ಕಥಾಯಾನ

ಆಕಾಂಕ್ಷಿ

ಅಶ್ವಥ್

ವ್ಯಾಪಾರಿ ಬುದ್ಧಿಯಿಲ್ಲದ ಬೀದಿವ್ಯಾಪಾರಿ ರಾಮು, ಬಂದಿರುವ ಬೀದಿಯ ಗ್ರಾಹಕರಿಗೆ ಏನು ಬೇಕೆಂದು ಕೇಳುವುದು, ಅದಕ್ಕೆ ಹಣ ಎಷ್ಟು  ಎಂದು ಹೇಳಿ ಹೆಚ್ಚಿಗೆ ಹಣ ಕೊಟ್ಟವರಿಗೆ ಚಿಲ್ಲರೆ ಕೊಡುವುದರ ಹೊರತಾಗಿ ಒಂದೇ ಒಂದು ಹೆಚ್ಚಿನ ಮಾತನ್ನೂ ಆಡುವವನಲ್ಲ. ಇನ್ನು ಗಿಲೀಟಿನ ಮಾತು ಅಂದರೆ ಅವನಿಗೆ ಪರದೇಶೀ ಭಾಷೆಯೇನೋ ಅನ್ನುವಷ್ಟು ದೂರವೆನಿಸುವುದು.

         ನಿತ್ಯವೂ ಬಿಳಿಕೆರೆ ಸರ್ಕಲ್ಲಿನ ರಾಯರ ಮಠದ ಹಿಂಭಾಗದಲ್ಲಿ, ಬೆಳಿಗ್ಗೆ ತಳ್ಳುವ ಗಾಡಿಯಲ್ಲಿ ಇಡ್ಲಿ ಮಾರುತ್ತಾ, ಸಂಜೆ ಹೊತ್ತಿನಲ್ಲಿ  ಬೇಲ್ ಪೂರಿ, ಚುರುಮುರಿ ಮಸಾಲೆ ಸೌತೆಕಾಯಿ ಮಾರುತ್ತಾ ನಿಂತಿರುತ್ತಿದ್ದ ರಾಮು, ದೂರದ ಸಕಲೇಶಪುರದಿಂದ ಬಂದಿದ್ದ ಸಂದೇಶನಿಗೆ ಆಪತ್ಬಾಂಧವನಾಗಿದ್ದ. ಸಂದೇಶ್ ಓದುವುದಕ್ಕೆಂದು ಬೆಂಗಳೂರಿಗೆ ವಲಸೆ ಬಂದವನು, ಬಿಳಿಕೆರೆ ಏರಿಯಾದ ಬಾಡಿಗೆಯ ಮನೆಯಲ್ಲಿ ವಾಸವಾಗಿದ್ದ  ದಿನಗಳಿಂದಲೂ, ರೂಮಿನಲ್ಲಿ ಅಡುಗೆ ಮಾಡಿಕೊಳ್ಳುತ್ತಿದ್ದ. ಬೆಳಿಗ್ಗೆ ಎಚ್ಚರವಾಗುವುದು ತಡವಾದಾಗ, ಪರೀಕ್ಷೆಗಳಿದ್ದ ಸಮಯದಲ್ಲಿ, ಅಡುಗೆಗೆ ಸಮಯ ಹೊಂದಿಸಲಾಗದೇ, ರಾಮುವಿನ ಗಾಡಿ ಮುಂದೆ ಹಾಜರಾಗಿ, ತಿಂಡಿ ಪ್ಯಾಕ್ ಮಾಡಿಸಿಕೊಂಡು ಬರುತ್ತಿದ್ದ. ಎಂಜಿನಿಯರಿಂಗ್ ಕಾಲೇಜಾಗಿದ್ದರಿಂದ ಲ್ಯಾಬ್ ಗಳಿದ್ದು ಸಂಜೆ ತಡವಾಗಿ ಮನೆಗೆ ಬರುವಂತಹ ದಿನಗಳಲ್ಲಿ  ಬೇಲ್ ಪೂರಿಯನ್ನೋ, ಮಂಡಕ್ಕಿಯ ಚುರುಮುರಿಯನ್ನೋ ಕಟ್ಟಿಸಿಕೊಂಡು ಮನೆ ಸೇರಿಕೊಳ್ಳುತ್ತಿದ್ದ. ಮೂರು ವರ್ಷಗಳ ತನಕ ರೂಮಿನಲ್ಲಿ ಅಡುಗೆ ಮಾಡಲಾಗದ ಬಹುತೇಕ ದಿನಗಳಲ್ಲಿ ರಾಮುವಿನ ತಳ್ಳುವ ಗಾಡಿಯ ತಟ್ಟೆಇಡ್ಲಿ, ಮಸಾಲೆ ವಡೆ, ಸಂಜೆಯ ಸ್ನ್ಯಾಕ್ ಗಳು ಸಂದೇಶನಿಗೆ ಒಂದು ರೀತಿಯ ಕಡಿಮೆ ಖರ್ಚಿನ, ಶ್ರಮರಹಿತ ಹೊಟ್ಟೆಪಾಡು ಎನ್ನುವಂತಾಗಿದ್ದವು. ರಾಮುವಿನ ತಿನಿಸುಗಳ್ಯಾವೂ ಆರೋಗ್ಯದ ಮೇಲೆ ವಕ್ರದೃಷ್ಟಿಬೀರದೇ ಇದ್ದುದರಿಂದ ಬೇರೆ ಜಾಗಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲದಾಯಿತು.

         ರಾಮು ಸಂಕೋಚದ ಸ್ವಭಾವದವನಾಗಿದ್ದರೂ ಅವನ ಸಣ್ಣ ವಯಸ್ಸು, ಮುಗ್ಧತೆಯನ್ನು ಕಂಡು ಜನರಿಲ್ಲದಿದ್ದ ಸಮಯದಲ್ಲಿ ಸಂದೇಶನು ತಾನೇ ಮಾತಿಗಿಳಿಯುತ್ತಿದ್ದ. “ ಏನೋ ಹುಡುಗಾ, ಇಡ್ಲಿ ವ್ಯಾಪಾರ ಮಾಡಿ ಸ್ಕೂಲ್ ಗೆ ಎಷ್ಟೊತ್ತಿಗೆ ಹೋಗ್ತೀಯೋ?” ಅಂದರೆ, ‘ಯಾಪಾರ ಮುಗಿಸಿದ್ಮೇಲೆ’ ಅಂದು ಸುಮ್ಮನಾಗಿಬಿಡುತ್ತಿದ್ದ.  ಕೆಲವೊಮ್ಮೆ ಇವನ ವ್ಯಾಪಾರವೆಲ್ಲ ಮುಗಿದ ಮೇಲೆ ಗಾಡಿಗೆ ಸಾಮಾನು ತುಂಬಿಕೊಂಡು ಹೋಗಲು ಅಪರೂಪಕ್ಕೊಮ್ಮೆ ಹೆಂಗಸರೊಬ್ಬರು ಬರುತ್ತಿದ್ದುದನ್ನು ಗಮನಿಸಿದ್ದ ಸಂದೇಶ, ಹುಡುಗನ ಅಮ್ಮ ಎಂಬುದನ್ನು ತಿಳಿದು ‘ಸ್ಕೂಲ್ ಗೆ ಹೋಗುವ ವಯಸ್ಸಿನ ಹುಡುಗನ್ನ ವ್ಯಾಪಾರಕ್ಕೆ ನಿಲ್ಲಿಸಿದೀರಿ, ಸಂಜೆಯೂ ವ್ಯಾಪಾರದಲ್ಲೇ ಇರ್ತಾನೆ. ಸರಿಯಾಗಿ ಓದ್ತಾನಾ ಏನು?’ ಎಂದು ಕೇಳಿದ್ದಕ್ಕೆ  ಅಮ್ಮ ಮಗ ಇಬ್ಬರೂ ಮುಖ ನೋಡುತ್ತಾ  ಹೌದೆನ್ನುವಂತೆ ಕತ್ತು ಅಲ್ಲಾಡಿಸಿದ್ದರು. ಸಂದೇಶನಿಗೆ ಯಾಕೋ ಅನುಮಾನವೆನಿಸಿತು.

