ಲಲಿತ ಪ್ರಬಂಧ
ಹ್ಞೂಂಕಾರ
ಕಾಂತರಾಜುಕನಕಪುರ
ಲಲಿತ ಪ್ರಬಂಧ
“ಕೇಳು ಜನಮೇಜಯ ಮಹೀಪತಿ” ಎಂದು ನನ್ನ ಶಾಲಾ ದಿನಗಳಲ್ಲಿ ಕನ್ನಡದ ಮಾಸ್ತರುಗಳು ಕುಮಾರವ್ಯಾಸ ವಿರಚಿತ ಕರ್ಣಾಟಕ ಭಾರತ ಕಥಾಮಂಜರಿಯ ಪದ್ಯಭಾಗಗಳನ್ನು ರಾಗವಾಗಿ ಪಠಿಸಿ ಅರ್ಥ ವಿವರಿಸುವಾಗ ಈ ಅಂಶ ನನಗೆ ಗೋಚರವಾಗಿರಲಿಲ್ಲ. ಆಗ ಕಾವ್ಯದಲ್ಲಿ ಹುದುಗಿರುವ ಆಂತರ್ಯದ ವಿವಿಧ ಅಂಶಗಳನ್ನು ಗುರುತಿಸುಷ್ಟು ಬುದ್ಧಿಯೂ ಇರಲಿಲ್ಲ ಅನ್ನಿ, ಹಾಗಂತ ಇವಾಗ ಅಷ್ಟು ಬುದ್ಧಿ ಇದೆ ಅಂತ ಅರ್ಥ ಅಲ್ಲ ಎಂಬುದನ್ನು ಮೊದಲಿಗೇ ಸ್ಪಷ್ಟಪಡಿಸಿಬಿಡುತ್ತೇನೆ. ಏನೋ ದಕ್ಕಿದಷ್ಟು ಅರ್ಥ ಮಾಡಿಕೊಂಡು ಮುಂದೆ ಹೋಗುವ (ಪಲಾಯನ) ಬುದ್ಧಿ ಅಂತು ಇದೆ. ಇತ್ತೀಚೆಗೆ ನನ್ನ ಆತ್ಮೀಯರಾದ ಹಿರಿಯರೊಬ್ಬರು ಅವರ ತೀರ್ಥರೂಪರು ಅರವತ್ತರ ದಶಕದಲ್ಲಿ ಖರೀದಿಸಿದ್ದ ಗದುಗಿನ ಭಾರತದ ಪ್ರತಿಯನ್ನು ನನಗೆ ನೆನಪಿನ ಕಾಣಿಕೆಯಾಗಿ ನೀಡಿದರು. ಈ ಬೇಸಿಗೆಯ ರಜೆಯಲ್ಲಿ ಅದನ್ನು ಪಠಿಸುತ್ತಿದ್ದ ಸಂದರ್ಭ ಈ ಹೊಸ ಸಂಗತಿ ಕುರಿತಾದ ವಿಭಿನ್ನ ಅಂಶ ಮತ್ತು ಅದರ ಇತ್ಯೋಪರಿಗಳನ್ನು ಕುರಿತು ಹೀಗೇ ಆಲೋಚಿಸಿದವನಿಗೆ ಅದರ ವಿರಾಟ್ ರೂಪದ ದರ್ಶನವೇ ಆಯಿತು. ನನ್ನ ಸೀಮಿತ ಅರಿವಿಗೆ ಗೋಚರಿಸಿದ ಸಂಗತಿಗಳನ್ನು ಹೀಗೆ ಕುತೂಹಲಕ್ಕಾಗಿ ನಿಮ್ಮ ಮುಂದಿಡುತ್ತಿದ್ದೇನೆ.
ಪ್ರಾಯಶಃ ಕುಮಾರವ್ಯಾಸ ಭಾರತದ ಅರಿವಿದ್ದವರಿಗೆ, ಗಮಕಿಗಳಿಗೆ, ಓದಿದವರಿಗೆ, ಕೇಳಿದ್ದವರಿಗೆ ಕತೆಯ ಉದ್ದಕ್ಕೂ ಕೇಳು ಜನಮೇಜಯ, ಅರಸ ಕೇಳೈ, ರಾಜ ಕೇಳು, ಕೇಳು ಧರಣೀಪಾಲ, ನೃಪತಿ ಕೇಳು ಕೇಳು, ಮಹೀಪತಿ, ರಾಯ ಚಿತ್ತೈಸು ಎಂಬಿತ್ಯಾದಿ ಬಗೆ ಬಗೆಯಾಗಿ ಮತ್ತು ಪರಿಪರಿಯಾಗಿ ವೈಶಂಪಾಯನರು ಜನಮೇಜಯನಿಗೆ ಹೇಳಿರುವುದು ತಿಳಿದೇ ಇರುತ್ತದೆ. ಈ ರೀತಿ ತಿವಿದು ತಿವಿದು ಮಹಾಭಾರತದ ಕತೆಯನ್ನು -ಅದೂ ಅವನ ಪೂರ್ವಜರದ್ದೇ ಕತೆ- ಅವನಿಗೆ ಕೇಳಿಸಿರುವುದು ಯಾಕೆ? ಯಾಕೆಂದರೆ, ಕಥಾಶ್ರವಣ ಮಾಡುತ್ತಿದ್ದ ಜನಮೇಜಯನ ಹ್ಞೂಂಕಾರವು ನಿಂತಾಗಲೇ ಎಂಬ ಅನುಮಾನ ನನಗೆ. ಪಾಪ ವೈಶಂಪಾಯನರು ತಿವಿದು ಹೇಳದಿರಲಾದೀತೇ? ಅಷ್ಟು ಕಷ್ಟಪಟ್ಟು -ಇಷ್ಟಪಟ್ಟು ಅಂತಾನೇ ಇಟ್ಟುಕೊಳ್ಳಿ- ವ್ಯಾಕರಣ ಪ್ರಣೀತ, ಛಂದೋಬದ್ಧವಾಗಿ ಮತ್ತು ಅಲಂಕಾರ ಸಹಿತವಾಗಿ ಕತೆಯನ್ನು ಹೆಣೆದು ಅವರು ಹೇಳುತಲಿದ್ದರೆ ರಾಜನಾದ ಮಾತ್ರಕ್ಕೆ ಇವನು ಸುಮ್ಮನೆ ಕುಳಿತರಾದೀತೇ? ವೈಶಂಪಾಯನರು ಮುನಿಗಳಾದರೇನು ಅವರು ಮುನಿಯಬಾರದೆಂದೇನೂ ನಿಯಮವಿಲ್ಲವಲ್ಲ? ಕನಿಷ್ಠ ಹ್ಞೂಂಗುಡಲು ಏನಾಗಿತ್ತು ಈ ಜನಮೇಜಯನಿಗೆ? ಅವನ ಹ್ಞೂಂಗುಡುವಿಕೆ ನಿಂತುಹೋದರೆ ಕತೆ ಅರುಹುತ್ತಿದ್ದ ವೈಶಂಪಾಯನರಿಗೆ ಉತ್ತೇಜನವಾದರೂ ಎಲ್ಲಿಂದ ಬಂದೀತು? ಅವರು ತಿವಿದು ತಿಳಿಹೇಳಿದ ಪರಿಣಾಮ ಕೊನೆಗೆ, (ಸಧ್ಯ) ಕೇಳಿದನು ಜನಮೇಜಯ ಕ್ಷಿತಿ ಪಾಲಕನು ಎನ್ನುವಲ್ಲಿಗೆ ಕಾವ್ಯ ಮುಂದುವರಿಯಿತು.
