ಧಾರಾವಾಹಿ

ಆವರ್ತನ

ಅದ್ಯಾಯ-57

ಇತ್ತ ಶಂಕರ ತನ್ನ ಕುಯುಕ್ತಿಯಿಂದಲೂ, ಸಮಯಕ್ಕೆ ತಕ್ಕಂತೆ ಸಿಗುತ್ತಿದ್ದ ಗುರೂಜಿಯವರ ಮರುಳು ಮಾರ್ಗದರ್ಶನದಿಂದಲೂ ಶ್ರೀಮಂತಿಕೆಯ ತುತ್ತ ತುದಿಗೇರಿ ಅಹಂಕಾರದಿಂದ ಮೆರೆಯುತ್ತಿದ್ದ. ಆದರೆ ಆ ಸಂದರ್ಭದಲ್ಲಿಯೇ ಗುರೂಜಿಯವರ ಹೃದಯಾಘಾತದ ಸುದ್ದಿ ಅವನನ್ನು ಕಂಗೆಡಿಸಿಬಿಟ್ಟಿತು. ಕೂಡಲೇ ಆಸ್ಪತ್ರೆಗೆ ಧಾವಿಸಿದ. ಗುರೂಜಿಯವರ ಸ್ಥಿತಿಯನ್ನು ನೋಡಿ ತೀವ್ರ ದುಃಖಪಟ್ಟ. ಜೊತೆಗೆ ದೇವಕಿಯಿಂದ ವಿಷಯವನ್ನು ತಿಳಿದುಕೊಂಡು ಅವಳು ಕೊಟ್ಟ ಪತ್ರವನ್ನು ಓದಿದ ಅವನಿಗೂ ಹೆದರಿಕೆಯಿಂದ ತಲೆ ಗಿರ್ರನೆ ತಿರುಗಿದಂತಾಯಿತು. ಆದರೆ ಅವನು ಗುರೂಜಿಯಷ್ಟು ದುರ್ಬಲನಾಗಿರಲಿಲ್ಲ. ಆದ್ದರಿಂದ ಆ ವಿಷಯದ ಬಗ್ಗೆ ಅವನು ಸೋಲೊಪ್ಪಿಕೊಳ್ಳಲಿಲ್ಲ. ಬದಲಿಗೆ ಅಲ್ಲೇ ಕುಳಿತು ಯೋಚಿಸತೊಡಗಿದ. ಗುರೂಜಿಯವರು ಹುಷಾರಾಗುವ ಪರಿಸ್ಥಿತಿಯಲ್ಲಿದ್ದರೆ ಅವರೊಡನೆ ಚರ್ಚಿಸಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಿತ್ತು. ಆದರೆ ಅವರು ಈಗಲೋ ಆಗಲೋ ಎನ್ನುವಂತಿದ್ದಾರೆ. ಹಾಗಾಗಿ ಈ ಗ್ರಹಾಚಾರವೆಲ್ಲೋ ತನ್ನ ಬುಡಕ್ಕೇ ಬಂದಪ್ಪಳಿಸುವ ಕಾಲ ದೂರವಿಲ್ಲ ಎಂದುಕೊಂಡವನು ಆಸ್ಪತ್ರೆಯ ಸಿಮೆಂಟು ಬೆಂಚಿನ ಮೇಲೆ ಸುಮಾರು ಹೊತ್ತು ಕಲ್ಲಾಗಿ ಕುಳಿತುಬಿಟ್ಟ.

