ಲೇಖನ ಸಂಗಾತಿ
ಹನಿಬಿಂದು
“ಬದುಕಲ್ಲಿ ಧನಾತ್ಮಕ ಆಲೋಚನೆಗಳಿರಲಿ”
ಆಲೋಚನೆ ಇಲ್ಲದ ಮನುಜ ಇಲ್ಲ. ಇದ್ದರೆ ಅವನನ್ನು ಸರಿಯಾದ ಮಾನವ ಎಂದು ಜನ ಒಪ್ಪಿಕೊಳ್ಳುವುದು ಇಲ್ಲ. ಆಲೋಚನೆಗಳು ಬೇಕು. ಆದರೆ ಮನದಲ್ಲಿ ದುರಾಲೋಚನೆ ಇರಬಾರದು ಅಲ್ಲವೇ? ದೂರಾಲೋಚನೆ ಬದುಕಿಗೆ ಬೇಕು, ಅದೂ ಕೂಡ ಉತ್ತಮ, ಒಳ್ಳೆಯದನ್ನು ಮಾಡುವ ಹಾಗಿರಬೇಕು. ಕೆಟ್ಟದನ್ನು ಆಲೋಚಿಸುವವನಿಗೆ ಒಳ್ಳೆಯದಾಗಲಿ ಎಂದು ಯಾರು ಹರಸುತ್ತಾರೆ? ಕರ್ಮ ಎಂದಿಗೂ ನಮ್ಮನ್ನು ಸದಾ ಹಿಂಬಾಲಿಸುತ್ತದೆ. ದೂರಾಲೋಚನೆ ಸದಾ ದುಷ್ಕರ್ಮವೇ ಆಗಿರುತ್ತದೆ ಅಲ್ಲದೆ ಸತ್ಕರ್ಮ ಆಗಲು ಸಾಧ್ಯವೇ? ನಾವು ಸದಾ ಧನಾತ್ಮಕವಾಗಿ ಯೋಚಿಸಬೇಕೆ ಹೊರತು ಋಣಾತ್ಮಕವಾಗಿ ಅಲ್ಲ.
ನಾವು ಎಂದಿಗೂ ಕೆಟ್ಟದ್ದನ್ನು ಆಲೋಚನೆ ಮಾಡುವುದಿಲ್ಲ ಎಂಬ ನಂಬಿಕೆ ನಮಗೆ, ನಮ್ಮೊಳಗೆ ನಿರಂತರ ಇರಬೇಕು. ಕೆಟ್ಟದನ್ನು ಎಂದಿಗೂ ಯಾರೂ ಆಲೋಚನೆ ಮಾಡಬಾರದು, ಇದು ಯಾಕೆಂದು ತಿಳಿದಿಲ್ಲ ಎಂದು ನಾವು ಹೇಳುವ ಹಾಗಿಲ್ಲ . ನಮ್ಮ ಜವಾಬ್ದಾರಿಯನ್ನು ನಾವು ನಿಭಾಯಿಸಲೆ ಬೇಕು ಎಂಬ ನಿರ್ಧಾರ ನಮ್ಮದಾಗಿರಬೇಕು.ದುರಾಲೋಚನೆ ಹಾಗೂ ಋಣಾತ್ಮಕ ಆಲೋಚನೆ ಯಾರಿಗೂ ಎಂದಿಗೂ ಖುಷಿ, ನಂಬಿಕೆ, ಪ್ರೀತಿ, ಸಂತಸ ತರದು, ಬದಲಾಗಿ ಸಂಬಂಧ ಒಡೆಯುವುದು, ನೋವು ತರುವುದು, ದುಃಖ ಕೊಡುವುದು ಅಲ್ಲವೇ?