ಹೌದು, ಮಾನವನ ಇತಿಹಾಸದಲ್ಲಿ ಓಂಕಾರದಷ್ಟೇ ಪ್ರಾಶಸ್ತ್ಯ ಹ್ಞೂಂಕಾರಕ್ಕೂ ಇದೆ. ಮಾತು ಕಲಿಯುವ ಮುನ್ನ ಮಾನವನು ಸಂಜ್ಞೆ ಭಾಷೆಯನ್ನು ಅವಲಂಬಿಸಿದ್ದ, ನಂತರ ಮನುಷ್ಯ ಎಲ್ಲಾ ಶಬ್ದಗಳಿಗಿಂತ ಮುಂಚೆ ಹ್ಞೂಂಗುಡುವುದನ್ನ ಕಲಿತ ಎಂದರೆ ಅಚ್ಚರಿಯೇನಲ್ಲ. ಹೇಗೆನ್ನುವಿರಾ? ನಿಮ್ಮ ಬಾಯಿಗೆ ಪ್ಲಾಸ್ಟರ್ ಹಾಕಿಯೋ ಅಥವಾ ಬಿಗಿಯಾಗಿ ಬಟ್ಟೆ ಕಟ್ಟಿಯೋ -ಪ್ರಾಣಕ್ಕೆ ಅಪಾಯವಾಗದ ಹಾಗೆ!- ನೀವು ನಿಮಗೆ ತಿಳಿದಿರುವ ಭಾಷೆಗಳನ್ನೆಲ್ಲಾ ಮಾತನಾಡಲು ಪ್ರಯತ್ನಿಸಿ ನೋಡಿ, ನೀವು ಯಾವ ಭಾಷೆ ಮಾತನಾಡಲು ಯತ್ನಿಸಿದರೂ ಹೊರಡುವುದು ಹ್ಞೂಂಕಾರವೇ ಹೊರತು ಬೇರೇನೂ ಅಲ್ಲ. ಅನುಮಾನವಿದ್ದರೆ ಒಮ್ಮೆ ಪ್ರಯತ್ನಿಸಿ ನೋಡಿ. ಹೂಂಕಾರವೇ ಮಾನವನ ಮೊದಲ ಭಾಷೆ ಎಂಬುದಕ್ಕೆ ಚಳಿಗಾಲದಲ್ಲಿ ನಾವೆಲ್ಲರೂ ಚಳಿಗೆ “ಹುಹುಹು” -ಹ್ಞೂಂಕಾರದ ಅದಿಮ ರೂಪ ಎಂದೇ ನನ್ನ ಅನಿಸಿಕೆ- ಎಂದು ನಡುಗುವುದಕ್ಕಿಂತ ಹೆಚ್ಚಿನ ಸಾಕ್ಷ್ಯ ಬೇಕಿದೆಯೇ?
