ಕಾವ್ಯಯಾನ

ಕುರುಡು ಕಾಂಚಾಣ

Image result for photos of bendre

ಸುಜಾತಾ ರವೀಶ್

ಕುರುಡು ಕಾಂಚಾಣ

ಬೇಂದ್ರೆಯವರ ಕುರುಡು ಕಾಂಚಾಣ ಸಾಮಾಜಿಕ ಅನಿಷ್ಟವನ್ನು ವೈಭವೀಕರಿಸುವ ದೃಶ್ಯದಲ್ಲಿ ಆ ಕರಾಳತೆಯನ್ನು ಕಟ್ಟಿಕೊಡುವ ಒಂದು ಅತ್ಯಂತ ಶಕ್ತಿಯುತ ಪ್ರಯತ್ನ .ಹಣದ ದಾಹ ಎಂಬ ಪಿಶಾಚಿಯ ಯಾವ ರೀತಿ ತನ್ನ ಕ್ರೂರತೆಯನ್ನು ತೋರಿಸುತ್ತದೆ ಹೇಗೆ ಅದಕ್ಕೆ ಕೊಂಚವೂ ದಯವಿಲ್ಲ ಎಂಬುದನ್ನು ಕವಿಯ ಪದಗಳು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತದೆ ಆ ಭೀಭತ್ಸ ತೆಯು ಮೈ ಝುಮ್ ಎನ್ನುವಂತೆ ಮಾಡುತ್ತದೆ .ಬಾಣಂತಿ ಎಲುಬಿನ ಬಿಳುಪಿನ ಕಿರು ಗೆಜ್ಜೆ ,ಸಣ್ಣ ಕಂದಮ್ಮಗಳ ಕಣ್ಣಿನ ಕವಡೆ, ಬಡವರ ಹೊಟ್ಟೆಯ ಸಂಕಟದುರಿಯ ಪಂಜು ಅಬ್ಬಾ! ಕವಿಯ ಕಲ್ಪನೆಗೆ ಕವಿ ಕಲ್ಪನೆಯೇ ಸಾಟಿ .
ಒಂದೊಂದು ವಿವರವೂ ಓದುಗನಲ್ಲಿ ಸುಪ್ತವಾಗಿರುವ ಯಾವುದೋ ಒಂದು ಭಾವನೆಯನ್ನು ಕೆಣಕುತ್ತದೆ ಅವನನ್ನೇ ಕಾವ್ಯದ ಅಂಗವನ್ನಾಗಿ ಮಾಡುತ್ತದೆ .ಪದ್ಯ ವಿಡೀ ಕುರುಡು ಕಾಂಚಾಣದ ಗೆಜ್ಜೆಯ ಕುಣಿತದ ಸದ್ದು ಓದುಗನ ಕಿವಿಗಳಲ್ಲಿ ಅನುರಣಿಸುತ್ತಿರುತ್ತದೆ ಮತ್ತು ಪದ್ಯ ಗೆಲ್ಲುವುದು ಅಲ್ಲೇ .ಹಣದ ಝಣಝಣ ಮನೆಗಳ ಮಹಡಿಗಳಲ್ಲಿ ನಾಟ್ಯ ವಾಡುತ್ತದೆ ಗುಡಿಗಳಲ್ಲಿ ಗಣಗಣಿಸುತ್ತದೆ ಮತ್ತುಅಂಗಡಿಗಳಲ್ಲಿಯೂ ಅದರದೇ ಕಾರುಬಾರು ಎಂದು ವರ್ಣಿಸುತ್ತಾ ಕವಿ ಕಟ್ಟಕಡೆಯಲ್ಲಿ ಎಂದು ಹಣ ಗೆಲ್ಲಲಾಗುವುದಿಲ್ಲ ಎಷ್ಟು ದಿನ ಕುಣಿದೀತು? ಒಂದಲ್ಲ ಒಂದು ದಿನ ಅಂಗಾತವಾಗಿ ಬೀಳಲೇಬೇಕು. ಆಗ ಅದನ್ನು ಮೇಲೆತ್ತಲು ಮಾನವೀಯತೆಯೇ ಬರಬೇಕು ಎಂದು ಸೂಚ್ಯವಾಗಿ ತಿಳಿಸುತ್ತಾರೆ .

ಇಷ್ಟು ದಿನಗಳಾದರೂ ಈ ಕವನದ ಜನಪ್ರಿಯತೆ ಕಡಿಮೆಯಾಗಿಲ್ಲ ಎಂಬುದು ಕುರುಡು ಕಾಂಚಾಣಕ್ಕೂ ಕವಿ ಭಾವಕ್ಕೂ ಇರುವ ಸಂಬಂಧದ ದ್ಯೋತಕವೇ?

     ಕುರುಡು_ಕಾಂಚಾಣಾ

ಕುರುಡು ಕಾಂಚಾಣಾ ಕುಣಿಯುತಲಿತ್ತು |
ಕಾಲಿಗೆ ಬಿದ್ದವರ ತುಳಿಯುತಲಿತ್ತೋ ||
ಕುರುಡು ಕಾಂಚಾಣಾ ||
ಬಾಣಂತಿಯೆಲುಬ ಸಾ-
ಬಾಣದ ಬಿಳುಪಿನಾ
ಕಾಣದ ಕಿರುಗೆಜ್ಜೆ ಕಾಲಾಗ ಇತ್ತೋ;
ಸಣ್ಣ ಕಂದಮ್ಮಗಳ
ಕಣ್ಣೀನ ಕವಡಿಯ
ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ;
ಬಡವರ ಒಡಲಿನ
ಬಡಬಾsನಲದಲ್ಲಿ
ಸುಡು ಸುಡು ಪಂಜು ಕೈಯೊಳಗಿತ್ತೋ;
ಕಂಬನಿ ಕುಡಿಯುವ
ಹುಂಬ ಬಾಯಿಲೆ ಮೈ-
ದುಂಬಿದಂತುಧೋ ಉಧೋ ಎನ್ನುತಲಿತ್ತೋ;
ಕೂಲಿ ಕುಂಬಳಿಯವರ
ಪಾಲಿನ ಮೈದೊಗಲ
ಧೂಳಿಯ ಭಂಡಾರ ಹಣೆಯೊಳಗಿತ್ತೋ;
ಗುಡಿಯೊಳಗೆ ಗಣಣ, ಮಾ
ಹಡಿಯೊಳಗೆ ತನನ, ಅಂ-
ಗಡಿಯೊಳಗೆ ಝಣಣಣ ನುಡಿಗೊಡುತಿತ್ತೋ;
ಹ್ಯಾಂಗಾರೆ ಕುಣಿಕುಣಿದು
ಮಂಗಾಟ ನಡೆದಾಗ
ಅಂಗಾತ ಬಿತ್ತೋ, ಹೆಗಲಲಿ ಎತ್ತೋ.

ಅಂಬಿಕಾತನಯದತ್ತ…

*********

Leave a Reply

Back To Top