ಅಂಕಣ ಸಂಗಾತಿ
ಸುಜಾತಾ ರವೀಶ್
ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು
ಕಪ್ಪು ಮೋಡ ಬೆಳ್ಳಿಯಂಚು =ಕಾದಂಬರಿ
ಲೇಖಕಿ _ ವೈ ಕೆ ಸಂಧ್ಯಾಶರ್ಮ
ಕಪ್ಪು ಮೋಡ ಬೆಳ್ಳಿಯಂಚು =ಕಾದಂಬರಿ
ಲೇಖಕಿ _ ವೈ ಕೆ ಸಂಧ್ಯಾಶರ್ಮ
ಪ್ರಕಾಶಕರು _ ಸಹನ ಪ್ರಕಾಶನ
ಪ್ರಥಮ ಮುದ್ರಣ_ ೨೦೧೪
ಬಹುಮುಖ ಪ್ರತಿಭೆಯ ಶ್ರೀಮತಿ ವೈ ಕೆ ಸಂಧ್ಯಾಶರ್ಮ ಕನ್ನಡ ಸಾಹಿತ್ಯದಲ್ಲಿ ಅಗ್ರಸ್ಥಾನದಲ್ಲಿ ಕಂಗೊಳಿಸುವ ಹೆಸರು. ವೈ ಕೆ ಕೇಶವಮೂರ್ತಿ ಮತ್ತು ವೈ ಕೆ ಅಂಬಾಬಾಯಿಯವರ ಸುಪುತ್ರಿ . ಪ್ರೌಢಶಾಲೆಯಲ್ಲಿದ್ದಾಗಲೇ ಬರಹ ಆರಂಭಿಸಿದವರು. ಕರ್ನಾಟಕ ವಾರ್ತಾ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು. “ಆಡು ಮುಟ್ಟದ ಸೊಪ್ಪಿಲ್ಲ” ಎಂಬ ಗಾದೆ ಇವರಿಗೆಂದೇ ಹೇಳಿಮಾಡಿಸಿದ ಹಾಗಿದೆ. ಆಕಾಶವಾಣಿ ದೂರದರ್ಶನದಲ್ಲಿ ಮಾನ್ಯತೆ (auditioned) ಪಡೆದ ಕಲಾವಿದೆ. ಆಕಾಶವಾಣಿಯಲ್ಲಿ ನೂರೈವತ್ತಕ್ಕೂ ಹೆಚ್ಚು ಕಾರ್ಯಕ್ರಮಗಳು ಹಾಗೂ ದೂರದರ್ಶನದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ನಾಟಕಾಸಕ್ತಿಯಿರುವ ಇವರು ಮೂವತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಪಾತ್ರವಹಿಸಿದ್ದಾರೆ. “ಸಂಧ್ಯಾ ಕಲಾವಿದರು” (೧೯೭೭)ಹವ್ಯಾಸಿ ನಾಟಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ . ಇವರ ಇತರ ಹವ್ಯಾಸಗಳು ಶಾಸ್ತ್ರೀಯ ಕೂಚುಪುಡಿ ನೃತ್ಯ ಕಲಿಕೆ ,ಜಾನಪದ ನೃತ್ಯ ಹಾಗೂ ನೃತ್ಯರೂಪಕ ಪ್ರಭಾತ್ ಕಲಾವಿದರು (ಬ್ಯಾಲೆ) ಗಳಲ್ಲಿ ಪಾಲ್ಗೊಂಡ ಅನುಭವ. ಶಾಲಾ ಕಾಲೇಜು ದಿನಗಳಿಂದಲೂ ಚಿತ್ರಕಲೆ ಪೇಂಟಿಂಗ್ ಗಳ ರಚನೆ ಪ್ರದರ್ಶನ ಮತ್ತು ಬಹುಮಾನ ಗಳಿಕೆ . ಅಭಿನವ ಪ್ರಕಾಶನ (೧೯೭೮)ಎಂಬ ಪ್ರಕಾಶನ ಸಂಸ್ಥೆಯ ಸ್ಥಾಪಕಿ. ಪ್ರಜಾಮತ ವಾರಪತ್ರಿಕೆ (೧೯೭೫೭೬)ಮತ್ತು ಪ್ರಜಾಪ್ರಭುತ್ವ ವಾರಪತ್ರಿಕೆ (೧೯೭೭೭೮)ಮತ್ತು ಇಂಚರ ಮಾಸ ಪತ್ರಿಕೆಯ(೧೯೮೦_೮೨) ಸಹಾಯಕ ಸಂಪಾದಕಿಯಾಗಿ ಸೇವೆ . ಕಳೆದ ೫೨ ವರ್ಷಗಳಿಂದ ಸುಮಾರು ಇನ್ನೂರೈವತ್ತು ಸಣ್ಣಕತೆಗಳು, ೩೫ ಕಾದಂಬರಿಗಳು, ಇನ್ನೂರಕ್ಕೂ ಹೆಚ್ಚು ಕವನಗಳು, ಬರಹಗಳು, ವಿಮರ್ಶೆ ನಾಟಕ ಜೀವನ ಚರಿತ್ರೆ ಮತ್ತು ಸುಮಾರು 8೦೦ ನಾಟಕ ನೃತ್ಯ ವಿಮರ್ಶಾ ಲೇಖನಗಳು ಮತ್ತು ಇತರ ಲೇಖನಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟವಾಗಿದೆ .
ಕಿರುಗುಟ್ಟುವ ದನಿಗಳು(೧೯೭೯) ತಾಳತಪ್ಪಿದ ಮೇಳ(೧೯೮೪) ಬೆಳಕಿಂಡಿ(೧೯೯೭) ಆಗಂತುಕರು ಮತ್ತು ಚಿತ್ರವಿಲ್ಲದ ಚೌಕಟ್ಟು(೨೦೨೧) ಇವರ ಪ್ರಕಟಿತ ಕಥಾಸಂಕಲನಗಳು .ಪರಿವೇಶ ಪರಿಭ್ರಮಣ ಕವಣೆ ಕಲ್ಲು, ಚೈತ್ರ ಪಲ್ಲವಿ ಮುಂತಾದುವು ಕಾದಂಬರಿಗಳು. ಉರಿದುಹೋದ ಕನಸುಗಳು(೨೦೦೪) ಕವನ ಸಂಕಲನ. ರಂಗಾಂತರಂಗ ರಂಗವಿಮರ್ಶೆ ಗಳ ನಾಟ್ಯಾಂತರಂಗ ನೃತ್ಯ ವಿಮರ್ಶೆಗಳ ಸಂಕಲನ .
ಇವರ ಸಾಧನೆಗಳ ಫಲವಾಗಿ ಬಂದಿರುವ ಪ್ರಶಸ್ತಿ ಗೌರವಗಳು ಅನೇಕ . ಮುಖ್ಯವಾದವು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ಕೆನರಾ ಬ್ಯಾಂಕ್ ಪ್ರಶಸ್ತಿ ವಿಚಾರಸಾಹಿತ್ಯ ಮಹಿಳೆ ಮತ್ತು ಉದ್ಯೋಗ ಬೆಳಕಿಂಡಿ ಕಥಾಸಂಕಲನಕ್ಕೆ (೧೯೭೫)ಅತ್ಯುತ್ತಮ ಪುಸ್ತಕ ಪ್ರಶಸ್ತಿ ಗೊರೂರು ಪ್ರತಿಷ್ಠಾನ ದಿಂದ ಪಂಜೆ ಮಂಗೇಶರಾಯ ಪ್ರಶಸ್ತಿ(೨೦೦೧) ವಿಶ್ವೇಶ್ವರಯ್ಯ ಸಾಹಿತ್ಯ ಪ್ರತಿಷ್ಠಾನದಿಂದ ಸರ್ ಎಂ ವಿಶ್ವೇಶರಯ್ಯ ಅಂತಾರಾಷ್ಟ್ರೀಯ ಪ್ರಶಸ್ತಿ ಬೆಂಗಳೂರು ಮಹಾನಗರ ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ ಅತ್ತಿಮಬ್ಬೆ ಪ್ರಶಸ್ತಿ (೨೦೦೪)ಮುಂತಾದುವು .ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಗೌರವ ಇದು ಇಲ್ಲಿಗೆ ಮುಗಿಯದ ಪಟ್ಟಿ .
