ಕೆ.ಶಿವು.ಲಕ್ಕಣ್ಣವರ
ಸಾಹಿತಿ, ರಂಗಭೂಮಿ ಕಲಾವಿದೆ, ಪತ್ರಕರ್ತೆ ಡಾ.ವಿಜಯಮ್ಮನವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದ್ದು ಸಮಂಜಸವಾಗೇ ಇದೆ..!
ಸಾಹಿತಿ, ಲೇಖಕಿ, ರಂಗಭೂಮಿ ಕಲಾವಿದೆ ಡಾ.ವಿಜಯಾ (ವಿಜಯಮ್ಮ) ಅವರಿಗೆ 2019 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಾನ್ ಪಿಕ್ಸನ್ ನ ಕನ್ನಡ ಭಾಷಾ ವಿಭಾಗದಲ್ಲಿ ಅವರ ‘ಕುದಿ ಎಸರು’ ಆತ್ಮಕಥೆಗೆ ಈ ಪ್ರಶಸ್ತಿ ಸಂದಿದೆ…
ಕೇಂದ್ರ ಸಾಹಿತ್ಯ ಅಕಾಡೆಮಿಯು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದೆ. ಇವರ ಜೊತೆ ದೇಶದ 21 ಭಾಷೆಯ 23 ಲೇಖಕರು, ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೂಲತಃ ದಾವಣಗೆರೆ ಜಿಲ್ಲೆಯವರಾದ ವಿಜಯಮ್ಮ ಅವರು ಬೆಂಗಳೂರಿನಲ್ಲಿ ನೆಲಸಿದ್ದಾರೆ. ಇಳಾ ಎಂಬ ಪುಸ್ತಕ ಪ್ರಕಾಶನ ಮೂಲಕ 200 ಕ್ಕೂ ಹೆಚ್ಚು ಲೇಖಕರ ಪುಸ್ತಕಗಳನ್ನು ಪ್ರಕಟಿಸಿದ್ದಾರೆ…
ಶ್ರೀರಂಗರ ನಾಟಕಗಳ ಕುರಿತು ಪಿ ಎಚ್ ಡಿ ಪಡೆದಿರುವ ವಿಜಯಮ್ಮ, ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವರು…
ಈಗ ದೊರೆತಿರುವ ಈ ಪ್ರಶಸ್ತಿಯೂ 1 ಲಕ್ಷ ರುಪಾಯಿ ನಗದು ಹಾಗೂ ಸ್ಮರಣಿಕೆ ಒಳಗೊಂಡಿರುತ್ತದೆ. ಫೆಬ್ರುವರಿ 25, 2020 ರಂದು ನವದೆಹಲಿಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಸದ್ಯ ಕನ್ನಡಿಗ, ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ…
ಡಾ.ವಿಜಯಾ(ವಿಜಯಮ್ಮ)ರ ಬದಕು-ಬರಹದ ಬಗೆಗೆ ನೋಡೋಣ…
