ಫಂಕ್ಷನ್ ಮಾಡಿ ನೋಡಿ.

ಪ್ರಬಂಧ

ಫಂಕ್ಷನ್ ಮಾಡಿ ನೋಡಿ.

ಜ್ಯೋತಿ ಡಿ. ಬೊಮ್ಮಾ.

4hours Artificial Wedding Reception Stage Decorations, For Rental Service,  Chennai, Rs 12000 /piece | ID: 23002061648

ಫಂಕ್ಷನ್ ಎಂದರೆ ಸಂಭ್ರಮದ ಜೊತೆಗೆ ದುಗಡವೂ ಹೌದು.ಸಮಾರಂಭದ ಖುಷಿ ಒಂದೆಡೆ ಇದ್ದರೆ ಹೇಗೆ ನಿರ್ವಹಿಸುವೆವೋ ಎಂಬ ದುಗುಡ ಇನ್ನೊದೆಡೆ. ಬೇಸಿಗೆ ಶುರುವಾದರೆ ಸಾಕು ಸಾಲು ಸಾಲು ಸಮಾರಂಭಗಳ ಸುಗ್ಗಿ.ಆದರೆ ಈಗ ಸಮಾರಂಭಗಳಿಗೆ ಕಾಲದ ಮಿತಿ ಇಲ್ಲ.ಎಲ್ಲಾ ಕಾಲಗಳಲ್ಲೂ ಸಮಾರಂಭಗಳು ಜರುಗುತ್ತಿವೆ.ಊರುಗಳಲ್ಲಿ ಗುಡಿಗಳು ಫಂಕ್ಷನ್ ಹಾಲ್ ಗಳೆಲ್ಲ ಸಮಾರಂಭಗಳು ಜರುಗುವ ತಾಣಗಳು .ಬಿಸಿಲು ಮಳೆಯಿಂದ ರಕ್ಷಣೆ ಕೊಡಲು ಇಂತಹ ತಾಣಗಳಿರುವಾಗ ಸಮಾರಂಭ ಮಾಡಲು ಬೇಸಿಗೆಯ ಕಾಲವೆ ಆಗಬೆಕೆಂದಿಲ್ಲ. ಮೊದಲಾದರೆ ಬಹುತೇಕ ಸಮಾರಂಭಗಳು ಮನೆಯಲ್ಲೆ ಜರುಗುತಿದ್ದವು.ಮನೆ ಮುಂದೆ ಶಾಮಿಯಾನ ಗಾಕಿ ಮೈಕ್  ಹಚ್ಚಿದರೆ ಊರಿಗೆ ಊರೆ ಹುರುಪಿನಿಂದ ಅವರ ಮನೆಯ ಸಮಾರಂಭದಲ್ಲಿ ಭಾಗಿಯಾಗಲು ಸಜ್ಜಾಗುತಿತ್ತು. ಬೇಸಿಗೆ ಕಾಲವಾದರೆ ಅನುಕೂಲ , ಆಗ ಬಂದ ಅಥಿತಿಗಳಿಗೆ ಕುಳಿತುಕೊಳ್ಳಲು ಮಲಗಲು ಮನೆಯೊಳಗೆ ಆಗಬೆಕು ಎಂಬ ಶಿಷ್ಟಾಚಾರವಿರಲಿಲ್ಲ.ಮನೆಯ ಮಹಡಿ ಮೇಲೋ.ಮನೆ ಮುಂದಿನ ಗಿಡದಡಿಯೋ ಹೊರಗೆ ಪಡಸಾಲೆಯಲ್ಲೋ ಹೀಗೆ ಎಲ್ಲೆಂದರಲ್ಲಿ  ಕುಳಿತು ಮಲಗಿ ಸಮಾರಂಭ ಮುಗಿಸಿ ಹೋಗುತಿದ್ದರು.ಈಗ ಬರುವ ಅಥಿತಿಗಳು  ಸೌಲಭ್ಯ ಗಳ ಕೊರತೆ ಇದ್ದರೆ ಬರುವದನ್ನೆ ರದ್ದುಗೊಳಿಸುತ್ತಾರೆ.

ಈಗ ಎಲ್ಲಾ ಸಮಾರಂಭಗಳು ರೇಡಿಮೇಡ್.ಶುರುವಾಗಿದೆ ಎನ್ನುವಷ್ಟರಲ್ಲೆ ಮುಗಿದೆ ಬಿಡುತ್ತದೆ.ನಾಲೈದು ತಾಸಿನಲ್ಲಿ ಎಲ್ಲವೂ ಫಟಾಫಟ್ ಮುಗಿದುಬಿಡುತ್ತದೆ.ಬಂದವರು ಬಂದಷ್ಟೆ ವೇಗವಾಗಿ ಮನೆಸೇರಿಕೊಳ್ಳುತ್ತಾರೆ.

