ಅಂಕಣ ಬರಹ
ಕ್ಷಿತಿಜ
ಭಾರತಿ ನಲವಡೆ
ಅನುಕರಣೆ
ನಮ್ಮ ತರಗತಿಯ ಒಬ್ಬ ಜಾಣ ವಿದ್ಯಾರ್ಥಿ ಮೂರು ದಿನಗಳಿಂದ ಶಾಲೆಗೆ ಬಂದಿರಲಿಲ್ಲ.ಫೋನಾಯಿಸಿ ಪಾಲಕರನ್ನು ಕೇಳಿದಾಗ ನಾಳೆ ಕಳಿಸುತ್ತೇನೆ ಎಂದು ಹೇಳಿದರು.ನಾನು ಆ ವಿದ್ಯಾರ್ಥಿಯ ತಂಗಿ ನಮ್ಮ ಶಾಲೆಗೆ ಬರುತ್ತಿದ್ದಳು.ಅವಳನ್ನು ಕರೆದು ವಿಚಾರಿಸಿದೆ”ಏಕೆ ನಿಮ್ಮಣ್ಣ ಶಾಲೆಗೆ ಬಂದಿಲ್ಲ?ಮೈಯಲ್ಲಿ ಹುಷಾರಿಲ್ವಾ” ಎಂದು ಕೇಳಿದಾಗ ಅವನು ಚನ್ನಾಗಿಯೇ ಇದ್ದಾನೆ ಮೇಡಂ ನಮ್ಮ ತಂದೆ ಅವನ ಜನುಮ ದಿನಕ್ಕೆ ಸೈಕಲ್ ಕೊಡಿಸುತ್ತೇನೆ ಅಂದಿದ್ರು,ಅಜ್ಜನಿಗೆ ಹುಷಾರಿಲ್ಲದ್ದರಿಂದ ಆಸ್ಪತ್ರೆಗೆ ದಾಖಲುಮಾಡಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.ಆದ್ದರಿಂದ ಮುಂದಿನ ತಿಂಗಳು ಸೈಕಲ್ ಕೊಡಿಸುವೆ ಅಂತ ಹೇಳಿದ್ರೂ ನನಗೆ ನನ್ನ ಜನುಮ ದಿನವೇ ಬೇಕು ಎಂದು ಹಠ ಮಾಡಿಗೆ ಶಾಲೆಗೆ ಬರುತ್ತಿಲ್ಲ ಮೇಡಂ” ಎಂದಳು.ಆದರೆ ಆ ವಿದ್ಯಾರ್ಥಿಯ ತಂದೆ ಈ ವಿಷಯವನ್ನು ನನಗೆ ಹೇಳಬಹುದಿತ್ತಲ್ಲ ಎಂದು ವಿಚಾರ ಮಾಡಿ “ನಾಳೆ ನಿಮ್ಮ ತಂದೆಯವರಿಗೆ ನಿನ್ನ ಅಣ್ಣನನ್ನು ಕರೆದುಕೊಂಡು ಬರಲು ತಿಳಿಸು” ಎಂದು ಹೇಳಿ ಕಳುಹಿಸಿದೆ.
ಮರುದಿನ ಬೆತ್ತದೊಂದಿಗೆ ತಂದೆ ತನ್ನ ಮಗನನ್ನು ಕರೆತಂದ ಮಗ ಮಾತ್ತ ಅಳುತ್ತಲೇ ಇದ್ದ.
