ನೆನಪಿನ ಸಂಗಾತಿ
ʼದೇವರುʼ ಎನ್ನುವ ವೈಚಾರಿಕ ಪುಸ್ತಕ ಬರೆದ
ಎ.ಎನ್.ಮೂತಿ೯ರಾವ್ ನೆನಪಿನಲ್ಲಿ
ಶಾರದಾಜೈರಾಂ ಬಿ



ಇಂದು ಎ.ಎನ್.ಮೂತಿ೯ರಾವ್ ಅವರ ಜನುಮದಿನ ಎಂದಾಗ ಮೊದಲು ನನಗೆ ನೆನಪಾಗಿದ್ದೇ ಅವರ *ದೇವರು* ಕೃತಿ.ವೈಚಾರಿಕ ಸಾಹಿತಿ, ವಿಮರ್ಶಕ ಎ.ಎನ್.ಮೂರ್ತಿರಾಯರು 1900 ರ ಜೂನ್ 16 ರಂದು ಮಂಡ್ಯದ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಜನಿಸಿದರು.ಅವರ ಪ್ರಮುಖ ಕೃತಿಗಳೆಂದರೆ ಮೊದಲ ಕೃತಿ *ಹೂವುಗಳು* ಪ್ರಬಂಧ ಸಂಕಲನ ಪ್ರಕಟವಾಯಿತು. *ದೇವರು* ಎಂಬ ವೈಚಾರಿಕ ಕೃತಿಗೆ ಪಂಪ ಪ್ರಶಸ್ತಿ ಲಭಿಸಿದೆ ಮತ್ತು ಆಂಗ್ಲ ಭಾಷೆಗೆ ತರ್ಜುಮೆ ಆಗಿದೆ.ಸಾಕ್ರೆಟಿಸ್ ನಾ ಕೊನೆಯ ದಿನಗಳು ಅನುವಾದ ಕೃತಿ,ಯೋಧನ ಪುನರಾಗಮನ ಅನುವಾದ ಕೃತಿ, ಇಂಡಿಯಾ, ಇಂದು ಮತ್ತು ನಾಳೆ ಜವಾಹರ್ ಲಾಲ್ ನೆಹರೂರ India today and tomorrow ಪುಸ್ತಕದ ಅನುವಾದ, ಸಾಕಷ್ಟು ಲಲಿತ ಪ್ರಬಂಧಗಳು, ವಿಮರ್ಶೆ,ಲೇಖನ ಗ್ರಂಥಗಳು, ರೂಪಾಂತರಗಳು *ಚಿತ್ರಗಳು ಪತ್ರಗಳು* ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿಯಾಗಿದೆ.*ಸಂಜೆಗಣ್ಣಿನ ಹಿನ್ನೋಟ* ಆತ್ಮಚರಿತ್ರೆಯಾಗಿದೆ.1977ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಗೌರವ ಡಿ ಲಿಟ್ ಲಭಿಸಿದೆ.1984ರಲ್ಲಿ ಕೈವಾರದಲ್ಲಿ ನಡೆದ ಅಖಿಲ ಭಾರತ 56ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ಅಲಂಕರಿಸಿದರು.ಇನ್ನಿತರ ಪುರಸ್ಕಾರಗಳು ಸಂದಿವೆ.
ಅವರ ಜನುಮದಿನ ಎಂದು ಆಚರಿಸುವ ನಾವುಗಳು ಅವರ ವೈಚಾರಿಕ ವಿಚಾರಧಾರೆಗಳನ್ನು ಎಷ್ಟರ ಮಟ್ಟಿಗೆ ಅಳವಡಿಸಿಕೊಂಡಿದ್ದೇವೆ ನಮ್ಮನ್ನೇ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು.
ಮತ್ತೆ ನಾವು ಮೌಢ್ಯಚಾರ, ಅಂಧಶ್ರದ್ಧೆಗಳತ್ತ ವಾಲುತ್ತಿರುವುದು ನಿಜಕ್ಕೂ ವಿಷಾದದ ಸಂಗತಿ.
