ಅಂಕಣ ಸಂಗಾತಿ

ಗಜಲ್ ಲೋಕ

ಲೇಖನಿಯ ಕಾರವಾನ್….

ಗಜಲ್ ಕನವರಿಸುವ ಎಲ್ಲ ಹೃದಯಗಳಿಗೆ ಗಜಲ್ ಪ್ರೇಮಿಯ ಪ್ರೀತಿಯ ಸಲಾಂ. ಇಂದು ನಾನು ಗಜಲ್ ಗೋ ಅವರ ಪರಿಚಯದೊಂದಿಗೆ ಬಂದಿಲ್ಲ, ಬದಲಿಗೆ ೨೫ ವಾರಗಳ ನನ್ನ ಅನುಭವವನ್ನು ತಮ್ಮೊಂದಿಗೆ ಹಂಚಿಕೊಳ್ಳಲು ತುದಿಗಾಲಲ್ಲಿ ನಿಂತಿರುವೆ.‌ ಯಾಕೆ ನಿಂತದ್ದು, ಕೂತ್ಕೊಳ್ಳಿ ಅಂತೀರಾ. ಖಂಡಿತ ಆಫ್ ಕೀ ಬಾತ್ ಸರ್ ಆಂಕೋಪರ್! ಅದಕ್ಕಿಂತ ಮುಂಚೆ ಒಂದೆರಡು ಮಾತುಗಳು…!!

