ಅಂಕಣ ಬರಹ

ರಂಗ ರಂಗೋಲಿ

‘ಸಿರಿ’ ಗೆರೆಯ ರಂಗದಲಿ…

 ಕನಸಿನ ಎದುರು ಇರುವುದು ಉರಿಉರಿಯುವ ಯಜ್ಞಕುಂಡ. ನಾನು ಪೂರ್ತಿ‌ಕೊಟ್ಟುಕೊಂಡಿದ್ದೆ. ಕನಸಲ್ಲ. ಅನುಭವಿಸುತ್ತಿದ್ದೆ. ದುಷ್ಯಂತನೆಂಬ ಭ್ರಮೆ. ಬಲೆಯೊಳಗೆ ಸ್ವಯಂ ಸಿಕ್ಕಿಕೊಂಡಿದ್ದೆ. ಇದು ಪುರುಷ ಕಟ್ಟಿದ ವಿಸ್ಮರಣೆಯ ಕಥೆ. ರುಚಿಸಲೇಬೇಕು.

ಮಡಿಲರಳಿಸಿ ಕೂತ ಉಡುಪಿಯ ತೆರೆದ ರಂಗದ ಮೇಲೆ ಆಕೆ ಹೆಣ್ಣು ಮನಸ್ಸಿನ ಅತಿ ಕೋಮಲ, ಮೃದು ಮನದ ಅಲೆಗಳನ್ನು ಅನುಭವಿಸುತ್ತಿದ್ದಳು.

ಕಣ್ಣಿನಲ್ಲಿ ಕಡಲು ಉಕ್ಕಿ ಭೋರ್ಗರೆಯುತ್ತಿತ್ತು. ಪಾದಕ್ಕಿಂತ ತುಸು ಮೇಲೆ ಉಟ್ಟ ಸೀರೆ, ಬಿಚ್ಚಿದ ಕೇಶ ಶೃಂಗಾರ..

ಶಕುಂತಲೆ ಹೆಣ್ತನದ ಪ್ರತೀಕವಾಗಿ ಕನಸುಗಳ ಬಣ್ಣ ಎರಚುತ್ತ ರಂಗದಲ್ಲಿದ್ದ ಸರಳ ರಂಗ ಪರಿಕರ ಬಳಸುತ್ತ, ಓಡಾಡುತ್ತಿದ್ದಳು.

ವಿಮಲ ಪ್ರೀತಿ ಕುಸುಮದ ಪರಿಮಳ ಅಘ್ರಾಣಿಸಿದ ಎಲ್ಲ ಮನಸ್ಸುಗಳ ಪ್ರತಿನಿಧಿ.

ಪ್ರೀತಿ ಇದ್ದಲ್ಲಿ ಕತ್ತಲಿಲ್ಲ ಎಂಬ ಹೆಣ್ಣು ಮೊರೆ.

ರಂಗದ ಕೆಳಗೆ ಬಾಯಿ ಅಗಲಿಸಿಕೊಂಡು ಒಂದೊಂದು ಪದಗಳನ್ನು ಅದರ ಆತ್ಮವನ್ನು ನಿಧಾನವಾಗಿ ಸ್ಪರ್ಶಿಸಿ ಹೃದಯ ರಂಗಕ್ಕೆ ಬಣ್ಣ ಹಚ್ಚುತ್ತಿದ್ದೆ.

ಆಗಲೇ ಹೆಗಲ‌ ಬಳಿ ಯಾರದ್ದೋ ಪಿಸು ಮಾತು. ದುಷ್ಯಂತನೇ..

“ನನ್ನೊಳಗೊಂದು ಚಿತ್ರಕ್ಕಾಗಿ ಕಾದು ಕೂತ ನಕಾಶೆ..”

ಯಾರ ಮಾತಿದು..

ಶಕುಂತಲೆಯದ್ದೇ..

ಶಕುಂತಲೆಯ ಈ ರಂಗ ಪಾತ್ರಕ್ಕೆ ಜನ್ಮ ನೀಡಿದ ವೈದೇಹಿಯವರದ್ದೇ..

ಸುತ್ತಲಿನ ಅರಳುತ್ತಿರುವ ಹೆಣ್ಣು ಮನಸ್ಸುಗಳದ್ದೇ..

ಇಲ್ಲ ನನ್ನೊಳಗೆ ನಿರ್ಮಾಣಗೊಂಡ ಕನಸಿನ  ರೇಖೆಗಳೇ..

ಒಂದು ಅಮೃತಬೀಜ ಮಸ್ತಿಷ್ಕದೊಳಗೆ ಬಿದ್ದಿತ್ತು.

