ಪ್ರಸ್ತುತ

ನಿರುದ್ಯೋಗದ ವಿರುದ್ದ ಹೋರಾಟ

Image result for photos of unemployment

ಗಣೇಶಭಟ್ ಶಿರಸಿ

ನಿರುದ್ಯೋಗದ ವಿರುದ್ಧ ಹೋರಾಟ…..


ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ, ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ, ಉದ್ಯಮಗಳು ಮುಚ್ಚುತ್ತಿರುವುದರಿಂದ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆ ಏರುತ್ತಿದೆಯೆಂಬುದನ್ನು ಹಲವು ವರದಿಗಳು ಹೇಳುತ್ತಿವೆ. ಆರ್ಥಿಕ ಹಿಂಜರಿತ ಉಂಟಾಗಿರುವುದೇ ಇದಕ್ಕೆ ಕಾರಣವೆಂದು ತಜ್ಞರು ಹೇಳುತ್ತಾರೆ. ನಿರುದ್ಯೋಗ ಸಮಸ್ಯೆಗೆ ಸೂಕ್ತ ಪರಿಹಾರ ಹುಡುಕುವ ಬದಲಿಗೆ, ರಾಜಕೀಯ ಪಕ್ಷಗಳ ಪರಸ್ಪರ ಕೆಸರೆರಚಾಟ ನಡೆದಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರು ನಿರುದ್ಯೋಗದ ವಿರುದ್ಧ ಹೋರಾಟ ಮಾಡುವುದಾಗಿ ಘೋಷಣೆ ಮಾಡಿ ನಿರ್ದಿಷ್ಟ ಮೊಬೈಲ್ ಸಂಖ್ಯೆಗೆ ಕರೆಮಾಡಿ ಬೆಂಬಲ ಸೂಚಿಸಲು ಕೋರಿದ್ದಾರೆ.
ನಿರುದ್ಯೋಗ ನಿವಾರಣೆಗೆ ಇಷ್ಟೊಂದು ಸುಲಭದಲ್ಲಿ ಪರಿಹಾರ ಕಂಡುಕೊಳ್ಳುವ ಹಾಗಿದ್ದಿದ್ದರೆ ಸಮಸ್ಯೆಯೇ ಉದ್ಭವವಾಗುತ್ತಿರಲಿಲ್ಲ. ಸರ್ಕಾರದ ವಿರುದ್ಧದ ಘೋಷಣೆಗಳು, ಮೆರವಣಿಗೆಗಳು, ಬಂದ್ ಆಚರಣೆಗಳು ಈ ಸಮಸ್ಯೆಗೆ ಪರಿಹಾರ ಸೃಷ್ಟಿಸಲಾರದು ಎಂಬ ಅರಿವು ರಾಜಕೀಯ ಮುಖಂಡರಿಗೆ ಇದ್ದೇ ಇದೆ. ಆದರೆ ಜನ ಸಾಮಾನ್ಯರೆದುರು ತಮ್ಮ ಕಳಕಳಿಯನ್ನು ಪ್ರದರ್ಶಿಸಿ ರಾಜಕೀಯ ಲಾಭ ಗಳಿಸುವ, ಪ್ರಚಲಿತದಲ್ಲಿರುವುದೇ ಇಂಥವರ ಉದ್ದೇಶ.
ನಿರುದ್ಯೋಗ ಸಮಸ್ಯೆಯ ಮೂಲ ಇರುವುದು ನಮ್ಮ ಸಾಮಾಜಿಕ- ಆರ್ಥಿಕ ವ್ಯವಸ್ಥೆಯಲ್ಲಿ. ಎಲ್ಲಿಯವರೆಗೆ ಬಂಡವಾಳವಾದದ ಚೌಕಟ್ಟಿನಲ್ಲೇ ವ್ಯವಹರಿಸುತ್ತಿರುತ್ತೇವೋ ಅಲ್ಲಿಯವರೆಗೂ ನಿರುದ್ಯೋಗ ಇದ್ದೇ ಇರುತ್ತದೆ. ಯಾಕೆಂದರೆ 100% ಉದ್ಯೋಗ ಎಂದರೆ ದುಡಿಯುವ ಸಾಮಥ್ರ್ಯವುಳ್ಳ ಎಲ್ಲರಿಗೂ ಉದ್ಯೋಗಾವಕಾಶ ಎಂಬ ತತ್ವವನ್ನು ಬಂಡವಾಳವಾದ ಒಪ್ಪುವುದಿಲ್ಲ.