ನಮ್ಮ ಜೀವನದಲ್ಲಿ ಬಂದ ಜನರನ್ನು ದೇವರೇ ನಮಗಾಗಿ ಕಳುಹಿಸಿದ್ದಾರೆ ಎಂದು ತಿಳಿದವರು ನಾವಾಗಬೇಕು. ಅವರಿಗೆ ಬೇಕಾದ ಸುಖ ಸಂತೋಷವನ್ನು ಕೊಡುವುಲ್ಲಿ ನಮ್ಮ ಪಾತ್ರ ಮತ್ತು ಅದನ್ನು ಯಾವ ಸಮಯದಲ್ಲಿ ಹೇಗೆ ಕೊಡಬೇಕು ಎಂದು ಸದಾ ಯೋಚನೆ ಮಾಡುವ ನಾವು “ಸಮಯ ಸಾಧಕರು” ಎಂಬ ಪದದ ಬಗ್ಗೆ ಯಾವತ್ತೂ ಯೋಚನೆಯನ್ನೇ ಮಾಡಬಾರದು! ನಮ್ಮ ಬುದ್ಧಿ ಒಳ್ಳೆಯದು ಎಂದು ನಮಗೆ ಅನ್ನಿಸಬೇಕು. ನಮ್ಮಿಂದ ದೂರ ಹೋದವರ ಬಗ್ಗೆ ಯೋಚನೆ ಮಾಡುತ್ತಾ ಕೊರಗುವುದು ತರವಲ್ಲ. ದೇವರು ನಮ್ಮ ಜೀವನದಲ್ಲಿ ಅವರಿಗಿಂತ ಒಳ್ಳೆಯ ಹೊಸ ಜನರನ್ನು ಪರಿಚಯಿಸ ಬಹುದು, ಯಾರಿಗೆ ಗೊತ್ತು ಅಲ್ಲವೇ? ಒಣಗಿದ ಎಲೆಗಳು ಉದುರುತ್ತಿವೆ ಎಂದು ಮರ ಬೇಸರಿಸಿದರೆ, ತನಗೆ ಆಯಾ ಎಲೆಗಳೇ ಬೇಕು ಎಂದು ಹಠ ಹಿಡಿದರೆ ಹೊಸ ಹಸಿರೆಲೆ ಬರಲು ಜಾಗ ಎಲ್ಲಿದೆ? ಬದುಕೆಂದರೆ ಹಾಗೆಯೇ. ಪ್ರತಿನಿತ್ಯ ಹಸಿರೆಳೆಗಳ ಆಗಮನ. ಒಳ್ಳೆಯ ಬದುಕಿಗೆಅಷ್ಟು ಆಲೋಚನೆ ಸಾಕಲ್ಲವೇ?
ತಮ್ಮ ಮನೆಯ ಜನ ಒಂದು ವಾರ ಮುಂಚೆ ಎಲ್ಲಾದರೂ ಹೋದರೂ ಅದು ಜವಾಬ್ದಾರಿ, ಅದನ್ನು ನಾವು ಸರಿಯಾಗಿ ನಿಭಾಯಿಸಲೇ ಬೇಕು. ಗಟ್ಟಿ ಮುಟ್ಟಾದ ಬಾಗಿಲು, ಬೀಗ, ಗೇಟು, ನೀರು, ಹಾಲು, ವಿದ್ಯುತ್ ,ಫ್ರಿಜ್, ಮಕ್ಕಳ ಹಿರಿಯರ ಆರೋಗ್ಯ, ಊಟ ಹೇಗೆ ಎಲ್ಲದರ ಬಗ್ಗೆಯೂ ಯೋಚಿಸಬೇಕು. ಹಾಗೆಯೇ ಮನೆಯಲ್ಲಿ ಇರುವವರ ಮತ್ತು ಅವರ ಅಗತ್ಯತೆಗಳ ಬಗ್ಗೆ ಕೂಡಾ . ಪರರ ಮಕ್ಕಳ ತಾಯಂದಿರು ಅವರ ಮಕ್ಕಳಿಗೆ ಸಮಯ ಕೊಡುವುದು ತಪ್ಪು