗೋ ಸೈರಿಸಬಹುದು. ಬದುಕಿಗೆ ಲಗ್ಗೆ ಇಟ್ಟು ಎಲ್ಲವನ್ನೂ ಸರ್ವನಾಶ ಮಾಡುತ್ತಿಹ ಕೊರೋನಾದ ಅಹಂಕಾರಕ್ಕೆ ಕೊನೆ ಎಂದು? ಕಾಲ್ತೆಗೆದು ಬಾಗಿಲಾಚೆ ಹೊರಗಡೆಗೆ ಕಾಲಿಡುವಂತಿಲ್ಲವೆಂದರೆ ಹೇಗೆ? ಮನೆಯಾಚೆಗೆ ಹೋಗದಿದ್ದರೆ ನಮ್ಮ ಜೀವನ ನಡೆಯುವಂತಿಲ್ಲ. ಹೊಟ್ಟೆಗೂ ಬಟ್ಟೆಗೂ ಸಂಸಾರಕ್ಕೂ ಹೇಗಾದರೂ ಒಂದು ಕಾಯಕ ಮಾಡಿ ಹೊಂದಿಸಿಕೊಳ್ಳಲೇಬೇಕು. ನಾವು ಬದುಕಿಗಾಗಿ, ಬದುಕುವ ಸಲುವಾಗಿ ಮುನ್ನುಗ್ಗಬೇಕಿದೆ.


        ಸಾಮಾನ್ಯ ವ್ಯಕ್ತಿಯ ಬದುಕು ನಿಂತಿರುವುದು ಅವನ ಪ್ರತಿ ದಿನದ ದುಡಿಮೆಯ ಮೇಲೆ. ಹೀಗಿರುವಾಗ ಹೊರಗೆ ಹೋಗದೆ ಸಂಪಾದಿಸುವುದಾದರೂ ಹೇಗೆ? ಅಂದಿನ ಅಂಬಲಿ ಅಂದಂದಿನ ದುಡಿಮೆಯೆಯನ್ನೇ ಅವಲಂಬಿಸಿರುವಾಗ ಅವನ ಬದುಕು ದುಡಿಮೆಯಿಲ್ಲದ ಹೊರತು ಸಹಜವಾಗಿ ನಡೆಯುವುದಾದರೂ ಹೇಗೆ? ಹೀಗಿದ್ದರೂ ಎಲ್ಲವೂ ಎಂದಿನಂತಲ್ಲದಿದ್ದರೂ ಲಯತಪ್ಪದಂತೆ ನಡೆಯಲೇಬೇಕಿದೆ. ಮಕ್ಕಳ ಬದುಕನ್ನು ಸುಂದರವಾಗಿ ಕಟ್ಟಿಕೊಡಬೇಕೆಂಬ ಪೋಷಕರ ಕಣ್ಣುಗಳ ಕನಸುಗಳಿಗೆ ಮಸುಕುಗವಿಯುತ್ತಿದೆ. ಮಕ್ಕಳ ಬದುಕನ್ನು ಹಸನಾಗಿಸಬೇಕೆನ್ನುವ ಕನಸು ಹೊತ್ತ ಕಣ್ಣುಗಳವು. ಹೊಟ್ಟೆ ಬಟ್ಟೆ ಕಟ್ಟಿಯಾದರೂ ಶಿಕ್ಷಣ ಕೊಡಿಸಬೇಕು ಎನ್ನುವ ಹಂಬಲದಿಂದ ದುಡಿಯುವ ಹಿರಿಜೀವಗಳು, ತಮ್ಮ ಮಕ್ಕಳನ್ನು ಅಕ್ಷರಕ್ಕೆ ತೆರೆದುಕೊಳ್ಳುವಂತೆ ಮಾಡಿ ಈಗಾಗಲೇ ಭವಿಷ್ಯದ ಕನಸು ಕಟ್ಟಿಕೊಟ್ಟಿದ್ದಾರೆ. ಎಳೆ ಚಿಗುರು ಕಣ್ಣುಗಳ ಕನಸುಗಳು ಕಮರಿಸುವಂತೆ ಈಗ ಕೊರೋನಾ ಕಾಡುತ್ತಿದೆ. ಪೋಷಕರು ತಮ್ಮ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿಯೇ ಶಕ್ಷಣ ಸಿಗಬೇಕೆಂಬ ಮಹದಾಸೆಯಿಂದ ಖಾಸಗಿ ಶಾಲೆಗಳಿಗೆ ಹಾಕಿ, ದುಡಿಯುವ ಪುಡಿ ದುಡ್ಡುಕಾಸಿನಿಂದ ಇಲ್ಲಿಯವರೆಗೂ ಹೇಗೋ ಶುಲ್ಕ ಭರಿಸುತ್ತಿದ್ದರು. ಈಗ ಆ ದುಡಿಮೆಗೂ ಕಲ್ಲು ಬಿದ್ದಿದೆ.

