ಅಂಕಣ ಬರಹ

ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ‌.

ಸಾಧಕಿಯರ ಯಶೋಗಾಥೆ

ಸಮಾಜ ಸೇವಕಿ ಮತ್ತು ವೈದ್ಯೆ

ರುಕ್ಮಾಬಾಯಿ (೧೮೬೪-೧೯೫೫)


ವಸಾಹಾತುಶಾಹಿ ಭಾರತದ ವೈದ್ಯೆರಾಗಿದ್ದ ರುಕ್ಮಾಬಾಯಿಯವರು ೨೨ ನವೆಂಬರ್ ೧೮೬೪ ರಲ್ಲಿ ಜನಿಸಿದರು. ಇವರ ತಂದೆ ಜನಾರ್ಧನ್ ಪಾಂಡುರಂಗ ತಾಯಿ ಜಯಂತಿಬಾಯಿ. ಇವರು ಮರಾಠಿ ಕುಟುಂಬದವರು. ರುಕ್ಮಾಬಾಯಿಯು ಎರಡು ವರ್ಷದವಳಿರುವಾಗಲೇ ತಂದೆಯನ್ನು ಕಳೆದುಕೊಂಡರು. ಬಡಿಗ/ ಸುತಾರ ಸಮುದಾಯದಲ್ಲಿ ವಿಧವೆಯರ ಮರುಮದುವೆಗೆ ಅವಕಾಶ ಇರುವುದರಿಂದ ರುಕ್ಮಾಬಾಯಿಯ ತಾಯಿಯೂ, ಬಾಂಬೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಖ್ಯಾತ ವೈದ್ಯರು ಮತ್ತು ಸಾಮಾಜಿಕ ಕಾರ್ಯಕರ್ತರು ಆಗಿದ್ದ ಡಾ|| ಸಖಾರಾಮ್ ಅರ್ಜುನ ಅವರನ್ನು ಮರು ವಿವಾಹವಾದರು. ಇವರ ತಾಯಿಯು ಕೂಡ ಬಹಳ ದಿನಗಳವರೆಗೆ ಬದುಕುಳಿಯಲಿಲ್ಲ. ರುಕ್ಮಾಬಾಯಿಯು ೧೭ ವರ್ಷದವಳಿದ್ದಾಗ ತಾಯಿಯನ್ನು ಕೆಳೆದುಕೊಂಡರು.

೧೧ ವರ್ಷದ ರುಕ್ಮಾಬಾಯಿಯು ತನ್ನ ಮಲತಂದೆಯ ಸೋದರ ಸಂಬಂಧಿ ೧೯ ವರ್ಷದ ದಾದಾಜಿ ಭಿಕಾಜಿಯವರನ್ನು ಮದುವೆಯಾದರು. ಚಿಕ್ಕವರಾಗಿರುವುದರಿಂದ ಮದುವೆಯ ಬಳಿಕ ತಂದೆ-ತಾಯಿಯ ಮನೆಯಲ್ಲಿಯೇ ಉಳಿಯುತ್ತಾರೆ. ಹಾಗೆಯೇ ಇವರ ಪತಿಯೂ ಕೂಡ ಮನೆಅಳಿಯರಾಗುತ್ತಾರೆ. ಆ ಸಮಯದಲ್ಲಿ ಇಬ್ಬರೂ ಶಿಕ್ಷಣವನ್ನು ಸರಿಯಾದ ರೀತಿಯಲ್ಲಿ ಪಡೆದು, ಒಳ್ಳೆಯ ಮನುಷ್ಯರಾಗಿ ಬಾಳಳು ತಂದೆ ತಾಯಿಗಳು ಮಾರ್ಗದರ್ಶನ ನೀಡುತ್ತಾರೆ. ರುಕ್ಮಾಬಾಯಿಯವರು ಮದುವೆಯಾಗಿ ಆರು ತಿಂಗಳಲ್ಲಿ ಋತುಮತಿಯಾಗುತ್ತಾರೆ. ಆಗ ಗಂಡನ ಮನೆಗೆ ಕಳುಹಿಸಿಕೊಡಬೇಕೆಂದು ಗಂಡನ ಕುಟುಂಬದವರು ಒತ್ತಾಯಿಸುತ್ತಾರೆ. ಮಗಳು ಚಿಕ್ಕವಳಾಗಿರುವುದರಿಂದ ಗಂಡನ ಮನೆಗೆ ಕಳುಹಿಸುವುದನ್ನು ಸಖಾರಾಮ್ ರವರು ಒಪ್ಪುವುದಿಲ್ಲ.

