ನೀಳ್ಗಥೆ
ಗಿಳಿಯು ಪಂಜರದೊಳಿಲ್ಲ
ಭಾಗ—ಎರಡು
ಟಿ. ಎಸ್. ಶ್ರವಣ ಕುಮಾರಿ
ಮಗುವಿಗೆ ಕಾಗೆ, ಗುಬ್ಬಿಯನ್ನು ತೋರಿಸುತ್ತಾ ತಿನ್ನಿಸುತ್ತಿದ್ದ ಪದ್ಮನ ಒಳಮನಸ್ಸು ಯೋಚನೆಗೆ ಬಿತ್ತು. ʻನನಗ್ಗೊತ್ತಿತ್ತೇ ಇಂಥಾ ಮನೆ ಸೇರ‍್ತೀನಿ ಅಂತಾ. ಅಪ್ಪಾ ಅಮ್ಮಾ ಕಣ್ಮುಂದೆ ಸ್ವರ್ಗಾನೇ ತೋರ‍್ಸಿದ್ದಲ್ವಾ! “ನಾನೊಂದ್ಸಲ ಮದುವೆ ಆಗೋನ್ನ ನೋಡ್ಬೇಕಲ್ವಾ” ಅಂದಿದ್ದಕ್ಕೆ “ಹುಡುಗ ಶ್ರೀನಿವಾಸ ದೇವರು! ಅವರು ನಮ್ಮನೇಗೆ ಬಂದ್ರೆ ಉಪಚಾರ ಮಾಡೋಷ್ಟು ಯೋಗ್ಯತೇನೂ ನಮಗಿಲ್ಲ. ನಿನ್ನ ಅದೃಷ್ಟ ಅಷ್ಟೇ. ಒಳ್ಳೆ ಮನೆ ಸೇರ‍್ತಿದೀಯ. ರಾಜಕುಮಾರಿ ಹಾಗಿರ‍್ತೀಯ…” ಅಬ್ಭಾ… ಅದೆಷ್ಟು ಹೊಗಳಿ ಹಾಡಿದ್ರು… ನಿಜಕ್ಕೂ ʻನಾನು ನೋಡ್ಲೇ ಬೇಕಿಲ್ವೇನೋ, ನನ್ನಂತ ಪುಣ್ಯವಂತೇನೇ ಇಲ್ವೇನೋʼ ಅನ್ನಿಸೋಷ್ಟು. ಮದುವೆ ಮಂಟಪದಲ್ಲೇ ಮೊತ್ತ ಮೊದಲು ಪೆದ್ದು ಕಳೆ ರಾರಾಜಿಸುತ್ತಿರುವವನನ್ನು ನೋಡಿದ್ದು. ಮೋಡದ ಮೇಲೇ ತೇಲಾಡ್ತಿದ್ದೋಳು ಒಂದೇ ಸಲ ಪಾತಾಳಕ್ಕೇ ಇಳಿದು ಹೋಗಿದ್ದೆ. ಅಮ್ಮನನ್ನ ಹಿಡಿದು ನಿಲ್ಲಿಸಿ ಕೇಳಿದ್ದಕ್ಕೆ ಅವಳೆಷ್ಟು ಸಲೀಸಾಗಿ ಹೇಳಿದ್ದಳು “ದುಡ್ಡಿನ್ಮುಂದೆ ಯಾವ್ದೂ ಇಲ್ಲ. ನೀನೇನು ಅವ್ನ ಮುಖ ತೊಳೆದು ನೀರು ಕುಡೀಬೇಕಾ. ಅಷ್ಟು ದೊಡ್ಡಮನೆಗೆ ನೀನೇ ಯಜಮಾನಿ. ಕೈಯಿ ಬಾಯಿ ಎಲ್ಲಾ ನಿಂದೇ ತಿಳ್ಕೋ”. “ಅಮ್ಮಾ… ಈ ಮದುವೆ ನಿಲ್ಲಿಸ್ಬಿಡು. ನನಗೆ ಶ್ರೀಮಂತಿಕೆ ಬೇಡ. ಅವನ್ನ ನೋಡಿದ್ರೆ ʻನನ್ನ ಗಂಡʼ ಅನ್ನಿಸೋನು ಬೇಕು. ಇಲ್ಲಮ್ಮ. ನನ್ನ ಕೈಲಾಗಲ್ಲ. ನಾನು ಒಪ್ಪಲ್ಲ; ಬಲವಂತ ಮಾಡಿದ್ರೆ ಇಲ್ಲಿಂದ ಓಡಿ ಹೋಗ್ತೀನಿ” ಅಂದಿದ್ದಕ್ಕೆ “ಅದು ಸಾಧ್ಯಾನೇ ಇಲ್ಲ. ನಾವು ಮಾತು ಕೊಟ್ಟಾಗಿದೆ. ಹೋಗ್ತಾ ಹೋಗ್ತಾ ಹಾಗೇ ಎಲ್ಲಾ ಸರಿಹೋಗತ್ತೆ. ನೀನು ಒಪ್ಪದಿದ್ರೆ ನಮ್ಮಿಬ್ರ ಹೆಣ ತುಳ್ಕೊಂಡು ಇಲ್ಲಿಂದ ಹೋಗ್ಬೇಕಾಗತ್ತೆ” ಎಂದವಳೇ ಮುಂದಿನ ಮಾತಿಗೆ ಅವಕಾಶವೇ ಇಲ್ಲದ ಹಾಗೆ ಧಾರೆ ಮಂಟಪಕ್ಕೆ ಎಳಕೊಂಡೇ ಕರೆದುಕೊಂಡು ಹೋದಳು. ಯಾವುದೋ ಕೆಟ್ಟ ಕನಸಿನಂತೆ ಎಲ್ಲಾ ನಡೆದುಹೋಯಿತು.