ಉದ್ಯಮ , ಉದ್ಯಮಿಗಳು ಹಾಗೂ ಆರ್ಥಿಕ ಚಟುವಟಿಕೆ ನಡೆಸುವವರ ಅಗತ್ಯಕ್ಕೆ ತಕ್ಕಂತೆ ಮಾನವ ಸಂಪನ್ಮೂಲ ತರಬೇತಿ ಹೊಂದಿರದಿದ್ದರೆ , ಅಂಥವರಿಗೆ ಉದ್ಯೋಗ ನೀಡುವುದು ಸಾಧ್ಯವಾಗದು ಎಂಬುದು ಬಂಡವಾಳವಾದಿ ಚಿಂತನೆ. ಹೂಡಿಕೆದಾರರ ಉದ್ದೇಶ ಲಾಭ ಗಳಿಕೆ ಮತ್ತು ಲಾಭದಲ್ಲಿ ಸಾಧ್ಯವಾದಷ್ಟೂ ಹೆಚ್ಚಳ ಮಾಡುವುದು. ಅದಕ್ಕಾಗಿ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳು ಆದಷ್ಟು ಕಡಿಮೆ ವೆಚ್ಚದಲ್ಲಿ ಲಭ್ಯವಾಗಬೇಕೆಂದು ಅವರು ಬಯಸುತ್ತಾರೆ.
ಉದಾಹರಣೆಗಾಗಿ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷಿ, ಉದ್ದಿಮೆ ಇತ್ಯಾದಿಗಳಿಗೆ ಕಾರ್ಮಿಕರು ಕಡಿಮೆ ಸಂಬಳದಲ್ಲಿ ದುಡಿಯಲು ಬೇರೆ ರಾಜ್ಯಗಳಿಂದ ಬರುತ್ತಿರುವಾಗ ಹೆಚ್ಚಿನ ಸಂಬಳ ಕೇಳುವ ಸ್ಥಳೀಯರಿಗೆ ಉದ್ಯೋಗ ಸಿಗಲಾರದು. ಆಗ ಸ್ಥಳೀಯರು ನಿರುದ್ಯೋಗಿಗಳಾಗಬೇಕಾಗುವ ಪರಿಸ್ಥಿತಿ ಎದುರಾಗುವುದು ಬಂಡವಾಳ ವ್ಯವಸ್ಥೆಯ ಪರಿಣಾಮ.

Image result for photos of unemployment youths strike


ಸ್ಥಳೀಯವಾಗಿ ಸಾಕಷ್ಟು ಸಂಪನ್ಮೂಲಗಳು ಲಭ್ಯವಿದ್ದರೂ ಅವುಗಳನ್ನು ಗುರ್ತಿಸುವ, ಬಳಸುವ ಯೋಜನೆ, ಯೋಚನೆಗಳು ಇಲ್ಲದಾಗ ನಿರುದ್ಯೋಗ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದಕ್ಕೆ ಆಡಳಿತದ ವೈಫಲ್ಯವೇ ಕಾರಣ.
ಕೇಂದ್ರೀಕೃತ ಅರ್ಥವ್ಯವಸ್ಥೆಯಲ್ಲಿ (ಭಾರತವೂ ಸೇರಿದಂತೆ ಜಗತ್ತಿನ ಹೆಚ್ಚಿನ ರಾಷ್ಟ್ರಗಳಲ್ಲಿರುವ ಪದ್ಧತಿ) ತಳಮಟ್ಟದಿಂದ ಯೋಜನಾ ನಿರೂಪಣೆಯಾಗುವ ಬದಲಿಗೆ ರಾಜ್ಯ ಅಥವಾ ದೇಶಮಟ್ಟದಲ್ಲಿ ರೂಪಗೊಂಡ ಯೋಜನೆಗಳು ಮೇಲಿನಿಂದ ಕೆಳಕ್ಕೆ ಹೇರಲ್ಪಡುತ್ತವೆÉ. ಭೌಗೋಳಿಕ, ನೈಸರ್ಗಿಕ, ಸಾಮಾಜಿಕ, ಸಾಂಸ್ಕøತಿಕ ವೈವಿದ್ಯತೆಯನ್ನು ಹೊಂದಿರುವ ಭಾರತದಲ್ಲಿ ಇಡೀ ದೇಶಕ್ಕೆ ಏಕರೂಪದ ಯೋಜನೆಯನ್ನು ಅನ್ವಯಿಸಲು ಸಾಧ್ಯವಾಗದು.
