ಅಂಕಣ ಬರಹ

ಕ್ಷಿತಿಜ

ಭಾರತಿ ನಲವಡೆ

ವಾತ್ಸಲ್ಯ

‘ಕಾಲಾಯತಸ್ಮೈ ನಮಃ’ ಎಂಬಂತೆ ಕಾಲಘಟ್ಟವು ಪರಿವರ್ತನೆಯ ಪಥದಿ ವೈಚಾರಿಕತೆ,ಮೌಲ್ಯಗಳು,ಸಂಸ್ಕ್ರತಿ ಹೀಗೆ ‌‌‌‌ ತನ್ನದೇ ಆದ ವಿಸ್ತಾರದೊಂದಿಗೆ ವೈಶಿಷ್ಟ್ಯವನ್ನು ಓರೆಗಚ್ಚಿ ಮಾನವೀಯತೆಗೆ ಎಳ್ಳು ನೀರು ಬಿಟ್ಟಂತಾಗಿವೆ.
ಆಧುನಿಕ ಜಗತ್ತಿನಲ್ಲಿ ಕೌಟುಂಬಿಕ ಜಾಲದಲ್ಲಿ ಬಾಂಧವ್ಯಗಳು ಆತ್ಮೀಯತೆ ಇಲ್ಲದೇ ವ್ಯಾವಹಾರಿಕತೆಯೆಡೆ ಸಾಗುತ್ತಿವೆ.
ಹುಟ್ಟಿದಂದಿನಿಂದ ನಮ್ಮನ್ನು ಪ್ರೀತಿಯಿಂದ ಸಲುಹಿದ ಹೆತ್ತವರನ್ನು ಅವರ ವೃದ್ಧಾಪ್ಯದಲಿ ಕಾಳಜಿಯಿಂದ ಪೊರೆಯಬೇಕಾಗಿರುವದು ನಮ್ಮ ಆದ್ಯ ಕರ್ತವ್ಯ ಎಂಬುದನ್ನು ಮರೆತು ಅನಾಗರೀಕರಂತೆ ವರ್ತಿಸುತ್ತಿರುವದು ತುಂಬಾ ಖೇದಕರವಾದ ಸಂಗತಿಯಾಗಿದೆ.

ಅವಿಭಕ್ತ ಕುಟುಂಬಗಳು ಮಾಯವಾಗಿವೆ. ವಿಭಕ್ತ ಕುಟುಂಬಗಳಲ್ಲಿ ಮಕ್ಕಳಿಗೆ ಅಜ್ಜ ಅಜ್ಜಿ,ಚಿಕ್ಕಪ್ಪಚಿಕ್ಕಮ್ಮ ,ದೊಡ್ಡಪ್ಪ ದೊಡ್ಡವ್ವ ಈ ಬಾಂಧವ್ಯದ ಕೊಂಡಿ ಕಳಚಿ ಕುಟುಂಬದಲ್ಲಿ ಅನ್ಯೋನ್ಯತೆಯ ಕೊರತೆ ಕಂಡು ಬರುತ್ತದೆ.