 ಉಡುಪಿಯ ಮುದ್ದಣ ರಂಗಮಂಟಪದಲ್ಲಿ ಸೀತಾಕೋಟೆಯವರು ಶಕುಂತಲೆಯಾಗಿ ವಿಕಸಿತಗೊಳ್ಳುತ್ತಿದ್ದರು. ನೋಯುತ್ತಿದ್ದರು. ಧ್ಯಾನಿಸುತ್ತಿದ್ದರು.

 ವೈದೇಹಿಯವರ ” ಶಕುಂತಲೆಯೊಡನೆ ಕಳೆದ ಅಪರಾಹ್ನ”  ಕಥೆ ರಂಗಕ್ಕೆ ಬಂದು ಆವರಿಸಿಕೊಂಡಿತ್ತು.

 ಕೃಷ್ಣಮೂರ್ತಿ ಕವತ್ತಾರರ ನಿರ್ದೇಶನ.

ಕಲಾವಿದೆಯೊಬ್ಬಳು ರಂಗದಲ್ಲಿ ಅನಾವರಣಗೊಳ್ಳುತ್ತಿದ್ದಂತೆ ಕುತೂಹಲ ವಿಸ್ಮಯದಿಂದ ಕೇಳುತ್ತಿದ್ದ ವಿದ್ಯಾರ್ಥಿ ಮನಸ್ಸಿನ ಕಲಾವಿದೆ ಹುಚ್ಚೆದ್ದಳು. ಬಾವಿಯ ಕಪ್ಪೆ ಸಾಗರದ ಕಥೆ ಕಂಡು,ಸಾಗರಕ್ಕೆ ಕುಪ್ಪಳಿಸಿದ ಕನಸಿನಂತೆ.

 ಅದುವರೆಗೂ ನಾಟಕದಲ್ಲಿ ಇಂತಹ ಪ್ರಭೇದ ಕಂಡಿರಲಿಲ್ಲ. ತಿಳಿದೂ ಇರಲಿಲ್ಲ. ಒಬ್ಬರೇ ಒಂದು ನಾಟಕವನ್ನು ರಂಗದಲ್ಲಿ ಅಭಿನಯಿಸುವುದು..

ಅಬ್ಬಾ..

ನಂತರ ಚಾನಲ್ ಗಾಗಿ ಅವರನ್ನು ಮಾತನಾಡಿಸಿದೆ. ಒಂದು ಸುದೀರ್ಘ ತಪಸ್ಸು ಸಾಕ್ಷಾತ್ಕಾರಗೊಂಡ ಬಗೆ ವಿವರಿಸಿದರು,  ಏಕವ್ಯಕ್ತಿ ನಾಟಕ ಪ್ರಸ್ತುತಿ..  ಕನಸ ಬಿತ್ತು .

ಹೇಗೆ? ಯಾರಿಂದ? ದಾರಿ?

ಕಾಲದ ಹೆಜ್ಜೆಯಲ್ಲಿ ಕನಸು ಕೃಶವಾದರೂ ಮತ್ತೆ ಎಲ್ಲಿ ಯಾರಾದರೂ ಏಕವ್ಯಕ್ತಿ ಪ್ರದರ್ಶನ ನೀಡಿದ ಸುದ್ದಿ ಕೇಳಿದಾಗೆಲ್ಲ ಗಾಳಿ ತುಂಬಿಕೊಂಡ ಬಣ್ಣದ ಬುಗ್ಗೆಯಂತೆ, ಕನಸು ಬಲ ಪಡೆದು ನನ್ನ ಆಳುತ್ತಿತ್ತು.

ಆಳದ ಬಯಕೆ ತೆವಳುತ್ತ, ಸರಿದಾಡುತ್ತ ತನ್ನ ಅಸ್ತಿತ್ವ ನೆನಪಿಸಿ ಕಾಡುತ್ತಿತ್ತು. ಹೇಗೆ ಸಾಧ್ಯ?  ಮಾಡಬೇಕು, ಮಾಡಲೇ ಬೇಕು ಎಂಬ ಸಂಕಲ್ಪ ಎದೆನೆಟ್ಟಿತ್ತು.

ಆಗೆಲ್ಲ ಏಕವ್ಯಕ್ತಿ ಎಂದಾಗೆಲ್ಲ ಮನಸ್ಸಿನಲ್ಲಿ ಮೂಡುತ್ತಿದ್ದ ಚಿತ್ರ ಅವಮಾನಿತಳಾಗಿ ಕೇಶ ಹರಡಿನಿಂತ ಪಾಂಚಾಲಿ. ಆ ಕಣ್ಣುಗಳ ಕ್ರೋಧ, ನೋವು.‌ ಹೆಣ್ತನದ ಕೆಚ್ಚು. ಹೌದು ನಾನು ದ್ರೌಪದಿ ಪಾತ್ರ ಮಾಡಬೇಕು. ಪರಿಚಯದ, ಪರಿಚಯವಾದ ಕಲಾವಿದರಲ್ಲಿ

 ” ದ್ರೌಪದಿಯ ಬಗ್ಗೆ ಯಾವುದಾದರೂ ನಾಟಕ ಇದೆಯಾ..”

ಎಚ್.ಎಸ್.ವಿ ಯವರಿಂದ ಆರಂಭಿಸಿ, ಬಂಗಾಳದ ಲೇಖಕರೊಬ್ಬರ ದ್ರೌಪದಿ ಓದಿ ಕನಸು ಕಂಡೆ.

” ಉರಿಯ ಉಯ್ಯಾಲೆ” ಅದಾಗಲೇ ರಂಗಪ್ರಸ್ತುತಿಗೊಂಡಿತ್ತು. ದ್ರೌಪದಿ ಹಲವು ರೀತಿಯಲ್ಲಿ ರಂಗದಲ್ಲಿ ಕಾಣಿಸಿಯಾಗಿದೆ.

ಬೇರೆ…? ಆ ಹೊತ್ತಿಗೆ ನನ್ನ ನೆತ್ತಿಯ ಒಲವು ಸಾಮಾಜಿಕ ನಾಟಕದ ವಸ್ತುವಿಗಿಂತ ಪೌರಾಣಿಕ, ಇತಿಹಾಸದ ಬಗ್ಗೆ ಇತ್ತು. ಹೀಗಾಗಿ ಹಲವಾರು ಪಾತ್ರ ತೆರೆದು, ಇಣುಕಿ, ಕನಸು ಅರಳಿಸಿ ಬೀಳ್ಗೊಟ್ಟಿದ್ದೆ. ನನ್ನ ಕನಸು ಹಾಗೇ ಉಳಿದಿತ್ತು.

ಜೊತೆಜೊತೆಗೆ ಹಲವು ನಾಟಕ ನಿರ್ದೇಶಕರ ಹೆಸರು ನಾಟಕಕ್ಕಾಗಿ ಧ್ಯಾನಿಸಿದೆ. ಕೆಲವರಲ್ಲಿ ಸಣ್ಣನೆ ಚರ್ಚೆಯೂ ನಡೆಸಿದೆ.

“ಮೊದಲು ನಾಟಕ ಸ್ಕ್ರಿಪ್ಟ್ ತಯಾರಾಗಲಿ”

“ಯಾವ ಕಥೆ “

ಇಂತಹ ಪ್ರಶ್ನೆ ಪ್ರತಿಕ್ರಿಯೆಗೆ ನನ್ನಲ್ಲಿ ಮತ್ತೆ ಪ್ರಶ್ನೆ ಹುಟ್ಟಿ ಪೆಚ್ಚಾಗಿ ಬರುತ್ತಿದ್ದೆ. ಒಂದಷ್ಟು ಸಮಯ ದೇವಯಾನಿಯ ಬಗ್ಗೆ ಚಿಂತಿಸಿದ್ದೆ. ಆ ಸಮಯ  ಕವಿಮಿತ್ರರಾದ ಆನಂದ್ ಋಗ್ವೇದಿಯವರು ನನಗಾಗಿ ಒಂದು ನಾಟಕ

” ದಗ್ಧಹೂ”

ಬರೆದು ಕೊಟ್ಟದ್ದು ಆಗಿತ್ತು.  ಯಾವುದೂ ಸ್ಪಷ್ಟ ರೂಪು ನನ್ನೊಳಗೆ ಮೂಡಿಸಲೇ ಇಲ್ಲ. ಅದು ನನ್ನ ಮಿತಿಯಾಗಿತ್ತು. 

ಚಿತ್ರವೊಂದರ ಚದುರಿದ  ಚೂರುಗಳು. ತಪ ಕಾಯುತ್ತಿತ್ತು. ಕಾರ್ಮೋಡದಂತೆ ಕತ್ತಲು ಮನಸ್ಸಿಗೆ. ಅದೊಂದು ದಿನ ನಿರ್ದೇಶಕರಾದ ವಿದು ಉಚ್ಚಿಲ  ಅವರಲ್ಲಿ ಮಾತನಾಡುತ್ತಿದ್ದೆ. ಸಾಮಾಜಿಕ ನಾಟಕ, ಸ್ತ್ರೀ ಸಂವೇದನೆಯ ವಸ್ತುವಿನ ಬಗ್ಗೆ ಚರ್ಚಿಸುತ್ತ..

” ನೀವೇಕೆ ಕೇವಲ ರಾಮಾಯಣ ಮಹಾಭಾರತದ ಹೆಣ್ಣು ಪಾತ್ರಗಳ ಬಗ್ಗೆ ಯೋಚಿಸುತ್ತೀರಿ. ಬೇರೆ ಯಾವುದಾದರೂ. ಉದಾಹರಣೆಗೆ

” ತುಳುನಾಡ ಸಿರಿ”

ಕಾರ್ಮೋಡದೊಳಗೆ ಮಳೆ ಹನಿ ಮೂಡಿ ಹನಿ ಹನಿಯಾಗಿ ಕಲ್ಪನೆಗಳೆಲ್ಲ ಮಳೆಯಾಗಿ ಸುರಿದಂತೆ!.  ರಂಗಮನಸ್ಸನ್ನು ತೋಯಿಸಿದಂತೆ..!!

ನಾನು ರೋಮಾಂಚಿತಳಾದೆ.

ನನ್ನ ಬಾಲ್ಯದ ದಿನಗಳು , ದೇವಾಲಯದ ಸುತ್ತಿನಲ್ಲೇ ಕಳೆದ ಬಂಗಾರದ ದಿನಗಳವು. ಸಿರಿಯಾಗಿ ಹೂಂಗುಟ್ಟುವ ಹೆಣ್ಣುಗಳ ಆ ಜಾತ್ರೆ, ಸಿರಿ ಎಂಬ ಭಾವದ ಪ್ರೇರಣೆ ನನ್ನೆದೆಯೊಳಗೆ  ಹದಬೆಚ್ಚಗೆ ಇಳಿದಂತೆ.

 ಪ್ರೇರಣೆ ಯ ಮೂಲ ಶಕ್ತಿ ಸ್ವರೂಪಿಣಿ ಸಿರಿಯ ಕಥೆಯನ್ನು ಅವಾಹಿಸಿಕೊಳ್ಳುವುದು.

 ವ್ಹಾ!!…ಇದೇ..

ಇದೇ ಹುಡುಕಾಟದಲ್ಲೇ ನಾನಿದ್ದುದು. ಅದಕ್ಕೆ ಇಷ್ಟು ಕಾಲ ಕಾಯಬೇಕಾಯಿತು. ಮಾಡುವುದಾದರೆ ಸಿರಿಯನ್ನೇ ಮಾಡಬೇಕು. ವಿಧೂ ಅವರಲ್ಲಿ ಮತ್ತಷ್ಟು ಚರ್ಚಿಸಿದೆ. ಅವರೂ ಸಿರಿಯ ಹಲವು ಆಯಾಮಗಳ ಬಗ್ಗೆ ಮಾತನಾಡಿದರು.

ನನ್ನೊಳಗೆ ಸಿರಿ ಬೇರು ಬಿಟ್ಟಾಗಿತ್ತು. ಒಂದು ಬಗೆಯ ಸಿರಿಯ ಮೋಹವೋ ಆವಾಹನೆಯೋ ತಿಳಿಯದು.

ಕಾಲ ತಣ್ಣನೆ ಹಾವಿನಂತೆ ಸರಿಯುತ್ತಿತ್ತು. ಆದರೆ ಸಿರಿ ರಂಗಕ್ಕೆ ತರಲು ಸ್ಪಷ್ಟ ದಾರಿ ತೋರಿ ಬರಲಿಲ್ಲ. ಆ ಸಮಯದಲ್ಲೇ ” ಜಿಲ್ಕ” ಎಂಬ ಕನ್ನಡ, ಮರಾಠಿ, ಹಿಂದಿಯಲ್ಲಿ ತಯಾರಾಗುತ್ತಿದ್ದ ಸಿನೇಮಾದಲ್ಲಿ ಅಭಿನಯಿಸುತ್ತಿದ್ದೆ. ಅಲ್ಲಿ ಒಬ್ಬ ಕಲಾವಿದರನ್ನು ಕಂಡೆ.

 “ಅವರ ಹೆಸರೇನು” ಎಂದು ಪಕ್ಕದಲ್ಲಿ ಕೂತ ನಟಿಯೊಬ್ಬರು ಮತ್ತೊಬ್ಬಳಿಗೆ ಕೇಳುತ್ತಿದ್ದರು. ನಿರಾಸಕ್ತಳಾಗಿ ಪುಸ್ತಕ ಓದುತ್ತಿದ್ದ ನಾನು

” ಕವತ್ತಾರ್,  ಕೃಷ್ಣಮೂರ್ತಿ ಕವತ್ತಾರ್” ಎಂಬ ಉತ್ತರ ಕೇಳಿಸಿದೊಡನೆ ದಡಕ್ಕನೆ ವಿದ್ಯುತ್ ತಂತಿ ತಗಲಿದವಳಂತೆ ತಲೆ ಎತ್ತಿದೆ.

ಅವರು ಕೋಣೆಯಿಂದ ಹೊರ ನಡೆದಿದ್ದರು. ಹೊರಬಂದೆ.

 ” ಸರ್, ನೀವು..”

ಅವರ ಜ್ಞಾನಸಂಗ್ರಹರೂಪೀ, ದೊಡ್ಡಕಣ್ಣು ಅರಳಿಸಿ ಗುಬ್ಬಚ್ಚಿಯಂತಹ ನನ್ನ ದಿಟ್ಟಿಸಿದರು.

ನನ್ನೆದುರು ಸೀತಾಕೋಟೆ ಶಕುಂತಲೆಯಾಗಿ ಓಡಾಡುತ್ತಿದ್ದ ದೃಶ್ಯ ಜೀವ ಪಡೆದು ಓಡಾಡಿದಂತೆ..

” ಸರ್,ನಿಮ್ಮ ಶಕುಂತಲೆಯೊಡನೆ ಒಂದು ಅಪರಾಹ್ನ  ನೋಡಿರುವೆ.”

ಹೇಳಿದೆ. ಏಕವ್ಯಕ್ತಿ ಕನಸಿನ ಬೀಜ ಬಿತ್ತಿದ ಆ ನಾಟಕ. ಕನಸು..

” ನೀವು..”

ಪರಿಚಯ ಮಾಡಿಕೊಂಡೆ. ಸಿನೇಮಾದ ನನ್ನ ಅಭಿನಯ ಮುಗಿಯುವ ಹಂತದಲ್ಲಿ ಕರೆದು ಹೇಳಿದರು.

 “ನಿಮ್ಮ ಕನಸು ಮುಗಿಯಲಿಲ್ಲ. ಈಗಲೂ ಅವಕಾಶವಿದೆ.”

ಮುಂದೆ ನಾನು ಅವರನ್ನು ಸಂಪರ್ಕಿಸಿದೆ. ಅವರು ಏಕವ್ಯಕ್ತಿ ಪ್ರಸ್ತುತಿಗಾಗಿ  ಕೆಲವು ಪಾತ್ರಗಳ ಬಗ್ಗೆ ಹೇಳಿದರು. 

” ನಾನು ಮಾಡಿದರೆ ಸಿರಿ ಮಾಡಬೇಕು”

” ಅದರ ಸ್ಕ್ರಿಫ್ಟ್ ಇಲ್ಲವಲ್ಲ.”

” ನೋಡೋಣ”

ಮತ್ತೆ ಹುಡುಕಾಟ. ಸಿರಿಯ ಬಗ್ಗೆ ಪ್ರಕಟಗೊಂಡ ಪಾಡ್ದನ, ಸಂಶೋದನಾ ಕೃತಿ ತರಿಸಿದೆವು. ಅದೊಂದು ದಿನ ಕರೆ ಮಾಡಿದ ನಿರ್ದೇಶಕರು,

” ಸಮಸ್ಯೆಗೆ ಸಿರಿಯೇ ಪರಿಹಾರ ನೀಡಿದ್ದಾಳೆ. ಕಾದಂಬರಿಯೊಂದು ಸಿಕ್ಕಿದೆ. ಅದನ್ನಿಟ್ಟು ನಾಟಕ ಕಟ್ಟೋಣ. ಅದು,  ವೈ.ಎನ್. ರಾವ್ ಬರೆದ ಕಾದಂಬರಿ

 ” ತುಳುನಾಡ ಸಿರಿ”

ಒಂದು ರಂಗ ಸಿದ್ದತೆ ನಡೆಯಿತು.‌ ವೀರಭದ್ರನೆದುರು ಬೇಡಿಕೊಂಡೆ. ದೇಹ, ಮನಸ್ಸುಗಳನ್ನು ಸಿರಿಗೆ ಅನುವು ಮಾಡಿಕೊಡುವ ತಾಲೀಮು ನಡೆಯಿತು.

ಬೆಳಗ್ಗೆ 8 ರಿಂದ ಮಧ್ಯಾಹ್ನ 3-4 ರವರೆಗೂ ರಿಹರ್ಸಲ್.

ದೇಹಕ್ಕೆ ತಾಲೀಮು

ಸ್ವರದ ತಾಲೀಮು,

ಉಸಿರಿಗೆ ತಾಲೀಮು, ಮನಸ್ಸಿಗೆ ತಾಲೀಮು.

ಕಾದಂಬರಿಯ ಮುಖ್ಯ ಅಂಶಗಳನ್ನು ನಾಟಕಕ್ಕಾಗಿ ಭಟ್ಟಿ ಇಳಿಸುವ ಕಾರ್ಯ. ಹಿನ್ನೆಲೆ ಸಂಗೀತಗಾರರನ್ನಿರಿಸಿ ಸಂಗೀತ ಸಂಯೋಜನೆ. ಅದೊಂದು ಆ ಸಿರಿಯತ್ತ ನಡೆದ ನಡಿಗೆ. ಹಲವು ಏಳುಬೀಳು. ಹಲವು ಮೈಲಿಗಲ್ಲುಗಳು.

ಕೊನೆಗೂ 2018ರ ಡಿಸೆಂಬರ್ ನಲ್ಲಿ ಸಿರಿ ರಂಗ ಪ್ರವೇಶವಾಯಿತು. ಬದುಕಿನ ಬಲು ದೊಡ್ಡ ಕನಸು ಸಿರಿಯ ರೂಪದಲ್ಲಿ ತೆರೆದುಕೊಂಡು ನನ್ನ ಆವರಿಸಿಬಿಟ್ಟಿತು.

 ಮೊದಲ ಪ್ರಸ್ತುತಿ ಕನಸು ರಂಗದಲ್ಲಿ ಪಕಳೆ ಪಕಳೆ ತೆರೆದುಕೊಂಡು ಅರಳಿತ್ತು. ಮುಂದೆ..ನಾಟಕ ತಣ್ಣನೆ ಮೌನಗೊಂಡಿತು. ನನಗೋ ತಳಮಳ. ಮುಂದೆ ಏನು ಮಾಡುವುದು. ಡಿಸೆಂಬರ್, ಜನವರಿ, ಫೆಬ್ರವರಿ ಅರ್ಧ ಮುಗಿದಿದೆ. ಪ್ರೀತಿಯ ಕೂಸು ಹಸಿದಿತ್ತು.ಆದರೆ ಏನೂ ಸಿಗುತ್ತಿರಲಿಲ್ಲ. ಆ ಸಮಯದಲ್ಲಿ ಆಕಸ್ಮಾತ್ತಾಗಿ ಸಿಕ್ಕಿದ ಗೆಳೆಯರೊಬ್ಬರು, ಸಿರಿ ಪ್ರಸ್ತುತಿ ಬಗ್ಗೆ ಅಭಿನಂದನೆ ತಿಳಿಸಿದರು.

” ಹೌದು. ಆದರೆ ಮತ್ತೆ ಶೋ ನಡೆಯಲೇ ಇಲ್ಲ”

” ಹೌದಾ..ಮಾಡುವಿಯಾ..3 ದಿನ ಇರುವುದು. ಅಂದರೆ ಬರುವ ವಾರ ಸೌಕೂರು ದುರ್ಗಾಪರಮೇಶ್ವರಿ ದೇವಾಲಯದ ಬ್ರಹ್ಮ‌ಕಲಶೋತ್ಸವ. ಒಂದು ವಾರ ಸಾಂಸ್ಕೃತಿಕ ಕಾರ್ಯಕ್ರಮಗಳು. ನಡುವೆ ಒಂದು ದಿನ ಖಾಲಿಯಿದೆ. ಸಾಧ್ಯವೇ”.

ಕಲಾವಿದೆ ನವಿಲಾದಳು. ಒಪ್ಪಿದೆ. ಮೂರು ತಿಂಗಳು ಸಿರಿಯ ಸ್ಪರ್ಶವಿಲ್ಲದೆ ದಿನಗಳು ಸರಿದಿವೆ. ಮತ್ತೆ ಎರಡು ದಿನದ ತಾಲೀಮಿನೊಂದಿಗೆ ಸಿರಿ ಎರಡನೆಯ ಪ್ರಸ್ತುತಿ ನಡೆಯಿತು. ಮೊದಲ ಪ್ರಸ್ತುತಿಯಲ್ಲಿ ಹಿನ್ನೆಲೆ ಗಾಯನ ಶಬರಿ ಹಾಗೂ ನಿವೇದಿತ ಎಂಬವರು ಹಾಡಿದ್ದರೆ, ಎರಡನೆಯ ಪ್ರಸ್ತುತಿಗೆ ಶಬರಿ, ಶೋಧನ್ ಎಂಬ ಬದಲಾವಣೆ. ಬೆಳಕು, ವೇಷಭೂಷಣ, ಉಡುಪು.. ಹಲವು ಬದಲಾವಣೆಗಳು ಮುಂದಿನ ಪ್ರಸ್ತುತಿಗಳಲ್ಲಿ ಅನಿವಾರ್ಯತೆ ಹಾಗೂ ಅಗತ್ಯತೆಗೆ ಅನುಗುಣವಾಗಿ , ಇಂತಹ ಹಲವು ಇವಾಲ್ಯೂಷನ್ ನಡೆಯುತ್ತಾ ಹೋಗಿದೆ.

ಎರಡನೆಯ ಪ್ರಸ್ತುತಿ ಮುಗಿದಾಗ ಸಭಾಸದರ ನಡುವಿನಿಂದ 90ರ ಹಿರಿಯರೊಬ್ಬರು ವೇದಿಕೆಗೆ ಬಂದರು.

” ಇದು ಸಿರಿ ನಡೆದಾಡಿದ ಜಾಗ. ‘ಆಲಡೆ’,  ಈ ಪುಣ್ಯದಿನದಂದು ಸಿರಿ ಪ್ರಸ್ತುತಿ ತಾಯಿಯ ಇಚ್ಛೆಯಾಗಿತ್ತು”

 ಎಂದರು. ನಮ್ಮ ತಿಳುವಳಿಕೆ ಸೀಮೆಯಾಚೆ ಒಂದು ಶಕ್ತಿಯಿದೆ. ಅದರ ಅನುಭೂತಿ ಅಚಾನಕ್ ನಮ್ಮನ್ನು ಎದುರುಗೊಳ್ಳುವುದು.

ಎರಡನೆಯ ಪ್ರಸ್ತುತಿ ಫೆಬ್ರವರಿ ಕೊನೆಗೆ ನಡೆಯಿತು. ಮುಂದೆ ಮಾರ್ಚ್ ಒಂದೇ ತಿಂಗಳಲ್ಲಿ 4 ಪ್ರಸ್ತುತಿ. ಯಾವುದೋ ಚೈತನ್ಯ ಸಿರಿಯನ್ನು ಮುನ್ನಡೆಸುತ್ತಿತ್ತು.

ಇದುವರೆಗಿನ ಮೂವತ್ತು ಪ್ರಸ್ತುತಿ ಎಂದರೆ ಮೂವತ್ತು ಬಗೆಯ ವೈವಿದ್ಯಮಯ ಅನುಭವ ಕಥನ. ಯಾವುದೋ ಒಂದೆಡೆ ಸಿರಿಯ ಮುಖ್ಯ ರಂಗಪರಿಕರವಾದ ಬಿಳೀ ಬಟ್ಟೆ ಕಾಣೆಯಾಗಿತ್ತು. ಒಂದೆರಡು ಶೋಗಳು ಬೆಳಕಿನ ಆವಶ್ಯಕತೆಯಿಲ್ಲದೆ ಹಗಲಿನಲ್ಲಿ ಪ್ರಸ್ತುತಗೊಂಡದ್ದು, ಕೆಲವು ಗೌಜಿಗದ್ದಲದ ಕೇಂದ್ರದಲ್ಲಿ, ಗಂಟೆಗಳ ಸದ್ದಿನಲ್ಲಿ, ಹಿನ್ನೆಲೆ ಸಂಗೀತಗಾರರಲ್ಲಿ ಒಬ್ಬರಿಗೆ ಸಮಸ್ಯೆಯಾಗಿ ಅರ್ಧದಲ್ಲಿ ಎದ್ದು ಹೋದದ್ದು, ಒಂದೇದಿನ ಎರಡು ಸಲ ಪ್ರಸ್ತುತಿಯಾದದ್ದು, ಖಾಲಿ ಕುರ್ಚಿಗಳಲ್ಲಿ ಪ್ರೇಕ್ಷಕರನ್ನು ಕಲ್ಪಿಸಿಕೊಂಡು ನಡೆದ ಪ್ರಸ್ತುತಿ, ವಿಸ್ತಾರವಾದ ಸಭಾಂಗಣದಲ್ಲಿ ಸೀಟುಗಳೆಲ್ಲ ಭರ್ತಿಯಾಗಿ ಹೊರಗಡೆಯೂ ನಿಂತ ಪ್ರೇಕ್ಷಕರ ಸಮ್ಮುಖ ನಿಂತ ಸಿರಿ, ಕೊನೆಯ ಕ್ಷಣದ ಅನಿವಾರ್ಯತೆಯಲ್ಲಿ ರದ್ದಾದ ಶೋ.

ಹೀಗೆ ಅದೆಷ್ಟು ಅನುಭವಗಳು.

ಸಿರಿಯ ಅವಾಹನೆಯಲ್ಲಿ  ಸ್ವಂತ ಹೆಸರೇ ಮರೆಯಾಗಿ ಸಿರಿ ಅನ್ವರ್ಥನಾಮವಾಗಿ ನಿಂತ ಸಂತಸ ಸಾಮಾನ್ಯವಾದುದಲ್ಲ. ಒಂದು ಪಾತ್ರ ಬೆಳೆದು ಅದನ್ನು ನಿರ್ವಹಿಸಿದ ಕಲಾವಿದರನ್ನು ಆವರಿಸಿಕೊಂಡು ತಾನೇ ಆಗಿ ಬಿಡುವ ವಿಸ್ಮಯಕ್ಕೆ ಸಾಕ್ಷಿಪ್ರಜ್ಞೆಯಾದುದು ಸಿರಿಯಿಂದ.