ಬುದ್ಧ,ಬಸವ, ಅಂಬೇಡ್ಕರ್, ಸರ್ವಜ್ಞ, ಶರಣರು, ಸೂಫಿ ಸಂತರು, ಸಾಹಿತಿಗಳು, ದಾರ್ಶನಿಕರು ಆಯಾಯಾ ಕಾಲಘಟ್ಟಗಳಲ್ಲಿ ಸಮಾಜದಲ್ಲಿ ಆಳವಾಗಿ ಬೇರೂರಿರುವ ಕಂದಾಚಾರ, ಮೂಢನಂಬಿಕೆಗಳನ್ನು ಹೊಡೆದೊಡಿಸುವ ಪ್ರಯತ್ನ ತಮ್ಮ ಪ್ರಾಣದ ಹಂಗು ತೊರೆದು ಮಾಡಿದ್ದಾರೆ.ಆದರೆ ಮೂರ್ತಿರಾಯರೇ ಒಂದೆಡೆ ಹೇಳುತ್ತಾರೆ ಅಶಿಕ್ಷಿತ ಮೂಢ ವ್ಯಕ್ತಿಗಿಂತ ಶಿಕ್ಷಿತ ಮೂಢ ವ್ಯಕ್ತಿ ಸಮಾಜಕ್ಕೆ ಮಾರಕ ಎಂದು ಈ ಮಾತು ಪ್ರಸ್ತುತ ಘಟನೆಗಳಿಗೆ ತುಂಬಾನೇ ಸೂಕ್ತ ಮಾರ್ಮಿಕ, ಎಚ್ಚರಿಕೆಯ ಧ್ವನಿಯಂತಿದೆ.
ದೇವರು, ದೆವ್ವ, ಆಚರಣೆಗಳು ಅಂತಾ ಬಂದಾಗ ಸಹಜವಾಗಿ ಜನರಲ್ಲಿ ಕುತೂಹಲ ಕೆರಳಿಸುವ, ಭಾವೋದ್ವೇಗಕ್ಕೆ ಒಳಗಾಗುವ ಕೆಲವೊಮ್ಮೆ ಬಲಿಯಾಗುವ ಸಂಗತಿಗಳೇ.

ಯಾವುದೇ ಕಾಲಘಟ್ಟದಲ್ಲಿ ಅಂದಿನ ದಿನಮಾನಕ್ಕೆ ತಕ್ಕುದಾದ ಆಚರಣೆ ಜಾರಿಯಾಗಿರುತ್ತದೆ, ಆದರೆ ಆ ಆಚರಣೆ ಹಿಂದಿರುವ ಉದ್ದೇಶ ತಿಳಿಯದೆ ಇಂದಿಗೂ ಮುಂದುವರಿಸಿಕೊಂಡು ಹೋಗುವುದು ಸರ್ವೇ ಸಾಮಾನ್ಯ ವಿಷಯ.ಕೆಲವೊಂದು ವೈಜ್ಞಾನಿಕ ಮನೋಭಾವದಿಂದ ವಿಶ್ಲೇಷಣೆ ಮಾಡಿದಾಗ ಒಳಿತು ಉಂಟುಮಾಡುವ, ದುಂದು ವೆಚ್ಚ, ಆರ್ಥಿಕ ಹೊರೆ ಎನ್ನಿಸದ ಕಾರ್ಯಗಳನ್ನು ಆಚರಿಸುವುದು ಸೂಕ್ತ.ವೈಚಾರಿಕವಾಗಿ ಚಿಂತಿಸದೆ ಸುಮ್ಮನೆ ಆರ್ಥಿಕ ನಷ್ಟವಾಗುವಂತೆ ಆಚರಿಸುವುದು ನಷ್ಟವೇ ಹೊರತು ಲಾಭವಿಲ್ಲ.ಕೆಲವೊಬ್ಬರು ಆಚರಣೆಯ ಮೂಲ ಉದ್ದೇಶ ತಮ್ಮ ಸಂಪತ್ತನ್ನು ಪ್ರದರ್ಶಸಿಸುವ, ಆಡಂಬರತೆ ಮೋಹದಿಂದ ಸಮಾಜದ ಪ್ರತಿಷ್ಠೆಗಾಗಿ ಮಾಡುವವರೇ ಅಪಾರ ಸಂಖ್ಯೆಯಲ್ಲಿ ಇದ್ದಾರೆ.
