ಲೇಖನ ಸಂಗಾತಿ
ಡಾ.ಸುರೇಖಾ ರಾಠೋಡ್
ಹೆಣ್ಣು ಭೋಗದ ವಸ್ತುವೇ ?
* ಭಾರತೀಯ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಬಹಳ ಉನ್ನತ ಮಟ್ಟದ ಸ್ಥಾನವಿದೆ ಎಂದು ಸನಾತನಿಗಳು ಹೇಳುವ ಸಂದರ್ಭದಲ್ಲಿ, ಅದೇ ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಕೇವಲ ಭೋಗದ ವಸ್ತುವಾಗಿ ಕಾಣುವ ಸಂಸ್ಕೃತಿಯು ಅವ್ಯಾಹತವಾಗಿ ಬೆಳೆಯುತ್ತಿರುವುದನ್ನು ಈಚಿನ ದಿನಗಳಲ್ಲಿ ಕಾಣಬಹುದು. ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ, ಕೊಡಗು, ಬೆಂಗಳೂರು , ಹಾಸನ ಜಿಲ್ಲೆಗಳಲ್ಲಿ ಈಚೆಗೆ ಹೆಣ್ಣು ಮಕ್ಕಳ ಮೇಲೆ ನಡೆದ ದೌರ್ಜನ್ಯಗಳು ಹೆಣ್ಣಿನ ಮನಸ್ಸನ್ನು ತಲ್ಲಣಗೊಳಿಸಿವೆ.
ಹನ್ನೇರಡನೇ ಶತಮಾನದ ವಚನ ಚಳುವಳಿ ಕಾಲದಲ್ಲಿ ನಡೆದ ಸಮಾನತೆಯ ಸಂಘರ್ಷ ಹೊರತುಪಡಿಸಿದರೆ ,
ಈ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಹಿಂದಿನಿಂದಲೂ ಎರಡನೇ ದರ್ಜೆಯ ಪ್ರಜೆಯಾಗಿ, ದಾಸಿಯಾಗಿ, ಸೇವಕಿಯಾಗಿ, ಗುಲಾಮಳಾಗಿ, ಭೋಗದ ವಸ್ತುವಾಗಿ ಕಂಡಿರುವುದನ್ನು ಕಾಣಬಹುದು. ಈ ದೃಷ್ಟಿಕೋನ ಪುರಷ ಪ್ರಾಧಾನ ಮನಸ್ಸುಗಳಲ್ಲಿ ಆಳವಾಗಿ ಬೇರುರಿರುವುದರಿಂದ ಇಂದು ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಆಟವಾಡಿಸಬಹುದು ಎಂಬ ಮನಸ್ಥಿತಿ ಬೆಳೆಯುತ್ತಿದೆ.
ಯಾವುದೇ ಒಬ್ಬ ಹೆಣ್ಣು ಪುರುಷನೊಂದಿಗೆ ಸ್ನೇಹದಿಂದ ಇಲ್ಲವೇ ನಕ್ಕು ಮಾತನಾಡಿಸಿದರೆ ಸಾಕು, ಆಕೆಯವನ್ನು ತನ್ನ ಲೈಂಗಿಕ ಬಯಕೆ ಈಡೆರಿಸುವ ವಸ್ತು ಎಂದು ಭಾವಿಸುತ್ತಾರೆ. ಅದೇ ಪುರುಷ ಪುರುಷನೊಂದಿಗೆ ಸ್ನೇಹದಿಂದ ಮಾತನಾಡಿದರೆ ಅಥವಾ ಸ್ನೇಹ ಬೆಳೆಸಿದರೆ ಅವರನ್ನು ಕೂಡ ಅದೇ ದೃಷ್ಟೀಯಲ್ಲಿ ಕಾಣುತ್ತಾನೆಯೇ? ಯಾಕೆ ಹೆಣ್ಣು ಕೂಡ ಒಬ್ಬ ಪುರಷನೊಂದಿಗೆ ಸ್ನೇಹವನ್ನು ಬೆಳೆಸಬಹುದೆಂದು ಭಾವಿಸುವುದಿಲ್ಲ? ಹೆಣ್ಣು ಇತರ ಸ್ನೇಹಿತರಂತೆ ಎಂದು ಪುರುಷ ಪ್ರಧಾನ ಆಳ್ವಿಕೆಗೆ ಅಥವಾ ಸಮಾಜ ಯಾಕೆ ತಿಳಿದುಕೊಳ್ಳುವುದಿಲ್ಲ? ಗಂಡು ಹೆಣ್ಣಿನ ನಡುವೆ ಸ್ನೇಹ ಇರಬಾರದೇ? ಸ್ನೇಹ ಬೆಳೆಸಿದರೆ ಲೈಂಗಿಕವಾಗಿ ನೋಡಬೇಕೆ?