ಈ ಹ್ಞೂಂಕಾರದ ಬಗ್ಗೆ ಮಾತನಾಡಲು ಶುರು ಮಾಡಿದ ಮೇಲೆ ಬಾಲ್ಯದಲ್ಲಿ ನಮಗೆ -ಅಂದರೆ ನನ್ನ ಬಾಲ್ಯ ಸ್ನೇಹಿತರಿಗೂ ಸೇರಿ- ಎದುರಾದ ಒಂದು ಪೇಚಿನ ಸಂಗತಿಯನ್ನು ಇಲ್ಲಿ ಹೇಳಲೇ ಬೇಕು. ನಮ್ಮೂರಿನಲ್ಲಿ ಕಕ್ರಯ್ಯ ಎಂಬ ಐನಾತಿ ವೃದ್ಧ, ಮಕ್ಕಳನ್ನು ತನ್ನ ಕಂಚಿನ ಕಂಠದಿಂದ ಅಂದರೆ ಹ್ಞೂಂಕರಿಸಿಯೇ ಬೆದರಿಸುತ್ತಿದ್ದ. ಬೇಸಿಗೆ ರಜಾಕಾಲದ ಒಂದು ದಿನ ನಾನು ಮತ್ತು ನನ್ನ ಓರಗೆಯ ಎಲ್ಲಾ ಹುಡುಗರು ನಮ್ಮ ಪೂರ್ವಾಶ್ರಮವಾದ ಗೋಪಾಲನೆಯಲ್ಲಿ ತೊಡಗಿದ್ದ ಸಂದರ್ಭ. ಮಟಮಟ ಮಧ್ಯಾಹ್ನದ ಹೊತ್ತು ಅರ್ಕಾವತಿ ನದಿ ದಡದಲ್ಲಿ ದನಗಳನ್ನು ಮೇಯಲು ಬಿಟ್ಟು ನಾವು ಅಲ್ಲೇ ಸೊಂಪಾಗಿ ಬೆಳೆದಿದ್ದ ಹೊಂಗೆಯ ಮರದಲ್ಲಿ ʼಮರಕೋತಿʼ ಆಟ ಆಡಿ ಸುಸ್ತಾಗಿ ಅದರ ನೆರಳಿನಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದೆವು. ಅಲ್ಲಿಗೆ ಮೋಟು ಬೀಡಿಯೊಂದನ್ನು ಸೇದುತ್ತಾ ಆಗಮಿಸಿದ ಕಕ್ರಯ್ಯನನ್ನು ನೋಡಿ ಇನ್ನೇನು ನಾವು ಜಾಗ ಖಾಲಿ ಮಾಡಬೇಕು ಅಷ್ಟರಲ್ಲಿ ಅವನೇ “ಲೇ ಉಡುಗ್ರಾ ಎಲ್ಗೋದಿರ‍್ಲಾ? ನನ್ನ ನೋಡ್ದ ಚಣವೇ ಯಾಕ್ರುಲಾ ಎದ್ದೋಡಿರಿ? ಬರ‍್ರುಲಾ ಇಲ್ಲೇ ಕೂತ್ಕೊಳಿ, ಅಂಗೆ ನಾನೊಂದು ಕತೆಯಾ ಯೋಳ್ತೀನಿ ಕೇಳ್ರುಲಾ” ಅಂತ ಜಬ್ಬರಿಸಿದ. ಅವನ ಕಂಠನಾದಕ್ಕೆ ಬೆದರಿ ನಾವು ಅಲ್ಲೇ ಕುಳಿತೆವು. ಸರಿ ಕತೆ ಏನು ಅಂತ ಕೇಳಿದ್ದಕ್ಕೆ ಕಕ್ರಯ್ಯ ಕತೆ ಹೇಳತೊಡಗಿದ “ಅದು ಬರೀ ಕತೆ ಅಲ್ಲ ಕನ್ರುಲಾ ದಿಟವಾಗ್ಲೂ ನಡ್ದುದ್ದು” ಎಂದಾಗ ನಮ್ಮ ಕುತೂಹಲ ಇನ್ನೂ ಹೆಚ್ಚಾಯಿತು “ಅದು ಯೋನಪ್ಪಾ ಅಂದ್ರೆ ಒಂಜಿನ ನಾನು ಒತ್ತಾರೆನೇ ಎದ್ದು ಒಳೆಕಡಿಕೆ ಒಂಟಿದ್ದೆ” ಅಂದವನು ಕತೆಯನ್ನು ನಿಲ್ಲಿಸಿ, “ಅಲ್ಲಾ ಕನ್ರುಲಾ ಸುಮ್ಕೆ ಕುಂತ್ರೆ ಯಂಗೆ? ʼಊ್ಞಂʼ… ಅನ್ರುಲಾ ನೀವು ʼಊ್ಞಂʼ… ಅನ್ದಿದ್ರೆ ನಂಗೆ ತಲೆ ಓಡಾಕಿಲ್ಲ, ತಲೆನೇ ಓಡ್ಲಿಲ್ಲ ಅಂದ್ಮೇಕೆ ಕತೆ ಯಂಗೇಳೋಕಾಯ್ತದೆ?” ಅಂದ. ಅಂತು ಯಾವಾಗಲೂ ಬೆದರಿಸಿ ಓಡಿಸುತ್ತಿದ್ದ ಕಕ್ರಯ್ಯ ಇವತ್ತು ಕತೆಯಾದರೂ ಹೇಳುತಿದ್ದಾನೆ ನೋಡೋಣ ಅದು ಎಂತಹ ಕತೆ ಹೇಳುವನೋ ಎಂದು ನಾವು ಒಕ್ಕೊರಲಿನಿಂದ “ಹ್ಞೂಂ”… ಎಂದು ಹಿಮ್ಮೇಳ ಹಾಕತೊಡಗಿದೆವು. “ನಾನು ಒಳೇಕಡೀಕೆ ಒಂಟಿದ್ನಲ್ಲಾ ಓಗೋ ದಾರೀನಾಗೆ… “ಹ್ಞೂಂ”… ಎಲ್ಡು ಸಗ್ಣಿ ಉಳ… ” ಹ್ಞೂಂ”… ಸಗ್ಣಿ ಉಂಡ್ಯ ಮಾಡ್ಕೊಂಡು… “ಹ್ಞೂಂ”… ಉಳ್ಸ್ಕೊಂಡುಳ್ಸ್ಕೊಂಡು ಓಗ್ತಾಯಿದ್ದೋ… “ಹ್ಞೂಂ”… ಎಲ್ಡೂನು ತಳ್ಕಂಬಳ್ಕ ನಿಂತ್ಕೊಂಡು… “ಹ್ಞೂಂ”… ಒಂದುಳ ತಳ್ಳದು ಇನ್ನೊಂದುಳ ಯಳ್ಯದು… “ಹ್ಞೂಂ”… ನಾನು ಅವ್ಗಳ್ನ ನೋಡಿ ಅದೇನಾ ಇವು ಮಾಡ್ತಾ ಇರೋದು ಕೇಳ್ಬುಡ್ವ ಅಂತ… “ಹ್ಞೂಂ”… ಅವ್ತತ್ರುಕ್ಕೆ ಓಗಿ… “ಹ್ಞೂಂ”…. ಸಗ್ಣಿಉಳ ಸಗ್ಣಿಉಳ “ಹ್ಞೂಂ”… ಈ ಸಗ್ಣಿ ಉಂಡ್ಯ ಉಳ್ಸ್ಕೊಂಡು ಎಲ್ಗೋಯ್ತಿದ್ದೀರಿ ಅಂದೆ… “ಹ್ಞೂಂ”… ಅದ್ಕ ಅವು ಏನಂದೋ ಅಂದ್ರ “ಏನಂದ್ವು ತಾತ?” ನಮ್ಮ ಪ್ರಶ್ನೆ, ಅದಕ್ಕೆ ಅವನ ಉತ್ತರ “ಇಷ್ಟೊತ್ಗಂಟ ಊ್ಞಂ… ಅಂದೋರ ಬಾಯಿಗ ಉಳ್ಸ್ಕೊಂಡು ಓಗ್ತಾ ಇವಿ ಅಂದೊ” ಹಾಗಂತ ಹೇಳಿ ಘಾಟಿ ಮುದುಕ ನಮ್ಮ ಮುಖ ನೋಡಿ ಕಳ್ಳ ನಗೆ ನಗತೊಡಗಿದ ನಾವು ಇಂಗು ತಿಂದ ಮಂಗನಂತಾದೆವು. ಅಂತು ಹಿಂದೆ ಮುಂದೆ ತಿಳಿಯದೆ ಸುಮ್ಮನೆ ಹ್ಞೂಂಗುಟ್ಟಿದ ಕಾರಣಕ್ಕೆ ಬಕರಾಗಳಾಗಿದ್ದೆವು!.
