ಲಕ್ಷ್ಮಣನ ಕೋರಿಕೆ-ಬೆಂಶ್ರೀ ರವೀಂದ್ರ ಕವಿತೆ

ಕಾವ್ಯ ಸಂಗಾತಿ

ಲಕ್ಷ್ಮಣನ ಕೋರಿಕೆ

ಬೆಂಶ್ರೀ ರವೀಂದ್ರ

ಮತ್ತೆ …..
ಸೀತೆಯ ಕಳುಹದಿರು ರಾಮ ಕಾಡಿಗೆ
ಅಂದು ನೀ ಬೇಡವೆಂದರೂ ಬಂದಳು
ಸತಿಧರ್ಮವೆಂದು ನಿನ್ನೊಟ್ಟಿಗೆ
ನಿನಗಾದರೂ ತಿಳಿಯದೆ ಹೋಯಿತೇ
ರಾವಣನ ತಂತ್ರ ; ಸೂಕ್ಷ್ಮಗ್ರಾಹಿಯು ನೀನು.

ಸುಗ್ರೀವ ವಿಭೀಷಣರು ಕೈ ಜೋಡಿಸಿದರು
ಸತ್ತರು ವಾಲಿ ರಾವಣರು
ರಕ್ತಾಂಭುದಿಯಲಿ ಲಂಕಾದ್ವೀಪ ಮುಳುಗಿ
ಅಲ್ಲೀಗ ವಿಭೀಷಣನ ಅಧಿಪತ್ಯ

ಮರಳಿ ಬಂದಿಹೆ ಮನೆಗೆ ಶ್ರೀ ರಾಮಚಂದ್ರ
ಅವಧದ ಅಯೋಧ್ಯೆಗೆ, ನಿನ್ನ ತಾಯ್ನೆಲಕೆ
ಗಂಗಾ ಜಮುನೆಯರ ಉಡಿಯಲ್ಲಿ ಮರಳಿ
ಎದ್ದಿದೆ ಅರಮನೆಯು ಬಾಲರಾಮ ನಿನಗಾಗಿ

ಅಪ್ಪನಿತ್ತ ಮಾತಿಗೆ ಕಟ್ಟುಬಿದ್ದವ ನೀನು
ಅಧಿಕಾರದ ಸೆಳೆತಕ್ಕೆ ಬಾಗದವ
ಬಾಗದಿರು ಅವರಿವರ ಹುಡಿನುಡಿಗೆ,
ಸತ್ಯವೆಂಬ ನಿಕಷಕ್ಕೆ ವರೆಹಚ್ಚು
ವದಂತಿಯ ಕಾಳ್ಗಿಚ್ಚನು

ಅಗ್ನಿಯಲಿ ಮಿಂದೆದ್ದು ಬಂದವಳು ಸೀತೆ
ಕಳುಹದಿರು ಮತ್ತೆ ಕಾಡಿಗೆ
ದೆವ್ವ ರಾಕ್ಷಸರ ಬೀಡಿಗೆ ಮಾಯೆಯ ಜಾಲಕ್ಕೆ

ತುಂಬು ಗರ್ಭಿಣಿಯಿವಳು ಸೀತೆ
ನಿನ್ನ ವರದಲಿ ಉಡಿಯ ತುಂಬಿಕೊಂಡವಳು
ಹುಲ್ಲೆಗೆ ಸೋತರೂ ಹುಲ್ಲು ಎಸಳನು ಎಸೆದು
ರಾವಣನ ಸೊಲ್ಲಡಗಿಸಿದವಳು

ಸುಮಿತ್ರೆಯ ಬಿಂಬ ಸೀತಾದೇವಿ ಎನಗೆ
ತಮ್ಮನಾದರೂ ಹೇಳುವೆನೊಂದು ಮಾತು
ಎಂತಾದರೂ ಒಪ್ಪುವುದು ನಿನ್ನ ಮನವು
ಕೂಡಲು ಯಜ್ಞಕ್ಕೆ ಅವಳ ಬಿಂಬದೊಡನೆ

ರಾಮಣ್ಣ
ಈಗಲೂ ಪ್ರಾರ್ಥಿಸುವೆ ನಿನ್ನ
ಕಾಡಿಗೆ ಸೀತೆಯ ಕಳುಹಬೇಕೆಂದರೆ
ತೊರೆದುಬಿಡು ಅಧಿಕಾರವನು ಭರತನಿಗೆ
ನಡೆ ಸೀತೆಯೊಡನೆ ಮರಳಿ ಕಾಡಿಗೆ
ನಾನಂತೂ ಇರುವೆ ಅಂದಿನಂತೆ ಜೊತೆ


One thought on “ಲಕ್ಷ್ಮಣನ ಕೋರಿಕೆ-ಬೆಂಶ್ರೀ ರವೀಂದ್ರ ಕವಿತೆ

Leave a Reply

Back To Top