ಅಂಕಣ ಸಂಗಾತಿ

ಶಿಕ್ಷಣ ಲೋಕ

ಡಾ.ದಾನಮ್ಮ ಝಳಕಿಯವರು ಬರೆಯುತ್ತಿದ್ದಾರೆ

ಕಲಿಕಾ ಚೇತರಿಕೆ

ಶಾಲೆಗಳು ಕಲಿಕಾ ಕೇಂದ್ರಗಳಾಗಿ ವಿದ್ಯಾರ್ಥಿಯ ಜ್ಞಾನದಾಹ ತಣಿಸುವದರ ಜೊತೆಗೆ ಜೀವನ ಕೌಶಲ ಮತ್ತು ಮೌಲ್ಯಗಳನ್ನು ಬೆಳೆಸುವ ಗುರುತರ ಜವಾಬ್ದಾರಿ ಹೊಂದಿದೆ. ಮಕ್ಕಳ ಸಮಗ್ರ ಬೆಳವಣೆಗೆಯಲ್ಲಿ ಈ ಮುಖ್ಯ ಕೌಶಲ ಹಾಗೂ ಮೌಲ್ಯಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಮೌಲ್ಯಗಳನ್ನು ಮಕ್ಕಳಲ್ಲಿ ರೂಢಿಸುವ ಸಂದರ್ಭದಲ್ಲಿ ವಿಮರ್ಶಾತ್ಮಕ ಚಿಂತನೆ, ಅನ್ವಯಿಕತೆ, ಧನಾತ್ಮಕ ಆಲೋಚನೆ, ವೈಚಾರಿಕ ಹಾಗೂ ವೈಜ್ಞಾನಿಕ ಮನೋಭಾವನೆ, ಸಂಶೋಧನಾತ್ಮಕ ಮತ್ತು ತಾರ್ಕಿಕ ಆಲೋಚನೆ ಇತ್ಯಾದಿಗಳನ್ನು ಬೆಳೆಸಿದಾಗ ವಿದ್ಯಾರ್ಥಿಯು ದೈಹಿಕ ಮತ್ತು ಮಾನಸಿಕ ಆರೋಗ್ಯ ಸದೃಢವಾಗುತ್ತದೆ.

            ಈ ಹಿನ್ನೆಲೆಯಲ್ಲಿ ಮಗುವಿನ ಕಲಿಕೆಯ ಬಗ್ಗೆ ಆಲೋಚಿಸಿದರೆ, ಎರಡು ವರ್ಷಗಳಿಂದ ನಮ್ಮ ವಿದ್ಯಾರ್ಥಿಗಳಿಗೆ ಕೋವಿಡ್‌ ದಿಂದಾಗಿ ಕಲಿಕೆಗೆ ಪೂರಕ ಪರಿಸರ ದೊರೆಯದೇ ಕಲಿಕಾ ಅಂತರ ಉಂಟಾಗಿದ್ದುದನ್ನು ಎಲ್ಲರೂ ಗಮನಿಸಿದ್ದೇವೆ. ಈ ಅಂತರವನ್ನು ಸರಿಪಡಿಸಲು ಹಾಗೂ ಮಗುವಿಗೆ ಸಾಮರ್ಥ್ಯಾಧಾರಿಕೆ ಕಲಿಕೆ,  ಸಂತಸ ಹಾಗೂ ಅರ್ಥಪೂರ್ಣ ಕಲಿಕೆಯಾಗುವಂತೆ  2022-23 ನೇ ಸಾಲಿನಲ್ಲಿ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕಲಿಕಾ ಚೇತರಿಕೆಯನ್ನು ಜಾರಿಗೆ ತರಲಾಗಿದೆ. ಈ ಕಲಿಕಾ ಚೇತರಿಕೆಯ ಬಗ್ಗೆ ಎಲ್ಲ ಸ್ತರದ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮತ್ತು ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಅಲ್ಲದೇ ಭಾಗಿದಾರರಾದ ಪಾಲಕ ಪೋಷಕರಿಗೆ ಹಾಗೂ SDMC ಅಧ್ಯಕ್ಷ ಮತ್ತು ಎಲ್ಲ  ಸದಶ್ಯರಿಗೆ ಮತ್ತು ಶಿಕ್ಷಣ ಆಸಕ್ತರಿಗೆ ಈ ಕುರಿತು ಮಾಹಿತಿಯನ್ನು ನೀಡುವ ಮೂಲಕ ಜಾಗೃತಿ ಮೂಢಿಸಲಾಗಿದೆ.