ಎಂದು ನಾವು ಎಂದಿಗೂ ಯೋಚಿಸ ಬಾರದು. ಆ ತಾಯಂದಿರಿಗೂ, ಮಕ್ಕಳಿಗೂ ಪೊಸೆಸಿವ್ ನೆಸ್ ಅಂತ ಇರುವುದಿಲ್ವ! ನಮ್ಮ ಮನ್, ನಮ್ಮ ಕುಟುಂಬ, ನಮ್ಮ ಸಂಪತ್ತು ಹಾಗೆಯೇ ಇತರರು ಕೂಡ. ಹೆತ್ತವರಿಗೆ ಹೆಗ್ಗಣ ಮುದ್ದು. ಅವರವರ ಮಕ್ಕಳು ಹಾಗೆಯೇ ಇರಲಿ, ಪೋಷಕರಿಗೆ ಅವರು ಮುದ್ದಿನ ಮಕ್ಕಳೇ. ಎಲ್ಲರೂ ಅವರ ಮಕ್ಕಳನ್ನು ಪ್ರೀತಿಯಿಂದಲೇ ಬೆಳೆಸುತ್ತಾರೆ. ಎಲ್ಲಾ ಮಕ್ಕಳಿಗೂ ಪ್ರೀತಿ ಅವಶ್ಯಕ ಕೂಡ. ಪ್ರೀತಿ ದೊರೆಯದ ಮಕ್ಕಳು ಮುಂದೆ ಕ್ರಿಮಿನಲ್ ಗಳಾಗಿ ಮಾರ್ಪಡುತ್ತಾರೆ. ಹಾಗಾಗಿ ನಮ್ಮ ಮಕ್ಕಳನ್ನು ಕೂಡ ಪ್ರೀತಿ ಹಾಗೂ ಶಿಸ್ತಿನಿಂದ ಬೆಳೆಸುವ ಜವಾಬ್ದಾರಿ ನಮಗಿದೆ. ಅದನ್ನು ನಾವು ಸರಿಯಾಗಿ ಮಾಡಬೇಕು. ಮಕ್ಕಳಿಗೆ ತಿನ್ನಲು ಕೊಟ್ಟರೆ ಸಾಲದು, ಶಿಸ್ತನ್ನು ಸಹ ಕಲಿಸಿ ಕೊಡಬೇಕು. ತಾನು ತಿಂದ ಚಾಕಲೇಟ್ ರ್ಯಾಪರ್, ನೀರು ಕುಡಿದ ಬೇಡದ ಬಾಟಲಿ ಎಲ್ಲಿ ಹಾಕಬೇಕು, ತನ್ನ ಬಟ್ಟೆ ಹೇಗೆ ಇಟ್ಟುಕೊಳ್ಳ ಬೇಕು, ತನ್ನ ಶಾಲಾ ಸಾಮಾಗ್ರಿಗಳ ಜೋಡಣೆ ಎಲ್ಲಿ ಹೇಗೆ ಅಚ್ಚುಕಟ್ಟಾಗಿ ಇಡಬೇಕು, ತನ್ನ ವಸ್ತುಗಳನ್ನು ಹೇಗೆ ಜೋಪಾನ ಮಾಡಬೇಕು, ತನ್ನ ತಂಗಿ, ತಮ್ಮ, ಅಕ್ಕ, ತಮ್ಮ ಇವರ ಮೇಲೆ ಪ್ರೀತಿ, ಹಿರಿಯರ ಮೇಲೆ ಗೌರವದಿಂದ ಹೇಗೆ ನಡೆದುಕೊಳ್ಳ ಬೇಕು ಇವೆಲ್ಲ ಮನೆಯಲ್ಲಿ ಮೊದಲ ಗುರುವಿನಿಂದ ಮತ್ತು ಹಿರಿಯರಿಂದ, ಮನೆಯ ಇತರ ಸದಸ್ಯರಿಂದ ಪಡೆವ ಪಾಠಗಳು. ಇವುಗಳನ್ನು ನೋಡಿ ಕಲಿಯುವುದೇ ಹೆಚ್ಚು. ಅಪ್ಪ, ಅಮ್ಮ, ಹಿರಿಯರು ಕೆಟ್ಟ ಪದಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ ಎಂದರೆ ಶಾಲೆಯಲ್ಲಿ ಇತರ ವಿದ್ಯಾರ್ಥಿ ಸ್ನೇಹಿತರಿಗೆ ಮತ್ತು ಶಿಕ್ಷಕರಿಗೆ ಮಗುವಿನ ಬಾಯಲ್ಲಿ ಆ ಪದಗಳು ಪುನರುಚ್ಚರಿಸಲ್ಪಡುತ್ತವೆ. ಇದು ಮನೆಯಿಂದ ಬಂದ ಪಾಠ ಎಂದು ಶಿಕ್ಷಕರಿಗೆ ತಿಳಿದಾಗ ಆ ಮಗುವಿನ ಮನೆಯ ವಾತಾವರಣ ಹೇಗಿರಬಹುದು ಎಂಬ ಕಲ್ಪನೆ ಬರುತ್ತದೆ. ಆಗ ಕುಟುಂಬದ ಜಡ್ಕ್ಮೆಂಟ್ ಅಥವಾ ಪರಿಸ್ಥಿತಿ ಅರ್ಥ ಆಗುತ್ತದೆ. ಇಂತಹ ಮಗುವಿಗೆ ಶಿಕ್ಷೆ ಇಲ್ಲದ ಶಿಕ್ಷಣ ಅರ್ಥ ಆಗದು ಎಂದು ತಿಳಿಯುತ್ತದೆ. ಆದರೂ ಇಂದಿನ ದಿನಗಳಲ್ಲಿ ಉತ್ತಮ ಭಾಷೆ ಕಲಿಸಲು ಹೆಣಗಾಡಬೇಕಾಗುತ್ತದೆ. ಇದಕ್ಕೆ ಹೇಳುವುದು ಮನೆಯ ವಾತಾವರಣ ಎಷ್ಟು ಮುಖ್ಯ ಬದುಕಲ್ಲಿ ಎಂದು.
ಎಲ್ಲವನ್ನೂ ಋಣಾತ್ಮಕವಾಗಿ ಯೋಚಿಸಿದರೆ ಪರರು ಮಾಡುವುದೆಲ್ಲಾ ತಪ್ಪೇ ಅನ್ನಿಸಿಬಿಡುತ್ತದೆ. ನಮ್ಮನ್ನು ಪ್ರೀತಿಯಿಂದ ಕರೆದರೂ ಅವರಿಗಾಗಿ , ಅವರ ಕೆಲಸಕ್ಕಾಗಿ ಕರೆದರು ಎನ್ನುವುದು ತಪ್ಪೇ. ಯಾರು ಕೂಡ ಅವರವರ ಕೆಲಸಕ್ಕೆ ಇತರರನ್ನು ತಳ್ಳುವುದಿಲ್ಲ. ಸಿಕ್ಕಿದ ತುಸು ಸಮಯವನ್ನು ತಮ್ಮ ಪ್ರೀತಿ ಪಾತ್ರರಿಗೆ ನೀಡುವುದು ಹೇಗೆ ಎಂದು ಹಗಲಿರುಳು ಯೋಚಿಸುತ್ತಾ ಅದರ ಬಗ್ಗೆಯೇ ಕಾರ್ಯ ಪ್ರವೃತ್ತರಾಗುತ್ತಾರೆ. ಅವರ ಜೊತೆ ಕಾಲ ಕಳೆಯಲು ಇಚ್ಛಿಸುತ್ತಾರೆ. ರಾಕ್ಷಸ ಪ್ರವೃತ್ತಿ ಎಲ್ಲಾ ಜನರಲ್ಲೂ ಇರುವುದಿಲ್ಲ, ಪ್ರಪಂಚದ ಹೆಚ್ಚು ಜನರಲ್ಲಿ ಮಾನವೀಯತೆ ಇದೆ, ಉಳಿದಿದೆ, ಇನ್ನೂ ಇರುತ್ತದೆ ಕೂಡಾ.