“ಹ್ಞೂಂಗುಟ್ಟುವ ಬಕರಾ ಸಿಕ್ಕರೆ ಮೂಕನೂ ಭಾಷಣ ಮಾಡಬಲ್ಲ” ಎಂದು ಬೀಚಿ ಸುಮ್ಮನೇ ಹೇಳಿದರೇ? ನಿಮಗೂ ಗೊತ್ತಲ್ಲ ಈಗೀಗ ನಯವಾಗಿ ಮಾತಾಡುವ ನೇತಾರರ ಮಾತುಗಳಿಗೆ ವಿವೇಚನೆ ಇಲ್ಲದೆ ಸುಮ್ಮನೆ ಹ್ಞೂಂಗುಡುವ ಅನುಯಾಯಿಗಳೆ ಎಲ್ಲೆಡೆಯಲ್ಲಿ ತುಂಬಿಕೊಳ್ತಿದ್ದಾರೆ. ಆ ನಯವಂಚಕರು “ಬದನೆಕಾಯಿಯಲ್ಲಿ ಪಾಯಸ, ರಾಗಿ ಹಿಟ್ಟಿನಲ್ಲಿ ಸಾಂಬಾರ್, ಗೋಧಿಯಲ್ಲಿ ಅನ್ನ, ಅಕ್ಕಿಯಲ್ಲಿ ಗೊಜ್ಜು ತಯಾರು ಮಾಡಿ ಊರಿಗೆಲ್ಲಾ ಊಟ ಹಾಕಿಸಿಬಿಡುತ್ತೇನೆ” ಎಂದರೂ ಹ್ಞೂಂ ಎನ್ನುತ್ತಾರೆ, ದತ್ತೂರಿ ಗಿಡವನ್ನೇ ಕಸ್ತೂರಿ ಎಂದು ತತ್ತೂರಿ ಊದಿದರೂ ಸಹಮತದಿಂದ ಅನುಮೋದಿಸುತ್ತಾರೆ, “ನಾನು ಪ್ರೀತಿಯಿಂದ ಸಾಕಿರುವ ʼಕೋಣʼ ಇನ್ನೇನು ಕರು ಹಾಕಲಿದೆ ಎಲ್ಲರಿಗೂ ಉಚಿತವಾಗಿ ಹಾಲು ಹಂಚುತ್ತೇನೆ” ಎಂದರೂ ನಂಬಿ ಹ್ಞೂಂ ಅಂತಲೇ ಹೇಳುತ್ತಾರೆ. ಇಂತಿಪ್ಪ ಹೌದಪ್ಪಗಳ ವರ್ಗ ತಮಗೆ ಮಾತ್ರ ಮೋಸ ಮಾಡಿಕೊಳ್ಳುವುದೇ? ನಯವಾಗಿ ಮಾತನಾಡುವ ನೇತಾರರನ್ನು ಮತ್ತು ಅವರ ನವಿರಾದ ಮಾತುಗಳನ್ನು ನಂಬುವ ಮುನ್ನ ನೂರು ಬಾರಿ ಯೋಚಿಸುವವನೇ ಅಲ್ಲವೇ ನಿಜವಾದ ನಾಗರಿಕ? ಸರಿ ತಪ್ಪುಗಳನ್ನು ಪರ್ಯಾಲೋಚಿಸದೇ ಸುಮ್ಮನೆ ಹ್ಞೂಂಗುಟ್ಟಿದರೆ ಕೊನೆಗೆ ಮೂರ್ಖರಾಗುವುದು ತಪ್ಪುವುದಿಲ್ಲ ಅಲ್ಲವೇ?
ಹಿಂದಿನ ಕಾಲದಲ್ಲಿ ರಾಜ-ಮಹಾರಾಜರುಗಳು, ಸೇನಾಧಿಪತಿಗಳು ಅವರುಗಳಿಗೆ ಹಿಡಿದಿದ್ದ ಯುದ್ಧದ ದೆವ್ವವನ್ನು ಕದನೋತ್ಸಾಹ ಎಂದು ಹೆಸರಿಸಿ ಅದನ್ನು ಸೈನಿಕರುಗಳಲ್ಲಿಪ ಆವಾಹಿಸಲು ಹ್ಞೂಂಕಾರವನ್ನೇ ಮಾಡುತ್ತಿದ್ದುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ. ಅವರ ಹ್ಞೂಂಕಾರದಿಂದಲೇ ಸೈನಿಕರಲ್ಲಿ ಹೊಸ ಹುಮ್ಮಸ್ಸು ಮೈದುಂಬಿ ಪ್ರತಿಯಾಗಿ ಹ್ಞೂಂಕರಿಸಿ ಶತ್ರು ಸೈನಿಕರ ಮೇಲೆ ಏರಿ ಹೋಗುತ್ತಿದ್ದರು. ಮುಂದಾಳುಗಳ ಹ್ಞೂಂಕಾರದ ಗತ್ತು ಗೈರತ್ತು ಯುದ್ಧದ ಗತಿಯನ್ನೇ ಬದಲಾಯಿಸುತ್ತಿತ್ತೇನೋ. ಅಂತು ಯುದ್ಧದಲ್ಲಿ ಸೋಲು ಗೆಲುವುಗಳು ಅವರ ಹ್ಞೂಂಕಾರವನ್ನೇ ಆಶ್ರಯಿಸುತ್ತಿದ್ದವು ಎಂದು ನಿಸ್ಸಂಶಯವಾಗಿ ಹೇಳಬಹುದು.