ಪ್ರಸ್ತುತ ಕಪ್ಪುಮೋಡ ಬೆಳ್ಳಿಯಂಚು 2 ಕಿರುಕಾದಂಬರಿಗಳ ಸಂಕಲನ. ಶೀರ್ಷಿಕೆಯ ಹೆಸರಿನ ಕಥೆ ಮೃದು ಸ್ವಭಾವದ ರಾಧಾ ಎಂಬ ಮಧ್ಯಮ ವರ್ಗದ ಗೃಹಿಣಿಯ ವ್ಯಥೆ. ತಂದೆ ತಾಯಿಯಿರದೆ ಅಣ್ಣ ಅತ್ತಿಗೆಯರು ನೋಡಿ ನಾಣಿ (ನಾರಾಯಣ) ನ ಜೊತೆ ಮದುವೆ ಮಾಡುತ್ತಾರೆ . ವಿಧವೆ ಅತ್ತಿಗೆ ಜಾನಕಿ ಡಾಕ್ಟರ್ ಓದುವ ನಾದಿನಿ ಭಾಮಾ ಮತ್ತು ಘಟವಾಣಿ ಅತ್ತೆ ಸುಂದರಾಬಾಯಿ ಇವರ ಮಧ್ಯ ಅಡಕೊತ್ತಿಗೆಗೆ ಸಿಕ್ಕಿದ ಅಡಕೆಯಂತೆ, ಗಾಣಕ್ಕೆ ಕಟ್ಟಿದ ಮೂಕೆತ್ತಿನಂತೆ ನಲುಗುತ್ತಿರುತ್ತಾಳೆ.. . ವಿಚಿತ್ರ ಸ್ವಭಾವದ ನಾಣಿ ತಾಯಿಗೆ ವಿಧೇಯ ಮಗ .ಹೆಂಡತಿಯ ಕಡೆ ಪ್ರೀತಿ ತೋರಿಸುವುದಿರಲಿ ಅವಳ ಕಷ್ಟಕ್ಕೆ ಸ್ಪಂದಿಸದೆ ಕಣ್ಣೆತ್ತಿಯೂ ನೋಡದವ. ಈ ಮಧ್ಯೆ ರಾಧಾ ಗರ್ಭಿಣಿಯಾದರೂ ಈ ಕೆಲಸಗಳ ಭರಾಟೆಯಲ್ಲಿ ಗರ್ಭ ಇಳಿದುಹೋಗುತ್ತದೆ. ಕಡೆಗೆ ಗಂಡ ಹೆಂಡತಿ ಒಟ್ಟಿಗೆ ಇರಲು ಬಿಡದಂತೆ ಅತ್ತೆಯ ಅನುಶಾಸನ. ಹೀಗೆ ಬಸವಳಿದ ರಾಧಾಳ ಬಾಳಿನಲ್ಲಿ ನಾದಿನಿಯ ಗಂಡ ಪ್ರವೀಣ ಹಾಗೂ ಅವನ ತಂಗಿ ಪ್ರತಿಮಾ ತೋರುವ ಮಮತೆ ಸಹಾನುಭೂತಿ ಗಳೇ ಬೇಸಿಗೆಯ ಮಧ್ಯಾಹ್ನದ ತಂಗಾಳಿ. ಜಾನಕಿ ಮರುಮದುವೆಯಾಗಿ ಹೋಗುತ್ತಾಳೆ. ಅಹಂಕಾರಿ ಭಾಮಾ ಮೃದು ಸ್ವಭಾವದ ಗಂಡನ ಮೇಲೆ ದಬ್ಬಾಳಿಕೆ ಮಾಡಿ ವಿಚ್ಛೇದನ ಪಡೆಯುತ್ತಾಳೆ . ನಾಣಿಗೆ ಬೇರೆ ಊರಿಗೆ ವರ್ಗವಾದಾಗ ರಾಜಿಯನ್ನು ಕಳುಹಿಸದೆ ಅತ್ತೆ ತಮ್ಮ ಬಳಿಯೇ ಇರಿಸಿಕೊಳ್ಳುತ್ತಾರೆ. ಎಂದಿಗೂ ಮುಗಿಯದ ಬದುಕಿನ ಬವಣೆ ಬವರದಲ್ಲಿ ಸಿಕ್ಕಿದ ರಾಧೆಗೆ ಸುಖವೆಂಬುದು ಮರೀಚಿಕೆಯೇ? ಈ ಸಂಧರ್ಭದಲ್ಲಿ ಕಗ್ಗದ ಈ ಸಾಲು ನೆನಪಿಗೆ ಬರುತ್ತದೆ
ಅರೆಗಣ್ಣು ನಮದೆಂದು ಕೊರಕೊರಗಿ ಫಲವೇನು?