ರುಕ್ಮಾಬಾಯಿ ಪತಿ ದಾದಾಜಿ ಭಿಕಾಜಿಯವರು ೨೦ ವರ್ಷದವರಿದ್ದಾಗ ಅವರ ತಾಯಿ ತೀರಿಕೊಂಡರು. ರುಕ್ಮಾಬಾಯಿಯ ಕುಟುಂಬದವರು ಭಿಕಾಜಿಯವರನ್ನು ಶಾಲೆಗೆ ಸೇರಿಸಲು ಮುಂದಾದರು. ಆದರೆ ದಾದಾಜಿ ಭಿಕಾಜಿಯವರು ಕಾಲೇಜು ಮಟ್ಟದಲ್ಲಿ ಇರಬೇಕಾದ ಸಮಯದಲ್ಲಿ ಅವರು ಆರನೇ ತರಗತಿಗೆ ಹೋಗಬೇಕಾಗಿತ್ತು. ಹಾಗಾಗಿ ಭಿಕಾಜಿಯವರು ಓದಲು ನಿರಾಕರಿಸಿ ಅತ್ತೆ ಮಾವನ ಮನೆ ಬಿಟ್ಟು ಬೇರೆಯವರ ಮನೆಯಲ್ಲಿ ವಾಸಿಸಲು ಪ್ರಾರಂಭಿಸುತ್ತಾರೆ. ಅಷ್ಟೇ ಅಲ್ಲದೇ ಭಿಕಾಜಿಯವರು ರುಕ್ಮಾಬಾಯಿಯವರನ್ನು ತಮ್ಮೊಂದಿಗೆ ಬಂದು ವಾಸಿಸಲು ಒತ್ತಾಯಿಸಿತ್ತಾರೆ. ಆಗ ರುಕ್ಮಾಬಾಯಿಯವರು ಗಂಡ ನೊಂದಿಗೆ ಹೋಗಲು ನಿರಾಕರಿಸಿದ ನಿರ್ಣಯಕ್ಕೆ ಅವರ ಮಲತಂದೆಯವರು ಕೂಡ ಬೆಂಬಲಿಸಿದರು.

ಪತಿ ದಾದಾಜಿ ಭಿಕಾಜಿಯವರ ವಿರುದ್ಧವಾಗಿ ಅದೇ ವರ್ಷ ರುಕ್ಮಾಬಾಯಿಯವರು ಚರ್ಚ್ಮಿಷನ್ ಗ್ರಂಥಾಲಯದಿಂದ ಉಚಿತವಾಗಿ ಗ್ರಂಥಗಳನ್ನು ಪಡೆದುಕೊಂಡು ಮನೆಯಲ್ಲಿಯೇ ಅಧ್ಯಯನ ಮಾಡಲು ತೊಡಗುತ್ತಾರೆ. ತನ್ನ ತಂದೆಯ ಒಡನಾಟದಿಂದಾಗಿ ಅನೇಕ ಧಾರ್ಮಿಕ ಮತ್ತು ಸಮಾಜ ಸುಧಾರಕರೊಂದಿಗೆ ಸಂಪರ್ಕ ಬೆಳೆಸಿಕೊಳ್ಳುತ್ತಾರೆ. ಅದೇ ಸಮಯದಲ್ಲಿ ವಿಷ್ಣುಶಾಸ್ತ್ರಿ ಪಂಡಿತ ಅವರೊಂದಿಗೆ ಸಂಪರ್ಕ ಬೆಳೆಸಿಕೊಂಡಾಗಲೇ ಯುರೋಪಿಯನ್ ಸ್ತ್ರೀಯರ ಮತ್ತು ಪುರುಷರ ಸುಧಾರಣಾವಾದಗಳನ್ನು ಒಪ್ಪಿಕೊಳ್ಳುತ್ತಾರೆ. ತನ್ನ ತಾಯಿಯೊಂದಿಗೆ ಇವರು ನಿಯಮಿತವಾಗಿ ಪ್ರಾರ್ಥನಾ ಸಮಾಜ ಮತ್ತು ಆರ್ಯ ಮಹಿಳಾ ಸಮಾಜ ಸಾಪ್ತಾಯಿಕ ಸಭೆಗಳಲ್ಲಿ ಭಾಗವಹಿಸಿತ್ತಿದ್ದರು.

