ಶ್ರೀ ಬಸವರಾಜ ಕಾಸೆ ಅವರ ಪಲುಕುಗಳು ಝಲಕುಗಳು ಲೇಖನಕ್ಕೆ ಡಾ.ಗೋವಿಂದ ಹೆಗಡೆಯವರ ಪ್ರತಿಕ್ರಿಯೆ
ಶ್ರೀ ಬಸವರಾಜ ಕಾಸೆ ಅವರ ಪಲುಕುಗಳು ಝಲಕುಗಳು ಲೇಖನಕ್ಕೆ ಸಂಬಂಧಿಸಿ ಕೆಲವು ಮಾತುಗಳನ್ನು ಹೇಳಬೇಕಾಗಿದೆ.
ಶ್ರೀ ಕಾಸೆ ಅವರನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಸುಮಾರು ಎರಡು ವರ್ಷಗಳಿಂದ ಬಲ್ಲೆ. ಅವರೊಬ್ಬ ಉತ್ಸಾಹಿ. ತುಂಬ ಬರೆಯುವ, ಏನಾದರೂ ಸಾಧಿಸಬೇಕೆಂಬ ತಹತಹವುಳ್ಳ ಲೇಖಕ.
ಆದರೆ ಈ ಸಂದರ್ಭದಲ್ಲಿ ಅವರು ತಮ್ಮ ಮನೆಗೆಲಸವನ್ನು- ಹೋಂವರ್ಕ್-ಸರಿಯಾಗಿ ಮಾಡಿದಂತಿಲ್ಲ.
ಮೊದಲನೆಯದಾಗಿ ಅವರು ಹೇಳುವ ಈ “ಫಲಕುಗಳು- ಝಲಕುಗಳು” ಪದಪುಂಜವನ್ನು ನೋಡೋಣ. ಕನ್ನಡದಲ್ಲಂತೂ ಫಲಕು ಎಂಬ ಪದವಿಲ್ಲ ಅದು ಪಲುಕು ಆಗಬೇಕು. ಪಲುಕು ಶಬ್ದಕ್ಕೆ ನುಡಿ, (ಧ್ವನಿಯ) ಬಳುಕು, ಹಾಡು ಹೇಳುವಿಕೆ, ಅಂತರಾರ್ಥ ಕಲ್ಪನೆ, (ಸಂಗೀತದಲ್ಲಿ) ಧ್ವನಿಯ ಬಳುಕು ಎಂಬ ಅರ್ಥಗಳನ್ನು ನಿಘಂಟು ಕೊಡುತ್ತದೆ.
ಇನ್ನು ಝಲಕ್ ಎಂದರೆ ಲಹರಿ ,ಹೊಳಹು, (ಆಲೋಚನೆಯ)ಮಿಂಚು ಇಂದು ಅನುವಾದಿಸಿ ಕೊಳ್ಳಬಹುದು ಎಂದು ತೋರುತ್ತದೆ. ಆಂಗ್ಲದಲ್ಲಿ ಝಲಕ್ ಪದಕ್ಕೆ flash, gleam, Dawn, flavour ಮೊದಲಾದ ಪದಗಳನ್ನು ಅರ್ಥವಾಗಿ ನೀಡಲಾಗಿದೆ.
ಕಾಸೆ ಅವರು ಈ ಪಲುಕಗಳು ಮತ್ತು ಝಲಕುಗಳು ಯಾವ ಮೂಲದವು ಎಂಬುದನ್ನು ಸ್ಪಷ್ಟಪಡಿಸಿಲ್ಲ.”ಕನ್ನಡದಲ್ಲಿ ಇವು ಹೆಚ್ಚಾಗಿ ಬಂದಿಲ್ಲ”,”ಪೂರ್ಣಪ್ರಮಾಣದ ಕೃತಿ ಇನ್ನೂ ಬರಬೇಕಿದೆ”ಎನ್ನುತ್ತಾರೆ.ಅಲ್ಲಿಗೆ ಇದು ಕನ್ನಡಕ್ಕೆ ಆಮದಾದ ಪ್ರಕಾರ ಎಂದು ತಿಳಿಯಬೇಕೇ? ಎಲ್ಲಿಂದ ಅವರು ಇದನ್ನು ತಂದಿದ್ದಾರೆ? ಆ ಭಾಷೆಯಲ್ಲಿ ಇದು ಎಷ್ಟರಮಟ್ಟಿಗೆ ಪ್ರಾಚುರ್ಯ ಪಡೆದಿದೆ? ಅಲ್ಲಿ ಯಾವ ಮಹತ್ವದ ಕವಿಗಳು ಈ “ಪ್ರಕಾರ”ದಲ್ಲಿ ಕೃಷಿ ಮಾಡಿದ್ದಾರೆ? ಎಷ್ಟು ಪುರಾತನವಾದ ಕಾವ್ಯ ಪ್ರಕಾರ ಇದು? ಈ ಯಾವ ವಿವರಗಳನ್ನೂ ಅವರು ನೀಡಿರುವುದಿಲ್ಲ.