   ಆದರೆ ಅವನ ಶ್ರೀಮಂತಿಕೆಯ ಮದವು ಅಷ್ಟುಬೇಗನೇ ಅವನನ್ನು ಕುಗ್ಗಲು ಬಿಡಲಿಲ್ಲ. ಅದು ಕೂಡಲೇ ಎಚ್ಚೆತ್ತುಕೊಂಡಿದ್ದು,‘ಹೇ ಮುಠ್ಠಾಳ… ನಾನಿರುವಾಗ ನೀನಗ್ಯಾಕೋ ಇಂಥ ಭಯ…? ಒಮ್ಮೆ ನನ್ನನ್ನು ನಾನೇ ಸೂಚಿಸುವ ದಾರಿಯಲ್ಲಿ ಸ್ವತಂತ್ರವಾಗಿ ಹರಿಯಲು ಬಿಟ್ಟು ನೋಡೋ. ಆ ನಿನ್ನ ಸರಕಾರಿ ಅಧಿಕಾರಿಗಳನ್ನೂ ಮತ್ತವರ ಕಾನೂನು ಕಾಯ್ದೆಗಳನ್ನೂ ಅಷ್ಟೇ ಏಕೆ ಪ್ರಸ್ತುತ ಸರಕಾರವನ್ನೇ ಬಾಯಿ ಮುಚ್ಚಿಸಿ ನಿನ್ನ ಸಮಸ್ಯೆಯನ್ನು ಚಿಟಿಕೆ ಹೊಡೆದಂತೆ ನಿವಾರಿಸಿಬಿಡುತ್ತೇನೆ!’ ಎಂದು ಅಟ್ಟಹಾಸ ಮಾಡಿತು. ಅಷ್ಟು ಅನ್ನಿಸಿದ್ದೇತಡ ಶಂಕರ ತಟ್ಟನೆ ಚುರುಕಾದ. ಹೌದು! ಇಂತಹ ಸಣ್ಣಪುಟ್ಟ ತೊಂದರೆಗಳಿಗೆಲ್ಲ ತಾನುತಲೆಕೆಡಿಸಿಕೊಳ್ಳುವುದು ನಾಚಿಕೆಗೇಡಿನ ವಿಷಯ. ನಡುಗತ್ತಲಲ್ಲಿ ಮರ್ಮಾಂಗಕ್ಕೆ ತುಳಿದು ಕೊಲೆ ಮಾಡಿ ಗೆದ್ದು ಬಂದ ನನ್ನಂಥವನ ಜಾಯಮಾನಕ್ಕಿದು ಎಂದಿಗೂ ಒಪ್ಪುವಂಥದ್ದಲ್ಲ! ಎಂದು ತಲೆಕೊಡವಿಕೊಂಡವನು ದಢಕ್ಕನೆದ್ದು ನಿಂತ.‘ನೀವೇನೂ ಹೆದರಬೇಡಿಯಮ್ಮ. ಈ ನೋಟೀಸಿನ ವಿಷಯವನ್ನು ನನಗೆ ಬಿಟ್ಟು ನಿಶ್ಚಿಂತೆಯಾಗಿ ಗುರೂಜಿಯವರ ಆರೋಗ್ಯ ನೋಡಿಕೊಳ್ಳಿ. ಮತ್ತೆ ಬರುತ್ತೇನೆ’ ಎಂದು ದೇವಕಿಗೆ ಧೈರ್ಯ ಹೇಳಿ ನೋಟೀಸು ಹಿಡಿದುಕೊಂಡು ಹೊರಟುಬಿಟ್ಟ.

