ಅಂಕಣ ಬರಹ

ದೀಪದ ನುಡಿ

ಸತ್ಯಂ ಶಿವಂ‌ ಸುಂದರಂ

Light Painting Pictures | Download Free Images on Unsplash

ಸತ್ಯಕ್ಕೂ ಸುಳ್ಳಿಗೂ ತಲೆತಲಾಂತರದ ದ್ವೇಷ.ತಲೆತಲಾಂತರದ ಯಾಕೆ ಸೃಷ್ಟಿ ಪೂರ್ವದ ದ್ವೇಷ. ಆದಿಪರಾಶಕ್ತಿಯು ಬ್ರಹ್ಮ ಮತ್ತು ವಿಷ್ಣುವನ್ನು ಸೃಜಿಸಿ ಅಲ್ಲಿರು ಜ್ಯೋತಿರ್ಲಿಂಗದ ಆದಿ ಅಂತ್ಯಗಳ ಕಂಡು ಬರಲು ಅವರಿಬ್ಬರನ್ನೂ ಕಳಿಸಿದಾಗ ಅನಂತ ದೂರ ಬ್ರಹ್ಮ ವಿಷ್ಣುಗಳಿಬ್ಬರೂ ಪಯಣಿಸಿದರೂ   ಆ ಜ್ಯೋತಿರ್ಲಿಂಗದ ಆದಿಯನ್ನೂ ಅಂತ್ಯವನ್ನೂ ಕಾಣದೇ ವಾಪಸ್ ಬಂದರಂತೆ . ಆದಿ ಪರಾಶಕ್ತಿಯು ಮೊದಲು ಬ್ರಹ್ಮನನ್ನು ” ನೀ ಕಂಡೆಯ ಈ ಜ್ಯೋತಿರ್ಲಿಂಗದ ತುದಿಯ”? ಎಂದು ಕೇಳಿದಾಗ ಬ್ರಹ್ಮ ಕ್ಷಣವೂ ಯೋಚಿಸದೆ ಹೌದು ಇದರ ಅಂತ್ಯ ಕಂಡೆ ಎಂದು ಸುಳ್ಳು ಹೇಳಿದ್ದೂ ಅದರಿಂದ ಕುಪಿತಗೊಂಡ ಆದಿ ಪರಾಶಕ್ತಿ ನೀನು ಸೃಷ್ಟಿಕರ್ತನ ಪಾತ್ರ ವಹಿಸಿದರೂ ಈ ಸೃಷ್ಠಿಯಲ್ಲಿ ನಿನ್ನನ್ನು ಯಾರೂ ಪೂಜಿಸುವುದಿಲ್ಲ” ಎಂದು ಶಾಪವಿತ್ತಳಂತೆ.

  ಹಾಗೇ ಮುಂದುವರಿದು ಶ್ರೀಹರಿ ವಿಷ್ಣುವನ್ನು ಕೇಳಿದಾಗ ಆತ “ಈ ಜ್ಯೋತಿರ್ಲಿಂಗಕ್ಕೆ ಆದಿಯಾಗಲಿ ಅಂತ್ಯವಾಗಲಿ ಇದೆ ಎಂದು ನನಗನಿಸುತ್ತಿಲ್ಲ.ಇದರ ತುದಿಯನ್ನು ನಾನು ಕಾಣಲೇ ಇಲ್ಲ ” ಎಂದು ಸತ್ಯವನ್ನೇ ಹೇಳಿದಾಗ ಪ್ರಸನ್ನಳಾದ ಆದಿ ಪರಾಶಕ್ತಿಯು ” ನೀನು ಸತ್ಯವನ್ನು ನುಡಿದದ್ದರಿಂದ ಯುಗಯುಗಗಳಲ್ಲೂ ಅನೇಕ ರೂಪಗಳಲ್ಲಿ ಜನ ನಿನ್ನನ್ನು ಆರಾಧಿಸುತ್ತಾರೆ. ಸತ್ಯ ಧರ್ಮ ಎತ್ತಿ ಹಿಡಿಯಲು ನೀನು ಹಲವಾರು ಅವತಾರಗಳನ್ನು ತಳೆದು ಲೋಕಪಾಲಕನಾಗುವೆ” ಎಂದು  ವರ ನೀಡಿದಳಂತೆ.

