ಹೀಗೊಂದು ಮೋಹ.

ಕಾವ್ಯ ಸಂಗಾತಿ

ಹೀಗೊಂದು ಮೋಹ.

ಬಾಲಕೃಷ್ಣ ದೇವನಮನೆ

ಎಷ್ಟೊಂದು ಕವಿತೆಗಳನೋದಿದೆ
ಎಲ್ಲಿಯೂ ಒಂದಿನಿತು
ನಿನ್ನ ಸುಳಿವಿಲ್ಲ…
ಯಾವ ಪದಗಳಿಗೂ ನೀನು
ಸಿಲುಕದಿರುವುದೇ ಸೋಜಿಗ!

ಬೀಸೋ ಗಾಳಿಗೂ ಒಣ ಜಂಭ
ಒಂದು ಚೂರು ನಿನ್ನ
ಗಂಧವ ಹೊತ್ತು ತರುತ್ತಿಲ್ಲಾ
ಎದುರು ಸಿಕ್ಕರೂ ದಿಕ್ಕು ಬದಲಿಸಿ ಹೋಗುತ್ತಿದೆ
ನೋಡಿಯೂ ನೋಡದಂತೆ…

ಆಗಸಕ್ಕೆಷ್ಟು ದುರಹಂಕಾರ
ಅಷ್ಟೆಲ್ಲಾ ತಾರೆಗಳ ಬೆಳಗಿದರೂ


ತುಸುವೂ ನಿನ್ನ ಮುಖ ತೋರುವುದಿಲ್ಲಾ
ಇನ್ನೆಷ್ಟು ಬೆಳಕು ಬೇಕು
ಎಲ್ಲದಕೂ ಬೆಳಕಾದ ನಿನ್ನ ತೋರಲು…

ಮೈದುಂಬಿದ ಹಸುರಿನ ತುಂಬ
ಅರಳಿದ ಬಗೆ ಬಗೆ ಹೂಗಳಲಿ
ನಿನ್ನ ನಗುಮೊಗ ಕಾಣಿಸುತ್ತಿಲ್ಲಾ
ಬಾಡಿ ಹೋಗಲಿ ಎಲ್ಲಾ
ಹಿಡಿ ಶಾಪ ಹಾಕು್ತ್ತೇನೆ ನೊಂದು…

ಅದ್ಯಾವ ಗಳಿಗೆಯಲಿ ಹೋದೆ
ನೀ ಯಾರಿಗೂ ಸಿಗದಂತೆ
ಇರಲಿ ಬಿಡು
ಎದೆಯೊಳಗೆ ಅಚ್ಚೊತ್ತಿದ್ದ ನಿನ್ನ ರೂಪ
ಹಾಗೇ ಧ್ಯಾನಿಸುತ್ತೇನೆ ನೀನೇ ಸಿಕ್ಕಂತೆ!


Leave a Reply

Back To Top