ಕಥಾ-ಸಂಗಾತಿ.
ವಿಶ್ವನಾಥ ಎನ್ ನೇರಳಕಟ್ಟೆ
ಅವಳು ಬರೆದ ಪತ್ರ
ಅವಳು ಬರೆದ ಪತ್ರ
ಎರಡು ನಿಮಿಷಗಳ ಮೊದಲು ಅಂಚೆಯವನು ತಂದುಕೊಟ್ಟ ಪತ್ರವೊಂದು ನನ್ನ ಕೈಯ್ಯಲ್ಲಿತ್ತು. ಅವಳೇನು ಬರೆದಿದ್ದಾಳೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ. ಜೊತೆಗೆ ಕೆಲಸಕ್ಕೆ ಎರಡು ದಿನಗಳ ವಿರಾಮ ಇದೆ. ವಟಗುಟ್ಟುತ್ತಿದ್ದ ಟಿ. ವಿ. ಯನ್ನು ಆಫ್ ಮಾಡಿ ಬಂದು ಸೋಫಾ ಮೇಲೆ ಕುಳಿತವನು ಪತ್ರವನ್ನು ಓದಲು ಆರಂಭಿಸಿದೆ…
“ನಲ್ಮೆಯ ಗೆಳೆಯ ದೀಪಕ್, ಹೇಗಿದ್ದೀಯಾ? ಕೆಲವೇ ದಿನಗಳ ಹಿಂದೆ ನೋಡಿದವನನ್ನು ಈ ಪ್ರಶ್ನೆ ಕೇಳುವ ಅಗತ್ಯವಿಲ್ಲ ಎನ್ನುವುದು ಗೊತ್ತಿದೆ. ಆದರೂ ಮಾತು ಶುರು ಮಾಡಬೇಕಲ್ಲಾ. ಏಳೆಂಟು ವರ್ಷಗಳ ಹಿಂದೆ ಆಗಿದ್ದರೆ ನಾನು ನಿನ್ನಲ್ಲಿ ಮಾತು ಆರಂಭಿಸುವ ಬಗೆಯೇ ಬೇರೆಯಿತ್ತು. ಆದರೆ ಇಂದು ನೇರ ವಿಚಾರಕ್ಕೆ ಬರುವಷ್ಟು ದಿಟ್ಟತನ ನನ್ನಲ್ಲಿ ಉಳಿದಿಲ್ಲ.
ನಿನ್ನಲ್ಲಿ ಹಂಚಿಕೊಳ್ಳುವುದಕ್ಕೆ ಕೆಲವಾರು ವಿಷಯಗಳಿವೆ. ಬಾಯ್ಬಿಟ್ಟು ಹೇಳಲಾಗದ್ದನ್ನು ಅಕ್ಷರಗಳಲ್ಲಿ ಪೇರಿಸಿಟ್ಟಿದ್ದೇನೆ. ಒಂದಷ್ಟು ಸಮಯ ಮೀಸಲಿಡು ಎನ್ನುವ ವಿನಂತಿ ನನ್ನದು.
ಅದೆಷ್ಟೋ ಸಲ ಕಾಲೇಜಿನಲ್ಲಿ ನಿನ್ನ ಜೊತೆಗೆ ಮಾತಾಡಿದ್ದೇನೆ, ತಮಾಷೆ ಮಾಡಿದ್ದೇನೆ, ತರಲೆ- ತುಂಟಾಟಗಳೆಂದು ಗೋಳು ಹೊಯ್ದುಕೊಂಡಿದ್ದೇನೆ. ಆದರೆ ನನ್ನ ಜೀವನವನ್ನು ಯಾವತ್ತೂ ನಿನ್ನೆದುರು ಹೇಳಿಕೊಂಡಿಲ್ಲ. ಹೇಳಿಕೊಳ್ಳಬೇಕೆಂದು ನನಗ್ಯಾವತ್ತೂ ಅನಿಸಿರಲಿಲ್ಲ. ಆದರೆ ಇಂದು ಹೇಳಬೇಕೆಂದು ಅನಿಸುತ್ತಿದೆ. ಇಂದು ಹೇಳದಿದ್ದರೆ ಇನ್ಯಾವತ್ತೂ ಹೇಳುವುದಕ್ಕೆ ಸಾಧ್ಯವಿಲ್ಲವೇನೋ ಎಂಬ ಭಯವೂ ಕಾಡುತ್ತಿದೆ…”
ಇವಳು ನಮ್ರತಾ. ನಾನು ಬಿ. ಎ. ಮಾಡುತ್ತಿದ್ದಾಗ ನನ್ನ ಸಹಪಾಠಿಯಾಗಿದ್ದವಳು. ಮಹಾನ್ ವಾಚಾಳಿ. ಯಾವ ಚಟುವಟಿಕೆಯೇ ಇರಲಿ, ತಾನಾಗಿ ತೊಡಗಿಕೊಳ್ಳುವ ಗುಣ ಅವಳಲ್ಲಿತ್ತು. ಉಪನ್ಯಾಸಕರು ಯಾವುದಾದರೂ ವಿಷಯದ ಬಗ್ಗೆ ಮಾತನಾಡುವುದಕ್ಕೆ ಹೇಳಿದರೆ ಸಾಕು, ಕಾದು ಕುಳಿತವಳಂತೆ ಮಾತಿಗೆ ನಿಂತುಬಿಡುತ್ತಿದ್ದಳು. ‘ಯಾಕೆ ಹೇಳಿದೆನಪ್ಪಾ ಮಾತಾಡುವುದಕ್ಕೆ?!’ ಎಂದು ಉಪನ್ಯಾಸಕರೇ ಯೋಚಿಸುವಂತಾಗುತ್ತಿತ್ತು. ಹಾಡಬೇಕೆಂಬ ಇಚ್ಛೆ, ಉತ್ಸಾಹವೂ ಅವಳಲ್ಲಿತ್ತು. ಇಂಪಾದ ಧ್ವನಿಯಿದ್ದದ್ದಂತೂ ನಿಜ. ಆದರೆ ಶ್ರುತಿ, ಲಯ ಇರಲಿಲ್ಲ. ನೃತ್ಯ ಮಾತ್ರ ಚೆನ್ನಾಗಿ ಮಾಡುತ್ತಿದ್ದಳು. ಒಂದು ಶನಿವಾರದ ಮಧ್ಯಾಹ್ನ ಕಾಲೇಜಿನಲ್ಲಿ ನಡೆದ ಕವಿಗೋಷ್ಠಿಯಲ್ಲಿ ಬಾಲಿಶವೆನಿಸುವ ಕವನವನ್ನು ಹಿಡಿದುಕೊಂಡು ಭಾಗವಹಿಸಿದ್ದಳು. ಹೆಣ್ಣಿನ ಮನದ ತುಮುಲಗಳನ್ನು ಒಳಗೊಂಡಿದ್ದ ಆ ಕವಿತೆ ಸಾಧಾರಣದ್ದೆಂದು ನನಗೆ ಅಂದು ಅನಿಸಿತ್ತು. ಯಾಕೋ ಗೊತ್ತಿಲ್ಲ, ವಾಚಿಸಿ ಬಂದು ಕುಳಿತವಳ ಕಣ್ಣಲ್ಲಿ ಹನಿ ನೀರಿತ್ತು. ಕವನ ಒಳ್ಳೆಯದಾಗಿಲ್ಲ ಎಂದು ಮನಸ್ಸಿಗೆ ಹಚ್ಚಿಕೊಂಡು ಅಳುತ್ತಿದ್ದಾಳೆ ಎಂದು ಭಾವಿಸಿದ ನಾವು, ಸಹಪಾಠಿಗಳು, ಮನಸ್ಸೋ ಇಚ್ಛೆ ನಗಾಡಿದ್ದೆವು.
ಇಂತಹ ನಮ್ರತಾಳ ಬದುಕು ಹೇಗಿತ್ತು ಎಂಬ ಕುತೂಹಲ. ಪತ್ರದ ಓದನ್ನು ಮುಂದುವರಿಸಿದೆ…
“…ಅದೊಂದು ಭಾನುವಾರ. ಅಂದು ನನ್ನ ಹನ್ನೆರಡನೇ ವರ್ಷದ ಹುಟ್ಟುಹಬ್ಬವಿತ್ತು. ಸಂಜೆ ಮನೆಗೆ ಮರಳುವ ತಂದೆ ಏನಾದರೂ ಉಡುಗೊರೆ ತರುತ್ತಾರೆಂಬ ನಿರೀಕ್ಷೆ ನನ್ನಲ್ಲಿತ್ತು. ಆಸೆ ಕಣ್ಗಳಿಂದ ಕಾಯುತ್ತಿದ್ದೆ. ಎಷ್ಟು ಹೊತ್ತಾದರೂ ಅಪ್ಪನ ಸುಳಿವಿಲ್ಲ. ಕಾದೂ ಕಾದೂ ನಿರಾಶೆಗೊಂಡು ಮಲಗಿದವಳಿಗೆ ಎಚ್ಚರವಾದಾಗ ಕಂಡದ್ದು ಅಪ್ಪನ ಹೆಣ, ಅಮ್ಮ ಎದೆ ಬಡಿದುಕೊಂಡು ಅಳುತ್ತಿದ್ದ ದೃಶ್ಯ.