       ಒಂದು ಸಂಜೆ ಚುರುಮುರಿ ತೆಗೆದುಕೊಂಡು ಬೇರೆ ಗ್ರಾಹಕರಾರೂ ಇಲ್ಲದ್ದನ್ನು ಕಂಡ ಸಂದೇಶ, ರಾಮುವಿನ ಬಗ್ಗೆ ಸ್ವಲ್ಪ ವಿಚಾರಿಸಿದ. ಅಷ್ಟರಲ್ಲಿ ರಾಮುವೂ ಸಹ ಸಂಕೋಚ ಸರಿಸಿ ಸಂದೇಶನೊಂದಿಗೆ ಮಾತನಾಡುವಷ್ಟು ಹೊಂದಿಕೊಂಡಿದ್ದ.  “ಹೇ ರಾಮು, ನೀನ್, ನನ್ನ ಸೋಮಾರಿ ಮಾಡ್ತಿದ್ದೀಯೇನೋ ಅನಿಸ್ತಿದೆ ಕಣೋ”  ಇನ್ನೂ ಎರಡು ವರ್ಷ ಕಾಲೇಜು ಇದೆ, ಅಷ್ಟರಲ್ಲಿ ನಾನು ಅಡುಗೆ ಮಾಡಿಕೊಳ್ಳೋದೇ ನಿಲ್ಲಿಸಿಬಿಡ್ತೀನೇನೋ ಅನ್ಸತ್ತೆ, ಕೆಲವು ಸಾರ್ತಿ”  ಅನ್ನುತ್ತಾ ಹಾಗೆಯೇ ಪಕ್ಕದಲ್ಲಿ ನಿಂತು ಮೊಣಕೈಯಿಂದ ಮೆಲ್ಲನೆ ನೂಕಿದ. “ಓ, ನೀವೇನ್ ಸಂದೇಶಣ್ಣ ಅಪರೂಪಕ್ಕೆ ಬರೋವ್ರು, ಬಸ್ಸಿಗೆ ಹೋಗುವ ಎಷ್ಟೊಂದ್ ಜನ ರೆಗ್ಯುಲರ್ ಕಸ್ಟಮರಿದಾರೆ ಗೊತ್ತಾ? ಸಂಜೆನೂ ಪರಾಠ, ರಾಗಿಮುದ್ದೆ ತರ ಅಡುಗೆ ಮಾಡಿದ್ರೆ ಅವರಿಗೆ ಅನುಕೂಲ ಅಂತಾರೆ” ಅಂದು ತನ್ನ ಕೆಲಸದಲ್ಲಿ ತೊಡಗಿದ. “ಹೌದೇನೋ, ವ್ಯಾಪಾರ ಜೋರಾಗಿ ಆಗ್ತಿದೆ ಅನ್ನು ಮತ್ತೆ… ಹಂಗಂತ ಓದೋ ಕಡೆ ಗಮನ ಬಿಟ್ಟು ಬರೀ ದುಡ್ಡು ನೋಡೋ ತರ ಆಗಬೇಡ ಮತ್ತೆ” ಎಂದಿದ್ದಕ್ಕೆ ರಾಮು, “ಎಲ್ಲಣ್ಣಾ, ಆರನೇ ಕ್ಲಾಸಿಗೇ ಸ್ಕೂಲ್ ನಿಲ್ಸಾಯ್ತು, ಈ ಕೆಲಸದಲ್ಲಿ  ನಿಲ್ಲೋಕೇಂತ” ಅಂದ. ಸಂದೇಶನ ಅನುಮಾನ ನಿಜವಾಗಿತ್ತು. ಏನೆಂದು ವಿಚಾರಿಸಿದರೆ, ಅವರ ಅಮ್ಮನ ಮನೆಯಲ್ಲಿ ಬಡತನ, ಕನಕಪುರದ ಕಡೆ ದಿನಗೂಲಿ ಕೆಲಸ ಮಾಡಿಕೊಂಡು ಕಾಲೋನಿಯೊಂದರ ಸಣ್ಣ ಮನೆಯಲ್ಲಿ ವಾಸವಾಗಿದ್ದವರು. ಅಪ್ಪ ಹೊಸೂರಿನ ಕಡೆಯಿಂದ  ಕೆಲಸಕ್ಕೆಂದು ಬಂದಿದ್ದು, ರಾಮುವಿನ ಅಜ್ಜನಿಗೆ ಸ್ವಲ್ಪ ಪರಿಚಯವಾದ್ದರಿಂದ ಮಗಳನ್ನು ಮದುವೆ ಮಾಡಿದ್ದನಂತೆ. ರಾಮು ಆನಂತರ ಒಬ್ಬಳು ತಂಗಿ ಇದ್ದು, ಮದುವೆಯಾಗಿ ಹತ್ತು ವರ್ಷವಾಗುವಷ್ಟರಲ್ಲಿ ಅಪ್ಪ ಎಲ್ಲಿಯೋ ಹೋಗಿ ವಾಪಸಾಗಲಿಲ್ಲವಂತೆ. ಸಂಸಾರದ ಜವಾಬ್ದಾರಿ ಹೊತ್ತ ಅಮ್ಮ, ಸರ್ಕಾರಿ ಶಾಲೆಯಲ್ಲಿದ್ದ ರಾಮುವನ್ನೂ ತಂಗಿಯನ್ನೂ ಕರೆದುಕೊಂಡು ಬೆಂಗಳೂರು ಸೇರಿದರೆಂದು ಹೇಳಿದ.