ಮಕ್ಕಳನ್ನು ಹೊಡಿಯಬಾರದು ಪ್ರೀತಿಯಿಂದ ತಿಳಿಸಿಹೇಳಬೇಕು ಎಂದು ಹೇಳಿದೆ. ಆಗ ಆ ಪಾಲಕರು ತಮ್ಮ ತಪ್ಪನ್ನು ನಾ ಕೇಳುವ ಮೊದಲೇ ಒಪ್ಪಿಕೊಂಡರು.”ಕ್ಷಮಿಸಿ ಮೇಡಂ ನಾನೇ ಇವನು ಹೇಳಿದನ್ನೆಲ್ಲ ಕೊಡಿಸುತ್ತ ಬಂದೆ.ಅದಕ್ಕೆ ಅವ ಈಗ ಹಠಮಾರಿಯಾಗಿದ್ದಾನೆ. ಅವನು ಕೇಳಿದ್ದನ್ನು ತಕ್ಷಣವೇ ಕೊಡಿಸಬೇಕು ಇಲ್ಲದಿದ್ದರೆ ಹೀಗೆ ರಂಪಾಟ ಮಾಡುತ್ತಾನೆ. ಮನೆಯಲ್ಲಿ ಕೂಡ ಇವನ ಅಜ್ಜ ಪ್ರತಿದಿನ ಇವನಿಗೆ ಹಣಕೊಟ್ಟು ಕಳಿಸುತ್ತಾನೆ.ಅತೀ ಮುದ್ದಿನಿಂದ ಹೀಗಾಡುತ್ತಿದ್ದಾನೆ,ಏನ್ಮಾಡಬೇಕು ತಿಳಿತಿಲ್ಲ” ಎಂದಾಗ ಅವರ ಮುಖದಲ್ಲಿ ವಿಷಾದದ ಛಾಯೆ ಎದ್ದು ಕಾಣುತ್ತಿತ್ತು.ಆಗ ನಾನು ಅವರ ಮಗನಿಗೆ ಅವರಿಗೆ ತಿಳಿಸಿ ಹೇಳಿದೆ.ಹಠಮಾಡಿ ತಂದೆತಾಯಿಗೆ ಬೇಸರ ಮಾಡಿ ಪಡೆಯದೆ ಅವರು ಸಂತೋಷದಿಂದ ಯಾವಾಗ ಕೊಡಿಸುತ್ತಾರೋ ಆಗ ತೆಗೆದುಕೊ,ಮನೆಯ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು ಎಂದಾಗ ಹೂಂ ಎಂದು ತಲೆಯಾಡಿಸಿ ಪಕ್ಕದ ವಿದ್ಯಾರ್ಥಿಯಿಂದ ತಿಳಿದು ಮುಂದಿನ ಅವಧಿಯ ವಿಷಯದ ಕುರಿತು ಮಾತನಾಡಿ ಮಾಡಬೇಕಾದ ಕೆಲಸದ ಮಾಹಿತಿ ಪಡೆಯುವುದರಲ್ಲಿ ಮಗ್ನನಾದ. ಪಾಲಕರಿಗೂ ಹೆಣ್ಣು ಗಂಡು ಎಂದು ತಾರತಮ್ಯ ಮಾಡದೇ ಮಕ್ಕಳ ಎಲ್ಲ ಬೇಡಿಕೆಗಳನ್ನು ತಕ್ಷಣ ಈಡೇರಿಸದೇ ಅಗತ್ಯತೆ ಹಾಗೂ ಅವಶ್ಯಕತೆಯ ಕುರಿತು ಪರಾಂಬರಿಸಿ ನಿರ್ಣಯ ತೆಗೆದುಕೊಳ್ಳಬೇಕು ಎಂದಾಗ ಸರಿ ಹಾಗೆ ಮಾಡುತ್ತೇನೆಂದು ಹೊರಟು ಹೋದರು. ನಾವು ಮಕ್ಕಳ ಬೇಡಿಕೆಗೆ ಕೂಡ ಲಂಗು ಲಗಾಮು ಹಾಕಬೇಕಿದೆ.
“ನೀನು ಇಷ್ಟು ಅಂಕ ಪಡೆದರೆ ಸೈಕಲ್ ಕೊಡಿಸುವೆ, ಮೊಬೈಲ್ ಕೊಡಿಸುವೆ, ಡ್ರೆಸ್ ಕೊಡಿಸುವೆ” ಹೀಗೆ ಪಾಲಕರಾದವರು ಕೂಡ ಮಕ್ಕಳನ್ನು ಸ್ವಾರ್ಥಿಗಳನ್ನಾಗಿ ಮಾಡುತ್ತಿದ್ದಾರೆ.
ಮಕ್ಕಳಿಗೆ ಶ್ರಮದ ಅರಿವಾಗಲು ಬಿಡುವಿನ ವೇಳೆ ಅಥವಾ ರಜಾ ಅವಧಿಯಲ್ಲಿ ತೋಟ, ಹೊಲ,ಸಂತೆ ಇತ್ಯಾದಿ ಸ್ಥಳಗಳಲ್ಲಿ ಶ್ರಮ ಪಟ್ಟಾಗ ಮಾತ್ರ ಫಲ ಸಿಗುತ್ತದೆ ಎಂಬುದನ್ನು ಮನದಟ್ಟಾಗಿಸುವ ಚಿಕ್ಕ ಚಿಕ್ಕ ಕೆಲಸ ಮಾಡಲು ಬಿಡಬೇಕು.
