ಅಂಕಣ ಸಂಗಾತಿ

ಸುಜಾತಾ ರವೀಶ್

ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು

ಹೆಚ್ ಎಸ್ ಪಾರ್ವತಿ  ಅವರ

ಮೀರಾಬಾಯಿ ಪುಸ್ತಕದ ಬಗ್ಗೆ ಪ್ರಬಂಧ ಮಂಡನೆ

ಶ್ರೀಮತಿ ಹೆಚ್ ಎಸ್ ಪಾರ್ವತಿ  ಅವರ ಮೀರಾಬಾಯಿ ಪುಸ್ತಕದ ಬಗ್ಗೆ ಪ್ರಬಂಧ ಮಂಡನೆ

ಶ್ರೀಮತಿ ಪಾರ್ವತಿ ಎಂದೊಡನೆ ನಮಗೆ ನೆನಪಿಗೆ ಬರುವುದು ಆಕಾಶವಾಣಿ ಅದರಲ್ಲೂ ಕೇಳಿ ಗಿಳಿಗಳೇ ಕಾರ್ಯಕ್ರಮ . ಪ್ರತಿ ಭಾನುವಾರ ಬೆಳಿಗ್ಗೆ ಹತ್ತು ಗಂಟೆಗೆ ಬರುತ್ತಿದ್ದ ಆ ಕಾರ್ಯಕ್ರಮವನ್ನು ಎಂದಿಗೂ ಎಲ್ಲಿದ್ದರೂ ಮಿಸ್ ಮಾಡಿಕೊಳ್ಳುತ್ತಿರಲಿಲ್ಲ .ಅಷ್ಟು ಇಷ್ಟ ಆಗಿತ್ತು . ನಂತರದ ನಾವು ನಮ್ಮವರು ಎಎಸ್ಮೂರ್ತಿ ಅವರೊಡನೆ ಸೇರಿ ನಡೆಸಿಕೊಡುತ್ತಿದ್ದ ಕಾರ್ಯಕ್ರಮ .ಈಗಲೂ ಮೈಸೂರು ಆಕಾಶವಾಣಿಯಲ್ಲಿ ಮಕ್ಕಳ ಕಾರ್ಯಕ್ರಮದ ಹೆಸರು “ಕೇಳಿ ಗಿಳಿಗಳೇ” ಎಂದೇ ಮುಂದುವರೆದಿದೆ . ನಂತರದಲ್ಲಿ ಆಗ ತಪ್ಪಿಸದೆ ಕೇಳುತ್ತಿದ್ದ ಬಾನುಲಿ ನಾಟಕ ಗಳೆಲ್ಲದರಲ್ಲೂ ಹೆಚ್ ಎಸ್ ಪಾರ್ವತಿಯವರ ಹೆಸರಿನ ಪ್ರಸ್ತಾಪ ಇದ್ದೇ ಇರುತ್ತಿತ್ತು . ಎಷ್ಟೋ ದಿನಗಳವರೆಗೆ ನಾನು ಅವರನ್ನು ಆಕಾಶವಾಣಿಯೊಂದಿಗೆ ಮಾತ್ರ ಕಲ್ಪಿಸಿಕೊಳ್ಳುತ್ತಿದ್ದೆ . ಮುಂದೆ ನಿಯತಕಾಲಿಕಗಳಲ್ಲಿ ಅವರ ಕಥೆಗಳು ಲೇಖನಗಳನ್ನು ಓದೊದಾಗಲಷ್ಟೇ ಅವರು ಲೇಖಕಿ ಎಂಬುದು ನನ್ನ ಅರಿವಿನ ಪರಿಧಿಗೆ ಬಂದಿತ್ತು . ಸಾಹಿತ್ಯ ಲೋಕ ಹಾಗೂ ಆಕಾಶವಾಣಿಯ ಕಾರ್ಯಕ್ರಮ ಎರಡರಲ್ಲೂ ತಮ್ಮದೇ ಆದ ಛಾಪು ಒತ್ತಿ ಕಲಾಭಿಮಾನಿಗಳ ಮನಸ್ಸಿನಲ್ಲಿ ಎಂದಿಗೂ ನೆಲೆನಿಂತವರು ಶ್ರೀಮತಿ ಎಚ್ ಎಸ್ ಪಾರ್ವತಿಯವರು .

ಶ್ರೀಮತಿ ಹೆಚ್ ಎಸ್ ಪಾರ್ವತಿಯವರು ೦೩.೦೨.೧೯೩೪ ರಂದು ಬೆಂಗಳೂರಿನಲ್ಲಿ ಜನಿಸಿದರು.  ಇವರ ತಂದೆ ಎಚ್  ಶ್ರೀನಿವಾಸ ರಾವ್ ಹಾಗೂ ತಾಯಿ ಮಹಾಲಕ್ಷ್ಮಮ್ಮ. ಎಸ್ಸೆಸ್ಸೆಲ್ಸಿಯವರೆಗೆ ಆಚಾರ್ಯ ಪಾಠಶಾಲೆಯಲ್ಲಿ ಓದಿದ ನಂತರ ಹೊರ ವಿದ್ಯಾರ್ಥಿನಿ ಯಾಗಿ ಬಿಎ ಮತ್ತು ಎಂಎ ಹಿಂದಿ ಕಾಶಿ ವಿದ್ಯಾರ್ಥಿ ನಿಲಯ ಪದವಿಗಳನ್ನು ಪಡೆದರು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಜಾಣ ಪರೀಕ್ಷೆಯಲ್ಲಿ ತೇರ್ಗಡೆಯಾದರು .ಹಿಂದಿ ತರಗತಿಗಳಲ್ಲಿ  ಪರಿಚಿತರಾದ ಸಾಹಿತಿ ನಿರಂಜನ ಅವರ ಪ್ರೇರಣೆ ಮತ್ತು ಮಾರ್ಗದರ್ಶನದಿಂದಲೇ ಪರಾಜಯ ಎಂಬ ಹಿಂದಿ ಕಾದಂಬರಿ ಅನುವಾದಿಸಿದರು . ಹಲವಾರು ಪತ್ರಿಕೆಗಳಲ್ಲಿ ಸಣ್ಣಕಥೆಗಳು ಹಾಗೂ ಕಿರು ಲೇಖನಗಳನ್ನು ಪ್ರಕಟವಾದವು .ಎಲ್ಲಕ್ಕಿಂತ ಮುಖ್ಯವಾಗಿ ಸ್ತ್ರೀಪರ ಸಂವೇದನೆ ಹಾಗೂ ಸ್ತ್ರೀ ಶೋಷಣೆಯ ವಿರುದ್ಧ ಧ್ವನಿ ಎತ್ತಿದ ಮೊದಲಿಗರಲ್ಲಿ ಎಚ್ಎಸ್ ಪಾರ್ವತಿ ಅವರೂ ಒಬ್ಬರು . ಬಂಡಾಯದ ಘೋಷಣೆಗಳಿಲ್ಲದೆ ತಣ್ಣನೆಯ ಸ್ವರದಲ್ಲೇ ತಮ್ಮ ಪ್ರತಿರೋಧ ಪ್ರತಿಭಟನೆಗಳನ್ನು ವ್ಯಕ್ತಪಡಿಸಿ ಮಹಿಳಾ ಪರ ಚಟುವಟಿಕೆಗಳಲ್ಲಿ ಭಾಗವಹಿಸಿದವರು . ಬರವಣಿಗೆ ಮತ್ತು ಮಾತಿನಲ್ಲಿ ಮಾತ್ರವಲ್ಲದೆ ಕೃತಿಯಲ್ಲಿಯೂ ಸಹಾ ತಮ್ಮ ಪ್ರಗತಿಪರ ಧೋರಣೆಗಳನ್ನು ಅನುಷ್ಠಾನಕ್ಕೆ ತಂದವರು . ಆಕಾಶವಾಣಿಯಲ್ಲಿ ಉದ್ಯೋಗ ಲಭಿಸಿದ ನಂತರ ಅಲ್ಲಿ ತಮ್ಮ ಸಹೋದ್ಯೋಗಿಯಾಗಿದ್ದ ಎಂ ಎಸ್ ಶ್ರೀಹರಿಯವರನ್ನು ವಿವಾಹವಾದರು. ಇದುವರೆಗೂ ಐವತ್ತೊಂದು ಕೃತಿಗಳನ್ನು ಪ್ರಕಟಿಸಿದ್ದಾರೆ . ಆಕಾಶವಾಣಿಯಲ್ಲಿ ಅಷ್ಟು ಸಕ್ರಿಯ ಕಾರ್ಯ ನಿರ್ವಾಹಕರಾಗಿ ಉದ್ಯೋಗ ಮಾಡುತ್ತಲೇ ಸಾಹಿತ್ಯದಲ್ಲೂ ಮಿಂಚಿದ ಇಷ್ಟರ ಮಟ್ಟಿನ ಸಾಧನೆ ನಿಜಕ್ಕೂ ಇವರು ವ್ಯಕ್ತಿಯಲ್ಲ ಸಂಸ್ಥೆ ಎಂಬ ಭಾವನೆ ಮೂಡಿಸುತ್ತದೆ . ಅದರಲ್ಲೂ ಭಾಷಾಂತರ ಕಾರ್ಯ ಬಹಳ ಸಮಯ ಹಾಗೂ ಸಹನೆ ಬೇಡುವಂತಹದು.  ಅದನ್ನು ತುಂಬ ಯಶಸ್ವಿಯಾಗಿಸಿದವರು ಇವರು. ೧೦ ಕಾದಂಬರಿಗಳು,೭ ಕಥಾಸಂಕಲನಗಳು ೪ ಪ್ರಬಂಧ ಸಂಕಲನಗಳು,೧೪  ಭಾಷಾಂತರ ಕೃತಿಗಳು,೮  ಸಂಪಾದಿಸಿದ ಗ್ರಂಥಗಳು,ತಿರುಮಲೆ ರಾಜಮ್ಮ ಹಾಗೂ ಆರ್ ಕಲ್ಯಾಣಮ್ಮ ಅವರ  ಜೀವನಚರಿತ್ರೆಗಳು ಅಲ್ಲದೆ ಲೆಕ್ಕವಿಲ್ಲದಷ್ಟು ರೇಡಿಯೋ ನಾಟಕಗಳನ್ನು ರಚಿಸಿದ ಹೆಗ್ಗಳಿಕೆ ಇವರದು .  ಕನ್ನಡ ಸಾಹಿತ್ಯ ಚರಿತ್ರೆಯ ಸಂಕ್ಷಿಪ್ತ ಪರಿಚಯವನ್ನು ಗುಜರಾತಿ ಭಾಷೆಯ ವಿಶ್ವಕೋಶಕ್ಕಾಗಿ ಮಾಡಿದ್ದಲ್ಲದೆ ಇಪ್ಪತ್ತೈದಕ್ಕೂ ಹೆಚ್ಚು ಪ್ರಾಚೀನ ಹಾಗೂ ಆಧುನಿಕ ಕನ್ನಡ ಸಾಹಿತಿಗಳನ್ನು ಹಿಂದಿ ಭಾಷೆಯವರಿಗೂ ಪರಿಚಯಿಸಿದರು .