           ರಾಯರ ಮಠದ ಸ್ವಲ್ಪ ದೂರದಲ್ಲಿದ್ದ  ಸಣ್ಣ ಬೀದಿಯಲ್ಲಿ ಕಡಿಮೆ ಬಾಡಿಗೆಯ ಮನೆ ಹಿಡಿದು, ಕೆಲಸಕ್ಕೆಂದು ಹುಡುಕುವಾಗ ಮಠದ ಆವರಣವನ್ನು ಗುಡಿಸುವ, ನಿತ್ಯ ಮುಂಬಾಗಿಲು ತೊಳೆಯುವ ಕೆಲಸವಾಗಿ, ಆನಂತರ ಮೂರ್ನಾಲ್ಕು ಮನೆ ಕೆಲಸಗಳನ್ನೂ ಮಾಡಿಕೊಳ್ಳುತ್ತಿದ್ದ ಅಮ್ಮ ಹೇಗೋ ದಿನ ದೂಡುತ್ತಿದ್ದರು. ಮಠದ ಹಿಂದಿನ ಬಸ್ ನಿಲ್ದಾಣದಲ್ಲಿ ತರಕಾರಿ ಮಾರಾಟ ಮಾಡುವ ಹೆಂಗಸರೊಬ್ಬರ ಸಲಹೆಯಂತೆ, ಬಸ್ ಸ್ಟಾಂಡಿಗೆ ಬರುವ ಅನೇಕರಿಂದ ಬೆಳಗಿನ ತಿಂಡಿಯ ವ್ಯಾಪಾರ ಹೊಳೆದಿತ್ತಂತೆ.  ತಕ್ಕಮಟ್ಟಿಗೆ ಅಡುಗೆ ಗೊತ್ತಿದ್ದ ರಾಮುವಿನ ಅಮ್ಮ ತಟ್ಟೆಇಡ್ಲಿ ವ್ಯಾಪಾರಕ್ಕೆ ಮುಂದಾಗಿ,  ಆವರಣ ಗುಡಿಸುವ ಹೆಂಗಸಿನ ಅಡುಗೆ ವ್ಯಾಪಾರವನ್ನು ಯಾರಾದರೂ ಮೆಚ್ಚಿಯಾರೇ ಎಂದುಕೊಂಡು, ವ್ಯಾಪಾರ ನಿಭಾಯಿಸುವ ಹೊಣೆ ರಾಮುವಿಗೆ ಬಂದಾಯಿತು. ಆ ಬಗ್ಗೆ ನೋವು ಬಚ್ಚಿಕೊಂಡು ಅಭಿಮಾನದಲ್ಲಿ, ಅಮ್ಮನ ಸಂಪಾದನೆಗೆ ಕಡಿಮೆಯಿಲ್ಲದಂತೆ ಬೆಳಗಿನ ಹಾಗೂ ಸಂಜೆಯ ಮೂರ್ನಾಲ್ಕು ಗಂಟೆಗಳಲ್ಲಿ ಸಂಪಾದಿಸಿಕೊಂಡು ತಂಗಿಯನ್ನು ಓದಲು ಕಳಿಸ್ತಿದ್ದಾರೆ. ಸಂದೇಶನಿಗೆ ಕೇಳಿದ್ದು ಪಿಚ್ಚೆನಿಸಿದರೂ ಬದುಕಿನ ಅನಿವಾರ್ಯತೆಗಳು ಒಬ್ಬೊಬ್ಬರಿಗೆ ಒಂದೊಂದು ರೀತಿ ಎಂದುಕೊಂಡು ಸಣ್ಣ ಬೇಸರದಿಂದಲೇ ಬೆನ್ನುತಟ್ಟಿದ. ‘ನಮ್ಮಮ್ಮ “ಬೆಟ್ಟದ ಹೂವು” ಸಿನಿಮಾ ನೋಡಿ ನನಗೆ ರಾಮು ಅಂತ ಹೆಸರಿಟ್ಟಿದ್ದಂತೆ ಸಂದೇಶಣ್ಣಾ’ ಅನ್ನುತ್ತಾ ಪುನೀತ್ ರಾಜಕುಮಾರರ ಬಾಲ್ಯದ ಚಿತ್ರವೊಂದನ್ನು ಗಾಡಿಯ ತುದಿಯಲ್ಲಂಟಿಸಿರುವುದು ತೋರಿಸಿಸುವಾಗ ಅವನ ಕಣ್ಣುಗಳ ಹೊಳಪು, ಕಷ್ಟದ ಬದುಕಾದರೂ ಚೈತನ್ಯಕ್ಕೆ ಕುಂದಿಲ್ಲ ಎನಿಸುವಂತಿತ್ತು.

       ಸಂದೇಶನ ಮೂರನೇ ವರ್ಷದ ಕಾಲೇಜು ಮುಗಿದು ರಜೆಗೆ ಊರಿಗೆ ಹೋಗಿದ್ದಾಗ, ಬಿಳಿಕೆರೆ ಸರ್ಕಲ್ಲಿನಲ್ಲೊಂದು ಹೊಸ ಫಲಹಾರ ಭವನ ತಲೆಯೆತ್ತಿತ್ತು. “ಶ್ರೀ ರಾಘವೇಂದ್ರ ಭವನ, ಸಸ್ಯಾಹಾರಿ” ಎನ್ನುವ ಸಣ್ಣ ಅಕ್ಷರಗಳ ನಾಮಫಲಕದಲ್ಲಿ, ಬಾಳೆ ಎಲೆಗಳ ದೊಡ್ಡ ಚಿತ್ರದಲ್ಲಿ ತಟ್ಟೆಇಡ್ಲಿ, ಉದ್ದಿನ ವಡೆಗಳು ತಾಜಾತನವನ್ನು ಹೊರಹೊಮ್ಮುತ್ತಿರುವಂತೆ ಕಾಣುತ್ತಿದ್ದವು. ರಾಯರ ಮಠದ ಹಿಂಭಾಗದ ಬಿಳಿಕೆರೆ ಬಸ್ ಸ್ಟಾಂಡಿಗೆ ಕಾಣುವಂತೆ ಹೊಸ ಎಸ್ಆರ್ ಬಿ ಮಳಿಗೆಯು, ರಾಮುವಿನ ತಳ್ಳುವ ಗಾಡಿಯ ನಿಲ್ದಾಣಕ್ಕೆ ನೂರು ಅಡಿಯಷ್ಟು ದೂರದಲ್ಲಿದ್ದಿತ್ತು. ಅಲ್ಲಿಯತನಕ ಅಷ್ಟೇನೂ ಜೋರು ವ್ಯಾಪಾರವಿಲ್ಲದಿದ್ದರೂ, ನಿತ್ಯವೂ ತಪ್ಪದಂತೆ ವ್ಯಾಪಾರಕ್ಕೆ ಬರುತ್ತಿದ್ದ ರಾಮುವಿಗೆ  ಈಗ ಹೊಚ್ಚ ಹೊಸ ಎಸ್ ಆರ್ ವಿ ಭವನದ ಅಡುಗೆ ಕೋಣೆಯಿಂದ ಬರುವ ತಾಜಾ ಚಟ್ನಿಯ ಘಮಲು, ಉದ್ದಿನ ವಡೆ ಕರಿಯುವ, ನರುಗಂಪಿನ ಡಿಕಾಕ್ಷನ್ ಕಾಫಿಯ  ಸುವಾಸನೆ, ಮಿರುಗುವ ಹೊಸ ಟೇಬಲ್ಲುಗಳು, ಬಾಳೆ ಎಲೆಯ ಹಸಿರು ಹಿನ್ನೆಲೆಯಲ್ಲಿ ಬಿಳಿಯ ತಟ್ಟೆಇಡ್ಲಿಯ ಮೇಲೆ ಹೊಂದಿಕೆಯಾಗುವಂತಹ ತಿಳಿ ಕೇಸರಿ ಬಣ್ಣದ ಚಟ್ನಿ, ಇವೆಲ್ಲಾ ಆಕರ್ಷಣೆಗಳನ್ನೂ ಎದುರಿಸಬೇಕಾದ ಸವಾಲು ಕಾದಿತ್ತು. ಯಾವಾಗಲೋ ಬಣ್ಣ ಬಳಿದಂತೆ ಕಾಣುವ ನಾಲ್ಕು ಸೈಕಲ್ ಚಕ್ರದ ತಳ್ಳುವ ಗಾಡಿಯ ಮೇಲೆ  ಹಬೆಯನ್ನು ಹೊಮ್ಮುವ ಒಂದು ಪಾತ್ರೆ, ಇಡ್ಲಿ ಬಡಿಸುವ ಪ್ಲಾಸ್ಟಿಕ್ ತಟ್ಟೆ ಅದರ ಮೇಲೊಂದು ಒಣಗಿದ ಮುತ್ತುಗದ ಎಲೆ, ಕುಡಿಯುವ ನೀರು ತುಂಬಿರಿಸಿದ್ದ  ಮೂರು ಪ್ಲಾಸ್ಟಿಕ್ ಜಗ್ಗುಗಳು, ವಿದ್ಯುದ್ದೀಪಗಳ ಅಲಂಕಾರದಿಂದ ಕಂಗೊಳಿಸುವ ಮೈಸೂರು ಅರಮನೆಯ ಮುಂದೆ ಝೀರೋ ವ್ಯಾಟ್ ಬಲ್ಬಿನಂತಾಯಿತು.

         ಆದರೂ ಧೃತಿಗೆಡದವನಂತೆ ತನ್ನ ಪಾಡಿಗೆ ತಾನು ಮಾಮೂಲಿನ ಜಾಗದಲ್ಲಿ ನಿಂತು ವ್ಯಾಪಾರ ಮಾಡುತ್ತಿದ್ದ ರಾಮುವಿಗೆ  ಒಂದೆರಡು ವಾರಗಳಲ್ಲಿ ಎಸ್.ಆರ್ ಬಿ ಯ ವತಿಯಿಂದ ಒಂದು ನೋಟೀಸ್ ಬಂತು. ವ್ಯಾಪಾರದ ಪ್ರಮಾಣ ಕ್ಷೀಣಿಸಿದ್ದಕ್ಕೆ ತಕ್ಕಂತೆ ತಟ್ಟೆಇಡ್ಲಿ, ಮಸಾಲೆ ವಡೆಗಳ ಪ್ರಮಾಣವನ್ನೂ ಕಡಿಮೆ ಮಾಡಿಕೊಂಡಿದ್ದ ರಾಮು ಮೊದಲಿನಂತೆ ಹತ್ತೂವರೆಯ ಬಸ್ಸು ಹೊರಡುವ ತನಕ ಕಾಯದೇ ಮಾರಾಟವಾಗುವ ಇಡ್ಲಿಯ ಪ್ರಮಾಣದ ಆಧಾರದ ಮೇಲೆ ಜಾಗ ಖಾಲಿ ಮಾಡುತ್ತಿದ್ದನು. ಸ್ವಸಹಾಯ ಪದ್ಧತಿಯ ಎಸ್ ಆರ್ ವಿ ಯ ಮಳಿಗೆಯಲ್ಲಿ ತಿಂಡಿ ಸರಬರಾಜು ಮಾಡುತ್ತಾ ಗಲ್ಲಾಪೆಟ್ಟಿಗೆಯನ್ನೂ ನಿಭಾಯಿಸುವ ನಲವತ್ತು ದಾಟಿರಬಹುದಾದ ಮಧ್ಯವಯಸ್ಸಿನ ಭಟ್ಟರು, ಹಣೆಗೆ ಮಠದ ಚಂದನ, ಕುಂಕುಮವನ್ನು ಹಣೆಗೆ ಧರಿಸಿ, ಒಳಗಿನ ಜನಿವಾರ ಕಾಣುವಂತಹ ತೆಳುವಾದ ಬನಿಯನ್ನು ಧರಿಸಿ ನೀಟಾಗಿರುತ್ತಿದ್ದರು.  ಕಪ್ಪಗೆ ಕುಳ್ಳಗೆ ಇದ್ದ, ಇನ್ನೂ ಹೈಸ್ಕೂಲಿಗೆ ಹೋಗುವ ವಯಸ್ಸಿನ ರಾಮುವಿನಿಂದ ಅವರಿಗೇನೂ ಉಪಟಳವಾಗುವಂತಿರಲಿಲ್ಲ. ಆದರೂ ರಾಯರ ಮಠದ ಆವರಣಕ್ಕೆ ತಕ್ಕನಾಗಿದ್ದ ಉಪಹಾರ ಭವನದ ಕಣ್ಣಳತೆಯ ದೂರದಲ್ಲಿ ರಾಮುವಿನ ಗಾಡಿಯನ್ನು ಕಾಣುವುದೆಂದರೆ ಅವರಿಗೆ ಅಷ್ಟಾಗಿ ಸರಿಕಾಣಲಿಲ್ಲ. ಮಠದ ಮೂಲಕ ಪರಿಚಯವಾಗಿದ್ದ ಸ್ಥಳೀಯರೊಬ್ಬರಿಗೆ ಈ ವಿಚಾರವನ್ನು ನಯವಾಗಿ ಹೇಳಿದ ಭಟ್ಟರು ಬೇರೆ ಎಲ್ಲಾದರೂ ಜಾಗ ನೋಡಿಕೊಳ್ಳುವಂತೆ ನೋಟೀಸು ಕಳಿಸಿಕೊಟ್ಟಿದ್ದರು. ರಾಮು ಹೆಚ್ಚೇನೂ ಮಾತನಾಡದೇ ‘ನಾಲ್ಕು ವರ್ಷದಿಂದ ಇಲ್ಲೇ ಬತ್ತೀನಿ, ಇಲ್ಲಿ ತರಕಾರಿ ಮಾರುವ ಕೆಲವರನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲ. ಬಸ್ ಸ್ಟಾಂಡಿಗೆ ಬರೋವ್ರು ಯಾಪಾರ ಮಾಡ್ತಾರೆ ಅಂತ ಇಲ್ಲಿದಿನಿ; ಈಗ ಒಂದೇ ಸಲ ಬೇರೆ ಜಾಗ ಅಂದರೆ” ಎಂದು ಮೆಲುದನಿಯಲ್ಲೇ ಹೇಳುತ್ತಾ “ಏನ್ ಕೊಡ್ಲಿ ಸಾರ್” ಎಂದು ಕೇಳಿದ.  “ನಿನ್ನ ಪುರಾಣ ಕೇಳೋಕೆ ಟೈಮಿಲ್ಲ, ಹೇಳ್ದಷ್ಟು ಮಾಡೋದುಕಲಿ” ಎಂದು ಭಟ್ಟರ ನೋಟೀಸುದಾರರು ಹೊರಟು ಹೋಗಿದ್ದರು. ವ್ಯಾಪಾರದ ಈ ಹೊಸ ಸ್ಪರ್ಧಾತ್ಮಕತೆಯ ಬಗ್ಗೆ ಏನೂ ಮಾತನಾಡದಿದ್ದರಿಂದ, ತಾನಾಗಿಯೇ ಕೆದಕಿ ಕೇಳದೇ ಸಂದೇಶನೂ ತನ್ನಷ್ಟಕ್ಕಿದ್ದು ಮಾಮೂಲಾಗಿ ತಿಂಡಿ ಕಟ್ಟಿಸಿಕೊಂಡು ಹಿಂತಿರುಗುತ್ತಿದ್ದನು. ಅಂತಿಮ ವರ್ಷದಲ್ಲಿ ಪ್ರಾಜೆಕ್ಟ್ ಕೆಲಸಗಳ ಪ್ರಯುಕ್ತ ಕಾಲೇಜಿಗೆ ಲೇಟಾಗಿ ಹೋಗುತ್ತಿದ್ದಾಗ ವಾರದ ಕೆಲವು ದಿನಗಳು, ದಾರಿಯಲ್ಲಿ ರಾಮುವಿನ ಗಾಡಿಯ ಗೈರುಹಾಜರಿಯನ್ನು ಸಂದೇಶ ಗಮನಿಸಿದ್ದ. ಆನಂತರ ಶಾಶ್ವತವೆನಿಸುವಂತೆ, ರಾಮು  ಒಂದು ದಿನ ಇದ್ದಕ್ಕಿದ್ದ ಹಾಗೆ ಹೇಳದೇ ಕೇಳದೇ ಮಾಯವಾಗಿಬಿಟ್ಟಿದ್ದ. ಹಾಗಾಗಿ ತಿಂಡಿಗೆ ಅನಿವಾರ್ಯವೆನಿಸಿದಾಗ ಎಸ್ ಆರ್ ಬಿ ಯನ್ನೋ ಅಥವಾ ಕಾಲೇಜು ಕ್ಯಾಂಟೀನನ್ನೋ ಅವಲಂಬಿಸತೊಡಗಿದ. ಮುಖ ನೋಡುತ್ತಲೇ ತಿಂಡಿ ಪ್ಯಾಕ್ ಮಾಡದೇ,  ಕೌಂಟರ್ ಗೆ ಹೋಗಿ ಆರ್ಡರ್ ಮಾಡಿ ಹಣಕೊಟ್ಟು, ಮಾಣಿಗೆ ಟೋಕನ್ ತಲುಪಿಸುವಾಗ  ಬೆಟ್ಟದ ಹೂವಿನ ನಾಯಕನಂತಹ ಮಹತ್ವಾಕಾಂಕ್ಷಿ ರಾಮು ನೆನಪಾಗುತ್ತಿದ್ದ.

