ಸಿಂಪಿ’ಲ್ಲಾಗ್ ಒಂದು ಲವ್ ಸ್ಟೋರಿ
ಶ್ರೀವತ್ಸ ಜೋಶಿ
ಅದು ಸ್ವಾತಿ ಮಳೆಯೇ
ಇರಬೇಕು!
ನಿನ್ನ ಎದೆಯಿಂದ
ಜಾರಿದ ಹನಿಯೊಂದು
ನನ್ನ ತುಟಿ ಸಿಂಪಿಯ
ಸೇರಿ
ಈಗ- ಮುತ್ತಾಗಿದೆ !
@ಡಾ.ಗೋವಿಂದ ಹೆಗಡೆ
‘ಸಿಂಪಿ’ಲ್ಲಾಗ್ ಒಂದು ಲವ್ ಸ್ಟೋರಿ
ಹುಬ್ಬಳ್ಳಿಯಲ್ಲಿ ಅರಿವಳಿಕೆ ತಜ್ಞರಾಗಿರುವ ಡಾ. Govind Hegdeಯವರು ಒಬ್ಬ ಸೂಕ್ಷ್ಮಮನಸ್ಸಿನ, ಕವಿಹೃದಯದ ಕವಿ. ಪ್ರಚಾರ ಬಯಸದ ಪ್ರತಿಭಾವಂತ. ಕನ್ನಡದಲ್ಲಿ ಹನಿಗವನಗಳನ್ನು, ಕಬೀರನ ‘ದೋಹಾ’ಗಳಂತಿರುವ ದ್ವಿಪದಿಗಳನ್ನು, ಪೂರ್ಣಪ್ರಮಾಣದ ಕವಿತೆಗಳನ್ನೂ ಬರೆಯುತ್ತಿರುತ್ತಾರೆ. ನೂರಕ್ಕೂ ಹೆಚ್ಚು ಕನ್ನಡ ಗಜ಼ಲ್‌ಗಳನ್ನು ಬರೆದಿದ್ದಾರೆ. ಅವುಗಳನ್ನು ಯಾರಾದರೂ ಉತ್ತಮ ಗಾಯಕ/ಗಾಯಕಿಯರು ಹಾಡಿದರೆ ಶ್ರೇಷ್ಠ ಮಟ್ಟದ ಧ್ವನಿಸಂಪುಟ ಆಗಬಲ್ಲದು.
‘ರಾಧೆಯೊಲವಲಿ ಮಗ್ನ ನೀನು ಪ್ರೇಮರೂಪಿ ಮಾಧವ’ ಎಂಬ ಕವಿತೆಯ ಸಂದರ್ಭದಲ್ಲಿ ಡಾ. ಗೋವಿಂದ ಹೆಗಡೆಯವರನ್ನು ತಿಳಿರುತೋರಣ ಅಂಕಣದಲ್ಲಿಯೂ ಒಮ್ಮೆ ಪರಿಚಯಿಸಿದ್ದೆ.
ಇದು, ಡಾ.ಗೋವಿಂದ ಹೆಗಡೆಯವರು (ನಾನವರನ್ನು “Dr.G” ಎಂದು ಕರೆಯುತ್ತೇನೆ) ಇವತ್ತು ಈಗಷ್ಟೇ ರಚಿಸಿ ಹಂಚಿಕೊಂಡಿರುವ honeyಗವನ.
ಇದಕ್ಕೆ “ಸಿಂಪಿಲ್ಲಾಗ್ ಒಂದು ಲವ್ ಸ್ಟೋರಿ” ಎಂಬ ಶೀರ್ಷಿಕೆ ನನ್ನ ಕಡೆಯಿಂದ ಮೆಚ್ಚುಗೆಯ ರೂಪದಲ್ಲಿ.
“ಈ ಲವ್ ಸ್ಟೋರಿಗೆ ಹೆತ್ತವರಿಂದ/ಸಮಾಜದಿಂದ ವಿರೋಧ ಬಂದರೆ, ‘ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ’ ಎಂದು ಸುಮ್ಮನಾಗಬೇಕಾದರೆ, ಸಿಂಪಿ ಸಿಂಪಿಗನಾಗಬೇಕಾಗುತ್ತದೆ!” ಎಂದು ತಮಾಷೆ ಪ್ರತಿಕ್ರಿಯೆಯನ್ನೂ ಸೇರಿಸಿದ್ದೆ.
ಸಿಂಪಿ (ಮೂಲ ಮರಾಠಿ ‘ಸಿಂಪೀ’) = ಸಮುದ್ರ ತೀರದಲ್ಲಿ ದೊರೆಯುವ ಗಟ್ಟಿ ಕವಚವುಳ್ಳ ಒಂದು ಪದಾರ್ಥ, ಶುಕ್ತಿ.
ಸಿಂಪಿಗ = ಬಟ್ಟೆ ಹೊಲಿಯುವವನು, ದರ್ಜಿ.