ಅಂಕಣ ಸಂಗಾತಿ
ಒಲವ ಧಾರೆ
ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರ ಅಂಕಣ
ಪ್ರಯಾಣಿಕರ ಸುರಕ್ಷತೆಯ ಹೊಣೆ ಹೊತ್ತ ಗ್ಯಾಂಗಮನ್ ಗಳು…
ಭಾರವಾದ ಚೀಲವನ್ನು ಹೆಗಲಿಗೆ ಹಾಕಿಕೊಂಡು ಏದೆಯುಸಿರುವ ಬಿಡುತ್ತಾ, ಕಲ್ಲುಗಳನ್ನು ತುಳಿಯುತ್ತಾ, ಹೆಜ್ಜೆ ಹಾಕುವ ವ್ಯಕ್ತಿ…
ಕೈಯಲ್ಲಿ ದೊಡ್ಡದಾದ ಗನ್ನಿನಿಂದ ರೈಲ್ವೇ ಪಟ್ಟಿಗೆ ಬಡಿಯುತ್ತಾ, ಏನನ್ನೋ ಹುಡುಕುತ್ತಾ ಹಾಗೆ ಸಾಗುತ್ತಾ ಹೋಗುತ್ತಾನೆ ಮುಂದೆ ಮುಂದಕ್ಕೆ….
ಮೇಲಿನ ಎರಡು ಸನ್ನಿವೇಶಗಳು ರೈಲು ಉದ್ಯೋಗವನ್ನು ಮಾಡುವ ಶ್ರಮಜೀವಿಗಳ ಬೆವರ ಹನಿಯ ಕಹಾನಿ…!!
ನಾವು ರೈಲು ಪ್ರಯಾಣ ಮಾಡುವಾಗ ಸುಖಕರವಾದ ಅನುಭವವನ್ನು ಅನುಭವಿಸುತ್ತೇವೆ, ಎಂದರೆ ಅದಕ್ಕೆ ಕಾರಣ ರೈಲ್ವೆ ಟ್ರ್ಯಾಕ್ ಪ್ರೊಟೆಕ್ಟರ್ ಅಥವಾ ರೈಲ್ವೆ ಗ್ಯಾಂಗ್ ಮನ್ ಗಳು ಅವರ ಶ್ರಮವೇ ಇದಕ್ಕೆ ಮುಖ್ಯ ಕಾರಣ.
ಭಾರತೀಯ ರೈಲ್ವೆ ಏಷ್ಯಾ ಖಂಡದಲ್ಲಿಯೇ ಅತ್ಯಂತ ದೊಡ್ಡದಾದ ಬೃಹತ್ ಉದ್ದಿಮೆ ಎಂದು ನಾವು ಹೆಮ್ಮೆಯಿಂದ ಹೇಳುತ್ತೇವೆ. ಅತ್ಯಂತ ಸುಲಭವಾಗಿ ಮತ್ತು ಸುರಕ್ಷಿತವಾಗಿ ಜನಸಾಮಾನ್ಯರಿಗೂ ಕೈಗೆಟುಕುವ ಬೆಲೆಯಲ್ಲಿ ದೂರದೂರಿಗೆ ಹೋಗಲು ನಾವು ರೈಲನ್ನು ಅವಲಂಬಿಸಿರುತ್ತೇವೆ. ರೈಲು ಅತ್ಯಂತ ಸುರಕ್ಷಿತ, ಸುಲಭವಾಗಿ ತಲುಪಿಸುವ ವಾಹನ ವೆಂದು ನಾವು ಭಾವಿಸಿಕೊಂಡಿದ್ದೇವೆ. ಹಾಗಾದರೆ ಈ ಸುರಕ್ಷಿತವಾದ ವಾಹನಕ್ಕೆ ಕಾರಣರಾದವರು ಇದೇ ಗ್ಯಾಂಗ್ ಮಾನಗಳು..!!
ಒಂದು ಮಾಹಿತಿಯ ಪ್ರಕಾರ ರೈಲ್ವೆ ಇಲಾಖೆಯಲ್ಲಿ ಸುಮಾರು 8 ವಿಭಾಗಗಳಿದ್ದು, ಅವು ತಮ್ಮ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಪೂರೈಸುತ್ತವೆ. ರೈಲ್ವೆ ಪಟ್ಟಿ (ಹಳಿ) ಯು ಜನರಿಂದ ದೂರ ದೂರವಾಗಿ ಕಾಡು, ಬೆಟ್ಟ – ಗುಡ್ಡ ಸೀಳಿಕೊಂಡು, ನದಿಯ ಅಂಚು, ಆಳವಾದ ಕಮರಿಯನ್ನು ಬಳಸಿಕೊಂಡು ಹೋಗಿರುವ ಈ ಲೈನ್ ಇವತ್ತು ಸುರಕ್ಷಿತವಾಗಿದೆ ಎಂದರೆ ಇವರ ಶ್ರಮದ ಬೆವರಿನ ಫಲವಲ್ಲದೆ ಬೇರೆನು ಅಲ್ಲ.