ಇದಾದ ಬಳಿಕ ಯಜಮಾನನಿಲ್ಲದ ಕುಟುಂಬಕ್ಕೆ ಹೆಗಲು ಕೊಟ್ಟವಳು ನನ್ನಮ್ಮ. ಅಪ್ಪನ ಆಸರೆಯಲ್ಲಿ ಅರಗಿಣಿಯಂತಿದ್ದ ಅಮ್ಮ, ನನ್ನನ್ನು ಮತ್ತು ತಮ್ಮನನ್ನು ಸಲಹಲು ಕೂಲಿ ಮಾಡಬೇಕಾಯಿತು. ಅಪ್ಪ ತೀರಿಹೋದ ಮೇಲೆ ನಮಗೆಲ್ಲಾ ಮನುಷ್ಯ ಸಂಬಂಧಗಳೆಷ್ಟು ದುರ್ಬಲ ಎನ್ನುವುದರ ಅರಿವಾಗಿತ್ತು. ಖುಷಿಯನ್ನು ಹಂಚಿಕೊಳ್ಳುವುದಕ್ಕಾಗಿ, ಕಷ್ಟಗಳಿಂದ ವಿಮುಕ್ತಗೊಳ್ಳುವುದಕ್ಕಾಗಿ ಸಂಬಂಧಗಳು ಬೇಕೆಂದು ಬಯಸುತ್ತೇವೆ. ಆದರೆ ಕಷ್ಟದ ಸಂದರ್ಭದಲ್ಲಿಯೇ ಸಂಬಂಧಗಳು ನಮ್ಮ ಕೈಬಿಟ್ಟುಬಿಡುತ್ತವೆ. ಇದನ್ನು ನನ್ನ ಜೀವನಾನುಭವದ ಆಧಾರದಲ್ಲಿ ಹೇಳುತ್ತಿದ್ದೇನೆ. ಅಪ್ಪ ಇದ್ದಾಗ ನಮ್ಮ ಮನೆಗೆ ಆಗಾಗ ಬರುತ್ತಿದ್ದ ನಮ್ಮ ಸಂಬಂಧಿಕರೆಲ್ಲಾ ಅಪ್ಪ ಸತ್ತ ವಿಚಾರ ಕೇಳಿಯೇ ನಮ್ಮ ಮನೆ ವಿಳಾಸ ಮರೆತಿದ್ದರು. ಬೇರೇನೋ ವಿಚಾರ ಮಾತನಾಡುವುದಕ್ಕೆ ಅಮ್ಮ ಫೋನ್ ಮಾಡಿದರೂ ಕೂಡಾ ಎಲ್ಲಿ ಹಣದ ಸಹಾಯ ಕೇಳುತ್ತಾಳೋ ಎಂಬ ಭಯ ಅವರಿಗೆ. ಮಾತನಾಡುತ್ತಲೇ ಇರಲಿಲ್ಲ.