ಈಗಿನ ಮದುವೆಗಳು ಹಾಗೆ , ವಧು ವರ ನಿಶ್ವಯವಾಗುವದೊಂದೆ  ದೊಡ್ಡ ಕೆಲಸ .ಮುಂದಿನ ಕೆಲಸಗಳೆಲ್ಲ ಸರಳ , ಈಗ ಹೊಸ ಟ್ರೆಂಡ್ ಶುರುವಾಗಿದೆ ,ಎಲ್ಲವೂ ಗುತ್ತಿಗೆ ಕೊಡುವದು. ಎಲ್ಲವೂ ಅವರೆ ನಿರ್ವಹಿಸುತ್ತಾರೆ.ಅಥಿತಿಗಳ ಲಿಸ್ಟ ಕೊಟ್ಟರೆ ಆಯಿತು ಮುಂದಿನ ಎಲ್ಲಾ ಆರೆಂಜ್ ಮೆಂಟ್ ಅವರದೇ. ಊಟದ ಮೇನು , ಮನೆಯವರು ಯಾವ ವಸ್ತ್ರ ಧರಿಸಬೇಕು.ಅಥಿತಿಗಳಿಗೆ ಯಾವ ಉಡುಗೊರೆ ಕೊಡಬೇಕು.ಸಮಾರಂಭದ ಪದ್ಧತಿಗಳನ್ನು ಹೇಗೆ ಅನುಸರಿಸಬೇಕು.ಹೇಗೆ ನೃತ್ಯ ಮಾಡಬೇಕು ,ಫೋಟೋಗೆ ಯಾವ ರೀತಿ ಫೋಜ್ ಕೊಡಬೇಕು ,ಎಲ್ಲವೂ ಅವರ ಸುಪರ್ದಿಯಲ್ಲೆ ಜರುಗುತ್ತದೆ. ಮನೆಯವರು ಕೇವಲ ಪಾತ್ರಧಾರಿಗಳು ಮಾತ್ರ.

ಎಷ್ಟೋ ಮದುವೆಗಳಲ್ಲಿ ಸ್ಟೇಜ್ ಮೇಲಿನ ವಧು ವರರೆ ಕಾಣುವದಿಲ್ಲ. ಅವರ ಮುಂದೆ ಸಾಲಾಗಿ ನಿಂತ ಫೋಟೋಗ್ರಾಫರ್ ವೀಡಿಯೋಗ್ರಾಫರ್ ಗಳ ಬೆನ್ನು ಮಾತ್ರ ಕಾಣುತ್ತದೆ.ಸ್ಟೇಜ್ ಮುಂದೆ ಕುಳಿತ ಅಥಿತಿಗಳಿಗೆ ಸಮಾರಂಭ ಮುಗಿಯುವವರೆಗೂ ಸ್ಟೇಜ್ ಮೇಲಿನ ವಿದ್ಯಮಾನಗಳು ಕಾಣುವದೆ ಇಲ್ಲ.

ಸಮಾರಂಭಗಳಲ್ಲಿ ಜರುಗುವ ಪದ್ದತಿಗಳು ಕುಳಿತ ಅಷ್ಟು ಜನ ಕಣ್ತುಂಬಿಕೊಳ್ಳುವದಕ್ಕಿಂತ ಕ್ಯಾಮಾರಾದಲ್ಲಿ ಸೆರೆಹಿಡಿಯುವದೆ ಮುಖ್ಯ ವಾಗಿದೆ ಈವಾಗ. ಮತ್ತೆ ಆ ಸಮಾರಂಭದ ವಿಡಿಯೋ ಗಳು ಒಂದಕ್ಕಿಂತ ಹೆಚ್ಚು ಸಲ ನೋಡಲಾಗುವದಿಲ್ಲ.