ಸ್ಥಳೀಯರಿಗೆ ಶತಪ್ರತಿಶತ ಉದ್ಯೋಗಾವಕಾಶ ಸೃಷ್ಟಿಸಬೇಕೆಂಬ ಉದ್ದೇಶದಿಂದ ಯಾವ ಅಭಿವೃದ್ಧಿ ಯೋಜನೆಯೂ ರೂಪುಗೊಳ್ಳುತ್ತಿಲ್ಲ. ಸಂಪನ್ಮೂಲಗಳ ಬಳಕೆಯಿಂದ ಲಾಭ ಹೆಚ್ಚಿಸುವ (ಖಾಸಗಿ ಅಥವಾ ಸರ್ಕಾರಿ ರಂಗಕ್ಕೆ) ಉದ್ದೇಶದಿಂದ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಜನರಿಗೆ ಉದ್ಯೋಗ ನೀಡಬೇಕೆಂದು ರೂಪುಗೊಂಡಿರುವ ಯೋಜನೆಗಳು ದುಡಿಮೆಯ ಅವಕಾಶವೆಂದು ಪರಿಗಣಿಸಲ್ಪಡುವ ಬದಲಿಗೆ , ಸರ್ಕಾರದ ಸೌಲಭ್ಯವನ್ನು ಹಂಚುವ ಅಥವಾ ದೋಚಿಕೊಳ್ಳುವ ಅವಕಾಶವೆಂದು ಭಾವಿಸುವ ರೀತಿಯಲ್ಲಿ ರಚಿತವಾಗಿವೆ, ಅನುಷ್ಠಾನಗೊಳ್ಳುತ್ತಿವೆ.
ದುಡಿಯುವ ಸಾಮಥ್ರ್ಯವುಳ್ಳ ಪ್ರತಿಯೋರ್ವ ವ್ಯಕ್ತಿಗೂ ಫಲಪ್ರದವಾದ ದುಡಿಮೆಯ ಅವಕಾಶ (ಅಂದರೆ ದುಡಿಯುವ ವ್ಯಕ್ತಿ ಹಾಗೂ ಅವಲಂಬಿತರ ಜೀವನದ ಕನಿಷ್ಠ ಅಗತ್ಯತೆಗಳಾದ ಆಹಾರ, ಬಟ್ಟೆ, ವಸತಿ, ಶಿಕ್ಷಣ, ಔಷದೋಪಚಾರಗಳನ್ನು ಕೊಂಡುಕೊಳ್ಳುವ ಸಾಮಥ್ರ್ಯವುಳ್ಳ ಪ್ರತಿಫಲ ನೀಡುವ ದುಡಿಮೆ) ಅಂದರೆ 100% ಉದ್ಯೋಗಾವಕಾಶ ಸೃಷ್ಟಿಸಲು ಖಂಡಿತಕ್ಕೂ ಸಾಧ್ಯವಿದೆ. ಇದಕ್ಕಾಗಿ ಇಂದಿನ ಆರ್ಥಿಕ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಯಾಗಬೇಕಿದೆ.
ಪರಿವರ್ತನೆ ಪ್ರಾರಂಭವಾಗಬೇಕಾದುದು ಯೋಜನಾ ನಿರೂಪಣೆಯ ವಿಧಾನವನ್ನು ಬದಲಿಸುವ ಮೂಲಕ. ಭೂಮಿಯ ಎಲ್ಲೆಡೆ ಒಂದಿಲ್ಲೊಂದು ವಿಧದ ಸಂಪನ್ಮೂಲವನ್ನು ಪ್ರಕೃತಿ ನೀಡಿದೆ. ಅದನ್ನು ಬಳಸುವ ಬುದ್ದಿಮತ್ತೆಯನ್ನೂ ಮಾನವನಿಗೆ ಕೊಟ್ಟಿದೆ. ಸಂಪನ್ಮೂಲ ಲಭ್ಯತೆ, ಆರ್ಥಿಕ ಅವಕಾಶಗಳನ್ವಯ ಪ್ರತಿ ಬ್ಲಾಕ್‍ನಲ್ಲಿ ಅಲ್ಲಿಯ ಜನರಿಗೆ ಉದ್ಯೋಗಾವಕಾಶ ಸೃಷ್ಟಿಸುವ ರೀತಿಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ, ಈ ಯೋಜನೆಯನ್ನು ಜಿಲ್ಲಾಮಟ್ಟದಲ್ಲಿ ಕ್ರೋಢೀಕೃತಗೊಂಡು, ರಾಜ್ಯಮಟ್ಟದಲ್ಲಿ ಅಂತಿಮಗೊಳ್ಳಬೇಕು.