ಡಾ.ವಿಜಯಾರವರು ಸಾಮಾಜಿಕ ಅಸಮಾನತೆ, ಶೋಷಣೆ, ದಬ್ಬಾಳಿಕೆ, ಅನ್ಯಾಯಗಳ ವಿರುದ್ಧ ದನಿ ಎತ್ತುವ, ಮಹಿಳೆಯರ ಸಮಸ್ಯೆಗಳು, ಭಾಷಾ ಚಳವಳಿ ಮುಂತಾದ ಚಳವಳಿಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳುವ ದಿಟ್ಟ ಪರ್ತಕರ್ತೆ. ಡಾ.ವಿಜಯಾರವರು ಹುಟ್ಟಿದ್ದು ದಾವಣಗೆರೆಯಲ್ಲಿ ೧೯೪೨ರ ಮಾರ್ಚ ೧೦ರಂದು. ಇವರ ತಂದೆ ಶಾಮಣ್ಣ, ತಾಯಿ ಸರೋಜ. ಪ್ರಾರಂಭಿಕ ಶಿಕ್ಷಣ ದಾವಣಗೆರೆ, ಹೊಸಪೇಟೆಯ ಅಮರಾವತಿ ನಂತರ ಬೆಂಗಳೂರಿನಲ್ಲಿ ಬಿ.ಎ.ಪದವಿ ಮುಗಿಸಿದರು. ಹಾಗೂ ‘ಶ್ರೀರಂಗರ ನಾಟಕಗಳು: ಒಂದು ಅಧ್ಯಯನ’ ಕುರಿತು ಪ್ರೌಢ ಪ್ರಬಂಧ ಮಂಡಿಸಿ ಪಡೆದ ಪಿಎಚ್‌ಡಿ ಪದವಿ ಪಡೆದರು…
ಹದಿನಾರರ ಹರೆಯದಲ್ಲಿಯೇ ವಿವಾಹಬಂಧನಕ್ಕೊಳಗಾದರೂ ಕುಟುಂಬದ ಕರ್ತವ್ಯಗಳಿಗಷ್ಟೇ ಸೀಮಿತಗೊಳಿಸಿಕೊಳ್ಳದೆ, ಅರ್ಥಪೂರ್ಣ ಬದುಕನ್ನು ತಮ್ಮದಾಗಿಸಿಕೊಳ್ಳುವ ಛಲದಿಂದ ಸಾಧನೆಯಲ್ಲಿ ತೊಡಗಿಸಿಕೊಂಡು ಪದವಿ ಮತ್ತು ಡಾಕ್ಟರೇಟ್‌ಗಳನ್ನು ಪಡೆದದ್ದು ವಿವಾಹದ ನಂತರವೇ…
ಪತ್ರಕರ್ತೆಯಾಗಿ ವೃತ್ತಿ ಪ್ರಾರಂಭಿಸಿದ್ದು ಪ್ರಜಾಮತ ಪತ್ರಿಕೆಯಲ್ಲಿ. ಪತ್ರಿಕೋದ್ಯಮಿಯಾದವರು ೧೯೬೮ರಲ್ಲಿ. ನಂತರ ಮಲ್ಲಿಗೆ, ತುಷಾರ, ರೂಪತಾರ ಪತ್ರಿಕೆಗಳ ಸಹಾಯಕ ಸಂಪಾದಕಿಯಾಗಿ ಹೊತ್ತ ಜವಾಬ್ದಾರಿಗಳು. ಚಲನಚಿತ್ರ ಸುದ್ದಿಗಳಿಗಷ್ಟೇ ಸೀಮಿತವಾಗಿದ್ದ ‘ರೂಪತಾರ’ ಪತ್ರಿಕೆಯಲ್ಲಿ ಅನೇಕ ಪ್ರಖ್ಯಾತ ಸಾಹಿತಿಗಳ ಸಾಹಿತ್ಯಕ ವಿಚಾರಗಳನ್ನು ಪ್ರಕಟಿಸಿ ಪತ್ರಿಕೆಗೊಂದು ಸಾಹಿತ್ಯಕ ಮೌಲ್ಯವನ್ನು ತಂದು ಕೊಟ್ಟವರು ಡಾ.ವಿಜಯಮ್ಮನವರು…
ಉದಯವಾಣಿ ಪತ್ರಿಕೆಯ ಅಂಕಣ ಬರಹಗಳ ಮೂಲಕ ತಮ್ಮ ಸೃಜನಾತ್ಮಕ ಬರವಣಿಗೆಯಿಂದ ಬಹಳ ಬುದ್ಧಿಜೀವಿಗಳ ಗಮನ ಸೆಳೆದರು. ‘ಅರಗಿಣಿ’ ಚಲನಚಿತ್ರ ಪತ್ರಿಕೆಯ ಸಾಪ್ರಾಹಿಕದ ಗೌರವ ಸಂಪಾದಕಿಯಾಗಿ, ‘ಬೆಳ್ಳಿಚುಕ್ಕಿ’ ವಿಡಿಯೋ ಮ್ಯಾಗಜಿನ್ ಸಮಾಲೋಚಕ ಸಂಪಾದಕಿಯಾಗಿ, ‘ನಕ್ಷತ್ರಲೋಕ’ ಚಲನಚಿತ್ರ ಸಾಪ್ತಾಹಿಕದ ಸಂಪಾದಕಿಯಾಗಿ, ಪ್ರತಿಷ್ಠಿತ ‘ಕರ್ಮವೀರ’ ಪತ್ರಿಕೆಯ ಸಾಪ್ತಾಹಿಕದ ಸಲಹೆಗಾರ್ತಿಯಾಗಿ, ‘ನಮ್ಮಮಾನಸ’ ಮಹಿಳಾ ಪತ್ರಿಕೆಯ ಸಲಹೆಗಾರ್ತಿಯಾಗಿ ‘ಹೊಸತು’ ಮಾಸ ಪತ್ರಿಕೆಯ ಸಲಹಾಮಂಡಲಿಯ ಸದಸ್ಯೆಯಾಗಿ – ಹೀಗೆ ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದಲೂ ಪತ್ರಿಕೋದ್ಯಮದಲ್ಲಿದ್ದು ಆಗಾಗ್ಗೆ ಬರೆದ ತಮ್ಮ ವಿಶಿಷ್ಟ ರೀತಿಯ ಬರಹಗಳಿಂದ ಜನಪ್ರಿಯ ಲೇಖಕಿ ಎನಿಸಿದ್ದಾರೆ ಡಾ.ವಿಜಯಮ್ಮ…
೧೯೭೦ರಲ್ಲಿ ಸ್ಥಾಪಕ ಸದಸ್ಯೆಯಾಗಿ ಎ.ಎಸ್.ಮೂರ್ತಿ, ಎ.ಎಲ್. ಶ್ರೀನಿವಾಸಮೂರ್ತಿ ಮುಂತಾದವರುಗಳೊಡನೆ ಸೇರಿ ಸ್ಥಾಪಿಸಿದ್ದು ‘ಪಪೆಟ್ ಲ್ಯಾಂಡ್’ ಹೆಣ್ಣು ಮಕ್ಕಳೇ ಬೊಂಬೆಗಳನ್ನು ತಯಾರಿಸಿಕೊಂಡು, ವಿಶಿಷ್ಟ ರೀತಿಯ ಚಲನಗತಿಯನ್ನು ಕೊಟ್ಟು ಹಲವಾರು ಘಟನೆಗಳಿಗೆ ಹಿನ್ನೆಲೆಯಲ್ಲಿ ಧ್ವನಿಮೂಡಿಸಿ, ನಡೆಸಿಕೊಟ್ಟ ಬೊಂಬೆಯಾಟದ ಪ್ರದರ್ಶನಗಳು ಕರ್ನಾಟಕದಾದ್ಯಂತ ಮನೆ ಮಾತಾಗಿತ್ತು.
ಇದಕ್ಕೆ ಅಂದು ಪ್ರಜಾವಾಣಿಯಲ್ಲಿದ್ದ ಟಿ.ಎಸ್.ರಾಮಚಂದ್ರರಾವ್ ರವರು ಆಸಕ್ತಿ ತೋರಿಸಿದ್ದರಿಂದ ರಾಷ್ಟ್ರಾದ್ಯಂತ ಪ್ರಚಾರ ಸಿಕ್ಕಿ ಚಂದ್ರಶೇಖರ ಕಂಬಾರರ ‘ಕಿಟ್ಟಿಕತೆ’, ಗಿರೀಶ್‌ಕಾರ್ನಾಡರ ‘ಮಾನಿಷಾದ’, ಚಂದ್ರಶೇಖರ ಪಾಟೀಲರ ‘ಟಿಂಗರ ಬುಡ್ಡಣ್ಣ’ ಮತ್ತು ಗಿರಡ್ಡಿ ಗೋವಿಂದ ರಾಜರ ‘ಕನಸು’ಗಳನ್ನು ಬೊಂಬೆಯಾಟಕ್ಕೆ ಅಳವಡಿಸಿ ಪಡೆದ ಪ್ರಸಿದ್ಧಿ ಪಡೆದರು…
ನಾಟಕ ಗೃಹಗಳಿಗೆ ಸೀಮಿತವಾಗಿದ್ದ ನಾಟಕಗಳನ್ನು ಜನ ಸಾಮಾನ್ಯರ ಬಳಿಗೆ ಕೊಂಡೊಯ್ಯುವಲ್ಲಿ ಕ್ರಾಂತಿಕಾರಕ ಬದಲಾವಣೆ ತಂದು, ‘ಚಿತ್ರ ಗೆಳೆಯರ ಗುಂಪು’ ೧೯೭೩ರಲ್ಲಿ ಪ್ರಾರಂಭಿಸಿದ್ದು ಬೀದಿ ನಾಟಕಗಳ ಪ್ರದರ್ಶನ…
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬಂದಾಗ ಚಳವಳಿಯ ರೂಪ ಪಡೆದು ಇವರು ರಚಿಸಿದ ತೀಕ್ಷ್ಣ ವಿಡಂಬನೆಯ ನಾಟಕಗಳು ‘ಬಂದರೋ ಬಂದರು’, ‘ಉಳ್ಳವರ ನೆರಳು’, ‘ಕೇಳ್ರಪ್ಪೋ ಕೇಳ್ರೀ…’, ಮುಖವಿಲ್ಲದವರು, ಕುವೆಂಪುರವರ ‘ಧನ್ವಂತರಿ ಚಿಕಿತ್ಸೆ’ (ರೂಪಾಂತರ) ನಾಟಕಗಳು ರಾಜ್ಯಾದ್ಯಂತ ಪ್ರದರ್ಶನಗೊಂಡು ಪುಸ್ತಕರೂಪದಲ್ಲಿಯೂ ಪ್ರಕಟವಾಗಿವೆ…