ಇವರ ಸಾಹಿತ್ಯ ಸೇವೆಗಾಗಿ ಲಭಿಸಿರುವ ಪ್ರಶಸ್ತಿ ಪುರಸ್ಕಾರಗಳು ಅನೇಕ . ಕರ್ನಾಟಕ ಲೇಖಕಿಯರ ಸಂಘದ ಸ್ಥಾಪಕ ಅಧ್ಯಕ್ಷೆಯಾಗಿದ್ದರು . ಇವರ ಅನೇಕ ಕಥೆಗಳನ್ನು ವಾರ್ತಾ ಮತ್ತು ಪ್ರಸಾರ ಇಲಾಖೆ ಸಾಕ್ಷ್ಯರೂಪದಲ್ಲಿ ತಂದಿದೆ . ಉತ್ತರ ಪ್ರದೇಶ ಸರ್ಕಾರದಿಂದ ಸಾಹಿತ್ಯ ಸೌಹಾರ್ದೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಫೆಲೋಷಿಪ್, ಕರ್ನಾಟಕ ಅನುವಾದ ಅಕಾಡೆಮಿ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಮುಂತಾದವು ಅವುಗಳಲ್ಲಿ ಪ್ರಮುಖವಾದವು .

ಇವರ ಬಹಳಷ್ಟು ಕೃತಿಗಳು ಪುಸ್ತಕಗಳು ಈಗ ಲಭ್ಯವಿಲ್ಲ .ನನಗೆ ಸಿಕ್ಕಿದ್ದು ಸಪ್ನ ಬುಕ್ ಹೌಸ್ ಅವರು ಪ್ರಕಟಿಸಿದ ದಿವ್ಯದರ್ಶನ ಮಾಲೆ ಯಲ್ಲಿ ಶ್ರೀಮತಿ ಹೆಚ್ ಎಸ್ ಪಾರ್ವತಿಯವರು ಬರೆದ ಮಹಾನ್ ಚೇತನಗಳ ದರ್ಶನ .ಇದರಲ್ಲಿ ಮೀರಾಬಾಯಿ ಅಮೃತಾ ಪ್ರೀತಮ್ ಹಾಗೂ ಪ್ರೇಮ್ ಚಂದ್. ಹಿಂದೆ ನಾವು ಚಿಕ್ಕವರಿದ್ದಾಗ ಭಾರತಭಾರತಿ ಪುಸ್ತಕ ಸಂಪದ ಎಂದು ಅಂಗೈಯಗಲದ ಪುಸ್ತಕಗಳು ದೊರೆತು ಮಹಾನ್ ವ್ಯಕ್ತಿತ್ವಗಳ ಪರಿಚಯವನ್ನು ಚುಟುಕಾಗಿ ಮಾಡಿಸಿ ಕೊಡುತ್ತಿತ್ತು . ಈಗ ದೊಡ್ಡವರಿಗಾಗಿ ಈ ರೀತಿಯ ದಿವ್ಯ ದರ್ಶನ ಮಾಲಿಕೆ ಆ ಸ್ಥಾನ ತುಂಬುತ್ತಿದೆ  .  ಪುಟ್ಟ ಪುಸ್ತಕ !  ೪೬ಪುಟಗಳ ಪುಸ್ತಕದಲ್ಲಿ ಇಡೀ ಅವರ ಜೀವಮಾನದ ಸಾಧನೆ ವ್ಯಕ್ತಿತ್ವ ಹಾಗೂ ಕೃತಿ ಪರಿಚಯಗಳನ್ನು ಮಾಡುವುದು ನಿಜಕ್ಕೂ ಸಾಹಸವೇ ಸರಿ . ನಿಜವಾದ ಲೇಖಕನ ಗುಣ ಅತಿ ಕಡಿಮೆ ಶಬ್ದಗಳಲ್ಲಿ ತಾನು ಹೇಳಬೇಕಾದ್ದನ್ನು ಹೇಳುವುದು.  ಆ ಕೆಲಸವನ್ನು ಇಲ್ಲಿ ಲೇಖಕಿಯವರು ತುಂಬಾ ಸಮರ್ಥವಾಗಿ ನಿಭಾಯಿಸಿದ್ದಾರೆ . ಇದು ನಿಜಕ್ಕೂ ಅಭಿವ್ಯಕ್ತಿಯ ಸಾಮರ್ಥ್ಯಕ್ಕೆ ದೊಡ್ಡ ಸವಾಲು . ಹೇಳಬೇಕಾದ ಯಾವ ಅಂಶಗಳನ್ನು ಬಿಡಬಾರದು ಆದರೆ ಅದಕ್ಕೆ ಪದಗಳ ಪುಟಗಳ ಮಿತಿ . ಹಾಗಾದಾಗ ಪದಗಳನ್ನು ನೀರಿನಂತಲ್ಲದೆ ತುಪ್ಪದಂತೆ ಬಳಸಬೇಕಾಗುತ್ತದೆ. ಈ 3ಪುಸ್ತಕಗಳನ್ನು ಓದಿದಾಗ ನನಗೆ ಅನಿಸಿದ್ದು ಹಾಗೆ. ಎಷ್ಟು ದೊಡ್ಡ ದೊಡ್ಡ ಗ್ರಂಥಗಳೇ ಆಗಬಹುದಾಗಿದ್ದಂತಹ ಇಂತಹ ವಿಷಯಗಳು ಯಾವುದೇ ಲೋಪವಿಲ್ಲದೆ ಇಷ್ಟು ಕಡಿಮೆ ಪುಟಗಳಲ್ಲಿ ಬರೆಯುವುದು ಸಾಧ್ಯ ಎಂದು ತೋರಿಸಿದ ಈ  ಧೀಶಕ್ತಿಗೆ ನಿಜಕ್ಕೂ ಶರಣು ಎನ್ನಲೇಬೇಕು. 