   ಆಸ್ಪತ್ರೆಯಿಂದ ಸೀದಾ ಲಾಯರ್ ರಘುರಾಮ್ ಅವರ ಕಛೇರಿಗೆ ಧಾವಿಸಿದ. ರಘುರಾಮರಿಗೆ ಶಂಕರನ ಪರಿಚಯವಿತ್ತು ಹಾಗೂ ಅವನ ವ್ಯವಹಾರದ ಪೂರ್ವಪರವೂ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಅವರು ಅವನನ್ನು ಆದರದಿಂದ ಬರಮಾಡಿಕೊಂಡರು. ಕುಶಲೋಪರಿ ವಿಚಾರಿಸುತ್ತಲೇ ಅವನ ಮುಖದಲ್ಲಿ ವ್ಯಕ್ತವಾಗುತ್ತಿದ್ದ ಆತಂಕವನ್ನೂ ಗಮನಿಸಿದರು. ‘ಹೌದೂ ಶಂಕರ್ ಅವರೇ, ಏಕನಾಥ ಗುರೂಜಿಯವರಿಗೆ ಹಾರ್ಟ್ ಅಟ್ಯಾಕ್ ಆಯಿತಂತಲ್ಲ ಈಗ ಹೇಗಿದ್ದಾರೆ…?’ ಎಂದು ವಿಚಾರಿಸಿದರು.‘ಹ್ಞೂಂ! ವಕೀಲರೇ, ನಾನೀಗ ಅಲ್ಲಿಂದಲೇ ಬಂದಿರುವುದು. ನಮ್ಮಂಥವರಿಗೆ ಬೆನ್ನೆಲುಬಾಗಿದ್ದ ದೇವರಂಥ ಮನುಷ್ಯ ಅವರು. ಆದರೆ ಇನ್ನೂ ಇಪ್ಪತ್ನಾಲ್ಕು ಗಂಟೆಗಳ ಕಾಲ ಏನೂ ಹೇಳಲು ಸಾಧ್ಯವಿಲ್ಲ ಅಂತ ಡಾಕ್ಟ್ರು ಹೇಳಿದ್ದಾರೆ! ಅದರಿಂದ ನನಗಂತೂ ತಲೆಕೆಟ್ಟು ಹೋಗಿದೆ. ಅದೇ ವಿಷಯವಾಗಿ ನಿಮ್ಮಲ್ಲಿಗೆ ಬಂದಿರುವುದು!’ಎಂದು ವಿಚಲಿತನಾಗಿ ಹೇಳಿದವನು ಗುರೂಜಿಯವರಿಗೆ ಬಂದ ಪತ್ರವನ್ನು ತೆಗೆದು ಅವರ ಮುಂದಿಟ್ಟ.‘ಅಂಥದ್ದೇನೂ ಆಗಲಿಕ್ಕಿಲ್ಲ ಧೈರ್ಯವಾಗಿರಿ…!’ಎಂದ ವಕೀಲರು ಪತ್ರವನ್ನೆತ್ತಿ ಮೇಲೆ ಮೇಲೆ ಕಣ್ಣಾಡಿಸಿದರು. ಬಳಿಕ ಗಂಭೀರವಾಗೇನೋ ಯೋಚಿಸಿದರು.‘ಈ ಪತ್ರದ ಬಗ್ಗೆ ನಿಮಗೆ ಯಾಕೆ ಚಿಂತೆ ಶಂಕರ್ ಅವರೇ…?’ ಎಂದು ತಮಗೇನೂ ತಿಳಿಯದಂತೆ ಪ್ರಶ್ನಿಸಿದರು.

‘ಹ್ಞಾಂ! ಅದು ಹಾಗಲ್ಲ ವಕೀಲರೇ… ಛೇ! ನಾನೊಬ್ಬ. ಮುಖ್ಯ ವಿಷಯವನ್ನೇ ಹೇಳದೆ ಬರೇ ಪತ್ರ ತೋರಿಸಿದರೆ ನಿಮಗೇನು ಅರ್ಥವಾಗುತ್ತದೆ?’ ಎಂದು ಆತಂಕದ ನಡುವೆಯೂ ನಕ್ಕವನು ತನ್ನ ಮತ್ತು ಗುರೂಜಿಯವರ ಭೂವ್ಯವಹಾರಗಳು ಹಾಗೂ ಅವರೊಂದಿಗೆ ವ್ಯವಹರಿಸಿರುವ ಇನ್ನೂ ಹಲವರ ಹೆಸರುಗಳು ಸರಕಾರಕ್ಕೆ ಸಿಕ್ಕಿರುವುದನ್ನೂ ಅಂಥವರನ್ನು ಸದ್ಯದಲ್ಲೇ ವಿಚಾರಣೆಗೊಳಪಡಿಸುವ ಸೂಚನೆ ಆ ಪತ್ರದಲ್ಲಿರುವುದನ್ನೂ, ತನ್ನೊಳಗೆ ಧುಮುಗುಟ್ಟುತ್ತಿದ್ದ ತಳಮಳವನ್ನು ಹತ್ತಿಕ್ಕಿಕೊಳ್ಳುತ್ತ ವಕೀಲರಿಗೆ ವಿವರಿಸಿದ. ‘ಓಹೋ ಇದಾ ವಿಷಯಾ..!’ ಎಂದ ರಘುರಾಮರು ಪತ್ರವನ್ನು ತೆಗೆದುಕೊಂಡು ಮತ್ತೊಮ್ಮೆ ದೀರ್ಘವಾಗಿ ಓದುವಂತೆ ನಟಿಸಿದರು. ಬಳಿಕ,‘ಶಂಕರ್ ಅವರೇ ಈಗ ವಿಷಯ ಸ್ಪಷ್ಟವಾಯಿತು. ಯಾವುದಕ್ಕೂ ನೀವು ಇನ್ನು ಮುಂದೆ ಸ್ವಲ್ಪ ಜಾಗ್ರತೆಯಿಂದ ಇರುವುದು ಒಳ್ಳೆಯದು. ಯಾಕೆಂದರೆ ಈ ಲೆಟರ್‍ನಲ್ಲಿ ಉಲ್ಲೇಖಿಸಿರುವ ಅರಣ್ಯ ಮತ್ತು ವನ್ಯಜೀವಿ ಕಾನೂನು ಓಬಿರಾಯನ ಕಾಲದಲ್ಲಿ ರಚಿಸಲ್ಪಟ್ಟಿದ್ದು ಮಾತ್ರವಲ್ಲದೇ ಅದು ಮೊನ್ನೆ ಮೊನ್ನೆಯವರೆಗೆ ಫೈಲಿನಲ್ಲೇ ಉಳಿದಿತ್ತಾದರೂ ಈಚೆಗೆ ಪರಿಸರಪ್ರೇಮಿಗಳ ಮತ್ತೊಂದಷ್ಟು ತಜ್ಞರ ಹಾಗೂ ವಿಜ್ಞಾನಿಗಳ ಒತ್ತಡ, ಹೋರಾಟಗಳಿಂದಾಗಿ ಮರು ಜೀವ ಪಡೆದುಕೊಂಡು ತುಂಬಾ ಸ್ಟ್ರಾಂಗಾಗಿಬಿಟ್ಟಿದೆ. ಅದರ ನಿಯಮದ ಪ್ರಕಾರ ಗುರೂಜಿಯವರ ಮೇಲೆ ಈಗ ಹೊರಿಸಲಾಗಿರುವ ಆರೋಪಗಳು ಅರಣ್ಯಕಾಯ್ದೆಯ ಯಾವ್ಯಾವ ಸೆಕ್ಷನ್‍ಗಳಲ್ಲಿ ಬರುತ್ತವೆ ಎಂಬುದನ್ನು ನಾನೂ ಸ್ಟಡಿ ಮಾಡಿಯೇ ಹೇಳಬೇಕಾಗುತ್ತದೆ. ಆದರೂ ಈ ಕೇಸು ಹೇಗೆ ಮತ್ತು ಯಾವ ಯಾವ ರೀತಿಯಲ್ಲಿ ಮುಂದೆ ಸಾಗುತ್ತ ಎಂಥ ಮಟ್ಟಕ್ಕೆ ಹೋಗಿ ತಲುಪುತ್ತದೆ ಎಂದು ಈಗಲೇ ಹೇಳಲು ಬರುವುದಿಲ್ಲ. ಈ ಲೆಟರಿನ ವಿಷಯ ಮತ್ತು ಆರೋಪಗಳನ್ನು ಗಮನಿಸಿದರೆ ಗುರೂಜಿಯವರು ಒಂದುವೇಳೆ ಬದುಕಿದರೆ ಅವರ ಜೀವನಾಂತ್ಯದವರೆಗೂ ಇದರಿಂದ ದೊಡ್ಡಮಟ್ಟದ ಪೆಟ್ಟು ಬೀಳುವ ಸಾಧ್ಯತೆಯಿದೆ!’ ಎಂದರು ಗಂಭೀರವಾಗಿ.