ಇವರ ಮತ್ತೊಂದು ಸಾಹಸದ ಕೆಲಸವೆಂದರೆ ಕಲೆಗಾಗಿಯೇ ಪ್ರಾರಂಭಿಸಿದ ಪತ್ರಿಕೆ. ಕಲೆಯ ಎಲ್ಲ ಕ್ಷೇತ್ರಗಳು, ಇತರ ಶಾಸ್ತ್ರಗಳು ಒಬ್ಬಾಗಿ ಕೆಲಸಮಾಡುವ ಪ್ರಕ್ರಿಯೆಯ ಶೋಧ ಮತ್ತು ಅವುಗಳನ್ನು ಅನುಭವಿಸುವ, ಅರ್ಥೈಸುವ ಮಾರ್ಗಗಳನ್ನು ಕಂಡುಕೊಳ್ಳುವ ಉದ್ದೇಶದಿಂದ ೧೯೯೩ರ ನವಂಬರ್‌ನಲ್ಲಿ ದ್ವೈಮಾಸಿಕವಾಗಿ ಪ್ರಾರಂಭಿಸಿದ ಡಾ.ವಿಜಯಮ್ಮ ‘ಸಂಕುಲ’ ಪತ್ರಿಕೆಯು ಆಯಾಯ ಕ್ಷೇತ್ರದ ವಿದ್ವಾಂಸರುಗಳ ಸಲಹೆ, ಸಹಕಾರಗಳಿಂದ ಹಲವಾರು ಆಕರ ವಿಷಯಗಳ ಸಮೃದ್ಧ ಮಾಹಿತಿಯ ಪ್ರೌಢ ಲೇಖನಗಳಿಂದ ಕೂಡಿದ್ದು, ಕಲೆಗಾಗಿಯೇ ಮೀಸಲಾಗಿದ್ದ ಪತ್ರಿಕೆಯು ಐದು ವರ್ಷಗಳ ನಂತರ ಕಾರಣಾಂತರದಿಂದ ನಿಂತು ಹೋದದ್ದು ಕಲಾಪ್ರಿಯರಿಗಾದ ನಷ್ಟವಾಯಿತು ಆಗ…
ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ ಹೊಂದಿರುವ ವಿಜಯಾರವರು ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ, ಅಧ್ಯಕ್ಷೆಯಾಗಿ; ಕಲಾಮಂದಿರ ಕಲಾ ಶಾಲೆ, ಸುಚಿತ್ರ ಫಿಲಂ ಅಕಾಡಮಿ ಮುಂತಾದವುಗಳ ಉಪಾಧ್ಯಕ್ಷೆಯಾಗಿ, ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಿತಿ, ರಾಷ್ಟ್ರೀಯ ಚಲನಚಿತ್ರ ತೀರ್ಪುಗಾರರ ಮಂಡಲಿ, ಕೇಂದ್ರ ಸಾಹಿತ್ಯ ಅಕಾಡಮಿ ಸಲಹಾ ಮಂಡಳಿ, ಕರ್ನಾಟಕ ಸರಕಾರದ ಪುಟ್ಟಣ ಕಣಗಾಲ್ ಪ್ರಶಸ್ತಿ ಆಯ್ಕೆ ಸಮಿತಿ, ಬೆಂಗಳೂರು ದೂರದರ್ಶನ ಚಲನಚಿತ್ರ ಸೆನ್ಸಾರ್ ಸಮಿತಿ, ಕರ್ನಾಟಕ ಲೇಖಕಿಯರ ಸಂಘದ ಅನುಪಮ ಪ್ರಶಸ್ತಿ ಆಯ್ಕೆ ಸಮಿತಿ, ಮೈಸೂರು ವಿಶ್ವವಿದ್ಯಾಲಯದ ಮಹಿಳಾ ವಿಷಯಕ ಅಧ್ಯಯನ ಕೇಂದ್ರ ಸಲಹಾ ಮಂಡಲಿ ಮುಂತಾದ ಸಮಿತಿಗಳ ಸದಸ್ಯೆಯಾಗಿ – ಹೀಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಮಿತಿಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದರು ಡಾ.ವಿಜಯಮ್ಮನವರು…