       ಕಾಲೇಜು ಮುಗಿಸಿ ಕೆಲಸ ಪ್ರಾರಂಭಿಸಿದ್ದ ಸಂದೇಶನು ನಿತ್ಯ ಬಿಳಿಕೆರೆಯಿಂದ ಬನ್ನೇರುಘಟ್ಟ ರಸ್ತೆಗೆ ಪ್ರಯಾಣಿಸುವುದು ದೂರವೆನಿಸಿ, ಆಫೀಸಿನ ಒಂದು ಶಾಖೆ ಜಯನಗರದಲ್ಲೂ ಇದ್ದುದರಿಂದ ಎರಡೂ ಬ್ರಾಂಚುಗಳಿಗೆ ಸಮಾನ ದೂರವೆನಿಸುವಂತೆ ಪುಟ್ಟೇನಹಳ್ಳಿಯಲ್ಲಿ ಬಾಡಿಗೆ ಮನೆ ಹಿಡಿದಿದ್ದ. ಕಾಲೇಜಿಗೆ ಹೋಗುವಾಗಿನ ಸೆಕೆಂಡ್ ಹ್ಯಾಂಡ್ ಸ್ಪ್ಲೆಂಡರ್ ಬೈಕ್ ಬದಲಾಯಿಸಿ ಹೊಸ ಬುಲೆಟ್ಟ್ ಖರೀದಿಸಿದ್ದ. ಒಂದು ದಿನ ಸೌತ್ಎಂಡ್ ಸರ್ಕಲ್ಲಿನ ಟ್ರಾಫಿಕ್ ಲೈಟ್ ಕಾಯುತ್ತಾ ನಿಂತಿದ್ದಾಗ, ಅಚಾನಕ್ಕಾಗಿ ಅಪರಿಚಿತ ದನಿಯೊಂದು “ಸಂದೇಶಣ್ಣ” ಎಂದು ಕೂಗಿದಂತಾಗಿ ಸುತ್ತ ನೋಡುವಾಗ ಆಟೋ ಒಂದರಿಂದ ಮೆಲ್ಲನೆ ತಲೆ ಹೊರಗೆ ಬಂದಿದ್ದು ಕಂಡ. ದೃಷ್ಟಿಯಿಟ್ಟು ಗಮನಿಸಿ ಇಡ್ಲಿರಾಮು ಎಂದು ಗೊತ್ತುಮಾಡಿಕೊಂಡು ಅವನತ್ತ ಬರುವಂತೆ ಸೂಚಿಸಿ ಸಿಗ್ನಲ್ ನೋಡಿದ. ಅಷ್ಟರಲ್ಲಿ ಆಟೋ ಗೆ ಹಣಕೊಟ್ಟು ಇಳಿದುಬಂದ ರಾಮುವನ್ನು ಕೂರಿಸಿಕೊಂಡು ಮುಂದಿನ ರಸ್ತೆಯ ಕ್ಯಾಂಟೀನಿನತ್ತ ನಿಲ್ಲಿಸಿ ವಿಚಾರಿಸತೊಡಗಿದ-