ಹಾಗಾದರೆ ರೈಲ್ವೆ ಟ್ರ್ಯಾಕ್ ಪ್ರೋಟೆಕ್ಟರ್ ಗಳ ಅಥವಾ ಗ್ಯಾಂಗ್ ಗಳ ಕರ್ತವ್ಯವೇನು ಎಂದು ಅವಲೋಕನ ಮಾಡಿದಾಗ…
ಬೆಳಿಗ್ಗೆ 6:30 ಕ್ಕೆ ಅವರ ಕರ್ತವ್ಯ ಪ್ರಾರಂಭವಾಗಿ ಸುಮಾರು ಎಂಟರಿಂದ ಹತ್ತು ಕಿಲೋಮೀಟರ್ ದೂರದ ರೈಲು ಪಟ್ಟಿಯನ್ನು ಅವರು ತದೇಕಚಿತ್ತದಿಂದ ಸುರಕ್ಷಿತವಾಗಿದೆಯೇ..? ನಟ್ಟು ಬೋಲ್ಟುಗಳು ಸಡಿಲಗೊಂಡಿವೆಯೇ..?? ಅದರಲ್ಲಿ ಏನಾದರೂ ಲೋಪದೋಷವಿದೆಯೇ…?? ಎಂದು ಪರೀಕ್ಷಿಸುತ್ತಾರೆ. ಇದನ್ನು ಪರೀಕ್ಷಿಸುವಾಗ ಅವರು ರೈಲ್ವೆ ಪಟ್ಟಿಯ (ಹಳಿ) ಕಲ್ಲುಗಳನ್ನು ತುಳಿದುಕೊಂಡೆ ಹೆಜ್ಜೆ ಹಾಕಬೇಕು. ಕೇವಲ ಬರಿಗೈಯಿಂದ ಹೆಜ್ಜೆ ಹಾಕುವುದಲ್ಲ, ಬೆನ್ನ ಹಿಂದಿನ ಚೀಲದಲ್ಲಿ ಸುಮಾರು 8 ರಿಂದ 10 ಕಬ್ಬಿಣದ ಸಲಕರಣೆಗಳಿದ್ದು ಅವುಗಳು ಸುರಕ್ಷತೆಗಾಗಿ ಬೇಕಾಗಿರುವ ಪರಿಕರಗಳು. ಸಡಿಲಗೊಂಡ ನಟ್ಟನ್ನು ಬಿಗಿ ಮಾಡುತ್ತಾ, ಪಟ್ಟಿಯ ಅಂಚುಗಳಿಗೆ ಸುತ್ತಿಗೆಯಿಂದ (ಗನ್ನನಿಂದ) ಬಡಿಯುತ್ತಾ ಅದನ್ನು ಯಥಾಸ್ಥಿತಿಗೆ ಉಳಿಸುತ್ತಾ, ಪ್ರತಿಯೊಂದು ಹಂತದಲ್ಲಿಯೂ ಕೂಡ ವ್ಯತ್ಯಾಸವಾಗದಂತೆ ಅವರು ನೋಡಿಕೊಳ್ಳುತ್ತಾರೆ. ಇಂದು ನಾವು ಸುರಕ್ಷಿತವಾದ ರೈಲು ಪ್ರವಾಸವನ್ನು ಮಾಡುತ್ತೇವೆಂದರೆ ಅವರನ್ನು ನೆನಪು ಮಾಡಿಕೊಳ್ಳಲೇಬೇಕು..!!