ಹೀಗೆ ಸಂಬಂಧಿಕರ ತಿರಸ್ಕಾರ, ಮೂದಲಿಕೆ, ಅಕ್ಕಪಕ್ಕದವರ ಅನುಮಾನದ ಮಧ್ಯೆಯೇ ಬೆಳೆಯುತ್ತಿದ್ದ ನನ್ನಲ್ಲಿ ವಿಪರೀತವಾದ ಹಠ ಮಡುಗಟ್ಟಿತ್ತು. ಹೀಯಾಳಿಸಿದ ಸಮಾಜದೆದುರು ಗೆಲುವಿನ ನಗು ಬೀರಬೇಕೆಂಬ ಹಠ ಅದು. ಆದರೆ ನನ್ನೆದುರು ಸ್ಪಷ್ಟವಾದ ದಾರಿ ಇರಲಿಲ್ಲ. ಸಂಗೀತ ಕಲಿಯಬೇಕೆಂಬ ಇಚ್ಛೆಯಿತ್ತು. ಆದರೆ ಅಮ್ಮ ತರುತ್ತಿದ್ದ ಹಣದಲ್ಲಿ ಅದು ಸಾಧ್ಯವಿರಲಿಲ್ಲ. ನೃತ್ಯವನ್ನು ನಾನಾಗಿಯೇ ಕಲಿತೆ. ಏಕಾಂಗಿತನವನ್ನು ಮರೆಯುವುದಕ್ಕಾಗಿ ಕಥೆ, ಕವಿತೆಗಳನ್ನು ಬರೆಯುತ್ತಿದ್ದೆ. ಪ್ರೋತ್ಸಾಹಿಸುವವರಾರೂ ಇಲ್ಲವೆಂದು ತಿಳಿದಾಗ ನಾನಾಗಿಯೇ ಮುನ್ನುಗ್ಗುವುದನ್ನು ಕಲಿತುಕೊಂಡೆ. ಮಾತು, ನೃತ್ಯ, ಹಾಡು, ಕವಿತೆ ಎಂದು ಎಲ್ಲದಕ್ಕೂ ನಾನಾಗಿಯೇ ಮುನ್ನುಗ್ಗುತ್ತಿದುದನ್ನು ಕಂಡ ನನ್ನ ತರಗತಿಯವರು ನನ್ನನ್ನು ಗಂಡುಬೀರಿಯಂತಾಡುತ್ತಾಳೆ ಎಂದು ಹಿಂದಿನಿಂದ ಹೇಳಿ ನಗಾಡುತ್ತಿದ್ದುದು ನನಗೆ ತಿಳಿಯದ ಸತ್ಯವೇನಲ್ಲ. ಆದರೆ ನಾನ್ಯಾವತ್ತೂ ಅದನ್ನು ಮನಸ್ಸಿಗೆ ಹಚ್ಚಿಕೊಂಡಿಲ್ಲ. ಏಕೆಂದರೆ, ನನ್ನ ಬದುಕಿನ ಅನಿವಾರ್ಯತೆ, ಅಸಹಾಯಕತೆಗಳ ಅರಿವು ಹಾಗೆ ನಗಾಡುವವರಿಗಿಲ್ಲ. ನನ್ನ ಬದುಕು ಅವರದ್ದಲ್ಲ. ಅವರ ಬದುಕು ನನ್ನದಾಗುವುದಿಲ್ಲ. ಕಾಲೇಜು ವಾರ್ಷಿಕೋತ್ಸವಕ್ಕೆ ಹೊಸ ಬಟ್ಟೆ ಕೊಂಡುಕೊಳ್ಳಲು, ಉಳಿದವರ ಹಾಗೆ ನಾನೂ ಕಾಣಿಸಿಕೊಳ್ಳಬೇಕೆಂಬ ಪುಟ್ಟ ಆಸೆ ಪೂರೈಸಿಕೊಳ್ಳಲು ನಾನು ಪಟ್ಟ ಕಷ್ಟ ನನಗೆ ಮಾತ್ರ ಗೊತ್ತಿದೆ. ಇವಳೊಬ್ಬಳೇ ಹೊಸ ಬಟ್ಟೆ ಹಾಕಿಕೊಂಡವಳ ಹಾಗೆ ಪೋಸು ಕೊಡುತ್ತಾಳೆ ಎಂದವರ ನಗು ನನ್ನ ಕಣ್ಣೀರಿನ ಜೊತೆ ಗುದ್ದಾಡಿ ಸತ್ತುಹೋಗಿತ್ತು…”