ಈ ಕಥೆ ಸತ್ಯವೋ ಸುಳ್ಳೋ…ಅವುಗಳಿಗೇ  ಗೊತ್ತು.ಆದರೆ ಸುಳ್ಳಿಗೂ ಸತ್ಯಕ್ಕೂ ಅಂದಿನಿಂದಲೇ ಪರಮದ್ವೇಷ ಪ್ರಾರಂಭವಾಯಿತೆಂದು ನಂಬಬಹುದೆನಿಸುತ್ತದೆ.

ಸುಳ್ಳು ಸದಾ ವಿಜೃಂಭಿಸುತ್ತಿತ್ತು ಸತ್ಯ ಸದಾ ಕಷ್ಟ ,ನಷ್ಟಗಳ ಅನುಭವಿಸುತ್ತಿತ್ತು. ಆದರೂ ಸತ್ಯದ ಮುಖದಲ್ಲಿ ಅದೆಂಥದ್ದೋ ಕಳೆ. ಸುಳ್ಳಿಗೂ ಏನಾದರೂ ಮಾಡಿ ಸತ್ಯವನ್ನು ಮಣಿಸಬೇಕೆಂಬ ಛಲ. ಆಗಾಗ  ಎದುರು ಬದುರಾದರೂ  ಸತ್ಯ ಗಂಭೀರವಾಗಿ ನಡೆದುಬಿಡುತ್ತಿತ್ತು.ಸುಳ್ಳು ಅಟ್ಟಹಾಸ ಮಾಡುತ್ತಾ ಈ ಸತ್ಯ ನನ್ನನ್ನ ನೋಡಿ ಹೆದರಿ ತಲೆ ತಗ್ಗಿಸಿ ಓಡಿಹೋಯಿತು ಎಂದು ಗರ್ವದಿಂದ ನಗುತ್ತಿತ್ತು.

            ಇಷ್ಟೇ ಆಗಿದ್ದರೆ ಪರವಾಗಿಲ್ಲ.ಸುಳ್ಳಿಗೆ ಒಂದು ವರ ಸಿಕ್ಕಿಬಿಟ್ಟಿತ್ತು.ಯಾವ ದೇವರು ವರ ಕೊಟ್ಟನೋ ಯಾಕಾಗಿ ಕೊಟ್ಟನೋ ಯಾರಿಗೂ ಗೊತ್ತಿಲ್ಲ.ಅದೇನೆಂದರೆ ಸುಳ್ಳು ಮಾತಾಡಲು ಪ್ರಾರಂಭಿಸಿದಾಗಲೆಲ್ಲ ಅದರ ಒಂದು ನಾಲಗೆ ಹತ್ತಾಗುತ್ತಿತ್ತು.ಆ ಹತ್ತು ನಾಲಗೆ ನೂರಾಗುತ್ತಿತ್ತು.ಕೇಳುವವರ ಕಿವಿ ಒಡೆವಂತೆ ಸುಳ್ಳು ಅಷ್ಟೂ ನಾಲಗೆಗಳಿಂದ ಘಟ್ಟಿಸಿ ಮಾತಾಡುತ್ತಿತ್ತು. ಸತ್ಯ ಒಂದೇ ನಾಲಗೆಯಿದ್ದಿದ್ದರಿಂದ ಅದರ ಶಬ್ದ ಸುಳ್ಳಿನ ನೂರು ನಾಲಗೆಗಳ ಅಬ್ಬರದ ಮಧ್ಯೆ ಕೇಳಿಸುತ್ತಲೇ ಇರಲಿಲ್ಲ. ಸತ್ಯ ಕೆಲವೊಮ್ಮೆ ಮೌನವಾಗಿ ಬಿಡುತ್ತಿತ್ತು. ಎಷ್ಟೆಲ್ಲಾ ಅಬ್ಬರದ ನಡುವೆಯೂ ಮೌನದ ಮಾತನ್ನೂ ಕೇಳುವ ಜನರೂ  ಇದ್ದಾರೆಂದು ಸತ್ಯಕ್ಕೂ ಗೊತ್ತಿತ್ತು.