ಅವರು ಕೇವಲ ಹಗಲಿನಲ್ಲಿ ಅಷ್ಟೇ ಅಲ್ಲ ರಾತ್ರಿಯೂ ಸರದಿ ಪ್ರಕಾರ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಾರೆ. ಕಾಲ ಕಾಲಕ್ಕೆ ಆಯಾ ರೈಲ್ವೆ ನಿಲ್ದಾಣಗಳ ಮಾಸ್ಟರ್ ಗಳಿಗೆ, ಮೇಲ್ವಿಚಾರಕರಿಗೆ ಸೂಚನೆಗಳನ್ನು ಒದಗಿಸುತ್ತಾರೆ. ಏನಾದರೂ ಅಪಾಯದ ಸೂಚನೆಗಳು ಕಂಡು ಬಂದರೆ ತೀವ್ರಗತಿಯಿಂದ ಫೋನ್ ಮುಖಾಂತರ ಅವರಿಗೆ ವಿಷಯವನ್ನು ತಲುಪಿಸುತ್ತಾರೆ. ನಂತರ ರೈಲಿನ ಸಂಚಾರವನ್ನು ನಿಲ್ಲಿಸಿ, ಆ ಹಳಿಯನ್ನು ಸುರಕ್ಷಿತವಾಗಿ ಸರಿಪಡಿಸಿ ಮತ್ತೆ ಪಯಣಕ್ಕೆ ಅಣಿಗೊಳಿಸುತ್ತಾರೆ. ನಿಜವಾಗಿಯೂ ಇವರ ಕರ್ತವ್ಯನಿಷ್ಠೆಗೆ ನಾವು ತಲೆದೂಗಲೇಬೇಕು.
ಬಿರುಸಾಗಿ ಬರುವ ಮಳೆಗೆ ಮೈಂಡಿಕೊಂಡು ಕಲ್ಲುಗಳನ್ನು ತುಳಿಯುತ್ತಾ, ರೈಲ್ವೇ ಸುರಕ್ಷತೆಗಾಗಿ ಸದಾ ಶ್ರಮಿಸುತ್ತಿರುವ ಇವರು ಉರಿಯುವ ಬಿಸಿಲಿಗೂ ಜಗ್ಗುವುದಿಲ್ಲ. ಕೊರೆಯುವ ಚಳಿಯೂ ಇವರನ್ನು ಏನು ಮಾಡುವುದಿಲ್ಲ. ಸದಾ ಹಗಲು ಇರುಳೆನ್ನದೆ, ಮಳೆ, ಬಿಸಿಲು, ಚಳಿಯನ್ನದೆ ಕಾಡಿನ ಮಧ್ಯದಲ್ಲಿಯೂ ಒಬ್ಬಂಟಿಯಾಗಿ ಸದಾ ಹಳಿಗಳನ್ನು (ರೈಲ್ವೆ ಪಟ್ಟಿಗಳನ್ನು) ಸುರಕ್ಷಿತವಾಗಿರುವುದಕ್ಕೆ ಅವರು ಪರಿಶ್ರಮಪಡುತ್ತಿರುತ್ತಾರೆ.
ಬದುಕಿನ ಅನಿವಾರ್ಯತೆಗೆ ಅವರು ಉದ್ಯೋಗವನ್ನು ಮಾಡಿದರೂ ಕೂಡ ಕರ್ತವ್ಯನಿಷ್ಠೆ, ಜವಾಬ್ದಾರಿಗಳು ಅವರ ಹಿರಿಮೆಯನ್ನು ಹೆಚ್ಚಿಸಿವೆ. ರೈಲ್ವೆ ಇಲಾಖೆಯಲ್ಲಿ ವಿವಿಧ ವಿಭಾಗಗಳಲ್ಲಿ ಇವರನ್ನು ನೋಡುವ ದೃಷ್ಟಿಕೋನ ಕೆಟ್ಟದಾಗಿರುತ್ತದೆ. ಈ ಸಮಾಜದಲ್ಲಿ ಯಾರು ಅತ್ಯಂತ ಶ್ರಮದಿಂದ ದುಡಿಯುತ್ತಾರೋ ಬೆವರು ಹರಿಸುತ್ತಾರೋ ಅವರನ್ನು ನೋಡುವ ದೃಷ್ಟಿಕೋನವೇ ಕೆಳಮಟ್ಟದ್ದು..!! ಯಾವುದೇ ಇಲಾಖೆಯ ಉದ್ಯೋಗಿಗಳಲ್ಲಿ ಕೊನೆಯ ಘಟ್ಟದ ಉದ್ಯೋಗಿಗಳಿಗೆ ನಿಜವಾಗಿ ಸಲ್ಲಬೇಕಾದ ಗೌರವ ಸಲ್ಲುವದೆ ಇಲ್ಲ. “ಕಾಯಕವೇ ಕೈಲಾಸ” ವೆಂದ ಬಸವಣ್ಣನವರ ಮಾತು ಕೇವಲ ಮಾತಾಗಿ ಉಳಿಯುತ್ತದೆ.