ಹಾಗಾಗಿ ಮತ್ತು ಎಲ್ಲಾ ಕಡೆ ಪ್ರಪಂಚದಲ್ಲಿ ಎಲ್ಲರೂ ಕೆಟ್ಟವರಲ್ಲ. ಹಾಗಂತ ಕೆಟ್ಟವರು ಇಲ್ಲ ಎಂದಲ್ಲ. ನಮ್ಮ ಯೋಚನೆಗಳು ಚೆನ್ನಾಗಿದ್ದರೆ ಪರರು ನಮಗೆ ಕೆಟ್ಟದನ್ನು ಯೋಚಿಸಿದರೂ ಆ ನಮಗೆ ಒಳ್ಳೆಯದೆ ಆಗುತ್ತದೆ. ಕೆಟ್ಟತನಕ್ಕೆ ಒಳ್ಳೆಯತನ ಸರಿ ಆಗದು ಮತ್ತು ಬಾರದು. ಬೇರೆಯವರು ನಮಗೆ ನಮ್ಮ ಬದುಕಲ್ಲಿ ಬೇಕು ಎಂದಿದ್ದರೆ ಮಾತ್ರ ಅವರನ್ನೇ ಕರೆಯುತ್ತಾರೆ, ಅವರ ಜೊತೆಗೆ ಹೊರ ಹೋಗುತ್ತಾರೆ,ಅವರ ಬಳಿಯೇ ಇರಲು ಬಯಸುತ್ತಾರೆಯೇ ಹೊರತು ಬೇಡ ಅನ್ನಿಸಿದರೆ ಅದೇ ಜನ ನಮ್ಮನ್ನು ತಿರುಗಿ ಕೂಡಾ ನೋಡುವುದಿಲ್ಲ , ನೆನಪಿರಲಿ. ಅದೇ ನಮಗಾಗಿ ಜನ ಸಮಯವನ್ನು ಕೊಡುತ್ತಿದ್ದರೆ, ಅವರಿಗೆ ನಾವು ವಿಧೇಯರಾಗಿ ಇರೋಣ. ಕಾರಣ ಅವರಿಗೆ ನಮ್ಮ ಮೇಲೆ ಪ್ರೀತಿ ಇದೆ ಎಂದು ಅರ್ಥ.
ಆದರೆ ನಾನಿಲ್ಲಿ ಕಾಮವನ್ನು ಬಯಸುವ ಈಗಿನ ಜನರ ಒಂದೇ ದೃಷ್ಟಿಕೋನದ ಪ್ರೀತಿಯ ಬಗ್ಗೆ ಮಾತನಾಡುತ್ತಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ಇಂದು ಮಹಿಳೆಯರು ತಮ್ಮ ಭಾವಚಿತ್ರ ಹಾಕಿದರೆ ಸಾಕು, ಕೆಲ ಕಾಮುಕರ ದೃಷ್ಟಿ ಅವರ ಮೇಲೆ ಬೀಳುತ್ತದೆ. (ಕೆಲವು ಮಹಿಳೆಯರು ಕೂಡಾ ತಮ್ಮ ಅಶ್ಲೀಲ ಚಿತ್ರ ಮಾತ್ರವಲ್ಲ ಹಲವರನ್ನು ಉತ್ತೇಜಿಸುವ ಹಾಗೆ ಅರ್ಧಂಬರ್ಧ ಮೈ ಮಾಟ ಪ್ರದರ್ಶಿಸುತ್ತಾ, ಹಲ್ಲು ಕಿರಿಯುತ್ತಾ, ಬೇಕಂತಲೇ ಇತರರ ಅಟ್ರಾಕ್ಷನ್ ತಮ್ಮತ್ತ ಸೆಳೆಯಲು, ಇತ್ತೀಚೆಗೆ ತನಗೆ ಹೆಚ್ಚು ಲೈಕ್, ಕಮೆಂಟ್ ಬರಲಿ ಎನ್ನುವ ಕೆಟ್ಟ ಚಾಳಿ ಪ್ರಾರಂಭ ಆಗಿದೆ. ತಪ್ಪು ತಪ್ಪು ಉಚ್ಚಾರದಲ್ಲಿ ಮಾತನಾಡುತ್ತಾ, ಚಿಕ್ಕ ಮಕ್ಕಳ ಹಾಗೆ ಕುಣಿಯುತ್ತಾ, ದೇಹದ ಅಂಗಾಂಗ ಪ್ರದರ್ಶನಕ್ಕೆ ಇಟ್ಟ ಹಾಗೆ ಬಟ್ಟೆ ತೊಟ್ಟು ಕುಣಿಯುತ್ತಾ ಎಲ್ಲರೂ ತನ್ನನ್ನೇ ನೋಡಲಿ ಎಂಬ ಆಸೆ. ಅವರ ಪೋಷಕರು ಅದೇನು ಮಾಡುತ್ತಿರುತ್ತಾರೋ ಗೊತ್ತಿಲ್ಲ, ಅವರ ಸಲುಗೆಯೇ ಹಾಗೆ ಇರುತ್ತದೆ, ಇನ್ನು ಕೆಲವರಿಗೆ ಮಕ್ಕಳು ಹಾಗಿದ್ದರೆ ಮಾತ್ರ ನಮ್ಮನ್ನು ಉಳಿದವರು ಸಿರಿವಂತರು ಎಂದು ಗೌರವಿಸುತ್ತಾರೆ ಅಂದುಕೊಳ್ಳುತ್ತಾರೆ. ಒಂದು ಕಾಲದಲ್ಲಿ ಸಿರಿವಂತರು ಮಾತ್ರ ಸಮಾಜದಲ್ಲಿ ಅಂತಹ ಬಟ್ಟೆ ಹಾಕುವ ಧೈರ್ಯ ತೋರಿತ್ತಿದ್ದರು. ಸಿನಿಮಾ ತಾರೆಯರು ಸಿನಿಮಾಕ್ಕಾಗಿ ಮಾತ್ರ ಬಳಸುತ್ತಿದ್ದ ಬಟ್ಟೆಗಳು ಇಂದು ಪ್ರತಿ ಕಾರ್ಯಕ್ರಮದಲ್ಲೂ, ಎಲ್ಲರಲ್ಲೂ ರಾರಾಜಿಸುತ್ತಿವೆ. ಅದಕ್ಕೆ ನಾವು ಮಾಡರ್ನ್ ಫ್ಯಾಶನ್ ಎಂಬ ಹೆಸರು ಕೊಟ್ಟು ಬಿಟ್ಟಿದ್ದೇವೆ. ಅಂಗಾಂಗ ಪ್ರದರ್ಶನ ತಪ್ಪಲ್ಲ, ನೋಡುವವರ ದೃಷ್ಟಿ ಸರಿ ಇರಬೇಕು ಎನ್ನುವ ಹೆಣ್ಣು ಮಕ್ಕಳ ವಾದವೂ ಸೇರಿ ಕೊಂಡಿದೆ. ಒಟ್ಟಿನಲ್ಲಿ ಸಮಾಜ ಬದಲಾಗದಷ್ಟು, ತಾನು ಮಾಡಿದ್ದೇ ಸರಿ ಎನ್ನುವಷ್ಟು ಮುಂದುವರೆದಿದೆ. ಕಾರಣ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ!
ನಮ್ಮನ್ನು ಯಾರಾದರೂ ಅವರ ಮನೆಗೆ, ಜೊತೆಗೆ ಕರೆಯುತ್ತಾರೆ ಎಂದಾದರೆ ನಮ್ಮ ಅವಶ್ಯಕತೆ , ನಮ್ಮ ಮೇಲೆ ಅತೀವ ಪ್ರೀತಿ, ನಮ್ಮ ಬಗ್ಗೆ ಕಾಳಜಿ, ನಮ್ಮ ಗಮನ, ನಮ್ಮ ಸಮಯದ ಅವಶ್ಯಕತೆ ಎಲ್ಲವೂ ಅವರಿಗೆ ಇದೆ ಎಂದು ಅರ್ಥ. ಹಾಗೆ ಉತ್ತಮ ಯೋಚನೆಯಲ್ಲಿ ಕರೆದರೆ ನಮ್ಮ ಹಣ ವ್ಯಯಿಸಲು, ನಮ್ಮ ಸಮಯ ಕೊಲ್ಲಲು ಅವರು ನಮ್ಮನ್ನು ಕರೆಯುವುದಲ್ಲ, ಬದಲಾಗಿ ನಮ್ಮ ಮೇಲಿರುವ ಸ್ನೇಹ, ಪ್ರೀತಿಯನ್ನು