ಅಪ್ಪ, ಅಮ್ಮ ಪರಮಾನಂದದಲ್ಲಿದ್ದರು. ತಂಗಿ ಸುಧಾ “ಇನ್ಮುಂದೆ ನಿಂಗೆ ತಿನ್ನಕ್ಕೆ, ಉಡೋಕೆ ಕೊರತೆ ಇಲ್ಲ ಕಣೆ ಪದ್ದಿ. ಬೇಕಾದ್ದನ್ನು ಉಂಡುಟ್ಟು ಸುಖವಾಗಿರು. ದೊಡ್ಡ ಮನೆ ಸೇರ‍್ತಿದೀಯ; ಯಾವಾಗ್ಲಾದ್ರೂ ನಂಗೂ ಹೊಸ ಸೀರೆ ಕಳಿಸ್ತಿರೆ. ಇಷ್ಟರವರ‍್ಗೂ ನಾನು ಒಂದು ಸಲವೂ ಹೊಸತು ಅನ್ನೋ ಬಟ್ಟೇನ ಮೈಮೇಲೆ ಹಾಕಿರ‍್ಲಿಲ್ಲ. ಈಗ ನೋಡೆ! ಅವರ ಮನೇವ್ರು ನಂಗೆ, ಅಮ್ಮಂಗೆ ಕೊಟ್ಟಿರೋ ಉಡುಗೊರೆ ರೇಷ್ಮೆ ಸೀರೆ ಕಣೆ!!. ಎಷ್ಟು ಚೆನ್ನಾಗಿದೆ ನೋಡು. ನಿಂಗಂತೂ ಅದೆಷ್ಟು ಒಡವೆ ಇಟ್ಟಿದಾರೆ… ಅದೆಷ್ಟು ಸೀರೆಗಳು ತಂದಿದಾರಲ್ಲೇ” ಖುಷಿಯಿಂದ ಉಬ್ಬುಬ್ಬಿ ಅಂದಳು. ರುಚಿಯಾದ ಊಟ, ಮೈತುಂಬಾ ಒಡವೆ, ಚೆಂದದ ವಸ್ತ್ರ ಇಷ್ಟೇನಾ ಜೀವನ…..! ನಿಜ… ಹುಟ್ಟಿದಾಗಿನಿಂದ ಎರಡು ಹೊತ್ತೂ ನೆಮ್ಮದಿಯಾಗಿ ಬೇಕಾದ್ದನ್ನು ಉಂಡ ದಿನವೇ ಗೊತ್ತಿಲ್ಲ. ಅಮ್ಮ, ಅಪ್ಪ ಕೆಲಸಕ್ಕೆ ಹೋಗುತ್ತಿದ್ದ ಮನೆಗಳಲ್ಲಿ ಮಿಕ್ಕಿದ್ದನ್ನು ಕೊಟ್ಟದ್ದೇ ಪರಮಾನ್ನ. ಎಷ್ಟೋ ದಿನ ಅದು ಮನೆಗೆ ತರುವಷ್ಟರಲ್ಲೇ ದಾರಿ ಬಿಡೋದರಲ್ಲಿರ‍್ತಿತ್ತು. ಅದಕ್ಕೆ ಅವಕಾಶ ಕೊಡದೆ ತಿಂದು ಮುಗಿಸುತ್ತಿದ್ದೆವು. ಇಲ್ಲದಿದ್ದರೆ ಗಂಜಿಯೋ, ರಾಗಿ ಮುದ್ದೆಯೋ ಬಿಟ್ಟು ಬೇರೆ ಕಂಡಿರಲಿಲ್ಲ. ಬಟ್ಟೆಯಂತೂ ಹೊಸತನ್ನು ಉಟ್ಟ ನೆನಪೇ ಇಲ್ಲ. ಎಲ್ಲಾ ಕಂಡವರು ಉಟ್ಟು ಕೊಟ್ಟ ಬಟ್ಟೆಗಳೇ. ನನಗೂ ಅವಳ ಹಾಗೇ ಅನ್ನಿಸಿತ್ತು… ʻಹೋದ ಮನೆಯಲ್ಲಾದರೂ ಉಂಡುಟ್ಟು ಸುಖ ಪಡಬೇಕುʼ ಅಂತ. ಆದರೆ ಉಂಡು ಉಡುವುದಷ್ಟೇ ಸುಖವೇ?!
