ಒಂದು ಒಳನೋಟ:
ಲಂಕೇಶರ ಅವ್ವ ಕವಿತೆ –
ಒಂದು ಒಳನೋಟ:
ಕವನ – ಅವ್ವ
ಕವಿ – ಪಿ. ಲಂಕೇಶ್
–
.
ನನ್ನವ್ವ ಫಲವತ್ತಾದ ಕಪ್ಪು ನೆಲ
ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;
ಸುಟ್ಟಷ್ಟು ಕಸುವು, ನೊಂದಷ್ಟೂ ಹೂ ಹಣ್ಣು
ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;
ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ,
ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳ ಬಂದಿಯ ಗೆದ್ದು,
ಹೆಂಟೆಗೊಂಡು ಮೊಗೆ ನೀರು ಹಿಗ್ಗಿ ;
ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು,
ಹೂವಲ್ಲಿ ಹೂವಾಗಿ, ಕಾಯಲ್ಲಿ ಕಾಯಾಗಿ
ಹಸುರು ಗದ್ದೆಯ ನೋಡಿಕೊಂಡು,
ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು.
ಸತ್ತಳು ಈಕೆ :
ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ?
ಎಷ್ಟುಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ?
ಎಷ್ಟು ಸಲ ಈ ಮುದುಕಿ ಅತ್ತಳು
ಕಾಸಿಗೆ, ಕೆಟ್ಟ ಪೈರಿಗೆ, ಸತ್ತ ಕರುವಿಗೆ ;
ಎಷ್ಟು ಸಲ ಹುಡುಕುತ್ತ ಊರೂರು ಅಲೆದಳು
ತಪ್ಪಿಸಿಕೊಂಡ ಮುದಿಯ ಎಮ್ಮೆಗೆ?
ಸತಿಸಾವಿತ್ರಿ, ಜಾನಕಿ, ಊರ್ಮಿಳೆಯಲ್ಲ ;
ಚರಿತ್ರೆ ಪುಸ್ತಕದ ಶಾಂತ, ಶ್ವೇತ, ಗಂಭೀರೆಯಲ್ಲ ;
ಗಾಂಧೀಜಿ, ರಾಮಕೃಷ್ಣರ ಸತಿಯರಂತಲ್ಲ ;
ದೇವರ ಪೂಜಿಸಲಿಲ್ಲ ; ಹರಿಕತೆ ಕೇಳಲಿಲ್ಲ ;
ಮುತ್ತೈದೆಯಾಗಿ ಕುಂಕುಮ ಕೂಡ ಇಡಲಿಲ್ಲ.
ಬನದ ಕರಡಿಯ ಹಾಗೆ
ಚಿಕ್ಕಮಕ್ಕಳ ಹೊತ್ತು
ಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳು
ನೊಂದ ನಾಯಿಯ ಹಾಗೆ ಬೈದು, ಗೊಣಗಿ, ಗುದ್ದಾಡಿದಳು ;
ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ ;
ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ.
ಈಕೆ ಉರಿದೆದ್ದಾಳು
ಮಗ ಕೆಟ್ಟರೆ, ಗಂಡ ಬೇರೆ ಕಡೆ ಹೋದಾಗ ಮಾತ್ರ.
ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ ;
ನನ್ನವ್ವ ಬದುಕಿದ್ದು
ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ ;
ಮೇಲೊಂದು ಸೂರು, ಅನ್ನ, ರೊಟ್ಟಿ, ಹಚಡಕ್ಕೆ ;
ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ.
ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು ;
ಹೆತ್ತದ್ದಕ್ಕೆ, ಸಾಕಿದ್ದಕ್ಕೆ : ಮಣ್ಣಲ್ಲಿ ಬದುಕಿ,
ಮನೆಯಿಂದ ಹೊಲಕ್ಕೆ ಹೋದಂತೆ
ತಣ್ಣಗೆ ಮಾತಾಡುತ್ತಲೇ ಹೊರಟು ಹೋದುದಕ್ಕೆ
………………………………
ಲಂಕೇಶರ ಅವ್ವ ಕವಿತೆ ಕನ್ನಡದಲ್ಲಿ ತಾಯಿಯ ಕುರಿತು ಬಂದ ಅತ್ಯುತ್ತಮ ಕವಿತೆ ಎಂದೇ ಪ್ರಸಿದ್ಧವಾಗಿದೆ. ಲಂಕೇಶ್ ಮೇಷ್ಟ್ರು ಬಹುಮುಖ ಪ್ರತಿಭೆ. ಅವರು ಕತೆಗಾರ, ಕಾದಂಬರಿಕಾರ. ಸಂಕ್ರಾತಿ,ಗುಣಮುಖ,ಈಡಿಪಸ್ ನಾಟಕಗಳನ್ನು ಬರೆದ ಅವರು ಕನ್ನಡದ ಪ್ರಭಾವಶಾಲಿ ನಾಟಕಕಾರ ಸಹ ಎನಿಸಿದ್ದರು . ಎಲ್ಲಿಂದಲೋ ಬಂದವರು ಸಿನಿಮಾ ನಿರ್ದೇಶನ ಮಾಡಿ, ಅಲ್ಲಿ ಸಹ ಪ್ರತಿಭೆಯನ್ನು ದಾಖಲಿಸಿದವರು. ಅವರ ಅವ್ವ ಕವಿತೆ ಕನ್ನಡಿಗರನ್ನು ಕಾಡುವ ಕವಿತೆಗಳಲ್ಲಿ ಒಂದಾಗಿದೆ.
ಅವ್ವ ಮತ್ತು ಫಲವತ್ತಾದ ಕಪ್ಪು ನೆಲವನ್ನು ಮುಖಾಮುಖಿಯಾಗಿಸಿ ಬೆಳೆಯುತ್ತಾ ಹೋಗುವ ಕವಿತೆ ಏಕಕಾಲದಲ್ಲಿ ರೈತ ಮತ್ತು ಭೂಮಿಯ ಅವಿನಾಭಾವ ಸಂಬಂಧವನ್ನು , ತಾಯಿ – ಮಗನ ಬಾಂಧವ್ಯವನ್ನು ಸಾರುತ್ತದೆ. ಅವ್ವನೇ ಭೂಮಿಯಾಗುವ ಹಾಗೂ ಭೂಮಿ ಮತ್ತು ತನ್ನ ಅವ್ವನ ಒಡನಾಟ,ಮನೆ ಹಾಗೂ ಹೊಲ,ದನ ಕರು ಸಂಬಂಧಗಳನ್ನು ಓದುಗನ ಎದುರು ಚಿತ್ರ ಕಣ್ಣುಕಟ್ಟುವಂತೆ ಕವಿತೆ ಬರೆಯುತ್ತಾ ಹೋಗುತ್ತಾರೆ . ಭೂಮಿಯ (ಹೊಲದ) ಪ್ರತಿಯೊಂದು ಸೃಜನ ಕ್ರಿಯೆಯನ್ನು ಲಂಕೇಶರು ಅವ್ವನಲ್ಲಿ ಕಾಣುತ್ತಾ ಹೋಗುತ್ತಾರೆ..
” ನನ್ನವ್ವ ಫಲವತ್ತಾದ ಕಪ್ಪು ನೆಲ
ಅಲ್ಲಿ ಹಸಿರು ಪತ್ರದ ಹರವು, ಬಿಳಿ ಹೂ ಹಬ್ಬ
ಸುಟ್ಟಷ್ಟು ಕಸುವು,ನೊಂದಷ್ಟು ಹೂ ಹಣ್ಣು ….ಹೀಗೆ ಕವಿತೆ ಏಕಕಾಲಕ್ಕೆ ಧ್ವನಿಪೂರ್ಣವಾಗುತ್ತದೆ.
“ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ” ಈ ಸಾಲಂತೂ ತಾಯಿ-ಮಗು, ರೈತ- ಹೊಲವನ್ನು ಎದುರು ಬದುರಾಗಿಸುತ್ತದೆ.
ಯೌವ್ವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು ….
ಎಂಬ ಸಾಲು ಅವ್ವನ ಬಡತನವನ್ನು ಹೇಳುತ್ತದೆ.
ಅವ್ವ ಅತ್ತದ್ದನ್ನು ಲಂಕೇಶರು ದಾಖಲಿಸುವುದು ಹೀಗೆ :
ಕಾಸಿಗೆ,ಕೆಟ್ಟ ಪೈರಿಗೆ, ಸತ್ತ ಕರುವಿಗೆ….