            ಕಲಿಕಾ ಚೇತರಿಕೆ ಮಕ್ಕಳ ಕಲಿಕೆಗೆ ಒಂದು ಹೊಸ ಚೇತರಿಕೆ ಕ್ರಮವಾಗಿದ್ದು, ಸಾಮರ್ಥ್ಯಾಧಾರಿತ ಕಲಿಕೆಗೆ ಓತ್ತು ನೀಡುತ್ತಿದೆ. ಇದು ಸಂಪೂರ್ಣವಾಗಿ ಕಲಿಕಾ ಫಲ ಆಧರಿತವಾಗಿದೆ. ಮಕ್ಕಳಿಗಾಗಿ ಚಟುವಟಿಕೆ ಪುಸ್ತಕ ಹಾಗೂ ಶಿಕ್ಷಕರಿಗಾಗಿ ಸುಗಮಕಾರರ ಕೈಪಿಡಿಗಳಿವೆ.  ಮಕ್ಕಳಿಗೆ ಚಟುವಟಿಕೆ ಪುಸ್ತಕದ ಮೂಲಕ ಸ್ವ ಕಲಿಕೆ, ಸಂತಸ ಕಲಿಕೆ ಹಾಗೂ ಅರ್ಥಪೂರ್ಣ ಕಲಿಕೆ ಆಗುತ್ತಿದೆ. ಅಲ್ಲದೇ ಕಲಿಕಾ ಚೇತರಿಕೆ ಮೂಲಕ ಸಾಮರ್ಥ್ಯವಾರು ಕಲಿಕೆ ಆಗುತ್ತಿದೆ ಎನ್ನುವದರಲ್ಲಿ ಸಂಶಯವಿಲ್ಲ.

            2022-23 ನೇ ಸಾಲಿನಲ್ಲಿ ಮಳೆ ಬಿಲ್ಲು ಕಾರ್ಯಕ್ರಮದ ಮೂಲಕ ಮಕ್ಕಳು ಕಲಿಕೆಯನ್ನು ಸಂಬ್ರಮಿಸಿದರು. ತದನಂತರ ಕೇವಲ ಪಠ್ಯಪುಸ್ತಕದ ಜ್ಞಾನಾತ್ಮಕ ಕಲಿಕೆಗೆ ಮಾತ್ರ ಜೋತು ಬೀಳದೇ ಅನ್ವಯಿಕ ಕಲಿಕೆಗಾಗಿ ಕಲಿಕಾ ಫಲ ಆಧರಿಸಿದ ಕಲಿಕೆಯು ಕಲಿಕೆ ಚೇತರಿಕೆ ಮೂಲಕ ಜಾರಿಗೆ ತಂದದ್ದರಿಂದ ನಮ್ಮ ಸರಕಾರಿ ಶಾಲೆ ಮಕ್ಕಳು ಜಾಗತಿಕ ಮಟ್ಟದಲ್ಲಿ ಬೆಳೆಯಲು ಸಹಕಾರಿಯಾಗಿದೆ.