ಹಿಂದೆ ಹರಿಕತೆಗಳನ್ನು ಮಾಡುವಾಗ ಕೀರ್ತನಾರಂಭ ಕಾಲದಲ್ಲಿ ಎಂದು ಪ್ರಾರಂಭಿಸುತ್ತಿದ್ದಂತೆಯೇ ದಾಸರು ಎದುರು ಕುಳಿತವರ ಕಡೆಯಿಂದ ಒಂದು ಹ್ಞೂಂಗುಟ್ಟುವಿಕೆಯನ್ನು ಬಯಸಿಯೇ ಕತೆಯನ್ನು ಮುಂದುವರಿಸುವುದು. ಸೂಖಾ ಸುಮ್ಮನೆ ಕತೆ ಮುಂದುವರಿಯುತ್ತದೆಯೇ? ಕೇಳುಗರ ಕರ್ಣಗಳಿಗೆ ನಾವು ಹೇಳುತ್ತಿರುವುದು ತಲುಪುತ್ತಿದೆಯೇ ಅವರು ಅದನ್ನು ಅರ್ಥ ಮಾಡಿಕೊಂಡರೇ ಇಲ್ಲವೇ ಎಂಬುದರ ಪರಿಶೀಲನೆ ದಾಸರಿಗೆ ಆಗಬೇಕಾದದ್ದೇ ಈ ಹೂಂಗುಟ್ಟುವಿಕೆಯಿಂದ ಅಲ್ಲವೇ? ಒಂದು ವೇಳೆ ಸಭಿಕರು ಅರಸಿಕರಾಗಿದ್ದರೆ, ಪಾಪ ದಾಸರು ಏನು ತಾನೇ ಮಾಡಿಯಾರು ತಮ್ಮ ಪದಲಾಲಿತ್ಯದಿಂದ ಸಭಿಕರ ಮುಂದೆ ಮಾತಿನ ಮನೆ ಕಟ್ಟುವ ಅವರು ಸಭಿಕರಿಂದ ಬರಬೇಕಾದ ಹ್ಞೂಂಕಾರವನ್ನು ಕೂಡ ಅಲ್ಲಿಂದಲೇ ಎರವಲು ಪಡೆದು ಕತೆಗೆ ಒಂದು ಉಪಕತೆ, ಉಪಕತೆಗೆ ಒಂದು ಮರಿಕತೆಗಳನ್ನು ಸೇರಿಸಿ ಅಂತು ಹರಿಕತೆಯನ್ನು ಪೂರ್ಣಗೊಳಿಸುತ್ತಿದ್ದರು ಎಂದರೆ ತಪ್ಪಾಗದು. ಇದಕ್ಕೆ ಪರ್ಯಾಯವಾಗಿ ಸಿದ್ದಪ್ಪಾಜಿ ಕತೆಯನ್ನು ಹಾಡುವ ನೀಲಗಾರರು ಅದ್ಭುತ ಪರಿಹಾರವನ್ನು ಕಂಡುಕೊಂಡಿದ್ದಾರೆ ಮುಖ್ಯ ಹಾಡುಗಾರನ ಸಂಭಾಷಣೆಗೆ “ಹೌದೌದು” ಎಂಬ ಹಿಮ್ಮೇಳವನ್ನು ಅವರದ್ದೇ ತಂಡದವರು ಹಾಡಿಕೊಳ್ಳುವುದರಿಂದ ಸಭಿಕರ ಹ್ಞೂಂಗುಡುವಿಕೆಯ ಅಗತ್ಯ ಬೀಳುವುದಿಲ್ಲ ಎಂದರೆ ತಪ್ಪಾಗದು. ಹೌದೌದು ಎಂಬುದು ಹ್ಞೂಂಕಾರದ ನಯಗೊಳಿಸಿದ ರೂಪ ತಾನೇ?
ಇನ್ನು, “ಪತ್ನಿ ಆಜ್ಞೆಗೆ ಹ್ಞೂಂಗುಡದ ಪತಿರಾಯ ಇಡೀ ಭುವನದಲ್ಲಿ ಅವನಾವನಿರುವನು ಅವನಾವನಿರುವನು?” ಎಂದು ಭಕ್ತ ಪ್ರಹ್ಲಾದ ಸಿನಿಮಾದ ಹಿರಣ್ಯ ಕಶಿಪುವಿನ ರೀತಿಯಲ್ಲಿ ಸವಾಲು ಹಾಕಿದರೂ ಯಾವ ಪತಿರಾಯನೂ ಮರುತ್ತರ ಕೊಡಲಾರ ಎಂದೇ ನನ್ನ ಅನಿಸಿಕೆ.
ಅಂತು ಹ್ಞೂಂಕಾರ ಎನ್ನುವುದು ಇತರರ ಮೇಲೆ ಅಧಿಕಾರ ಸ್ಥಾಪಿಸಲು, ಸಮ್ಮತಿ ಸೂಚಿಸಲು, ದ್ವಿರುಕ್ತಗೊಂಡರೆ ಅಸಮ್ಮತಿ ಸೂಚಿಸಲು, ಅನುಮಾನ ವ್ಯಕ್ತಪಡಿಸಲು, ಪ್ರಶ್ನಿಸಲು, ಮೂದಲಿಸಲು, ಕಿಚಾಯಿಸಲು, ಕಾಲೆಳೆಯಲು, ಗೇಲಿ ಮಾಡಲು, ಛೇಡಿಸಲು, ಹೀಗೆ ಅವರವರ ವ್ಯಕ್ತಿತ್ವಕ್ಕೆ ಅನುಗುಣವಾಗಿ ಎಲ್ಲರಿಂದಲೂ ಬಳಕೆಯಾಗುತ್ತಿದೆ. ಮೇಲಿನ ಯಾವುದೇ ರೀತಿಯಲ್ಲಿ ಹ್ಞೂಂಕಾರವನ್ನು ಬಳಕೆಯೇ ಮಾಡಿರದ ಮನುಷ್ಯರೇ ಇಲ್ಲ ಎಂದರೂ ತಪ್ಪಾಗುವುದಿಲ್ಲ.
