ತರಹಿ ಗಜಲ್-ಅನಸೂಯ ಜಹಗೀರದಾರ

ಕಾವ್ಯ ಸಂಗಾತಿ

ತರಹಿ ಗಜಲ್

ಅನಸೂಯ ಜಹಗೀರದಾರ

(ವತ್ಸಲ ಶ್ರೀಶ :- ಹಣೆಯ ಮೇಲೆ….)

ಹಣೆಯ ಮೇಲೆ ಒಲವ ಸಹಿ ಹಾಕಲಿಲ್ಲ
ನೀನು ಬಹಳ ದಿನಗಳಾದವು
ಕಣ್ಣಕನ್ನಡಿಯಲಿ ಬಿಂಬವ ನೋಡಲಿಲ್ಲ
ನೀನು ಬಹಳ ದಿನಗಳಾದವು

ಹರಡಿದ ಕೇಶ ಕಪ್ಪುಮೋಡದಲಿ
ಮಿಂಚುವ ಮಿಂಚು ಬೈತೆಲೆ ಅನ್ನುತ್ತಿದ್ದೆ
ಅಮೃತ ಎರೆವ ಮಳೆಯಲಿ ನೆನೆಯಲಿಲ್ಲ
ನೀನು ಬಹಳ ದಿನಗಳಾದವು

ಬಯಲ ಭಾಮಿನಿ ಜಗದ ಮಣೆಯಲಿ
ಕುಳಿತಿಹಳು ಹೀಗೆಂದು ಹೇಳುತ್ತಿದ್ದೆ
ಉಷೆ ಮೂಡಿ ಕೆನ್ನೆ ಕೆನ್ನನವಾಯಿತು
ಸವರಲಿಲ್ಲ ನೀನು ಬಹಳ ದಿನಗಳಾದವು

ಹನಿದ ಮಳೆಗೆ ಮೃತ್ತಿಕೆಯ ಘಮಲು
ಹೀರಿದಷ್ಟೂ ಬೇಕೆಂಬ ಅಮಲು
ಒಲವ ಕುಂಭವ ಹಿಡಿದಿದ್ದೆ ಬೇಕೆನ್ನಲಿಲ್ಲ
ನೀನು ಬಹಳ ದಿನಗಳಾದವು

ಬಿಸಿಲು ತಂಪಾಗಿ ಬೆಂಕಿ ಬೆಳಕಾಗಿ
ನಿನ್ನ ಬರುವ ಸುದ್ದಿಗೆ ಈ ಮನವು
ಹೊಂಗೆ ನೆರಳ ತಂಪಿನಲಿ ತಂಗಲಿಲ್ಲ
ನೀನು ಬಹಳ ದಿನಗಳಾದವು

ಅನು ನೋಡಿದಂತೆಯೇ ದೂರಕೆ ಸರಿವ
ನಿನ್ನಿರುವ ತಲುಪಲೆಂತು ದೊರೆಯೆ
ಮುತ್ತಿನ ಸರವ ಹಿಡಿದಿದ್ದೆ ಸನಿಹ
ಬರಲಿಲ್ಲ ನೀನು ಬಹಳ ದಿನಗಳಾದವು


ಅನಸೂಯ ಜಹಗೀರದಾರ

Leave a Reply

Back To Top