ಇಂದಿನ ವ್ಯವಸ್ಥೆಯಲ್ಲಿ ಯಾರು, ಯಾವ ಉದ್ಯೋಗವನ್ನು ಬೇಕಾದರೂ ಮಾಡಬಹುದಾಗಿದೆ. ಯಾವ ಕ್ಷೇತ್ರದ ಮೇಲೆ ಎಷ್ಟು ಜನ ಅವಲಂಬಿತರಾಗಿರಬೇಕೆಂಬ ಕುರಿತು ನಿರ್ದಿಷ್ಟ ಪ್ರಮಾಣವನ್ನು ನಿಗದಿಪಡಿಸಿಲ್ಲ.ಇದರಿಂದಾಗಿ ಅರ್ಥವ್ಯವಸ್ಥೆಯ ಯಾವುದೋ ಒಂದು ವಿಭಾಗದ ಮೇಲೆ ಅತಿಹೆಚ್ಚು ಜನರು ಅವಲಂಬಿತರಾಗುತ್ತಾರೆ. ಉದಾಹರಣೆಗಾಗಿ ಕೃಷಿ ಕ್ಷೇತ್ತದ ಮೇಲೆ ಕೆಲವೇ ವರ್ಷಗಳ ಹಿಂದೆ ಶೇಕಡಾ 75 ಕ್ಕೂ ಹೆಚ್ಚು ಜನರು ಅವಲಂಬಿತರಾಗಿದ್ದರು. ಸರ್ಕಾರಿ ನೌಕರಿಯ ಮೇಲೆ ಶೇಕಡಾ 6 ರಿಂದ 8 ರಷ್ಟು ಜನರು ಈಗಾಗಲೇ ಅವಲಂಬಿತರಾಗಿದ್ದು, ಈ ಪ್ರಮಾಣವನ್ನು ಹೆಚ್ಚಿಸಬೇಕೆಂಬ ಒತ್ತಡ ತರಲಾಗುತ್ತಿದೆ.
ಕೃಷಿ ಕ್ಷೇತ್ರದ ಮೇಲೆ ಅತಿಯಾದ ಅವಲಂಬನೆ ಇರುವ ದೇಶಗಳಲ್ಲಿ ಬಡತನ ಹೆಚ್ಚು ಎಂಬುದು ಎದ್ದು ಕಾಣುವ ವಾಸ್ತವ. ಉದ್ದಿಮೆ ಕ್ಷೇತ್ರದ ಮೇಲೆ ಅತಿಯಾದ ಅವಲಂಬನೆಯುಳ್ಳ ದೇಶಗಳು, ಆಹಾರ ಮತ್ತು ಕಚ್ಚಾವಸ್ತುಗಳ ಪೂರೈಕೆಗಾಗಿ ಇತರ ದೇಶಗಳನ್ನು ಅವಲಂಬಿಸಬೇಕಾಗುತ್ತದೆ. ಜಾಗತಿಕ ನಿಯಂತ್ರಣಕ್ಕಾಗಿ ಅಮೇರಿಕಾ ಸೆಣಸಾಡುತ್ತಿರುವುದು ವಿವಿಧ ದೇಶಗಳ ಸಂಪನ್ಮೂಲಗಳ ಮೇಲೆ ಹತೋಟಿ ಹೊಂದಬೇಕೆಂಬ ಕಾರಣಕ್ಕೆ ಎನ್ನುವುದು ಜಗಜ್ಜಾಹೀರಾಗಿದೆ. ಅತಿಯಾದ ಔದ್ಯಮೀಕರಣದಿಂದ ಆರ್ಥಿಕ ಹಿಂಜರಿತ, ಕುಸಿತಗಳಂತಹ ತಾಪತ್ರಯಗಳ ಜೊತೆಗೆ , ನಗರೀಕರಣದ ಸಮಸ್ಯೆಗಳು, ಸಾಂಸ್ಕøತಿಕ ಆಘಾತ, ನೈತಿಕ ಅಧಃಪತನ, ಅಮಾನವೀಯ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಲಾಭ ಹೆಚ್ಚಳದ ಗುರಿಯನ್ನೇ ಹೊಂದಿರುವ ಔದ್ಯಮಿಕ , ವ್ಯವಹಾರಿಕ ಪರಿಸ್ಥಿತಿಯ ಪರಿಣಾಮದಿಂದ ನೈಸರ್ಗಿಕ ವಿಕೋಪಗಳನ್ನೆದುರಿಸುವ ಆತಂಕ ತಪ್ಪಿಸಲಾಗುತ್ತಿಲ್ಲ.