        ಹೀಗೇ ಯುಗಗಳೇ ಕಳೆದುಹೋದವು.ಯಥಾಪ್ರಕಾರ ಸತ್ಯ ತೊಂದರೆಗೀಡಾಗುವುದು ಸುಳ್ಳು ವಿಜೃಂಭಿಸುವುದು ನಡೆದೇ ಇತ್ತು. ಒಮ್ಮೆ ಸುಳ್ಳಿಗೇನನಿಸಿತೋ ಕಾಣೆ ಸತ್ಯ ಇದ್ದಲ್ಲಿಗೇ ಹೋಗಿ ಘಟ್ಟಿಸಿ ಕೇಳಿತು.

” ಯಾಕೆ ಹೀಗೆ ಒಂದೇ ದಾರಿ ಹಿಡಿದುಕೊಂಡು ಕಷ್ಟ ಅನುಭವಿಸುವೆ .ಸುಮ್ಮನೇ ನನ್ನ ಜೊತೆ ಸೇರಿಕೋ .ನೋಡು ನಾನೆಷ್ಟು ನೆಮ್ಮದಿಯಿಂದ ಇದ್ದೇನೆ .ನೀನೆಂದಾದರೂ ಹೀಗಿದ್ದೆಯ? ನೆನಪಿಸಿಕೊ?”

    ಸತ್ಯ ನಸುನಕ್ಕಿತು. ” ನೀನು ಹತ್ತಿರವಿದ್ದಾಗಲಷ್ಟೆ ನಿನ್ನ ಧ್ವನಿ ಜೋರಾಗಿ ಕೇಳುತ್ತದೆ  ಮರುಳೆ. ನೀನು ದೂರ ಸರಿದಂತೆ ನಿನ್ನ ಧ್ವನಿ‌ ಮಂಕಾಗುತ್ತದೆ. ಆಮೇಲೆ ನೀನು ನನ್ನಂತೆ ಒಂದೇ ದಾರಿ ಹಿಡಿಯಲೂ ಆಗದು ನೋಡು.ನಿನಗೆ ಆಶ್ರಯ ಕೊಡುವವರ ಹುಡುಕಿಕೊಂಡು ನೀನು ಸುತ್ತುತ್ತಲೇ ಇರುತ್ತೀಯ .ನಾನೋ ಇದ್ದಲ್ಲಿಯೇ ಇರುತ್ತೇನೆ. ಯಾರು ನಿನ್ನ ಅಬ್ಬರದ ನಡುವೆಯೂ ನನ್ನ ಧ್ವನಿ ಕೇಳಿಸಿಕೊಳ್ಳುತ್ತಾರೋ ಅವರು ನನ್ನನ್ನು ಹುಡುಕಿಕೊಂಡು ಬರುತ್ತಾರೆ.ಆಗ ಅದೆಷ್ಟು ನೆಮ್ಮದಿ ಸಿಗುತ್ತದೆ ಗೊತ್ತೆ?”

        ಸುಳ್ಳು ಒಪ್ಪಲಿಲ್ಲ.” ನೀನು ಮರುಳು.ನನ್ನ ಗಟ್ಟಿ ಧ್ವನಿ ಹತ್ತು ಸಲ ಕೇಳುದ ಮೇಲೆ ಯಾರಾದರೂ ನನ್ನನ್ನೇ ನಂಬಬೇಕು ನಿನ್ನನ್ನಲ್ಲ.ನಿನಗೆ ಜಗತ್ತಿನಲ್ಲಿ ಗೌರವವಿಲ್ಲ” ಎಂದು ಅಪಹಾಸ್ಯ ಮಾಡಿತು. 