ಮೀರಾಬಾಯಿಯ ಚರಿತ್ರೆಯನ್ನು ಹೇಳಹೇಳುತ್ತಲೇ ಜೊತೆಯಲ್ಲಿ ಅಂದಿನ ಕಾಲದ ಸ್ಥಿತಿಯ ಪರಿಚಯ ಮಾಡಿಕೊಡುತ್ತಾರೆ . ವಿದೇಶೀಯರ ಪದೇ ಪದೇ ಆಗುತ್ತಿದ್ದ ಆಕ್ರಮಣ ಇದು ಬಾಹ್ಯ ಕಾರಣವಾದರೆ ನಮ್ಮದೇ ಧರ್ಮದಲ್ಲಿನ ಸಂಕುಚಿತ ಮನಸ್ಥಿತಿಯ, ಕಂದಾಚಾರ, ಮೂಢ ಸಂಪ್ರದಾಯಗಳು ಎಲ್ಲವೂ ಸೇರಿ ಜನ ದಿಕ್ಕೆಟ್ಟಿದ್ದು ಆತ್ಮವಿಶ್ವಾಸ ಹಾಗೂ ಹೊಸ ಬೆಳಕು ತುಂಬಲು ಭಕ್ತಿ ಪಂಥ ಆರಂಭವಾಗಿ ದೇಶದ ಎಲ್ಲೆಡೆಯಲ್ಲೂ ಹರಡಿತ್ತು ಎಂಬ ಅಂಶವನ್ನು ಉಲ್ಲೇಖಿಸುತ್ತಾರೆ . ನಿರಾಕಾರ ದೇವರನ್ನು ಆರಾಧಿಸುವುದಕ್ಕಿಂತ ಸಾಕಾರ ಸಗುಣ ಭಗವಂತನ ಆರಾಧನೆ ಜನರಿಗೆ ಹೆಚ್ಚು ಪ್ರಿಯವಾಗಿ ಭಕ್ತಿಪಂಥದ ವ್ಯಾಪಕ ವಿಸ್ತಾರಕ್ಕೆ ಕಾರಣವಾಯಿತು.  ಈ ಭಕ್ತಿ ಪಂಥದ ಭಗವಂತನ ಮಹಿಮೆಯನ್ನು ಹಾಡುವ ಹಾಡುಗಳು ಸಂಗೀತ ಸಾಹಿತ್ಯ ಎರಡಕ್ಕೂ ಅಪಾರ ಕೊಡುಗೆ ನೀಡಿದವು . ಇಂತಹ ಭಕ್ತಿ ಪಂಥದ ಸಂತರ ಸಾಲಿಗೆ ಸೇರುವವಳು ಮೀರಾಬಾಯಿ .

ಮೆಡತಾ ಎಂಬ ರಾಜಸ್ಥಾನದ ರಾಜ್ಯವನ್ನು ಮಾರವಾಡಿ ರಾಥೋರರ ವಂಶದ ರಾಜರು ಆಳುತ್ತಿದ್ದರು ಇವರ ರಾಜನಾಗಿದ್ದ ರಾವ್ ಮಾದಾನ ನಾಲ್ಕನೆಯ ಮಗ ರತ್ನಸಿಂಹ ಹಾಗೂ ಕುಸುಮಾ ಕುಂವರ್  ಇವರ ಮಗಳೇ ಮೀರಾ. ಕ್ರಿಸ್ತಶಕ ೧೫೧೦ ರಲ್ಲಿ ಕುಡುಕೀ ಗ್ರಾಮದಲ್ಲಿ ಜನಿಸಿದಳು. ಬಾಲ್ಯದಲ್ಲಿ ಒಮ್ಮೆ ಮದುವೆಯ ಮೆರವಣಿಗೆಯನ್ನು ನೋಡಿ “ನನ್ನ ಗಂಡ ಯಾರು” ಎಂದು ತಾಯಿಯನ್ನು ಪ್ರಶ್ನಿಸಿದಾಗ ಅವಳು ಏನೊಂದು ಉತ್ತರಿಸಲು ತಿಳಿಯದೆ ಕೃಷ್ಣನ ಮೂರ್ತಿಯನ್ನು ತೋರಿಸಿ ಇವನೇ ನಿನ್ನ ಗಂಡ ಎಂದು ಹೇಳಿದಳಂತೆ .ಅದೇ ಮಾತುಗಳು ಅವಳ ಮನಸ್ಸಿನಲ್ಲಿ ಅಚ್ಚು ಅಚ್ಚೊತ್ತಿದ ಹಾಗೆ ಆಗಿ ಕೃಷ್ಣನ ಪ್ರತಿಮೆಯನ್ನು ಲಾಲಿಸುತ್ತ ಪಾಲಿಸುತ್ತ ಅದರೊಡನೆ ಆಟವಾಡುತ್ತಾ ಅವನೇ ತನ್ನ ಪತಿ ಎಂಬ ಭಾವ ಬೆಳೆಸಿಕೊಂಡಳು . ತಾಯಿ ಚಿಕ್ಕ ವಯಸ್ಸಿನಲ್ಲೇ ಸತ್ತ ಮೇಲೆ ತನ್ನ ತಾತನ ಮನೆಯಲ್ಲಿ ಬೆಳೆಯುತ್ತಿದ್ದ ಮೀರಾಳಿಗೆ ಮೇವಾಡ ರಾಜ್ಯದ ರಾಣಾಸಾಂಗನ ಮಗ ಭೋಜರಾಜ ನೊಂದಿಗೆ ಅವಳ ಇಚ್ಛೆಯ ವಿರುದ್ಧ ಮದುವೆಯಾಯಿತು . ನಂತರವೂ ಕೃಷ್ಣಮೂರ್ತಿಯೊಡನಯೇ ಆಟಪಾಟ ಲಾಲನೆಯಲ್ಲಿ ತೊಡಗಿದ್ದ ಅವಳಿಗೆ ಅತ್ತೆಮನೆಯಲ್ಲಿ ಬಹಳಷ್ಟು ವಿರೋಧ ವ್ಯಕ್ತವಾಯಿತು ಕಡೆಗೆ ಏಕಾಂತವಾಸದ ಶಿಕ್ಷೆಯೂ ಆಯಿತು ಆದರೆ ಇದಾವುದೂ ಅವಳ ಶ್ರದ್ಧಾಭಕ್ತಿಯನ್ನು ಕದಲಿಸಲು ಸಾಧ್ಯ