ಇನ್ನು ಅವರು ಈ ಪ್ರಕಾರ ದ ನಿಯಮ ಗುಣಲಕ್ಷಣಗಳನ್ನು ವಿವರಿಸಿದ್ದಾರೆ. ನಾಲ್ಕೈದು ಸಾಲುಗಳ ಲಹರಿಗಳು, ಅಂತಹ ಲಹರಿಗಳನ್ನು -ಝಲಕ್ ಗಳನ್ನು-ಹತ್ತಕ್ಕೆ ಕಡಿಮೆ ಇಲ್ಲದಂತೆ ಹೊಂದಿರಬೇಕು ಎನ್ನುವುದನ್ನು ಅವರು ಪ್ರಮುಖವಾಗಿ ಹೇಳಿದ್ದಾರೆ. ವಸ್ತು ಯಾವುದೇ ಇರಬಹುದು ಎಂಬುದು ಅವರ ಮಾತು. ಆದರೆ ಸಾಲುಗಳ ಬಂಧಕ್ಕೆ ಸಂಬಂಧಿಸಿ ಅವರು ಏನನ್ನೂ ಹೇಳಿಲ್ಲ ಎನ್ನುವುದು ಗಮನಾರ್ಹ. ಅಂದರೆ ಆ ಲಹರಿಗಳು ನಮ್ಮ ಹನಿಗವನಗಳಂತೆ, ಮುಕ್ತಕಗಳಂತೆ, ಛಂದೋಮುಕ್ತವಾಗಿ ಬರೆಯುವ ಅವಕಾಶ ಇರುವಂತೆ ತೋರುತ್ತದೆ. ಇಂದಿನ ಮಾತುಗಳಲ್ಲಿ ಇಂತಹ ಮುಕ್ತಕಗಳನ್ನು “ಶಾಯರಿ” ಎನ್ನುವುದಿದೆ. ಆ ದೃಷ್ಟಿಯಲ್ಲಿ ಇದನ್ನು ಶಾಯರಿಗಳ ಮಾಲಿಕೆ ಎನ್ನಬಹುದು. ಇರಲಿ.
ಕಾಸೆ ಅವರು ಹೇಳಿದ ಈ ಲಕ್ಷಣಗಳಿಂದಲೇ ಇದೊಂದು ವಿಭಿನ್ನವಾದ ಕಾವ್ಯಪ್ರಕಾರವಾಗುತ್ತದೆ ಎಂದು ನನಗನಿಸುತ್ತಿಲ್ಲ.
ಗಜಲ್, ನಜಮ್, ರುಬಾಯಿ, ಫರ್ದ್, ಹಾಯ್ಕುಗಳಂತೆ ಸ್ವತಂತ್ರ ಕಾವ್ಯಪ್ರಕಾರ ಇದು ಎಂದು ಕಾಸೆಯವರು ವಿವರಿಸಿದ ನಿಯಮ ಲಕ್ಷಣಗಳಿಂದಷ್ಟೇ ಹೇಳಲಾಗದು.
ಒಂದು ವಿಷಯ ವಸ್ತುವನ್ನು ಹಲವಾರು ಹನಿಗಳ/ಕಿರು ಕವನಗಳ ಮೂಲಕ ಕಟ್ಟುವ ಕ್ರಮ ಕನ್ನಡದಲ್ಲಿ ಹಲವಾರು ವರ್ಷಗಳಿಂದ ಇದೆ.
ಜಯಂತ ಕಾಯ್ಕಿಣಿಯವರ ಕೊಡೈ: ಕೆಲವು ಪದ್ಯಗಳು ಮತ್ತು ರಾಮಚಂದ್ರ ಶರ್ಮರ ಬೀದರ್: ಕೆಲವು ಭಗ್ನ ಪ್ರತಿಮೆಗಳು ಈಗ ನನಗೆ ನೆನಪಿಗೆ ಬರುತ್ತಿರುವ ಎರಡು ಉದಾಹರಣೆಗಳು. ಪಲುಕುಗಳು ಝಲಕುಗಳು ಕೂಡ ಅಂತಹ ಒಂದು ಪ್ರಯತ್ನ, ಪ್ರಯೋಗ ಅಷ್ಟೇ ಎಂದು ನನಗನಿಸುತ್ತದೆ.
ಕಾಸೆಯವರು ತಮ್ಮ ಈ ಲೇಖನಕ್ಕೆ ಬೇರೆ ಭಾಷೆಯಲ್ಲಿನ ಈ ಪ್ರಕಾರದಲ್ಲಿನ ಕೃಷಿಯನ್ನು ಆಕರವಾಗಿ, ಆಧಾರವಾಗಿ ಹೊಂದಿದ್ದರೆ ಅದನ್ನು ಅವರು ವಿವರಿಸಬೇಕೆಂದೂ, ಉಲ್ಲೇಖಿಸಬೇಕೆಂದೂ ಕೋರುತ್ತೇನೆ. ಆಗ ಈ ಸಂಗತಿಯನ್ನು ಇನ್ನೂ ಹೆಚ್ಚು ವಿವರವಾಗಿ, ಆಳವಾಗಿ ಗಮನಿಸಲು ಸಾಧ್ಯವಾದೀತು.
ಕೊನೆಯ ಟಿಪ್ಪಣಿ: ಅವರು ಇಲ್ಲಿ ಉಲ್ಲೇಖಿಸಿದ ಪಲುಕಿಗೆ ಸಂಬಂಧಿಸಿದಂತೆ.
“ಬಿತ್ತಿ ಉತ್ತಿದ ಬೀಜದ ಫಲ” ಎಂಬ ಸಾಲಿದೆ. ಅದು “ಉತ್ತು ಬಿತ್ತಿದ” ಎಂದಾಗಬೇಕು ಅಂತ ಅನಿಸುತ್ತಿದೆ. ಉಳುಮೆ ಮಾಡಿದ ಮೇಲೆ, ಉತ್ತಮೇಲೆ ಬಿತ್ತುವುದು. ಉಲ್ಟಾ ಅಲ್ಲ.