ಈ ಸಂಧರ್ಭದಲ್ಲಿ ನಾನು ಓದಿದ ಕಥೆಯೊಂದು ನೆನಪಾಗುತ್ತಿದೆ ಒಂದು ಗ್ರಾಮದ ಮನೆಯೊಂದರಲ್ಲಿ ಗತಿಸಿದ ಹಿರಿಯರ ಸಮಾರಾಧನೆ ಕಾರ್ಯಕ್ರಮ ಜರುಗುತ್ತಿರುತ್ತದೆ.ಇನ್ನೇನೂ ಪೂಜೆಗೆ ಎಲ್ಲವೂ ಸಿದ್ದವಾಗಿದೆ ಪ್ರಾರಂಭಿಸಬೇಕು ಎನ್ನುವಷ್ಟರಲ್ಲಿ ಆ ಮನೆಯ ಯಜಮಾನ ತಾಳಿ ಪುರೋಹಿತರೇ ಇನ್ನೊಂದು ಕೆಲಸ ಬಾಕಿ ಇದೆ ಎಂದು ಹೊರಗಡೆ ಹೋಗುವರು.ಆನಂತರ ಮರಳಿ ಬಂದು ಎಲ್ಲಾ ಕಡೆ ಹುಡುಕಿದೆ ಒಂದು ಬೆಕ್ಕು ಸಿಗಲಿಲ್ಲ ನನ್ನ ತಂದೆ ನಡೆಸಿಕೊಡುವಾಗಲೂ ಒಂದು ಬೆಕ್ಕನ್ನು ಬುಟ್ಟಿಯಡಿ ಮುಚ್ಚಿಟ್ಟು ಮಾಡುತ್ತಿದ್ದರು ಆದರೆ ನನಗೆ ಇಂದು ಸಿಗಲಿಲ್ಲ ಲೋಪವಾಗಬಾರದಲ್ಲ ಏನು ಮಾಡೋಣ ಎಂದು ಆತಂಕದಿಂದ ಪ್ರಶ್ನಿಸಿದಾಗ ಪುರೋಹಿತರಿಗೂ ಹೌದೇ ಎಂದು ಯೋಚಿಸಿ ಇನ್ನೂ ಯಾರಾದರೂ ಹಿರಿಯರು ಇದ್ದರೆ ಬರಹೇಳಿ ಮಾತನಾಡುವೆ ಎಂದಾಗ ಪಕ್ಕದ ಮನೆಯ ಹಿರಿಯರು ಬಂದಾಗ ಅವರೊಡನೆ ಈ ಸಂಗತಿ ಹೇಳಲು ಅವರು ಜೋರಾಗಿ ನಕ್ಕರು, ಅಯ್ಯೋ ಪೂಜೆ ಮುಂದುವರಿಸಿ ಇವರ ತಾತನ ಕಾಲದಲ್ಲಿ ಪೂಜೆ ಸಮಯಕ್ಕೆ ಬೆಕ್ಕು ಕಾಲಿಗೆ ಅಡ್ಡವಾಗಿ ಬರೋದು ಹಾಗಾಗಿ ಬಾರದಿರಲೆಂದು ಬುಟ್ಟಿಯಡಿ ಬಚ್ಚಿಡುತ್ತಿದ್ದರು ಎಂದಾಗ ಮನೆಯ ಯಜಮಾನ ಹೌದೇ ಇದು ನನಗರಿಯದು ಪೂಜೆಯ ಒಂದು ಭಾಗವೆಂದುಕೊಂಡಿದ್ದೆ ಎಂದು ನುಡಿದು ಸಮಾರಾಧನೆ ಮುಂದುವರಿಸಿದರಂತೆ ಹೀಗೆ ಕೆಲವೊಂದಾದರೆ ಇನ್ನೂ ಕೆಲವು ಅಮಾನವೀಯ, ಮನುಷ್ಯ ಜಾತಿಗೆ ಅವಮಾನ ಕೆಲವು ಕಡೆ ಬೆತ್ತಲೆ ಸೇವೆ, ದೇವರ ಹೆಸರಲ್ಲಿ ಶೋಷಣೆ,ಮೈ ಮೇಲೆ ದೇವರು ಬಂದು ನೀನು ಪಾಪ ಮಾಡಿದ್ದೀಯಾ ದಂಡ ಕಟ್ಟು ಎನ್ನುವ ಆಚರಣೆಗಳು, ಧನದಾಹಕ್ಕೆ ನರಬಲಿ ಇಷ್ಟೇಲ್ಲಾ ಇಂದಿಗೂ ಆಚರಣೆಯಲ್ಲಿವೆ ಪೂರ್ಣ ಚಂದ್ರ ತೇಜಸ್ವಿ ಹೇಳುವಂತೆ *ಚಂದ್ರ ಮಂಡಲಕ್ಕೆ ಹೋಗಿ ಬಂದರು ಕ್ಷುದ್ರ ಬುದ್ದಿ ಬಿಡನು ಮನುಜ* .