ವಾಗಲಿಲ್ಲ.   ಅವಳಿಗೆ ಇಪ್ಪತ್ತು ವರ್ಷಗಳಾಗುವ ವೇಳೆಗೆ ಯುದ್ಧದಲ್ಲಿ ತಂದೆ ಮಾವ ಹಾಗೂ ಗಂಡನನ್ನು ಕಳೆದುಕೊಂಡು 1ರೀತಿಯಲ್ಲಿ ಅನಾಥಳಾದಳು. ಪಟ್ಟಕ್ಕೆ ಬಂದ ಮೈದುನ ವಿಕ್ರಮಾದಿತ್ಯನಿಗೆ ಇವಳ ನಡವಳಿಕೆಗಳು ಇಷ್ಟವಾಗುತ್ತಿರಲಿಲ್ಲ. ಇವಳನ್ನು ಕೊಲ್ಲಲು ಪ್ರಯತ್ನಿಸಿದ ಎಂಬ ಮಾತುಗಳೂ ಇವೆ. ಅಲ್ಲಿಂದ ಅವಳು ವೃಂದಾವನಕ್ಕೆ ದ್ವಾರಕೆಗೆ ಬಂದು ನೆಲೆಸಿ ಭಕ್ತಿಪಂಥದ ಆಚಾರ ವಿಚಾರಗಳಲ್ಲಿ ಕಲೆತು ಕೃಷ್ಣನ ಆರಾಧನೆಯಲ್ಲಿ ತೊಡಗಿ ತನ್ನ ಅರುವತ್ತ ನಾಲ್ಕನೆಯ ವಯಸ್ಸಿನಲ್ಲಿ ಕೃಷ್ಣನ ಮೂರ್ತಿಯಲ್ಲಿ ಲೀನವಾದಳು ಎಂದು ಕಥೆ . ತನ್ನ ಜೀವಿತ ಕಾಲದಲ್ಲಿ ಯಾವ ಗುರುಗಳಿಂದ ದೀಕ್ಷೆ ಪಡೆಯದಿದ್ದರೂ ವಲ್ಲಭ ಪಂಥವನ್ನು ಅನುಸರಿಸುತ್ತಾ ಅದಕ್ಕೆ ತಕ್ಕಂತೆ ನಡೆದು ತನ್ನ ಮನಸ್ಸಿನ ಭಾವಗಳನ್ನು ಗೀತಗಳನ್ನಾಗಿ ರಚಿಸಿ ರಾಗ ಹಾಕಿ ಹಾಡುತ್ತಿದ್ದಳು. ಇವೇ ಈಗ ಪ್ರಖ್ಯಾತವಾಗಿರುವ ಮೀರಾಭಜನ್ .ಮುನ್ನೂರರಿಂದ ಐನೂರು ಭಜನ್ ಗಳನ್ನು ಮೀರಾ ರಚಿಸಿದ್ದಾಳೆ ಎನ್ನುತ್ತಾರೆ ಆನಂತರ ಎಷ್ಟೋ ಜನ ತಮ್ಮ ಕೃತಿಗಳಿಗೆ ಮೀರಾಳ ಅಂಕಿತನಾಮ ಸೇರಿಸಿದ್ದಾರೆ ಎಂಬುದೂ  ಒಂದು ವಾದ .

ರಾಜಕುಮಾರಿಯಾಗಿ ರಾಣಿಯಾಗಿದ್ದರೂ ಐಹಿಕ ಸುಖಭೋಗಗಳಿಗೆ ಮನಸ್ಸಾಗದೆ ಮನಸ್ಸಿನಲ್ಲೇ ಕೃಷ್ಣನನ್ನು ತನ್ನ ಪತಿಯನ್ನಾಗಿ ಭಾವಿಸಿ ಆಧ್ಯಾತ್ಮಿಕ ದಾರಿಯಲ್ಲಿ ನಡೆದ ಮೀರಾ ಸಿದ್ಧ ರೂಢ ಪಥ ಸಂಪ್ರದಾಯಗಳಿಗಿಂತ ವಿಭಿನ್ನವಾಗಿ ನಿಲ್ಲುತ್ತಾಳೆ .

ಮೀರಾಳ ರಚನೆಗಳು ಗೀತಗೋವಿಂದದ ಟೀಕೆ,  ನರಸೀ ಬೇ ಕಾ ಮೆಹ್ರಾ ಗುಜರಾತಿನ ಖ್ಯಾತ ಭಕ್ತಕವಿ ನರಸೀ ಮೆಹತಾ ಅವರ ಚರಿತ್ರೆ,  ರಾಗ ಸೋರಠ ಪದ ಸಂಗ್ರಹ, ಇದರಲ್ಲಿ ಕಬೀರ್ ನಾಮದೇವರ ಜತೆ ಮೀರಾಬಾಯಿಯ ಪದಗಳನ್ನು ಸಂಗ್ರಹಿಸಲಾಗಿದೆ. ಬಿಡಿ ಗೀತೆಗಳು. ಇದಲ್ಲದೆ ರಾಗ ಗೋವಿಂದ, ಮೀರಾ ಕೀ ಮಲ್ಹಾರ್, ಗರ್ವಾ ಗೀತಾ, ಮೀರಾಕಿ ಪದಾವಲಿ ಇವುಗಳನ್ನೂ ಮೀರಾಬಾಯಿ ರಚನೆಗಳೆಂದೇ ಹೇಳುತ್ತಾರೆ .

ಬರಿಯ ಸಂಗತಿಗಳನ್ನು ಹೇಳುವುದಲ್ಲದೆ ಅದನ್ನು  ವೈಚಾರಿಕ ದೃಷ್ಟಿಕೋನದಿಂದ ಚಿಂತನ ಮಂಥನ ಮಾಡಿ ಬರೆದಿರುವುದು ಇಲ್ಲಿನ ವೈಶಿಷ್ಟ್ಯ . ಹಾಗಾಗಿ ಮೀರಾಳ ಬಗ್ಗೆ ಇರುವ ದಂತ ಕಥೆಗಳಿಗೆ ಒಂದು ತಾರ್ಕಿಕ ತಳಹದಿ ನೀಡುತ್ತಾರೆ.  ಮೀರಾಳನ್ನು ಅವಳ ಮೈದುನ ಕೊಲೆ ಮಾಡಲು ಆವರಣದ ಪೆಟ್ಟಿಗೆಯಲ್ಲಿ ಘೋರ ಸರ್ಪವೊಂದನ್ನು ಇಟ್ಟು ಕಳುಹಿಸುತ್ತಾನೆ .ನಂತರ ತೀರ್ಥದಲ್ಲಿ ವಿಷವನ್ನು ಬೆರೆಸಿ ಕೊಡುವ ಪ್ರಯತ್ನ ಮಾಡುತ್ತಾನೆ.  ಆದರೆ ಇವು ಯಾವುದೂ ಸಫಲವಾಗದೆ ಸರ್ಪವು ರತ್ನಹಾರವಾಗಿ ಬದಲಾಗಿ, ತೀರ್ಥ ಕುಡಿದರೂ ಏನೂ ಕೇಡಾಗದೆ ಉಳಿಯುವುದು ಪವಾಡವೆಂದು ಜನ ನಂಬುತ್ತಾರೆ . ಲೇಖಕಿಯವರು ಇದನ್ನು ಬೇರೆಯದೇ ದೃಷ್ಟಿಯಿಂದ ನೋಡಿ ಅಂತಃಪುರದಲ್ಲಿ ಇದ್ದ ರಾಜಕೀಯದಿಂದ ರಾಜಮಾತೆ ಹಾಗೂ ರಾಜ ಮಾಡಿದ ಸಂಚುಗಳು ಮೀರಾಳಂತೆ ರಾಥೋಡ ಕುಲದವಳೇ ಆದ ಮತ್ತೊಬ್ಬ ರಾಣಿ ಧನ ಬಾಯಿಗೆ ತಿಳಿದು ಅವರು ಈ ಹಂಚಿಕೆಗಳನ್ನು ವಿಫಲ ಮಾಡಿರಬಹುದು ಎನ್ನುವ ವಾದವನ್ನು ಇಡುತ್ತಾರೆ . ಹಾಗೆಯೇ ತನಗೆ ಅರಮನೆಯಿಂದ ಆಗುತ್ತಿದ್ದ ಕಿರುಕುಳಗಳ ಬಗ್ಗೆ ತುಳಸೀದಾಸರಿಗೆ ಪತ್ರ ಬರೆದು ಸಾಧುಗಳ ಮೂಲಕ ಕಳುಹಿಸಿ ಅವರಿಂದ ದೈವಭಕ್ತಿ ಇಲ್ಲದವರನ್ನು ತ್ಯಜಿಸಬೇಕು ಅವರು ಎಷ್ಟೇ ಹತ್ತಿರದವರಾದರೂ ವೈರಿಗಳೆಂದು ಭಾವಿಸಬೇಕು ಎನ್ನುವ ಉತ್ತರ ಬಂದಾಗ ಅದರಂತೆ ಮೇವಾಡವನ್ನು ತ್ಯಜಿಸಿ ಬೃಂದಾವನಕ್ಕೆ ಹೋದಳು ಎನ್ನುವ ದಂತಕಥೆಯು ಸಹ ಸತ್ಯಕ್ಕೆ ಅಷ್ಟು ಹತ್ತಿರವಾದುದಲ್ಲ ಎನ್ನುತ್ತಾರೆ . ಮತ್ತೊಂದು ಕಥೆಯ ಪ್ರಕಾರ ಅಕ್ಬರ್ ತಾನಸೇನನ ಜತೆ ಮಾರುವೇಷದಲ್ಲಿ ಬಂದು ಮೀರಾಳ ಗಾಯನವನ್ನು ಕೇಳಿ ಕಂಠೀಹಾರವನ್ನು ಕೊಟ್ಟು ಹೋಗುತ್ತಾನೆ ಅದನ್ನೇ ನೋಡಿ ಅವಳ ಮೈದುನ ರಾಜ ವಿಕ್ರಮಾದಿತ್ಯ ಅವಳ ಶೀಲದ ಬಗ್ಗೆ ಸಂದೇಹ ಪಡುತ್ತಾನೆ ಎನ್ನುವಂಥದ್ದು . ಮೀರಾಬಾಯಿ ಮತ್ತು ಅಕ್ಬರರು ಬದುಕಿದ್ದ ಕಾಲದಲ್ಲಿ ಸಾಕಷ್ಟು ವ್ಯತ್ಯಾಸವಿದ್ದು ಇದು ನಂತರದಲ್ಲಿ ಕಲ್ಪಿತ ಘಟನೆ ಆಗಿರಬಹುದು ಅನ್ನಿಸುತ್ತದೆ ಎಂಬ ಅಭಿಪ್ರಾಯ ಮಂಡಿಸುತ್ತಾರೆ .

