ಅಂಕಣ ಬರಹ

ಕ್ಷಿತಿಜ

ಭಾರತಿ ನಲವಡೆ

ಭರವಸೆ

ನಮ್ಮ ಜೀವನವು ದೇವರು ಇದ್ದಾನೆ ಎಂಬ ಭರವಸೆಯಿಂದ ನಡೆಯುತ್ತದೆ ಈ ಭರವಸೆಯ ಮೂಲ ಶ್ರದ್ಧೆಯಾಗಿದೆ.ಆಲೋಚನೆಗಳು ಮನುಷ್ಯನ ವ್ಯಕ್ತಿತ್ವವನ್ನುಬದುಕನ್ನೂ ರೂಪಿಸುತ್ತವೆ.”ಜೀವನದಲ್ಲಿ ಏನಿದೆ? ನೀರಿನ ಮೇಲಿನ ಗುಳ್ಳೆಯಂತೆ ” ಎಂಬ ನಿರಾಶೆ ಭರವಸೆಯ ಬೇರನ್ನೇ ಕಿತ್ತೊಗೆಯುತ್ತದೆ.
ಪ್ರಾಥಮಿಕ ಹಂತದಿಂದಲೂ ಪಾದರಸದಂತೆ ಸದಾ ಕ್ರಿಯಾಶೀಲವಾಗಿದ್ದು ಕಲಿಕೆಯಲ್ಲಿ ಮುಂದಿದ್ದ ವಿನಯಳು ಪ್ರೌಡ ತರಗತಿಗೆ ಹೋದಂತೆ ಕಲಿಕೆಯಲ್ಲಿ ತೋರುವ ಆಸಕ್ತಿ ಕಡಿಮೆಯಾಯಿತು.ಮನೆಯಲ್ಲಿಯ ಬಡತನದ ಪರಿಸ್ಥಿತಿ ಇದು ಸಾಲದೆಂಬಂತೆ ತಾಯಿಗೆ ಮೇಲಿಂದ ಮೇಲೆ ಅನಾರೋಗ್ಯ,ಈ ಮಧ್ಯೆ ಅವಳು ಹತ್ತನೇ ತರಗತಿಯಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣಳಾದಳು.ಒಂದು ದಿನ ತನ್ನ ತಮ್ಮನನ್ನು ಶಾಲೆಗೆ ಕಳುಹಿಸಲು ಬಂದಾಗ ನಮ್ಮೆಲ್ಲರನ್ನು ಭೇಟಿಯಾದಾಗ ಅವಳು ಮಂಕಾಗಿದ್ದಳು.ಅವಳು ಅನುತ್ತೀರ್ಣಳಾಗಿದ್ದರಿಂದ ಇನ್ನು ಮುಂದೆ ಕಲಿಯಲೇಬಾರದೆಂಬ ಬಲವಾದ ನಕಾರಾತ್ಮಕ ಭಾವವನ್ನು ಅವಳು ವ್ಯಕ್ತಪಡಿಸಿದಳು. ಆಗನಾನು”ಜೀವನದಲ್ಲಿ ಕಷ್ಟ ಬರುವದು ನಮ್ಮನ್ನು ಗಟ್ಟಿಗೊಳಿಸಲಿಕ್ಕೆ ಅದಕ್ಕೆ ಹೆದರಿ ಜೀವನವೇ ಬೇಡ ಎಂದು ಬೇಸರ ಮಾಡಿಕೊಳ್ಳಬಾರದು.ತಾಳ್ಮೆಯನ್ನು ತೆಗೆದುಕೊಂಡು ನಮ್ಮ ಶಕ್ತಿಯ ಮೇಲೆ ನಮಗೆ ಭರವಸೆಇರಬೇಕು ಇದರೊಂದಿಗೆ ಶೃದ್ಧೆಯಿಂದ ಯಾವುದೇ ಕೆಲಸ ಮಾಡಿದರೂ ಯಶಸ್ಸು ಕಟ್ಟಿಟ್ಟ ಬುತ್ತಿ”ಎಂದು ಹೇಳಿದಾಗ ಅವಳ ಮುಖದಲ್ಲಿ ಆಶಾಕಿರಣದಂತೆ ಸಮಾಧಾನ ಚಿತ್ತದ ನಡೆ ಅವಳ ಮುಂದಿನ ಗುರಿಯನ್ನು ನೆನಪಿಸಿತ್ತು.”ಸರಿ ಮೇಡಂ ನಾನು ಆರನೇ ತರಗತಿಯಲ್ಲಿ ಮಹಿಳಾ ದಿನಾಚರಣೆಯ ನಾಟಕ ಮಾಡಿಯಾದ ಮೇಲೆ ಬಂದ ಅತಿಥಿಗಳು ನನ್ನ ಪಾತ್ರವನ್ನು ಮೆಚ್ಚಿ ನನಗೆ ಪ್ರೋತ್ಸಾಹ ಎಂಬಂತೆ 100ರೂ.ಗಳನ್ನು ಕೊಟ್ಟು ಮುಂದೇನಾಗುತ್ತಿಯ?ಎಂದಾಗ ನಾನು ಶಿಕ್ಷಕಿಯಾಗುತ್ತೇನೆ ಎಂದಿದ್ದೆ,ನಾನು ಮತ್ತೆ ಪರೀಕ್ಷೆ ಬರೆದು ಮುಂದಿನ ಶಿಕ್ಷಣ ಪಡೆಯುವೆ” ಎಂಬ ಭರವಸೆ ಅವಳ ನಿರ್ಧಾರವನ್ನು ಬದಲಿಸಿತ್ತು.