ಈ ಫೋಟೊದ ಹುಚ್ಚು ಗೀಳಾಗಿ ಪರಿಣಮಿಸುತ್ತದೆ. ಸಮಾರಂಭಗಳಲ್ಲಿ ಒಬ್ಬರಿಗೊಬ್ಬರು ಭೆಟಿಯಾಗಿ ನಗುತ್ತ ಮಾತಾಡುತ್ತ ಇರುವದಕ್ಕಿಂತ ಫೋಟೋ ತೆಗೆಸಿಕೊಳ್ಳವದರತ್ತಲೆ ಹೆಚ್ಚು ಆಸಕ್ತಿ.ಮನೆಯವರರು ಬಂದವರನ್ನು ವಿಚಾರಿಸಿಕೊಳ್ಳುವದಕ್ಕಿಂತ ಫೋಟೋ ತೆಗೆಸಿಕೊಳ್ಳುವದರಲ್ಲೆ ವ್ಯಸ್ತರು. ಅಲ್ಲಿ ಎಲ್ಲರೂ ವಿವಿಧ ಕೋನಗಳಿಂದ ವಿವಿಧ ರೀತಿ ಮುಖಮಾಡುತ್ತ ಫೋಟೋ ಗೆ ಫೋಜ್ ಕೊಡುವವರನ್ನು ಕಾಣಬಹುದು.

ನಾವು ಚಿಕ್ಕವರಾಗಿದ್ದಾಗ ಮದುವೆ ಎಂದರೆ ಬಹಳ ದಿನಗಳಿಂದ ಮುಂದಾಲೋಚನೆ ಮಾಡಿ ನೆರವೇರಿಸುವ ಕಾರ್ಯವಾಗಿತ್ತು. ಮದುವೆ ಎಂದರೆ ಎಲ್ಲಕ್ಕಿಂತ ದೊಡ್ಡ ಜವಾಬ್ದಾರಿ ಯುತ ಕೆಲಸವಾಗಿತ್ತು. ಮನೆಯನ್ನು ಸುಣ್ಣಬಣ್ಣಗಳಿಂದ ಅಲಂಕರಿಸಿ ,ದವಸ ಧಾನ್ಯ ಗಳ ಶುದ್ದಗೊಳಿಸುವಿಕೆ , ನಂತರ ಬೀಸಿ ಹಿಟ್ಟು ಮಾಡಿಟ್ಟು ಕೊಳ್ಳುವದು ,ಖಾರಮಸಾಲೆ ಪುಡಿಗಳ ತಯಾರಿ ,‌ ಜೀರಿಗೆ ಮೆಂತ್ಯಹಿಟ್ಟುಗಳ ತಯಾರಿ ,ಹಪ್ಪಳ ಸಂಡಿಗೆ ಶಾವಿಗೆಗಳ ತಯಾರಿ ಹೀಗೆ ಕೆಲಸವೋ ಕೆಲಸ ಮನೆಮಂದಿಗೆಲ್ಲ.ಆ ಕೆಲಸಗಳಲ್ಲಿ ಒಂದು ರೀತಿಯ ಸಂಭ್ರಮ ವಿರುತಿತ್ತು.ಓಣಿಯ ಜನರೆಲ್ಲ ಸೇರಿ ಬೆರೆತು ಮಾಡುತಿದ್ದರು. ಮನೆಯ ಎಲ್ಲಾ ಸದಸ್ಯರು ಬಟ್ಟೆ ಖರಿದಿಸಿ ಹೊಲಿಸಿಕೊಳ್ಳುವದು ಒಂದು ವಿಶೇಷ ಕೆಲಸವಾಗಿತ್ತು.

ಬಟ್ಟೆ ಖರಿದಿಗೆ ವಧುವಿನ ಕಡೆಯವರೊಂದಿಷ್ಟು ಜನ , ವಧುವಿನ ಕಡೆಯವರೊಂದಷ್ಟು ಜನ ಸೇರಿ  ಬಟ್ಟೆ ಅಂಗಡಿಗೆ ಹೋದರೆ ಅಂಗಡಿಯಲ್ಲಿ ಜಾತ್ರೆಯ ಕಳೆಗಟ್ಟುತಿತ್ತು. ಅಂಗಡಿಯಲ್ಲಿರುವ ಅಷ್ಟು ಬಟ್ಟೆ ತೆಗೆಸಿ ನೋಡಿ ವಧುವರ ಬೀಗರು ಸಂಭಂಧಿಕರಿಗೆಲ್ಲ

ಖರಿದಿಸಿದಾಗ ರಾತ್ರಿಯಾಗಿರುತಿತ್ತು. ದೊಡ್ಡ ದೊಡ್ಡ ಬಟ್ಟೆ ಗಂಟುಗಳು ಮನೆಗೆ ಬಂದು ಬಿದ್ದಾಗಲೇ ಮದುವೆ ಮನೆ ಎಂಬ ಕಳೆ ಬರುವದು.