        “ಏನೋ ರಾಮು, ಧಿಡೀರನೆ ಮಾಯವೂ ಆಗ್ತೀಯ, ಮತ್ತೆ ಹೀಗೇ ಪ್ರತ್ಯಕ್ಷನೂ ಆಗ್ತೀಯಾ, ಹೇಗಿದ್ದೀಯಾ” ಎಂದು ವಿಚಾರಿಸುತ್ತಲೇ ತನ್ನ ಓದು ಮುಗಿಸಿ ಕೆಲಸ ಶುರುಮಾಡಿ ಹೊಸ ಏರಿಯಾದಲ್ಲಿರುವುದನ್ನೂ ಹೇಳಿದ. ಬಿಳಿಕೆರೆಯ ತಳ್ಳುವ ಗಾಡಿಗೆ ಒಂದು ದಿನ ಪೊಲೀಸ್ ಪೇದೆಯೊಬ್ಬರು ಬಂದು ಹೆದರಿಸಿ ಗಾಡಿ ಸೀಝ್ ಮಾಡ್ತೀವಿ ಅಂದಿದ್ದನ್ನೂ, ಅದಾಗಿ ಒಂದು ವಾರದಲ್ಲಿ ಸ್ಥಳೀಯ ದಾಂಡಿಗರಿಬ್ಬರು ಗಾಡಿಯ ಚಕ್ರವನ್ನು ಜಖಂಗೊಳಿಸಿದರೆಂದೂ ನಂತರ ಬಾಡಿಗೆಯ ತಳ್ಳುವ ಗಾಡಿಯೂ ಇಲ್ಲದೇ ವ್ಯಾಪಾರ ನಿಲ್ಲಿಸಿದ್ದರಿಂದ ಆ ಏರಿಯಾ ಬಿಟ್ಟು ಬೇರೆ ಜಾಗ ಹುಡುಕುತ್ತಲೇ  ಜೆ.ಪಿ ನಗರದ ಕಡೆ ಬಂದಿದ್ದಾಗಿ ಹೇಳಿದ. ತಳ್ಳುವ ಗಾಡಿಯೂ ಬಾಡಿಗೆಯದ್ದೆಂದು ಸಂದೇಶನಿಗೆ ಗೊತ್ತಿರಲಿಲ್ಲ. ನಿರುಪದ್ರವಿಗೆ ಹೆದರಿಸಿ ಓಡಿಸಿದರು ಎನ್ನುವಾಗ ರಾಮುವಿನ ದನಿಯಲ್ಲಿ ದ್ವೇಷಮಿಶ್ರಿತ ತಿರಸ್ಕಾರ ಗೋಚರವಾಗುತ್ತಿತ್ತು. “ಹೋಗಲಿ ಬಿಡು, ಆ ತೊಂದರೆಗಳನ್ನೂ ನಿಭಾಯಿಸಿ ಇನ್ನೂ ನಗುಮುಖವನ್ನೇ ಉಳಿಸ್ಕೊಂಡಿದ್ದೀಯಲ್ಲಾ” ಎಂದು ಸಂದೇಶ ಸಮಾಧಾನ ಮಾಡಿದ. ಈಗ ಆಫೀಸ್ ಬಾಯ್ ಆಗಿ ಟೆಂಪರರಿ ಕೆಲಸ ಮಾಡುತ್ತಾನೆಂದು ಗೊತ್ತಾಗಿ, ಮುಂದೆ ಅವನ ಉದ್ದೇಶ ಏನು ಎಂದು ಕೇಳಿದ. ಸ್ವಲ್ಪ ದಿನ ಕೆಲಸ ಮಾಡುತ್ತಾ, ಆಮೇಲೆ ಸ್ವಲ್ಪ ಬಂಡವಾಳ ಮಾಡಿಕೊಂಡು, ಬಿಳಿಕೆರೆಗಿಂತಲೂ ಸ್ವಲ್ಪ ಹೆಚ್ಚು ಜನಸಂದಣಿಯಿರುವ ಜಾಗ ನೋಡಿ ಒಂದು ತಿಂಡಿಯ ಗಾಡಿ ಹಾಕಿಕೊಳ್ಳೋದು; ಹಾಗೆಯೇ ಮುಂದುವರಿದು ಒಂದಿಷ್ಟು ವರ್ಷದಲ್ಲಿ ಮಳಿಗೆಯೊಂದನ್ನು ಹಿಡಿದು ಸಣ್ಣ ದರ್ಶಿನಿ ಹೊಟೇಲೊಂದನ್ನು ಶುರುಮಾಡಿಕೊಳ್ಳುವ ಯೋಜನೆ ಹೊರಹಾಕಿದ ರಾಮು. ಅಷ್ಟರಲ್ಲೇ ಈ ಆಫೀಸ್ ಬಾಯ್ ಸಂಪಾದನೆ ಕಡಿಮೆಯೆನ್ನುತ್ತಾ, ಆಫೀಸುಗಳಿಗೆ ಕಾಫಿ, ಟೀ, ಸಮೋಸ ದಂತಹ ಸ್ನ್ಯಾಕ್ ಸರಬರಾಜು ಮಾಡುವ ಗುತ್ತಿಗೆ ಸಿಗುವುದಾದರೆ ಮಾಡುತ್ತೇನೆಂದು ತಾನೇ ಹೊಸ ಆಸಕ್ತಿಯೊಂದನ್ನು ತಿಳಿಸಿದಾಗ, ವಿಚಾರಿಸಿ ಗೊತ್ತಾದರೆ ಹೇಳ್ತೀನಿ ಅನ್ನುತ್ತಾ ಸಂದೇಶ ತನ್ನ ಫೋನ್ ನಂಬರ್ ಕೊಟ್ಟ.