ದೇವನೂರು ಮಹಾದೇವ ಅವರು ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ಕೊಟ್ಟು ಹೊರಗೆ ಬರುವಾಗ ಹೊರಗಡೆ ಇದ್ದ ಜೋಗತಿಗೆ ನೂರು ರೂಪಾಯಿ ಮೂವರಿಗೂ ಕೊಟ್ಟು ಒಬ್ಬ ಜೋಗಿಗೆ ಕೇಳಿದರಂತೆ ಈ ನೂರು ರೂಪಾಯಿ ಏನು ಮಾಡುವೆ ಎಂದು ಬುದ್ಧಿ ಎಣ್ಣೆ, ಹೂವು,ಬತ್ತಿ ತಂದು ದೇವಿಗೆ ಪೂಜೆ ಸಲ್ಲಿಸುವೆ ಎಂದಾಗ ದೇವನೂರು ಮಹಾದೇವರು ಬೇಡ ತಾಯೇ ನಿನಗೆ ಉಪಯೋಗಿಸಿಕೋ ಎಂದರಂತೆ, ಇನ್ನೋಮ್ಮೆ ಕುವೆಂಪು ಇದೆ ಹೇಳುವರು ಗಿಡದಲ್ಲಿ ಅರಳಿ ನಳನಳಿಸುವ ಹೂವು ಏಕೆ ಕೀಳುವಿರಿ ದೇವರ ಮುಡಿಗೆಂದು, ಕಲ್ಲು ದೇವರ ಮುಂದೆ ಪ್ರಸಾದವನ್ನಿಟ್ಟು ಪ್ರಾರ್ಥಿಸುವ ಬದಲು ಮನೆಯ ಮುಂದೆ ಅನ್ನ ನೀಡಿ ಎಂದು ಬೇಡುವ ಹಸಿದವನಿಗೆ ಬಡಿಸಿದರೆ ದೇವರು ತೃಪ್ತನಾಗನೇ,ಹಸಿದವನೇ ದೇವರ ರೂಪವಲ್ಲವೇ ಎಂದು ವಿಡಂಬನಾತ್ಮಕವಾಗಿ ಎಚ್ಚರಿಸುತ್ತಾರೆ.
ನನ್ನ ಅನುಭವಕ್ಕೆ ನಿಲುಕಿದ ಕೆಲವೊಂದು ಪ್ರಸ್ತಾಪಿಸುವೆ ತಾವು ದೇವಭಕ್ತರು ಎಂದು ತಮ್ಮನ್ನು ತಾವೇ ಬಿಂಬಿಸಿಕೊಳ್ಳುವವರಲ್ಲಿ ನನ್ನದೊಂದು ಪ್ರಶ್ನೆ ಭಕ್ತಿ ಓಕೆ ಆದರೆ ಕುಯುಕ್ತಿ ತೊರೆದಿರುವಿರಾ?
ಪುಣ್ಯ ಕ್ಷೇತ್ರ, ತೀರ್ಥ ಸ್ನಾನಗಳು ಎಂದು ಮುಳುಗೇಳುವವರು ಅವು ಪಾವನಗೊಳಿಸಿದವು ಎಂದ ಮೇಲೆ ಪರರಿಗೆ ಕೆಡುಕು ಉಂಟು ಮಾಡುವ ಸ್ವಭಾವ ತ್ಯಜಿಸಿರುವರೇ ಹಾಗಾದರೆ ಪುಣ್ಯ ಸ್ನಾನ ಹೇಗಾಯಿತು ದೇಹದ ಕೊಳೆಯನ್ನಷ್ಟೇ ತೊಳೆದಿರಿ ಮನದ ಕೊಳೆ ತೊಳೆದುಕೊಳ್ಳುವ ಬಗೆ ಹೇಗೆ ಎಂಬುದನ್ನು ಅರಿಯಬೇಕಲ್ಲವೇ?.