ಮೀರಾಬಾಯಿಯ ಕೃತಿಗಳಲ್ಲಿ ಇರುವ ವಿಶೇಷಗಳನ್ನು ಪಟ್ಟಿ ಮಾಡಿರುವ ರೀತಿ ತುಂಬಾ ಸಮಂಜಸ ಹಾಗೂ ಕೊಟ್ಟಿರುವ ಉದಾಹರಣೆಗಳು ಅಷ್ಟೆ ಮನಸ್ಸಿಗೆ ಹತ್ತಿರವಾಗುತ್ತವೆ .  ಅಂತರಂಗದ ಭಾವನೆಗಳಿಗೆ ಭಾಷಾರೂಪ ಕೊಟ್ಟಿದ್ದರಿಂದ ಅರ್ಥವಾಗದಿದ್ದರೂ ಮಧುರ ಶಬ್ದಗಳ ಪ್ರಯೋಗ ಮನಸ್ಸಿಗೆ ಹಿತ ನೀಡುವಂಥದ್ದು ಅಲ್ಲದೆ ಪದಗಳನ್ನು ಶಬ್ದಗಳನ್ನು ಸ್ವಾರಸ್ಯಕರವಾಗಿ ಮಾರ್ಪಡಿಸಿ ಪ್ರಯೋಗಿಸುವುದರಲ್ಲಿ ಮೀರಾ ಸಿದ್ಧಹಸ್ತಳು ಎನ್ನುತ್ತಾರೆ . ಅದಕ್ಕೆ ಉದಾಹರಣೆಯಾಗಿ ಮುರಳಿಗೆ ಮುರಡಿ, ಪಪಿಹಾ ಕೆ ಪಪಿಯಾ ರಾಮನಿಗೆ ರಮಯ್ಯಾ ಎನ್ನುವುದರಲ್ಲಿ ವಿಶೇಷ ಮಾಧುರ್ಯವಿದೆ . ಹೀಗೆಯೇ ಸಂಯುಕ್ತಾಕ್ಷರಗಳನ್ನು ಒಡೆಯುವುದರಿಂದ ಪದಗಳು ಸರಳಗೊಳಿಸಿ ಮತ್ತಷ್ಟು ಅಂದ ನೀಡುತ್ತಾಳೆ ಎನ್ನುತ್ತಾರೆ . ಮಾರ್ಗ ಗೆ ಮಾರಗ,  ಕೀರ್ತಿಗೆ ಕೀರತ, ಕೃಪಾಗೆ ಕಿರಪಾ ಇತ್ಯಾದಿ ಉದಾಹರಣೆಗಳನ್ನು ನೀಡುತ್ತಾರೆ .ಲೇಖಕಿಯವರ ಹೇಳುವಂತೆ ಮಹತ್ತರವಾದ ಭಾವನೆಗಳು ತಮಗೆ ತಾವೇ ಯೋಜನಾ ಬದ್ಧವಾಗಿ ಇರುತ್ತದೆ; ಪ್ರಯತ್ನ ಪೂರ್ಣವಾಗಿ ಹಾಡುಗಳನ್ನು ಬರೆಯದಿದ್ದರೂ ಮೀರಾಬಾಯಿಯ ಗೀತೆಗಳಲ್ಲಿನ ರಸಯೋಜನೆ ಸಹಜವಾಗಿದೆ ಹಾಗೂ ಕಾವ್ಯ ಶಾಸ್ತ್ರಕ್ಕೂ ಅನುಗುಣವಾಗಿವೆ ಎಂಬ ಅಂಶವನ್ನು ಪ್ರತಿಪಾದಿಸುತ್ತಾರೆ.

ಪ್ರೇಮದ ಪರಿಪೂರ್ಣತೆಗೆ ಪರಿಪಕ್ವತೆಗೆ ವಿರಹ ಅವಶ್ಯಕ ಎನ್ನುವ ಮಾತಿನಂತೆ ಶೃಂಗಾರ ರಸದ ಎರಡೂ ರೂಪಗಳು ಅಂದರೆ ಸಂಯೋಗ ಅಥವಾ ಮಿಲನ ಶೃಂಗಾರ ಮತ್ತು ವಿಯೋಗ ಅಥವಾ ವಿಪ್ರಲಂಬ ಶೃಂಗಾರ ಮೀರಾಬಾಯಿಯ ಪದಗಳಲ್ಲಿ ಕಾಣುತ್ತದೆ. ಅವಳ ವಿರಹ ಸ್ವಾನುಭವದಿಂದ ಕೂಡಿದ್ದಾದ್ದರಿಂದ ಅವಳ ಗೀತೆಗಳಿಗೆ ಹೃದಯಸ್ಪರ್ಶಿ ಗುಣ ತನ್ನಿಂತಾನೇ  ಬಂದಿದೆ ಎಂದು ಹೇಳುತ್ತಾರೆ. ತಮ್ಮದು ಜನ್ಮ ಜನ್ಮಾಂತರದ ಸಂಬಂಧ ಎಂದು ತನ್ನ ಆಲಂಬನದೈವವನ್ನು ಗಿರಿಧರ ನಾಗರ, ರಮಯ್ಯ, ಜೋಗಿಯಾ,ಹರಿಕನ್ಹಾ ಗೋವಿಂದ ನಂದನಂದನ ಮದನಮೋಹನ ಎಂದೆಲ್ಲ ಹೆಸರುಗಳಿಂದ ಕರೆಯುತ್ತಾಳೆ .ಮೇರೆ ತೋ ಗಿರಿಧರ ಗೋಪಾಲ ಎಂಬ ಭಜನೆಯಲ್ಲಿ ಆಕೆ ಗಿರಿಧರ ಗೋಪಾಲನನ್ನು ಬಿಟ್ಟರೆ ನನಗೆ ಬೇರೆ ಯಾರು ಇಲ್ಲ ತಲೆಯಲ್ಲಿ ನಲಿವಿನ ಕಿರೀಟವನ್ನು ಧರಿಸಿದವನೇ ನನ್ನ ಪತಿ . ಕುಲದ ನಿಯಮವನ್ನು ಮೀರಿದಳು ಎಂದರು ಜನ, ಸಂತ ಜನರ ಜೊತೆ ಕೂತು ಲೋಕದ ಲಜ್ಜೆಯನ್ನು  ಮರೆತೆ .ಕಣ್ಣೀರನೇ ನೀರಿನಂತೆ ಸುರಿಸಿ ಪ್ರೇಮದ ಬಳ್ಳಿಯನ್ನು ನೆಟ್ಟೆ . ಈಗ ಆ ಬಳ್ಳಿಯಲ್ಲಿ ಆನಂದ ಎನ್ನುವ ಹಣ್ಣು ಬಿಟ್ಟಿದೆ ಈ ಫಲವನ್ನು ಕಂಡು ಭಕ್ತರು ಒಪ್ಪಿದರು. ಆದರೆ ಜಗತ್ತು ಅಸಮಾಧಾನ ಸೂಚಿಸಿತು. ಮೀರ ದಾಸಿಯ ಪ್ರಿಯತಮ ಗಿರಿಧರ ನನ್ನನ್ನು ಉದ್ಧಾರ ಮಾಡು ಎಂದು ಬೇಡಿಕೊಳ್ಳುತ್ತಾಳೆ .