        ಸತ್ಯ ಶಾಂತವಾಗಿ ಹೇಳಿತು. “. ನೂರು ಸಿಡಿಲು ಹೊಡೆದರೂ  ಹೊಳೆಯುವುದು ಮಿಂಚು ಮಾತ್ರಾ. ನನ್ನ ಯಾತ್ರೆ ನನ್ನದು. ನನ್ನ ಹಾದಿ ನನ್ನದು. ನೀನು ನಿನ್ನ ಕೆಲಸ ಮಾಡುತ್ತಾ ನಡೆ .ನಾನು ನನ್ನ ಹಾದಿ ಸವೆಸುತ್ತಾ ನಡೆಯುವೆ . ಕೊನೆಗೆ ಗೆಲುವು ಯಾರದು ನೋಡೋಣ”

                  ಸುಳ್ಳು ,ಸತ್ಯಗಳು ಆಗಾಗ ಹೀಗೆ ಸಂಧಿಸುತ್ತಲೇ ಇವೆ.ವಾದ ಮಾಡುತ್ತಲೇ ಇವೆ .ಒಮ್ಮೊಮ್ಮೆ ಸುಳ್ಳು ಮೇಲುಗೈ ಸಾಧಿಸಿದರೆ ಒಮ್ಮೊಮ್ಮೆ ಸತ್ಯ ನಗುತ್ತದೆ.

ಸುಳ್ಳಿಗೀಗ ರೆಕ್ಕೆ ಪುಕ್ಕಗಳೂ ಬಂದಿವೆ .ಮತ್ಸರ ,ಕೀಳಿರಿಮೆ ,ಅಹಂಕಾರ , ಕುತ್ಸಿತ ಬುದ್ಧಿಗಳೆಂಬ ರೆಕ್ಕೆಗಳು.

         ಸತ್ಯವೂ ಕಡಿಮೆ ಏನಿಲ್ಲ. ಗೌರವ ,ಅಭಿಮಾನ ,ಸಜ್ಜನಿಕೆ, ವಿಶ್ವಾಸಗಳೆಂಬ ರೆಕ್ಕೆಗಳ ಮೂಡಿಸಿಕೊಂಡು ಸತ್ಯವೂ ಹಾರುತ್ತಿದೆ.

                 ಆದರೂ ಸತ್ಯವೂ ನೆಲವ ಮುಟ್ಟಿಲ್ಲ ಗಗನವ ತಾಕಿಲ್ಲ.

      ಸುಳ್ಳೂ ನೆಲವ ಮುಟ್ಟಿಲ್ಲ ,ಗಗನವ ತಾಕಿಲ್ಲ.

       ಹಾರುತ್ತಲೇ ಇವೆ .ಸುಳ್ಳಿನ ಹಾದಿ ನಿರಂತರ ಬದಲಾಗುತ್ತಿದೆ.

    ಸತ್ಯ ಬಿಟ್ಟ ಬಾಣದಂತೆ ದಿಕ್ಕುಗೆಡದೆ ಒಂದೇ ಹಾದಿಯಲ್ಲಿ ಸಾಗುತ್ತಲೇ ಇದೆ.

ಕಾಲ ಬದಲಾಗುತ್ತದೆ ,ಜನರ ಮನೋಭಾವ ಬದಲಾಗುತ್ತದೆ , ಮೌಲ್ಯಗಳ ಬಗೆಗಿನ ಧೋರಣೆ  ಬದಲಾಗುತ್ತದೆ.