   ಸಿರಿಯ ದೆಸೆಯಿಂದ ಸಿರಿ ಓಡಾಡಿದ ಜಾಗಗಳನ್ನು ವಿಶೇಷ ಆಸ್ಥೆ,ಆರ್ತಿಯಿಂದ ಸ್ಪರ್ಶಿಸಿದ್ದು, ಸಿರಿಯ ಬಗ್ಗೆ ವಿಷಯ ಸಂಗ್ರಹಿಸಿದ್ದು, ಎಲ್ಲದಕ್ಕೂ ಮೂಲ ಸಿರಿ.

 ಸಿರಿಯ ಸಿರಿವಂತಿಕೆ ನನ್ನ ಶ್ರೀಮಂತಗೊಳಿಸಿದೆ. ಸಿರಿಯೊಂದಿಗೆ ಅನುಸಂಧಾನ ನಡೆಸಿದೆ. ಈ ಪುಣ್ಯಮಣ್ಣಿನ ಶಕ್ತಿಗೆ ಶರಣು ಬಂದಿರುವೆ.

ಮನೆಯಲ್ಲಿ ಮಗಳಾಗಿ, ಹೆಂಡತಿಯಾಗಿ, ಅಮ್ಮನಾಗಿ, ಸೊಸೆಯಾಗಿ, ಹೀಗೇ ಹತ್ತು ಹಲವು ಪಾತ್ರಗಳಲ್ಲಿ ಹೊಂದಿ,ಹೊಂದಿಸಿ, ಪ್ರೀತಿ ಹಂಚಿ ಬದುಕುವುದು, ಹೆಣ್ಣು ಮಗಳಿಗೆ ಅತ್ಯಂತ ಸಹಜ.

ದಿನ ದಿನವೂ ಏಕವ್ಯಕ್ತಿ, ಬಹಪಾತ್ರ. ನಾಟಕದ ರಂಗದಲ್ಲಿ, ಪ್ರೀತಿ, ನೋವು, ಮಮತೆ, ಕಷ್ಟ, ಸಂಘರ್ಷ ಎಲ್ಲವನ್ನೂ ಅನುಭವಿಸಿ, ಹಣ್ಣಾಗುವ ಹಣ್ಣಿನ ಸಿಹಿ ಮಾತ್ರ ಹಂಚುವ ಸ್ತ್ರೀ ಜನ್ಮಕ್ಕೆ ಮಾತ್ರ ‘ಸಿರಿ’ಯಾಗಲು ಸಾಧ್ಯ. ಅದು ಆಕೆಗೆ ನಿಜಜೀವನದಷ್ಟೇ ಸಹಜ.

ಫೋಟೊ ಆಲ್ಬಂ

************************

ಪೂರ್ಣಿಮಾ ಸುರೇಶ್

ಕನ್ನಡ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ” ಪಡೆದ ಇವರು ರಂಗಭೂಮಿಹಾಗೂಕಿರುತೆರೆಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿಭಾಷೆಯಸಿನೇಮಾಗಳಲ್ಲಿಅಭಿನಯ. ಕೊಂಕಣಿಸಿನೇಮಾ ” ಅಂತು” ವಿನಅಭಿನಯಕ್ಕೆರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿಪ್ರಸ್ತುತಿ 30 ಯಶಸ್ವೀಪ್ರದರ್ಶನಕಂಡಿದೆ.ಮಂಗಳೂರುವಿಶ್ವವಿದ್ಯಾನಿಲಯದಕೊಂಕಣಿಅಧ್ಯಯನಪೀಠದಸದಸ್ಯೆ. ಪ್ರಸ್ತುತರಾಜ್ಯಕೊಂಕಣಿಸಾಹಿತ್ಯಅಕಾಡಮಿಸದಸ್ಯೆ. “ಅಮೋಘಎಂಬಸಂಸ್ಥೆಹುಟ್ಟುಹಾಕಿಸಾಹಿತ್ಯಿಕಹಾಗೂಸಾಂಸ್ಕೃತಿಕಕಾರ್ಯಕ್ರಮಗಳಆಯೋಜನೆ. ಆಕಾಶವಾಣಿಕಲಾವಿದೆ.ಇದುವರೆಗೆ 3 ಕವನಸಂಕಲನಸೇರಿದಂತೆ 6 ಪುಸ್ತಕಗಳುಪ್ರಕಟಗೊಂಡಿವೆ. GSS ಕಾವ್ಯಪ್ರಶಸ್ತಿ,ಕನ್ನಡಸಾಹಿತ್ಯಪರಿಷತ್ತಿನದತ್ತಿಪ್ರಶಸ್ತಿ,GS Max ಸಾಹಿತ್ಯಪ್ರಶಸ್ತಿ. ಹಲವಾರುಕವಿಗೋಷ್ಠಿಯಲ್ಲಿಭಾಗವಹಿಸುವಿಕೆ

Leave a Reply

Back To Top