ಪುರುಷ ಪ್ರಧಾನ ಮನಸ್ಥಿತಿಯುಳ್ಳವರು, ಕಾಮ ಧೋರಣೆ ಹೊಂದಿದವರು, ಹೆಣ್ಣು ಮಕ್ಕಳಿಗೆ ಸಹಾಯ ಮಾಡುವ ನೆಪದಲ್ಲಿ ಅಥವಾ ಸಹಾಯ ಮಾಡಿ ಅವರಿಂದ ಲೈಂಗಿಕ ತೃಷೆ ತೀರಿಸಿಕೊಳ್ಳಲು ಮುಂದಾಗುವುದನ್ನು ಇಂದು ಹೆಚ್ಚಾಗಿ ಕಾಣುತ್ತಿದ್ದೇವೆ.
. ಅಂತಹ ಸಂದರ್ಭದಲ್ಲಿ ಹೆಣ್ಣು ಅಸಾಹಯಕಳಾಗಿ ಪುರುಷ ಹಣೆದ ಸಹಾಯದ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುವಳು. ಸಹಾಯದ ಬದಲಿಗೆ ಕಾಮತೃಷಿ ತೀರಿಸಿಕೊಳ್ಳುವವರಾಗಿದ್ದರೆ ಯಾಕೆ ಸಹಾಯ ಮಾಡುತ್ತಿರಿ ? ಇಂದು ನಮ್ಮ ಸಮಾಜದಲ್ಲಿ ಹೆಣ್ಣು ಎಂತಹ ಅಧಿಕಾರ ಸ್ಥಾನದಲ್ಲಿ ಇದ್ದರೂ ಕೂಡ, ಕೆಲ ರಾಜಕೀಯ ದುರೀಣರು, ಕೆಲ ಹಣವಂತರು, ಅಧಿಕಾರದಲ್ಲಿದ್ದವ ಕೆಲವರು, ಪುರುಷ ಪ್ರಧಾನ ಮನಸ್ಥಿತಿ ಉಳ್ಳವರು ಹೆಣ್ಣು ಮಕ್ಕಳನ್ನು ತಮ್ಮ ಕಾಮದಾಟಕ್ಕೆ ಬಲಿ ಪಡೆಯುತ್ತಿರುವುದು ಶೋಚನೀಯ ಸಂಗತಿಯಾಗಿದೆ.
ಪ್ರಸ್ತುತ ಹಾಸನದ ಪ್ರಕರಣವನ್ನು ನೋಡಿದರೆ, ಇಂದು ಹೆಣ್ಣು ಮಕ್ಕಳು ಯಾವ ರೀತಿಯಲ್ಲಿ ಬಲಿಯಾಗಿದ್ದಾರೆ ಎಂಬುದು ತಿಳಿಯುತ್ತದೆ. ಈ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡ ಹೆಣ್ಣು ಮಕ್ಕಳ ಮಾನ ಬೀದಿಗೆ ಬರುವುದರ ಜೊತೆಗೆ ಕುಟುಂಬದ, ಸಮಾಜದ ನಿಂದನೆಗೆ, ಅವಮಾನಕ್ಕೆ ಒಳಗಾಗಿ ನರಕಯಾತನೆ ಅನುಭವಿಸುತ್ತಿರುವುದನ್ನು ಊಹಿಸಿಕೊಳ್ಳುವುದು ಕೂಡ ಕಷ್ಟವಾಗುತ್ತದೆ.
ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ಗಮನಿಸಿದರೆ ಎಲ್ಲಿಯೂ ಹೆಣ್ಣು ನಿರ್ಭಯವಾಗಿ ಬದುಕಲು ಸಾಧ್ಯವಿಲ್ಲದಂತಹ ಸ್ಥಿತಿ ಬಂದು ತಲುಪಿದೆ. ಪ್ರೀತಿ ಸ್ವಿಕರಿಸಲಿಲ್ಲ ಎಂಬ ಕಾರಣಕ್ಕೆ ಹುಬ್ಬಳ್ಳಿಯಲ್ಲಿ ಧಾರುಣವಾಗಿ ಹಾಡುಹಗಲೆ ಹತ್ಯೆಯಾದ ನೇಹ ಮತ್ತು ಅಂಜಲಿ ಯನ್ನುಬ
ಚಾಕುವಿನಿಂದ ಕೊಲೆ ಮಾಡುವುದು ಒಂದೆಡೆಯಾದರೆ, ಕೊಡಗಿನಲ್ಲಿ ನಿಚ್ಚಿತಾರ್ಥ ಅಥವಾ ಮದುವೆ ತಾನು ಅಂದುಕೊಂಡ ಸಮಯದಲ್ಲಿ ನಡೆಯಲಿಲ್ಲವೆಂದು ರುಂಡವನ್ನು ಕತ್ತಿರಿಸುವ ಗಂಡಿನ ಮನಸ್ಥಿತಿ ನೋಡಿದರೆ ನಮ್ಮ ಸಮಾಜ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬ ಪ್ರಶ್ನೆ ಕಾಡುತ್ತದೆ. ಯಾಕೆ ಈ ರೀತಿಯ ಕ್ರೂರ ಮನಸ್ಥಿತಿಗಳು ಬೆಳೆಯುತ್ತಿರುವುದು? ಇದಕ್ಕೆ ಕಾರಣಗಳೇನು? ಇದಕ್ಕೆ ಯಾರು ಜವಾಬ್ದಾರರು? ಹೀಗೆ ಸಾಲು ಸಾಲು ಪ್ರಶ್ನೆಗಳು ನಮ್ಮ ಎದುರಿಗೆ ಬಂದು ನಿಲ್ಲುತ್ತವೆ.
ತಮ್ಮ ಕಾಮತೃಷೆ ತೀರಿಸಿಕೊಳ್ಳಲು ಮಾಡುವ ಸಹಾಯವನ್ನು, ಸ್ನೇಹವನ್ನು ಒಪ್ಪಿಕೊಳ್ಳದೇ ಧಿಕ್ಕರಿಸಬೇಕಾಗಿದೆ . ಈ ವ್ಯವಸ್ಥೆಯಲ್ಲಿ ಅಡಿಗಿ ಕುಳಿತಿರುವ ನಯವಂಚರನ್ನು , ಇಡೀ ಮಹಿಳಾ ಸಮುದಾಯವು ದಿಟ್ಟತನದಿಂದ ಖಂಡಿಸಬೇಕಾಗಿದೆ. ಮಹಿಳಾ ಪರ ಕಾನೂನುಗಳನ್ನು ಬಿಗಿಗೊಳಿಸಿ, ಅಪರಾಧಿಗಳಿಗೆ ತಕ್ಕ ಶಿಕ್ಷೆಗೆ ಗುರಿ ಪಡಿಸುವ ಜವಾಬ್ದಾರಿಯನ್ನು ಕಾನೂನುವ್ಯವಸ್ಥೆ ವಹಿಸಿಕೊಳ್ಳಬೇಕಾಗಿದೆ.
——————————-
ಸುರೇಖಾ ರಾಠೋಡ್
Good writing, very Nice