ಸವಾಲ್

ಪ್ರಬಂಧ

ಸವಾಲ್

ಗಣಪತಿ ಹೆಗಡೆ

ಮೂರು ನೂರಾ ಇಪ್ಪತ್ತು ರೂಪಾಯಿ,   ಒಂದ್ ವಾರ್, ಎರಡ್  ವಾರ್, ಮತ್ಯಾರದಾದ್ರೂ ಇದೆಯೋ, ಮೂವತ್ತು ಸೇಕಂಡ್ ಸುತ್ತಲೂ ಕಣ್ಣು ಹಾಯಿಸಿ ಹೇಳಿದ. ಊಹೂಂ ಯಾರದೂ ಏರಿಕೆ ಇಲ್ಲ. ಮೂರು ನೂರಾ ಇಪ್ಪತ್ತು ರೂಪಾಯಿ ಮೂರ್ ವಾರ್.

ಒಂದು ಲೇಡೀಸ್ ಛತ್ರಿಯನ್ನು  ಸವಾಲಿಗೆ ಹಾಕಿದ್ದ ಸವಾಲುಗಾರ ಆ ಛತ್ರಿಯನ್ನು ಕೈಲಿ ಹಿಡಿದು ನಿಂತು ಕೊಂಡೇ ಹಿಂದಿನ ಬಾಗಿಲಿನ ಹತ್ತಿರ ನಿಂತು ಸವಾಲು ಮುಗಿಸಿದ.

ಮುಂದಿನಿಂದ ಮೂರನೇ ಸೀಟಿನಲ್ಲಿ ಬಲಗಡೆ ಕಿಟಕಿಯ ಬಳಿಯಲ್ಲಿ ಕುಳಿತ ವ್ಯಕ್ತಿ ನೂರರ ಮೂರು ನೋಟುಗಳು ಹಾಗೂ ಹತ್ತರ ಎರಡು ನೋಟುಗಳನ್ನು ಕೊಟ್ಟು ಆ ಛತ್ರಿಯನ್ನು ಪಡೆದ.

ಸವಾಲುಕರೆದವ ಈ ಹಿಂದೆ ನೂರು ರೂಪಾಯಿಯಿಂದ ಸವಾಲು ಕೂಗಲು ಪ್ರಾರಂಭಿಸಿದ ಎಲ್ಲರಿಗೂ ಒಂದೊಂದು ಪೆನ್ನು ಕೊಡುತ್ತಾ ‘ನೀವು ಸವಾಲಿನ ವಸ್ತುವನ್ನು ಪಡೆಯದಿದ್ದರೂ ಸವಾಲಿನಲ್ಲಿ ಭಾಗವಹಿಸಿದ್ದಕ್ಕೆ ಈ ಪೆನ್ನು. ಪೆನ್ನು ಇರುವ ತನಕ ಮಾತ್ರ ನಾನು ಈ ಭಕ್ಷೀಸನ್ನು ಕೊಡುತ್ತೇನೆ.’

ಸವಾಲಿನಲ್ಲಿ ಭಾಗವಹಿಸಿದವರಿಗೆ ವಿಶೇಷವಾಗಿ ಅವರ ಸಣ್ಣ ಮಕ್ಕಳಿಗೆ, ಮಾಲು ಸಿಗದಿದ್ದರೂ ಸಹ ಖುಷಿಯಾಯಿತು.

ಛತ್ರಿಯನ್ನು ಪಡೆದ ವ್ಯಕ್ತಿ ‘ನಾನು ಮಂಗಳೂರಿನಲ್ಲೂ ವಿಚಾರಿಸಿದ್ದೆ. ಇಂತಹ ಛತ್ರಿಗೆ ನಾನೂರು ರೂಪಾಯಿಗೆ ಕೇಳುತ್ತಾರೆ. ಪರವಾಗಿಲ್ಲ. ಒಳ್ಳೆಯ ಛತ್ರಿ ಅಂತ ಎಲ್ಲವರಿಗೂ ಕೇಳುವ ಹಾಗೆ ಪಕ್ಕದವನಲ್ಲಿ ಹೇಳಿದ್ದು ನನಗೂ ಕೇಳಿಸಿತು.