ಇದಕ್ಕೆಲ್ಲಾ ಪರಿಹಾರವೆಂದರೆ ಸಮತೋಲಿತ ಅರ್ಥವ್ಯವಸ್ಥೆ. ಅಂದರೆ ಯಾವ ಆರ್ಥಿಕ ಕ್ಷೇತ್ರದ ಮೇಲೆ ಜನಸಂಖ್ಯೆಯ ಎಷ್ಟು ಭಾಗ ಅವಲಂಬಿತವಾಗಬೇಕೆಂಬುದರ ದಿಕ್ಸೂಚಿ ಇರಬೇಕು. ಅರ್ಥಶಾಸ್ತ್ರಜ್ಞ ಶ್ರೀ ಪ್ರಭಾತ ರಂಜನ್ ಸರ್ಕಾರರ ಅಭಿಪ್ರಾಯದಂತೆ ಕೃಷಿರಂಗದ ಮೇಲೆ 30 ರಿಂದ 40% ಜನರು ಅವಲಂಬಿತರಾಗಿರುವದು ಸೂಕ್ತ. ಕೃಷಿ ಪೂರಕ ಮತ್ತು ಕೃಷಿ ಆಧಾರಿತ ಉದ್ಯಮಗಳ ಮೇಲೆ ತಲಾ 10 ರಿಂದ 20%, ಇತರ ಉದ್ಯಮಗಳ ಮೇಲೆ 10 ರಿಂದ 20%, ವ್ಯಾಪಾರ- ವಹಿವಾಟುಗಳ ಮೇಲೆ ಸುಮಾರು 10%, ಸೇವಾ ಕ್ಷೇತ್ರದ ಮೇಲೆ ಸುಮಾರು 10% ನಷ್ಟು ಜನರು ಅವಲಂಬಿತರಾಗಿರುವ ಪರಿಸ್ಥಿತಿ ಇರುವಾಗ 100% ಉದ್ಯೋಗವಕಾಶ ಸಾಧ್ಯವಾಗುತ್ತದೆ ಹಾಗೂ ಜನರ ಆರ್ಥಿಕ ಸ್ಥಿತಿಯಲ್ಲಿ ಬಹಳಷ್ಟು ಏರುಪೇರು ಇರುವುದಿಲ್ಲವೆಂದು ಅವರು ಹೇಳುತ್ತಾರೆ.