ಹೀಗೆ ಒಮ್ಮೆ ಒಂದು ಕಾಲೇಜಿನಲ್ಲಿ -ನಾನು ಓದುತ್ತಿದ್ದ ಕಾಲೇಜೇ ಅಂದುಕೊಳ್ಳಿ- ವಿದ್ಯಾರ್ಥಿಗಳಿಗೆ ಅಕಾರಣವಾಗಿ ಕಿರಿಕಿರಿ ಉಂಟುಮಾಡುತ್ತಿದ್ದ ಅಧ್ಯಾಪಕ ಒಬ್ಬ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನಾ ಭಾಷಣ ಮಾಡಲು ಗತ್ತಿನಿಂದ ವೇದಿಕೆ ಏರಿ ಬಹಳ ಲಯಬದ್ಧವಾಗಿ ಅಲ್ಲಿಲ್ಲಿ ಏರಿಳಿತಗಳನ್ನು ಮಾಡಿ ಪದಗಳ ನಡುವೆ ಎರಡು-ಮೂರು ಮಾತ್ರಾ ಕಾಲ ವಿಶ್ರಮಿಸಿ (ರಾಜಕಾರಣಿಗಳ ರೀತಿಯಲ್ಲಿ ಠೀವಿಯಿಂದ), ಸನ್ಮಾನ್ಯ ಸಭಾಧ್ಯಕ್ಷರೇ… ಎಂದು ಶುರು ಮಾಡಿದಾಗ ವಿದ್ಯಾರ್ಥಿಗಳ ಕಡೆಯಿಂದ ಒಟ್ಟಾಗಿ “ಹ್ಞೂಂ”… ವೇದಿಕೆಯನ್ನು ಅಲಂಕರಿಸಿರುವ ಗೌರವಾನ್ವಿತರೇ… “ಹ್ಞೂಂ”… ನೆರೆದಿರುವ ನೆಚ್ಚಿನ ವಿದ್ಯಾರ್ಥಿಗಳೇ… “ಹ್ಞೂಂ”… ಇವತ್ತು ನಾವೆಲ್ಲರೂ… “ಹ್ಞೂಂ”… ಏ ಯಾರೋ ಅದು… “___” ಇಲ್ಲಿ ನೆರೆದಿರುವ… “ಹ್ಞೂಂ”… ಉದ್ದೇಶವೇನೆಂದರೆ… “ಹ್ಞೂಂ”… ಹೀಗೆ ಆತ ಅಂತಿಮವಾಗಿ ಇಲ್ಲಿಗೆ ನನ್ನೆರಡು ಮಾತುಗಳನ್ನು ಮುಗಿಸುತ್ತಿದ್ದೇನೆ ಜೈ ಕರ್ನಾಟಕ ಎನ್ನುವವರೆಗೆ ಭಾಷಣದುದ್ದಕ್ಕೂ ಅಧ್ಯಾಪಕನ ಮಾತಿನೇರಿಳಿತಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳ “ಆಹಾ” “ಓಹೋ” “ಹೌದಾ?” “ಆಮೇಲೆ”ಗಳ ಜೊತೆ ಹ್ಞೂಂಕಾರಗಳು ನಿಲ್ಲಲೇ ಇಲ್ಲ ಅಧ್ಯಾಪಕನೂ ಮಾತನಾಡುವ ಧಾಟಿಯನ್ನು ಬದಲಾಯಿಸಲೂ ಇಲ್ಲ. ಅಂತು ಆ ಅಧ್ಯಾಪಕ ಅವನ ಜೀವನದಲ್ಲಿ ಆ ದಿನವನ್ನು ಮರೆಯುವಂತಿಲ್ಲ. ಅಲ್ಲಿಗೆ ಹ್ಞೂಂಕಾರ ಎಂಬುದು ಕೇವಲ ಶಬ್ದವಲ್ಲ ವ್ಯಕ್ತಿಯ ಅಂಹಂಗೆ ಪೆಟ್ಟನ್ನೂ ಕೊಡಬಲ್ಲ ಅಸ್ತ್ರವೂ ಹೌದು. ಹಾಗೆಯೇ ಅಹಂಕಾರಕ್ಕೆ ಉದಾಸೀನ ಮಾತ್ರವೇ ಮದ್ದಲ್ಲ ಎಂಬುದು ತಿಳಿದದ್ದೂ ಹೌದು.