       ದುಡಿಯುವ ಕಾಲದಲ್ಲಿ ಪೋಷಕರು ಮತ್ತು ಮಕ್ಕಳ ಮುಂದೆ ಭವಿಷ್ಯದ ಕನಸು ಕಟ್ಟಿಕೊಂಡು,ಅರೆ ಹೊಟ್ಟೆ ತುಂಬಿಕೊಂಡಾದರೂ ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತಮ್ಮ ದುಡಿಮೆಯನ್ನು ಹಾಕುತ್ತಿದ್ದರು. ಇಂದಿನ ವಿಷಮಕಾಲದ ಪರಿಸ್ಥಿತಿಯೇ ಬೇರೆಯಾಗಿದೆ. ಕೊರೋನಾ ಹರಡದಂತೆ ತಡೆಯುವ ಸಲುವಾಗಿ ವಿಧಿಸಲಾಗಿರುವ ಲಾಕ್ ಡೌನ್ ನಿಂದಾಗಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆನ್ನುವ ಉದ್ದೇಶದಿಂದಾಗಿ, ದುಡಿಯವ ಪೋಷಕರು ಮನೆಯಲ್ಲಿಯೇ ಉಳಿದುಕೊಳ್ಳಬೇಕಾಗಿದೆ. ಕೂಡಿಟ್ಟದ್ದು ಎಷ್ಟು ದಿನ ತಿನ್ನಲಾದೀತು? ಅಂದಿನ ಅನ್ನವನ್ನು ಅಂದೇ ದುಡಿದು ತಿನ್ನುತ್ತಿದ್ದ ನಿರ್ಗತಿಕರ ಪಾಡೇನು? ಆತಂಕಗಳ ಕಗ್ಗತ್ತಲ ಕಾರ್ಮೋಡವೇ ಸುತ್ತಲೂ ಕವಿದಿರುವಾಗ ಅಂಗಾತ ಮಲಗಿ ಭರವಸೆಯ ಬೆಳ್ಳಿ ಕಿರಣಕ್ಕಾಗಿ ಪೋಷಕರು ಚಾತಕ ಪಕ್ಷಿಯಂತೆ ಕಾಯ್ದು ಕುಳಿತುಕೊಂಡಿದ್ದಾರೆ.

          ಇಂತಹ ದುರಿತದ ಕಾಲದಲ್ಲಿಯೂ ಖಾಸಗಿ ಶಿಕ್ಷಣ ಸಂಸ್ಥೆಗಳು ಭರಪೂರವಾಗಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಆನ್ ಲೈನ್ ಶಿಕ್ಷಣ ಪ್ರಸಾರ ಮಾಡುತ್ತಿವೆ. ಖಾಸಗಿ ಸಂಸ್ಥೆಗಳು ಧನವಂತ ಮಕ್ಕಳನ್ನು ಮನೆಯಲ್ಲಿಯೇ ಇರಿಸಿ Online ತರಗತಿಗಳನ್ನು ಮಕ್ಕಳಿದ್ದೆಡೆಗೇ ತಂದಿದ್ದಾರೆ! ಇಲ್ಲಿ ಆರ್ಥಿಕ ದುರ್ಬಲವಾದ ಮಕ್ಕಳು ಕಲಿಕೆಯಿಂದ ಹೊರಗುಳಿಯುತ್ತಾರೆ. ಈ ಭೇದ ಎಷ್ಟು ಸರಿ? ಖಾಸಗಿ ಶಿಕ್ಷಣ ಸಂಸ್ಥೆಯವರಿಗೆ ಬಡ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಇದೆ, ಕಾಳಜಿ ಇದೆ ಅಂದುಕೊಳ್ಳಬೇಕಾ? ಖಾಸಗಿ ಬಂಡವಾಳಶಾಹಿಗಳು ನಡೆಸುವ  Online Clsses ಎಷ್ಟು ಬಡ ಮಕ್ಕಳ ಮನೆ ಬಾಗಿಲನ್ನು ತಲುಪುತ್ತಿವೆ? ಇದು ನಾವೆಲ್ಲರೂ ಯೋಚಿಸಬೇಕಾದ ಪ್ರಶ್ನೆ. ಎಷ್ಟು ಮಕ್ಕಳ ಪೋಷಕರು, ಮೊಬೈಲ್ ಪೊನ್ ಬಳಸುತ್ತಾರೆ? ಎಷ್ಟು ಮಕ್ಕಳ ಪೊಷಕರು ನೆಟ್ವಕ್೯ ಏರಿಯಾದಲ್ಲಿ ನೆಲೆಸಿದ್ದಾರೆ? ಎಂಬುದನ್ನು ಸಮೀಕ್ಷೆ ಮಾಡಿ ನೋಡಲಿ. ಶಿಕ್ಷಣದ ಭೇದ ಎಷ್ಟೆಂಬುದು ಅರ್ಥವಾಗುತ್ತದೆ.

