ಹರಿಯುವ ನೀರು

ಲೇಖನ

ಹರಿಯುವ ನೀರು

ಪ್ರೊ. ರಾಜನಂದಾ ಘಾರ್ಗಿ                

Mother Baby Statue by Clay Moorti Art, mother baby statue,Decorative  Sculpture | ID - 5138523

 ಅಪುತ್ರಸ್ಯ ಗತೀರ್ನಾಸ್ತಿ ಉಕ್ತಿ ಎಷ್ಟರಮಟ್ಟಿಗೆ ಪ್ರಸ್ತುತ ಎನ್ನುವುದೇ ಪ್ರಶ್ನೆ. ಜೀವನದ ಅರ್ಥ ಬದಲಾಗುತ್ತಾ ಇದೆ. ಮೋಕ್ಷದ ಕಲ್ಪನೆ ಬದಲಾಗುತ್ತಾ ಇದೆ. ಆದ್ದರಿಂದ ಮಗನಿಂದ ಸ್ವರ್ಗಕಾಣುವ ಪರಿಕಲ್ಪನೆ ಎಷ್ಟರ ಮಟ್ಟಿಗೆ ಪ್ರಸ್ತುತ? ಮಕ್ಕಳು ನಮ್ಮನ್ನು ನೋಡಿಕೊಳ್ಳುವ, ನಮ್ಮ ಆಸ್ತಿಯನ್ನು ನೋಡಿಕೊಳ್ಳುವ,ನಮ್ಮ ಉದ್ಯೋಗ, ವ್ಯವಹಾರಗಳನ್ನು ಮುಂದುವರಿಸಿಕೊಂಡು ಹೋಗುವ ಪರಿಕಲ್ಪನೆಗಳು, ವ್ಯವಸ್ಥೆಗಳು ಬದಲಾಗುತ್ತ ಇವೆ. 

      ಮಹಿಳೆಯರು ತಾಯ್ತನದಲ್ಲಿ ಸಾರ್ಥಕತೆಯನ್ನು ಕಾಣುವುದು ಸಾಮಾನ್ಯ. ತಾಯ್ತನದ ಅನುಭವವೇ ಅಂಥಹುದು. ಮಹಿಳೆಯರು ಬರೀ ತಾಯಿಯಾಗಿ ತಮ್ಮನ್ನು ಗುರುತಿಸಿಕೊಂಡಿದ್ದರೆ, ಮಕ್ಕಳು ದೂರ ಆದಾಗ ಬದುಕು ಖಾಲಿಯಾಗುತ್ತದೆ, ಬದುಕಿಗೆ ಅರ್ಥವಿಲ್ಲ ಎನಿಸುತ್ತದೆ. ಈ ಸಮಸ್ಯೆಗೆ ಒಂದೇ ಪರಿಹಾರ. ತಮ್ಮನ್ನು ತಾವು ಒಬ್ಬ ವ್ಯಕ್ತಿಯಾಗಿ ಗುರುತಿಸಿಕೊಳ್ಳುವುದು. ತಾಯ್ತನದಿಂದ ಮೇಲಕ್ಕೇರಿ ಒಬ್ಬ ವ್ಯಕ್ತಿಯಾಗಿ ಬೆಳೆಯುವುದು. ಇದು ಮಕ್ಕಳು ದೂರವಾದ ನಂತರ ತಂದುಕೊಳ್ಳಬೇಕಾದ ಬದಲಾವಣೆ ಅಲ್ಲ. ಆರಂಭದಿಂದಲೇ ಬೆಳಿಸಿಕೊಳ್ಳಬೇಕಾದ ಮಾನಸಿಕ ಪ್ರಕ್ರಿಯೆ. ತಾಯ್ತನದ ಜೊತೆಗೆ ಕುಟುಂಬದ ಹೊರಗೂ ತನ್ನದೇ ಆದ ವ್ಯಕ್ತಿತ್ವವನ್ನು ಬೆಳೆಸಿಕೊಂಡಾಗ, ತನ್ನತನವನ್ನು ಉಳಿಸಿಕೊಂಡಾಗಮಾತ್ರ ಈ ರೀತಿ ಕಾಡುವ ಖಾಲಿತನದಿಂದ ಮಹಿಳೆ ತನ್ನನ್ನು ತಾನು ಉಳಿಸಿಕೊಳ್ಳಬಹುದು. 