ಮೀರ ವೇದನೆಯ ಅಭಿವ್ಯಕ್ತಿಯಲ್ಲಿ ತುಂಬಾ ಸಿದ್ಧಹಸ್ತಳು. ಅವಳ ನೋವಿಗೆ ಕಾರಣವಾದ ಮೂರು ಅಂಶಗಳು ತಂದೆ ತಾಯಿ ಪತಿ ಮುಂತಾದವರ ಮರಣ, ರಾಜ ಪರಿವಾರದವರಿಂದ ಬಂದ ನಾನಾ ವಿಧ ಯಾತನೆಗಳು ಹಾಗೂ ಬಾಲ್ಯದಿಂದಲೇ ಅವಳ ಹೃದಯದಲ್ಲಿ ಬೆರೆತುಹೋಗಿದ್ದ ಭಕ್ತಿ ಭಾವನೆ.  ಮೀರಾ ಛಂದಸ್ಸಿನ ಕಡೆ ಹೆಚ್ಚಿನ ಗಮನ ಕೊಡುವುದಿಲ್ಲ.  ಅವಳು ರಚಿಸಿದ್ದಲ್ಲ ಹಾಡುಗಳು ಭಜನೆಗಳು. ಅವುಗಳನ್ನು ಹಾಡುತ್ತಿದ್ದಳೇ ಹೊರತು ಓದುತ್ತಿರಲಿಲ್ಲ ಹೀಗಾಗಿ ಅಕ್ಷರಗಳು ವ್ಯತ್ಯಾಸವಾದಾಗ ಲಯ ವಿಷಮತೆಯನ್ನು ನಿವಾರಿಸುತ್ತಿತ್ತು ಎನ್ನುತ್ತಾರೆ .ಮತ್ತೊಂದು ಅಂಶ ಲೇಖಕಿಯವರು ಗಮನಿಸಿದಂತೆ ಮೀರಾ ಆಗಲಿ ಸುರದಾಸ್ ಕಬೀರ್ ಮುಂತಾದ ಹಿಂದಿಯ ಮಿಕ್ಕ ಗಾಯಕ ಕವಿಗಳಾಗಲಿ ತಮ್ಮ ಕೃತಿಗಳನ್ನು ಲಿಪಿಬದ್ಧವಾಗಿ ಮಾಡಿರಲಿಲ್ಲ. ಹಾಗಾಗಿ ಅವರ ನುಡಿಗಳೆಲ್ಲ ಹಾಡುಗಳಾಗುತ್ತಿದ್ದವು. ಈ ಮಾತು ಎಲ್ಲಾ ಭಾಷೆಯ ಭಕ್ತ ಕವಿಯ ರಚನೆಗಳು ಅನ್ವಯಿಸುತ್ತದೆ ಕನ್ನಡದಲ್ಲೂ ಪುರಂದರದಾಸರು ಕನಕದಾಸರು ವಿಜಯದಾಸರು ಕಾವ್ಯ ಗ್ರಂಥಗಳನ್ನು ಬರೆಯಲಿಲ್ಲ .ಅವರೆಲ್ಲ ಸ್ಪೂರ್ತಿ ಬಂದಾಗೆಲ್ಲ ಗೀತೆಗಳನ್ನು ರಚಿಸಿ ಹಾಡುತ್ತಿದ್ದರು ಎಂಬ ಅಂಶವನ್ನು ಎತ್ತಿ ಹಿಡಿಯುತ್ತಾರೆ. ಹಾಗಾಗಿ ಅವರ ರಚನೆಗಳು ಅವರ ಶಿಷ್ಯರ ಮೂಲಕ ಮುಂದೆ ಲಿಪಿ ಬದ್ಧವಾದರೂ ಮೀರಳಿಗೆ ಶಿಷ್ಯರೇ ಇಲ್ಲದ ಕಾರಣ ಅವಳ ಹೆಚ್ಚಿನ ರಚನೆಗಳು ಕಾಲಾಂತರದಲ್ಲಿ ಮೌಖಿಕವಾಗಿಯೇ ಪ್ರಚಲಿತವಿದ್ದವು.. ಬೇರೆಯವರು ಮೀರಾಳ ಅಂಕಿತ ನಾಮಗಳನ್ನು ಸೇರಿಸಿದ ರಚನೆಗಳೂ ಪ್ರಚುರವಾದವು.  ಬ್ರಜಾ ಮತ್ತು ರಾಜಸ್ತಾನಿ ಭಾಷೆಯಲ್ಲಿ ರಚಿತವಾದ ಮೀರಾಬಾಯಿಯ ರಚನೆಗಳಲ್ಲಿ ಆಡಂಬರವಿಲ್ಲ . ಲೇಖಕಿಯವರು ಗಮನಿಸಿರುವ ಮತ್ತೊಂದು ಅಂಶವೆಂದರೆ ಮೀರಾಬಾಯಿಯ ಭಜನೆಗಳಲ್ಲಿ ಭಾವತೀವ್ರತೆ ಚರಮ ಸೀಮೆಯನ್ನು ಮುಟ್ಟಿದೆ .ಆದ್ದರಿಂದ ಅವಳ ಇಂಥ ಗೀತೆಗಳು ಭಾವನಾತ್ಮಕ ರೂಪ ತಾಳುತ್ತದೆ . ಕಬೀರರ ಗೀತೆಗಳಲ್ಲಿ ಆಧ್ಯಾತ್ಮಿಕತೆ,  ವಿದ್ಯಾಪತಿ ಗೀತೆಗಳು ವಿಚಾರ ಕತೆಯೊಂದಿಗೆ ಜೀವನದ ಪ್ರೇಮಮಯ ಅನುಭವ,  ಸೂರದಾಸರಲ್ಲಿ ಭಾವ ಹಾಗೂ ಸಂಗೀತದ ಸುಂದರ ಸಮನ್ವಯ ತುಳಸಿದಾಸರ ಗೀತೆಗಳಲ್ಲಿ ವ್ಯಕ್ತಿತ್ವದ ಪ್ರಭಾವ ಇರುವಂತೆ ಮೀರಾಬಾಯಿಯ ಹಾಡುಗಳಲ್ಲಿ ಈ ಎಲ್ಲಾ ಗುಣಗಳ ಅಚ್ಚುಕಟ್ಟಾದ ಹೊಂದಾಣಿಕೆ ಕಾಣುತ್ತದೆ ಕಾವ್ಯ ಗುಣ ಹಾಗೂ ಸಂಗೀತ ಗುಣಗಳೆರಡು ಅವಳ ರಚನೆಗಳಲ್ಲಿ ಹದವಾಗಿ ಹೆಣೆದುಕೊಂಡಿದೆ.