               ಮಗುವಿನ ಕಲಿಕೆಯ ಪ್ರಯಾಣ ಅನುಭವದಿಂದ ಕೂಡಿರಬೇಕು. ಒಂದು ಕಲಿಕಾ ನಿಲ್ದಾಣದಿಂದ ಇನ್ನೊಂದು ಕಲಿಕಾ ನಿಲ್ದಾಣಕ್ಕೆ ಪಯಣಿಸುವ ಹಾಗೆ ಮೂರ್ತದಿಂದ ಅಮೂರ್ತದೆಡೆಗೆ, ಸರಳತೆಯಿಂದ ಸಂಕೀರ್ಣತೆ ಎಡೆಗೆ ಹೊಸ ಹೊಸ ವಿಚಾರಗಳನ್ನು ಅರಿತು ಅನುಭವಿಸುವಂತೆ ಮಗು ತನ್ನ ಜ್ಞಾನವನ್ನು ತಾನೇ ಸಂರಚಿಸಿಕೊಳ್ಳಲು ವಿವಿಧ ಚಟುವಟಿಕೆಗಳು ಸಹಾಯಕವಾಗಿವೆ. ಹೊಸ ಆವಿಷ್ಕಾರದ ಹೊಸ ಚಿಂತನೆಯತ್ತ ಮುಖ ಮಾಡಿ ಹೊಸ ವಿಷಯವನ್ನು ತನ್ನಲ್ಲಿ ಈಗಾಗಲೇ ಇರುವ ಪೂರ್ವಜ್ಞಾನದೊಂದಿಗೆ ಸಮ್ಮಿಶ್ರಯಿಸಿ ಅರ್ಥೈಸಿಕೊಳ್ಳುವ ಮಗು ತರಗತಿಯಲ್ಲಿ ಲವಲವಿಕೆಯಿಂದ ವಿಷಯವನ್ನು ಗ್ರಹಿಸುವಂತೆ ಆಗಬೇಕು. 21ನೇ ಶತಮಾನದ ಕೌಶಲ್ಯಗಳಾದ ವಿಮರ್ಶಾತ್ಮಕ ಚಿಂತನೆ, ಸಮಸ್ಯೆ ಪರಿಹಾರ, ಸೃಜನಶೀಲತೆ, ವೈಜ್ಞಾನಿಕ ಮನೋಭಾವ ಸಂವಹನ, ಸಾಮಾಜಿಕ ಹೊಣೆಗಾರಿಕೆ, ಬಹುಭಾಷಿಕತೆ, ಸಹ ಸಂಬಂಧ, ಡಿಜಿಟಲ್ ಲಿಟರಸಿ, ಮೊದಲಾದ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕಾದ ಹಿನ್ನೆಲೆಯಲ್ಲಿ ಚಟುವಟಿಕೆ ಆಧಾರಿತ ತರಗತಿ ಪ್ರಕ್ರಿಯೆಯು ಆಕರ್ಷಕವಾಗಬೇಕು ಹಾಗೂ ಸಂತಸದಾಯಕ ಕಲಿಕೆ ಆಗಿರಬೇಕು.ಇವೆಲ್ಲವೂ ಕಲಿಕಾ ಚೇತರಿಕೆಯಲ್ಲಿವೆ.

ಕಲಿಕಾ ಚೇತರಿಕೆ ಚಟುವಟಿಕೆ ಆಧರಿತ ಕಲಿಕೆಗೆ ಹೆಚ್ಚು ಒತ್ತು ನೀಡಿದೆ. ಚಟುವಟಿಕೆಗಳ ತರಗತಿ ಪ್ರಕ್ರಿಯೆ ಎಂದಿಗೂ ವ್ಯಕ್ತಿ, ವಿಷಯ ಹಾಗೂ ಸಂದರ್ಭಗಳ ಕೇಂದ್ರೀತಗಳಾಗಿರುವುದಿಲ್ಲ. ಸ್ವತಂತ್ರ ಅರ್ಥಪೂರ್ಣ ಸ್ವ ಅನುಭವ ಸಹಿತ ಸ್ವಯಂ ಅಭಿವ್ಯಕ್ತಿ ಅವಕಾಶಗಳಿರುವ ತರಗತಿಯಾಗಿರುತ್ತವೆ. ಇಲ್ಲಿ ಶಿಕ್ಷಕ ಸುಗಮಕಾರನಾಗಿ ವಿದ್ಯಾರ್ಥಿ ಕ್ರಿಯಾಶೀಲತೆಯಿಂದ ತೊಡಗಿಸಿಕೊಳ್ಳಲು ಅನುವು ಮಾಡಿಕೊಡಬೇಕು. ಚಟುವಟಿಕೆಗಳು ಈ ಕೆಳಗಿನ ಪ್ರಮುಳ ಹಂತಗಳನ್ನು ಒಳಗೊಂಡಿರುತ್ತವೆ.

ಚಟುವಟಿಕೆಯ ಹಂತಗಳು:-

1) ಚಟುವಟಿಕೆಯ ಪೂರ್ವ ಸಿದ್ಧತೆ.

2) ವಿದ್ಯಾರ್ಥಿಗಳಿಗೆ ಸೂಚನೆ ನೀಡುವುದು.

3) ಚಟುವಟಿಕೆಯ ಹಂತ.

4) ದಾಖಲೀಕರಣ.

5) ಚರ್ಚೆ ಮಂಡನೆ.

6) ಸುಗಮಕಾರರಿಂದ ವಿಷಯ ಸಮನ್ವೀಕರಣ.