*
ಮಗು ತಿನ್ನುವುದು ಮುಗಿದಿತ್ತು. ಒಳಗೆ ಕರೆದುಕೊಂಡು ಬಂದು ಮೂತಿ ಒರಸಿ, ಸ್ವಲ್ಪ ನೀರು ಕುಡಿಸಿ, ತೇಗಿಸಿದ ಮೇಲೆ ಮತ್ತೆ ಆಟದ ಸಾಮಾನುಗಳ ಮಧ್ಯೆ ಆಡಲು ಬಿಟ್ಟು ಒಳಗೆ ಹೋಗಿ ಬಾಕಿ ಇದ್ದ ಅಡುಗೆ ಕೆಲಸವನ್ನು ಮುಗಿಸಿ ಡೈನಿಂಗ್ ಟೇಬಲ್ಲಿನ ಮೇಲೆ ಎಲ್ಲವನ್ನೂ ಜೋಡಿಸಿ ಊಟಕ್ಕೆ ಇಬ್ಬರನ್ನೂ ಕರೆದಳು. ಊಟ ಮಾಡುತ್ತಿರುವಾಗ ಏನು ಮಾತು ಬರುತ್ತದೋ, ಹೇಗೆ ಎದುರಿಸಬೇಕೋ ಎಂದು ಯೋಚನೆಯಲ್ಲಿ ಬಿದ್ದು ಬಡಿಸುತ್ತಿದ್ದವಳನ್ನು ಆಶ್ಚರ್ಯವೆಂಬಂತೆ ವೆಂಕಟೇಶಯ್ಯನವರು ಏನನ್ನೂ ಕೇಳಲಿಲ್ಲ. ಕೈಸನ್ನೆಯಲ್ಲೇ ಬೇಕು ಬೇಡಗಳನ್ನು ಹೇಳುತ್ತಾ ಮಾತಿಲ್ಲದೆ ಊಟ ಮುಗಿಸಿ ಎದ್ದರು. ಸಧ್ಯಕ್ಕೆ ಬಚಾವಾದೆ ಎಂದುಕೊಳ್ಳುತ್ತಾ ತಟ್ಟೆಗಳನ್ನು ತೆಗೆದು ತೊಳೆದಿಟ್ಟು ಬಂದು ತನ್ನ ತಟ್ಟೆಗೆ ಬಡಿಸಿಕೊಂಡಳು. ಸ್ವಲ್ಪ ತಿನ್ನುವಷ್ಟರಲ್ಲೇ ವಾಕರಿಕೆ ಬಂದ ಹಾಗಾಗಿ, ಮುಂದೆ ತಿನ್ನುವ ಮನಸ್ಸಾಗದೆ, ಹಾಗೆಯೇ ಚೆಲ್ಲಿ, ತಟ್ಟೆ ತೊಳೆದಿಟ್ಟು ಬಂದು, ಡಾಕ್ಟರು ಕೊಟ್ಟಿದ್ದ ಮಾತ್ರೆಯನ್ನು ನುಂಗಿದಳು. ಅಡುಗೆ ಕಟ್ಟೆ, ಟೇಬಲ್ ಒರೆಸಿ ಕೈತೊಳೆದುಕೊಂಡು ಬಂದವಳು ಆಟವಾಡುತ್ತಲೇ ನಿದ್ದೆ ಹೋಗಿದ್ದ ಮಗುವನ್ನೆತ್ತಿಕೊಂಡು ಬಂದು ಮಂಚದ ಮೇಲೆ ಹಾಕಿಕೊಂಡು ತಾನೂ ಪಕ್ಕದಲ್ಲಿ ಮಲಗಿಕೊಂಡಳು. ಯೋಚನೆಯ ಭಾರಕ್ಕೆ ನಲುಗಿ ಕಣ್ಣು ಮುಚ್ಚಿಕೊಂಡರೂ, ನೆನಪುಗಳು ಒಂದರ ಹಿಂದೊಂದು ಕಾಯುತ್ತಾ ಸರತಿ ಸಾಲಿನಲ್ಲಿರುವಂತೆ ಮುಚ್ಚಿದ ಕಣ್ಣುಗಳ ಮುಂದೆ ಮೆರವಣಿಗೆ ಬಂದವು……
*