ಆಗಂತ ನಾನು ದೂಷಿಸುತ್ತಿದ್ದೇನೆ ಎಂದುಕೊಳ್ಳಬೇಡಿ ಮನುಷ್ಯ ಸಹಜ ಗುಣ ಒಳ್ಳೆಯದು,ಕೆಟ್ಟದರ ಮಿಶ್ರಣದ ವ್ಯಕ್ತಿತ್ವ, ಆದರೆ ಒಳಿತಿನ ಕಡೆ ನಡೆಯುವ ಪ್ರಯತ್ನ ಬೇಕಲ್ಲವೇ.ಬೇಂದ್ರೆ ಹೇಳುವಂತೆ *ಶಾಸ್ತ್ರದಲ್ಲಿ ದೋಷವಿದ್ದರೆ ತಿದ್ದಬಹುದು ಆದರೆ ಹೃದಯದಲ್ಲಿ ದೋಷವಿದ್ದರೆ ತಿದ್ದುವ ಬಗೆ ಹೇಗೆ* ಎಂದು.
ಪೂಜೆ, ಪುನಸ್ಕಾರ ಮನಸ್ಸಿಗೆ ನೆಮ್ಮದಿ, ಶಾಂತಿ ದೊರಕಿಸಿಕೊಡುತ್ತದೆ, ಮನುಷ್ಯ ಎಷ್ಟೇ ಗಟ್ಟಿ ಎಂದರೂ ಕಷ್ಟಗಳ ಭರಿಸಲಾರ ಹಾಗಾಗಿ ನಮ್ಮ ಭಯ, ಆತಂಕಗಳನ್ನು ಕಡಿಮೆ ಮಾಡಿಕೊಳ್ಳಲು, ಒಂದು ಭರವಸೆಯ ಮೂಲ ಅಗೋಚರ ಶಕ್ತಿಯೇ(ಪ್ರಕೃತಿ ಯ ರೂಪವಾಗಿಹನು)ದೇವರಾಗಿದ್ದಾನೆ.
ದೇವರ ಹೆಸರಿನಲ್ಲಿ ಜರುಗುವ ಅನ್ನ ಸಂತರ್ಪಣೆ ಮೆಚ್ಚುವಂಥದ್ದು ಎಷ್ಟೋ ಹಸಿದವರ ಹೊಟ್ಟೆ ತುಂಬುವುದು ಅನ್ನ ದೇವರ ಮುಂದೆ ಅನ್ಯ ದೇವರುಂಟೇ?
ಯಾವುದೇ ವಿಚಾರವನ್ನಾಗಲಿ ನಂಬಿ ಆಚರಿಸುವ ಮುನ್ನ ತಿರಸ್ಕರಿಸುವ ಮುಂಚೆ ಚಿಕಿತ್ಸಕ ದೃಷ್ಟಿಯಿಂದ, ತರ್ಕಬದ್ಧ ಯೋಚನೆಯಿಂದ ಯೋಚಿಸಿ ಒಳ್ಳೆಯದನ್ನು ಸ್ವೀಕರಿಸಿ, ಕೆಟ್ಟದನ್ನು ತಿರಸ್ಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು.
ದೇವರು,ಮತಗಳನ್ನು ಕುರಿತ ಸಮಸ್ಯೆಗಳನ್ನು ನಾನು ವೈಚಾರಿಕ ದೃಷ್ಟಿಯಿಂದ ಪರಿಶೀಲಿಸಲು ಹೊರಟಿದ್ದೇನೆಯೇ ಹೊರತು ಹೀಯಾಳಿಸುವ ಉದ್ದೇಶದಿಂದಲ್ಲ ಎಂದು ಮೂರ್ತಿರಾವ್ ಅವರು ಸ್ಪಷ್ಟಪಡಿಸಿದ್ದಾರೆ.
