ಗಜಲ್ ಜುಗಲ್ ಬಂದಿ
ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ
ಗಜಲ್-16
ರೇಖಾಭಟ್
ನನ್ನ ಹುಡುಕಾಟ ನಿನ್ನಲ್ಲಿಗೆ ಬಂದು ನಿಂತಿದೆ ಸ್ವೀಕರಿಸು
ಕನಸಿನ ಕನ್ನಡಿಯ ಬಿಂಬವಾಗಿ ನಿನ್ನ ಕಂಡಿದೆ ಸ್ವೀಕರಿಸು
ಈ ಬಾಳಿಗೆ ಚಿಗುರುವ ಕಾಲ ಕೊನೆಗೂ ಇದಿರಾಯಿತೀಗ
ಮನದ ಮೂಲೆ ಮೂಲೆ ಹೂವಾಗಿ ಅರಳಿದೆ ಸ್ವೀಕರಿಸು
ಮಳೆ ಬಿಸಿಲು ಕೂಡಿದಾಗ ತಾನೇ ಕಾಮನಬಿಲ್ಲಿನ ಜನನ
ಜೀವ ದಣಿವ ಮರೆತು ಒಲುಮೆಯ ಹಂಚಿದೆ ಸ್ವೀಕರಿಸು
ಕೊರಗುಗಳ ಕರಗಿಸಿ ನಲಿವ ಕೊನರಿಸುವ ನಂಬಿಕೆ ನೀನು
ನಗೆಯ ಉಡುಗೆಯ ಧರಿಸಲು ನೆಪ ಸಿಕ್ಕಿದೆ ಸ್ವೀಕರಿಸು
ನಿನ್ನ ಹೊರತು ಇನ್ಯಾವ ಗಮ್ಯದ ಹಂಬಲವು ‘ರೇಖೆ’ಗಿಲ್ಲ
ನಾಳೆಯ ಗೆಲುವು ನಿನ್ನ ಮಡಿಲೇರಿ ಕೂತಿದೆ ಸ್ವೀಕರಿಸು
ಸ್ಮಿತಾ ಭಟ್
ಯುಗ ಯುಗಗಳ ಕಾಯುವಿಕೆಗೆ ಜೀವವಿದೆ ಸ್ವೀಕರಿಸು
ಕನಸಿನ ಪ್ರತಿಮೆ ಬೊಗಸೆಯಲ್ಲಿ ಅರಳಿದೆ ಸ್ವೀಕರಿಸು
ನೀ ಬಂದಾಗ ಎದೆ ಬಾನಿನಲ್ಲಿ ಅದೆಂತಹ ಸೋಜಿಗವಿದೆ
ಚುಕ್ಕಿಯೀಗ ಮಡಿಲಿಗಿಳುದು ಪುಳಕ ನೀಡಿದೆ ಸ್ವೀಕರಿಸು
ಕಪ್ಪು ಬಣ್ಣ ಕೂಡ ಏನೆಲ್ಲಾ ಕಲಿಸುತ್ತದೆ ಹೇಗೆ ಹೇಳಲಿ
ಒಲವ ಬಣ್ಣಉಳಿಸಿ ಉಳಿದದ್ದು ಅಳಿಸಾಗಿದೆ ಸ್ವೀಕರಿಸು
ನಂಬಿಕೆಯ ಅಡಿಪಾಯದಲಿ ಈ ಜಗದ ಚಲನ ವಲನವಿದೆ
ನೋವೋ ನಲಿವೋ ಸಾಗಲೊಂದು ದಾರಿಯಿದೆ ಸ್ವೀಕರಿಸು
ಎಷ್ಟೇ ನಡೆದರೂ ತಲುಪುವದಾರಿ ಅರಿಯಲಾಗದು ಮಾಧವ
ಆಗಾಗ ಜೊತೆಯಾಗುವ ಗಳಿಗೆಗೆ ಭರವಸೆಯಿದೆ ಸ್ವೀಕರಿಸು
**********************
ತುಂಬಾ ಇಷ್ಟವಾದವು ಗಜಲ್. ಅಭಿನಂದನೆಗಳು ಇಬ್ಬರಿಗೂ
Sooopper
ಇಬ್ಬರಿಗೂ ಅಭಿನಂದನೆಗಳು . ತುಂಬಾ ಚಂದದ ಗಜಲ್
ಇಬ್ಬರೂ ತುಂಬಾ ಅದ್ಭುತವಾಗಿ ಬರೆದಿದ್ದೀರಿ….ಇಬ್ಬರಿಗೂ ಶುಭವಾಗಲಿ….