ಪ್ರತಿದಿನ ಲವಲವಿಕೆಯಿಂದ ಶಾಲೆಗೆ ಬರುತ್ತಿದ್ದ ಉಷಾ ಇತ್ತೀಚೆಗೆ ಮಂಕಾಗಿರುತ್ತಿದ್ದು ನನ್ನ ಗಮನಕ್ಕೆ ಬಂತು. ಅಧ್ಯಯನದಲ್ಲೂ ತುಸು ಆಸಕ್ತಿ ಕಡಿಮೆಯಾದಂತೆ ತೋರಿತು.ಅವಳ ಪಾಲಕರಿಗೆ ಕರೆ ಮಾಡಿ ಇದರ ಕುರಿತು ಚರ್ಚಿಸುವ ಮೊದಲು ಅವರೇ ನನ್ನ ಪ್ರಶ್ನೆಗೆ ಕುತೂಹಲಕ್ಕೆ ತೆರೆ ಎಳೆದಿದ್ದರು. ಉಷಾನ ತಂದೆಗೆ ಒಬ್ಬ ತಮ್ಮ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ಇವಳ ತಂದೆ ಹಳ್ಳಿಯಲ್ಲಿದ್ದು ಜಮೀನು ನೋಡಿಕೊಂಡು ತಂದೆ ತಾಯಿಯರನ್ನು ನೋಡಿಕೊಳ್ಳುತ್ತಿದ್ದರು. ಉಷಾಳ ಚಿಕ್ಕಮ್ಮ ಕೂಡ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದುರರಿಂದ ಈ ಬಾರಿ ಗಣೇಶ ಚತುರ್ಥಿಗೆ ಬಂದ ಅವಳ ಚಿಕ್ಕಪ್ಪ ತನ್ನ 2 ವರ್ಷದ ಮಗಳನ್ನು ನೋಡಿಕೊಳ್ಳುವ ಕೆಲಸಕ್ಕೆ ಯಾರೂ ಸಿಗದೇ ಇದ್ದುದರಿಂದ ಉಷಾಳ ತಂದೆಗೆ ಹೇಳಿ ಅಜ್ಜ ಅಜ್ಜಿ ಇಬ್ಬರನ್ನು ಕರೆದೊಯ್ದಿದ್ದ. ಉಷಾಳಿಗೆ ಅಜ್ಜಿ ಪ್ರತಿದಿನ ಕಥೆ ಹೇಳುತ್ತಿದ್ದಳು ರಂಗೋಲಿ ಹಾಕಲು ಕಲಿಸುತ್ತಿದ್ದಳು. ಪೂಜೆಗೆ ಅಣಿಮಾಡಲು ತಿಳಿಸುತ್ತಿದ್ದಳು.ಅಜ್ಜ ಒಬ್ಬ
ಸ್ವಾತಂತ್ರ್ಯಹೋರಾಟಗಾರನಾಗಿದ್ದರಿಂದ ತನ್ನ ಹೋರಾಟದ ಜೀವನದ ಕುರಿತು ಉಷಾಳ ಅಭ್ಯಾಸದ ನಂತರ ಹೇಳುತ್ತ ಮನೆ ಹಿಂದಿನ ತೋಟದಲ್ಲಿ ನೆಟ್ಟ ಸಸಿಗಳ, ಹಣ್ಣಿನ ಮರ,ಆಲದಮರದ ಉಪಯೋಗಗಳ ಬಗ್ಗೆ ತಿಳಿಸುತ್ತಿದ್ದ.ಅದನ್ನು ಉಷಾ ತನ್ನ ಗೆಳತಿಯರಿಗೆ ಹೇಳಿ ಅವರಲ್ಲಿ ಕೌತುಕವನ್ನು ಮೂಡಿಸುತ್ತಿದ್ದಳು. ಅಜ್ಜ ಅಜ್ಜಿ ಊರಿಗೆ ಹೋದದಂದಿನಿಂದ ಹೀಗೆ ಗೆಲುವಿಲ್ಲದಂತೆ ಆಡುತ್ತಿದ್ದಾಳೆ ಎಂದು ಅರ್ಥವಾದಾಗ ಹಿರಿಯರಿದ್ದ ಮನೆಯ ಸಂಸ್ಕಾರ ಮುಂದಿನ ತಲೆಮಾರಿಗೆ ಸಾಗಿಸುವಲ್ಲಿ ಪ್ರೀತಿ, ವಾತ್ಸಲ್ಯದ ಕ್ಷಣಗಳು ಮಕ್ಕಳಲ್ಲಿ ಶೃದ್ದೆ, ಶಿಸ್ತು, ಸಹಕಾರ, ಜವಾಬ್ದಾರಿ ಹೀಗೆ ಹಲವಾರು ಅಂಶಗಳನ್ನು ಮಕ್ಕಳಲ್ಲಿ ಹುಟ್ಟುಹಾಕುತ್ತಿದ್ದವು.