ಕಲಿಕೆ ಎನ್ನುವದು ದೈನಂದಿನ ಜೀವನದ ಸಮಸ್ಯೆಗಳನ್ನು ಕೂಡ ಬಗೆಹರಿಸುವ ನಿಟ್ಟಿನಲ್ಲಿ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವ ಜವಾಬ್ದಾರಿಯಲ್ಲಿ ಪಾಲಕರ ಪಾತ್ರ ಕೂಡ ಇದೆ. ಮಹಾನ್ ವಿಜ್ಞಾನಿ ಸರ್ ಸಿ.ವಿ ರಾಮನ್ ಹೇಳುವಂತೆ”ಮಕ್ಕಳು ಈ ನಾಡಿನ ಪ್ರಧಾನ ಶಕ್ತಿಯ ಮೂಲ,ಇದನ್ನು ನಾವು ಉದ್ದೀಪನಗೊಳಿಸಿದರೆ ಜಗತ್ತಿನ ಯಾವ ಶಕ್ತಿಯೂ ನಮ್ಮನ್ನು ಮಣಿಸಲಾರದು”ಎಂಬಂತೆ ಮಕ್ಕಳ ಚೈತನ್ಯ ಗುರ್ತಿಸಿ ಸೂಕ್ತವಾದ ಮಾರ್ಗದರ್ಶನ, ಉತ್ತಮ ಪರಿಸರ ನಿರ್ಮಾಣ ಅಗತ್ಯ. ಈ ನಿಟ್ಟಿನಲ್ಲಿ ಪಾಲಕರು ತಮ್ಮ ಮಗುವಿನ ಶಿಕ್ಷಕರನ್ನು ಆಗಾಗ ಭೇಟಿಮಾಡಿ ಅವರ ನಡೆನುಡಿ ಶೈಕ್ಷಣಿಕ ಪ್ರಗತಿಯ ಕುರಿತು ಚರ್ಚಿಸಬೇಕಿದೆ.ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂಬಂತೆ ತಪ್ಪು ಮಾಡಿದಾಗಲೇ ಅದು ತಪ್ಪು ಯಾಕೆ ಅದು ತಪ್ಪು ಎಂಬ ವಿಮರ್ಶಾತ್ಮಕ ಚಿಂತನೆಗೆ ನಿದರ್ಶನಗಳ ಮೂಲಕ ತಿಳಿಸಿ ಹೇಹಬೇಕಿದೆ.ನನಗೆ ಈ ಊಟ ಬೇಡ ಈ ತಿಂಡಿ ಬೇಡ ಎಂದು ಉಪವಾಸ ಮಲಗುವ ಮಕ್ಕಳಿಗೆ ಪಾಲಕರು ಹಸಿವೆಗೆ ಊಟ ಮುಖ್ಯ.ಈಗ ಬೇಡ ಮತ್ತೊಂದು ದಿನ ಮಾಡಿಕೊಡುವೆ ಇದು ಹಾಳಾಗುತ್ತೆ.ಜಗತ್ತಿನಲ್ಲಿ ಎಷ್ಟೋ ಜನ ಮಕ್ಕಳು ಊಟವಿಲ್ಲದೆ ತುತ್ತು ಕೂಳಿಗಾಗಿ ಪರಿತಪಿಸುತ್ತಿದ್ದಾರೆ.ನಮಗೆ ಇಷ್ಟಾದರೂ ಇದೆ ಎಂದು ಸಂತೈಸುವ ಮನೋಭಾವ ಪಾಲಕರಲ್ಲಿರಬೇಕಿದೆ. ಹಠ ಮಾಡದೇ ಇದ್ದುದರಲ್ಲೇ ತೃಪ್ತಿಯಿಂದ ಇತಿಮಿತಿಯಿಂದ ಜೀವನ ಮಾಡುವ ಕಲೆ ಕರಗತವಾಗಬೇಕಿದೆ.