ಜೋಗಿ ಮತಜ ಮತಜಾ ಪಾವು ಪರು ಮೈತೋರೆ ಎಂಬ ಪ್ರಸಿದ್ಧ ಭಜನ್ ನಲ್ಲಿ ನಾಥಪಂಥದಲ್ಲಿ ಭಗವಂತನಿಗೆ ಪ್ರಯೋಗಿಸಲ್ಪಡುವ ಜೋಗಿ ಎನ್ನುವ ಶಬ್ದ ಪದೇ ಪದೇ ಬರುತ್ತದೆ ಆದರೆ ಅವಳು ಈ ಪಂಥದ ಸಾಧಕಿಯಂತೆ ಕಾಣುವುದಿಲ್ಲ ಎಂಬ ಅಂಶವನ್ನು ಲೇಖಕಿಯವರು ಇಲ್ಲಿ ಒತ್ತಿ ಹೇಳುತ್ತಾರೆ . “ತುಮ್  ಬಿಜ್ ಹಮ್ ಬಿಜು ಅಂತರ ನಾಹಿ” ಎಂದು ಮೀರಾ ಪದೇ ಪದೇ ಹೇಳುತ್ತಾಳೆ. ಅಂದರೆ ನನ್ನ ನಿನ್ನ ನಡುವೆ ಯಾವ ಅಂತರವು ಇಲ್ಲ ಎನ್ನುವುದು ಅವಳ ದೃಢವಾದ ನಂಬಿಕೆ ಒಬ್ಬ ವಿರಹಿಣಿಯ ಆತ್ಮದ ನೋವಿನಿಂದ ಅವಳ ಉದ್ಗಾರ. ವ್ಯಕ್ತಿಗಳು ಇಂದ್ರಿಯಗಳು ಚಿಂತನೆ ಯಾವುದರ ಬಳಕೆ ಇಲ್ಲದೆ ನೆರವಿಲ್ಲದೆ ಬರುವ ಅರಿವು ಅನುಭಾವ .ಇಂತಹ ಅನುಭಾವ ಮೀರಾಬಾಯಿಯದು .

ಮೀರಾ ಬಾಯಿಯಂತೆಯೇ ತಮಿಳುನಾಡಿನ ಅವೈಯಾರ್, ಅಂಡಾಳ್, ಕರ್ನಾಟಕದ ಅಕ್ಕಮಹಾದೇವಿ, ಕಾಶ್ಮೀರದಲ್ಲಿ ಲಲ್ಲೇಶ್ವರಿ ಮಹಾರಾಷ್ಟ್ರದ ಮುಕ್ತಾಬಾಯಿ ಮುಂತಾದ ಮಹಿಳೆಯರು ಸಂಸಾರ ಸುಖವನ್ನು ತ್ಯಜಿಸಿ ಭಗವಂತನಲ್ಲಿ ಮನಸ್ಸಿಟ್ಟು ಆಧ್ಯಾತ್ಮ ಜೀವಿಗಳಾಗಿ ಬಾಳಿದ್ದಾರೆ ತಮ್ಮ ಹಾಡುಗಳ ಮೂಲಕ ಆಯಾ ಭಾಷೆಯ ಸಾಹಿತ್ಯಕ್ಕೂ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ.

ಪರಮ ಪುರುಷನ ಸಾಂಗತ್ಯಕ್ಕಾಗಿ ಐಹಿಕ ಸಂಸಾರ ಸುಖ ಭೋಗಗಳನ್ನು ತ್ಯಾಗ ಮಾಡಿದ್ದಾರೆ; ವಿರಾಗಿಣಿಯರು ಎನಿಸಿಕೊಂಡಿದ್ದಾರೆ.

ಇಲ್ಲಿ ವಿಮರ್ಶಕರು ಮೀರಾ ಮತ್ತು ಅಕ್ಕಮಹಾದೇವಿಯರಲ್ಲಿ ಅಭಿವ್ಯಕ್ತಿ ಹೊಂದಿರುವ ನೋವಿನ ಪದಗಳನ್ನು ಹೋಲಿಸಿರುವುದನ್ನು ಲೇಖಕಿ ಉದ್ಧರಿಸುತ್ತಾರೆ

ಘಾಯಲ್ಲ ಕೀ ಗತಿ ಘಾಯಲ್ ಜಾಣೆ (ಮೀರಾ)

ನೊಂದವರ ನೋವ ನೋಯದವರೆತ್ತ ಬಲ್ಲರು (ಅಕ್ಕಮಹಾದೇವಿ)

ಇಂತಹ ರಚನೆಗಳು ಭಾವ ಬಿಂಬ ಪ್ರತಿಬಿಂಬದಂತೆ ಕಾಣುತ್ತದೆ . ಇಬ್ಬರ ರಚನೆಗಳು ಜೀವನ ಕ್ರಮವೂ ಹೆಚ್ಚು ಕಡಿಮೆ ಒಂದೇ ರೀತಿಯಾಗಿತ್ತು ಆದ್ದರಿಂದ ಅವರಿಬ್ಬರ ರಚನೆಗಳಲ್ಲಿ ಸಾಕಷ್ಟು ಸಾಮ್ಯ ಇರುವುದರಲ್ಲಿ ಆಶ್ಚರ್ಯವೇನು ಇಲ್ಲ ಎಂಬುದು ಲೇಖಕಿಯವರು ಕಂಡುಕೊಂಡಿರುವ ಸತ್ಯ.

ಹಿಂದಿ ಕವಿಗಳಲ್ಲಿ “ಪದ್ಮಾವತಾ” ಎನ್ನುವ ಮಹಾಕಾವ್ಯವನ್ನು ಬರೆದ ಸೂಫಿ ಕವಿ ಜಾಯಸಿಯ ವಿರಹ ವರ್ಣನೆಗೆ ವಿಮರ್ಶಕರು ಅಗ್ರಸ್ಥಾನವನ್ನು ಕೊಟ್ಟಿದ್ದಾರೆ. ಆದರೆ ಮೀರಾಬಾಯಿಯ ಹಾರ್ದಿಕವಾದ  ವಿರಹ ವರ್ಣನೆಯೊಂದಿಗೆ ಜಾಯಸಿಯ ವರ್ಣನೆಯನ್ನು ಹೋಲಿಸಿದಾಗ ಅವನದು ಕೇವಲ ಊಹಾತ್ಮಕ ಹಾಗೂ ಅತಿಶಯೋಕ್ತಿಯ ನುಡಿಗಳಾಗಿ ಕಂಡುಬರುತ್ತವೆ ಎಂಬ ಲೇಖಕಿಯ ಮಾತುಗಳು ಇಲ್ಲಿ ಗಮನಾರ್ಹ. 

