ವಿಶೇಷ ಬರಹ
ಹೆಣ್ಣಿನ ಪರವಾಗಿ ದನಿ ಎತ್ತಿದ ಕವಯಿತ್ರಿ
ಸಂಚಿ ಹೊನ್ನಮ್ಮ
ಎಲ್. ಎಸ್. ಶಾಸ್ತ್ರಿ
ಹೆಣ್ಣಿನ ಪರವಾಗಿ ದನಿ ಎತ್ತಿದ ಕವಯಿತ್ರಿ
ಸಂಚಿ ಹೊನ್ನಮ್
ಪೆಣ್ಣಲ್ಲವೆ ತಮ್ಮನೆಲ್ಲ ಪಡೆದ ತಾಯಿ
ಪೆಣ್ಣಲ್ಲವೆ ಪೊರೆದವಳು
ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು
ಕಣ್ಣು ಕಾಣದ ಗಾವಿಲರು..
ಹದಿನೇಳನೆಯ ಶತಮಾನದಲ್ಲೇ ಹೆಣ್ಣನ್ನು ತಾತ್ಸಾರ ದೃಷ್ಟಿಯಿಂದ ನೋಡುವವರನ್ನು ಹೀಗೆ ತರಾಟೆಗೆ ತೆಗೆದುಕೊಂಡ ದಿಟ್ಟ ಮಹಿಳೆ ಸಂಚಿ ಹೊನ್ನಮ್ಮ.
ಕನ್ನಡದಲ್ಲಿ ಕವಯಿತ್ರಿಯರ ಪರಂಪರೆ ಆರಂಭವಾದದ್ದು ೧೧ ನೆಯ ಶತಮಾನದಲ್ಲಿ ” ಕಂತಿ” ಯಿಂದ. ದ್ವಾರಸಮುದ್ರದ ಬಲ್ಲಾಳರಾಯನ ಆಸ್ಥಾನಕವಿ ನಾಗಚಂದ್ರನ ಸಮಕಾಲೀನಳೆನ್ನಲಾದ ಕಂತಿ ಅಭಿನವ ಪಂಪನೆನಿಸಿದ ನಾಗಚಂದ್ರನ ಸಾವಿರ ಪ್ರಶ್ನೆಗಳಿಗೆ ಆಶು ಕವಿತ್ವದಿಂದಲೇ ಉತ್ತರಿಸಿ ಅಭಿನವ ವಾಗ್ದೇವಿ , ಭಾಷಾ ವಿಶಾರದೆ ಎನಿಸಿಕೊಂಡವಳು. ಅವರ ವಾಗ್ವಾದ ” ಕಂತಿ – ಹಂಪರ ಸಮಸ್ಯೆಗಳು ” ಎಂಬ ಓಲೆಗರಿ ಗ್ರಂಥದಲ್ಲಿದೆ.
೧೨ ನೇ ಶತಮಾನದಲ್ಲಿ ಅಕ್ಕಮಹಾದೇವಿ ವಚನಗಳ ಮೂಲಕ ತನ್ನ ಕಾವ್ಯಪ್ರತಿಭೆ ತೋರಿಸಿದ್ದಾಳೆ.
ಸಂಚಿ ಹೊನ್ನಮ್ಮ ಬದುಕಿದ್ದು ೧೬೭೨ ರಿಂದ ೧೭೦೪ ರ ನಡುವೆ. ಚಾಮರಾಜನಗರದ ಎಳಂದೂರಿನಲ್ಲಿ ಜನಿಸಿದ ಹೊನ್ನಮ್ಮ ಚಿಕ್ಕದೇವರಾಯನ ಮಡದಿ ಪಟ್ಟದರಸಿ ದೇವರಾಜಮ್ಮಣ್ಣಿಯ ಬಳಿ ಕೆಲಸಕ್ಕಿದ್ದರೂ ಅವರಿಬ್ಬರಲ್ಲಿ ತುಂಬ ಆತ್ಮೀಯತೆಯ ಒಡನಾಟ ಇತ್ತು. ಹೊನ್ನಮ್ಮ ಬುದ್ಧಿವಂತಳೆಂದು ಅರಿತ ಅರಸಿ ಅವಳಿಗೆ ಆಗಿನ ಘನ ಪಂಡಿತ ರಾದ ಸಿಂಗರಾರ್ಯ ತಿರುಮಲಾರ್ಯರಿಂದ ಶಿಕ್ಷಣ ಕೊಡಿಸಿದಳು.
ಅರಸ ಸೂಚಿಸಿದಂತೆ ಹೊನ್ನಮ್ಮ ” ಹದಿಬದೆಯ ಧರ್ಮ” ಎಂಬ ಸಾಂಗತ್ಯ ಕಾವ್ಯವನ್ನು ರಚಿಸಿದಳು. ಅದರಲ್ಲಿ ೯ ಸಂಧಿಗಳಿದ್ದು ೪೭೯ ಪದ್ಯಗಳಿವೆ. ಆ ಕಾವ್ಯ ಅಂದಿನ ಸನಾತನ ಧರ್ಮದ ಪದ್ಧತಿಗನುಗುಣವಾಗಿ ಮಹಿಳೆಯ ಪಾತಿವ್ರತ್ಯ , ಪತಿಸೇವೆ , ಅತ್ತೆ ಮಾವನ ಸೇವೆ ಮೊದಲಾದ ವಿಷಯಗಳನ್ನೊಳಗೊಂಡಿದ್ದರೂ ಮಹಿಳೆಯನ್ನು ಪುರುಷರು ಕಡೆಗಣಿಸಿ ನೋಡಬಾರದೆಂಬ ಸಂದೇಶವನ್ನೂ ನೀಡಿದ್ದು ಗಮನಾರ್ಹ. ಹೆಣ್ಣು ನಿಮ್ಮನ್ನು ಹೊತ್ತು ಹೆತ್ತವಳು. ಅವಳನ್ನು ಗೌರವದಿಂದ ನೋಡದೆ ತಿರಸ್ಕಾರದಿಂದ ನೋಡುವವರು ಕಣ್ಣಿಲ್ಲದ ಮೂರ್ಖರು ಎಂದು ಹೊನ್ನಮ್ಮ ಕಟುವಾಗಿ ಹೇಳಿದ್ದಾಳೆ. ಆಗಿನ ಕಾಲಪರಿಸ್ಥಿತಿಯಲ್ಲಿ ಈ ದಿಟ್ಟತನ ಅಪರೂಪವೆ.
ಅತ್ತಿಮಬ್ಬೆ ಹತ್ತನೇ ಶತಮಾನದಲ್ಲಿ ಆಗಿಹೋಗಿದ್ದರೂ ಅವಳು ಸ್ವತಃ ಕಾವ್ಯರಚನೆ ಮಾಡಿದವಳಲ್ಲ. ಪ್ರೋತ್ಸಾಹಿಸಿದವಳು.
–ಎಲ್. ಎಸ್. ಶಾಸ್ತ್ರಿ