ನಾನು ಇದುವರೆಗೂ ಅರಿತುಕೊಳ್ಳದ ಅವಳ ಬದುಕು ಈಗ ನನ್ನೆದುರಿತ್ತು. ತಿಳಿದುಕೊಳ್ಳುವ ಕುತೂಹಲ ಜಾಸ್ತಿಯಾಗಿತ್ತು. ಓದತೊಡಗಿದೆ…
“ಡಿಗ್ರಿ ಮುಗಿಯಿತು. ಮುಂದೆ ಓದುವುದಂತೂ ಸಾಧ್ಯವಿರಲಿಲ್ಲ. ಅಮ್ಮನಿಗೆ ದುಡಿಯುವ ಶಕ್ತಿ ಕ್ಷೀಣಿಸತೊಡಗಿತ್ತು. ಹೆಚ್ಚು ವರ್ಷ ದುಡಿಯುವ ಸಾಧ್ಯತೆ ಇರಲಿಲ್ಲ. ಪೋಲಿ ಪಟಾಲಂ ಕಟ್ಟಿಕೊಂಡು ತಿರುಗುತ್ತಿದ್ದ ತಮ್ಮನಿಗೆ ಮನೆ ಜವಾಬ್ದಾರಿ ವಹಿಸಿಕೊಳ್ಳುವ ಉಮೇದು ಇರಲಿಲ್ಲ. ನನ್ನ ಮುಂದೆ ಆಯ್ಕೆ ಇರಲಿಲ್ಲ. ನಾನು ದುಡಿಯಲೇಬೇಕಿತ್ತು. ಕೆಲಸ ಕೊಡಿಸುತ್ತೇನೆ ಎಂದು ಮುಂದೆ ಬಂದವ ನನ್ನ ಮಾವ. ನನ್ನ ಅಮ್ಮನ ದೊಡ್ಡಪ್ಪನ ಮಗ. ಬೆಂಗಳೂರಿನಲ್ಲಿ ಸ್ಟುಡಿಯೋ ಇಟ್ಟುಕೊಂಡಿದ್ದ ಅವನ ಬಗ್ಗೆ ಅಮ್ಮನಿಗೆ ಅದೇನೋ ನಂಬಿಕೆಯಿತ್ತು. ಬೆಂಗಳೂರಿಗೆ ಅವನ ಜೊತೆಗೆ ಬಂದ ನಾನು ಅಂತಿಮವಾಗಿ ಸೇರಿದ್ದು, ನಿನ್ನೆ ನೀನು ನೋಡಿದೆಯಲ್ಲಾ ಆ ಸ್ಥಳವನ್ನು. ನಟಿಯಾಗಿಸುವ ಆಸೆ, ಮೋಸ, ಪ್ರಜ್ಞೆ ತಪ್ಪಿಸಿ ಅತ್ಯಾಚಾರ, ದೊಡ್ಡ ದೊಡ್ಡವರಿಗೆ ಮಾರಾಟ ಇದೆಲ್ಲವನ್ನೂ ಅನುಭವಿಸಿದ್ದೇನೆ ನಾನು. ಹೇಳಹೊರಟರೆ ರಕ್ತ ಕುದಿಯುತ್ತದೆ. ಆಕ್ರೋಶದ ಕಣ್ಣೀರು ಹರಿಯುತ್ತದೆ. ಅದಕ್ಕಾಗಿಯೇ ವಿವರಿಸಿ ಹೇಳುತ್ತಿಲ್ಲ.
ಹೆಣ್ಣೊಬ್ಬಳು ಮಾನ ಉಳಿಸಿಕೊಂಡು ಬದುಕುವುದೇ ಕಷ್ಟವಾಗುತ್ತದೆ ಕೆಲವು ಸಂದರ್ಭದಲ್ಲಿ. ನಾನು ವೇಶ್ಯೆ ಎನಿಸಿಕೊಂಡದ್ದೇನೂ ಹೊಸತಲ್ಲ ನನ್ನ ಪಾಲಿಗೆ. ನನ್ನಮ್ಮ ಕಷ್ಟಪಟ್ಟು ಕೂಲಿ ನಾಲಿ ಬದುಕು ನಡೆಸುತ್ತಿದ್ದುದನ್ನು ಅನುಮಾನದಿಂದ ಕಂಡವರಿದ್ದರು. ತಾಯಿ- ಮಗಳು ಮೈ ಮಾರಿಕೊಂಡು ಆರಾಮಾಗಿದ್ದಾರೆ, ಹೊರನೋಟಕ್ಕಷ್ಟೇ ಕೂಲಿ ಕೆಲಸದ ನಾಟಕ ಎಂದು ಮಾತನಾಡಿದವರಿದ್ದಾರೆ.