ನಾನು ಹಿಂದಿನಿಂದ ನಾಲ್ಕನೇ ಸೀಟಿನಲ್ಲಿ ಕುಳಿತಿದ್ದವ ಇದನ್ನು ಪ್ರಾರಂಭದಿಂದಲೂ ನೋಡುತ್ತಿದ್ದೆ. ಬಸ್ಸು ತುಂಬಿತ್ತು. ಮಂಗಳೂರಿನಿಂದ ಗುಲಬರ್ಗಾಕ್ಕೆ ಹೊರಡುವ ಬಸ್ಸು ಅದು. ಎರಡೂ ಮುಕ್ಕಾಲಿಗೆ ಬಸ್ಸು ಹೊರಡುವ ಜಾಗಕ್ಕೆ ಬಂದಾಗ ಸಕ್ಕರೆಯನ್ನು ಮುತ್ತಿದ ಇರುವೆಯಂತೆ ಪ್ರಯಾಣಿಕರು ಬಸ್ಸನ್ನು ಮುತ್ತಿದ್ದರು.  ಈ ಬಸ್ಸುಗಳಿಗೆ ರಿಸರ್ವೇಶನ್ ಮಾಡುತ್ತಿರಲಿಲ್ಲ ಇಲಾಖೆಯವರು.  ರಿಸರ್ವೇಶನ್ ಮಾಡಿಸಿದಲ್ಲಿ ಬಡವರಿಗೆ ಅದರಲ್ಲೂ ‘ಘಟ್ಟದ ಮೇಲೆ ಹೋಗುವ ಬಡ ಪ್ರಯಾಣಿಕರಿಗೆ’ ತೊಂದರೆಯಾಗುತ್ತದೆ ಎನ್ನುವದು ಇಲಾಖೆಯವರ ಅಭಿಪ್ರಾಯವಂತೆ. ಆ ಕಡೆ ಹೋಗುವ ಹದಿನೈದು ಇಪ್ಪತ್ತು ಬಸ್ಸುಗಳಿಗೂ ಇದೇ ವ್ಯವಸ್ಥೆ.

ನಾನು  ಕುಮಟಾದಲ್ಲಿ ಇಳಿಯುವವನು.  ನಾಲ್ಕೂವರೆ ತಾಸು ಪ್ರಯಾಣ. ನಿಂತು ಹೋಗಲು ಸಾಧ್ಯವಿಲ್ಲ. ಆದ್ದರಿಂದ ಒತ್ತಾಟದಲ್ಲಿ ಸ್ಪರ್ಧಿಸಿ ಬಸ್ಸಿನಲ್ಲಿ ಸೀಟು ದಕ್ಕಿಸಿಕೊಂಡೆ. ಹೊರಡುವ ಸಮಯದಲ್ಲಿ ಬಸ್ಸಿನ ಸೀಟುಗಳು ಭರ್ತಿಯಾದರೂ ನಿಂತು ಪ್ರಯಾಣಿಸಿದ ಪ್ರಯಾಣಿಕರು ಎರಡೋ ಮೂರೋ ಅಷ್ಟೇ. ಅದೂ ಕುಮಟಾಕ್ಕಿಂತ ಮೊದಲೇ ಸೀಟು ಸಿಗಬಹುದು ಎನ್ನುವ ಕಂಡಕ್ಟರನ ಆಶ್ವಾಸನೆಯ ನಂತರ. ಎಂಬತ್ತು ವರ್ಷದ ಮುದುಕರಿಂದ ಹಿಡಿದು ಎರಡು ತಿಂಗಳ ಹಸುಗೂಸಿನ ತನಕ ಹೊರಟ ಪ್ರಯಾಣಿಕರ ಜೊತೆ ಅವರ ಮನೆ ಸಾಮಾನುಗಳು.

ಕಂಡಕ್ಟರ್ ‘ಎಂಟ್ರೀ’ ಮಾಡಿಸಿ ಬಂದನು. ಸರಿಯಾಗಿ ಮೂರು ಘಂಟೆಗೆ ಬಸ್ಸು ಹೊರಟಿತು.  ಇನ್ನೂ ಪ್ರಯಾಣಿಕರು ಏರುತ್ತಿದ್ದರೋ ಏನೋ? ಆದರೆ ಮೂರೂ ಕಾಲಕ್ಕೆ ಹೊರಡುವ ಗಜೇಂದ್ರಗಡಕ್ಕೆ ಹೋಗುವ ಬಸ್ಸಿನ ಡ್ರೈವರ್ ಹಾಗೂ ಕಂಡಕ್ಟರ್ ಕೂಡಿಯೇ ಗಲಾಟೆ ಮಾಡಿ ಈ  ಬಸ್ಸನ್ನು ಹೊರಡಿಸಿದರು.  ಅವರ ಬಸ್ಸಿಗೆ ಪ್ರಯಾಣಿಕರ ಕೊರತೆಯಾಗಬಾರದಲ್ಲ?.

