ಕವಿತಾ ಹಿರೇಮಠ-ಗಜಲ್

ಕಾವ್ಯ ಸಂಗಾತಿ

ಗಜಲ್

ಕವಿತಾ ಹಿರೇಮಠ

ಶತಮಾನಗಳ ಮೌಢ್ಯ ನಮ್ಮ ಮೇಲೆ ಹೇರದಿರಿ ನೀವು
ಹೆಣ್ಣೆಂದರೆ ಅಬಲೆಯೆಂದು ಭಾವಿಸದಿರಿ ನೀವು

ಸೀರೆ ಸೆರಗಂಚಿಗೆ ಗೊತ್ತು ಕಣ್ಣ ಹನಿಗಳ ಲೆಕ್ಕ ಕೇಳಿ ನೋಡಿ
ದರ್ಪ ತೋರಿ ಅವಳ ಆಸೆ, ಕನಸುಗಳ ಕೊಲ್ಲದಿರಿ ನೀವು

ನಗುವೆಂಬ ನಾಟಕವಾಡಿ ಜೀವಿಸಿಯೇ ಬಿಟ್ಟಳು ಅವಳು
ಮೋಹಕ್ಕೆ ಹಾತೊರೆದು ಆದರ್ಶಗಳ ವಧೆ ಮಾಡದಿರಿ ನೀವು

ಎಷ್ಟು ಅಂತ ಮುಖವಾಡ ಧರಿಸಬೇಕು ದಣಿದಿರುವಳು
ಪ್ರತಿಭೆಯನ್ನು ಸರಪಳಿಯಿಂದ ಕಟ್ಟಿ ಹಾಕದಿರಿ ನೀವು

ಮೌನದ ಊರಲ್ಲಿ ಅಲೆದು ಅಲೆದು ಸೋತಿರುವಳು
ಭಾವನೆಗಳ ಅರಿಯದೆ ಮಾತುಗಳಿಂದ ಚುಚ್ಚದಿರಿ ನೀವು

ಪ್ರೀತಿ ಬಯಸಿದ ಜೀವಕ್ಕೆ ಪ್ರೀತಿಯನಷ್ಟೇ ಹಂಚಿಬಿಡಿ
ಸಹನೆಯ ಮೂರ್ತಿಯವಳು ಕಾಡಿಸಿ ನೋಯಿಸದಿರಿ ನೀವು

ಪ್ರತಿ ಹೆಣ್ಣಿನ ಯಶೋಗಾಥೆಯ ಹಿಂದಿನ ವಿಷಾದವ ಬಲ್ಲಿರೇನು
ಕವಿಯ ಬರಹದ ಒಳಗಿನ ವ್ಯಥೆ ತಿಳಿಯದೆ ಅಲ್ಲಗಳೆಯದಿರಿ ನೀವು


2 thoughts on “ಕವಿತಾ ಹಿರೇಮಠ-ಗಜಲ್

  1. ಹೆಣ್ಣಿನ ಗೋಳನ್ನು ಚೆನ್ನಾಗಿ ಬರೆದಿದ್ದೀರಿ ಮೇಡಂ……ಶುಭವಾಗಲಿ…..ಅಂದದ ಗಝಲ್

Leave a Reply

Back To Top