       ಎರಡು ವಾರಗಳ ನಂತರ ರಾಮು, ನಾಲ್ಕು ಆಫೀಸುಗಳನ್ನು ಆಗಲೇ ಸಂಪರ್ಕಿಸಿ ಗುತ್ತಿಗೆ ಸಿಗಬಹುದು ಎನ್ನುತ್ತಾ ಖಾತ್ರಿಮಾಡಿಕೊಂಡು, ಅವು ಸ್ವಲ್ಪ ಕಡಿಮೆ ಜನರಿರುವುದರಿಂದ, ಸಂದೇಶನ ಸಾಫ್ಟ್ ವೇರ್ ಆಫೀಸಿನಲ್ಲೂ ಒಮ್ಮೆ ಕೇಳುವಂತೆ ಒತ್ತಾಯಿಸಲು ಫೋನ್ ಮಾಡಿದ್ದ. ಸಂದೇಶನ ಆಫೀಸ್ ಅಡ್ಮಿನಿಸ್ಟ್ರೇಷನ್ ನಲ್ಲಿ ವಿಚಾರಿಸಿದಾಗ ಆಫೀಸಿನವರ ಪರಿಚಯದವರಾದರೆ ಒಳ್ಳೆಯದೇ ಎನ್ನುತ್ತಾ  “ಸರಿ, ಬಂದು ಮಾತಾಡೋಕೆ ಹೇಳಿ, ಆದರೆ ಕ್ವಾಲಿಟಿ ಸಮಸ್ಯೆ ಆಗಬಾರದು ಅಂತ ಹೇಳಿಬಿಡಿ” ಅಂದಿದ್ದರು. ಆ ಸಂಜೆಯೇ ಸಂದೇಶನು ರಾಮುವಿಗೆ ವಿಚಾರ ಹೇಳಿ ಬಂದು ಮಾತನಾಡಿಕೊಂಡು ಹೋಗುವಂತೆ ಹೇಳುವಾಗ, ಸುಮಾರು ಆರುನೂರು ಜನಕ್ಕೆ ದಿನಕ್ಕೆ ಎರಡು ಬಾರಿ ಕಾಫಿ/ಟೀ ಸರಬರಾಜಿಗೆ ಕೇಳಿದರೆಂದು ಸುದ್ದಿ ತಲುಪಿಸಿದ.  ಹೆಚ್ಚಿನ ಬಂಡವಾಳದ ಅಗತ್ಯವಿಲ್ಲದಿದ್ದರೂ,  ಓಡಾಟಕ್ಕೆ ಟಿವಿಎಸ್ ಮೊಪೆಡ್  ಬೇಕೆಂದೂ ಸೆಕೆಂಡ್ ಹ್ಯಾಂಡ್ ಗೆ ಆಗುವಷ್ಟು ಹಣ ಇದೆಯೆಂದೂ ರಾಮು ಸೂಚಿಸಿದ. ಸಂಬಳದ ಒಂದಿಷ್ಟು ಹಣವನ್ನು ಸಂದೇಶನೇ ಕೊಡುವುದಾಗಿ ಹೇಳಿ, “ಸದ್ಯ ಹೊಸದನ್ನೇ ತೊಗೊಂಡು ಶುರು ಮಾಡು,  ಆದರೆ ಒಂದು ಕಂಡೀಷನ್ನು, ಆಫೀಸಿನ ವ್ಯಾಪಾರ ಆದ್ದರಿಂದ ಸಂಜೆ ಹೊತ್ತು ಓದುವುದನ್ನು ರೂಢಿ ಮಾಡ್ಕೊಬೇಕು” ಎಂದ. ಸಂಕೋಚದಿಂದಲೇ ಹಣವನ್ನು ನಿರಾಕರಿಸಿಯೂ, ತಟ್ಟೆಇಡ್ಲಿ ಪರಿಚಯದ ಸಂಬಂಧದಿಂದಾಗಿ ಕಡೆಗೆ ಒಪ್ಪಿಕೊಂಡು ವ್ಯಾಪಾರ ಶುರು ಮಾಡಿದ. ಸುಮಾರು ಒಂದು ತಿಂಗಳು ಕಳೆಯುತ್ತಲೇ ಸ್ವತಃ ತಯಾರಿ ಮಾಡಿಕೊಂಡು ಎಸ್ಸೆಸ್ಸೆಲ್ಸಿ ಪರೀಕ್ಷೆ ಕಟ್ಟುವ ಬಗ್ಗೆಯೂ ರಾಮುವಿಗೆ ತಿಳಿಹೇಳಿ, ಟ್ಯೂಷನ್ ಮಾಡುವ ಒಬ್ಬರ ಬಳಿ ಕರೆದುಕೊಂಡು ಹೋಗಿ, “ಸ್ವಲ್ಪ ಸಹಾಯ ಮಾಡಿ ಸಾರ್, ಹುಡುಗ ಐದಾರು ವರ್ಷದಿಂದ ಸ್ಕೂಲ್ ಗೆ ಹೋಗಿಲ್ಲ” ಎಂದು ಸಂದೇಶನೇ ಖುದ್ದು ಫೀಸ್ ಕೊಟ್ಟು, “ಪಾಸ್ ಮಾಡ್ಕೊಬೇಕು ಕಣೋ ರಾಮು”  ಎಂದಾಗ,  ಖಂಡಿತವಾಗಿಯೂ ಎನ್ನುವಂತೆ ಸೂಚಿಸಿ “ಫೀಸ್ ಎಷ್ಟಾಯ್ತು” ಎಂದ. “ಅದು ಎಷ್ಟಾದರೂ ಇರಲಿ, ಪಾಸ್ ಮಾಡದಿದ್ರೆ ಆಫೀಸ್ ಬ್ಯುಸಿನೆಸ್ ಬಂದ್ ಮಾಡಿಸ್ತೀನಿ” ಎನ್ನುತ್ತಾ ಸಂದೇಶ ತಮಾಷೆ ಮಾಡಿದ. ಆಫೀಸಿಗೆ ಬರುವಾಗ ಆಗ್ಗಾಗ್ಗೇ ಓದಿನ ಬಗ್ಗೆ ವಿಚಾರಿಸುತ್ತಿದ್ದು,  ಕಾಫಿ/ಟೀ  ಗೆ ಹಾಲಿನ ಜೊತೆಗೆ ಕಾವೇರಿ ನೀರು ಹರಿಯುತ್ತಿದೆಯೇ ಅಥವಾ ಯಾವುದಾದರೂ ಬೋರ್ವೆಲ್ ನೀರು, ಎಂದು ನಗೆಯ ಚಟಾಕಿ ಹಾರಿಸುವಾಗ, “ಛೇ, ಸಾಫ್ಟ್ವೇರ್ನವರಿಗೆ ಮೋಸ ಮಾಡಕಾಗ್ತದಾ ಸಂದೇಶಣ್ಣ” ಎನ್ನುತ್ತಾ ರಾಮು ಗಂಭೀರನಾಗಿದ್ದ.  ಅದಕ್ಕೆ ಸಂದೇಶ “ಮೋಸ ಯಾರಿಗೂ ಮಾಡಬಾರದು ಕಣೋ  ರಾಮು, ನಿನಗೆ ಮೋಸ ಆಗಿದ್ದು ಗೊತ್ತಿದೆ, ಆದರೆ ಮೋಸ ಆಗುವುದರಿಂದ ತಪ್ಪಿಸಿಕೊಳ್ಳಬೇಕು, ಮೋಸದ ಜೊತೆ ಪೈಪೋಟಿಗೆ ನಿಲ್ಲಬಾರದು” ಎನ್ನುತ್ತಾ ರಾಮುವಿಗೆ ಸಣ್ಣದಾಗಿ ಪ್ರೇರಣೆ ತುಂಬಲು ಪ್ರಯತ್ನಿಸುತ್ತಿದ್ದ.