ನನ್ನ ಮಗನಿಗೆ ಹಾಗಲ ಕಾಯಿ ,ಮೆಂತೆ ಅಂದರೆ ಆಗೋಲ್ಲ ಆ ದಿನ ಊಟ ಮಾಡುವಾಗ ಮುಖ ಕಿವುಚುತ್ತಾನೆ.ಅದಕ್ಕೆ ನಾನು ಅವನಿಗೆ ಬೇರೆ ಪಲ್ಯ ಮಾಡುತ್ತೇನೆ ಎಂದು ಜಂಬ ಕೊಚ್ಚಿಕೊಳ್ಳುವ ಮಾತೆಯರು ಆ ತರಕಾರಿ ಸೊಪ್ಪಿನ ಮಹತ್ವ ತಿಳಿಸಿದರೆ ಮಗು ಕಷ್ಟಪಡದೇ ನಿಜವಾಗಿ ಇಷ್ಟ ಪಟ್ಟು ತಿನ್ನುತ್ತೆ.ಇದು ಊಟದ ವಿಚಾರದಲ್ಲಷ್ಟೇ ಅಲ್ಲ. ಬದುಕಿನ ಪ್ರತಿ ಹಂತದಲ್ಲೂ ತಿಳಿಹೇಳುವ ಅದಕ್ಕೂ ಮೊದಲು ಪಾಲಕರಾದ ತಾವು ಕೂಡ ಆದರ್ಶಪ್ರಾಯರಾಗಿರಬೇಕು.ಒಮ್ಮೆ ರೈಲಿನಲ್ಲಿತನ್ನ ಮಗಳೊಂದಿಗೆ ಪ್ರಯಾಣ ಮಾಡುತ್ತಿದ್ದ ಮಹಿಳೆ ಒಬ್ಬಳು ಪುಸ್ತಕ ಓದುತ್ತಿದ್ದಳು ಅವಳ ಎಂಟು ವರ್ಷ ಪ್ರಾಯದ ಮಗಳು ಕಥೆ ಪುಸ್ತಕ ಓದುತ್ತಿದ್ದಳು.ಇದನ್ನು ಗಮನಿಸಿದ ಸಹಪ್ರಯಾಣಿಕರಾದ ಹಿರಿಯರೊಬ್ಬರು ಆ ಮಹಿಳೆಯನ್ನುದ್ದೇಶಿಸಿ ವಾಟ್ಸಾಪ್ ಯುಟ್ಯೂಬ್ ಫೇಸ್ಬುಕನ ಭರಾಟೆಯ ದಿನಗಳಲ್ಲಿ ಮೊಬೈಲ್ ಇದ್ದರೂ ಬಳಸದೇನಿಮ್ಮ ಮಗಳ ಈ ಪುಸ್ತಕದ ಓದು ಹೇಗೆ ಸಾಧ್ಯವಾಯಿತು ಅಂದಾಗ ಆ ಮಹಿಳೆ ನೀಡಿದ ಉತ್ತರ ನಿಜಕ್ಕೂ ಪಾಲಕರ ಪಾತ್ರವನ್ನು ಎತ್ತರಿಸಿದಂತಿತ್ತು ಅದೇನೆಂದರೆ “ನಮ್ಮ ಮಕ್ಕಳು ನಮ್ಮನ್ನು ಅನುಸರಿಸುತ್ತಾರೆ.” ನಿಜ ಪಾಲಕರಾದವರು ಕೆಲವೊಮ್ಮೆ ಮನೆಯಲ್ಲಿದ್ದಾಗ ಯಾರದಾದರೂ ಕರೆ ಬಂದಾಗ ಮಾತನಾಡದೇ ಮನೆಯಲ್ಲಿಲ್ಲ ಎಂದು ಹೇಳು ಎನ್ನುವಾಗ ಎಲ್ಲಿದೆ ಪಾಲಕರಾದವರ ಮೌಲ್ಯಗಳು? ಇನ್ನೂ ಮಕ್ಕಳಿಗೆ ಹೇಳುವದುಂಟೇ?
ಮನೆಯಲ್ಲಿ ನಮ್ಮ ನಡೆನುಡಿಗಳು ಸಂಸ್ಕಾರಗಳು ಮಗುವಿನ ಭವಿತವ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ಮಾತು ನೆನಪಿರಲಿ.ಈ ನಿಟ್ಟಿನಲ್ಲಿ ಎ ಪಿ ಜೆ ಅಬ್ದುಲ್ ಕಲಾಂ ರವರ ಮಾತು ನಿಜಕ್ಕೂ ಪ್ರೇರಣಾರ್ಹವಾಗಿವೆ.ಏನೆಂದರೆ”ಕಲಿಕೆ ಕ್ರಿಯಾಶೀಲತೆಯನ್ನು,ಕ್ರಿಯಾಶೀಲತೆ ವೈಚಾರಿಕತೆಯನ್ನು,ವೈಚಾರಿಕತೆ ಜ್ಞಾನವನ್ನು ಕೊಡುತ್ತದೆ.ಜ್ಞಾನ ಮನುಷ್ಯನನ್ನು ಮಹಾನ್ ವ್ಯಕ್ತಿಯನ್ನಾಗಿ ರೂಪಿಸುತ್ತದೆ.ನಿಮ್ಮ ವಿದ್ಯಾಬ್ಯಾಸ ಸಾಧನೆಯ ಮೇಲೆ ನಿಮ್ಮ ಕನಸುಗಳು ಅವಲಂಬಿತವಾಗಿರುತ್ತವೆ.ಈ ನಿಟ್ಟಿನಲ್ಲಿ ಚಿಂತಿಸಿ”ಎಂಬ ಮಾತು ಮಕ್ಕಳ ಸಾಧನೆಗೆ ಕನಸ ಹೊಸೆವ ಪಾಲಕರ ಚಿಂತನ ಮಂಥನಕ್ಕೂ ಓರೆಗಚ್ಚುವ ಕರ್ತವ್ಯವನ್ನು ಎಚ್ಚರಿಸಿದ್ದಾರೆ.
“ಮಕ್ಕಳು ಸುಂದರ ತೋಟದ ಹೂಗಳು ” ಹೂವಂತ ಮುಗ್ಧ ಮನಗಳಲಿ ಉತ್ತಮ ವರ್ತನೆಗಳನ್ನು ಹುಟ್ಟು ಹಾಕುವ ಮೂಲಕ ಒಂದು ಸುಸ್ಥಿರ ಸಮಾಜದ ಇಂದಿನ ನಾಗರೀಕರನ್ನಾಗಿಸುವ ಗುರುತರವಾದ ಹೊಣೆಗೆ ಮುಕ್ತಹಾಗೂ ಸೂಕ್ತವಾದ ಸಮಾಜದ ಚಿಕ್ಕ ಘಟಕವಾದ ಕುಟುಂಬದ ಪಾತ್ರ ಹಿರಿದಾಗಿದೆ. ಬಾಲ್ಯ ಎಂಬುದು ರೈತನಿಗೆ ಬೀಜ ಬಿತ್ತುವ ಅವಧಿಯಂತೆ ಮೌಲ್ಯಗಳ ಬೀಜ ಬಿತ್ತನೆಯ ಪ್ರಾರಂಭ ಮನೆಯಲ್ಲೆ ಆಗುತ್ತದೆ. ಟಿ.ಪಿ ಕೈಲಾಸಂರವರು ಹೇಳಿದಂತೆ”ಮಕ್ಕಳ ಇಸ್ಕೂಲ್ ಮನೇಲಲ್ವೇ” ಎಂಬಂತೆ ಮನೆಯ ಆಚಾರ ವಿಚಾರ ಸಂಸ್ಕತಿ ಸಂಪ್ರದಾಯಗಳು ಆ ಮಗುವಿನ ಪ್ರಾಂಜಲ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ.
