ಸುರಿಯುತಿದೆ ಮಳೆ

ಕಾವ್ಯ ಸಂಗಾತಿ

ಸುರಿಯುತಿದೆ ಮಳೆ

ಡಾ. ನಾಗರತ್ನ ಅಶೋಕ ಭಾವಿಕಟ್ಟಿ

ಅರೆರೆ ಸುರಿಯಿತು ಇನ್ನೇನು ಸುರಿದೆ ಬಿಟ್ಟಿತು
ಕಾಯುತ್ತಿರುವ ಸಮಯದಿ ಕರಗಿ
ಮರೆಯಾಯಿತೆ ಮುಸಿಕಿರುವ ಮೋಡ
ಸುರಿಯಿತು ಇಳೆಗೆ ತಂಪಾಗುವ ಮಳೆಯ ಹನಿಯಲ್ಲ
ಭರವಸೆಯ ಕಂಗಳಲಿ ಕಾಯುತಿಹ
ರೈತನ ಕಂಬನಿ ಜೊತೆಗೆ ಬೆವರ ಹನಿಯು

ರವಿಯ ಕಾಂತಿ ಕಿರಣಗಳ ನಡುವೆಯೂ
ಮುಸುಕಿತು ಕಾರ್ಮೋಡ ವರ್ಷಧಾರೆಯದಲ್ಲ
ಅಜ್ಞಾನ ಅಂಧಕಾರದ ಕತ್ತಲೆಯು
ಎಂತಹ ಮಳೆಗೂ ಮೋಡ ಕರಗಿ ಸರಿದು
ಬೆಳಕಾಗದ ಅರಿವಿರುವವರ ಅಮರ
ಆಚರಣಿಗಳ ಮಸುಕು ಮನೋವಿಕಾರವು

ಅತಿವೃಷ್ಟಿಯ ಅವಸರಕೆ ಸಿಕ್ಕಿ
ಕೊಚ್ಚಿ ಹೋಗುತಿದೆ ಎಲ್ಲ ಕೊಳೆಯು
ಮಳೆನೀರ ಪ್ರವಾಹಕಲ್ಲ
ನೋವಿನಲ್ಲಿ ಸುರಿವ ಅಗ್ನಿಮಳೆಯ
ಕಿಚ್ಚಿನ ಉರಿಯ ರಭಸಕೆ
ನೊಂದ ಮನಗಳ ನೆನಪುಗಳ ಕೊಳೆಯು ಕೊಚ್ಚಿಹೋಗಿದೆ

ಬೋರ್ಗರೆಯುತಿದೆ ನೀರು ಬಾನೊಡಲ ಹೃದಯ
ಕಣ್ಣೀರ ಸುರಿಸಿ ಬಿಕ್ಕಿ ಬಿಕ್ಕಿ ಅತ್ತಂತೆ
ಮೋಹದ ರಾಜ್ಯದಲ್ಲಿ ಅಹವಾಲು ಕೆಳುವರಿಲ್ಲದೆ
ರಕ್ತದಲ್ಲಿ ಪ್ರೇಮಶಾಸನ ಬರೆಸಿ
ಸುಪ್ರಿಯೆಯ ನೆನಹಲ್ಲಿ ವೇದನೆ ತಾಳದೆ
ಗುಡುಗು ಮಿಂಚುಗಳಂತೆ ಆರ್ಭಟಿಸಿ ಅಳುತಲಿರಲು

ನದಿ ಸರೋವರ ಜಲಧಾರೆಗಳೆಲ್ಲ ಉಕ್ಕಿ
ಹರಿಯುತಿವೆ ನರ್ತಿಸುತ ಕುಣಿದಾಡಿವೆ
ಸುರಿದ ಮೇಘಗಳ ಸಂತಸಕಲ್ಲ
ಹೃನ್ಮನಗಳಿಗೆ ಮುದ ನೀಡಿದ ಅಭಿರಾಮ ಒಡೆಯನು
ಸುರಿಸಿದ ಅನುರಾಗದ ಧಾರೆಯ ಅನುಭೂತಿಯಿಂದಾದ ಅನುಪಮ ಹಿತಾನುಭವಕಾಗಿ


One thought on “ಸುರಿಯುತಿದೆ ಮಳೆ

Leave a Reply

Back To Top