ಬದುಕಿನಲ್ಲಿ ಶ್ರದ್ಧೆ ಬೇಕು.ಆಶಾವಾದ ಬೇಕು ಸೋಲುಗಳು ಎದುರಾಗುತ್ತವೆ ನಿಜ,ಬದುಕಿನಲ್ಲಿ ಭರವಸೆ ಮೂಡಿಸಲು ಸೋಲು ಮಾರಕವಾದರೂ ಇಂದಿನ ಸೋಲು ನಾಳಿನ ಗೆಲುವಿಗೆ ದಾರಿ ಮಾಡಿ ಕೊಡುತ್ತದೆ.
ಬದುಕಿನಲ್ಲಿ ಶ್ರದ್ಧೆ ಇಲ್ಲದಿರಲು ಕಾರಣ ಹಲವಾರು.”ನಾನು ಅಸಮರ್ಥ ನನ್ನಿಂದ ಈ ಕೆಲಸ ಮಾಡಲಾಗದು,”ಎನ್ನುವ ಕೀಳರಿಮೆ ನಮ್ಮ ಧೈರ್ಯವನ್ನು ಕುಗ್ಗಿಸುತ್ತದೆ.ಕೈಗೆ ದೊರೆತಾಗ ಸ್ವೀಕರಿಸದೇ ‘ಅಯ್ಯೋ..ಅವಕಾಶ ತಪ್ಪಿಹೋಯಿತಲ್ಲ! ಎಂಬ ಗೊಣಗಾಟ ಹತಾಶೆಯನ್ನು ಮೂಡಿಸುತ್ತದೆ.ದುರ್ಬಲತೆಯ ನಿರಾಶಾವಾದದ ಪ್ರತೀಕ ಸುಖವನ್ನು ಹಿಡಿಯಲು ಕೈ ಚಾಚಿದರೂ ಸಿಗುವದಿಲ್ಲ. ಮರುಭೂಮಿಯ ಮರೀಚಿಕೆಯಂತೆ ಸುಖ ಅವರಿಗೆ ಕೇವಲ ಕಾಲ್ಪನಿಕ.ವಿದ್ಯಾರ್ಥಿ ಜೀವನವನ್ನು ಅವಲೋಕಿಸಲಾಗಿ
ಮಗುವು ತನ್ನ ಕಲಿಕೆಯಲ್ಲಿ ಶ್ರದ್ಧೆಯಿಂದ ತೊಡಗುವಂತೆ ಮಾಡುವದು ಹೇಗೆ? ಎಂಬಲ್ಲಿ ಶಿಕ್ಷಕರಿಗಿಂತ ಪಾಲಕರ ಪಾತ್ರ ತುಂಬಾ ಮಹತ್ವದ್ದಾಗಿದೆ.
ಮಕ್ಕಳಿಗೆ ರುಚಿಯಾದ ಊಟ ಬಟ್ಟೆ ಹೇಗೆಯೋ ಹಾಗೆ ಅವರಿಗೆ ಅವರ ಬಾಲ್ಯದಲ್ಲಿ ಕಲಿಕೆ ಎಂಬುದು ಸಂತಸದಿಂದ ಆಸಕ್ತಿಯಿಂದ ಕೂಡಿರಬೇಕು.ಶಿಕ್ಷಕರು ನೀಡಿದ ಮನೆಗೆಲಸದ ಕುರಿತು ಗಮನ ಹರಿಸಿ ಅವತ್ತಿನ ಕೆಲಸವನ್ನು ಅವತ್ತೆ ಶ್ರದ್ಧೆಯಿಂದ ಮಾಡುವ ಹಾಗೆ ಅವರನ್ನು ಒಂದೆಡೆ ಕುಳ್ಳಿರಿಸಿ ಅಚ್ಚುಕಟ್ಟಾಗಿ ಮಾಡಲು ತಿಳಿಸಬೇಕು.ಈ ಅವಧಿಯಲ್ಲಿ ಅವರ ಅವಧಾನಕ್ಕೆ ಭಂಗವಾಗದಂತೆ ಶಾಂತವಾದ ಪರಿಸರದಲ್ಲಿ ಅಧ್ಯಯನ ಮಾಡುವ ಅವಕಾಶ ನೀಡಿ ಅವರಿಗಾಗಿ ಪಾಲಕರು ವೇಳೆಯನ್ನು ನಿಗದಿ ಪಡಿಸಿ ಆ ವೇಳೆಯಲ್ಲಿ ಮೊಬೈಲ್ ಟಿ.