ಒಮ್ಮೆ ಜೋಡಿಯಿದ್ದ ಎರಡು ಗಿಳಿಗಳು ಬಿರುಗಾಳಿಗೆ ಸಿಲುಕಿ ಬೇರೆ ಬೇರೆಯಾಗುತ್ತವೆ.ಒಂದು ಗಿಳಿ ಋಷಿಗಳ ಆಶ್ರಮ ಸೇರಿದರೆ ಇನ್ನೊಂದು ಗಿಳಿ ಕಟುಕರ ಪಾಲಾಗುತ್ತೆ.ಹೀಗಿರಲಾಗಿ ಅಲ್ಲಿಯ ಪರಿಸರದ ಪ್ರಭಾವದಿಂದ ಋಷಿಗಳ ಆಶ್ರಮದ ಗಿಳಿ ಆಶ್ರಮಕ್ಕೆ ಆಗಮಿಸಿದವರಿಗೆ”ಬನ್ನಿರಿ ಕುಳಿತುಕೊಳ್ಳಿರಿ ಹಣ್ಣುಗಳನ್ನು ಸೇವಿಸಿ”ಎಂದು ಹೇಳಿದರೆ ಕಟುಕರ ಬಳಿ ಬೆಳೆದ ಗಿಳಿ ಅಲ್ಲಿ ಆಗಮಿಸಿದವರಿಗೆ”ಅವರನ್ನು ಕೊಲ್ಲಿರಿ” ಎಂದು ಹೇಳಲು ಪ್ರಾರಂಭಿಸಿತಂತೆ. ಹೀಗೆ ನಾವು ಮಕ್ಕಳಿಗೆ ಎಂತಹ ಪರಿಸರವನ್ನು ಒದಗಿಸುತ್ತೆವೆಯೋ ಮಕ್ಕಳು ಹಾಗೆ ಬೆಳೆಯುತ್ತಾರೆ ಅಂತಹ ಮೌಲ್ಯಗಳನ್ನು ಬೆಳೆಸಿಕೊಳ್ಳುತ್ತಾರೆ.
ಈ ನಿಟ್ಟಿನಲ್ಲಿ ಪಾಲಕರಾದವರು ಮಕ್ಕಳ ಮೇಲಿನ ಅತಿ ವ್ಯಾಮೋಹದಿಂದ ಅವರ ಬೇಡಿಕೆ ಈಡೇರಿಸುವ ಮುನ್ನ ಅವುಗಳ ಇತಿಮಿತಿಯನರಿತು ಸಕಾರಾತ್ಮಕವಾಗಿ ಸ್ಪಂದಿಸಬೇಕು.ಬೆವರಿನ ಬೆಲೆಯ ಕುರಿತು ಶ್ರಮಸಂಸ್ಕ್ರತಿಯ ಬಗ್ಗೆ ಅನುಭವದ ಕುಲುಮೆಯಲ್ಲಿ ಭಟ್ಟಿಇಳಿಸಬೇಕಾದ ಯೋಜನೆ ಪಾಲಕರದಾಗಿದೆ.
ಮನೆಯಲ್ಲಿ ತಮ್ಮ ತಂದೆತಾಯಿಯರೊಂದಿಗೆ, ಹಿರಿಯರೊಂದಿಗೆ, ಬಂಧುಬಳಗದವರೊಂದಿಗೆ ನಡೆದುಕೊಳ್ಳುವ ಪದ್ಧತಿಯನ್ನು ಮಕ್ಕಳು ಸೂಕ್ಷ್ಮವಾಗಿ ವೀಕ್ಷಿಸುತ್ತಿರುತ್ತಾರೆ ಎಂಬುದನ್ನು ಪಾಲಕರು ಅರಿತು ವರ್ತಿಸಬೇಕು. ಮಕ್ಕಳನ್ನು ಮಾನವೀಯ ತಳಹದಿಯ ಮೇಲೆ ನಡೆಯುವ ನೈತಿಕತೆಯನ್ನು ಬೆಳೆಸಿದರೆ ಆ ಮಕ್ಕಳು ಶ್ರೇಷ್ಠ ವ್ಯಕ್ತಿತ್ವದ ಸಮಾಜದ ಆಸ್ತಿಗಳಾಗುವಲ್ಲಿ ಸಂದೇಹವಿಲ್ಲ.
ಭಾರತಿ ನಲವಡೆ
ಶ್ರೀಮತಿ ಭಾರತಿ ಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮಂಗಳವಾಡದಲ್ಲಿ ಸಹಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು
2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.
ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ
ರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾ ಸಾಹಿತ್ಯ ಪುರಸ್ಕಾರ 2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ
6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆ ಸಲ್ಲಿಸುತ್ತಿದ್ದಾರೆ
ಪಾಲಕರಿಗೆ ಜಾಗೃತಿ ನೀಡುವ ಉತ್ತಮ ಲೇಖನ ಅಭಿನಂದನೆಗಳು
very nice teache
ತುಂಬಾ ಚೆನ್ನಾಗಿ ಲೇಕನ ಮೂಡಿ ಬಂದಿದೆ ಟೀಚರ್
ಈ ಲೇಖನ ತುಂಬಾ ಚೆನ್ನಾಗಿದೆ ಟೀಚರ್
Nice