ಅವರು ದೇವರು ಪುಸ್ತಕ ಬರೆದಾಗ *ಇವನು ದೇವರನ್ನು ನಂಬದಿದ್ದರೆ ಬಿಡಲಿ;ತನ್ನ ಅಪನಂಬಿಕೆಯನ್ನು ಊರಿಗೆಲ್ಲ ಹಂಚಬೇಕೇ* ಎಂಬ ಟೀಕೆಯನ್ನು ಎದುರಿಸಿದ್ದರು.
ಇಂದು ಹೇಗಾಗಿದೆ ಎಂದರೆ ನಮ್ಮ ಧರ್ಮ ಮೇಲು ಎಂಬ ಮತಾಂಧತೆ ಅಮಲು, ಇಲ್ಲಿ ಧಮ೯ ಎನ್ನುವ ಬದಲು ನಿನ್ನ ಕಮ೯(ಕೆಲಸ) ನಂಬಿ ನಡೆ . ಒಬ್ಬರನ್ನು ಕೊಂದು ಬದುಕಿ ಎನ್ನುವುದು ಇರುವುದಾದರೆ ಅದು ಧಮ೯ ಹೇಗಾದಿತು?ಒಳಿತಿನ ಮಾಗ೯ವೇ ಧಮ೯, ಮಾನವೀಯ ಮೌಲ್ಯಗಳೇ ದೇವರ ರೂಪ ಈ ಸರಳ ಸತ್ಯ ಅರಿಯದೇ ಅಸುರರಂತೆ ವರ್ತನೆಗಳಾಗಿರುವುದು ಮಾನವ ಕುಲಕ್ಕೆ ಕಳಂಕ.
ಈ ಕೃತಿಯಲ್ಲೇ ಪ್ರಸ್ತಾಪಿಸುತ್ತಾರೆ ನನ್ನ ಮುಸ್ಲಿಂ ಶಿಷ್ಯ ಮಿತ್ರರಾದ ಶ್ರೀ.ಎಂ.ಎ.ಖಾದರ್.ಅವರು ಹಾಫೀಸ್ ಕವಿಯ ಪಂಕ್ತಿಗಳನ್ನು ಉದಾಹರಿಸುತ್ತಾರೆ : *ನೀನು ಮದ್ಯ ಕುಡಿ, ಪವಿತ್ರ ಕುರಾನ್ ಸುಟ್ಟು ಹಾಕು,ಕಾಬಾವಿಗೆ ಬೆಂಕಿ ಹಚ್ಚು ಇದೆಲ್ಲ ಅಪರಾಧಗಳನ್ನು ಕ್ಷಮಿಸುತ್ತೇನೇ ಆದರೆ ಮಾನವನಿಗೆ ಹಿಂಸೆ ಕೊಟ್ಟರೆ ಅಂತ ಅಪರಾಧಕ್ಕೆ ಕ್ಷಮೆ ಇಲ್ಲ ಎಂದು.
ಶ್ರೀ ಕೃಷ್ಣನ ಭಗವದ್ಗೀತೆಯ ಸಾಲೊಂದು ಎಲ್ಲವನ್ನೂ ಪರಿಶೀಲಿಸು ಅನಂತರ ನಿನಗೆ ಸರಿತೋರಿದಂತೆ ಮಾಡು ಈ ಮಾತಿನಲ್ಲಿ ಸ್ವಾತಂತ್ರ್ಯ, ಎಚ್ಚರಿಕೆ ಎರಡು ಇದೆ.
ಬೈಬಲ್ ನ ಸಾಲು ಪರಸ್ಪರ ಪ್ರೀತಿಸಬೇಕು,ದಯೆ ತೋರಬೇಕು ಎಂದು.