ನನ್ನ ಕಣ್ಣಿಂದ ತಪ್ಪಿಸಿಕೊಂಡು ಎಲ್ಲಿಗೆ ಹೋಗುವೆ

ಎಲ್ಲಿ ಹೋದರೂ ನೀನು ಅಲ್ಲಿ ನನ್ನನ್ನೆ ಕಾಣುವೆ

                                          –ಜಿಗರ್          

        ಕನ್ನಡ ಸಾರಸ್ವತ ಲೋಕಕ್ಕೆ ಬಹು ದೀರ್ಘವಾದ ಭವ್ಯ ಪರಂಪರೆ ಇದೆ. ಆ ಪರಂಪರೆಯಲ್ಲಿ ಅಸಂಖ್ಯಾತ ಕಬ್ಬಿಗರು ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿ ಹೋಗಿದ್ದಾರೆ. ಪ್ರಸ್ತುತವಾಗಿ ಅವಲೋಕಿಸಿದಾಗ ಇಂದು ಅಸಂಖ್ಯಾತ ಸಾಹಿತಿಗಳು ಸಾಹಿತ್ಯ ಕೃಷಿಯನ್ನು ಮಾಡುತ್ತಿದ್ದಾರೆ. ಫಲವತ್ತಾದ ಫಸಲನ್ನು ಬೆಳೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾನು ವಾಙ್ಮಯ ಲೋಕಕ್ಕೆ ಅಧಿಕೃತವಾಗಿ ಸಂಪಾದಕೀಯ ಪುಸ್ತಕ ಪ್ರಕಟಣೆಯ ಮೂಲಕ ಅಂಬೆಗಾಲಿಡುತ್ತ ಬಂದಿದ್ದು ೨೦೧೧ರಲ್ಲಿ. ನಂತರದ ದಿನಗಳಲ್ಲಿ ಕಾವ್ಯ, ಕಥೆ, ಸಂಶೋಧನೆ, ವಿಮರ್ಶೆ, ವ್ಯಕ್ತಿ ಪರಿಚಯ, ಶರಣ ಸಾಹಿತ್ಯ ಕುರಿತು ಬರೆಯುತ್ತ ಬಂದೆ. ೨೦೧೯-೨೦೨೦ರ ಕೊರೋನಾ ಕಾಲ ಘಟ್ಟ ಇಡೀ ಮನುಕುಲದ ಜಂಘಾಬಲವನ್ನೆ ಅಲುಗಾಡಿಸಿ ಖಿನ್ನತೆಗೆ ನೂಕಿತು. ಆ ಖಿನ್ನತೆಯಿಂದ ಹೊರಬರಲು ಅಂತರ್ಜಾಲವೊಂದು ಸಾಧನವಾಯಿತು. ಜೊತೆಗೆ ಹಲವಾರು ಸಾಹಿತ್ಯ ಪ್ರಕಾರಗಳನ್ನು ಪರಿಚಯಿಸಿತು. ವಿಶೇಷವಾಗಿ ಭಾರತದಾಚೆಯ ಹಲವು ಸಾಹಿತ್ಯ ರೂಪಗಳೊಂದಿಗೆ ಮುಖಾಮುಖಿಯಾಗಲು ಅನುವು ಮಾಡಿಕೊಟ್ಟಿತು. ಅವುಗಳಲ್ಲಿ ವಿಶೇಷವಾಗಿ ಗಜಲ್ ಎಂಬ ಡ್ರೀಮ್ ಗರ್ಲ್!! ‘ಗಜಲ್’ ಎನ್ನುವುದು ಹಲವು ವೇಳೆ ಇತರ ಸಾಹಿತ್ಯಕ ಪ್ರೇರಣೆಗಳಿಂದ, ಜಗದ ಸಾಂದರ್ಭಿಕ ಘಟನೆಗಳಿಗೆ ಸ್ಪಂದಿಸುವ ತತ್‌ಕ್ಷಣದ ಪ್ರತಿಕ್ರಿಯೆಗಳಿಂದ, ನಮ್ಮನ್ನು ಆವರಿಸಿದ ಗಾಢವಾದ ಚಿಂತನೆಗಳಿಂದ, ನಮ್ಮ ದೀರ್ಘಕಾಲದ ಪರಿಭಾವನೆಗಳಿಂದ, ಇನ್ನೂ ಕೆಲವು ಸಲ ನಮ್ಮ ಎಚ್ಚರದಾಚೆಯ ನಿಗೂಢ ನೆಲೆಗಳಿಂದ ಉದಯಿಸುವ ಒಂದು ವಿಸ್ಮಯ ಲೋಕವಾಗಿದೆ. ‘ಗಜಲ್’ ಎನ್ನುವುದು ಮೂಲತಃ ಒಂದು ಸಂವಾದ. ಮೊದಲು ಅಂತರಂಗದೊಂದಿಗೆ; ಅನಂತರ ಸಹೃದಯರೊಂದಿಗೆ. ಪ್ರತಿಯೊಬ್ಬರ ಅನುಭವವೂ ಸೀಮಿತವಾದುದು. ನಮ್ಮ ದೇಶದಲ್ಲಿ ಜಾತಿ ಪಂಗಡಗಳು ನಮ್ಮ ಅನುಭವಕ್ಕೆ ಒಂದು ಮಿತಿಯನ್ನು ಹಾಕುತ್ತವೆ. ಜೊತೆಗೆ ನಮ್ಮ ಉದ್ಯೋಗ, ನಾವು ವಾಸಿಸುವ ಸ್ಥಳ, ಗ್ರಾಮ ನಗರ ಮೊದಲಾದ ಪರಿಸರ ಭೇದಗಳು.. ಹೀಗೆ ಹಲವು ಮಿತಿಗಳಲ್ಲಿ ನಾವು ಬಾಳುತ್ತೇವೆ. ಈ ಮಿತವಾದ ಅನುಭವದಲ್ಲೂ ಹುದುಗಿರುವ ಸಂಕೇತ ಅಥವಾ ಧ್ವನಿಗಳನ್ನು ಹುಡುಕುವ ಮೂಲಕ ಮಾತ್ರ ಗಜಲ್ ಗೋ ತನ್ನ ಮಿತಿಯಿಂದ ಮೇಲೆ ಏರಬಹುದು. ಜೀವನದ ಸಮಗ್ರತೆಯಲ್ಲಿ ಪಾಲ್ಗೊಳ್ಳುವ ದೃಷ್ಟಿಯಿಂದಲಾದರೂ ಗಜಲ್ ಕಾರ ಬಡತನ, ಅಜ್ಞಾನ, ದಲಿತತೆ ಮೊದಲಾದ ಇತರ ವರ್ಗ ಅಥವಾ ವಲಯಗಳಲ್ಲಿ ಬೆರೆತು ಅನುಭೂತಿಯನ್ನು ಪಡೆಯಬಹುದು. ಆಗ ಗಜಲ್ ಗೆ ಹೆಚ್ಚು ವೈಶಾಲ್ಯ ಬರುತ್ತದೆ. ವಿಶಾಲ ಜೀವನದೊಡನೆ ಸ್ಪಂದಿಸುವ ಗುಣ ಬರುತ್ತದೆ. ಈ ಗಜಲ್ ಬೇಗಂ ಸಾಹೇಬಾ ನನಗೆ ನಾಡಿನ ಹಲವಾರು ದಿಗ್ಗಜರನ್ನು, ಗಜಲ್ ಗೋ ಅವರನ್ನು, ಕಲಾ ಪೋಷಕರನ್ನು, ಕಲಾ ರಸಿಕರನ್ನು ಪರಿಚಯಿಸಿ ಕೊಟ್ಟಿದೆ. ಜೊತೆ ಜೊತೆಗೆ ಸಾಹಿತ್ಯ-ಸಾಂಸ್ಕೃತಿಕ ವಲಯದ ರಾಜಕೀಯ ದಾವ್ ಪೇಜ್ ಗಳನ್ನು ಕಲಿಸುತ್ತಿದೆ. ಆದರೆ ದಡ್ಡನಾದ ನನಗೆ ಕಲಿಯಲು ಆಗುತಿಲ್ಲ.