ಅರೆಬೆಳಕು ಧರೆಯೊಳೆಂದೊರಲಿ ಸುಖವೇನು? ಇರುವ ಕಣ್ಣಿರುವ ಬೆಳಕಿನೊಳಾದನಿತ ನೋಡಿ ಪರಿಕಿಸಿದೊಡದು ಲಾಭ _ ಮಂಕುತಿಮ್ಮ
ಕೊರಕೊರಗಿ ನವೆದು ಬಾಳ ಸವೆಸದೆ ತನ್ನ ಬಾಳಲ್ಲಿ ಒದಗಿಬಂದ ಮಿಂಚಿನ ರೇಖೆಯಂತಹ ಕಪ್ಪುಮೋಡದ ಬೆಳ್ಳಿಯಂಚನು ರಾಧೆ ಹಿಡಿಯುತ್ತಾಳೆಯೇ? ಮುಂದೆ ಅವಳ ಬದುಕಿನ ದಾರಿಯಲ್ಲಿ ನೆಮ್ಮದಿಯ ನೆರಳು ದೊರೆಯುತ್ತದೆಯೇ ? ತಿಳಿಯಲು ನೀವು ಮಾಡಬೇಕಾಗಿರುವುದು ಗೊತ್ತಲ್ಲ!
ಎರಡನೇ ಕತೆಯೇ ನಿರ್ಮಾಲ್ಯ. ಜಗತ್ತಿನ ಅತ್ಯಂತ ಪುರಾತನ ದಂಧೆ ಮೈಮಾರಿಕೊಳ್ಳುವುದು . ಯಾರಾದರೂ ಬಯಸೀ ಬಯಸೀ ಈ ಚಕ್ರವ್ಯೂಹ ದೊಳಗೆ ಅಡಿ ಇಡುವುದಿಲ್ಲ . ಅನಿವಾರ್ಯತೆ ಹೊಟ್ಟೆಪಾಡು ಮುಂದಡಿಯಿಡಲು ಪ್ರೇರೇಪಿಸಿದರೆ ಮತ್ತೆ ಹಿಂತಿರುಗಲಾಗದಂತೆ ಸಾಮಾನ್ಯ ಬದುಕಿನ ಬಾಗಿಲು ಬೀಗ ಜಡಿದಿರುತ್ತದೆ. ಇಲ್ಲಿನ ಕಥಾನಾಯಕಿ ದೀಪ ಅಂತಹ ಸ್ಥಿತಿಯಲ್ಲಿ ಕಸುಬಿಗೆ ಇಳಿದವಳು. ಮುಂದೆ ಬೇರೆಯವರಿಗಾಗಿ ಬದುಕು ಬೆತ್ತಲಾಗಿ ಸುವುದನ್ನು ಬಿಟ್ಟು “ವ್ರತಪಟ್ಟರೂ ಸುಖಪಡಬೇಕೆಂಬ” ತತ್ವ ಅನುಸರಿಸಿ ಪೂರ್ತಾ ಮುಳುಗಿಹೋಗುತ್ತಾಳೆ. ಅಸಹಾಯಕ ಹೆಣ್ಣುಗಳನ್ನು ಮರ್ಯಾದೆಯಾಗಿ ಬಾಳಲು ಬಿಡದೆ ತಮ್ಮ ಪಗಡೆಯ ದಾಳವನ್ನಾಗಿಸಿಕೊಳ್ಳುವ ವ್ಯವಸ್ಥೆಯ ವಾಸ್ತವಿಕ ಚಿತ್ರಣ ಇಲ್ಲಿದೆ. ಮನೆಯವರಿಗೆ ತನ್ನ ಬಗ್ಗೆ ತಿಳಿಯಬಾರದೆಂದು ದೂರದ ಮುಂಬಯಿಗೆ ಕೆಲಸ ಎಂಬ ನೆಪ ಹೇಳಿ ಬರುವ ದೀಪ ನಂತರ ಇಡೀ ಗಂಡು ಜಾತಿಯ ಮೇಲೆ ದ್ವೇಷ ತೀರಿಸಿಕೊಳ್ಳಲು ನಿಷ್ಣಾತಳಾದ ದುಬಾರಿ ಬೆಲೆವೆಣ್ಣಾಗುತ್ತಾಳೆ. ಕೆಲಸಕ್ಕೆಂದು ಮುಂಬಯಿಗೆ ತಾನುಿ ಬಂದಿದ್ದ ತನ್ನ ಅಣ್ಣ ಸುಧೀರನ ಮುಖಾಮುಖಿಯಾದಾಗ ಅವಳ ಹಾಗೂ ಸುಧೀರನ ಮಾನಸಿಕ ಸ್ಥಿತಿ ತುಮುಲ ಮುಂದೆ ಅವಳ ನಿರ್ಧಾರ ಏನೆಂದು ತಿಳಿಯುವ ಕುತೂಹಲವಿದ್ದರೆ ದಯವಿಟ್ಟು ಪುಸ್ತಕ ಓದಿ.
ಸೂಳೆ ಎಂದು ಮುಖ ತಿರುಗಿಸಿ ಜಿಗುಪ್ಸೆಪಡುವ ಬದಲು ಮೊದಲು ಅವಳ ಹಿನ್ನೆಲೆ ಅನಿವಾರ್ಯತೆ ಅರಿತು ಒಂದೆರಡು ಹನಿ ಕಣ್ಣೀರು ಹಾಕಬೇಕು ಎಂದೆನಿಸುವುದು ಕಾದಂಬರಿಗಾರ್ತಿಯ ಸಶಕ್ತ ನಿರೂಪಣೆಯ ಚಾಣಾಕ್ಷತೆ .ಪರಿಸ್ಥಿತಿಯ ಕೈವಶವಾದವರ ಬಗ್ಗೆ ಕಿಂಚಿತ್ತಾದರೂ ಅಂತರಂಗ ಕಲಕಿದರೆ ಓದಿನ ಸಾರ್ಥಕತೆ . ಅದನ್ನು ಮಾಡುವುದರಲ್ಲಿ ಸಫಲವಾಗಿದೆ ಕಥೆಯೆಂದರೆ ಅದು ಗೆದ್ದಿದೆ ಎಂದು ತಾನೇ ಅರ್ಥ?
ನೈಜ ಘಟನಾವಳಿಗಳನ್ನು ಹೆಣೆದಿರುವ ರೀತಿ ಮಾನವ ಮನೋಭಾವಗಳ ಆಳ ವಿಕ್ಷಿಪ್ತತೆ ವಿಭಿನ್ನತೆಗಳನ್ನು ಕಣ್ಣಿಗೆ ಕಟ್ಟುವ ಹಾಗಿನ ನಿರೂಪಣೆ ಸಂಭಾಷಣೆಗಳು ಕಾದಂಬರಿಗಳ ಹೈಲೈಟ್ ಎಂದರೆ ತಪ್ಪಾಗಲಾರದು. ಆರಂಭಿಸಿದರೆ ಮುಗಿಯುವತನಕ ಬಿಡದಂತೆ ಓಡಿ ಓದಿಸಿಕೊಂಡು ಹೋಗುವ ಪುಸ್ತಕ .
ಸುಜಾತಾ ರವೀಶ್
ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು