ಅಂಕಣ ಸಂಗಾತಿ

ಸುಜಾತಾ ರವೀಶ್

ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು

ಊಸರವಳ್ಳಿ   ಕಥಾಸಂಕಲನ

ಊಸರವಳ್ಳಿ   ಕಥಾಸಂಕಲನ

ಮೂಲ ಲೇಖಕರು ಡಾ.ಅಖಿಲೇಶ್ ಯಾದವ್ ಅಖಿಲ್

ಕನ್ನಡಕ್ಕೆ  ಡಾ. ಜಿ ಎಸ್ ಸರೋಜ ಶಿವಮೊಗ್ಗ

ಪ್ರಕಾಶಕರು  ರೆಪ್ಲಿಕಾ   ಬೆಂಗಳೂರು

ಪ್ರಥಮ ಮುದ್ರಣ ೨೦೧೯

ಡಾಕ್ಟರ್ ಜಿ ಎಸ್ ಸರೋಜ ಅವರು ಶಿವಮೊಗ್ಗದ ನ್ಯಾಷನಲ್ ಕಾಲೇಜಿನ ಉಪ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದು ತಮ್ಮ ಕನ್ನಡ ಹಾಗೂ ಹಿಂದಿ ಭಾಷಾ ಪ್ರೌಢಿಮೆಯಿಂದ ಉಭಯ ಭಾಷಾ ಸಾಹಿತ್ಯಕ್ಷೇತ್ರದಲ್ಲಿಯೂ ರಾಜಭಾಷಾ ಸಂಘರ್ಷ ಸಮಿತಿಯ ಪದಾಧಿಕಾರಿಗಳಾಗಿ ಶಿಕ್ಷಣ ಕ್ಷೇತ್ರದಲ್ಲಿಯೂ ಸಹ ತಮ್ಮ ಛಾಪನ್ನು ಮೆರೆದು ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ.  ಸ್ನಾತಕೋತ್ತರ ಪದವಿಯನ್ನು ಹಿಂದಿಯಲ್ಲಿ ಪಡೆದಿರುವ ಇವರು ಹಿಂದಿ ಸಾಹಿತ್ಯದಲ್ಲಿ  ” ಕರ್ನಾಟಕ ಮೆ ಹಿಂದಿ ಏಕ್ ಚಿಂತನ್” ಎಂಬ ಸಮೀಕ್ಷಾತ್ಮಕ ಸಂಕಲನವನ್ನು ಪ್ರಕಟಿಸಿದ್ದಾರೆ. “ನವ ಪಲ್ಲವ”  “ಕನ್ನಡ ವಾಟಿಕಾ ಮೇ ಹಿಂದಿ ಮಹಕ್”  “ಸಾಹಿತ್ಯ ಪೂರ್ಣಿಮಾ ಅಲೋಕ್” ಇವೆಲ್ಲವೂ ಇವರ ಸಂಪಾದಿತ ಕೃತಿಗಳಾಗಿವೆ. “ಗಿರಗಿಟ್” ಎಂಬುದು ಇದರ ಹಿಂದಿಯಿಂದ ಅನುವಾದಿತವಾದ ಕಥಾ ಸಂಕಲನವಾಗಿದೆ .ಪ್ರಾದೇಶಿಕ ಭಾಷಾ ಅನುವಾದ ಕಾರ್ಯದಲ್ಲಿ ನಿರಂತರ ನಿಮಗ್ನರಾಗಿರುತ್ತಾರೆ. ಪ್ರೌಢಶಾಲಾ ಶಿಕ್ಷಣ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ 2 ಬಾರಿ ಹಿಂದಿ ಪ್ರಶ್ನೆ ಪತ್ರಿಕೆ ತಯಾರಿಸಿದ್ದಾರೆ. ಪ್ರಶ್ನ ಕೋಟಿ ಎಂಬ ಮಾದರಿ ಹಿಂದಿ ಪ್ರಶ್ನೆ ಪತ್ರಿಕೆಗಳ ಪುಸ್ತಕ ಹಾಗೂ ಮೌಲ್ಯಮಾಪನ ಕುರಿತಾಗಿ ಶಿಕ್ಷಕರಿಗೆ ಮೌಲ್ಯಾಂಕನ್ ಔರ್  ನೀಲ ನಕ್ಷ ಎಂಬ ಪುಸ್ತಕ ಹಾಗೂ ಹಿಂದಿ ಪಾಠ ಟಿಪ್ಪಣಿಗಳ ಸಂಗ್ರಹವನ್ನು ಪ್ರಕಟಿಸಿರುತ್ತಾರೆ. ಬೆಂಗಳೂರಿನ ಭಾರತ ಸಂಸ್ಕೃತಿ ಪ್ರತಿಷ್ಠಾನದ ಅಡಿಯಲ್ಲಿ 30 ವರ್ಷಗಳ ಕಾಲ ವಿದ್ಯಾರ್ಥಿಗಳಿಂದ ರಾಮಾಯಣ ಮತ್ತು ಮಹಾಭಾರತ ಪರೀಕ್ಷೆಗಳನ್ನು ಬರೆಸಿರುತ್ತಾರೆ ತಮ್ಮ ಸ್ವಂತ ಖರ್ಚಿನಲ್ಲಿ ಬುಕ್ ಬ್ಯಾಂಕ್ ಒಂದನ್ನು ನ್ಯಾಷನಲ್ ಶಾಲೆಯಲ್ಲಿ ಸ್ಥಾಪಿಸಿರುತ್ತಾರೆ. ಶಿವಮೊಗ್ಗದಲ್ಲಿ 2011 ರಲ್ಲಿ ನಡೆದ ಅಖಿಲ ಕರ್ನಾಟಕ ಹಿಂದಿ ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷೆ 2019 ರಲ್ಲಿ ಅಖಿಲ ಭಾರತ ಸಾಹಿತ್ಯ ಪೂರ್ಣಿಮಾ ಸಮಾರಂಭಗಳನ್ನು ಆಯೋಜಿಸಿರುತ್ತಾರೆ ಆಲ್ ಇಂಡಿಯಾ ಪೊಯೋಟೆಸ್  ಕಾನ್ಫರೆನ್ಸ್ ಎಐಪಿಸಿ  ಸದಸ್ಯರಾಗಿ ಪ್ರಸ್ತುತ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಶಿವಮೊಗ್ಗದ ತಮ್ಮ ಮನೆಯಲ್ಲಿ ಪ್ರತಿ ತಿಂಗಳು ಸಾಹಿತ್ಯ ಪೂರ್ಣಿಮಾ ಕಾರ್ಯಕ್ರಮವನ್ನು ಆಯೋಜಿಸಿ ವಿಶೇಷ ಆಹ್ವಾನಿತರಿಂದ ಉಪನ್ಯಾಸ ಏರ್ಪಡಿಸುತ್ತಾರೆ .ಇವರಿಗೆ ಬಂದ ಪ್ರಶಸ್ತಿ ಪುರಸ್ಕಾರಗಳ ಪಟ್ಟಿ ಬಹಳಷ್ಟು ಉದ್ದವಿರುವುದರಿಂದ ಕೆಲವನ್ನು ಮಾತ್ರ ಹೇಳುತ್ತೇನೆ .ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಭಾರತೀಯ ಭಾಷಾ ರತ್ನ ಪ್ರಶಸ್ತಿ, ಆದರ್ಶ ಶಿಕ್ಷಕಿ ಪ್ರಶಸ್ತಿ, ರಾಜ ಭಾಷಾ ಸನ್ಮಾನ, ಚಿಂತಾಮಣಿ ಉಪಾಧ್ಯಾಯ ಸ್ಮೃತಿ ಸಮ್ಮಾನ್, ಹಿಂದಿ ಸೇವಾ ಸಮ್ಮಾನ್, ಹಿಂದಿ ಭಾಷಾಭೂಷಣ್, ಬಿಹಾರದ ಬಾಗಲ ಪುರ ವಿಕ್ರಮಶೀಲ ವಿದ್ಯಾಪೀಠದಿಂದ ಗೌರವ ಡಾಕ್ಟರೇಟ್, ಡಾ ಮಹಾರಾಜ ಕೃಷ್ಣ ಜೈನ್ ಸಮ್ಮಾನ್, ಉಜ್ಜಾಗರಣ್ ಪುರಸ್ಕಾರ ಇವು ಪ್ರಮುಖವಾದವುಗಳು. ಶಿವಮೊಗ್ಗದ ಪತಂಜಲಿ ಯೋಗ ಮತ್ತು ಚಿಕಿತ್ಸಾ ಕೇಂದ್ರ, ಕಸಾಪ, ರೆಡ್ ಕ್ರಾಸ್, ಕರ್ನಾಟಕ ಲೇಖಕಿಯರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆ ಇವುಗಳ ಸದಸ್ಯರಾಗಿರುತ್ತಾರೆ .ಅನನ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ, ದೆಹಲಿಯ ರಾಜ ಭಾಷಾ ಸಂಘರ್ಷ ಸಮಿತಿಯ ನಿರ್ದೇಶಕರಾಗಿ, ಅಲಹಾಬಾದ್ ವಿಶ್ವ ಹಿಂದಿ ಸ್ನೇಹ ಸಮಾಜ ಪತ್ರಿಕೆ, ಕಡಲು ಪತ್ರಿಕೆ ಇವುಗಳ ಪ್ರಧಾನ ಸಂಪಾದಕಿಯಾಗಿ ಸಹ ಕಾರ್ಯ ನಿರ್ವಹಿಸಿದ್ದಾರೆ. ಹೀಗೆ ವಿಭಿನ್ನ ರಂಗಗಳಲ್ಲಿ ಕಾರ್ಯ ಚಟುವಟಿಕೆ ನಡೆಸುತ್ತಾ ಸಾಹಿತ್ಯಕ ಹಾಗೂ ಸಂಘಟನಾ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿರುತ್ತಾರೆ.

ಪ್ರಸ್ತುತ  ಊಸರವಳ್ಳಿ ಕಥಾಸಂಕಲನವು ಹಿಂದಿಯ ಡಾಕ್ಟರ್ ಅಖಿಲೇಶ್ ನಿಗಮ್ ಅವರ ಗಿರಗಿಟ್ ಕೃತಿಯ ಅನುವಾದ.  ಡಾ. ಅಖಿಲೇಶ್ ನಿಗಮ್ ಅವರು ಉತ್ತರ ಪ್ರದೇಶದ ಲಕ್ನೋದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು ಅವರೊಬ್ಬ ಕವಿ ಸಾಹಿತಿ ಹಾಗೂ ಚಿಂತಕರು ಆಗಿದ್ದಾರೆ.  ಹಿಂದಿ ಸಾಹಿತ್ಯ ಕ್ಷೇತ್ರದಲ್ಲಿ ವರ್ತಮಾನ ಪರಿಸ್ಥಿತಿಯ ಸಾಮಾಜಿಕ ಸಮಸ್ಯೆಗಳನ್ನು ಯಥಾರ್ಥತೆಯ ನೆಲೆಗಟ್ಟಿನಲ್ಲಿ ಅಭಿವ್ಯಕ್ತಿಗೊಳಿಸುವಲ್ಲಿ  ಅವರು ಸಿದ್ಧಹಸ್ತರಾಗಿದ್ದಾರೆ.  ಪ್ರಸ್ತುತ ಈ ಸಂಕಲನದ ಪ್ರತಿಯೊಂದು ಕಥಾ ಭಾಗವನ್ನು ವಾಸ್ತವಿಕತೆಯ ಸುಭದ್ರ ತಳಹದಿಯ ಮೇಲೆ ಚಿತ್ರಿಸಿದ್ದಾರೆ.

ಅನುವಾದ ಎಂದರೆ ಒಂದು ಆತ್ಮವನ್ನು ಮತ್ತೊಂದು ಆತ್ಮಕ್ಕೆ ಜೋಡಿಸುವುದು ಅಂದರೆ ಬೇರೆಯವರ ಭಾವನೆಗಳನ್ನು ಆವಾಹಿಸಿಕೊಂಡು ಅದನ್ನು ಅಕ್ಷರ ರೂಪಕ್ಕೆ ತರಬೇಕು. ಸ್ವತಂತ್ರ ರಚನೆಗಳಲ್ಲಿನ ಸಂಪೂರ್ಣ ಸ್ವಾತಂತ್ರ ಅನುವಾದಕನಿಗೆ ಇಲ್ಲಿ ಇರುವುದಿಲ್ಲ. ಸೀಮಿತ ಚೌಕಟ್ಟಿನಲ್ಲಿ ತನ್ನ ಸೃಜನಾತ್ಮಕತೆ ಮೆರೆಯಬೇಕಾಗುತ್ತದೆ. ಎರಡು ಭಾಷೆಗಳ ಅರಿವು ನಿಷ್ಠೆ ಪ್ರಾಮಾಣಿಕತೆ ಜೊತೆಗೆ ವಿಭಿನ್ನ ಸಂಸ್ಕೃತಿಗಳ ಅನುಭವ ಮತ್ತು ಸಮರ್ಪಣಾ ಭಾವ ಮುಖ್ಯವಾಗುತ್ತದೆ.  ಅನುವಾದಕನಾದವನು ಮೂಲ ಲೇಖಕನ ಜೊತೆ, ಭಾಷೆ ಜೊತೆ, ಹಾಗೂ ಆ ಭಾಷೆಯ ಓದುಗರ ಜೊತೆ ಸಹ ಸಂವೇದನೆ ಹೊಂದಿರಬೇಕು.  ಇಲ್ಲಿ ಲೇಖಕಿಯವರು ಇವೆಲ್ಲವನ್ನು ಮೈಗೂಡಿಸಿಕೊಂಡು ಸಮರ್ಥ ಅನುವಾದವನ್ನು ಮಾಡಿಕೊಟ್ಟಿರುವುದು ಅವರ ಪ್ರತಿಭೆಯ ಮುಕುಟಕ್ಕೆ ಮತ್ತೊಂದು ಗರಿ ಮೂಡಿಸಿದೆ.

ಈ ಸಂಕಲನದಲ್ಲಿ ಒಟ್ಟು 12 ಕಥೆಗಳಿದ್ದು ಎಲ್ಲವೂ ಸ್ತ್ರೀ ಭಾರತೀಯ ಸಮಾಜದಲ್ಲಿ ಎದುರಿಸುತ್ತಿರುವ ಎದುರಿಸಬೇಕಾಗುವ ಸಮಸ್ಯೆ ದೌರ್ಜನ್ಯಗಳನ್ನು ಅನಾವರಣಗೊಳಿಸುತ್ತದೆ.  ಬರೀ ದೌರ್ಜನ್ಯಗಳ ಕಥೆ ಹೇಳಿ ಮುಗಿಸದೆ ಅವುಗಳನ್ನು ಸುಧಾರಿಸಲು ಬೇಕಾದ ಕ್ರಮಗಳ ಬಗ್ಗೆಯೂ ಹೇಳಿರುವುದು ಇಲ್ಲಿ ಲೇಖಕರು ತಮ್ಮ ವೃತ್ತಿ ಹಾಗೂ ಪ್ರವೃತ್ತಿಗಳ ನಡುವೆ ಇರುವ ಸಂಬಂಧವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡಿರುವ ಆಯಾಮವನ್ನು ಹಾಗೂ ಅವರ ಸಾಮಾಜಿಕ ಕಳಕಳಿಯ ದೃಷ್ಟಿಕೋನವನ್ನೂ ತೆರೆದಿಡುತ್ತದೆ. ಇಂತಹ ಕಥೆಗಳನ್ನೇ ಕನ್ನಡದ ಓದುಗರಿಗೆ ಪರಿಚಯಿಸುತ್ತಿರುವ ಲೇಖಕಿ ಸರೋಜಾ ಅವರ ಮಹಿಳಾಪರ ಅಂತಃಕರಣ ಮತ್ತು ಮೂಲಭೂತ ಕಾಳಜಿಯೂ ಇಲ್ಲಿ ಗಮನಾರ್ಹ ಮತ್ತು ಶ್ಲಾಘನೀಯ.

“ನನ್ನ ತಪ್ಪೇನಿದೆ” ಮತ್ತು “ಮನೆ ಕೆಲಸದಾಕೆ” ಬಡತನದಲ್ಲಿರುವ ಹೆಣ್ಣು ಮಕ್ಕಳನ್ನು ಅನಿವಾರ್ಯವಾಗಿ ಮೈ ಮಾರಿಕೊಳ್ಳುವ ಸ್ಥಿತಿಗೆ ತಳ್ಳುವಂತಹ ಸಮಾಜ ಹಾಗೂ ಅವರು ಅದರಿಂದ ಹೊರಬರಲಾಗದಂತಹ ವಿಷ ವರ್ತುಲಗಳ ಕರಾಳ ಚಿತ್ರಣ ಮೂಡಿಸುತ್ತದೆ.  “ಕಾಲ್ ಗರ್ಲ್” ಸಹ ಇದೇ ವಸ್ತುವನ್ನು ಹೊಂದಿದ್ದರೂ ಅನಿವಾರ್ಯವಾಗಿ ಆ ದಂಧೆಗೆ ಇಳಿಯುವ ಹೆಣ್ಣು ಅದಕ್ಕೆ ಕಾರಣರಾದವರ ಮೇಲೆ ಸೇಡು ತೀರಿಸಿಕೊಳ್ಳುವುದು ವಿಶೇಷ .

ಡೋಲಿ ಕಥೆಯಲ್ಲಿ ಅನಾಥಳಾದ ಹೆಣ್ಣುಮಗಳ ನಿಶ್ಚಯವಾಗಿದ್ದ ಮದುವೆಯನ್ನು ಜಿಲ್ಲಾಧಿಕಾರಿಗಳು ಮಾಡಿಸುವುದು ಹಾಗೂ ಧರ್ಮಭೇದವಿಲ್ಲದೆ ಇಡೀ ಹಳ್ಳಿಯ ಜನ ಸಹಕಾರ ಕೊಡುವುದು ಕೋಮು ಸೌಹಾರ್ದಕ್ಕೆ ಹಿಡಿದ ಮುನ್ನುಡಿಯಾಗಿದೆಯೋ ಎಂದೆನಿಸುತ್ತದೆ.

ಜೀವನದಲ್ಲಿ ಎಷ್ಟೆಲ್ಲ ಆಘಾತಗಳನ್ನು ದೋಷಾರೋಪಣಗಳನ್ನು ಎದುರಿಸಿದ ಹೆಣ್ಣು ಮಗಳು ಅವುಗಳಿಂದ ವಿಚಲಿತಳಾಗದೆ ಎಲ್ಲರಿಗೂ ಪರೋಪಕಾರ ಮಾಡುತ್ತಾ ಮಂದಿಯ ಮನದಲ್ಲಿ ನೆಲೆಗೊಳ್ಳುವ ವ್ಯಕ್ತಿಯಾಗುವುದು “ಮಾಮೀಜಿ” ಕತೆಯಲ್ಲಿ ಧನಾತ್ಮಕ ಭಾವಕ್ಕೆ ಹಿಡಿಯುವ ಕನ್ನಡಿಯಾಗಿ ಉದಾಹರಣೆಯಾಗುತ್ತದೆ.

“ಗುರುಗಳ ಸಾಕ್ಷಾತ್ಕಾರ” ಕಥೆಯಲ್ಲಿ ಢೋಂಗಿ ಸ್ವಾಮಿಗಳವರ ಆಶ್ರಮದ ವೈಭವದ ವಿವರಣೆ ಹಾಗೂ ಅದನ್ನು ಪ್ರಶ್ನಿಸ ಹೊರಟ ಪತ್ರಿಕೋದ್ಯಮಿ ವಿದ್ಯಾರ್ಥಿಯ ಬಗ್ಗೆ ಹೇಳಲಾಗಿದೆ.

“ವಯೋವೃದ್ಧರು” ಕಥೆಯಲ್ಲಿ ಕಷ್ಟಪಟ್ಟು ಸಾಕಿ ಬೆಳೆಸಿದ ಮಕ್ಕಳು ಮುಂದೆ ಹೆತ್ತವರನ್ನು ತಿರಸ್ಕರಿಸುವ ದಾರುಣ ಚಿತ್ರಣವಿದೆ.

“ಪ್ರೀತಿ ಎಂದರೆ ಮದುವೆ” ಲೇಖಕರೇ ತಮ್ಮ ಮಾತುಗಳಲ್ಲಿ ಹೇಳುವಂತೆ ಸಂವಾದ ರೂಪದ ಕಥೆ ಹಾಗೂ ಇದು ಅವರ ಹೊಸ ಪ್ರಯೋಗ .ಇಡೀ ಕಥೆ ಒಂದು ಗಂಡು ಮತ್ತು ಹೆಣ್ಣಿನ ನಡುವಿನ ಸಂಭಾಷಣೆಯಾಗಿ ಮೂಡಿಬಂದು ಅವರ ಗತಪ್ರೇಮ ಹಾಗೂ ತ್ಯಜಿಸಿ ಬೇರೆಯವಳನ್ನು ಮದುವೆಯಾಗಿ, ಅವಳು ನಿಧನ ಹೊಂದಿದ ಮೇಲೆ ಮತ್ತೆ ತನ್ನನ್ನು ವರಿಸುವಂತೆ ಕೇಳಿದಾಗ ಅವಳ   ಇಂದಿನ ನಿರ್ಧಾರದ ಬಗ್ಗೆ ಹೇಳುತ್ತಾ ಕಥೆಯನ್ನು ಬಿಚ್ಚಿಡುತ್ತದೆ.  ಹೊಸ ತಂತ್ರ ಅನುಕರಣೀಯ ಎಂದೆನಿಸಿತು.

“ಹೊಸ ಬೆಳಗು” ಕಥೆಯು ಮಕ್ಕಳಿಲ್ಲದ ದಂಪತಿಗಳು ಮುಂದೆ ಅನಾಥಾಶ್ರಮ ತೆಗೆದು ನೂರಾರು ಮಕ್ಕಳಿಗೆ ಪೋಷಕರಾಗುವ ಒಂದು ಸಾಮಾಜಿಕ ಬದ್ಧತೆಯ ಹೊಸ ನಡೆಗೆ ನಾಂದಿ ಹಾಡುವಂತೆ ತೋರಿತು.

“ಸೋಲು ಗೆಲುವು” ಕಥೆಯಲ್ಲಿ ವರದಕ್ಷಿಣೆಗೆ ಆಸೆಪಟ್ಟು ತನ್ನ ಪ್ರೇಮವನ್ನು ನಿರಾಕರಿಸಿದ ಹುಡುಗನ ತಂದೆ ತಾಯಿ ಮತ್ತು ಅವನ ವಿರುದ್ಧ ತನ್ನದೇ ರೀತಿಯಲ್ಲಿ ಸೇಡು ತೀರಿಸಿಕೊಳ್ಳುವ ಹೆಣ್ಣಿನ ಕಥನವಿದ್ದರೆ ಜಿಜ್ಞಾಸೆಯಲ್ಲಿ ಕಾಲೇಜ್ ಕ್ಯಾಂಪಸ್ಸಿನಲ್ಲಿ ನಡೆಯುವ ಲೆಕ್ಚರರ್ ಹಾಗೂ ವಿದ್ಯಾರ್ಥಿ ಪ್ರೇಮ ಪ್ರಕರಣವಿದೆ.

ಸಂಕಲನದ ಶೀರ್ಷಿಕೆಯೂ ಕಡೆಯ ಕಥೆಯೂ ಆಗಿರುವ “ಊಸರವಳ್ಳಿ”ಯಲ್ಲಿ ಉದ್ಯೋಗ ನಿಮಿತ್ತ ಹೊರಗಿರುವ ಪತಿ ಮನೆಗೆ ಬಂದಾಗ ಮಾತ್ರ ಅವನೆದುರಿಗೆ ಅವನ ತಂದೆ ತಾಯಿಗಳನ್ನು ಬಹಳ ಚೆನ್ನಾಗಿ ನೋಡಿಕೊಳ್ಳುವಂತೆ ನಟಿಸಿ ಅವನು ಇಲ್ಲದ ವೇಳೆ ಅವರನ್ನು ಅನಾದರಿಸುವ  ಹೆಂಡತಿಯ ಕುರಿತದ್ದಾಗಿದೆ.

ಹಿಂದಿಯಲ್ಲಿ ಗಿರ್ ಗಿಟ್ ಎಂದರೆ ಊಸರವಳ್ಳಿ ಎಂದರ್ಥ.  ಸಂದರ್ಭಕ್ಕೆ ಸನ್ನಿವೇಶಕ್ಕೆ ತಕ್ಕಂತೆ ತಮ್ಮ ನಡವಳಿಕೆಯನ್ನೇ ಬದಲಾಯಿಸುವ ಈ ಗೋಸುಂಬೆ ಅಂತಹ ಮನುಷ್ಯರು,ಗೋಮುಖ ವ್ಯಾಘ್ರಗಳು ತುಂಬಿರುವ ಸಮಾಜದ ಮುಖವಾಡಗಳ ಅನಾವರಣ ಇದಾಗಿದ್ದರಿಂದ ಈ ಹೆಸರು ಸಂಕಲನಕ್ಕೆ ತುಂಬಾ ಸೂಕ್ತವಾಗಿ ಹೊಂದಿಕೊಂಡಿದೆ.

ಆಶಯ ನುಡಿಯಲ್ಲಿ ಹೇಳಿದಂತೆ ಇದ್ಯಾವುದೂ ಕನ್ನಡ ಸಾಹಿತ್ಯಕ್ಕೆ ಹೊಚ್ಚ ಹೊಸದು ವಿಷಯ ಎನ್ನುವಂತೆ ಏನು ಇಲ್ಲ.  ಆದರೆ ಈ ರೀತಿಯ ಸಮಸ್ಯೆಗಳು ಸಾರ್ವಕಾಲಿಕ ಹಾಗೂ ಸರ್ವವ್ಯಾಪಿ ಎಂಬುದರ ಜ್ವಲಂತ ಉದಾಹರಣೆಗಳಾಗಿ ಇವು ತೋರಲ್ಪಡುತ್ತದೆ . ವಾತಾವರಣಗಳ ವೈವಿಧ್ಯತೆ ವಿಭಿನ್ನತೆ ಇದೆ. ಹಾಗಾಗಿಯೇ ನಮ್ಮ ಮಣ್ಣಿಗೆ ತುಂಬಾ ಸಹಜವಾಗಿ ಹೊಂದಿಕೊಂಡು ಬಿಡುತ್ತವೆ.

ಲೇಖಕಿಯವರು ಹೇಳಿದಂತೆ ಸಹಜತೆಗಾಗಿ ಕೆಲವೊಂದು ಪದಗಳನ್ನು ಹಾಗೆಯೇ ಉಳಿಸಿಕೊಂಡಿದ್ದೇನೆ ಎನ್ನುವ ಸಂದರ್ಭದಲ್ಲಿ ಮತ್ತು ಸಂಭೋಧನಾತ್ಮಕವಾದ “ದೀದಿ” “ಭಯ್ಯಾ”  ಎನ್ನುವ ಪ್ರಯೋಗಗಳು ಹಾಗೂ ಉತ್ತರದ ನಾಮಪದಗಳು ಇರುವುದರಿಂದಷ್ಟೇ ಇದು ಅನುವಾದ ಎಂಬ ಅರಿವು ಮೂಡುತ್ತದೆಯೇ ವಿನಹ ಅದನ್ನು ಬಿಟ್ಟರೆ ಕನ್ನಡೀಕರಿಸುವ ಕೆಲಸ ತುಂಬಾ ಸಮರ್ಪಕ ಹಾಗೂ ಯಶಸ್ವಿಯಾಗಿಯೇ ನಡೆದಿದೆ ಎನ್ನಿಸುತ್ತದೆ.  ಅಲ್ಲದೆ ಹೆಣ್ಣಿನ ಮೇಲಿನ ದೌರ್ಜನ್ಯಗಳು ಮತ್ತು ಸ್ತ್ರೀ ಸಮಸ್ಯೆಗಳು ಎಲ್ಲಾ ಕಡೆಯೂ ಕಂಡುಬರುವುದರಿಂದ ಇದನ್ನು ಒಂದೇ ಪ್ರಾಂತ್ಯಕ್ಕೆ ಮಾತ್ರ ಸೀಮಿತಗೊಳಿಸುವ ಯಾವ ಅವಶ್ಯಕತೆಯೂ ಇಲ್ಲ.  ಮಾನವ ಸ್ವಭಾವಗಳು ಸಹಜ ಪ್ರವೃತ್ತಿಗಳು ಎಲ್ಲಾ ಕಡೆಯೂ ಒಂದೇ ಎಂಬುದು ಈ ಕಥೆಗಳಿಂದ ಮತ್ತಷ್ಟು ಸುಸ್ಬಷ್ಟವಾಗುತ್ತದೆ.

ಲೇಖಕಿಯವರ ಮಾತುಗಳಲ್ಲೇ ಹೇಳುವುದಾದರೆ ಈ ಕಥೆಗಳಲ್ಲಿ ಯಥಾರ್ಥತೆ ಹಾಗೂ ಆದರ್ಶದ ಸಾಮಂಜಸ್ಯವಿದೆ. ಸಮಸ್ಯೆಯ ಕಥನದೊಂದಿಗೆ ಅದರ ಸುಧಾರಣೆಯ ಹೆಜ್ಜೆಗಳು ಇರುವ ಇಂತಹ ಧನಾತ್ಮಕ ಪ್ರಯೋಗಗಳು ಇಂದಿನ ಸಮಾಜಕ್ಕೆ ಬೇಕಾದ ಅಗತ್ಯ.  ಇಂತಹ ಪ್ರಯತ್ನಗಳು ಲೇಖಕಿಯವರಿಂದ ಮತ್ತಷ್ಟು ಹೆಚ್ಚು ಆಗಲಿ ಅನುವಾದಗಳೊಂದಿಗೆ ತಮ್ಮದೇ ಸ್ವತಂತ್ರ ಕೃತಿಗಳನ್ನು ಹೆಚ್ಚು ಹೆಚ್ಚು ಹೊರ ತರುವಂತಾಗಲಿ ಎಂಬ ಹಾರೈಕೆ.


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top