ಇನ್ನು ಕೆಲವು ಸಂದರ್ಭಗಳಲ್ಲಿ ಹೆತ್ತವರನ್ನು ಜೀವನದ ಸಂಜೆಯ ಕಾಲದಲ್ಲಿ ಐಷಾರಾಮಿ ಸೌಲಭ್ಯಗಳಿರುವ ವೃದ್ಧಾಶ್ರಮಗಳಲ್ಲಿ ಸೇರಿಸಿರುವದನ್ನು ಮಕ್ಕಳು ತಮ್ಮ ಸಾಧನೆ ಎಂಬಂತೆ ಬಿಂಬಿಸುತ್ತಾರೆ.ಆದರೆ ಹೆ
ಎಷ್ಟೋ ಸೌಲಭ್ಯಗಳಿದ್ದರೂ ಹೆತ್ತವರಿಗೆ ಅತ್ಯಮೂಲ್ಯವಾಗಿ ಬೇಕಾಗಿರುವದು ವಾತ್ಸಲ್ಯ. ವಾತ್ಸಲ್ಯದ ಕೊರತೆಯನ್ನು ನೀಗಿಸಲಾಗುವದಿಲ್ಲ ಎಂಬ ಕಟು ಸತ್ಯವಾಗಲಿ, ವೃದ್ಧಾಪ್ಯದಲ್ಲಿ ಅವಶ್ಯವಾಗಿ ಬೇಕಾದ ಸಮಾಧಾನ, ಶಾಂತಿ, ಮಕ್ಕಳ ಪ್ರೀತಿ ವಾತ್ಸಲ್ಯ,ಕೌಟುಂಬಿಕ ಪರಿಸರ,ಮೊಮ್ಮಕ್ಕಳ ಒಡನಾಟ ಇವೆಲ್ಲವುಗಳಿಂದ ವಂಚಿತರಾಗುವ ಹಿರಿಯರ ಮನದ ಬೇಗುದಿ ಇಂದಿನ ಯುವತಲೆಮಾರಿಗೆ ಅರಿವಾಗುತ್ತಿಲ್ಲ. ಅಂದಿನ ಅವಿಭಕ್ತ ಕುಟುಂಬಗಳಲ್ಲಿ ಅಜ್ಜ-ಅಜ್ಜಿಯಂದಿರು ಮೊಮ್ಮಕ್ಕಳಿಗೆ ಕಥೆ ಹೇಳಿ ನೈತಿಕ ಸಂಸ್ಕಾರ ನೀಡುತ್ತಿದ್ದರು.ಸುಖ-ದುಃಖ ಹಂಚಿಕೊಂಡು ಮಾನವೀಯ ಅಂಶಗಳನ್ನು ಬೆಳೆಸುತ್ತಿದ್ದರು.ಅವರ ಅನುಭವ, ಮಾರ್ಗದರ್ಶನ ಎಲ್ಲವೂ ಅನಿವಾರ್ಯವಾಗಿತ್ತು.ವೃದ್ಧರನ್ನು ಗೌರವದಿಂದ ಕಾಣುತ್ತಿದ್ದ ಕಿರಿಯರ ಭಾವನೆ ಇಂದು ಬದಲಾಗಿದೆ.ವಿಭಕ್ತ ಕುಟುಂಬದ ಕಲ್ಪನೆ,ಕನಸು,ಸಾಕಾರಗಳಲ್ಲೇ ಬೆಳೆದು ತಾಯಿಯಾದವಳು ತನ್ನ ಮಗುವಿಗೆ ಅಜ್ಜ-ಅಜ್ಜಿ,ಅತ್ತೆ,ದೊಡ್ಡಮ್ಮ ಹೀಗೆ ತನ್ನ ಹಿರಿಯರ ಬಗ್ಗೆ ಗೌರವ ಕೊಡುವುದನ್ನು ಕಲಿಸಿದರೆ ಬಹುಶಃ ಮುಂದೆ ಈ ಗತಿ ಬರಲಾರದೇನೊ.ನಮ್ಮಲ್ಲಿ ಈ ಅವಸ್ಥೆಯನ್ನು ಪ್ರಬುದ್ಧ ಮನೋಭಾವದಿಂದ ಸ್ವೀಕರಿಸಬೇಕೆಂದು ವೇದ, ಉಪನಿಷತ್ತುಗಳು ಹೇಳಿದ್ದರೂ ಅದಕ್ಕೆ ಸೂಕ್ತ ಮನೋಧೋರಣೆ ಬಾಲ್ಯದಿಂದಲೇ ಮೂಡಿ ಬರಬೇಕು.ಕೆಲಸದಿಂದ ನಿವೃತರಾದ ಮೇಲೆ ಮಾನಸಿಕವಾಗಿಯೂ ಬೇರೇನೂ ಸೃಜನಶೀಲಚಟುವಟಿಕೆಯಿಲ್ಲದೇ ಮೂಲೆಗುಂಪಾಗಿ ಬಿಡುವ ವೃದ್ಧರನ್ನು ಕೋಡುವ ಭಯ,ಒಂಟಿತನ, ಅಭದ್ರತೆ,ಶೂನ್ಯತೆ ಇವೆಲ್ಲವುಗಳನ್ನು ಮೀರಿ ನಿಲ್ಲುವಂತ ಸ್ನೇಹದ ಅಗತ್ಯವಿದೆ.

ಹೆತ್ತವರಿಗೆ ದೈವಿಕ ಸ್ವರೂಪ ನೀಡಿ, ದೇಹವಿಲ್ಲದ ಆತ್ಮಗಳಿಗೆ ತರ್ಪಣ ನೀಡುವ ಸಂಸ್ಕ್ರತಿಗಿಂತಲೂ ಜೀವಾತ್ಮವನ್ನು ಹೊತ್ತ ದೇಹಗಳಿಗೆ ಸಾಝತ್ವನ ನೀಡುವ ಸಂಸ್ಕ್ರತಿಯನ್ನು ಬೆಳೆಸುವದು ಇಂದಿನ ಅನಿವಾರ್ಯತೆಯಾಗಿದೆ. ಅಗೋಚರ,ಅತೀತ,ಕಲ್ಪನೆಗಳಿಗೆಲ್ಲ ಮಾತೃ ಸ್ವರೂಪವನ್ನು ನೀಡಿ ಆರಾಧಿಸುವ ಸಮಾಜದಲ್ಲಿ ಹೆತ್ತ ತಾಯಿಯನ್ನೇ ಕಡೆಡಣಿಸುವ ಪರಂಪರೆ ಸದ್ದಿಲ್ಲದೆ ಬೆಳೆಯುತ್ತಿರುವುದೇ ವಿಪರ್ಯಾಸ. ಬೇರೆಯವರು ಬೇಡ ಕೊನೆ ಪಕ್ಷ ನಮ್ಮ ಹೆತ್ತ ತಂದೆ ತಾಯಿಯನ್ನಾದರೂ ಅವರ ವೃದ್ಧಾಪ್ಯದ ಕಾಲದಲ್ಲಿ ಒಡಲ ಕಪ್ಪೆಚಿಪ್ಪಿನ ಮುತ್ತಾಗಿ ನೋಡಿಕೊಳ್ಳುವದು ನಮ್ಮ ಧರ್ಮ ಅಲ್ಲವೇ?


ಭಾರತಿ ನಲವಡೆ

ಶ್ರೀಮತಿ ಭಾರತಿ ಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮಂಗಳವಾಡದಲ್ಲಿ ಸಹಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು
2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.
ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ
ರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾ ಸಾಹಿತ್ಯ ಪುರಸ್ಕಾರ 2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ
6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆ ಸಲ್ಲಿಸುತ್ತಿದ್ದಾರೆ

3 thoughts on “

  1. ಹೆತ್ತ ವರ ಕಾಳಜಿ ಬಗ್ಗೆ ಬೆಳಕು ಚಲ್ಲುವ ಲೇಖನ ಅಭಿನಂದನೆಗಳು

Leave a Reply

Back To Top