ದಾದಾಜಿ ಭಿಕಾಜಿಯವರು ಕಾಂಜುಗಲ್ ಹಕ್ಕುಗಳ ಮರುಸ್ಥಾಪನೆಗಾಗಿ ಮಾರ್ಚ್ ೧೮೮೪ರಲ್ಲಿ ಕೋರ್ಟ್ ಮೆಟ್ಟಿಲೇರಿದರು. ಭಿಕಾಜಿಯವರು ತಮ್ಮ ವಕೀಲರ ಸಹಾಯದಿಂದ ಸಖಾರಾಮ್ ಅರ್ಜುನ ಅವರಿಗೆ ಕಾನೂನು ನೋಟಿಸ್ ಕಳುಹಿಸಿ ‘ಪತ್ನಿ ರುಕ್ಮಾಬಾಯಿಯವರೊಂದಿಗೆ ತನ್ನನ್ನು ಸೇರಿಕೊಳ್ಳಲು ತಡೆಯೊಡ್ಡುತ್ತಿದ್ದಾರೆ’ ಎಂದು ಕೋರ್ಟಿಗೆ ಮೊರೆ ಹೋಗುತ್ತಾರೆ. ಅದಕ್ಕೆ ಪ್ರತಿಯಾಗಿ ಡಾ. ಸಖಾರಾಮ್ ರವರು ಕೂಡ ತಮ್ಮ ಕಾನೂನು ಸಲಹಾಗಾರರ ಸಹಾಯ ಪಡೆದು ‘ಮಗಳನ್ನು ಏಕೆ ಅಳಿಯನೊಂದಿಗೆ ಕಳುಹಿಸುತ್ತಿಲ್ಲ’ ಎಂಬುದಕ್ಕೆ ಕಾರಣಗಳನ್ನು ವಿವರವಾಗಿ ನೀಡುತ್ತಾರೆ. ಹಾಗಾಗಿ ಕಾನೂನು ಕೂಡ ಯುವತಿಯನ್ನು ಒತ್ತಾಯಿಸಲು ಬರುವುದಿಲ್ಲವೆಂದು ಹೇಳುತ್ತದೆ. ಈ ಪ್ರಕರಣದಲ್ಲಿ ಅನೇಕ ಪರ ವಿರೋಧಗಳು ಕಂಡು ಬಂದವು. ಹಿಂದೂ ಸಂಪ್ರದಾಯವಾದಿಗಳು ರುಕ್ಮಾಬಾಯಿಯವರ ಕುಟುಂಬದವರನ್ನು ಟೀಕಿಸುತ್ತಾರೆ. ಅನೇಕ ಪತ್ರಿಕೆಗಳು ಕೂಡ ಇವರ ವಿರುದ್ಧವಾಗಿ ಬರೆಯುತ್ತವೆ. ಆದರೂ ಕೂಡ ರುಕ್ಮಾಬಾಯಿಯವರು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತನ್ನ ಓದನ್ನು ಮುಂದುವರಿಸುತ್ತಾರೆ. ಈ ಪ್ರಕರಣವನ್ನು ೧೮೮೭ರಲ್ಲಿ ಮತ್ತೆ ನ್ಯಾಯಮೂರ್ತಿ ಫರಾನ್ ಮರುವಿಚಾರಣೆಗೆ ಕೈಗೆತ್ತಿಕೊಂಡಿತು. ಹಿಂದೂ ಕಾನೂನುಗಳ ಸಹಾಯ ಪಡೆದು ರುಕ್ಮಾಬಾಯಿಗೆ ಗಂಡನೊಂದಿಗೆ ವಾಸಿಸಲು ನಿರ್ದೇಶನವನ್ನು ನೀಡುತ್ತದೆ. ಗಂಡನ ಜೊತೆಗೆ ವಾಸಿಸಲು ನಿರಾಕರಿಸಿದರೆ ಆರು ತಿಂಗಳ ಜೈಲುಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆಂದು ಆದೇಶವನ್ನು ನೀಡುತ್ತದೆ. ಅದಕ್ಕೆ ಪ್ರತಿಯಾಗಿ ರುಕ್ಮಾಬಾಯಿಯು ಗಂಡನ ಮನೆಗೆ ಹೋಗಲು ನಿರಾಕರಿಸಿ ಜೈಲು ಶಿಕ್ಷೆಯನ್ನು ಅನುಭವಿಸಲು ಸಿದ್ಧಳಾಗುತ್ತಾಳೆ.  ಈ ನಿರ್ಧಾರವು ಸಮಾಜದಲ್ಲಿ ಕೋಲಾಹಲ ಮತ್ತು ಸಾಮಾಜಿಕ ಚರ್ಚೆಗೆ ಕಾರಣವಾಯಿತು. ಇದೇ ಸಮಯದಲ್ಲಿ ಬಾಲಗಂಗಾಧರ ತಿಲಕ್‌ರವರು ಕೇಸರಿ ಪತ್ರಿಕೆಗೆ “ಇಂಗ್ಲೀಷ್ ಶಿಕ್ಷಣದ ಪ್ರಭಾವದಿಂದಾಗಿ ಹಿಂದೂಧರ್ಮ ಅಪಾಯದಲ್ಲಿದೆ” ಎಂದು ಬರೆದರು. ಮತ್ತೊಂದೆಡೆ ಮ್ಯಾಕ್ಸೆಮುಲ್ಲರ್‌ರವರು ‘ರುಕ್ಮಾಬಾಯಿಯ ಪ್ರಕರಣಕ್ಕೆ ಕಾನೂನು ಮಾರ್ಗವು ಪರಿಹಾರವಲ್ಲ ಮತ್ತು ಅವಳ ಶಿಕ್ಷಣವು ಕೂಡ ಅಲ್ಲ, ಅವಳು ತನ್ನದೇ ಆದ ಆಯ್ಕೆಯ ಅತ್ಯುತ್ತಮ ನ್ಯಾಯಾಧೀಶಳಾಗಿದ್ದಾಳೆಂದು’ ಬರೆಯುತ್ತಾರೆ.