ಯಾವ ಅನುಪಾತವೂ ಇಲ್ಲದ ಇಂದಿನ ವ್ಯವಸ್ಥೆಗೆ ಹೋಲಿಸಿದರೆ, ಸೂಚಿತ ಸಮತೋಲಿತ ವ್ಯವಸ್ಥೆಯು ನಿಯಂತ್ರಿತ ವ್ಯವಸ್ಥೆಯಂತೆ ತೋರಬಹುದು. ಆದರೆ ಉದ್ಯೋಗ ಸೃಷ್ಟಿಯ ಹೊಣೆಗಾರಿಕೆ ಸರ್ಕಾರದ್ದು ಎಂದು ಒಪ್ಪಿಕೊಂಡಾಗ ಕೆಲಮಟ್ಟಿನ ನಿಯಂತ್ರಣ ಅಗತ್ಯ. ಇದರಿಂದಾಗಿ ಪ್ರತಿ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ಉದ್ಭವಿಸಬಹುದಾದ ದುಡಿಮೆಯ ಅವಕಾಶಗಳ ಸ್ಪಷ್ಟತೆ ಆಡಳಿತಕ್ಕೆ ಸಿಗುತ್ತದೆ. ಅದಕ್ಕೆ ಅನುಗುಣವಾಗಿ ಕೌಶಲ್ಯ ಶಿಕ್ಷಣದ ವ್ಯವಸ್ಥೆಯನ್ನು ಮಾಡಲು ಸಾಧ್ಯವಾಗುತ್ತದೆ. ಯುವಕರಿಗೆ ಕೌಶಲ್ಯ ಶಿಕ್ಷಣವನ್ನು ನೀಡಲು ಇಂದು ಕೂಡಾ ಸರ್ಕಾರಗಳು ಸಾಕಷ್ಟು ಹಣ ವಿನಿಯೋಗಿಸುತ್ತವೆ. ಆದರೆ ಉದ್ಯೋಗ ಹುಡುಕಿಕೊಳ್ಳುವುದು ಶಿಕ್ಷಣ ಪಡೆದವರ ಹೊಣೆಗಾರಿಕೆಯಾಗಿರುವುದರಿಂದ, ಯಾವ ವೃತ್ತಿಗೆ ಸಂಬಂಧಿಸಿ ಕೌಶಲ್ಯ ಪಡೆಯಬೇಕೆಂದು ನಿರ್ಧರಿಸುವುದು ಕಠಿಣ.
ವಿವಿಧ ಆರ್ಥಿಕ ಕ್ಷೇತ್ರಗಳ ಮೇಲೆ ಅವಲಂಬಿತರಾಗಬೇಕಾದ ಜನಸಂಖ್ಯೆಯ ಸ್ಥೂಲ ಪ್ರಮಾಣವನ್ನು ನಿರ್ಧರಿಸಿದ ನಂತರ ಹಂತಹಂತವಾಗಿ ಅದರ ಮೇಲಿನ ಅವಲಂಬಿತರ ಸಂಖ್ಯೆಯನ್ನು ಹೆಚ್ಚು ಅಥವಾ ಕಡಿಮೆ ಮಾಡಬೇಕು. ಉದಾಹರಣೆಗಾಗಿ ಕೃಷಿ ಕ್ಷೇತ್ರದ ಮೇಲೆ ಅತಿಯಾದ ಅವಲಂಬನೆ ಇರುವಾಗ, ಅಲ್ಲಿಯವರನ್ನು ಇತರ ಕ್ಷೇತ್ರಗಳಾದ ಕೃಷಿ ಆಧಾರಿತ ಅಥವಾ ಕೃಷಿ ಪೂರಕÀ ಉದ್ಯಮಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡುವ, ಅವರಿಗೆ ಉದ್ಯೋಗದ ನಿಶ್ಚಿತತೆ ಕಲ್ಪಿಸುವ ಮುಖೇನ ಆಕರ್ಷಿಸಬೇಕು. ಇದು ಭಾಷಣ ಅಥವಾ ಕೂಗಾಟ, ಹೋರಾಟಗಳಿಂದ ಸಾಧ್ಯವಾಗದು. ಆದರೆ ಸೂಕ್ತ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವುದರಿಂದ ಇದು ಕಾರ್ಯ ಸಾಧ್ಯ.
ಪ್ರತಿಯೋರ್ವ ವ್ಯಕ್ತಿಗೂ ಕೃಷಿ ಭೂಮಿ ಸಿಗಬೇಕು ಎಂಬ ಕಮ್ಯುನಿಸ್ಟರ ಹೋರಾಟಕ್ಕೆ ಆರ್ಥಿಕ ಚಿಂತನೆಯ ಬೆಂಬಲವಿಲ್ಲ. ಯಾಕೆಂದರೆ ವೈಯಕ್ತಿಕವಾಗಿ ಕೈಗೊಳ್ಳುವ ಕೃಷಿಗೆ ಆರ್ಥಿಕವಾಗಿ ಲಾಭದಾಯಕವಾಗಬಲ್ಲ ಪ್ರಮಾಣದ ಹಿಡುವಳಿ ಇರಲೇಬೇಕು. (ಭೂಮಿಯ ಫಲವತ್ತತೆ ನೀರಾವರಿ ಸೌಲಭ್ಯ ಇತ್ಯಾದಿ ಹಲವು ಅಂಶಗಳನ್ನು ಆಧರಿಸಿ ಕ್ಷೇತ್ರದ ಪ್ರಮಾಣವನ್ನು ನಿರ್ಧರಿಸಬೇಕಾಗುತ್ತದೆ) ಜನರಿಗೆ ಆಸೆ ಹುಟ್ಟಿಸಿ ರಾಜಕೀಯ ಲಾಭ ಗಳಿಸುವ, ದಾಳವಾಗಿಯಷ್ಟೇ ಬಳಸುವ ಘೋಷಣೆಯಿದು.