ಕನ್ನಡ ಪುಸ್ತಕ ಪ್ರಕಾಶನದಲ್ಲಿ ಮುದ್ರಣದ್ದೇ ದೊಡ್ಡ ಸಮಸ್ಯೆಯ ಎನಿಸಿದಾಗ ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿದ ‘ಇಳಾ’ ಪ್ರಕಾಶನವು ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯಾಗಿ ರೂಪಗೊಂಡು ಪ್ರಖ್ಯಾತ ಬರಹಗಾರರದಷ್ಟೇ ಅಲ್ಲದೆ ಅನೇಕ ಉದಯೋನ್ಮುಖ ಬರಹಗಾರರನ್ನು ಬೆಳಕಿಗೆ ತಂದರು. ಸುಮಾರು ೨೦೦ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಪ್ರಕಟಿಸಿದರು…
ಆಗಾಗ್ಗೆ ಪತ್ರಿಕೆಗೆ ಬರೆದ ಲೇಖನಗಳು, ಕಾಲಂ ಬರಹಗಳು ಎಲ್ಲವೂ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿಲ್ಲದಿದ್ದರೂ ‘ಮಾತಿನಿಂದ ಲೇಖನಿಗೆ’, ‘ಸುದ್ದಿ ಕನ್ನಡಿ’, ‘ನಿಜ ಧ್ಯಾನ’ – ಲೇಖನಗಳ ಸಂಗ್ರಹ; ಸತ್ಯಜಿತ್ ರಾಯ್ ಮತ್ತು ಅ.ನ.ಸುಬ್ಬರಾವ್ – ವ್ಯಕ್ತಿ ಚಿತ್ರಣ; ಶ್ರೀರಂಗ-ರಂಗ-ಸಾಹಿತ್ಯ-ಸಂಪ್ರಬಂಧ; ನೇಮಿಚಂದ್ರ – ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ – ಹೀಗೆ ಹಲವಾರು ಕೃತಿಗಳ ಪ್ರಕಟಣೆಯ ಜೊತೆಗೆ ಬಹಳಷ್ಟು ಕೃತಿಗಳನ್ನು ಸಂಪಾದಿಸಿದ್ದಾರೆ ಡಾ.ವಿಜಯಮ್ಮ…
ಪರ್ವ – ಒಂದು ಸಮೀಕ್ಷೆ, ಇನಾಂದಾರ್, ಇಂದಿನ ರಂಗ ಕಲಾವಿದರು, ಕನ್ನಡ ಸಿನಿಮಾ ಸ್ವರ್ಣ ಮಹೋತ್ಸವ, ಮಕ್ಕಳ ಸಿನಿಮಾ, ಕಿರಿಯರ ಕರ್ನಾಟಕ, ಪದ್ಮಾತರಂಗ (ಆಕಾಶವಾಣಿ ಕಲಾವಿದೆ ಎಸ್.ಕೆ. ಪದ್ಮಾದೇವಿಯವರ ಜೀವನ-ವೃತ್ತಿ) ‘ಅಕ್ಕರೆ’ (ವ್ಯಾರಾಯ ಬಲ್ಲಾಳರ ಅಭಿನಂದನ ಗ್ರಂಥ), ಕನ್ನಡ ಚಲನಚಿತ್ರ ಇತಿಹಾಸ, ಸ್ವಾತಂತ್ಯ್ರೋತ್ತರ ಕನ್ನಡ ಸಾಹಿತ್ಯ-ಸಂಸ್ಕೃತಿ, ಬೆಂಗಳೂರು ದರ್ಶನ, ಕರ್ನಾಟಕ ಕಲಾದರ್ಶನ ಮುಂತಾದವು ಪ್ರಮುಖವಾದವುಗಳು…