       ಕನ್ನಡದ ಪ್ರಮುಖ ಮತ್ತು ಸತ್ವಭರಿತವಾದ ಕೆಲವೆ ಆನ್ಲೈನ್ ಪತ್ರಿಕೆಗಳಲ್ಲಿ ‘ಸಂಗಾತಿ’ ಪತ್ರಿಕೆಯು ತುಂಬು ವಿಶಿಷ್ಟ ಹಾಗೂ ವಿಭಿನ್ನ ನೆಲೆಯಲ್ಲಿ ನಿಲ್ಲುತ್ತದೆ. ಪ್ರಗತಿಪರ ಚಿಂತಕರು, ಸಹೃದಯಿಗಳು, ಉತ್ತಮ ಬರಹಗಾರರು ಹಾಗೂ ಪತ್ರಿಕೆಯ ಸಂಪಾದಕರಾದ ಕು.ಸ. ಮಧುಸೂದನ್ ರಂಗೇನಹಳ್ಳಿ ಅವರು ಯುವ ಪ್ರತಿಭೆಗಳಿಗೆ ಮತ್ತು ಎಲೆಮರೆಯ ಕಾಯಿಯಂತೆ ಇರುವ ಲೇಖಕ/ಲೇಖಕಿಯರಿಗೆ ಉತ್ತಮ ವೇದಿಕೆಯನ್ನು ಒದಗಿಸುತ್ತಿರುವುದು ಶ್ಲಾಘನೀಯ. ಅವರ ಪತ್ರಿಕೆಯಲ್ಲಿ ಹಲವು ಬಾರಿ ನನ್ನ ಗಜಲ್ ಗಳು, ಗಜಲ್ ಗೆ ಸಂಬಂಧಿಸಿದ ಲೇಖನಗಳು ಪ್ರಕಟವಾಗಿವೆ. ಅಕ್ಷರ ಲೋಕದ ಅನುಭವಗಳ ವಿಲೆವಾರಿಯೊಂದಿಗೆ ತಮ್ಮ ಪತ್ರಿಕೆಯಲ್ಲಿ ಗಜಲ್ ಕುರಿತು ಅಂಕಣ ಬರಹ ಬರೆಯಲು ಪ್ರೀತಿಯಿಂದ ಆಹ್ವಾನಿಸಿದರು. ನನಗೂ ಬರೆಯುವ ಹಂಬಲ ಇರುವ ಕಾರಣ ಒಪ್ಪಿಕೊಂಡು ಕೆಲವು ವಾರ ಲೇಖನಗಳನ್ನು ನೀಡಿದೆ. ಆದರೆ ಅದು ಮುಂದುವರಿಯಲಿಲ್ಲ!! ಹೀಗೆ ಕೆಲವು ದಿನಗಳು ನಿರಾಯಾಸವಾಗಿ ಉರಿಳಿದವು. ಒಮ್ಮೆ ಅವರಿಗೆ ಕರೆ ಮಾಡಿ ಕುಶಲೋಪರಿ ವಿಚಾರಿಸುತ್ತಿರುವಾಗ ಮತ್ತೆ ಅಂಕಣ ಬರಹ ಮುನ್ನೆಲೆಗೆ ಬಂತು. ಪ್ರತಿ ಗುರುವಾರ ಒಬ್ಬ ಗಜಲ್ ಕಾರರ ಬಗ್ಗೆ ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಡಿ ಎಂದು ಕೇಳಿದರು. ಇದನ್ನು ನಾನು ಗಂಭೀರವಾಗಿ ಪರಿಗಣಿಸಿ ಬರೆಯಲು ಸನ್ನದ್ಧನಾದೆನು. ಅಸಂಖ್ಯಾತ ಗಜಲ್ ಗೋ ಅವರು ನಮ್ಮೊಂದಿಗೆ ಇರುವುದರಿಂದ ಯಾರಿಂದ ನನ್ನ ಗಜಲ್ ಅಂಕಣ ಬರಹ ಆರಂಭಿಸಬೇಕು ಎಂದು ಯೋಚಿಸಿದಾಗ ನನಗೆ ಹೊಳೆದ ಮೊದಲ ಹೆಸರೆ ಶ್ರೀಮತಿ ಪ್ರಭಾವತಿ ದೇಸಾಯಿಯವರು. ವಯಸ್ಸಿನಲ್ಲಿ, ಗಜಲ್ ಕ್ಷೇತ್ರದಲ್ಲಿ, ಹೃದಯವಂತಿಕೆಯಲ್ಲಿ…ಎಲ್ಲದರಲ್ಲೂ ತಮ್ಮ ವಿಶಿಷ್ಟ ಛಾಪನ್ನು ಮೂಡಿಸಿದ ಇವರಿಂದ ಗಜಲ್ ಅಂಕಣ ಬರಹವನ್ನು ಆರಂಭಿಸಿದೆ. ನನ್ನ ಬರಹಕ್ಕೆ ನಾನೆ ಒಂದು ಚೌಕಟ್ಟನ್ನು ಹಾಕಿಕೊಂಡು ಅದರಂತೆ ಬರಿತಾ ಸಾಗಿದೆ. ಗುರುವಾರ ಅಂಕಣ ಬರಹ ಪ್ರಕಟವಾದ ತರುವಾಯವೇ ಮುಂದಿನ ಗುರುವಾರ ಯಾರ ಬಗ್ಗೆ ಬರಿಯೋದು ಎಂಬ ಜಿಜ್ಞಾಸೆ ನನ್ನಲ್ಲಿ ಆರಂಭವಾಗುತಿತ್ತು. ಒಂದು ವಾರ ಮಹಿಳೆ, ಮತ್ತೊಂದು ವಾರ ಪುರುಷ ಎಂಬಂತೆ ನಾನೆ ಒಂದು ಗೆರೆಯನ್ನು ಹಾಕಿಕೊಂಡು ಮುಂದಡಿ ಇಟ್ಟೆ!! ಪ್ರತಿ ವಾರ ಬೇಕಾಗುವ ಗಜಲ್ ಗೋ ಅವರ ಪರಿಚಯಕ್ಕಾಗಿ ಹಲವರನ್ನು ಸಂಪರ್ಕಿಸಿದೆ. ಹಾಗೆ ನೋಡಲೋದರೆ ಈ ಅಂಕಣ ಬರಹ ಹಲವಾರು ಗಜಲ್ ಗೋ ಅವರೊಂದಿಗೆ ಬೆರೆಯಲು ಅನುವು ಮಾಡಿಕೊಟ್ಟಿದೆ. ಜೊತೆ ಜೊತೆಗೆ ಹಲವಾರು ಗಜಲ್ ಸಂಕಲನಗಳ ಅನುಸಂಧಾನಕ್ಕೂ ನಾಂದಿಯಾಡಿದೆ. ನಾಡಿನುದ್ದಕ್ಕೂ ಪಸರಿಸಿರುವ ಗಜಲ್ ಗಾರುಡಿಗರನ್ನು ಸಂಪರ್ಕಿಸಿದೆ. ಹಲವರು ತುಂಬಾ ಪ್ರೀತಿಯಿಂದ ಮಾತಾಡಿ ತಮ್ಮ ಪುಸ್ತಕ, ಪರಿಚಯದ ಜೊತೆಗೆ ತಮ್ಮ ಒಂದು ಭಾವಚಿತ್ರವನ್ನು ಕಳುಹಿಸಿ ಕೊಟ್ಟು ನನ್ನ ಬರವಣಿಗೆಗೆ ಸಾಥ್ ನೀಡಿದರು. ನಾನು ಬರೆದಾದ ಮೇಲೆ ಅಂಕಣವನ್ನು ಓದಿ ಖುಷಿ ಪಟ್ಟರು. ಕೆಲವರಂತೂ ‘ನಾ ನಿಮ್ಮ ಬರವಣಿಗೆಯ ಅಭಿಮಾನಿಯಾಗಿರುವೆ’ ಎಂದೆಲ್ಲ ಅಭಿಮಾನ ವ್ಯಕ್ತಪಡಿಸಿದರು. ಅವರ ಅಭಿಮಾನಕ್ಕೆ ಪ್ರತಿಯಾಗಿ ನಾನೇನು ನೀಡಬಲ್ಲೆ ಹೇಳಿ…!! ತುಂಬಾ ವಿನಯದಿಂದ ತಲೆ ಬಾಗಿರುವೆ!!