ಊರೂರು ಅಲೆದದ್ದು ತಪ್ಪಿಸಿಕೊಂಡ ಮುದಿ ಎಮ್ಮೆಗೆ ..ಅವ್ವನ ಚಿತ್ರಣ ಎಳೆಎಳೆಯಾಗಿ ರೂಪಕದಂತೆ ಮುಂದಿಡುತ್ತಾರೆ.
ಅವ್ವ ದಾಡಿಸಿ, ಗಟ್ಟಿಗಿತ್ತಿ ಎಂಬುದನ್ನು ಕವಿ ನೇರವಾಗಿ ಹೇಳಲ್ಲ. ಅದನ್ನು ವ್ಯಂಗ್ಯವಾಗಿ, ಪ್ರಸಿದ್ಧರ ಜೊತೆ ತುಲನಾತ್ಮಕವಾಗಿ ಹೇಳುವ ಪರಿ ಯೇ ಅಚ್ಚರಿಯದ್ದು…
ನನ್ನವ್ವ ಸೀತೆ ಸಾವಿತ್ರಿ, ಉರ್ಮಿಳೆ , ಜಾನಕಿಯಲ್ಲ, ಚರಿತ್ರೆ ಪುಸ್ತಕದ ಶಾಂತ,ಶ್ವೇತ, ಗಂಭೀರೆಯಲ್ಲ, ಗಾಂಧೀಜಿ ರಾಮಕೃಷ್ಣರ ಸತಿಯರಂತಲ್ಲ ;
ಮುಂದುವರಿದು ನನ್ನವ್ವ ದೇವರ ಪೂಜಿಸಲಿಲ್ಲ, ಹರಿಕತೆ ಕೇಳಲಿಲ್ಲ, ಮುತ್ತೈದೆಯಾಗಿ ಕುಂಕುಮ ಕೂಡಾ ಇಡಲಿಲ್ಲ …ಎನ್ನುವ ಲಂಕೇಶರು ,ತನ್ನ ಅವ್ವನೊಳಗ ಒಬ್ಬ ಬಂಡಾಯಗಾರ್ತಿ ಇದ್ದಳು ಎಂದು ಸ್ಪಷ್ಟವಾಗಿ ಹೇಳ್ತಾರೆ.
ಬನದ ಕರಡಿಗೆ ಅವ್ವನನ್ನ ಹೋಲಿಸ್ತಾರೆ. ಕರಡಿ ತನ್ನ ಮಕ್ಕಳನ್ನ ಹೊತ್ತು ಸಾಗುವಂತೆ ,ನನ್ನವ್ವ ಮಕ್ಕಳನ್ನು ಕುತ್ತಿಗೆ , ಕಂಕುಳದಲ್ಲಿ ಹೊತ್ತು ಸಾಗಿದಳು ಎನ್ನುತ್ತಾರೆ. ಇಂತಹ ಅವ್ವನಿಗೆ ಭಗವದ್ಗೀತೆ ಬೇಡ ಎಂದು ಲಂಕೇಶರು ಹೇಳ್ತಾರೆ.
ಅಕ್ಷರ ಜಗತ್ತು, ಅನಕ್ಷರಸ್ಥ ಜಗತ್ತು, ನಗರ ಮತ್ತು ಗ್ರಾಮೀಣ ಬದುಕನ್ನು ಸಹ ಮುಖಾಮುಖಿಯಾಗಿಸುವ ಲಂಕೇಶರು,
ಸಂಸ್ಕೃತಿ ವಕ್ತಾರರು ಮತ್ತು ಜನಪದರ ದುಡಿಮೆಯ ಬದುಕನ್ನು ಅಕ್ಕಪಕ್ಕ ಇಡುತ್ತಾರೆ.
ಶ್ರಮ ಮತ್ತು ಕೂತುಣ್ಣುವ ಜಗತ್ತನ್ನು ಎದುರು ಬದುರಾಗಿಸುತ್ತಾರೆ. ಅವ್ವನ ಪರ ಲಂಕೇಶರು ಸಮರ್ಥ ವಾದ ವಕಾಲತ್ತನ್ನು ಕವಿತೆಯ ಮೂಲಕ ಕವಿಯಾಗಿ ಮಂಡಿಸುತ್ತಾರೆ.