ಈ ಎಕ್ಸ್ ಪ್ರೆಸ್  ಬಸ್ಸಿಗೆ ಕೆಲವೇ ನಿಲುಗಡೆಗಳು. ಮೇಲೆ ಹೇಳಿದ ಸವಾಲುದಾರ ಒಂದು ಪುಟ್ಟ ಗಂಟನ್ನು ಹಿಡಿದು ಮುಲ್ಕಿಯಲ್ಲಿ ಬಸ್ಸನ್ನು ಏರಿದವನು ಸೀದಾ ಮುಂದಕ್ಕೆ ಹೋದನು. ಡ್ರೈವರನ ಹಿಂದುಗಡೆ ಸ್ವಲ್ಪ ಸ್ಥಳಾವಕಾಶ ಇದ್ದಿದ್ದನ್ನು ಗಮನಿಸಿ ಅಲ್ಲಿಯೇ ತಾನು ತಂದ ಗಂಟನ್ನು ಇಟ್ಟನು.  ಅದನ್ನು ಬಿಡಿಸಿದಾಗ ಸೀರೆಗಳು, ಪೇಂಟ್ ಹಾಗೂ ಶರ್ಟಿನ ಬಟ್ಟೆಗಳು, ಹಾಗೂ ಇತರ ವಸ್ತುಗಳು ಕಂಡವು.

ಗಂಟಿನಿಂದ ಒಂದು ಛತ್ರಿಯನ್ನು ಹಿಡಿದು ‘ಮುಲ್ಕಿಯಲ್ಲಿ ಹಳೆಯ ಅಂಗಡಿಯನ್ನು ಮುಚ್ಚಿ ಹೊಸ ಅಂಗಡಿ ತೆಗೆಯುವದಿದೆ. ಆದ್ದರಿಂದ ಒಳ್ಳೆಯ ಮಾಲಾದರೂ ಇವುಗಳನ್ನು ಮಾರಬೇಕಾಗಿದೆ.  ಸವಾಲಿನಲ್ಲಿ ಗೆದ್ದವರಿಗೆ ಇದನ್ನು ಕೊಡುತ್ತೇನೆ. ಯಾರು ಬೇಕಾದರೂ ಸವಾಲು ಕೂಗಬಹುದು’ ಎಂದನು. ನನ್ನ ಪಕ್ಕದಲ್ಲಿಯೇ ಇದ್ದ ಒಬ್ಬ ಮುಂಡಾಸಿನವನು ನೂರು ರೂಪಾಯಿ ಎಂದನು.

ಹೀಗೆ ಏರಿದ ಸವಾಲ್ ಮೂರು ನೂರಾ ಇಪ್ಪತ್ತಕ್ಕೆ ನಿಂತಿತು. ಕಿಟಕಿ ಪಕ್ಕದವನಿಗೆ ದಕ್ಕಿತ್ತು ಸವಾಲಿನ ಮಾಲು.  ಉಳಿದವರಿಗೆ ಒಂದೊಂದು ಪೆನ್ನು ಭಕ್ಷೀಸ್.