   ಅಷ್ಟು ಕೇಳಿದ ಶಂಕರ, ವಕೀಲರು ಅಲ್ಲೇ ತನ್ನ ಕತ್ತು ಹಿಸುಕಿದಂತೆನಿಸಿ ನರಳಾಡಿಬಿಟ್ಟ. ಅದನ್ನು ಗಮನಿಸಿದ ವಕೀಲರು,‘ಆದರೆ ನೀವೇನೂ ಚಿಂತಿಸುವ ಅಗತ್ಯವಿಲ್ಲ. ನಿಮಗೂ ನೋಟೀಸು ಬರುತ್ತದೆ. ಬಂದ ಮೇಲೆ ಅದನ್ನು ನೋಡಿಕೊಂಡು ಮುಂದುವರೆದರಾಯ್ತು. ಅಷ್ಟರವರೆಗೆ ನಿಶ್ಚಿಂತೆಯಾಗಿರಿ. ಎಲ್ಲದಕ್ಕೂ ಪರಿಹಾರವಿದ್ದೇ ಇರುತ್ತದಲ್ಲವಾ, ನೋಡುವ. ಆದರೆ ಒಂದು ವಿಷಯ ಈಗಲೇ ಹೇಳಿಬಿಡುತ್ತೇವೆ. ಈ ಕೇಸಿನಲ್ಲಿ ಇಬ್ಬರು ಮುಖ್ಯ ವ್ಯಕ್ತಿಗಳ ಸಹಕಾರ ನಮಗೆ ಚೆನ್ನಾಗಿ ಬೇಕಾಗುತ್ತದೆ. ಒಬ್ಬರು ನಮ್ಮ ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತೊಬ್ಬರು ಜಡ್ಜ್! ಅವರು ಕರುಣೆ ತೋರಿಸಿದರೆಂದರೆ ಗುರೂಜಿ ಮತ್ತು ನೀವು ಗೆದ್ದಂತೆಯೇ ಸರಿ! ಹಾಗಾಗಿ ನೀವು ಎಲ್ಲದಕ್ಕೂ ತಯಾರಿದ್ದರಾಯ್ತು. ಮಿಕ್ಕಿದ್ದನ್ನು ನಾವು ನೋಡಿಕೊಳ್ಳುತ್ತೇವೆ!’ಎಂದು ಹೇಳುತ್ತ ಅವನಲ್ಲಿ ಆತಂಕವನ್ನೂ, ಭರವಸೆಯನ್ನೂ ಒಟ್ಟೊಟ್ಟಿಗೆ ಮೂಡಿಸಿದರು. ಆದರೂ ಅವರ ಮುಕ್ಕಾಲು ಪಾಲು ಮಾತುಗಳನ್ನು ಶಂಕರ ಬೆವರುತ್ತಲೇ ಕೇಳಿದವನು,‘ನೀವು ಯಾವುದಕ್ಕೂ ಚಿಂತಿಸುವ ಅಗತ್ಯವಿಲ್ಲ. ನಾವಿದ್ದೇವೆ!’ ಎಂದ ಅವರ ಭರವಸೆಯ ನುಡಿಮುತ್ತುಗಳು ಅವನಲ್ಲಿ ತುಸು ಆಶಾಭಾವನೆಯನ್ನೂ ಮೂಡಿಸಿದವು. ಹಾಗಾಗಿ ದೀರ್ಘ ಉಸಿರೆಳೆದುಕೊಂಡವನು ರಪ್ಪನೇ ಐನೂರರ ನೋಟಿನ ಕಂತೆಯೊಂದನ್ನು ತೆಗೆದು ಅವರ ಮುಂದಿಟ್ಟು, ‘ಆಯ್ತು ವಕೀಲರೇ. ಈ ಕೇಸನ್ನು ನೀವೇ ಗೆಲ್ಲಿಸಿಕೊಡಬೇಕು! ಖರ್ಚಿನ ಬಗ್ಗೆ ಏನೂ ಚಿಂತಿಸಬೇಡಿ. ನಾನೂ ಗುರೂಜಿಯವರೂ ಕೂಡಿಯೇ ಎಲ್ಲಾ ವ್ಯವಸ್ಥೆ ಮಾಡುತ್ತೇವೆ!’ಎಂದು ಭರವಸೆ ಕೊಟ್ಟ. ಆದರೆ ಅತ್ತ ನೋಟಿನ ಕಟ್ಟು ನೋಡಿ ಅರಳಬೇಕಿದ್ದ ವಕೀಲರ ಮುಖವು ಯಾಕೋ ಹುಬ್ಬುಗಂಟಿಕ್ಕಿತು. ಅದನ್ನು ಗಮನಿಸಿದ ಶಂಕರ, ಅರೆರೇ…ಇವರ ಮುಖವೇಕೆ ಹಾಗಾಯಿತು? ಎಂದು ಅನುಮಾನದಿಂದ ಯೋಚಿಸಿದ. ಆದರೂ ಉತ್ತರ ಹೊಳೆಯಲ್ಲಿಲ್ಲ. ಆ ಕುರಿತು ಹೆಚ್ಚು ತಲೆ ಕೆಡಿಸಿಕೊಳ್ಳಲು ಅವನಲ್ಲೂ ಚೈತನ್ಯವಿಲ್ಲದಿದ್ದುದರಿಂದ ವಕೀಲರಿಂದ ಬೀಳ್ಗೊಂಡು ಮನೆಗೆ ಹಿಂದಿರುಗಿದ.