       ಗ್ರಾಮಾಂತರ ಪ್ರದೇಶಗಳಲ್ಲಿ ಬದುಕುವ ಪೋಷಕರು ವ್ಯವಸಾಯವನ್ನೇ ನಂಬಿದ್ದು, ಕೃಷಿ ಆರ್ಥಿಕತೆಯನ್ನೇ ತಮ್ಮ ಜೀವನೋಪಾಯದ ಮೂಲವಾಗಿ ಅವಲಂಬಿಸಿ ಕೊಂಡಿದ್ದಾರೆ. ವ್ಯವಸಾಯ ಮಾನ್ಸೂನ್ ಮಳೆಯೊಂದಿಗಿನ ಜೂಜಾಟವಾಗಿ ಬದುಕು ಕಠಿಣವಾಗಿದೆ. ಇದನ್ನು ಮನಗಂಡು ತಮ್ಮ ಮಕ್ಕಳು ತಮ್ಮಂತೆ ಕಷ್ಟಪಡಬಾರದೆನ್ನುವ ಉದ್ಧೇಶದಿಂದ ಅವರನ್ನು ಅಕ್ಷರಕ್ಕೆ ತೆರೆದುಕೊಳ್ಳುವಂತೆ ಮಾಡಲು ಶಾಲೆಗೆ ಕಳುಹಿಸುತ್ತಾರೆ. ಬಂಡವಾಳಶಾಹಿಗಳ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅದರಲ್ಲೂ ಆಂಗ್ಲ ಮಾಧ್ಯಮದಲ್ಲಿಯೇ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂದು ವ್ಯಸನಪೀಡಿತರಾಗಿದ್ದಾರೆ. ಇದನ್ನು ಪ್ರತಿಷ್ಟೆಯ ಧ್ಯೋತಕವೆಂದು ಭಾವಿಸಲಾಗಿದೆ. ಹಾಗಾಗಿಯೇ ಪಣ ತೊಟ್ಟವರಂತೆ ಕೈಯಲ್ಲಿರುವ ಕಾಸನ್ನು ವ್ಯಯಿಸಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿರುತ್ತಾರೆ. ಅಕ್ಷರ ಜ್ಞಾನವಿರದ ಅನಕ್ಷರಸ್ಥ ಪೋಷಕರು ಕೂಡಾ ತಮ್ಮ ಮಕ್ಕಳ ಒಳಿತಿಗಾಗಿ ತಮ್ಮ ಎಷ್ಟೋ ಅಸೆಗಳನ್ನು ಸಾಯಿಸಿಕೊಂಡಿರುತ್ತಾರೆ. ಇಂತಹ ಪ್ರದೇಶದ ಮಕ್ಕಳಿಗೆ Online ತರಗತಿಗಳು ಎಷ್ಟರ ಮಟ್ಟಿಗೆ ಲಭ್ಯವಾಗಬಹುದು?.