ಎಲ್ಲಾ ನೌಕರರಂತೆ ಇವರು ಕೂಡ ರೈಲ್ವೆ ನೌಕರರೆಂದರೂ ಅದೇ ಇಲಾಖೆಯ ನೌಕರರು ಅವರನ್ನು ಕನಿಷ್ಠ ಮನಸ್ಥಿತಿಯಿಂದ ಕಾಣುವ ವಾಡಿಕೆ ಇಂದಿಗೂ ಇದೆ. ನಿಜವಾಗಿಯೂ ಹಾಗೆ ನೋಡಿದರೆ ರೈಲ್ವೆ ಇಲಾಖೆಯ ಎಲ್ಲರೂ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಾರೆಂದರೆ ಅದಕ್ಕೆ ಮುಖ್ಯ ಕಾರಣ ರೈಲ್ವೆ ಟ್ರ್ಯಾಕ್ ಪ್ರೊಟೆಕ್ಟರ್ ಅಥವಾ ಗ್ಯಾಂಗ್ ಮನ್ ಗಳು..!!
ಹೀಗೆ.. ರೈಲ್ವೆ ಉದ್ಯೋಗಿಯಾಗಿದ್ದು ಸಮಾಜದಲ್ಲಿ ಪ್ರತಿಷ್ಠೆಯ ಉದ್ಯೋಗಿ ಎನಿಸಿಕೊಂಡರೂ ಇಲಾಖೆಯ ನೌಕರರ ನಡುವೆ ಪರಕೀಯರಂತೆ ಕರ್ತವ್ಯ ನಿರ್ವಹಿಸುತ್ತಾರೆ. ಅವರನ್ನು ಕೂಡ ಆ ರೈಲ್ವೆ ಇಲಾಖೆಯ ನೌಕರರು ಗೌರವದಿಂದ ಕಾಣಬೇಕಾಗಿರುವುದು ಇವರ ಆದ್ಯ ಕರ್ತವ್ಯ. ಸಮಾಜ ಬೆವರ ಹನಿಗಳಿಗೆ ಬೆಲೆ ಕೊಡುವುದೇ ಇಲ್ಲ. ನಿಜವಾಗಿಯೂ ಬೆವರ ಹನಿಗಳಿಂದಲೇ ಫಲ ಎನ್ನುವುದನ್ನು ಮರೆತುಬಿಡುತ್ತಾರೆ. ರೈಲ್ವೆ ಇಲಾಖೆಯ 8 ವಿಭಾಗಗಳಲ್ಲಿ ಇವರ ವಿಭಾಗವನ್ನು “ಇಂಜಿನಿಯರ್ ವಿಭಾಗ”ವೆಂದು ಕರೆಯುತ್ತಾರೆ. ಇದರಲ್ಲಿ ಸೀನಿಯರ್ ಎಂಜಿನಿಯರ್ ಅವರಿಂದ ಹಿಡಿದು ಕೊನೆಯ ಹಂತದ ರೈಲ್ವೆ ಟ್ರ್ಯಾಕ್ ಪ್ರೊಟೆಕ್ಟ್ ರವರೆಗೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಆದರೆ…
ಈ ರೈಲ್ವೆ ಪ್ರೋಟೆಕ್ಟರ್ ಇವರನ್ನು ಅತ್ಯಂತ ಕನಿಷ್ಠ ಮಟ್ಟದಿಂದ ನೋಡುವುದನ್ನು ಬಿಡಬೇಕಾಗಿದೆ.
ಸಮಾಜದ ಪ್ರತಿ ಏಳಿಗೆಯಲ್ಲಿ ಎಲ್ಲರ ಶ್ರಮವು ಮುಖ್ಯ. ಉತ್ಪಾದನಾ ವಲಯವಿರಲಿ, ವೆಚ್ಚದಾಯಕ ವಲಯವಿರಲಿ ಯಾವುದೇ ವಲಯವೂ ಶ್ರಮಿಕರ ಹೊರತುಪಡಿಸಿ ಇರುವುದಿಲ್ಲ. ಶ್ರಮಿಕರು ಬೆವರಿನ ಒಡೆಯರು. ಇಂತಹ ಶ್ರಮಿಕ ರೈಲ್ವೆ ಪ್ರೋಟೆಕ್ಟರ್ ಅಥವಾ ಗ್ಯಾಂಗಮನ್ ಗಳು…ಎಲ್ಲರಂತೆ ಅವರಿಗೂ ಗೌರವ ಸಿಗಲಿ. ಸರ್ಕಾರದ ಸೌಲಭ್ಯಗಳು ದೊರಕುವಂತಾಗಲೆಂದು ಶುಭವಾಗಲೆಂದು ಹಾರೈಸುವೆನಷ್ಟೇ…
ರಮೇಶ ಸಿ ಬನ್ನಿಕೊಪ್ಪ ಹಲಗೇರಿ