ಈಗ ಎಲ್ಲರೂ ಅವರವರ ಇಷ್ಟದ ಮೇರೆಗೆ ಇಲ್ಲವೇ ಆನ್ಲೈನ್ ಲ್ಲಿ ಶಾಪಿಂಗ್ ಮಾಡಿ ಮದುವೆ ಖರಿದಿ ಮುಗಿಸುತ್ತಾರೆ.

ಫಂಕ್ಷನ್ ಎಂದರೆ ಅದರ ಹೈಲೈಟ್ ಊಟದ ಮೆನು.

ಸಮಾರಂಭಗಳಲ್ಲಿ ತಿನ್ನುವದಕ್ಕಿಂತ ಚೆಲ್ಲುವದೆ ಹೆಚ್ಚು. ಅಥಿತಿಗಳಿಗಾಗಿ ಅಡುಗೆ ತಯಾರಿಸಿ ಅರ್ದ ಚೆಲ್ಲಲ್ಪಡುತ್ತದೆ.ಫಂಕ್ಷನ್ ಎಂದರೆ   ಪೊಲಾಗುವ ಆಹಾರದ ರಾಶಿಯೆ  ನನ್ನ  ಕಣ್ಮುಂದೆ ಬರುತ್ತದೆ. ಭಪೆ ಸಿಸ್ಟಮ್ ನ ಊಟದ ಪದ್ದತಿಯು ಆಹಾರ ಪೋಲಾಗಲು ಮುಖ್ಯ ಕಾರಣ. ನಿಂತುಕೊಂಡು ಭಾರವಾದ ತಟ್ಟೆ ಕೈಯಲ್ಲಿ ಹಿಡಿದು ತಿನ್ನುವದು ತ್ರಾಸದಾಯಕ.ಮತ್ತೆ ಮತ್ತೆ ನೀಡಿಸಿಕೊಂಡು ತಿನ್ನುವ ತಾಪತ್ರಯ ಬೇಡವೆಂದು ಒಂದೆ ಸಲ ತಟ್ಟೆ ತುಂಬಿಸಿಕೊಂಡು ಬೇಕಾದದ್ದು ಬೇಡವಾದದ್ದೆಲ್ಲ ಬಡಿಸಿಕೊಂಡು ತಿನ್ನಲು ಆಗದೆ ಚಲ್ಲುವದೆ ಹೆಚ್ಚು.

ಈಗೆಲ್ಲ ಹೆಚ್ಚುಹೆಚ್ಚು ಬಗೆಯ ಖಾದ್ಯ ತಯಾರಿಸುವದು ಪ್ರತಿಷ್ಠೆಯ ವಿಷಯವಾಗಿದೆ. ಎಲ್ಲಾ ರುಚಿ ನೋಡುವ ಚಪಲದಿಂದ ಬಡಿಸಿಕೊಂಡು ಬಿಸಾಡುತ್ತಾರೆ. ಫಂಕ್ಷನ್ ಹಾಲ್ನಲ್ಲಿ ಕಾಲಡಿ ಚಲ್ಲಿದ ಆಹಾರ , ಮುಸುರೆ ರಾಶಿ ನೋಡಿದರೆ ವಿಷಾದವಾಗುತ್ತದೆ. ಬೇಸಿಗೆಯಲ್ಲಿ ಹೆಚ್ಚು ಹೆಚ್ಚು ಫಂಕ್ಷನ್ ಗಳಿರುವದರಿಂದ ದಿನಾಲು ಅದೇ ಊಟ ಒಗ್ಗದು . ಮನೆಯಲ್ಲಿ ಊಟ ಮಾಡಿ ಸಮಾರಂಭದಲ್ಲಿ ಭಾಗಿಯಾಗುವರು ಕೆಲವರು.ಅಥಿತಿಗಳಿಗಾಗೆ ಅಡುಗೆ ಮಾಡಿಸಿದ ಅವರ ಅಡುಗೆಯು ಪೋಲು ,ಮನೆಯಲ್ಲಿ ಅಡುಗೆ ಮಾಡುವದು ತಪ್ಪದು.ಒಟ್ಟಿನಲ್ಲಿ ಇಂತಹ ಸಮಾರಂಭಗಳಿಂದ ಯಾವ ಪ್ರಯೋಜನವಿದೆ ತಿಳಿಯದು..! ಆದರೂ ನಾಲ್ಕು ಜನರಿಗೆ ಕರೆದು ಊಟ ಹಾಕದೆ ಇದ್ದರೆ ಅದು ಫಂಕ್ಷನ್ ಎನಿಸುವದಿಲ್ಲ.ಅವರ ಮನೆಯಲ್ಲಿರುವ ಸಮಾರಂಭಗಳಿಗೆಲ್ಲ ಆಮಂತ್ರಿಸಿರುವಾಗ ನಾವೂ ಆಮಂತ್ರಿಸಬೇಕಾಗುತ್ತದೆ. ಆದರೆ ಎಲ್ಲಾ ಸಮಾಭಗಳಲ್ಲೂ ಇದೆ ಪಾಡು , ಹಾಳಾಗುವ ಆಹಾರ. ಮಾಡಿಸಿದ ಆಹಾರ ಇಷ್ಟಪಟ್ಟು ಪ್ರೀತಿಯಿಂದ ತಿನ್ನುವವರಿರುವರೇ..,!