ಈಗ ಒಂದು ಹೊಳೆಯುವ ಸೀರೆ ಹೊರಬಂದಿತು.  ಐದನೇ ಸೀಟಿನ ತುದಿಯಲ್ಲಿ ಕುಳಿತ ವ್ಯಕ್ತಿ ಕಾಲುಗಳನ್ನು ಅಡ್ಡವಾಗಿ ಬಿಟ್ಟು, ನೂರಾ ಇಪ್ಪತ್ತು ಎಂದನು. ಹೀಗೆ ಏರಿದ ಸವಾಲಿನ ಕೂಗಿನಲ್ಲಿ ಕಿಟಕಿಯ ಪಕ್ಕದವನೂ ಏರಿಸಿದವನೇ. ಮೊದಮೊದಲು ಕೆಲವರು ಹೀಗೇ ಉಮೇದಿಗಾಗಿಯೋ, ಭಕ್ಷೀಸಿನಲ್ಲಿ ಸಿಗುವ ಪೆನ್ನಿನ ಆಸೆಗಾಗಿಯೋ ಸವಾಲ್ ಕೂಗಿದರು.  ಒಬ್ಬಿಬರು ಒಂದೊಂದೇ ರೂಪಾಯಿ ಏರಿಸಿದಾಗ ಸವಾಲ್ ದಾರ ಇಪ್ಪತ್ತೈದು ರೂಪಾಯಿಗೂ ಕಡಿಮೆ ಏರಿಸಿದರೆ ನಡೆಯುವುದಿಲ್ಲ. ಸಮಯ ಕಡಿಮೆ ಇದೆ.  ಕನಿಷ್ಟ ಹತ್ತು ರೂಪಾಯಿಯಾದರೂ ಏರಿಸಬೇಕು, ಅಂತ ಹೇಳಿದನು.  ಮೂರು ನೂರಾ ಇಪ್ಪತ್ತೈದು ಆದಮೇಲೆ ಐದನೇ ಸೀಟಿನವನಿಗೆ ಹಾಗೂ ಕಿಟಕಿ ಪಕ್ಕದವನಿಗೆ ಸ್ಪರ್ಧೆ ಪ್ರಾರಂಭವಾಯಿತು. ಆಮೇಲೇನಾದ್ದರೂ ಇಬ್ಬರೇ. ಐನೂರಾ ಎಪ್ಪತ್ತಕ್ಕೆ ಐದನೇ ಸೀಟಿನಲ್ಲಿ ಕುಳಿತವನು  ಕೂಗಿದಲ್ಲಿಗೆ ಸ್ಪರ್ಧೆ ನಿಂತಿತು.

ಸವಾಲ್ ದಾರನು ಹಣವನ್ನು ಪಡೆದು ಜರಿ ಸೀರೆಯನ್ನು ಕುತೂಹಲ ನಿರೀಕ್ಷಿಯಲ್ಲಿರುವ, ಐದನೇ ಸೀಟಿನಲ್ಲಿರುವವನ ಪತ್ನಿಗೇ ನೇರವಾಗಿ ಕೊಟ್ಟನು. ಅವಳು ಆ ಸೀರೆಯನ್ನು ಮತ್ತೊಮ್ಮೆ ಬಿಚ್ಚಿ ಕೈಯಾಡಿಸಿ ನೋಡಿ ಸಂತಸಬಟ್ಟು  ಮಡಚಿ ಪಕ್ಕದಲ್ಲಿಟ್ಟು ಕೊಂಡಳು.