100% ಉದ್ಯೋಗವಕಾಶ ಸೃಷ್ಟಿಸುವುದು ಬಂಡವಾಳವಾದಿ ವ್ಯವಸ್ಥೆಯಲ್ಲಿ ಸಾಧ್ಯವಾಗದು. ಉದ್ದಿಮೆ ಘಟಕದ ವ್ಯವಹಾರದಲ್ಲಿ ಕಡಿತವಾದಾಗ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗುತ್ತದೆ. ಯಾಕೆಂದರೆ ಆ ಘಟಕ ತನ್ನ ಲಾಭದ ಪ್ರಮಾಣವನ್ನು ಕಡಿತಗೊಳಿಸಲು ಅಥವಾ ನಷ್ಟವನ್ನು ಅನುಭವಿಸಲು ಸಿದ್ಧವಿರುವುದಿಲ್ಲ. ಯಾಂತ್ರೀಕರಣ ಅನುಷ್ಠಾನವಾದಾಗ ಕೂಡಾ ಇದೇ ರೀತಿಯ ಸಮಸ್ಯೆ ಎದುರಾಗುತ್ತದೆ. ಸಹಕಾರಿ ಅರ್ಥವ್ಯವಸ್ಥೆಯೇ ಇದಕ್ಕೆ ಪರಿಹಾರ.
ಯಾವುದೇ ಆರ್ಥಿಕ ಚಟುವಟಿಕೆಯನ್ನು ಸರ್ಕಾರಿ, ಖಾಸಗಿ ಅಥವಾ ಸಹಕಾರಿ ರಂಗದಲ್ಲಿ ಕೈಗೊಳ್ಳುವ ಅವಕಾಶ ಪ್ರಸಕ್ತÀದಲ್ಲಿದೆ. ಇದರಿಂದಾಗಿ ಸರ್ಕಾರಿ ಉದ್ಯಮಗಳು ನಷ್ಟವನ್ನನುಭವಿಸುವುದು, ಖಾಸಗಿ ಮತ್ತು ಸಹಕಾರಿ ರಂಗದ ನಡುವಿನ ಅನಾರೋಗ್ಯಕರ ಪೈಪೋಟಿಯನ್ನು ಕಾಣುತ್ತೇವೆ. ಇದನ್ನು ಸರಿಪಡಿಸುವ ವಿಧಾನವೆಂದರೆ ಈ ಮೂರೂ ರಂಗಗಳು ಕೈಗೊಳ್ಳಬಹುದಾದ ಆರ್ಥಿಕ ಚಟುವಟಿಕೆಗಳನ್ನು ನಿರ್ದಿಷ್ಟಪಡಿಸುವುದು.
ಇಡೀ ಅರ್ಥವ್ಯವಸ್ಥೆಗೆ ಆಧಾರ ಪ್ರಾಯವಾಗಿರುವ ಉದ್ದಿಮೆಗಳನ್ನು ಸರ್ಕಾರಿರಂಗಕ್ಕೆ, ಚಿಕ್ಕಪುಟ್ಟ ಉದ್ಯಮಗಳನ್ನು, ಸಹಕಾರಿ ರಂಗ ಕಾರ್ಯನಿರ್ವಹಿಸಲು ಸಾಧ್ಯವಾಗದಷ್ಟು ಸಣ್ಣ ವ್ಯವಹಾರಗಳನ್ನು ಖಾಸಗಿ ರಂಗಕ್ಕೆ ಸೀಮಿತಗೊಳಿಸಬೇಕು. ಉಳಿದಂತೆ ಎಲ್ಲಾ ವಿಧದ ಉತ್ಪಾದನೆ, ವಿತರಣೆಗಳು ಸಹಕಾರಿ ರಂಗಕ್ಕೇ ಸೀಮಿತವಾಗಿರಬೇಕು. ಇದರರ್ಥ ಸ್ಪರ್ಧೆಯೇ ಇರಬಾರದು ಎಂಬುದಲ್ಲ. ಸಮಾನ ನೆಲೆಯಲ್ಲಿ ಇರುವವರ ನಡುವೆ ಅಂದರೆ ಖಾಸಗಿ ರಂಗದ ಸ್ಪರ್ಧೆ ಖಾಸಗಿಗಳ ನಡುವೆ, ಸಹಕಾರಿಯ ಸ್ಪರ್ಧೆ ಸಹಕಾರಿಯೊಡನೆ ಇರುವಂತಾಗಬೇಕು.