ಮದುವೆಯಾದ ವಾರದಲ್ಲೇ ಪದ್ಮಳಿಗೆ ಅರ್ಥವಾಗಿಹೋಗಿತ್ತು…. ʻಶ್ರೀನಿವಾಸ ತನಗೆ ಮಗುವನ್ನು ಕೊಡಲಾರ, ತಾನೇ ಮಗುವಾಗಬಲ್ಲ ಅಷ್ಟೇʼ ಅಂತ. ಪ್ರತಿ ರಾತ್ರಿ ನೀರಸ… ಮುಳ್ಳಿನ ಮೇಲೆ ಮಲಗಿದಂತೆ… ದಿನ ಕಳೆದಂತೆ ಇನ್ನುಳಿದ ಜೀವನವನ್ನೆಲ್ಲಾ ಹೀಗೇ ಕಳೆಯಬೇಕೇ ಎನ್ನುವ ಯೋಚನೆಯಿಂದ ಹೆದರಿಕೆಯಾಗುತ್ತಿತ್ತು. ಉಂಡುಟ್ಟು ಮೆರೆಯಲು ಕೊರತೆಯಿಲ್ಲ ನಿಜ; ಆದರೆ ಆ ಮೆರೆತವನ್ನು ನೋಡುವ, ಮೆಚ್ಚುವ ಜೀವ ಬೇಡವೇ! ಗೊಂಬೆಯ ಮುಂದೆ ಅಲಂಕಾರ ಮಾಡಿಕೊಂಡು ತಿರುಗಿದ ಹಾಗಷ್ಟೇ. ತಮ್ಮೂರಿನಲ್ಲಿ, ತಾನುಡುತ್ತಿದ್ದ ಮಾಸಲು, ಹರಕಲು ಸೀರೆಯಲ್ಲೇ ತನ್ನನ್ನು ಮೆಚ್ಚಿಕೊಳ್ಳುತ್ತಿದ್ದ ಕಣ್ಣುಗಳು ಅದೆಷ್ಟಿದ್ವು! ತನ್ನೊಂದು ನೋಟಕ್ಕೇ ಕಾಯುತ್ತಿದ್ದವರು ಅದೆಷ್ಟೋ ಹುಡುಗರು. ಅಮ್ಮನ ಹತ್ತಿರ “ನಿಮ್ಮ ಪದ್ಮನ ಮದುವೆ ಕಷ್ಟ ಆಗಲ್ಲ; ಕೇಳ್ಕೊಂಡು ಬಂದು ಮಾಡ್ಕೊಂಡು ಹೋಗ್ತಾರೆ ಬಿಡಿ” ಅನ್ನುತ್ತಿದ್ದವರದೆಷ್ಟು ಮಂದಿ… ಹಾಗೆ ಯಾರೋ ಹೇಳಿದಾಗೆಲ್ಲಾ ತಾನೂ ಮನದಲ್ಲೇ ಸಾವಿರ ಕನಸನ್ನು ಕಟ್ಟಿಕೊಂಡು ಬೀಗಿದರೂ ನನಸಲ್ಲಿ ಯಾರೂ ಬರಲಿಲ್ಲ. ಅಡುಗೆ ಕೆಲಸವನ್ನು ಮಾಡಿಕೊಂಡಿರುವ ಬಡವರ ಮನೆಯ ಬೀಗರಾಗುವ, ಅಳಿಯನಾಗುವ ಆಸಕ್ತಿಯನ್ನು ಯಾರೂ ತೋರಲಿಲ್ಲ. ಆಗ ಈ ಪ್ರಸ್ತಾಪ ಬಂದಾಗ… ಎಲ್ಲರೂ ಹೇಳಿದಂತೆ ಕೇಳಿಕೊಂಡೇನೋ ಬಂದಿದ್ದರು… ಅಪ್ಪ ಅಮ್ಮ ಸ್ವರ್ಗ ಸಿಕ್ಕ ಹಾಗೇ ಬೀಗಿದ್ದರು. ಮಗಳನ್ನು ಈ ಪರಿ ಬಲಿ ಕೊಡುತ್ತಿದ್ದೇವೆಂದು ಅವರಿಗೆ ತಿಳಿದಿತ್ತೇ?! ತಿಳಿದೂ ಕೊಟ್ಟರೆ?! ಅವರ ಬಗ್ಗೆಯೇ ದ್ವೇಷ ಉರಿಯಲು ಶುರುವಾಗಿತ್ತು. ಹಟಕ್ಕೆ ಬಿದ್ದ ಹಾಗೆ ಮದುವೆಯಾಗಿ ಇಲ್ಲಿಗೆ ಬಂದ ಮೇಲೆ ತವರಿನ ಮುಖಾನೇ ನೋಡಲಿಲ್ಲ. ಅವ್ರೂ ಏನು ಅಕ್ಕರೆಯಿಂದ ಕರೀಲಿಲ್ಲ. ಅಪ್ಪನೇ ಯಾವಾಗಾದರೂ ಬಂದು ಹೋಗುತ್ತಿದ್ದರು. ಅದೇನೋ ಬರುವಾಗೆಲ್ಲಾ ಸಪ್ಪೆ ಮುಖ ಹೊತ್ತು ಬಂದವರು, ಹೋಗುವಾಗ ಮಾತ್ರ ಪ್ರಸನ್ನಚಿತ್ತರಾಗಿ ಹೋಗುತ್ತಿದ್ದರು. ಬಂದ ತಕ್ಷಣ ʻಹೇಗಿದೀಯಾʼ, ಹೋಗುವಾಗ ʻಬರ‍್ತೀನಮ್ಮ. ನೀನು ಪುಣ್ಯವಂತೆ. ದೇವರಂತ ಮಾವನವರು. ದೇಗುಲದಂತ ಮನೆ, ಹಸುವಿನಂತ ಗಂಡʼ ಬಿಟ್ಟರೆ ತನ್ನೊಂದಿಗೆ ಬೇರೆ ಮಾತೇ ಇಲ್ಲ; ಅವರ ಮಾತು ಏನಿದ್ದರೂ ಮಾವನವರೊಂದಿಗೇ.
ಹೊತ್ತು ಹೋಗದೆ ಅಡುಗೆ ಕೆಲಸದವರನ್ನು ಬಿಡಿಸಿ ಅಡುಗೆ ಮನೆ ಕೆಲಸವನ್ನು ವಹಿಸಿಕೊಂಡಾಯಿತು. ಮನೆಯ ಸುತ್ತಾ ಇದ್ದ ಕೈತೋಟದಲ್ಲಿ ಏನೇನೋ ಹೂಗಿಡಗಳನ್ನು, ತರಕಾರಿಗಳನ್ನು ಬೆಳೆಸಿಕೊಳ್ಳುತ್ತಾ ಕಾಲ ಕಳೆದದ್ದಾಯಿತು. ಪ್ರಣಯ ದೃಶ್ಯಗಳನ್ನು ನೋಡಿದರೇ ಮೈಯುರಿಯುವಂತಾಗಿ ಟೀವಿ ನೋಡುವುದನ್ನೇ ನಿಲ್ಲಿಸಿದ್ದಾಯಿತು. ಮೊದಮೊದಲಿಗೆ ಶ್ರೀನಿವಾಸ ದೇವಸ್ಥಾನಕ್ಕೆ ಹೋಗುವಾಗ ಕರೆಯುತ್ತಿದ್ದ. ʻನಾನೇನು ತಪ್ಪು ಮಾಡಿದ್ದೇಂತ ದೇವರು ನನಗೀ ಶಿಕ್ಷೆ ಕೊಟ್ಟʼ ಎಂದನಿಸಿದ್ದವಳಿಗೆ ದೇವರೂ ಬೇಡವಾಗಿದ್ದ. ಎಂದೂ ತನಗೆ ಅವನೊಂದಿಗೆ ಹೊರಗೆ ಹೋಗಬೇಕೆನಿಸಿರಲಿಲ್ಲ; ದೇವಸ್ಥಾನಕ್ಕೇ ಏಕೆ, ಎಲ್ಲಿಗೂ ಅವನೊಂದಿಗೆ ಹೋಗಬೇಕು ಅನ್ನಿಸುತ್ತಿರಲಿಲ್ಲ. ಮನೆಯಲ್ಲಿದ್ದ ಮೂವರೂ ಒಬ್ಬರೊಬ್ಬರಿಗೆ ಅಪರಿಚಿತರಾಗೇ ಉಳಿದಿದ್ದರು. ಮಾವನಿಗೆ ತನ್ನ ಒಂಟಿತನ ಅರ್ಥವಾಗುತ್ತಿತ್ತೇನೋ… ಅದರಿಂದ ಏನೂ ಪ್ರಯೋಜನವಿರಲಿಲ್ಲ. ಮನೆಗೆ ಬಂದವರೆಲ್ಲಾ “ಯಾವಾಗ ಮೊಮ್ಮಗು ಮನೆಗೆ ಬರೋದು” ಎಂದಾಗೆಲ್ಲಾ ಒಂದು ಕ್ಷಣ ಪೆಚ್ಚಾಗುತ್ತಿದ್ದವರು “ದೇವರು ಕಣ್ಬಿಡಬೇಕಲ್ಲ” ಎನ್ನುತ್ತಿದ್ದರು.
