ಜುಗಲ್ ಬಂಧಿ ಗಜಲ್

ಕಾವ್ಯ ಸಂಗಾತಿ

ಜುಗಲ್ ಬಂಧಿ ಗಜಲ್

ಬಹುಕಾಫಿಯಾ ಗಜಲ್

ಮನವು ಕಂದಿದೆ ನನಸು ತೋರಿದ ಆತಿಥ್ಯದಿಂದ
ತನುವು ಬೆಂದಿದೆ ಕನಸು ಕನವರಿಸಿದ ಕುಹಕದಿಂದ

ಬಾಳ್ವೆ ಬೆಸೆದ ಉಸಿರಲಿ ಏನನರಸುತ ಸಾಗಲಿ ಇನ್ನು
ಕ್ಷಣವು ಕಾಡಿದೆ ಮನಸು ಮಿಡಿದ ಹಾರೈಕೆಯಿಂದ

ಹಸಿ ಮಾತು ಹುಸಿಯಾಗಿದೆ ಋತುಗಳ ಪರ್ವದಲ್ಲಿ
ಛಲವು ಸೊರಗಿದೆ ಯಶಸು ತೊರೆದ ಕಸುವಿನಿಂದ

ಚಿತ್ತ ವಿಕೋಪದ ಚಾಳಿಗೆ ಸರಹದ್ದು ಕಟ್ಟಿದವರಿಹರೇ
ಭೀತತ್ವವು ಮೇಳೈಸಿದೆ ಮುನಿಸು ಬಿತ್ತಿದ ಭಾವದಿಂದ

ಬಾಳ ಯಾನಕೆ ಸುಖೀಗೀತೆ ಹಾಡುವವರಿಲ್ಲ ನಯನ
ಲಯವು ತಪ್ಪಿದೆ ಹುಲುಸು ಹಡೆಯದ ಹೃನ್ಮನದಿಂದ.

——
ನಯನ. ಜಿ. ಎಸ್.

ಬಹುಕಾಫಿಯಾ ಗಜಲ್

ಜಗವು ನೊಂದಿದೆ ಮುಳಿಸು ಮರೆಸಿದ ಪ್ರೀತಿಯಿಂದ
ಇಹವು ದಹಿಸಿದೆ ಕಿನಿಸು ಹೊತ್ತಿಸಿದ ದ್ವೇಷಾಗ್ನಿಯಿಂದ

ಭಾವವು ಉಸಿರ ಚೆಲ್ಲಿದೆಡೆ ತ್ಯಜಿಸು ಕಾಳಜಿಯ ಬಯಕೆ
ಮಿಗವು ಇಣುಕಿದೆ ಸೊಗಸು ಮಾಸಿದ ಅಂತರಂಗದಿಂದ

ತೃಷೆಯು ಇಂಗಿದೆ ಭ್ರಮನಿರಸ ಬದುಕಿನ ಯಾತ್ರೆಯಲ್ಲಿ
ಮೋಹವು ಮರಣಿಸಿದೆ ಹೊಲಸು ತುಂಬಿದ ಜನರಿಂದ

ಭರವಸೆಯು ಬದಿಗೆ ಸರಿದಿರಲು ಬವಣೆಯು ಒಡನಾಡಿ
ಜಸವು ಬಡವಾಗಿದೆ ತ್ರಾಸ ನೀಗದ ಜೀವಂತಿಕೆಯಿಂದ

ವಿಜಯದಿ ಹರ್ಷಿಸಲೆಂತು ಏಕಾಂಗಿ ಜೀವ ಸಮರದಲ್ಲಿ
ಕಸುವು ಕುಗ್ಗಿದೆ ಕಲಸು ಹೃದಯದ ನಿರ್ಲಿಪ್ತತೆಯಿಂದ.

– ವಿಜಯಪ್ರಕಾಶ್ ಸುಳ್ಯ


Leave a Reply

Back To Top