ಪ್ರಸ್ತುತ ಘನ ಸರಕಾರವೆಂಬ ಭೀಮನ ಕೋಟೆಯ ನೂರೆಂಟು ಓಣಿಗಳಂತಹ ವೈವಿಧ್ಯಮಯ ಇಲಾಖೆಗಳ ಹವಾನಿಯಂತ್ರಿತ ಕಛೇರಿಗಳಲ್ಲಿ, ಎತ್ತರೆತ್ತರದ, ಸುತ್ತುವ ಕುರ್ಚಿಗಳ ಮೇಲೆ ಆಸೀನರಾಗಿ ಜನರ ಕೆಲಸ ಮಾಡಲು -ಅವರ ಪ್ರಕಾರ ಹುಕುಂ ಚಲಾಯಿಸಲು- ನಿಯಮಿಸಲ್ಪಟ್ಟ ಅಧಿಕಾರಿಗಳು ಮತ್ತು ಅವರವರ ಸ್ಥಾನಮಾನಗಳಿಗೆ ತಕ್ಕಂತೆ ವಿವಿಧ ಕುರ್ಚಿಗಳ ಮೇಲೆ ಕುಳಿತು ದಫ್ತರುಗಳಲ್ಲಿ ಹುದುಗಿದಂತೆ ನಟಿಸಿ ಅಧಿಕಾರಿಗಳ ಕೈಕೆಳಗೆ ಕೆಲಸಮಾಡುವ ಗುಮಾಸ್ತೆಯರಿಂದ ಒಂದೇ ಒಂದು ಸಹಮತದ ಹ್ಞೂಂಕಾರವನ್ನು ದಕ್ಕಿಸಿಕೊಳ್ಳಲು ಭೂಮಿ ಆಕಾಶ ಒಂದು ಮಾಡಬೇಕೆಂಬುದು ಅವರ ಬಳಿ ಕೆಲಸ ಮಾಡಿಸಿಕೊಳ್ಳಲು ಹೋದವರಿಗೆ ಮಾತ್ರ ಗೊತ್ತು. ಕೆಲವು ಸರಕಾರಿ ಅಧಿಕಾರಿಗಳ ಮತ್ತು ಅವರ ಕೈಕೆಳಗಿನ ಗುಮಾಸ್ತರುಗಳ ಹ್ಞೂಂಕಾರವನ್ನು ಅರ್ಥೈಸುವುದೂ ತ್ರಾಸದಾಯಕ. ಕ್ಷಣ ಚಿತ್ತ ಕ್ಷಣ ಪಿತ್ತ ಎಂಬಂತೆ ವರ್ತಿಸುವ ಅವರ ಹ್ಞೂಂಕಾರಗಳನ್ನು ವಿಶ್ಲೇಷಿಸುವುದಕ್ಕೆ ಬಹಳ ಅನುಭವಿಯಾದ ಮಧ್ಯವರ್ತಿಯೇ ಆಗಿರಬೇಕಲ್ಲದೇ ʼಶ್ರೀʼಯಲ್ಲಿ ಸಾಮಾನ್ಯನಾದವನಿಂದ ಅದು ಅಸಾಧ್ಯ.
ನಮ್ಮ ಕಡೆ “ಊ್ಞಂ… ಕನ ಯೋಳಪ್ಪ” ಅಂದರೆ ಒಪ್ಪಿಗೆ ಸೂಚಿಸಿದ ಹಾಗೆ “ಆಯ್ತು ಹೇಳಿ” ಎಂಬ ಅರ್ಥವೂ ಹೌದು ಹಾಗೆಯೇ ಧಾಟಿ ಬದಲಾಯಿಸಿದರೆ “ನಾವು ಕಂಡಿದ್ದೇವೆ ತೆಪ್ಪಗಿರು” ಅಂತಾನೂ ಹೌದು. “ಊ್ಞ.. ಬಂದ್ಬುಡು” ಅಂದರೆ ವಾಚ್ಯಾರ್ಥದಲ್ಲಿ “ಸರಿ ಬಾ” ಎನಿಸಿದರೂ ನಿಜಾರ್ಥದಲ್ಲಿ ಅದು “ಒಪ್ಪಿಗೆ ಇಲ್ಲ ಅಥವಾ ಆಗುವುದಿಲ್ಲ” ಎಂಬ ಅಸಮ್ಮತಿಯ ಸೂಚಕವಾಗಿದೆ. ಹ್ಞು ಎಂಬ ಹ್ಞೂಂಕಾರದ ಹ್ರಸ್ವವು ನಿಷ್ಠುರ ಸೂಚಕವೇ ಆಗಿದೆ, ಹ್ಞುಹ್ಞುಹ್ಞು ಎಂದರೆ ಕಿಚಾಯಿಸಿದಂತೆಯೂ ಅಲ್ಲಗಳೆದಂತೆಯೂ ಆಗುತ್ತದೆ. ಹ್ಞು ಹ್ಞೂ… ಎಂಬುದು ಅಸಡ್ಡೆಯನ್ನು ಪ್ರಕಟಗೊಳಿಸುವ ರೂಪವೂ ಹೌದು. ಅಲ್ಲಿಗೆ ಹ್ಞೂಂ ಅಂದರೆ ಹೌದು, ಉಹ್ಞೂಂ ಎಂದರೆ ಇಲ್ಲ -No means No- ಎಂಬಂತೆ ಯಾವಾಗಲೂ ಇದಮಿತ್ಥಂ ಎಂಬ ಅರ್ಥಗಳನ್ನು ಒಳಗೊಂಡಿರುವುದಿಲ್ಲ ಎಂದಾಯಿತು.
ಇನ್ನು ವಿವಾಹ ಯೋಗ್ಯ ವಯಸ್ಸು ತಲುಪಿದ (ಅಂದರೆ ಸರಕಾರದ ಕಾನೂನಿನ ಪ್ರಕಾರ) ತರಳೆ, ತರುಣರ ತಾಯ್ತಂದೆಯರು ವಧೂ-ವರಾನ್ವೇಷಣೆ ಎಂಬ ತಪನೆಯ ನಂತರ ಮುಂದೆ ವಧು-ವರ ಆಗುವವರಿಂದ ಹ್ಞೂಂಕಾರವನ್ನು ಹೊರಡಿಸಲು ಮಾಡುವ ದ್ರಾವಿಡ ಪ್ರಾಣಾಯಾಮ ಅದನ್ನು ನೋ(ಮಾ)ಡಿದವರಿಗೆ ಮಾತ್ರ ಗೊತ್ತು. ಒಮ್ಮೆ ಹ್ಞೂಂಗುಟ್ಟಿದ್ದರೂ ಸರಿಯಾಗಿ ಹೇಳು, ಮತ್ತೊಮ್ಮೆ ಹೇಳು, ಯೋಚನೆ ಮಾಡಿ ಹೇಳು, ಎಲ್ಲಾ ಸರಿ ತಾನೇ? ಒಪ್ಪಿಗೆ ತಾನೇ? (ಇದೇ ಸಂಬಂಧ ಒಪ್ಪಿಕೊಂಡುಬಿಡಲಿ ಎಂಬ ಆಸೆ ಇದ್ದರೂ) ಆಮೇಲೆ ನಮ್ಮನ್ನು ಕೇಳಬೇಡ! ಇತ್ಯಾದಿ ನಮೂನೆಗಳಿಂದ ಸಮ್ಮತಿಯ ಹ್ಞೂಂಕಾರವನ್ನು ಪಡೆದುಕೊಳ್ಳುತ್ತಾರೆ.