       ಇಲ್ಲಿಯವರೆಗೆ ನಾನು ‘೨೫’ ಅಂಕಣಗಳನ್ನು ಬರೆದಿರುವೆ. ಆ ಎಲ್ಲ ಬರಹಗಳು ನನ್ನವೆಯಾದರೂ ಎಲ್ಲವೂ ತೃಪ್ತಿಯನ್ನು ನೀಡಿವೆಯೆಂದರೆ ಅತಿಶಯೋಕ್ತಿಯಾದೀತು. ನನಗರಿವೆ ಇಲ್ಲದಂತೆ ಕೆಲವರ ಪರಿಚಯ ಅದ್ಭುತವಾಗಿ ಮೂಡಿಬಂದಿವೆ. ಇನ್ನೂ ಕೆಲವರ ಪರಿಚಯಗಳು ಏನೋ ಕೊರತೆಯಿಂದ ಬಳಲಿದಂತೆ ಭಾಸವಾಗಿವೆ. ಬಹುಶಃ ಇದಕ್ಕೆಲ್ಲ ಕಾರಣ ನನ್ನಲ್ಲಿ ಅವರ ಬಗೆಗೆ ಸಂಗ್ರಹಗೊಂಡ ವೈಯಕ್ತಿಕ ಮಾಹಿತಿಗಳಿರಬಹುದು !! ಇದರಂತೆಯೇ ಕೆಲವು ಅಂಕಣಗಳು ಸುಲಲಿತವಾಗಿ ನನ್ನಿಂದ ಬರೆಯಿಸಿಕೊಂಡಿವೆ, ಇನ್ನೂ ಕೆಲವೊಂದನ್ನು ಬೆನ್ನು ಹತ್ತಿ ಬರೆದು ದಣಿದಿರುವೆ. ಇವೆಲ್ಲವೂ ನನಗೆ ಹೊಸ ಅನುಭವಗಳೆ!! ಈ ಎಲ್ಲ ಅನುಭವಗಳನ್ನು ನಾನು ತುಂಬಾ ಎಂಜಾಯ್ ಮಾಡಿದ್ದೇನೆ. ಎಂಜಾಯ್ ಅಂದಮಾತ್ರಕ್ಕೆ ಕಹಿ ಅನುಭವ ಆಗಲಿಕ್ಕಿಲ್ಲ ಎಂದು ತಿಳಿಯಬೇಡಿ. ಸಿಹಿಯೊಂದಿಗೆ ಕಹಿ ಇರದೆ ಹೋದರೆ ಹೇಗೆ ಹೇಳಿ….!! ಕೆಲವರು ತಮಗೆ ಪ್ರಚಾರ ಬೇಡವೆಂದು ನಯವಾಗಿಯೆ ದೂರ ಸರಿಸಿದರು. ಇನ್ನೂ ಹಲವರು ನಾನು ಕರೆ ಮಾಡಿದಾಗ, ಸಂದೇಶ ಕಳುಹಿಸಿದಾಗ ಸ್ಪಂದಿಸದೆ ಹೋದರು. ಇನ್ನೂ ಕೆಲ ಗಜಲ್ ಬರಹಗಾರರು ಪುಸ್ತಕ ಮತ್ತು ಮಾಹಿತಿ ನೀಡುವುದಾಗಿ ಹೇಳಿದರೆ ಹೊರತು ಏನನ್ನೂ ನೀಡಲಿಲ್ಲ. ಅವರು ನೀಡಿದ್ದು ಮಾತ್ರ ಬರಿ ತಾರೀಖ್..!! ಕಾರಣಗಳು ಗೊತ್ತಿಲ್ಲ… ಕೆಲವರಿಗೆ ನನ್ನ ಬರಹ ಅಷ್ಟು ಸತ್ವಯುತ ಅನಿಸದೆ ಇರಬಹುದು. ಖಂಡಿತ, ನಾನೇನೂ ಪಂಡಿತನಲ್ಲ. ಪ್ರಜ್ಞಾಪೂರ್ವಕವಾಗಿ ಒಪ್ಪಿಕೊಳ್ಳುವೆ ನಾನೊಬ್ಬ ಪಾಮರ ಎಂದು.  ಹಾಗಂತ ನನಗೆನೂ ಬೇಸರವಿಲ್ಲ. ನಿರಾಸೆಯಂತೂ ಇಲ್ಲವೇ ಇಲ್ಲ. ಎಲ್ಲಿಯವರೆಗೆ ತಮ್ಮೆಲ್ಲರ ಪ್ರೀತಿ, ವಿಶ್ವಾಸ ಹಾಗೂ ಹಾರೈಕೆ ಇರುತ್ತದೆಯೊ ಅಲ್ಲಿಯವರೆಗೆ ಗುರುವಾರದ ಮೆಹಫಿಲ್ ನಲ್ಲಿ ತಮ್ಮೊಂದಿಗೆ ರುಬರು ಆಗತ್ತಲೇ ಇರುವೆ. ಈ ಒಂದು ಅನುಪಮ ಅಭಿವ್ಯಕ್ತಿಗೆ ಕಾರಣೀಭೂತರಾದ ಸಂಗಾತಿ ಪತ್ರಿಕೆಯ ಸಂಪಾದಕ ಮಂಡಳಿಗೆ, ವಿಶೇಷವಾಗಿ ಶ್ರೀ ಕು.ಸ. ಮಧುಸೂದನ ರಂಗೇನಹಳ್ಳಿ ಅವರಿಗೆ ಪ್ರಾಂಜಲ ಮನಸ್ಸಿನಿಂದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ನಿಮ್ಮ ಜೀವನವನ್ನು ಒಬ್ಬ ವ್ಯಕ್ತಿ ಮಾತ್ರ ಬದಲಿಸಬಹುದು