ಬೃಂದಾವನದಲ್ಲಿ ಜೀವ ಗೋಸ್ವಾಮಿ ಎಂಬ ವಿದ್ವಾಂಸರಾದ ಕೃಷ್ಣಭಕ್ತರು ನಾನು ಹೆಂಗಸರನ್ನು ಭೇಟಿಯಾಗುವುದಿಲ್ಲ ಎಂಬ ಪ್ರತಿಜ್ಞೆ ಮಾಡಿ ಅದರಂತೆ ನಡೆದುಕೊಳ್ಳುತ್ತಿದ್ದರು.  ಮೀರಾ ಅಲ್ಲಿಗೆ ಹೋದಾಗ ಈ ವಿಷಯ ತಿಳಿದು ತನ್ನ ಭೇಟಿಗೆ ಒಪ್ಪದವರಿಗೆ ಹೀಗೆ ಹೇಳಿ ಕಳುಹಿಸಿದಳು. ಬೃಂದಾವನದಲ್ಲಿರುವ ಪುರುಷ ಕೃಷ್ಣ ಮಾತ್ರ ಎಂದು ಮಿಕ್ಕವರೆಲ್ಲ ಗೋಪಿಯರು ಅಂದರೆ ಸ್ತ್ರೀಯರು ಎಂದು. ನಾಥಪಂಥದ ಪ್ರಕಾರ  ಕೃಷ್ಣನೊಬ್ಬನೇ ದೇವ ಹಾಗೂ ಅವನನ್ನು ಎಲ್ಲ ಶಿಷ್ಯರು ನಾಥನೆಂದು ಪೂಜಿಸುವುದು. ಈ ಮಾರ್ಮಿಕ ಸತ್ಯವನ್ನು ಅವರಿಗೆ ಅರಿವಾಗಿಸುವ ಮೂಲಕ ತಾನು ಅನುಸರಿಸುವ ಮಾರ್ಗದ ಬಗ್ಗೆ ಸ್ಪಷ್ಟ ಹಾಗೂ ಖಚಿತ ಮನೋಭಾವ ಹೊಂದಿದವಳು ಮೀರ ಎಂಬ ಅಂಶವನ್ನು ಎತ್ತಿ ಹಿಡಿಯುತ್ತಾರೆ.

ಮಹಿಳಾಪರ ಆಲೋಚನೆಗಳು ಹಾಗೂ ಪುರಗಾಮಿ ಮನೋಭಾವವನ್ನು ಹೊಂದಿದ್ದ ಶ್ರೀಮತಿ ಹೆಚ್ ಎಸ್ ಪಾರ್ವತಿಯವರು ಮೀರಳ ಬಗ್ಗೆ ಬರೆದದ್ದು ಅವಳ ಆಂತರ್ಯವನ್ನು ಅರ್ಥ ಮಾಡಿಕೊಂಡು ಅವಳ ಅಂತರಾಳಕ್ಕೆ ಇಳಿದು ಬರೆದ ಹಾಗಿದೆ ಮರಳನ್ನು ಓದುಗರಿಗೆ ಮತ್ತಷ್ಟು ಆಪ್ತಳೆನಿಸುವುದಕ್ಕೆ ಹಾಗೂ ಅವಳ ರಚನೆಗಳ ವ್ಯಾಪಕ ಅರ್ಥವನ್ನು ಹಾಗೂ ಅದನ್ನು ರಚಿಸುವಾಗಿನ ಅವಳ ಮನೋಭಾವ ತಿಳಿಯುವುದಕ್ಕೆ ಪುಸ್ತಕ ತುಂಬಾ ಸಹಕಾರಿಯಾಗಿದೆ.

ಅಂದಿನ ಸಂಪ್ರದಾಯ ಬದ್ದ ಸಮಾಜ ಬಿಗಿಕಟ್ಟುಪಾಡಿನ ರೀತಿ ರಿವಾಜುಗಳ ಮಧ್ಯದಲ್ಲಿಯೂ ತಮ್ಮ ಅಚಲ ಛಲ ಹಾಗೂ ಅದಮ್ಯ ವಿಶ್ವಾಸದಿಂದ ತಾವು ನಂಬಿದ ಹಾದಿಯಲ್ಲಿ ಛಲದಿಂದ ನಡೆದು ತಮ್ಮ ಅಸ್ತಿತ್ವದ ತೋರುವಿಕೆಯೊಂದಿಗೆ ಅಸ್ಮಿತೆಯನ್ನು ಉಳಿಸಿಕೊಂಡ ಇಂತಹ ಮಹಿಳೆಯರು ಆದರ್ಶಪ್ರಾಯರಾಗುತ್ತಾರೆ ಮಾದರಿ ಎನಿಸುತ್ತಾರೆ.

“ಮೀರಾ ತನ್ನ ಯುಗದ ಏಕಮಾತ್ರ ಖ್ಯಾತ ಪ್ರತಿನಿಧಿ ಕವಿಯತ್ರಿ ; ಸಂಗೀತದ ಮೂಲಕ ಇಡೀ ಭಾರತದಲ್ಲಿ ಪ್ರಸಿದ್ಧಳಾದ ಕವಿಯತ್ರಿಯು ಹೌದು” ಎಂದು ತಮ್ಮ ಲೇಖನದ ಉಪಸಂಹಾರ ಮಾಡುವ ಲೇಖಕಿಯವರು ಮೀರಾಳ ಜೀವನ ಚರಿತ್ರೆಯನ್ನು ಅವಳ ರಚನೆಗಳ ಭಾವ ಅನುಭವದ ಮೇಲೆ ಅವಳ ಜೀವನದ ಪ್ರಮುಖ ಸಂಗತಿಗಳನ್ನು ವಿವರಿಸುತ್ತಾ ಹೋಗುವುದು ತುಂಬಾ ಆಕರ್ಷಕ ಶೈಲಿಯ ನಿರೂಪಣೆಯಾಗಿದೆ . ವಸ್ತು ವಿಷಯದ ಕ್ರೋಢೀಕರಣ ಇಲ್ಲಿನ ಧನಾತ್ಮಕ ಹಾಗೂ ತುಂಬಾ ಗಮನಾರ್ಹವಾದ ಅಂಶ. ಅಲ್ಲದೆ ವಿಷಯದ  ಬಗ್ಗೆ ವಿಚಾರಾತ್ಮಕ ನಿಲುವು ಹಾಗೂ ತರ್ಕಬದ್ದ ಶೈಲಿಯಿಂದ ಅಂದಿನ ಘಟನೆಗಳ ಮೇಲೆ ವಿಶಿಷ್ಟ ರೀತಿಯ ವಿಭಿನ್ನ ಆಯಾಮಗಳ ದೃಷ್ಟಿ ಕೋನ ಹೊಂದಿ ವಿವರಿಸುವುದು ನಿಜಕ್ಕೂ ಕಥೆಯನ್ನು ವಾಸ್ತವದ ತಳಹದಿಯ ಮೇಲಿಟ್ಟು ನೋಡುವಂತಹ ಚಿಂತನ ಮಂಥನಕ್ಕೆ ಪ್ರೇರೇಪಿಸುತ್ತದೆ .ಎಲ್ಲಕ್ಕಿಂತ ಹೆಚ್ಚಿನದೆಂದರೆ ಅತಿ ಕಡಿಮೆ ಶಬ್ದಗಳಲ್ಲಿ ಅತ್ಯಂತ ವಿವರವಾದ ಸೂಕ್ತವಾದ ಪೂರ್ಣವಾದ ವಿವರಗಳನ್ನು ಕೊಟ್ಟಿರುವುದು.  ಈ ಪುಸ್ತಕದ ಓದು ಮೀರಾಳ ಬಗೆಗಿನ ನಮ್ಮ ಭಾವನೆಗಳನ್ನು ಒಳ ನೋಟಗಳನ್ನು ಒಂದು ಹೊಸ ದಿಕ್ಕಿನಡೆ ಕರೆದೊಯುತ್ತದೆ ಭಜನ್ಗಳನ್ನು ಈವರೆಗೆ ಬರಿ ಸಂಗೀತದ ದೃಷ್ಟಿಯಿಂದ ನೋಡುತ್ತಿದ್ದು ಈಗ ಅವುಗಳ ಸಾಹಿತ್ಯಾತ್ಮಕ ಗುಣ ಹಾಗೂ ಅದರ ಹಿಂದಿನ ಅಂತರ್ಗತ ಭಾವನೆಗಳ ಅರ್ಥೈಸಿಕೊಳ್ಳುವಿಕೆಗೂ ಹಚ್ಚುತ್ತದೆ. ಬಿಂದುವಿನಲ್ಲಿ ಸಿಂಧುವನ್ನು ಕಾಣುವಂತೆ ಮಾಡುತ್ತದೆ ಸಾರ್ಥಕ ಓದು ಎನಿಸುತ್ತದೆ.


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top