ಇನ್ನೂ ಒಂದು ವಿಷಯ ಹೇಳಲೇಬೆಕಾಗುತ್ತದೆ.ಈಗಿನ ಎಲ್ಲಾ ಸಂಭಂಧಗಳು ಫ್ಯಾಮಿಲಿ ಗ್ರೂಪ್ ಪೋಟೋ ಗಳಲ್ಲಿ ಮಾತ್ರ ನೋಡಲು ಚಂದ. ಭಿನ್ನ ವ್ಯಕ್ತಿತ್ವ , ಭಿನ್ನಾಭಿಪ್ರಾಯಗಳು ಸಹಜ. ಸಂಭಂಧಿಕರನ್ನು ಆಮಂತ್ರಿಸಿ ಯಾರಿಗೂ ಅಸಮಾಧಾನವಾಗದಂತೆ ಅವರನ್ನು ನೋಡಿಕೊಳ್ಳುವದು ಒಂದು ಸವಾಲಿನ ಕೆಲಸ.

ಈಗೀಗ ಸಮಾರಂಭಗಳಲ್ಲಿ ರಿಟನ್  ಗಿಫ್ಟ್ಗಳನ್ನು ಕೊಡುವ ಟ್ರೆಂಡ್ ಹೆಚ್ಚಾಗುತ್ತಿದೆ.ಅಥಿತಿಗಳು ಗಿಫ್ಟ್ ತಂದಾಗ ಅವರಿಗೂ ಏನಾದರು ಕೊಡದೆ ಇರುವದು ಹೇಗೆ . ಅದಕ್ಕೆ ಯಾವುದಾದರೊಂದು ವಸ್ತು  ಕೊಡುವದು .ಈಗ ಎಲ್ಲಾ ವಸ್ತು ಗಳು ಎಲ್ಲರ ಮನೆಯಲ್ಲಿ ಹೆಚ್ಚಾಗಿವೆ.ಇದ್ದ ವಸ್ತು ವನ್ನೆ ಮತ್ತೆ ಕೊಟ್ಟರೆ ಏನು ಮಾಡುವದು , ಕೊಟ್ಟರೆಂದು ತಂದಿಡಬೇಕು ಅಷ್ಟೆ . ಕೊಡದಿದ್ದರೂ ಅಸಮಾಧಾನ . ಎಲ್ಲರೂ ಕೊಡುತ್ತಿರುವಾಗ ನಾವೂ ಕೊಡಬೇಕು ,ಉಪಯೋಗವಾಗಲಿ ಬಿಡಲಿ . ಉಪಯೊಗಕ್ಕೆ ಬರದ ವಸ್ತು ಗಳು ಕೊಡುವದರ ಬದಲು ಹಣ್ಣು ಅಥವಾ ಸಿಹಿ ಪದಾರ್ಥಗಳು ಕೊಟ್ಟರೆ ತಿನ್ನಲಾದರು ಬರುತ್ತದೆ.