ರುಕ್ಮಾಬಾಯಿಯವರು ತನ್ನ ವಿವಾಹ ವಿಚ್ಚೇದನೆಗೆ ಸಂಬಂಧಿಸಿದಂತೆ  ರಾಣಿ ವಿಕ್ಟೋರಿಯಾರವರ ಸಹಾಯವನ್ನು ಪಡೆಯುತ್ತಾರೆ. ೧೮೮೮ರಲ್ಲಿ ವಿವಾಹ ವಿಚ್ಛೇದನೆ ಪಡೆದ ದಾದಾಜಿ ಭಿಕಾಜಿಯವರು ಬೇರೆ ಮದುವೆಯಾಗುತ್ತಾರೆ. ರುಕ್ಮಾಬಾಯಿಯವರು ಖ್ಯಾತ ಸ್ತ್ರೀವಾದಿ ಮತ್ತು ವೈದ್ಯರಾಗಿ ಬೆಳಕಿಗೆ ಬರುತ್ತಾರೆ.

ರುಕ್ಮಾಜಿಯವರ ಪ್ರಕರಣವು ಭಾರತ ಮತ್ತು ಇಂಗ್ಲೆಂಡಿನೊಳಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕುತ್ತದೆ. ಇದರ ಪರಿಣಾಮವಾಗಿ ಭಾರತದಲ್ಲಿ ೧೮೯೧ರಲ್ಲಿ “ಎಜ್‌ಆಫ್ ಕನ್‌ಸಂಟ್ ಆಕ್ಟ್”ವು ಜಾರಿಗೆ ಬರಲು ಕಾರಣವಾಯಿತು. ಬ್ರಿಟೀಷ್ ಭಾರತದಾದ್ಯಂತ ೧೦ ರಿಂದ ೧೨ ವರ್ಷಗಳಿಗೆ ವಿವಾಹ ಒಪ್ಪಿಗೆಗೆ ಅನುಮತಿಯನ್ನು ನೀಡಿತು.

ಕಾಮಾ ಆಸ್ಪತ್ರೆಯಲ್ಲಿ ಡಾ.  ಎಡಿತ್ ಪೆಚ್ ಎಂಬುವವರು ರುಕ್ಮಾಬಾಯಿಯನ್ನು ಪ್ರೋತ್ಸಾಹಿಸಿ, ಇವರ ಶಿಕ್ಷಣಕ್ಕಾಗಿ ಹಣ ಸಂಗ್ರಹಿಸಲು ಪ್ರಯತ್ನಿಸುತ್ತಾರೆ. ೧೮೮೯ರಲ್ಲಿ ಲಂಡನ್ ಸ್ಕೂಲ್ ಆಫ್ ಮೆಡಿಸನ್ ಫಾರ್ ವುಮೆನ್ ನಲ್ಲಿ ಅಧ್ಯಯನ ಮಾಡಲು ರುಕ್ಮಾಬಾಯಿ ಇಂಗ್ಲೆಂಡಿಗೆ ತೆರಳುತ್ತಾರೆ. ರುಕ್ಮಾಬಾಯಿ ರಕ್ಷಣಾವೇದಿಕೆಯನ್ನು ಸ್ಥಾಪಿಸಲು ಇವಾ ಮೆಕ್ಲಾರೆನ್, ವಾಲ್ಟರ್ ಮೇಕ್ಲಾರೆನ್, ಅಡಿಲೇಡ್ ಮ್ಯಾನಿಂಗ್ ಇತರರು ಸಹಕಾರ ನೀಡಿದರು. ಶಿವಾಜಿರಾವ್ ಹೇಳರ ಎಂಬುವವರು ೫೦೦ ರುಪಾಯಿಗಳ ದೇಣಿಗೆಯನ್ನು ನೀಡುತ್ತಾರೆ. ರುಕ್ಮಾಬಾಯಿಯವರು ತಮ್ಮ ಅಂತಿಮ ಪರೀಕ್ಷೆಗಾಗಿ ಎಡಿನ್‌ಬರ್ಗ್ಗೆ ತೆರಳಿ ಅಧ್ಯಯನ ಪೂರ್ಣಗೊಳಿಸಿ ೧೮೯೪ ರಲ್ಲಿ ಭಾರತಕ್ಕೆ ಬಂದ ನಂತರ ಸೂರತ್ ಆಸ್ಪತ್ರೆಯಲ್ಲಿ ಸೇರಿಕೊಳ್ಳುತ್ತಾರೆ.  ೧೯೧೮ ರಲ್ಲಿ ರುಕ್ಮಾಬಾಯಿಯವರು ಮಹಿಳಾ ವೈದ್ಯಕೀಯ ಸೇವೆಗೆ ಸೇರಲು ನಿರಾಕರಿಸಿದ್ದರೂ ಈಗ ರಾಜ್ಕೋಟನಲ್ಲಿ ಮಹಿಳೆಯರಿಗಾಗಿ ರಾಜ್ಯ ಆಸ್ಪತ್ರೆಯಲ್ಲಿ ಸೇರಿಕೊಳ್ಳುತ್ತಾರೆ.

ಬಾಂಬೆಯಲ್ಲಿ ೧೯೩೦ ರಲ್ಲಿ ತಮ್ಮ ಸೇವೆಯಿಂದ ನಿವೃತ್ತರಾಗುವ ಮುನ್ನ ರುಕ್ಮಾಬಾಯಿಯವರು ೩೫ ವರ್ಷಗಳ ಕಾಲ ವೈದ್ಯಕೀಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ನಂತರ ಸಮಾಜ ಸುಧಾರಣೆಗಾಗಿ ತಮ್ಮ ಕೆಲಸವನ್ನು ಮುಂದುವರಿಸಿದರು. ರುಕ್ಮಾಬಾಯಿಯವರು ‘ಪರ್ದಾಹ ಅದರ ನಿರ್ಮೂಲನೆಯ ಅಗತ್ಯ’ ಎಂಬ ಪುಸ್ತಕವನ್ನು ಪ್ರಕಟಿಸಿದರು. ರುಕ್ಮಾಬಾಯಿಯವರು ೨೫ ಸೆಪ್ಟೆಂಬರ್ ೧೯೫೫ ರಲ್ಲಿ ಶ್ವಾಸಕೋಶದ ಕ್ಯಾನ್ಸರ್‌ನಿಂದ ೯೦ ವರ್ಷ ವಯಸ್ಸಿನವರಿರುವಾಗ ನಿಧನರಾದರು.

ರುಕ್ಮಾಬಾಯಿಯವರ ಜೀವನ ಕಥೆಯನ್ನು ಆಧರಿಸಿ ಅನೇಕ ಕಾದಂಬರಿಗಳು ಮತ್ತು ಚಲನಚಿತ್ರಗಳು ಮೂಡಿಬಂದಿವೆ.

೨೦೧೭ ನವೆಂಬರ್ ೨೨ ರಂದು ಗೂಗಲ್ ಇಂಡಿಯಾ ರುಕ್ಮಾಬಾಯಿಯವರ ೧೫೩ ನೇ ಹುಟ್ಟು ಹಬ್ಬದಂದು ಒಂದು ಡೂಡಲ್(ಸಾಕ್ಷ್ಯ ಚಿತ್ರವನ್ನು) ಅನ್ನು ಅರ್ಪಿಸಿತ್ತು.

********************************

ಡಾ.ಸುರೇಖಾ ಜಿ.ರಾಠೋಡ

ಸುರೇಖಾ ರಾಠೋಡ್  ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು:  ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿದೆ

Leave a Reply

Back To Top