ಹಂಚಲು, ನಮ್ಮ ಜೊತೆ ಕಳೆಯಲು ಆಸೆ ಪಟ್ಟು ಕರೆದಿರುತ್ತಾರೆ ಅಷ್ಟೇ. ಇದನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಇದು ಎಲ್ಲರಿಗೂ ಬದುಕಲ್ಲಿ ಅಗತ್ಯ ಮತ್ತು ಅನಿವಾರ್ಯ ಕೂಡಾ. ನಮ್ಮವರು ಎಂದು ಹೇಳಿಕೊಳ್ಳುವ ಜನ ಬದುಕಲ್ಲಿ ನಮಗೆ ಬೇಕು ಅಲ್ಲವೇ? ಕಷ್ಟ ಸುಖ, ನೋವು ನಲಿವು ನಾವು ಅವರಲ್ಲೇ ತಾನೇ ಹಂಚಿಕೊಂಡು ಹಗುರಾಗುವುದು? ಇನ್ನು ಇನ್ಸ್ತಾ, ಫೇಸ್ಬುಕ್ ಗಳಲ್ಲಿ ಲೈಕ್ ಕೊಟ್ಟ ದೂರದಲ್ಲಿ ಎಲ್ಲೋ ಇರುವ ಎಂದೂ ಮುಖ ನೋಡದ ಗೆಳೆಯರು ಬಂದು ನಮ್ಮನ್ನು ನೋಡಿಕೊಳ್ಳುವರೆ?
ಬದುಕು ತುಂಬಾ ಚಿಕ್ಕದು. ಅದನ್ನು ಋಣಾತ್ಮಕವಾಗಿ ಆಲೋಚಿಸಿ ಕಳೆದುಕೊಳ್ಳಬಾರದು. ಬದುಕಲ್ಲಿ “ಈಗ ” ಎನ್ನುವ ಅಮೂಲ್ಯ ರತ್ನವನ್ನು ಖುಷಿಯಿಂದ ಕಳೆಯಬೇಕು. ಇನ್ನು ನಾಳೆ ಹೇಗೋ ಏನೋ ಯಾರಿಗೂ ತಿಳಿಯದು. ನಮ್ಮ ಮೇಲೆ, ನಮ್ಮ ಆಲೋಚನೆಗಳ ಮೇಲೆ, ನಮ್ಮ ಕಾರ್ಯದ ಮೇಲೆ ನಮಗೆ ನಂಬಿಕೆ ಇರಬೇಕು. ನಂಬಿಕೆ ಇರಲಿ ಬಾಳಿನಲ್ಲಿ ಎಲ್ಲರಿಗೂ. ನಂಬಿಕೆ ಇಲ್ಲದ ಬದುಕಲ್ಲಿ ಹೂವು ಅರಳದು. ನಂಬಿಕೆ, ಸ್ನೇಹ, ದೂರಾಲೋಚನೆ, ಆಸೆ, ಪ್ರೀತಿ ಇಲ್ಲದೆ ಹೋದರೆ ನಮಗೂ ನೋವು, ನಮ್ಮನ್ನು ಅವಲಂಬಿಸಿದವರಿಗೂ ಕೂಡಾ. ನಮ್ಮ ಆಲೋಚನೆ, ಯೋಚನೆ, ಭಾವನೆಗಳು, ಕೆಲಸ , ನಮ್ಮ ಆಲೋಚನೆಗಳು ಪರರಿಗೆ ನೋವು ತರುವಂತೆ ಇರಬಾರದು. ನಾವು ಯಾರ ಜೊತೆಗೆ ಇದ್ದೇವೋ ಅವರಿಗೆ ನಮ್ಮಿಂದ ತೊಂದರೆ, ನೋವು, ದುಃಖ, ಬೇಸರ ಆಗದ ಹಾಗೆ ನಡೆದುಕೊಳ್ಳುವುದು ನಮ್ಮ ಧರ್ಮ. ಅದನ್ನು ನಾವು ಪಾಲಿಸಲೇ ಬೇಕು ಅಲ್ಲವೇ? ನೀವೇನಂತೀರಿ?
———————————
ಹನಿಬಿಂದು