ಅದ್ಯಾವಾಗ ಅವರ ತಲೆಯಲ್ಲಿ ಏನು ಯೋಚನೆ ಹೊಕ್ಕಿತೋ ಮೊದಲು ಅಡುಗೆಯವರು ಇದ್ದ ಹಿಂದಿನ ಔಟ್‌ಹೌಸನ್ನು ಬಾಡಿಗೆಗೆ ಕೊಡುವ ನಿರ್ಧಾರ ಮಾಡಿದರು. ಸಂಸಾರಸ್ತರಿದ್ದರೆ ಗಲಾಟೆ ಜಾಸ್ತಿ ಎಂದು ಕಾಲೇಜಿನ ಲೆಕ್ಚರರ್ ಆಗಿದ್ದ, ಮದುವೆಯಾಗದೆ ಒಬ್ಬನೇ ಇದ್ದ ಶ್ರೀಧರನಿಗೆ ನಾಮ್‌ಕೇವಾಸ್ತೆ ಬಾಡಿಗೆಗೆ ಮನೆಯನ್ನು ಕೊಟ್ಟರು. ಉತ್ಸಾಹ ಚಿಮ್ಮುವಂತಿದ್ದವನು ಬಲು ಬೇಗ ಎಲ್ಲರಿಗೂ ಪ್ರಿಯನಾಗಿ ಮನೆಯವನೇ ಆಗಿಬಿಟ್ಟ. ಕನ್ನಡ ಲೆಕ್ಚರರ್; ಓದಲು ಎಷ್ಟೆಷ್ಟೋ ಪುಸ್ತಕಗಳನ್ನು ತಂದು ಕೊಡ್ತಿದ್ದ. ಅದರ ಬಗ್ಗೆ ತನ್ನೊಂದಿಗೆ ಚರ್ಚಿಸ್ತಿದ್ದ. ವಾದ ಮಾಡ್ತಿದ್ದ. ಎಷ್ಟು ದಿನದ ಗೆಳೆಯನೋ ಅನ್ನೋ ಹಾಗಾಗಿಬಿಟ್ಟ. ತಾವಿಬ್ಬರೂ ಸಲುಗೆಯಿಂದ ಮಾತಾಡುವಾಗಲೂ ಆಶ್ಚರ್ಯವೆಂದರೆ ಮನೆಯಲ್ಲೂ ಯಾರೂ ಇದನ್ನು ವಿರೋಧಿಸಲಿಲ್ಲ. ಅವನು ಬಂದಾಗೆಲ್ಲಾ ʻಮೇಷ್ಟ್ರಿಗೆ ಕಾಫಿ ತಂದುಕೊಡಮ್ಮ. ತಿಂಡಿಕೊಡಮ್ಮʼ ಎಂದು ಉತ್ಸಾಹವನ್ನೇ ತೋರುತ್ತಿದ್ದರು. ಜೀವನದಲ್ಲಿ ಒಂದಿಷ್ಟು ಉತ್ಸಾಹ ತುಂಬತೊಡಗಿತು. ಇದೇ ಸಮಯದಲ್ಲಿ ಮಾವನವರು ಮಗುವಿಗಾಗಿ ಹರಕೆ ಕಟ್ಟಿಕೊಂಡು ಶ್ರೀನಿವಾಸನನ್ನೂ ಕರೆದುಕೊಂಡು ತಿರುಪತಿಗೆ ಹೊರಟರು. ಈಗ ಮೂವರಾಗತ್ತೆ ಮಗುವಾದ ಮೇಲೆ ನಾಲ್ವರೂ ಒಟ್ಟಿಗೆ ಹೋಗೋಣ ಎಂದು ತನ್ನ ಬಳಿ ಹೇಳಿದರು. ಹೇಗೂ ಮಗುವಾಗುವ ಛಾನ್ಸೇನೂ ಇಲ್ಲ; ಜೊತೆಗೆ ಹೋಗುವ ಇಚ್ಛೇನೂ ಇದ್ದಿಲ್ಲ. ʻಸರಿʼಯೆಂದು ಅವರನ್ನು ಕಳಿಸಿದ್ದಾಯಿತು. ಮೂರು ದಿನ ಏನೋ ಸೆರೆಯಿಂದ ಮುಕ್ತಳಾದ ಹಾಗೆ ಬಿಡುಗಡೆಯ ಭಾವ….