         ಈಗಲೂ ಎಷ್ಟೋ ಗ್ರಾಮಗಳು ವಿದ್ಯುತ್ ಸಂಪರ್ಕವೇ ಇಲ್ಲದೆ, ವಿದ್ಯುತ್ ಇದ್ದರೂ ಸಮರ್ಪಕವಾಗಿ ವಿದ್ಯುತ್ ಸರಬರಾಜು ಇರದೆ ಹಳ್ಳಿಗಳಲ್ಲಿ, ಮೊಬೈಲ್/ ನೆಟ್ವಕ್೯ ಗಳನ್ನು ಊಹಿಸಲು ಸಾಧ್ಯವೇ? ಇಂತಹ ಸಂದರ್ಭದಲ್ಲಿ ಆನ್ ಲೈನ್ ತರಗತಿಗಳು ಗ್ರಾಮೀಣ ಭಾಗದ ಎಷ್ಟು ಮಕ್ಕಳನ್ನು ತಲುಪಲು ಸಾಧ್ಯವಿದೆ? ತರಗತಿಗಳಲ್ಲಿ ಶಿಕ್ಷಕರು ತಮ್ಮ ಕಂಠ ಶೋಷಣೆ ಮಾಡಿಕೊಂಡು ಹೇಳುವ ಪಾಠವನ್ನೇ ಸರಿಯಾಗಿ ಗಮನಹರಿಸಿ ಕೇಳದಿರುವ ಇಂದಿನ ಮಕ್ಕಳು Online ಪಾಠಗಳನ್ನು ರೆಕಾಡ್೯ ಮಾಡಿ ಹಾಕಿದರೆ ಶ್ರದ್ಧೆಯಿಂದ ಆಲಿಸುವರೇನು? ಎಷ್ಟು ಮಕ್ಕಳು Online ಪಾಠಗಳನ್ನು ಗಮನವಿಟ್ಟು ಕೇಳಬಹುದು? ಹಾಗೂ ಹಾಕಿದ ಮನೆಕೆಲಸವನ್ನು ಎಷ್ಟರ ಮಟ್ಟಿಗೆ ನಿರ್ವಹಿಸಬಹುದು? ಇನ್ನು ಇದೆಲ್ಲವನ್ನೂ ಮಕ್ಕಳಿಂದ ಮಾಡಿಸಲು ಅವರಿಗೆ ಸಹಾಯಕರು ಬೇಕು ತಾನೆ? ಅಕ್ಷರಸ್ಥ ಪೋಷಕರಾದರೇನೋ ಮಕ್ಕಳ ಕಲಿಕೆಗೆ ಒಳಿತು, ಇನ್ನು ಅನಕ್ಷರಸ್ಥ ತಂದೆತಾಯಿಗಳನ್ನು ಪಡೆದ ಮಕ್ಕಳ ಪಾಡೇನು? ಮನೆಗಳಲ್ಲಿ ಗಂಡಸರಂತೂ ಮಕ್ಕಳ ಕಲಿಕಾ ಪ್ರಕ್ರಿಯೆಯಲ್ಲಿ ನೆರವಾಗುವುದು ಅಪರೂಪವೇ ಸರಿ. ತಾಯಂದಿರು ಮನೆಗೆಲಸಗಳಲ್ಲಿ ಹಾಗೂ ಕೃಷಿ ಕೆಲಸಗಳಲ್ಲಿ ನಿರತರಾಗಿರುತ್ತಾರೆ. ಅನಕ್ಷರಸ್ಥ ತಾಯಂದಿರು Online ತರಗತಿಗಳನ್ನು ನಡೆಸುತ್ತಿರುವುದರ ಉದ್ಧೇಶವನ್ನೂ ಅರ್ಥಮಾಡಿಕೊಳ್ಳಲಾರರು.

        ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಶಾಲಾ ಕಾಲೆಜುಗಳಿಗೆ ರಜೆ ಘೋಷಣೆಯಾಗಿದ್ದರೂ, ಮನೆಯಲ್ಲಿಯೇ ಕುಳ್ಳಿರಿಸಿ online ಪಾಠಮಾಡುವುದರ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಸಿಕ ಶುಲ್ಕವನ್ನು ಕಟ್ಟಿಸಿಕೊಳ್ಳುತ್ತಿದ್ದಾರೆ! ಇದಕ್ಕೆ ಯಾರು ಹೊಣೆ? ಮಗು ಕಲಿಯುತ್ತೋ, ಬಿಡುತ್ತೋ ಎಂಬುದರ ಜವಬ್ದಾರಿ ಹೊರುವವರು ಯಾರು? ಆರ್ಥಿಕವಾಗಿ ದುರ್ಬಲರಾಗಿರುವ ಪೋಷಕರು ಶಿಕ್ಷಣ ಶುಲ್ಕ ಪಾವತಿಸಲು ಹಣ ಎಲ್ಲಿಂದ ತರುವುದು? ಹೊರಗೆ ಹೋಗಿ ಸಂಪಾದಿಸಲು ಅವಕಾಶವಿಲ್ಲದಿದ್ದರೂ ಶುಲ್ಕ ಪಾವತಿ  ಮಾಡಲೇಬೇಕಾಗಿದೆ.  ಕೊರೋನಾ ವೈರಸ್ ನಿಂದಾಗಿ ಮನೆಯ ಸದಸ್ಯರಿಗೆ ಏನಾಗಿಬಿಡುತ್ತದೋ ಎನ್ನುವ ಆತಂಕವನ್ನು ಸೃಷ್ಟಿಸಿರುವ ಜೊತೆಗೆ, ಮಕ್ಕಳ ಶಿಕ್ಷಣ ಹಾಗೂ ಅವರ ಭವಿಷ್ಯದ ಬದುಕಿನ ಬಗ್ಗೆ ಹೆಚ್ಚು ಚಿಂತೆಗೀಡಾಗಿರುವುದು ಪುರುಷರಿಗಿಂತಲೂ ಹೆಣ್ಣು ಮಕ್ಕಳೆಂದರೆ ಅತಿಶಯವಲ್ಲ.


ಭಾರತಿ ಅಶೋಕ್.

One thought on “ಭಾರತಿ ಅಶೋಕ್ ಲೇಖನ,,ಕೊರೋನಾ-ಆನ್ ಲೈನ್ ಕ್ಲಾಸಸ್, ಪೋಷಕರು

Leave a Reply

Back To Top