ಆದರೆ ಸತ್ಯ ಚಿರಸ್ಥಾಯಿಯಾಗಿ ಉಳಿಯುತ್ತದೆ. ಹಾಗಾಗಿಯೇ ಹೇಳುವುದು ಸತ್ಯಂ ಶಿವಂ ಸುಂದರಂ…

       ದೀಪದ ನುಡಿ ಇಲ್ಲಿಗೆ ಮುಗಿಯುತ್ತದೆ. ಹದಿನಾಲ್ಕು ವಾರಗಳ ಕಾಲ ಮೂಡಿ ಬಂದ ಈ‌ ಅಂಕಣದಲ್ಲಿ ನಾ ಕಂಡ, ಕೇಳಿದ ,ಅನುಭವಿಸಿದ ಘಟನೆಗಳು, ಜೀವನದ ತಿರುವುಗಳು ಕಳಿಸಿದ ಒಳನೋಟಗಳಿಗೆ ಅಕ್ಷರದ ರೂಪು ಕೊಡಲು ಪ್ರಯತ್ನಿಸಿರುವೆ.ದೀಪ ಎಂದಿಗೂ ಮಾತಾಡದು ಎನ್ನುವವರೂ ಇದ್ದಾರೆ. ಆದರೆ ದೀಪದ ಬೆಳಕೇ ದೀಪದ ಮಾತು.ಜಗತ್ತಿರುವವರೆಗೂ ಬೆಳಕಿರಲೇಬೇಕು.ದೀಪಗಳು ಬೆಳಗಲೇ ಬೇಕು.ಅದು ಸೂರ್ಯನಿರಬಹುದು ಅಥವಾ ಪುಟ್ಟ ಹಣತೆಯಿರಬಹುದು.ಬೆಳಕು ಬೆಳಕೇ…ಬೆಳಕಲ್ಲೇ ನಮ್ಮ ಬದುಕು ಭಾವಗಳು ಅರಳಬೇಕು ಎನ್ನುವುದಂತೂ‌ಸತ್ಯ..ನಮ್ಮ ನಮ್ಮ ಎದೆಯಲ್ಲಿನ ಹಣತೆಗಳು ನಾವಿರುವವರೆಗೂ ಆರಂದತೆ ಕಾಪಿಡುವ ಜಬಾಬ್ದಾರಿ ನಮ್ಮದೇ.

       ಹಾಗಾಗೇ ಬೆಳಕು ಹೇಳುತ್ತದೆ

             ಕತ್ತಲೆಯೆ

          ದಣಿದೇನೆಂದು

         ಹೊಂಚದಿರು

‌‌‌‌‌        ಬೆಳಗುವುದೇ

‌        ನನ್ನ‌ ಬದುಕು

***************

                             ದೇವಯಾನಿ

ಕಾಲೇಜು ದಿನಗಳಿಂದ ದೇವಯಾನಿ ಹೆಸರಿನಲ್ಲಿ ಕಥೆ ,ಕವನ ,  ಅನುವಾದಿತ ಕಥೆ , ಪ್ರಬಂಧ ಬರೆಯುತ್ತಿದ್ದು ತುಷಾರ, ಮಯೂರ ,ಕಸ್ತೂರಿ , ಪ್ರಜಾವಾಣಿ, ವಿಕ್ರಮ , ಉತ್ಥಾನ, ಉದಯವಾಣಿ, ತರಂಗ ,ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ಗಣಿತ ವಿಜ್ಞಾನ ಪ್ರೌಢಶಾಲಾ ಶಿಕ್ಷಕಿ.ಇಪ್ಪತ್ತನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವಾರು ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದು ಹಲವಾರು ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಶಾಲಾ ಮಕ್ಕಳಿಗಾಗಿ ” ಧರೆಯನುಳಿಸುವ ಬನ್ನಿರಿ, ಮೂರು ವೈಜ್ಞಾನಿಕ ನಾಟಕಗಳು” , “ತುಟಿ ಬೇಲಿ ದಾಟಿದ ನಗು” ಕವನ ಸಂಕಲನ ,  “ತುಂಡು ಭೂಮಿ ತುಣುಕು ಆಕಾಶ”  ಕಥಾ ಸಂಕಲನ ಪ್ರಕಟಿಸಿದ್ದು ಅನುವಾದಿತ ಕಥಾ ಸಂಕಲನ ಅಚ್ಚಿನಲ್ಲಿರುತ್ತದೆ

Leave a Reply

Back To Top