ಬಸ್ಸು ಉಡುಪಿ ಬಸ್ ನಿಲ್ದಾಣವನ್ನು ತಲುಪಿತು. ಯಾರೂ ಬಸ್ಸಿನಿಂದ ಇಳಿಯಲಿಲ್ಲ.  ಎಂಟು ಹತ್ತು ಮಂದಿ ಬಸ್ಸನ್ನು ಹತ್ತುವವರಿದ್ದರು. ‘ಎಂಟ್ರೀ’ ಮಾಡಿಸಲು ಇಳಿದ ಕಂಡಕ್ಟರ್ ‘ಹುಬ್ಬಳ್ಳಿಯ ತನಕ ಸೀಟಿಲ್ಲ.  ಸ್ಟೇಂಡಿಂಗ್ ಆದರೆ ಹತ್ತಿ ‘ ಅಂತ ಹೇಳಿದನು. ಹೊನ್ನಾವರದಲ್ಲಿ ಇಳಿಯುವ ಎರಡು ಮಧ್ಯ ವಯಸ್ಕರು ಬಸ್ಸನ್ನು ಏರಿದರು.  ಮುಂದಿನ ಬಸ್ಸನ್ನೂ ನಂಬುವ ಹಾಗಿಲ್ಲ. ಭಟ್ಕಳದ ತನಕದ ಪ್ರಯಾಣಿಕರು ಈ ಸರಕಾರಿ ಬಸ್ಸನ್ನು ನಂಬುವುದು ಕಡಿಮೆ. ಖಾಸಗೀ ಬಸ್ಸಿನ ಪ್ರಯಾಣವೇ ಹೆಚ್ಚು. ಕಂಡಕ್ಟರ್ ಬಸ್ಸನ್ನು ಏರಿ ರೈಟ್ ಎಂದಲ್ಲಿಗೆ ಬಸ್ ಹೊರಟಿತು. ಸವಾಲು ಪುನಃ ಶುರು ಹಚ್ಚಿಕೊಂಡಿತು. ಹೀಗೇ ನಾಲ್ಕೈದು ಸಾರಿ ಸವಾಲು ನಡೆಯಿತು. ಸವಾಲು ಕೂಗಿದ ಎಲ್ಲರಿಗೂ ಒಂದೊಂದು ಪೆನ್ನಿನ ಭಕ್ಷೀಸಿಗೆ ತೊಂದರೆಯಾಗಲಿಲ್ಲ. ಸವಾಲ್ ಏರಿಸುವವರೂ ಒಮ್ಮೊಮ್ಮೆ ಜಿದ್ದಿಗೆ ಬೀಳುವದೂ ಕಂಡು ಬರುತ್ತಿತ್ತು, ಜೂಜಿನಲ್ಲಿ ಭಾಗವಹಿಸುವ ಜೂಜುಕೋರರ ಹಾಗೆ. ಮೂರನೇ ಕಿಟಕಿಯ ಪಕ್ಕದಲ್ಲಿ ಕುಳಿತವನು ಮಾತ್ರ ಉತ್ಸಾಹದಿಂದ ಎಂಬಂತೇ ಎಲ್ಲಾ ಸವಾಲಿನಲ್ಲಿಯೂ ಭಾಗವಹಿಸುತ್ತಿದ್ದ ಹಾಗೂ ಸವಾಲ್ ಏರಿಸಿ ಕೂಗುವವರನ್ನು ಪ್ರೋತ್ಸಾಹಿಸತ್ತಿದ್ದ. ಒಮ್ಮೊಮ್ಮೆ ಬೇರೆಯವರ ಸಲುವಾಗಿ ತಾನೇ ಕೂಗುವದೂ ಇತ್ತು.   ಹೇಗೂ ನಾವು ಸವಾಲ್ ಕೂಗಿದರೂ  ಬೇರೆಯವರು ಹೆಚ್ಚು ಕೂಗಿ ಪಡೆಯುತ್ತಾರಲ್ಲ ಅಂತ ತಿಳಿದು ಕೆಲವರು ಮಧ್ಯ ಮಧ್ಯ ಕೂಗುವದು ಕಂಡು ಬಂದಿತು.   ಬಸ್ಸು ಬ್ರಹ್ಮಾವರ ದಾಟಿ ಇನ್ನೇನು ಸಾಸ್ತಾನ ಬರಬೇಕು.  ಸವಾಲುದಾರ ಅವಸರದಲ್ಲಿದ್ದಿದ್ದು ಕಂಡು ಬಂದಿತು. ದೂರ ಪ್ರಯಾಣದ ಬಸ್ಸುಗಳು  ಕುಂದಾಪುರದಲ್ಲಿ ಹದಿನೈದು ಇಪ್ಪತ್ತು ನಿಮಿಷಗಳು ನಿಲ್ಲುತ್ತವೆ. ಸಾಮಾನ್ಯವಾಗಿ ನಿಸರ್ಗ ಕರೆಯನ್ನು ಮುಗಿಸಿ ಚಹ ಪಾನಮಾಡಿ ಮುಂದುವರಿಯಲು ಅನುಕೂಲವಾಗುತ್ತದೆ. ಅಲ್ಲಿಯ ತನಕ ಕೆಲಸ ಮುಗಿಸುವ ತವಕ ಇರಬೇಕು.   ಈಗ ಜೋಡಿ ವಸ್ತುಗಳು ಹೊರಬಂದವು.  