ಮಾಜಾನ್ ಮಸ್ಕಿ-ಗಜಲ್

ಕಾವ್ಯ ಸಂಗಾತಿ

ಗಜಲ್

ಮಾಜಾನ್ ಮಸ್ಕಿ

ಹೃದಯವೇಕೋ ಜಡವಾಗಿದೆ ಕದಲಿಸಬೇಡ ಸುಮ್ಮನಿರು
ನನ್ನೀ ಪ್ರೀತಿಯನು ಮತ್ತೆ ಪರೀಕ್ಷಿಸಬೇಡ ಸುಮ್ಮನಿರು

ಕದಡಿದ ಮನವು ತಿಳಿಯಾಗಿ ಬಿಳಿ ಮೋಡ ನೋಡುತ್ತಿದೆ
ಅದರೊಳು ಕಲ್ಲೆಸೆದು ಅಲೆಗಳ ಎಬ್ಬಿಸಬೇಡ ಸುಮ್ಮನಿರು

ಭೂತಕ್ಕಿದೆ ಸಾವು ನೋವು ಕೊರಗುವುದು ಏಕೆ ಮನವೇ
ಮೊಹಬತ್ ವಿಷಪೂರಿತವಾಗಿದೆ ಸೇವಿಸಬೇಡ ಸುಮ್ಮನಿರು

ಕಮರಿ ಹೋದ ಬಯಕೆಗಳು ತಿಲಕವನ್ನು ಅಳಿಸಿದೆ
ಆಸೆಯಿಂದ ಮಲ್ಲಿಗೆಯ ಮುಡಿಯಬೇಡ ಸುಮ್ಮನಿರು

ಎಲ್ಲೆಲ್ಲೂ ಪ್ರೇಮಿಗಳ ಸಮಾಧಿಗಳಿವೆ ನೋಡು “ಮಾಜಾ”
ಜೀವಿಸಬೇಕು ದೀಪದಂತೆ ಆರಲುಬೇಡ ಸುಮ್ಮನಿರು


One thought on “ಮಾಜಾನ್ ಮಸ್ಕಿ-ಗಜಲ್

Leave a Reply

Back To Top