ವೇಶ್ಯೆಯಾಗಿ ದುಡಿಯುತ್ತಿದ್ದ ನಾನು ನಿನ್ನೆದುರು ಬೆತ್ತಲಾಗಲು ಸಿದ್ಧಳಾಗಿ ಬಂದಿದ್ದೆ ಕೆಲವು ದಿವಸಗಳ ಹಿಂದೆ. ಹೆಣ್ಣಿನ ಗೌರವದ ಬಗ್ಗೆ ಲೇಖನ ಬರೆದ ನೀನೂ ಹೀಗಾದೆಯಾ ಎಂದು ಅಚ್ಚರಿಪಟ್ಟಿದ್ದೆ, ನಿನ್ನನ್ನು ಮಂದಬೆಳಕಿನ ಕೋಣೆಯಲ್ಲಿ ಕಂಡು. ಆದರೆ ನೀನು ಆ ಪಾಪಕೂಪದಲ್ಲಿ ಕುಳಿತು ಮಹಿಳೋದ್ಧಾರದ ಮಾತಾಡಿದೆ. ನನ್ನನ್ನೇ ಮದುವೆಯಾಗಿ ಬಾಳು ಕೊಡುತ್ತೇನೆಂದೆ. ನನ್ನ ಅಭಿಪ್ರಾಯವನ್ನು ಪತ್ರ ಬರೆದು ತಿಳಿಸುತ್ತೇನೆ ಎಂದು ಹೇಳಿ ನಾನು ನಿನ್ನನ್ನು ಸಾಗಹಾಕಿದ್ದೆ. ಕೆಲವು ವರ್ಷಗಳಿಗೆ ಮೊದಲು ನೀನು ಆ ಮಾತುಗಳನ್ನಾಡಿದ್ದರೆ?!…ಬರೀ ಹುಚ್ಚು ಆಸೆಯಷ್ಟೇ ನನ್ನದು. ಆದರೆ ಇಂದು ನನ್ನ ಮನಃಸ್ಥಿತಿ ಬದಲಾಗಿದೆ. ಮನುಷ್ಯ ಸಂಬಂಧಗಳಲ್ಲಿ ನಂಬಿಕೆ ಉಳಿಸಿಕೊಂಡಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ನಿನ್ನ ಪ್ರೀತಿಯನ್ನು ಬಯಸಿದ್ದ ನನಗೆ ಕೇವಲ ಕರುಣೆಯಿಂದ ನೀನು ನನ್ನನ್ನು ಮದುವೆಯಾಗುವುದು ಇಷ್ಟವಿಲ್ಲ. ಗಾರ್ಮೆಂಟ್‌ನಲ್ಲಿ ಮಗಳು ದುಡಿಯುತ್ತಿದ್ದಾಳೆ ಎಂದು ನಂಬಿಕೊಂಡಿರುವ ನನ್ನಮ್ಮನಿಗೆ ನಿಜಸ್ಥಿತಿ ತಿಳಿಯಬಾರದು ಎನ್ನುವುದಷ್ಟೇ ಸದ್ಯದಮಟ್ಟಿಗೆ ನನ್ನಲ್ಲಿರುವ ಇಚ್ಛೆ. ನೀನು ಹೇಳಲಾರೆ ಎಂಬ ನಂಬಿಕೆ ನನ್ನಲ್ಲಿದೆ.”
ಪತ್ರ ಓದಿ ಮುಗಿಸಿದ ನನ್ನೊಳಗೆ ಖೇದವಿತ್ತು. ಅವಳನ್ನು ಹೇಗಾದರೂ ಒಪ್ಪಿಸಿ, ಮದುವೆ ಆಗಬೇಕು ಎಂದು ನಿರ್ಧರಿಸಿದೆ. ಪತ್ರ ಮಡಚಲು ಸಿದ್ಧವಾದವನನ್ನು ಪತ್ರದ ಹಿಂದುಗಡೆಯಿದ್ದ ಸಾಲುಗಳು ತಡೆದವು. “ನಿನಗೆ ಈ ಪತ್ರ ತಲುಪುವ ಹೊತ್ತಿಗಾಗಲೇ ನಾನು ಬೇರೆ ಊರನ್ನು ಸೇರಿಕೊಂಡಿರುತ್ತೇನೆ. ಹುಡುಕುವ ಪ್ರಯತ್ನ ಮಾಡಬೇಡ.”
ಅಂದು ಕಾಲೇಜು ವಾರ್ಷಿಕೋತ್ಸವದ ನೃತ್ಯ ತಯಾರಿಯನ್ನೆಲ್ಲಾ ಮುಗಿಸಿ ವಾಪಸ್ಸಾಗುತ್ತಿದ್ದಾಗ ಇದೇ ನಮ್ರತಾ ನನ್ನ ಜೊತೆಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಳು. ಅವಳನ್ನು ಯಾವತ್ತೂ ಗಂಭೀರವಾಗಿ ಪರಿಗಣಿಸದಿದ್ದ ನಾನು ಆ ಮಾತನ್ನು ಲಘುವಾಗಿ ತೆಗೆದುಕೊಂಡಿದ್ದೆ. ತಿರಸ್ಕರಿಸಿದ್ದೆ. ಸುಮಾರು ಒಂದು ವಾರ ಅವಳು ನನ್ನ ಜೊತೆ ಮಾತಾಡಿರಲಿಲ್ಲ. ಅಂದು ನಾನು ಅವಳ ಪ್ರೀತಿಯನ್ನು ಒಪ್ಪಿಕೊಂಡಿದ್ದರೆ ಇಂದು ಅವಳ ಬಾಳು ಕತ್ತಲಾಗುತ್ತಿರಲಿಲ್ಲವಲ್ಲ.
ಅಷ್ಟಕ್ಕೂ ನಾನು ಆ ದಿನ ವೇಶ್ಯಾಗೃಹಕ್ಕೆ ಹೋದದ್ದಾದರೂ ಯಾಕೆ? ಹೆಣ್ಣೊಬ್ಬಳ ದೇಹದ ಜೊತೆಗೆ ಗುದ್ದಾಡಿ ಸುಖವನ್ನು ಕಿತ್ತುಕೊಳ್ಳಲಿಕ್ಕಲ್ಲವಲ್ಲ! ಕತ್ತಲ ಕೂಪದೊಳಗೆ ಸೆರೆಸಿಕ್ಕಿರುವ ವೇಶ್ಯೆಯೊಬ್ಬಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶ ನನ್ನಲ್ಲಿತ್ತು. ಆದರೆ ನನ್ನೆದುರು ಬಂದವಳು ನನ್ನ ಗೆಳತಿ ನಮ್ರತಾ. ಯೋಚಿಸುತ್ತಿದ್ದಂತೆಲ್ಲಾ ನನ್ನ ಹೃದಯ ಭಾರವಾಗತೊಡಗಿತು…
ಇಲ್ಲ! ಅವಳು ಪಾತಾಳದಲ್ಲಿಯೇ ಅಡಗಿರಲಿ, ಅವಳನ್ನು ಹುಡುಕಿ ಕರೆತಂದು ಮದುವೆಯಾಗುತ್ತೇನೆ. ಕತ್ತಲಿನಿಂದ ತುಂಬಿರುವ ಅವಳ ಬಾಳಿಗೆ ಬೆಳಕಾಗುತ್ತೇನೆ. ದೃಢವಾಗಿ ನಿರ್ಧರಿಸಿದ ನನ್ನೊಳಗೆ ಸಮಾಜ ಪರಿವರ್ತನೆಯ ಕೆಚ್ಚು ಮನೆಮಾಡಿತ್ತು……
ಇದಾಗಿ ಎರಡು ವರ್ಷಗಳು ಕಳೆದಿದ್ದವು……
ಅಂಗಳದಲ್ಲಿ ಆಟವಾಡುತ್ತಿದ್ದ ನಮ್ಮಿಬ್ಬರ ಮುದ್ದು ಕಂದಮ್ಮನನ್ನು ಕಂಡು, ನನ್ನ ಹಾಗೂ ನಮ್ರತಾಳ ಕಣ್ಣುಗಳು
ಅರಳಿ ನಗುತ್ತಿದ್ದವು……
ನಮ್ರತಾಳಂತೆ ಬದುಕು ಸವೆಸುತ್ತಿರುವ ಅನೇಕ ಹೆಣ್ಣುಮಕ್ಕಳು ನಮ್ಮ ನಡುವೆ ಇದ್ದಾರೆ. ಕತೆ ವಾಸ್ತವವನ್ನು ಪ್ರತಿನಿಧಿಸುತ್ತದೆ.