ಮಾರನೆಯ ಸಾಯಂಕಾಲ ಶ್ರೀಧರ ಎಂದಿನಂತೆ ಮನೆಗೆ ಬಂದ. ಹಿಂದಿನ ವಾರ ತಂದುಕೊಟ್ಟಿದ್ದ ವಂಶವೃಕ್ಷ ಕಾದಂಬರಿಯ ಬಗ್ಗೆ ಚರ್ಚೆ ಶುರುವಾಯಿತು. ಹುಟ್ಟಿದಾಗಿನಿಂದಲೂ ಏನೋ ಒಂದು ಚೌಕಟ್ಟಿನಲ್ಲಿ ಬೆಳೆದವಳಿಗೆ ಕಾತ್ಯಾಯಿನಿ ಮರುಮದುವೆ ಮಾಡಿಕೊಂಡಿದ್ದು ಸಂಪೂರ್ಣ ಒಪ್ಪಿಗೆಯಾಗಿರಲಿಲ್ಲ. ಅದನ್ನೇ ಹೇಳಿದಾಗ ಅವನು ಆ ಪಾತ್ರದ ಬಗ್ಗೆ ತನ್ನ ವಿಚಾರಗಳನ್ನು ಹೇಳುತ್ತಾ, ಹೇಳುತ್ತಾ ವಿಧವೆಯಾಗಿದ್ದರೂ ಅವಳು ಮದುವೆಯಾಗುವ ನಿರ್ಧಾರ ತೆಗೆದುಕೊಂಡದ್ದು ಸರಿ ಎನ್ನುವ ನಿಲುವಿಗೆ ಅವಳನ್ನು ತಂದುಬಿಟ್ಟ. ರಾತ್ರಿ ಎಂಟು ಗಂಟೆಯಾಗಿತ್ತೇನೋ… ಹೊತ್ತಾಯಿತು ಅಡುಗೆ ಮಾಡಿಕೊಳ್ಳಬೇಕು ಎಂದು ಎದ್ದವನನ್ನು ʻಮಧ್ಯಾಹ್ನ ಮಾಡಿದ್ದೇ ಇಬ್ಬರಿಗಾಗುವಷ್ಟಿದೆ ಇಲ್ಲೇ ಊಟ ಮಾಡಿಕೊಂಡು ಹೋದರಾಯಿತುʼ ಎಂದು ನಿಲ್ಲಿಸಿಕೊಂಡಳು. ಮತ್ತೂ ಹರಟೆ ಮುಂದುವರೆಯಿತು… ಊಟವಾಯಿತು. ಕೈ ತೊಳೆಯಲು ವಾಶ್ ಬೇಸಿನ್ನಿಗೆ ಹೋದವಳು ಹಿಂದಿದ್ದವನನ್ನು ಗಮನಿಸದೆ ತಟಕ್ಕನೆ ಹಿಂತಿರುಗಿದವಳು… ಆಯತಪ್ಪಿ ಅವನಿಗೆ ಒರಗಿಕೊಂಡಳು… ಬಿದ್ದು ಬಿಡುತ್ತಾಳೇನೋ ಎಂದು ಗಟ್ಟಿಯಾಗಿ ಅವಳನ್ನು ಹಿಡಿದುಕೊಂಡವನಿಗೆ ಅವಳನ್ನು ಬಿಡಬೇಕೆನ್ನಿಸಲಿಲ್ಲ. ಅವನು ತನ್ನನ್ನು ಬಿಡಲಿ ಎಂದು ಅವಳಿಗೂ ಅನ್ನಿಸಲಿಲ್ಲ… ಬೇಸಗೆಯ ಮೊದಲ ಮಳೆ ಇದ್ದಕ್ಕಿದ್ದಂತೆ ಶುರುವಾಗಿ ಕಾದ ಭೂಮಿ ನೆಂದು ತಣಿಯತೊಡಗಿತ್ತು……
*****************************
ಧನ್ಯವಾದಗಳು ಮದುಸೂಧನ್ ಸರ್
