ಕಾವ್ಯ ಸಂಗಾತಿ
ಶಿ ಕಾ ಬಡಿಗೇರ
ಕವಿತೆ
ನದಿ ಹರಿಯುತ್ತಿದೆ ಯಾರದೂ ತಕರಾರಿಲ್ಲದೆ
ಗಾಳಿಯೂ ಸಹ; ಬಿರಿದ ಹೂವಿಗೆ ಬಿಂಕವಿಲ್ಲ
ಕೋಗಿಲೆಗೆ ಮಾತಿಲ್ಲ ಆದರೂ ದನಿಯಲಿ ಅದೆಂಥ ಇಂಪು…
ಹೊಲದ ಬದುವಿನ ತುಂಬ ಬಗೆ ಬಗೆಯ ಹೂ ಬಳ್ಳಿಗಳು, ಕಂಟಿಗಳಲಿ ಜೇನು ಹುಳುಗಳದೇ ನಿನಾದ! ಎಲ್ಲೋ ಬೆಳವ ಸಂಗಾತಿ ಕರೆಯುತ್ತಿದೆ…
ಅಂಗೈಯೊಳಗಿನ ಅದೃಷ್ಟ ರೇಖೆಯಲಿ ಧನವೇ
ತುಂಬಿ ತುಳುಕಿದೆ; ಖಾಲಿ ಬಕ್ಕಣಕೋ ಎಲ್ಲಿಲ್ಲದ ನಗು, ಮಾಸಿದ ಕರ್ಚೀಫಿನೊಳಗೆ ಕಣ್ಣೀರ ಕಲೆ …
ಬಿತ್ತಿ ಬೆಳೆ ತೆಗೆವ ತವಕ ಎದೆಯ ಅಂಗಳದಲಿ
ಮಾರು ಭೂಮಿಗೆ ಬೆಲೆ ತೆರದ ಭಾರದಲಿ
ಬದುಕು ಕೀಲು ಇರದ ಬಂಡಿಯಲಿ ಜೋಲಿ ಹೊಡೆಯುತ್ತಿದೆ
ಮನೆಯೊಳಗೆ ಹೆಗ್ಗಣಗಳದೇ ಕಾರುಬಾರು
ಹಿಡಿ ಧಾನ್ಯಕೂ ಕೈ ಚಾಚುವ ಖಾಲಿ ಕೈಗಳು
ಹರಿದ ಸೀರೆಯಲಿ ಅವ್ವ ದೀಪ ಹಚ್ಚುತ್ತಾಳೆ;
ಎಲ್ಲರ ಮನೆ ಎದುರು ದೀಪಗಳದೇ ಹಾವಳಿ…
ಎಲ್ಲರಿಗೂ ಕನಸು ಬಿತ್ತಲಿಕ್ಕಾಗದು;
ಬಿತ್ತಿದರೂ ಬೆಳೆ ತೆಗೆಯದ ಅಸಹಾಕತೆ
‘ಕವಿತೆ’ ಎದುರಿದ್ದಷ್ಟೂ ಮುಖದ ಕಳೆ ಹೆಚ್ಚಾದೀತು…