ಒಂದು ಶರ್ಟ್ ಪೀಸ್, ಪ್ಯಾಂಟ್ ಪೀಸ್ ಹಾಗೂ ಒಂದು ಸೀರೆ. ಮೂರನ್ನೂ ಒಂದೊಂದಾಗಿ ತೋರಿಸಿ ‘ಸಮಯ ಹೆಚ್ಚು ಇಲ್ಲದೆ ಇರುವುದರಿಂದ  ಒಟ್ಟಿಗೇ ಸವಾಲು ಹಾಕುತ್ತಿದ್ದೇನೆ’ ಅಂತ ಹೇಳಿ ಒಮ್ಮೆ ಕೈ ತೂಗಿದನು. ಕಿಟಕಿಯ ಪಕ್ಕದಲ್ಲಿ ಕುಳಿತವನು ‘ಇಲ್ಲಿ ಒಮ್ಮೆ ತೋರಿಸಿ, ಹೇಗಿದೆ ಅಂತ ನೋಡುತ್ತೇನೆ’ ಅಂತ ಹೇಳಿದವನು ಮೂರೂ ವಸ್ತುಗಳನ್ನು ಒಮ್ಮೆ ಕೈಯಾಡಿಸಿ ಪರೀಕ್ಷಿದನು. ಮುಖದಲ್ಲಿ ಗೆಲುವಿನ ನಗೆ ಬೀರಿ, ಒಂದು ಸಾವಿರದ ಮೂರುನೂರಾ ಎಪ್ಪತ್ತು ರೂಪಾಯಿ ಅಂದನು.    ನನ್ನ ಪಕ್ಕದಲ್ಲಿ ಕುಳಿತವನು ಒಂದೂವರೆ ಸಾವಿರ ಎಂದನು. ಕೂಡಲೇ ಕಿಟಕಿಯ ಪಕ್ಕ ಕುಳಿತವನು ಒಂದೂ ಮುಕ್ಕಾಲು ಸಾವಿರ ಅಂದನು. ಕೋಟೇಶ್ವರ ಸಮೀಪಿಸುತ್ತಿತ್ತು. ಮಾಲುಗಳು ಚೆನ್ನಾಗಿವೆ ಎಂದನ್ನಿಸಿರಬೇಕು. ಮುಂದಿನ ಸೀಟಿನಲ್ಲಿ ಕುಳಿತವನು ಎರಡು ಸಾವಿರದ ಒಂದು ರೂಪಾಯಿ ಎಂದನು.   ಉಳಿದವರು ಯಾರೂ ಸವಾಲ್ ಏರಿಸಲಿಲ್ಲ.  ಒಂದು ವಾರ್, ಎರಡು ವಾರ್ ಹೇಳಿ ಅರ್ಧನಿಮಿಷ ತಡೆದನು.  ಮತ್ತೂ ಯಾರದೂ ಏರಿಕೆ ಇಲ್ಲ. ಮೂರು ವಾರ್ ಎಂದವನು ಮೂರೂ ವಸ್ತುಗಳನ್ನು ಮುಂದಿನ ಸೀಟಿನಲ್ಲಿ ಕುಳಿತವನಿಗೆ ಕೊಟ್ಟು ಹಣ ಪಡೆದನು.  ಆಗ ನೆಹರೂ ಸರ್ಕಲ್ ಬಂದಿತ್ತು. ಉಳಿದ ವಸ್ತುಗಳನ್ನು ಗಂಟು ಕಟ್ಟಿ ಕಂಡಕ್ಟರನಿಗೆ ವಿನಂತಿಸಿಕೊಂಡು ನೆಹರು ಸರ್ಕಲ್ ನಲ್ಲಿಯೇ ಇಳಿದು ಕುಂದಾಪುರ ಪೇಟೆಯ ಕಡೆ ನಡೆದನು.   ಕುಂದಾಪುರ ಬಸ್ ನಿಲ್ದಾಣದಲ್ಲಿ ಬಸ್ಸು ನಿಂತಿತು. ಕೆಳಗಿಳಿಯುವವರು ಇಳಿದರು.  ಮೂರೂ ವಸ್ತುಗಳನ್ನು ಸವಾಲಿನಲ್ಲಿ ಪಡೆದವನ ಹೆಂಡತಿ ಸಾವಕಾಶವಾಗಿ ವಸ್ತುಗಳನ್ನು ಬಿಡಿಸಿದಳು. ಅವು ಹಳೆಯ ಬಟ್ಟೆಗಳಾಗಿದ್ದು ಕಂಡು ಬಂದಿತು. ಗಾಬರಿಯಾದರು ಅವರು. ಕಿಟಕಿಯ ಪಕ್ಕದವನು ಬಹಳಷ್ಟು ವಸ್ತುಗಳನ್ನು ಪಡೆದುದರಿಂದ ಅವನನ್ನೂ ಕೇಳಿರಿ ಅಂತ ಯಾರೋ ಹೇಳಿದರು.   ಎಲ್ಲರೂ ಬಸ್ಸನ್ನು ಏರಿ ಬಸ್ ಹೊರಡಲು ಸಿದ್ಧವಾಯಿತು. ಮೂರೂ ವಸ್ತುಗಳನ್ನು ಪಡೆದವನು ಕಂಡಕ್ಟರರಲ್ಲಿ ‘ಅವನು ಬರಲೇ ಇಲ್ಲವಲ್ಲ’ ಅಂದನು. ಅವನೆಲ್ಲಿ ಬರುತ್ತಾನೆ. ಕುಂದಾಪುರದವರೆಗೇ ಅವನ ಟಿಕೆಟ್ಟು ಅಂತ ಹೇಳಿ ಡ್ರೈವರನಲ್ಲಿ ರೈಟ್ ಅಂದನು. ಬಸ್ಸು ಹೊರಟಿತು.      

*************************

Leave a Reply

Back To Top