ನಮ್ಮಕಡೆ ಮದುವೆ ಇನ್ನಿತರ ಸಮಾರಭಗಳಲ್ಲಿ ಬಟ್ಟೆ ಅಯೇರಿಯದೆ ಒಂದು ದೊಡ್ಡ ಗೋಜಲು. ಇದರಲ್ಲಿ ಮುಳುಗಿದರೆ ಬಂದವರನ್ನು ಗಮನಿಸಲು ಆಗದು.ಅಥಿತಿ ಗಳು ತಂದ ಬಟ್ಟೆ ಗಳನ್ನು ಅಯೇರಿ ಮಾಡಿಕೊಳ್ಳುವದು ,ತಿರುಗಿ ಅವರಿಗೆ ಬಟ್ಟೆಗಳನ್ನು ಮಾಡುವದು . ಇದರಲ್ಲಿ ಮುಳುಗಿದರೆ ಆಯಿತು , ಅಥಿತಿಗಳು ಬರುತ್ತಾರೆ ತಮ್ಮ ಪಾಡಿಗೆ ತಾವು ಊಟ ಮಾಡಿ ಮರುಳುತ್ತಾರೆ.ಮನೆಯ ಗೃಹಿಣಿಯ ಸುಳಿವೆ ಇರುದಿಲ್ಲ ಮನೆಯ ಯಜಮಾನಿಯನ್ನು ಈ ಬಟ್ಟಗಳ ನಡುವೆ ಹುಡುಕಬೇಕಾಗುತ್ತದೆ.ಸಮಾರಂಭ ಮುಗಿದ ಮೇಲೆ ಊಳಿಯುವದು ಬಟ್ಟೆಗಳು ಮಾತ್ರ.ಅವನ್ನೆಲ್ಲ ಸ್ಥಳ ಹೊಂದಿಸಿ ವ್ಯವಸ್ಥಿತವಾಗಿಡುವದು ಮುಂದಿನ ಕೆಲಸ.

ಮನೆಯಲ್ಲಿ ಫಂಕ್ಷನ್ ಗಳು ಮಾಡುವದಕ್ಕಿಂತ ಕೆಲ ಆಪ್ತರನ್ನೊಳಗೊಂಡು ಹೋಟೆಲ್ ಗಳಲ್ಲಿ ಮಾಡುವದು ಉತ್ತಮವೆನಿಸುತ್ತದೆ.ಮನೆಗಳಲ್ಲಿ ಮಾಡಿದ ಫಂಕ್ಷನ್ ಗಳಲ್ಲಿ ಆಹಾರ ಹಾಳಾಗುವಷ್ಟು ಹೋಟೇಲ್ ಗಳಲ್ಲಿ ಆಗುವದಿಲ್ಲ.ಅಲ್ಲಿ ಪ್ಲೇಟ್ ಗೆ ಇಂತಿಷ್ಟು ರೂ ಎಂದು ನಿಗದಿ ಪಡಿಸುವದರಿಂದ ನಿಯಮಿತ ಪ್ರಮಾಣದಲ್ಲಿ  ಹೆಚ್ಚು ಹಾಳಾಗದಂತೆ ಬಡಿಸಿ ಆಹಾರ ಪೋಲಾಗುವದು ನಿಯಂತ್ರಿಸುತ್ತಾರೆ.

ಮನೆಗಳಲ್ಲಿ ನೂರು ಜನರಿಗೆ ತಯಾರಿಸಬೆಕೆಂಬ ಆಹಾರ ಎರಡುನೂರು ಜನರಿಗಾಗುವಷ್ಟಾಗುತ್ತದೆ.

ಮತ್ತು ಫಂಕ್ಷನ್ ಮುಗಿದ ಮೇಲೆ ಮನೆ ಕ್ಲೀನ್ ಮಾಡುವದದು ಒಂದು ದೊಡ್ಡ ಸಮಸ್ಯೆ. ಬಾತ್ ರೂಂ ಗಳ ಸ್ಥಿತಿ ಯಂತೂ ಹೇಳತೀರದು.ಎಲ್ಲಾ ಸುವ್ಯವಸ್ಥೆ ಗೆ ತರಬೇಕಾದರೆ ಸಾಕಪ್ಪ ಈ ಫಂಕ್ಷನ್ ಸಹವಾಸ ಎನಿಸುತ್ತದೆ.

ಆದರೂ ಬೇರೆಯವರ ಮನೆಯ ಸಮಾರಂಭಗಳಿಗೆ ಹೋದಾಗ ನಾವೂ ಅವರಂತೆ ಇಲ್ಲವೆ ಅವರಿಗಿಂತ ಚನ್ನಾಗಿ  ಫಂಕ್ಷನ್ ಮಾಡಬೇಕೆಂಬ ಆಸೆ ಮೊಳೆಯುವದು ಸಹಜ .


One thought on “ಫಂಕ್ಷನ್ ಮಾಡಿ ನೋಡಿ.

  1. ಇದುವೇ ಈಗಿನ ವಾಸ್ತವ. ಚನ್ನಾಗಿ ಚಿತ್ರಿಸಿದ್ದೀರಿ..

Leave a Reply

Back To Top