      ಬದಲಾವಣೆ ಪ್ರಗತಿಯ ಸಂಕೇತ ಮತ್ತು ಅವಶ್ಯಕ

ಆದರೆ ಕೆಲವು ಸಲ ಸಾಮಾಜಿಕ ಬದಲಾವಣೆಗಳು ಭಾವನಾತ್ಮಕ ಬದಲಾವಣೆಗೆ, ಮೌಲ್ಯಗಳ ಬದಲಾವಣೆಗೆ ಎಡೆಮಾಡಿ ಕೊಡುತ್ತವೆ. ಪ್ರಾಚೀನ ಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿ ಕುಟುಂಬದ ವ್ಯವಸ್ಥಗೆ ವಿಶೇಷ ಸ್ಥಾನವಿದ್ದಿತು. ಸಂಬಂಧಗಳು ನಿಕಟವಾಗಿದ್ದವು. ಉದ್ಯೋಗಗಳು ಕುಟುಂಬಕ್ಕೆ ಸೀಮಿತವಾಗಿದ್ದವು, ಸ್ಥಳೀಯವಾಗಿದ್ದವು. ಮಕ್ಕಳು ತಾಯಿಯಿಂದ ದೂರವಾಗುವ ಕಾರಣಗಳಿರಲಿಲ್ಲ. ಹೆಣ್ಣು ಮಗುವನ್ನು ಕುಲಕ್ಕೆ ಹೊರಗೆ ಎನ್ನುತ್ತ ಚಿಕ್ಕಂದಿನಿಂದಲೇ ಮಾನಸಿಕವಾಗಿ ದೂರವಿಡಲಾಗುತ್ತಿತ್ತು. 

      ಬದಲಾಗಿರುವ ಸಮಾಜದಲ್ಲಿ ಔದ್ಯೋಗೀಕರಣದಿಂದ ಮಕ್ಕಳು ಉದ್ಯೋಗಕ್ಕಾಗಿ ಮನೆಯಿಂದ ಹೊರಗೆ ಹೋಗುವ ಅವಶ್ಯಕತೆ ಉಂಟಾಗಿದೆ. ಇತ್ತೀಚೆಗೆ ಜಾಗತೀಕರಣದ ಫಲವಾಗಿ ಉದ್ಯೋಗವನ್ನು ಅರಿಸಿ ಹೋಗುವ ಅವಕಾಶ, ಅನಿವಾರ್ಯತೆಗಳು ಹೆಚ್ಚಾಗಿವೆ. ಮಕ್ಕಳು ಹೆಚ್ಚಿನ ಪದವಿ ಪಡೆದಾಗ ಒಳ್ಳೆಯ ಉದ್ಯೋಗಾವಕಾಶ ಪಡೆದಾಗ ಬಹಳ ಸಂತೋಷಪಡುತ್ತೇವೆ. ಆದರೆ ದೂರ ಹೋದಾಗ, ನಮ್ಮ ಅವಶ್ಯಕತೆಗಳಿಗೆ ಸ್ಪಂಧಿಸದೇ ಇದ್ದಾಗ ಬೇಸರಗೊಳ್ಳುತ್ತೇವೆ. ಲಕ್ಷಗಟ್ಟಲೇ ಸಂಬಳ ಪಡೆಯುವ ಮಕ್ಕಳ ಬಗ್ಗೆ ಅಭಿಮಾನದಿಂದ ಹೇಳಿಕೊಳ್ಳುತ್ತೇವೆ. ಆದರೆ ಅವರ ಮೇಲೆ ಇರುವ ಕೆಲಸದ ಒತ್ತಡವನ್ನು ಮರೆಯುತ್ತೇವೆ. ಇದು ಯ್ಯಾವ ನ್ಯಾಯ? ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಹರಿಯುತ್ತಿರುವ ನೀರಿನಂತೆರುವ ಈ ಸಮಾಜಿಕ ವ್ಯವಸ್ಥಯೊಂದಿಗೆ ಬದಲಾಗುತ್ತಿರುವ ಭಾವನತ್ಮಕ ಸಂಬಂಧಗಳೊಂದಿಗೆ ಹೊಂದಿಕೊಳ್ಳುವ ಮನಸ್ಥಿತಿಯ ಅವಶ್ಯಕತೆ ಇದೆ. ನಮ್ಮತನವನ್ನು ಉಳಿಸಿಕೊಳ್ಳುತ್ತ ಭಾವನಾತ್ಮಕವಾಗಿ ನಮ್ಮನ್ನು ನಾವು ಗಟ್ಟಿಗೊಳಿಸಿಕೊಳ್ಳುವ ಪ್ರಕ್ರಿಯೆ ಸಫಲವಾಗಬೇಕಿದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯಗಳನ್ನೂ ಕಾಯ್ದುಕೊಳ್ಳುತ್ತ ಅವಲಂಬನೆರಹೀತ ಸಂಬಂಧಗಳೊಂದಿಗೆ ಸಂಭ್ರಮಿಸಿದಾಗ ಮಾತ್ರ ಜೀವನದ ಸಾರ್ಥಕತೆಯನ್ನು ಅನುಭವಿಸಲು ಸಾಧ್ಯ. 

.*******************************

Leave a Reply

Back To Top