   ಭಯ, ಹತಾಶೆಯಿಂದಲೇ ಮನೆಗೆ ಬಂದ ಶಂಕರ ಬಚ್ಚಲಿಗೆ ಹೋಗಿ ಕೈಕಾಲು ಮುಖ ತೊಳೆದು ಬಂದು ಒಲ್ಲದ ಮನಸ್ಸಿನಿಂದ ಮಧ್ಯಾಹ್ನದ ಊಟಕ್ಕೆ ಕುಳಿತ. ಪತ್ನಿ ವಿನೋದಾ ಯಾಂತ್ರಿಕವಾಗಿ ಬಡಿಸಿದ್ದನ್ನು ಅರ್ಧಂಬರ್ಧ ಉಂಡೆದ್ದು ಕೈತೊಳೆದುಕೊಂಡು ಕೋಣೆಗೆ ಹೋಗಿ ಹಾಸಿಗೆಗೆ ಒರಗಿದ. ಸುಮಾರು ಹೊತ್ತು ಅವನಿಗೆ ನಿದ್ದೆ ಹತ್ತಲಿಲ್ಲ. ಆದರೆ ಬಳಿಕ ಇನ್ನೇನು ಮಂಪರು ಕವಿಯಿತು ಎಂಬಷ್ಟರಲ್ಲಿ ಕರ್ಣಕಠೋರವಾದ ರಂಪಾಟವೊಂದು ಅವನ ಕಿವಿಗಪ್ಪಳಿಸಿತು.  ಬೆಚ್ಚಿಬಿದ್ದು ಎದ್ದು ಕುಳಿತ. ಕನಸೋ, ವಾಸ್ತವವೋ ಎಂದು ತಿಳಿಯದೆ ಕೆಲವುಕ್ಷಣ ಕಿವಿಗೊಟ್ಟು ಕೇಳಿದ. ಗಲಾಟೆಯು ಮನೆಯ ಒಳಗಿನಿಂದಲೇ ಕೇಳಿಸುತ್ತಿತ್ತು. ವಿನೋದಾ ಮತ್ತು ಮಗ ಅಭಿಷೇಕನ ನಡುವೆ ಜಗಳ ನಡೆಯುತ್ತಿತ್ತು. ಶಂಕರನ ತಲೆ ಮೊದಲೇ ಕೆಟ್ಟಿತ್ತು. ಅದರ ಮೇಲೆ ಈಗ ಸಂಸಾರದ ಕಿತ್ತಾಟವನ್ನೂ ಕೇಳಿಸಿಕೊಂಡವನು ಇನಷ್ಟು ಉದ್ರಿಕ್ತನಾದ. ರಪ್ಪನೆ ಹೊರಗೆ ಧಾವಿಸಿದವನು ಏನೊಂದೂ ವಿಚಾರಿಸದೆ ಹೆಂಡತಿಯ ಜುಟ್ಟು ಹಿಡಿದುಕೊಂಡು ಮುಖ ಮೂತಿ ನೋಡದೆ ಬಡಿದು ತುಳಿದು ಮೂಲೆಗೆ ತಳ್ಳಿಬಿಟ್ಟ. ಅವನ ರೌದ್ರಾವತಾರ ಕಂಡ ಅಭಿಷೇಕ್ ಭಯದಿಂದ ಕಂಪಿಸುತ್ತ ಮೂಲೆ ಸೇರಿದ್ದ. ಅವನನ್ನೂ ಹಿಡಿದು ನೆಲಕ್ಕೆ ಕೆಡವಿ ಮನ ಬಂದಂತೆ ಥಳಿಸಿದ. ಆ ಮುಗ್ಧ ಹುಡುಗ ಹುಟ್ಟಿನಿಂದಲೇ ಅಪ್ಪ ಅಮ್ಮನ ಪ್ರೀತಿ ಮತ್ತು ಭದ್ರತೆಗಳಿಂದ ವಂಚಿತನಾಗಿ ಗಂಡಹೆಂಡಿರ ಗಲಾಟೆ ಮನಸ್ತಾಪಗಳ ನಡುವೆ ಘಾಸಿಗೊಳ್ಳುತ್ತಲೇ ಬೆಳೆಯುತ್ತಿದ್ದವನು ಸ್ವಲ್ಪ ವಿಕ್ಷಿಪ್ತ ಮನಸ್ಥಿತಿಯವನಾಗಿಬಿಟ್ಟಿದ್ದ. ಹಾಗಾಗಿ ಸ್ಕೂಲ್ ಬಿಟ್ಟು ಮನೆಗೆ ಬಂದ ಕೂಡಲೇ ತನ್ನ ಮೊಬೈಲ್ ಹಿಡಿದುಕೊಂಡು ಯಾವ್ಯಾವುದೋ ಗೇಮ್ ಆಡುತ್ತ ಹೆತ್ತವರಿಂದ ಆದಷ್ಟು ದೂರವಿರಲು ಪ್ರಯತ್ನಿಸುತ್ತಿದ್ದ. ಆದರೆ ಮಗನ ಅಂಥ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳದ ವಿನೋದಾಳಿಗೆ ತನ್ನ ಮಗ ಸದಾ ಮೊಬೈಲ್‍ನಲ್ಲಿ ಕಳೆದು ಹೋಗುತ್ತಿದ್ದುದು ಅತಿಯಾದ ಚಿಂತೆಯಾಗುತ್ತಿತ್ತು. ಇವತ್ತೂ ಅದೇ ಕಾರಣಕ್ಕೆ ಅಮ್ಮ, ಮಗನ ನಡುವೆ ಜಗಳವಾಗಿದ್ದುದು! ಆದರೆ ಮೊದಲು ಅಮ್ಮನಿಂದಲೂ ನಂತರ ಅಪ್ಪನಿಂದಲೂ ಹೀನಾಯವಾಗಿ ಬೈಸಿಕೊಂಡು ಏಟು ತಿಂದ ಹುಡುಗ ದುಃಖದಿಂದ ಮೂರನೇ ಮಹಡಿಯ ತನ್ನ ಕೋಣೆಗೆ ಧಾವಿಸಿ ಹೋಗಿ ಧಡಾರ್ರನೇ ಬಾಗಿಲು ಹಾಕಿಕೊಂಡ.  