ಒಮ್ಮೊಮ್ಮೆ ಮಕ್ಕಳು ತಪ್ಪು ಮಾಡಿದ ಸಂದರ್ಭಗಳಲ್ಲಿ “ಎಷ್ಟು ಕೇಳಿದರೂ ಆ್ಞಂ… ಅನ್ನಲ್ಲ ಹ್ಞೂಂ… ಅನ್ನಲ್ಲ ಮೂದೇವಿ” ಎಂದು ಅದೇ ಮೂದೇವಿಯ ಜನ್ಮದಾತೆ ಮತ್ತು ಜನ್ಮದಾತರು ಹಲುಬುತ್ತಿರುತ್ತಾರೆ. ಅಂತಹ ಸಮಯದಲ್ಲಿ ಮಕ್ಕಳಿಂದ ಅವರು ತಪ್ಪು ಮಾಡಿದ್ದರೂ ಹ್ಞೂಂಕಾರವನ್ನು ಹೊರಡಿಸುವುದು ಅಷ್ಟು ಸುಲಭದ ಮಾತಲ್ಲ. ಆವಾಗ ಅವರ ಜನುಮದಾತರ ಭರ್ತ್ಸನೆಯು ಅವರ ವಿರುದ್ಧವೋ ಅವರ ಮಕ್ಕಳ ವಿರುದ್ಧವೋ ಅರ್ಥವಾಗುವುದಿಲ್ಲ. ಕೋಪಾವಿಷ್ಟರಾದ ಮಾತಾಪಿತೃಗಳು ಪೆಟ್ಟು ಕೊಟ್ಟರೆ ಮಕ್ಕಳು ಪ್ರಾರಂಭದಲ್ಲಿ ದೊಡ್ಡದಾಗಿ ಬಾಯಿ ತೆರೆದು ಓss…. ಎಂದು ಗೋಳಾಡಿದರೂ ಅವರ ಅಳು ಹಂತ ಹಂತವಾಗಿ ಒಂದು ಆವರ್ತನವನ್ನು ಪೂರ್ಣಗೊಳಿಸಿ ಅಂತಿಮ ಘಟ್ಟಕ್ಕೆ ಬಂದ ಹಾಗೆ ಮತ್ತೆ ಹ್ಞೂಂss… ಹ್ಞೂಂss… ಹ್ಞೂಂss… ಕಾರಕ್ಕೆ ಬಂದು ನಿಧಾನವಾಗಿ ನಿಂತುಹೋಗುವುದು .
ಇನ್ನು ನಲ್ಲೆಯ ಹ್ಞೂಂಕಾರದ ಇಂಪನ್ನು, ಅತ್ತೆಯ ಹ್ಞೂಂಕಾರದ ಗರ್ವವನ್ನು, ಅಧಿಕಾರಿಯ ಹ್ಞೂಂಕಾರದ ದರ್ಪವನ್ನು ಸಾಹುಕಾರನ ಹ್ಞೂಂಕಾರದ ಅಹಂಕಾರವನ್ನು, ರಾಜಕಾರಣಿಯ ಹ್ಞೂಂಕಾರದ ಬಡಾಯಿಯನ್ನು, ಬಡವನ ಹ್ಞೂಂಕಾರದ ದೈನೇಸಿತನನ್ನು, ರೋಗಿಯ ಹ್ಞೂಂಕಾರದ ಯಾತನೆಯನ್ನು ವಿವರಿಸಲು ಸಾಮಾನ್ಯನಾದ ನನ್ನಿಂದ ಸಾಧ್ಯವಾಗುವುದಿಲ್ಲ ಎನಿಸುತ್ತದೆ. ಆಯಾ ಸಂದರ್ಭಕ್ಕೆ ಅನುಗುಣವಾಗಿ ಅದರ ಅನುಭವವಾದವರಿಗೆ ಗಾಢವಾದ ರೀತಿಯಲ್ಲಿ ಅದು ವೇದ್ಯವಾಗಿರುತ್ತದೆ. ಒಟ್ಟಿನಲ್ಲಿ ಯಾರಾದರೂ ಸರಿ ಹ್ಞೂಂಕಾರದ ನಿರೀಕ್ಷೆಯಲ್ಲಿಯೋ ಅಥವಾ ಹ್ಞೂಂಗುಟ್ಟುವುದರಲ್ಲಿಯೋ ತೊಡಗಿರಲೇಬೇಕು.
ಅಂತು ಯಾವ ರೂಪದಲ್ಲಾದರೂ, ಯಾರ ಮುಖೇನವಾದರೂ ಬರಲಿ, ಹ್ಞೂಂಕಾರವು ಬದುಕಿನಲ್ಲಿ ಮುಖ್ಯ ಎಂಬುದು ಎಲ್ಲರಿಗೂ ತಿಳಿದ ವಿಷಯ ಆದರೆ ಹ್ಞೂಂ ಎಂದಿದ್ದು, ಹ್ಞೂಂಕಾರಕ್ಕೆ ಕಾದಿದ್ದನ್ನು ಯಾರೂ ಹೇಳಿಕೊಳ್ಳುವುದಿಲ್ಲ ಅಷ್ಟೆ!. ನೀವೂ ಅವರಂತಾಗದೆ ಇದನ್ನು ಓದಿದ ಮೇಲೆ ನಿಮಗೆ ಸರಿಕಂಡರೆ ಒಮ್ಮೆ ನೀವೂ ಸಹಮತದ “ಹ್ಞೂಂಕಾರ” ಹೊರಡಿಸಿಬಿಡಿ. ಅಲ್ಲಿಗೆ ಇಂತಿಪ್ಪ ಹ್ಞೂಂಕಾರ ಪುರಾಣವು ಇಲ್ಲಿಗೇ ಮುಕ್ತಾಯಗೊಳ್ಳದೇ ʼಸಶೇಷʼವಾಗಲು ಸಹಾಯವಾಗುತ್ತದೆ!
ಕಾಂತರಾಜು ಕನಕಪುರ
Super sir
ಧನ್ಯವಾದಗಳು ಮೇಡಂ
Suuuuuper sir……