ಅವ್ವನಿಗೆ ಸಿಟ್ಟುಬರುವುದಕ್ಕೆ ಎರಡು ಪ್ರಸಂಗಗಳನ್ನು ನೆನಪಿಸಿಕೊಳ್ಳುತ್ತಾರೆ, ಗಂಡ ಬೇರೆ ಕಡೆ ಹೋದರೆ, ಮಗ ಕೆಟ್ಟರೆ ಅವ್ವ ಉರಿದೇಳುತ್ತಾಳೆ ಎಂದು ಗ್ರಹಿಸಿದ್ದಾರೆ. ಸರೀಕರ ಎದುರು ತಲೆಎತ್ತಿ ನಡೆಯಲಿಕ್ಕೆ ಏನು ಮಾಡಬೇಕು ಅದೆಲ್ಲವನ್ನು ಅವ್ವ ಮಾಡಿದಳು.
ಲಂಕೇಶರು ಕೊನೆಗೆ ವಿಷಾದದಲ್ಲಿ ಕವಿತೆಯನ್ನು ಅಂತ್ಯ ಮಾಡ್ತಾರೆ. ಮಣ್ಣಲ್ಲಿ ಬದುಕಿ, ಮನೆಯಿಂದ ಹೊಲಕ್ಕೆ ಹೋದಂತೆ ತಣ್ಣಗೆ ಮಾತಾಡುತ್ತಲೇ ಹೋರಟುಹೋದುದಕ್ಕೆ ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು ಎನ್ನುತ್ತಾರೆ. ಹೆತ್ತದ್ದಕ್ಕೆ ಸಾಕಿದ್ದಕ್ಕೆ ನನ್ನಂತಹ ಮಗನನ್ನು ಎನ್ನುತ್ತಾರೆ.
ಇಡೀ ಕವಿತೆಯ ಶರೀರ …ರಚನೆ, ಅದರ ಹೂರಣ ,ತರ್ಕ, ವಾದ, ಪ್ರೀತಿ, ಹೋಲಿಕೆ, ಅವ್ವನ ಪರ ಸಮರ್ಥನೆ…ಎಲ್ಲವೂ ಭಿನ್ನ. ಅವ್ವನನ್ನು ಅವಳ ಪ್ರತಿಭೆ, ಶಕ್ತಿ, ಕಸುವು, ಪ್ರೀತಿ, ಸಿಟ್ಟು, ದೌರ್ಬಲ್ಯ, ಕಣ್ಣೀರು, ಸಿಟ್ಟು, ಬಂಡಾಯ ಎಲ್ಲವನ್ನು ಕವಿ ಲಂಕೇಶ್ ಹಿಡಿದಿಡುತ್ತಾರೆ. ಕನ್ನಡದ ಕವಿತಾ ರಚನೆಗೆ , ವ್ಯಕ್ತಿಯ ಮೂರ್ತಿಯನ್ನು ಕಟೆದು ನಿಲ್ಲಿಸಿ, ಜೀವ ತುಂಬುವುದು ಹೇಗೆ , ನಮ್ಮೆದುರಿನ ಜೀವವನ್ನು , ಜೀವನವನ್ನು ಬದುಕಿ ಓಡಾಡಿದಂತೆ ಚಿತ್ರಿಸುವ ಕಲಾತ್ಮಕತೆ ಸಾಧಿಸಿ ಗೆಲ್ಲುವುದು ಪಿ.ಲಂಕೇಶರಂಥ ಪ್ರತಿಭೆಗೆ ಸಾಧ್ಯ.
:
*********************************
ನಾಗರಾಜ ಹರಪನಹಳ್ಳಿ
ಅತ್ಯುತ್ತಮ *****
ಸೋಗಸಾಗಿದೆ. ಪಿ. ಲಂಕೇಶರಂತಹ ದೈತ್ಯ ಪ್ರತಿಭೆ ಕೊಡುಗೆಯನ್ನು ಸಾದರ ಪಡಿಸಿದ್ದಕ್ಕೆ ಧನ್ಯವಾದ
Sir good job so help full for me ❤❤❤❤
ತುಂಬ ಅತ್ಯುತ್ತಮವಾಗಿ ವರ್ಣಿಸಿದಿರಿ ಸರ್ ಧನ್ಯವಾದಗಳು ಇದು ನನ್ನ ಪರೀಕ್ಷೆಯ ಸಮಯದಲ್ಲಿ ನನಗೆ ಸಹಾಯ ಮಾಡುತ್ತದೆ