ಸಹಕಾರಿ ಸಂಸ್ಥೆಗಳು ಲಾಭಗಳ ಹೆಚ್ಚಳ ಮಾಡುವ ಘಟಕಗಳಾಗದೇ, ತಮ್ಮ ಸದಸ್ಯರ ಕಷ್ಟ -ಸುಖಗಳನ್ನು ಮಾನವೀಯ ನೆಲೆಯಲ್ಲಿ ಹಂಚಿಕೊಳ್ಳುವ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುವ ಅವಕಾಶ ಹೊಂದಿವೆ. ಸಹಕಾರಿ ಅರ್ಥವ್ಯವಸ್ಥೆಯಲ್ಲಿ ಉದ್ಯೋಗ ನಷ್ಟದ ಬದಲು ಕೆಲಸದ ಅವಧಿಯನ್ನೇ ಕಡಿತಗೊಳಿಸಿ, ಸಂಕಷ್ಟದ ಸಮಯವನ್ನು ಎದುರಿಸಬಹುದಾಗಿದೆ.
ನಿರುದ್ಯೋಗದ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಮುಂದಾಗಿರುವುದು ರಾಜಕೀಯ ಹೋರಾಟ ಮಾತ್ರ. ಇಷ್ಟು ವರ್ಷ ಆಡಳಿತ ನಡೆಸಿದ ರಾಜಕೀಯ ಪಕ್ಷಗಳಿಗೆ ಕಣ್ಣಿಗೆ ಕಾಣದ ನಿರುದ್ಯೋಗ ಸಮಸ್ಯೆ ಅಧಿಕಾರ ಕಳೆದುಕೊಂಡ ತಕ್ಷಣ ಕಣ್ಣಿಗೆ ಕಾಣತೊಡಗಿದೆ.
ಬಿಜೆಪಿ ಮತ್ತು ಕಾಂಗ್ರೆಸ್‍ನ ಆರ್ಥಿಕ ಚಿಂತನೆಗಳ ನಡುವೆ ಯಾವುದೇ ಪ್ರಮುಖ ವ್ಯತ್ಯಾಸವಿಲ್ಲ. ಎಲ್ಲಾ ಪಕ್ಷಗಳ ಆರ್ಥಿಕ ಚಿಂತನೆಗಳೂ ಬಂಡವಾಳವಾದದ ಚೌಕಟ್ಟಿಗೇ ಸೀಮಿತವಾಗಿವೆ. ಎಲ್ಲಿಯವರೆಗೆ ವಿಕೇಂದ್ರೀಕೃತ ಆರ್ಥಿಕ ನೀತಿಯನ್ನು ಅನುಷ್ಠಾನಗೊಳಿಸುವುದಿಲ್ಲವೋ ಅಂದರೆ ಜನಾಧಿಕಾರದ ಸಹಕಾರಿ ಅರ್ಥವ್ಯವಸ್ಥೆ ಜಾರಿಗೆ ಬರುವುದಿಲ್ಲವೋ, ಅಲ್ಲಿಯವರೆಗೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಕಾಂಗ್ರೆಸ್, ಕಾಂಗ್ರೆಸ್ ಇರುವಲ್ಲಿ ಬಿಜೆಪಿ ಅಥವಾ ಇನ್ಯಾವುದೋ ಪಕ್ಷದ ರಾಜಕೀಯ ಡೊಂಬರಾಟದಿಂದ ನಿರುದ್ಯೋಗಿಗಳ ಕಣ್ಣಿಗೆ ಮಣ್ಣೆರಚುತ್ತಲೇ ಇರುತ್ತಾರೆ.

Leave a Reply

Back To Top