ಕೊನೆಯದಾಗಿ ನನಗೆ ನೆನಪಿರುವಂತೆ ನಾವು ಮನೆ ಕಟ್ಟಲು ಪಾಯ ಅಗೆಯುವಾಗ ಭೂಮಿ ಪೂಜೆ ಸಲ್ಲಿಸುವಾಗ ಪುರೋಹಿತರು ಉಚ್ಚರಿಸಿದ ಮಂತ್ರದ ಅರ್ಥ ಭೂತಾಯೇ ನಮ್ಮನ್ನು ಕ್ಷಮಿಸು ನಿನ್ನ ಒಡಲ ಬಗೆದು ನಾನೊಂದು ಸೂರು ಕಟ್ಟಿಕೊಳ್ಳುತ್ತಿರುವೆ, ಅನುಗ್ರಹ ಇರಲಿ ನನ್ನ ತಪ್ಪು ಮನ್ನಿಸು ಎಂದು ಪ್ರಾರ್ಥಿಸಿ ಪೂಜೆ ನೇರವೇರಿಸಿದೆ.ಮರಗಳನ್ನು ದೇವರೆಂದು ಪೂಜಿಸಿರುವ ತಾತ್ಪರ್ಯ ನಾವು ಉಸಿರಾಡುವುದೇ ಗಾಳಿಯಿಂದ,ಅವುಗಳ ಕಡಿಯದೇ ಇರಲಿ ಎಂಬ ದೂರದೃಷ್ಟಿ ನಮ್ಮ ಪೂರ್ವಿಕರದ್ದು ಆದರೆ ಇಂದು ಬಹುಮಹಡಿ ಕಟ್ಟಡಗಳ ನಿರ್ಮಾಣ, ದಾಪುಗಾಲು ಹಾಕುತ್ತಾ ಸಾಗುವ ನಗರೀಕರಣದ ಪ್ರಭಾವದಿಂದಾಗಿ ಉರುಳಿದ ಮರಗಳೆಷ್ಟೋ ಅದೇ ನಮ್ಮ ಬದುಕಿಗೆ ಉಸಿರುಗಟ್ಟಿಸಿ ಉರುಳಾಗುತ್ತವೆ ಎಂಬುದು ಅರಿತು ಎಚ್ಚೆತ್ತುಕೊಂಡು ಸಾಗಬೇಕಿದೆ.
ದೇವರು ಸಹಾಯ ಹಸ್ತ ಚಾಚುವ,ಒಳಿತು ಮಾಡುವ ಮಾನವನ ಹೃದಯಗಳಲ್ಲಿ ಸದಾ ನೆಲೆಸಿರುವನು ಹಾಗಾಗಿಯೇ ಜಿ.ಎಸ್.ಶಿವರುದ್ರಪ್ಪನವರು ಹೇಳಿರುವುದು;
*ಎಲ್ಲೋ ಹುಡುಕಿದೆ ಇಲ್ಲದ
ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ
ಹತ್ತಿರವಿದ್ದು ದೂರ ನಿಲ್ಲುವೆವು
ನಮ್ಮ ಅಹಂಮ್ಮಿನ ಕೋಟೆಯಲ್ಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಬದುಕಿನಲ್ಲಿ
ಒಳಗಿನ ತಿಳಿಯನು ಕಲಕದೆ
ಇದ್ದರೆ ಅಮೃತದ ಸವಿ ಇದೆ
ನಾಲಿಗೆಗೆ
ಇದ ಅರಿತರೆ ಬದುಕು ಅಸಹ್ಯವಾಗುವ ಬದಲು ಸಹ್ಯವಲ್ಲವೇ ಸಾಧ್ಯವಿಲ್ಲವೇ ನಮ್ಮನ್ನೇ ಪ್ರಶ್ನಿಸಿಕೊಳ್ಳೋಣ ಆದಷ್ಟು ಕೆಡುಕಗಳ ಕಡಿಮೆಯಾಗಿಸಿಕೊಂಡು, ಕೆಡದಂತೆ ಹುಳುಕುಗಳ ದೂರ ಸರಿಸಿ, ಮಾನವೀಯತೆ ನಡೆ ಕಡೆ ನಮ್ಮ ಆದ್ಯತೆ ಬಾಧ್ಯತೆ ಎಂದು ಮರೆಯದಿರೋಣ ಏನಾದರೂ ಆಗು ನಿನ್ನೋಲವಿನಂತಾಗು ಏನಾದರೂ ಸರಿಯೇ ಮೊದಲು ಮಾನವನಾಗು ಕವಿ ನುಡಿ ಸಾಕಾರಗೊಳಿಸೋಣ.
————-
ಶಾರದಜೈರಾಂ.ಬಿ