         ಅಂದುಕೊಂಡಂತೆಯೇ ರಾಮು ಎಸ್ಸೆಸ್ಸೆಲ್ಸಿ ಮುಗಿಸಿ ಜಯನಗರದ ಸಂಜೆ ಕಾಲೇಜಿನಲ್ಲಿ ಓದು ಮುಂದುವರಿಸಿಕೊಂಡು ತಂಗಿಯ ಓದನ್ನೂ ಗಮನಿಸಿಕೊಳ್ಳುವಂತಾಗಿದ್ದ. ತನ್ನದೊಂದು ಪುಟ್ಟ ಹೊಟೇಲ್ ಮಾಡುವ ಕನಸು ಬೆಟ್ಟದಹೂವಿನ ರಾಮುವಿನ ಪುಸ್ತಕ ಕೊಳ್ಳುವ ಕನಸಿನಂತೆಯೇ ಮುಂದುವರಿದಿತ್ತು.  ಸಂದೇಶ ಇರುವ ರೂಮಿಗೆ ಯಾವಾಗಲೋ ಒಮ್ಮೆ ಬರುತ್ತಿದ್ದರೂ ತಾನು ಯಾವ ಏರಿಯಾದಲ್ಲಿರುವುದು ಎನ್ನುವುದನ್ನು ಹೇಳುತ್ತಿರಲಿಲ್ಲ. ಹಾಗೆಯೇ ಕೆಲಸ ಮುಂದುವರಿಸಿಕೊಂಡು ಬಿ.ಕಾಂ ಪದವಿಗೆ ಸೇರುತ್ತಿದ್ದೀನಿ ಎಂದು ಹೇಳಿದ್ದ. ಅಷ್ಟರಲ್ಲಿ ಸಂದೇಶ ತನ್ನ ಅನುಭವಕ್ಕೆ ಹೊಂದುವ ಬೇರೆ ಕೆಲಸವಾಗಿ ಎಲೆಕ್ಟ್ರಾನಿಕ್ ಸಿಟಿಗೆ ಹೋಗುತ್ತಿದ್ದ.

          ಅಂದಿನಿಂದ ಸುಮಾರು ನಾಲ್ಕು ವರ್ಷದ ಸಮಯದಲ್ಲಿ ರಾಮುವಿನ ಡಿಗ್ರಿಯೂ ಮುಗಿಯಿತು. ತನ್ನ ಪದವಿಯ ಆಧಾರದ ಮೇಲೆ, ತಾನು ಕಾಫಿ/ಟೀ ಸರಬರಾಜು ಮಾಡುತ್ತಿದ್ದ ಒಂದು ಬ್ಯಾಂಕಿನ ಮೂಲಕ ಸಾಲವನ್ನು ಮಂಜೂರು ಮಾಡಿಸಿಕೊಂಡು ಸುಸಜ್ಜಿತ ಹೊಟೇಲ್ ತೆರೆಯುವುದಕ್ಕೆ ಸನ್ನದ್ಧನಾಗಿದ್ದ.  ಹೀಗೆಯೇ ವೀಕೆಂಡಿನಲ್ಲಿ ಭೇಟಿಯಾಗಬೇಕೆಂದು, ಜಯನಗರದ ಹತ್ತಿರ ಕಾಯುವುದಾಗಿ ಹೇಳಿದ. ಸಂದೇಶ ಬರುತ್ತಿದ್ದಂತೆಯೇ ರಾಮು ತನ್ನ ಹಳೆಯ ನೆನಪಿನ ಎಸ್ ಆರ್ ಬಿ ಹೊಟೇಲಿನ ಹೊಳೆಯುವ ನಾಮಫಲಕದ ನೆನಪನ್ನು ಹೇಳುತ್ತಾ, ಅಂತಹದ್ದೇ ಒಂದು ಹೊಟೇಲ್ ನ ತಯಾರಿಯಾಗುತ್ತಿದ್ದ ಮಳಿಗೆಯ ಮುಂದೆ ನಿಲ್ಲಿಸುವಂತೆ ಹೇಳಿದ. “ಸಂದೇಶಣ್ಣ, ಈಗ ಈ ಹೊಟೇಲ್ ಗೆ ಒಂದು ಹೆಸರು ಹೇಳಿ” ಅನ್ನುವಾಗ ವಿಚಾರ ಗೊತ್ತಿಲ್ಲದೇ ಸಂದೇಶ ಪಿಳಿಪಿಳಿ ಕಣ್ಣುಬಿಟ್ಟ. ಕಡೆಗೆ ಬ್ಯಾಂಕ್ ಸಾಲದ ಅನುಮೋದನೆಯಾಗಿದ್ದೂ, ಎಲ್ಲ ಏರ್ಪಾಡನ್ನೂ ಮಾಡಿಕೊಂಡು  ಸರ್ಪ್ರೈಸ್ ಆಗಿರಲೆಂದು ಇದುವರೆಗೆ ತಿಳಿಸದೇ ಇದ್ದುದೆಂದು ಹೇಳಿದ. ತಂಗಿಯ ಪಿಯುಸಿ ಮುಗಿದು ಸರಕಾರಿ ಕೋಟಾ ದಲ್ಲಿ ಎಂಬಿಬಿಎಸ್ ಸೀಟು ಗಿಟ್ಟಿಸಿದ್ದಾಳೆ ಎನ್ನುವಾಗ ಮತ್ತೆ ಅದೇ ಬೆಟ್ಟದ ಹೂವಿನ ನಾಯಕನ ಕಣ್ಣುಗಳಲ್ಲಿದ್ದಂತಹ ಹೊಳಪು. ಈ ಬಾರಿ ರಾಮುವಿಗೆ ಪಟ್ಟಾಗಿ  ಹಸ್ತಲಾಘವ ಮಾಡುತ್ತಾ  ಗದ್ಗದಿತ ದನಿಯಲ್ಲಿ ‘ಶಹಭಾಷ್!!’ ಎಂದ. “ಈಗ ಹೆಸರು ಹೇಳಿ,  ಮೊದಲನೇ ವ್ಯಾಪಾರ ನಿಮ್ಮಿಂದಲೇ ಆಗಬೇಕು” ಎಂದು ರಾಮುವೂ ಕಣ್ಣುತುಂಬಿಕೊಂಡ. ಅದಕ್ಕೆ ಸಂದೇಶ  “ಈ ಜಾತಿ, ಧರ್ಮ, ದೇವರುಗಳನ್ನು ಬ್ರಾಂಡ್ ಮಾಡ್ಕೊಬೇಡ ಮಾರಾಯ, ‘ಉಪಹಾರ ದರ್ಶಿನಿ’ ಅಂತಿಟ್ಟುಬಿಡು ಸಿಂಪಲ್ಲಾಗಿ, ಗುಣಮಟ್ಟ ಕಾಯ್ದುಕೊಳ್ಳಬೇಕು, ಮೋಸ ಮಾಡದೇ, ಮೋಸ ಹೋಗದೇ ಇರುವುದೇ ಸರಿಯಾದ ದಾರಿ” ಎನ್ನುತ್ತಾ ಹೆಮ್ಮೆಯಿಂದ ಮುಖ ಹಿಗ್ಗಿಸಿದ.

*******

One thought on “ಕಥಾಯಾನ

  1. ಸೂಪರ್ ಕಥೆ ಸಾರ್…ಅಚ್ಚುಕಟ್ಟಾದ ಕಥಾಸಂಕಲನ. ..ಕಥೆ ಮುಗಿದದ್ದೇ ಗೊತ್ತಾಗಲಿಲ್ಲ

Leave a Reply

Back To Top