ವ್ಯಕ್ತಿ ಬೇರೆ ಯಾರು ಅಲ್ಲ, ಅದು ನೀವೆ

                           —ಜಲಾಲುದ್ದೀನ್ ರೂಮಿ

ಸದ್ದು ಗದ್ದಲವಿಲ್ಲದೆ ಗಡಿಯಾರದ ಮುಳ್ಳುಗಳು ಚಲಿಸುತಿವೆ . ಆ ಮುಳ್ಳಿನ ಮೊನಚಿನಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ. ಎಲ್ಲರೂ ತಲೆ ಬಾಗಲೆ ಬೇಕು…!!

ಮತ್ತೆ ಮುಂದಿನ ವಾರ, ಗುರುವಾರ ತಮ್ಮ ಮುಂದೆ ಬಂದು ನಿಲ್ಲುವೆ, ಗಜಲ್ ಗಾರುಡಿಗನ ಹೆಜ್ಜೆ ಗುರುತುಗಳೊಂದಿಗೆ!! ನಿರೀಕ್ಷಿಸುವಿರಲ್ಲವೆ…

ಎಲ್ಲರಿಗೂ ಹೃನ್ಮನದಿ ವಂದನೆಗಳು..


ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

One thought on “

  1. ತುಂಬು ಹೃದಯದ ಧನ್ಯವಾದಗಳು ಸರ್ ಜೀ ತಮ್ಮ ಈ ಸಾಹಿತ್ಯ ಸೇವೆಗೆ…

Leave a Reply

Back To Top