“ಗಿಳಿಯ ಪಂಜರದೊಳಿಲ್ಲ” ನೀಳ್ಗತೆಯನ್ನು ಓದುತ್ತಾ ಹೋದಂತೆ ನನ್ನ ಮನಸ್ಸು 50 ವರ್ಷಗಳ ಹಿಂದಿನ ದಿನಕ್ಕೆ ಹೋಯಿತು. ಅದರೊಂದಿಗೆ ಬ್ವೈರಪ್ಶಪನವರ ವಂಶವೃಕ್ಷ ಕಾದಂಬರಿಯು ನೆನಪಾಗತೊಡಗಿತು. ಎರಡನೇ ಭಾಗವನ್ನು ಓದುತ್ತಿದ್ದಂತೆ ವಂಶವೃಕ್ಷದಲ್ಲಿ ಕಂಡುಬರುವ ಘಟನೆಗಳು ನನ್ನ ಮನಸ್ಸಿನ ಮುಂದೆ ಮತ್ತೆ ಹಾದುಹೋಯಿತು. ಬಹುಷಃ ಆಸ್ತಿಯನ್ನು ತಮ್ಮ ಸಂತತಿಯಲ್ಲೇ ಉಳಿಸಿಕೊಂಡು ದಾಯಾದಿಗಳ ಪಾಲಾಗುವುದನ್ನು ತಪ್ಪಿಸುವ ಉದ್ದೇಶವನ್ನು ಹೊಂದಿದ್ದ ಮಾವ ವೆಂಕಟೇಶಯ್ಯನವರ ಪರೋಕ್ಷ ಒಪ್ಪಿಗೆ ಇದ್ದಿರಬಹುದು. ಇಲ್ಲವಾದಲ್ಲಿ ಅವರು ಸ್ಫುರದ್ರೂಪಿ ಅವಿವಾಹಿತ ಯುವಕನಿಗೆ ದಿಢೀರನೆ ಔಟ್ ಹೌಸ್ ನ್ನು ಬಾಡಿಗೆಗೆ ಯಾಕೆ ಕೊಡುತ್ತಿದ್ದರು ಹಾಗೂ ಸೊಸೆಯೊಬ್ಬಳನ್ನೇ ಮನೆಯಲ್ಲಿ ಬಿಟ್ಟು ಮಗನೊಂದಿಗೆ ತಿರುಪತಿಗೆ ಏಕೆ ಹೋಗುತ್ತಿದ್ದರು? ಅರ್ಧ ಶತಮಾನಗಳ ಹಿಂದಿನ ಕಥೆಗಳನ್ನು ನೆನಪು ಮಾಡಿಕೊಳ್ಳುವ ಶೈಲಿಯಲ್ಲಿ ಕಥೆಯನ್ನು ರಚಿಸಿ ವೇದಿಕೆಯಲ್ಲಿ ಹಂಚಿಕೊಂಡಿರುವುದು.ಅಭಿನಂದನಾರ್ಹವಾದ ಸಂಗತಿಯೇ. ಇದೇ ರೀತಿಯ ಶೈಲಿಯ ಮತ್ತಷ್ಟು ಕಥೆಗಳನ್ನು ನಿರೀಕ್ಷಿಸುವೆ.
ತುಂಬಾ ಚೆನ್ನಾಗಿದೆ ಕತೆ.
ವಂಶ ಬೆಳೆಸುವ ಇಚ್ಛೆ ಅವಳ ಮಾವನನ್ನು ಕಾಡಿ ಹೀಗೆ ಮಾಡಿರಬಹುದು. ಅವಳ ಮನಸು ಏನು ಬಯಸುತ್ತದೆಂಬುದನ್ನು ಗಮನಿಸಿರುವುದರ ಬಗ್ಗೆ ಸಂಶಯ. ಮುಂದಿನ ಕಂತಿಗೆ ಕಾಯುವಂತಾಗಿದೆ