 ಸುಗಮಕಾರರ ಕೈಪಿಡಿ ಮತ್ತು ವಿದ್ಯಾರ್ಥಿಗಳ ಚಟುವಟಿಕೆಗಳ ಹಾಳೆಗಳಲ್ಲಿ ನೀಡಲಾದ ವಿವಿಧ ಚಟುವಟಿಕೆಗಳನ್ನು ವಿದ್ಯಾರ್ಥಿಗಳ ಕಲಿಕಾ ಪರಿಸರ ಸ್ಥಳೀಯ ಸೌಲಭ್ಯಗಳ ಲಭ್ಯತೆ ಮತ್ತು ಸ್ಥಳೀಯ ಅಗತ್ಯತೆಗಳಿಗೆ ಅನುಗುಣವಾಗಿ ಬದಲಿಸಿಕೊಳ್ಳುವ ಹೊಸ ಚಟುವಟಿಕೆಗಳನ್ನು ಆಯೋಜಿಸುವ ಪುನರ್ರೂಪಿಸಿಕೊಳ್ಳುವ ಸಾಧ್ಯತೆಗಳು ತೆರೆದಿರುತ್ತವೆ. ಸುಗಮಕಾರರು ಕ್ರಿಯಾಶೀಲ ಕಲಿಕಾ ಪ್ರಕ್ರಿಯೆ ರೂಪಿಸುವುದೇ ಇಲ್ಲಿನ ಉದ್ದೇಶವಾಗಿದ್ದು, ಅರ್ಥಪೂರ್ಣ ಕಲಿಕೆಯನ್ನು ಸಾಧಿಸಲು ಕಲಿಕಾ ಚೇತರಿಕೆ ಅತ್ಯುತ್ತಮ ಕಾರ್ಯಕ್ರಮವಾಗಿದೆ.

ಇತ್ತೀಚಿಗೆ NAS, CSAS ಮೂಲಕ ಮಕ್ಕಳ ಕಲಿಕೆಯನ್ನು ಒರೆಹಚ್ಚಲು ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸಮೀಕ್ಷೆಗಳು ನಡೆಯುತ್ತಿರುವುದು ಎಲ್ಲರಿಗೆ ತಿಳಿದ ವಿಷಯ. ಆ ಎಲ್ಲ  ಸಮೀಕ್ಷೆಗಳು ಸಾಮರ್ಥ್ಯ ಆಧರಿತ ಕಲಿಕೆಯನ್ನು ಹಾಗೂ ಅನ್ವಯಿಕ ಜ್ಞಾನದ ಬಗ್ಗೆ ಒರೆಹಚ್ಚುವದರ ಬಗ್ಗೆಯೇ ಆಗುತ್ತಿರುತ್ತದೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಕೇವಲ ಪಠ್ಯದ ಜ್ಞಾನಾತ್ಮಕ ವಲಯಕ್ಕೆ ಮಾತ್ರ ಜೋತು ಬೀಳದೇ ಕಲಿಕಾ ಫಲ ಆಧರಿಸಿ ಮುನ್ನಡೆಯಬೇಕಾಗಿದೆ. ಆದ್ದರಿಂದ ಈ ಕಾರ್ಯಕ್ಕೆ ಕಲಿಕಾ ಚೇತರಿಕೆ ಉಪಕ್ರಮವು ನಮಗೆ ದೀವಿಗೆಯಾಗಿ ಸಹಾಯಕವಾಗಿದೆ. ಇದರಿಂದ ಸರ್ಕಾರಿ ಶಾಲೆಗಳ ಕಲಿಕಾ ಗುಣಮಟ್ಟದಲ್ಲಿಯೂ   ಉತ್ತಮವಾದ ಫಲಿತಾಂಶ ಕಂಡುಬರುವದರಲ್ಲಿ ಸಂಶಯವೇ ಇಲ್ಲ.


ಡಾ.ದಾನಮ್ಮ ಝಳಕಿ

ಡಾ.ದಾನಮ್ಮ ಝಳಕಿ ಯವರು ಪ್ರಸ್ತುತ ಶ್ರೀಮತಿ ಸೋಮವ್ವ ಚ ಅಂಗಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾಗಿದ್ದು ಶಿಕ್ಷಣದಲ್ಲಿ ಇವರು ನಡೆಸಿದ ಹಲವು ಸಂಶೋದನಾ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಸಂಸ್ತೆಗಳಿಂದ ಪ್ರಕಟಗೊಂಡಿವೆ.ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಬಾಜನರಾಗಿದ್ದಾರೆ.ಶಿಕ್ಷಣ ಮಾತ್ರವಲ್ಲದೆ ಸೃಜನಶೀಲ ಸಾಹಿತ್ಯ ರಚನೆಯಲ್ಲು ಇವರು ತಮ್ಮ ಛಾಪು ಮೂಡಿಸಿರುವ ಇವರ ಹಲವಾರು ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ

Leave a Reply

Back To Top