ಕಾವ್ಯ ಸಂಗಾತಿ
ಅಂತೂ ಮಳೆ ಬಂತು…..
ವಿನುತ ಹಂಚಿನಮನಿ
ಕಡಲ ಒಡಲು ಕಾಯ್ದು
ಬಿಸಿಯುಸಿರು ಕಣ್ಣೀರ ತಂತು
ವಿರಹದ ಹೆಪ್ಪು ಭಾಷ್ಪವಾಗಿ
ಮೋಡದಲಿ ಕಲೆತು ಒಂದಾಗಿ
ಅಂತೂ ಮಳೆ ಬಂತು………..
ಮಳೆಯ ಬೀಜ ಹೊತ್ತ ಕರಿಮೋಡ
ಬಸಿರ ಭಾರದಿ ತುಸು ಕೆಳಗಿಳಿದು
ನಸುಬಾಗಿ ಶಿಖರನೆತ್ತಿಗೆ ಮುತ್ತನಿತ್ತು
ಇಳೆ ಬೀಸಿದ ತಂಗಾಳಿಗೆ ಮೈಯೊಡ್ಡಿ
ಅಂತೂ ಮಳೆ ಬಂತು...................
ಸಡಗರದ ಮೋಡಗಳಿಗೆ ಈಗ
ಕೂಡುವ ಸಂಭ್ರಮದ ಗಳಿಗೆ
ಓಡೋಡಿ ಬಂದು ಬಳಿಗೆ
ಬಿಡದೆ ಅಪ್ಪಿ ಮುದ್ದಾಡಿದಾಗ
ಅಂತೂ ಮಳೆ ಬಂತು..................
ಗಾಢ ಚುಂಬನ ತಂತು ಕೋಲ್ಮಿಂಚು
ಗುಡುಗಿನಬ್ಬರಕೆ ನಡುಗಿದ ಹೃದಯ
ಸಿಡಿಲ ಸೆಳೆತಕೆ ಹೊತ್ತಿಸಿ ಬೆಂಕಿಯ
ಒಡನೆ ಸ್ಖಲಿಸಿತು ಜೇನ ಮಳೆಯ
ಅಂತೂ ಮಳೆ ಬಂತು....................
ಬಾಯ್ದೆರೆದು ಕಾಯ್ದ ಭೂಮಿಗೆ
ಮಾಯದ ಅಮೃತ ಸಿಂಚನ
ಘಮ್ಮೆನಿಸುವ ಪರಿಮಳದ ಮತ್ತಿಗೆ
ನಿಸರ್ಗ ಮೈಜುಮ್ಮೆನಿಸುವ ಹೊತ್ತಿಗೆ
ಅಂತೂ ಮಳೆ ಬಂತು....................
ಜಲಬೀಜದ ಮೋಡಕೆ ಪ್ರಾರ್ಥಿಸಿದ
ಜಲಧಿಯ ಮೊರೆಯ ಆಗಸ ಆಲಿಸಿ
ಫಲಭರಿತ ಮೋಡ ನೀರ ಸುರಿಸಿ
ಕಳೆಬಂತು ಇಳೆಗೆ ಮಳೆಯಿಂದ
ಅಂತೂ ಮಳೆ ಬಂತು..................