ಅದ್ಭುತ ನಿರ್ದೇಶಕ

ಕವಿತೆ

ದೇವರೇ ನಿನ್ನೆಂತ

ಅದ್ಭುತ ನಿರ್ದೇಶಕ

ಪಾಲಾಕ್ಷ ಗೌಡ ಕೆ.ಎಲ್

Praying, Hands, Religion, Pray, Prayer

ಇಲ್ಲೊಂದು ಜನನ, ಅಲ್ಲೊಂದು ಮರಣ
ಇಲ್ಲೊಂದು ಹುಟ್ಟು ಹಬ್ಬದ ಸಂಭ್ರಮಾಚರಣೆ
ಅಲ್ಲೊಂದು ಅಂತಿಮ ಸಂಸ್ಕಾರದಲ್ಲಿ ಕೇಳುವರಿಲ್ಲ ಬವಣೆ
ಹೆಸರಿಡಲು ನೆಡೆಯುತ್ತಿದೆ ಇಲ್ಲೊಂದು ನಾಮಕಾರಣ
ಹೆಸರಳಿಸಲು ನೆಡೆಯುತ್ತಿದೆ ಅಲ್ಲೊಂದು ತಿಥಿಯ ಹೂರಣ

ಹುಟ್ಟು ಸಾವುಗಳನ್ನು ಒಟ್ಟಿಗೆ ನಿರ್ವಹಿಸುವ,
ದೇವರೇ ನಿನ್ನೆಂತ ಅದ್ಭುತ ನಿರ್ದೇಶಕ!
ವಿದಿಯೊಂದಿಗೆ ವಿಲಾಸಿಸುವ ವಿಧೂಷಕ!!

ಇಲ್ಲೊಂದು ಬಾಲ್ಯ, ಅಲ್ಲೊಂದು ವೃದ್ಧಾಪ್ಯ
ಇಲ್ಲೊಂದು ಕಣ್ಣಲ್ಲಿ ನಾಳೆಗಳ ಕನಸಿನ‌ ಹೊಳಪು
ಅಲ್ಲೊಂದು ಕಣ್ಣಲ್ಲಿ ನಿನ್ನೆ ಕಂಡ ಕನಸಿನ ನೆನಪು
ತೆವಳುತ್ತಿದೆ ಇಲ್ಲೊಂದು ಜೀವ ನೆಡವುದ ಕಲಿಯಲು
ತೆವಳುತ್ತಿದೆ ಅಲ್ಲೊಂದು ಜೀವ ಶಾಶ್ವತವಾಗಿ ಮಲಗಲು

ಆದಿ ಅಂತ್ಯಗಳನ್ನು ಒಟ್ಟಿಗೆ ನಿರ್ಧರಿಸುವ,
ದೇವರೇ ನಿನ್ನೆಂತ ಅದ್ಭುತ ನಿರ್ದೇಶಕ!
ನಿಂತಲ್ಲೇ ನಿಶ್ಚಯಿಸುವೇ ನಮ್ಮೆಲ್ಲರ ಜಾತಕ!!

ಇಲ್ಲೊಬ್ಬ ಬಡವ, ಅಲ್ಲೊಬ್ಬ ಶ್ರೀಮಂತ
ಇಲ್ಲೊಬ್ಬ ರೈತ, ಅಲ್ಲೊಬ್ಬ ರಾಜಕಾರಣಿ
ಇಲ್ಲೊಂದು ಮದುವೆ, ಅಲ್ಲೊಬ್ಬಳು ವಿಧವೆ
ಇಲ್ಲೊಂದು ಬಿಕ್ಷೆ, ಅಲ್ಲೊಂದು ಶಿಕ್ಷೆ
ಇಲ್ಲೊಂದು ಜಾತಿ, ಅಲ್ಲೊಂದು ಧರ್ಮ

ನಾಯಕ, ಖಳ ನಾಯಕರನ್ನು ಒಟ್ಟಿಗೆ ಮೇಳೈಸುವ
ದೇವರೇ ನಿನ್ನೆಂತ ಅದ್ಭುತ ನಿರ್ದೇಶಕ!
ಚಿತ್ರಕಥೆಯಲ್ಲೆ ಮೋಡಿ ಮಾಡುವ ಮಾಂತ್ರಿಕ!!

ನರಕದಲ್ಲಿ ನೀ‌ ನೀಡುವ ಶಿಕ್ಷೆಯ ಆಳ ಬಲ್ಲವರ್ಯಾರು?
ಸ್ವರ್ಗದಲ್ಲಿ‌ ನೀ ನೀಡುವ ಸೌಲಭ್ಯ ತಿಳಿದವರಾರು?
ನಿನ್ನೀ ಕಥೆಯಲ್ಲಿ ನೀ ನೀಡುವ ತಿರವುಗಳನ್ನು ಊಹಿಸಲು ಸಾಧ್ಯವೇನು?
ತಿದ್ದಿಕೊಳ್ಳಲು ಕೊಡುವ ಕುರಹುಗಳನ್ನು ಗ್ರಹಿಸಬಲ್ಲವೇನು?
ನಿನ್ನ ಕಣ್ಣಿನ ಕ್ಯಾಮರದಿಂದ ಯಾರಾದರು ತಪ್ಪಿಸಿಕೊಳ್ಳಲು ಸಾಧ್ಯವೇ?
ಊಹೆಗೂ ಮಿಲುಕಿ ನಮ್ಮೆಲ್ಲರ ನಡುವೆಯೇ ನೀ ಸಾಗುವೇ

ಹಣೆಯ ಮೇಲೆ ಪುಟಗಟ್ಟಲ್ಲೆ ಚಿತ್ರಕಥೆ ಬರೆಯುವ,
ದೇವರೇ ನಿನ್ನೆಂತ ಅದ್ಭುತ ನಿರ್ದೇಶಕ!
ನಿನ್ನಾಜ್ಞೆಯಂತೆ ನಟಿಸುವುದಷ್ಟೆ ನಮ್ಮೆಲ್ಲರ ಕಾಯಕ!!

*************************

11 thoughts on “ಅದ್ಭುತ ನಿರ್ದೇಶಕ

  1. ಅದ್ಭುತವಾಗಿದೆ ಜೀವನದ ಸಾರವನ್ನು ಅಡಗಿದೆ

  2. ಹುಟ್ಟು ಸಾವಿನ ನಡುವೆ ಪಾತ್ರಧಾರಿಗಳ ಜೀವನದ ಪರಿ ನಿರ್ದೇಶಕನ ಸೂತ್ರದಾ ಆಟ, ಆಸಹಾಯಕತೆಯ ಚಿತ್ರಣ
    ಸೊಗಸಾಗಿದೆ ಅಭಿನಂದನೆಗಳು.
    ಮಾಲತಿಶ್ರೀನಿವಾಸನ್.

Leave a Reply

Back To Top