    ಇತ್ತ ಶಂಕರ ಹೆಂಡತಿ ಮತ್ತು ಮಗನಿಗೆ ಒಂದಷ್ಟು ಹೊತ್ತು ಕೆಟ್ಟದಾಗಿ ಬೈಯ್ಯುತ್ತ ನಿಂತವನು ಮತ್ತೆ ಹೋಗಿ ಮಲಗಿಕೊಂಡ. ತನ್ನ ಯಾವುದೋ ಕೋಪವನ್ನು ಇನ್ನ್ಯಾವುದರ ಮೇಲೆಯೋ ತೀರಿಸಿಕೊಂಡ ಪರಿಣಾಮವಾಗಿ ಅವನಿಗೆ ತುಸು ಸಮಾಧಾನವಾಗಿ ಮರಳಿ ನಿದ್ರೆ ಹತ್ತಿತು. ಆದರೆ ತುಸುಹೊತ್ತಿನಲ್ಲಿ ಮತ್ತೊಂದು ದೊಡ್ಡ ಬೊಬ್ಬೆ ಕೇಳಿಸಿತು. ಅವನು ಮತ್ತೊಮ್ಮೆ ಅದುರಿ ಬಿದ್ದು ಎಚ್ಚರಗೊಂಡ. ಅದೀಗ ಹೆಂಡತಿಯ ಆರ್ಭಟವೆಂದು ತಿಳಿಯಿತು.‘ಅಯ್ಯೋ ಪರಮಾತ್ಮಾ…! ಈ ನಾಯಿಗಳಿಗೆ ಆಗ ಅಷ್ಟೊಂದು ಬಡಿದದ್ದು ಚೂರೂ ನಾಟಲಿಲ್ಲವಲ್ಲ! ನನ್ನ ಮನೆಯಲ್ಲಿ ನನಗೇ ನೆಮ್ಮದಿಯಿಂದ ಇರಲು ಈ ಹಡಬೆಗಳು ಬಿಡುವುದಿಲ್ಲವಲ್ಲ…! ಮೊದಲು ಈ ರಂಡೆಯ ಸೊಕ್ಕು ಮುರಿಯಬೇಕು!’ ಎಂದು ಕಟಕಟಾ ಹಲ್ಲು ಕಡಿದವನು ರಪ್ಪನೆ ಹೊರಗೆ ಧಾವಿಸಿದ. ಆದರೆ ವಿನೋದಾಳ ಬೊಬ್ಬೆ ಮಗನ ಕೋಣೆಯಿಂದ ಬರುತಿದ್ದುದನ್ನು ಗಮನಿಸಿದ. ತೀವ್ರ ಕೋಪದ ನಡುವೆಯೂ ಅವನಲ್ಲಿ ವಿಲಕ್ಷಣ ಆತಂಕ ಮೂಡಿತು. ಗಾಬರಿಯಿಂದ ಮೆಟ್ಟಲೇರಿ ಹೋದ. ಅಲ್ಲಿ ವಿನೋದಾ ಮಗನ ಕೋಣೆಯ ಕಿಟಕಿಯ ಪಟ್ಟಿಗಳನ್ನು ಹಿಡಿದು ನೇತಾಡುತ್ತ ಬೊಬ್ಬಿಡುತ್ತಿದ್ದಳು. ಅದನ್ನು ಕಂಡು ನಖಶಿಕಾಂತ ಭಯಗೊಂಡ. ಕೋಣೆಯೊಳಗೆ ಇಣುಕಲು ಅಳುಕಾಯಿತು. ಆದರೂ ಧೈರ್ಯ ತಂದುಕೊಂಡು ನೋಡಿದ. ಆದರೆ ಅಲ್ಲಿನ ದೃಶ್ಯ ಕಂಡವನ ಎದೆ ಒಡೆದಂತಾಯಿತು. ದುಃಖ, ಹತಾಶೆಯಿಂದ ನೆಲಕ್ಕೆ ಕುಸಿದುಬಿದ್ದ. ಅಲ್ಲಿ ಕೋಣೆಯೊಳಗಿನ ಫ್ಯಾನಿಗೆ ಬಿಗಿದಿದ್ದ ಅಮ್ಮನ ನೈಲಾನ್ ಸೀರೆಯ ಕುಣಿಕೆಯಲ್ಲಿ ಮಗನ ದೇಹವು ನಾಲಗೆಯನ್ನು ವಿಕಾರವಾಗಿ ಹೊರ ಚಾಚಿಕೊಂಡು ನೇತಾಡುತ್ತಿತ್ತು!

(ಮುಂದುವರೆಯುವುದು)


ಗುರುರಾಜ್ ಸನಿಲ್

ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾರ

Leave a Reply

Back To Top