ವಿಯಿಂದ ತಾವೂ ಆ ಕೋಣೆಯಿಂದ ದೂರವಿಟ್ಟು ತೊಂದರೆಯಾಗದ ರೀತಿಯಲ್ಲಿ ವ್ಯವಸ್ಥೆ ಮಾಡಬೇಕು.ಬೆಳಗಿನ ಜಾವದಲ್ಲೂ ಅವರನ್ನು ಎಚ್ಚರಿಸಿ ಅಧ್ಯಯನಕ್ಕೆ ಅಣಿ ಮಾಡಬೇಕಾದ ಅವಶ್ಯಕತೆ ಅವರ ಗುರುತರವಾದ ಜವಾಬ್ದಾರಿಯಾಗಿದೆ.ಇನ್ನೂ ಕೆಲವರು ಪಾಲಕರು ತಮ್ಮ ಮಕ್ಕಳು ಮನೆಪಾಠದಲ್ಲೆ ಎಲ್ಲಾ ಓದಿಕೊಂಡು ಬಂದಿದ್ದಾರೆ ಎಂದು ಭ್ರಮಿಸಿ ಅವರನ್ನು ವಿಚಾರಿಸುವ ತಮ್ಮ ಜವಾಬ್ದಾರಿಯನ್ನೇ ಮರೆತು ಬಿಂದಾಸ್ ಆಗಿದ್ದು ಕಡಿಮೆ ಅಂಕ ಬಂದ ಮೇಲೆ ಪ್ರಶ್ಚಾತ್ತಾಪ ಪಡುತ್ತಾರೆ.
ಮಕ್ಕಳಿಗೆ ಈ ವಿದ್ಯಾರ್ಥಿ ಜೀವನದ ಅವಧಿಯು ಬಂಗಾರದಂತ ಬೆಲೆಯುಳ್ಳದ್ದು ಇದು ಒಮ್ಮೆ ಕಳೆದು ಹೋದರೆ ಮರಳಿಸಿಗಲಾರದು.”ಮುತ್ತಿಗಿಂತ ಹೊತ್ತು ಉತ್ತಮ”ಎಂಬಂತೆ ಮುತ್ತು ಹೋದರೇ ಪೇಟೆಯಿಂದ ಖರೀದಿಸಿ ತರಬಹುದು ಆದರೆ ಹೊತ್ತು ಹೋದರೆ ಮರಳಿ ಪಡೆಯಲು ಅಸಾಧ್ಯ.ಈ ನಿಟ್ಟಿನಲ್ಲಿ ತಮ್ಮ ಮಕ್ಕಳ ಮೇಲಿನ ಅತಿಯಾದ ಭರವಸೆ ಮುಂದೊಂದು ದಿನ ತಲೆಕೆಳಗಾಗುವ ಸನ್ನಿವೇಶವನ್ನು ಸೃಷ್ಟಿ ಮಾಡುವುದರಲ್ಲಿ ಸಂದೇಹವೇ ಇಲ್ಲ.
ಜೀವನದಲ್ಲಿ ಭರವಸೆಯನ್ನು ಕಳೆದುಕೊಳ್ಳುವದೆಂದರೆ ಬದುಕಿನ ಅರ್ಥವನ್ನೇ ಕಳೆದುಕೊಂಡಂತೆ.ನಾಳಿನ ಭವಿಷ್ಯವನ್ನು ಮತ್ತು ಇಂದಿನ ವಿದ್ಯಮಾನವನ್ನು ಅದರಲ್ಲಿ ಸುಖ ಸಂತೋಷ ದುಃಖ ನೋವನ್ನು ಸಮರಸವಾಗಿ ಸ್ವೀಕರಿಸಬೇಕು.ರಾತ್ರಿ ಕಳೆದ ಮೇಲೆ ಹಗಲು ಬಂದೆ ಬರುತ್ತದೆ ಎಂಬ ವಿಶ್ವಾಸದಂತೆ ದುಃಖ ಕಳೆದ ಮೇಲೆ ಸುಖ ಬಂದೇ ಬರುತ್ತದೆ ಎಂಬ ಭರವಸೆಯು ಛಲದಿಂದ ಅಚ್ಚೊತ್ತಿದ್ದಾಗಲೇ ಮನದಿ ಕೆಚ್ಚು ಸಾಧನೆಗೆ ಸ್ಫೂರ್ತಿ ನೀಡುತ್ತದೆ.
ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಹಳ ಕಷ್ಟಪಡುತ್ತಾರೆ.ಸಾಕಷ್ಟು ಹಣವನ್ನೂ ವ್ಯಯಿಸುತ್ತಾರೆ,ಕಾರಣ ಮಕ್ಕಳು ಹೇಗಾದರೂ ಹೋರಾಡಿ ತಮ್ಮ ಮುಂದಿನ ಜೀವನವನ್ನು ಸುಖಮಯವನ್ನಾಗಿ ಮಾಡಿಕೊಳ್ಳಲಿ ಎಂಬ ಉದ್ದೇಶದಿಂದ.ಆದರೆ ಯುವಕರು ಆಧುನಿಕ ಐಷಾರಾಮಿ ಜೀವನಕ್ಕೆ ಮಾರು ಹೋಗಿ ಅಗ್ಗದ ಪ್ರಚಾರ ಪ್ರಲೋಭನೆಯ ಆಕರ್ಷಣೆಯಿಂದ ಶ್ರಮದ ಮಹತ್ವವನ್ನರಿಯದೇ ಯೌವನದ ಮಹತ್ವದ ಪೂರ್ಣ ಕಾಲವನ್ನು ಅವ್ಯವಸ್ಥಿತ ರೀತಿಯಲ್ಲಿ ಕಳೆದು ತಮ್ಮ ದುರ್ಬಲ ವ್ಯಕ್ತಿತ್ವದಿಂದಾಗಿ ತನ್ನ ಮನೆತನಕ್ಕೆ ಸಮಾಜಕ್ಕೆ ನೆರವಾಗದೇ ಭಾರವಾಗುತ್ತಿದ್ದಾನೆ.
ಈ ನಿಟ್ಟಿನಲ್ಲಿ ನಿರಂತರ ಅಧ್ಯಯನ ಶೀಲತೆ ಇದ್ದರೆ ಅದು ಉತ್ತಮ ಭವಿಷ್ಯಕ್ಕೆ ಭರವಸೆ ನೀಡುತ್ತದೆ.ಉತ್ತಮ ಸಂಸ್ಕಾರ ಮಾನವೀಯತೆಯ ಬದುಕಿಗೆ ಕಾರಣವಾಗುವಲ್ಲಿ ಸಂದೇಹವೇ ಇಲ್ಲ ಅಲ್ಲವೇ?


ಭಾರತಿ ನಲವಡೆ

ಶ್ರೀಮತಿ ಭಾರತಿ ಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮಂಗಳವಾಡದಲ್ಲಿ ಸಹಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು
2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.
ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ
ರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾ ಸಾಹಿತ್ಯ ಪುರಸ್ಕಾರ 2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ
6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆ ಸಲ್ಲಿಸುತ್ತಿದ್ದಾರೆ

3 thoughts on “

Leave a Reply

Back To Top