ಹೀಗೆ ಚಲನಚಿತ್ರ, ನಾಟಕ ಸಾಹಿತ್ಯದಲ್ಲಿ ತೊಡಗಿಸಿಕೊಂಡಿರುವ ಇವರಿಗೆ ಸಂದ ಪ್ರಶಸ್ತಿಗಳು ಹಲವಾರು. ಬಂದರೋ ಬಂದರು (ಬೀದಿನಾಟಕ) ನಾಟಕಕ್ಕೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಸಂಕುಲ (ಲೇಖನ ಸಂಕಲನ) ಕೃತಿಗೆ ಗೀತಾ ದೇಸಾಯಿ ಪ್ರಶಸ್ತಿ; ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಆರ್.ಎನ್.ಆರ್. ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ, ಲೋಕ ಶಿಕ್ಷಣ ಟ್ರಸ್ಟ್ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಫೆಲೊಶಿಪ್, ಮಾಸ್ತಿ ಪ್ರಶಸ್ತಿ, ಹಾರ್ನಳ್ಳಿ ಟ್ರಸ್ಟ್ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ಡಾ.ವಿಜಯಮ್ಮನವರಿಗೆ ದೊರೆತವು…
ಈ ಪ್ರಶಸ್ತಿಗಳ ಜೊತೆ ಬಂದ ಹಣವನ್ನು ಅನೇಕ ಸಂಘ ಸಂಸ್ಥೆಗಳಿಗೆ ಕೊಡುಗೆಯಾಗಿ ನೀಡಿದಂತೆ ಹಾರ್ನಳ್ಳಿ ರಾಮಸ್ವಾಮಿ ಟ್ರಸ್ಟ್ ಪ್ರಶಸ್ತಿಯ ಜೊತೆಗೆ ಕೊಡ ಮಾಡಿದ ಒಂದು ಲಕ್ಷ ರೂ. ಹಣವನ್ನು ನಾಲ್ಕು ಜನ ಲೇಖಕರು ತರಲು ಉದ್ದೇಶಿಸಿರುವ ನಾಲ್ಕು ಗ್ರಂಥಗಳ ಪ್ರಕಟಣೆಗೆ ನೆರವು ನೀಡಿರುವುದಲ್ಲದೆ ಮಾಸ್ತಿ ಪ್ರಶಸ್ತಿಯಿಂದ ಬಂದ ೨೫೦೦೦ ರೂಪಾಯಿಗಳನ್ನು ಗಾರ್ಮೆಂಟ್ಸ್ ಟೆಕ್ಸ್‌ಟೈಲ್ ವರ್ಕರ್ಸ್ ಯೂನಿಯನ್‌ಗೆ ನೀಡಿ ಶ್ರಮ ಜೀವಿಗಳ ಹೋರಾಟದ ಬದುಕಿಗೆ ಬೆನ್ನೆಲುಬಾಗಿದರು ಡಾ.ವಿಜಯಮ್ಮನವರು..!
ಹೀಗೆಯೇ ತಮ್ಮನ್ನು ತಾವು ಬರಹ, ನಾಟಕ, ಹಲವಾರು ಕೆಲಸಗಳಲ್ಲಿ ತೊಡಗಿಸಿಕೊಂಡರು ಡಾ.ವಿಜಯಮ್ಮ. ಈಗ ಈ ವಿಜಯಮ್ಮನವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ದೊರೆತಿದ್ದು ಸಮಂಜಸವಾಗೇ ಇದೆ..!
————–
ಡಾ.ವಿಜಯಮ್ಮ ಬದುಕು-ಬರಹ